ಅಭಿಲಾಷೆ ಕಾದಂಬರಿ ಸಂಚಿಕೆ -42

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 42ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ

ಆಶಾಳಿಗೆ ಎಚ್ಚರನಾದಾಗ ರಾತ್ರಿ ಹತ್ತುಗಂಟೆಯಾಗಿದ್ದು, ಊಟ ಹಾಕಮ್ಮಾ ಹಸಿವಾಗುತ್ತಿದೆ ಎಂದು ಕೇಳಿ ಟೇಬಲ್ ಮುಂದೆ ಕುಳಿತಾಗ
ಕೋದಂಡರಾಂ ರವರೂ ಕೂಡಾ ನನಗೂ ಹಸಿವಾಗುತ್ತಿದೆ ಎನ್ನುತ್ತಾ , ಟೇಬಲ್ ಮುಂದೆ ಕುಳಿತುಕೊಳ್ಳುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಅಪ್ಪ ಮಗಳು ಊಟಕ್ಕೆ ಕುಳಿತ ನಂತರ,
ಆಶಾಳ‌ ತಾಯಿ ಊಟ ಬಡಿಸಿದರೂ, ಆಶಾಳಿಗೆ ಊಟ ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಊಟಮಾಡದೆ ಹಾಗೇ ಮೌನವಾಗಿ ಕುಳಿತಿರುವಾಗ,
ಮಗಳೇ ಊಟ ಮಾಡಮ್ಮಾ, ನನಗೆ ಹಸಿವಾಗುತ್ತಿದೆ ಊಟ ಹಾಕೆಂದು ಕುಳಿತುಕೊಂಡೆ ಎಂದು ಅವಳಮ್ಮ ಹೇಳಲು
ಅಮ್ಮಾ ಹಸಿವೇನೋ ಆಗುತ್ತಿದೆ, ಆದರೆ ಊಟ ಮಾತ್ರ ಸೇರುತ್ತಿಲ್ಲಮ್ಮಾ ಎಂದು ಕಣ್ಣನ್ನು ಒರೆಸಿಕೊಳ್ಳುತ್ತಾಳೆ.
ನಿಧಾನವಾಗಿ ಎಷ್ಟು ಸೇರುತ್ತದೋ ಊಟ ಮಾಡಮ್ಮಾ ಎಂದು ಅವಳಮ್ಮ ತಲೆಯನ್ನು ನೇವರಿಸುತ್ತಾ, ನಾನೇ ತಿನ್ನಿಸಲಾ ಎಂದು ಕೇಳಲು
ಬೇಡಮ್ಮಾ ನಾನೇ ತಿನ್ನುತ್ತೇನೆಂದು ಹೇಳಿ ಒಂದು ತುತ್ತು ಬಾಯಲ್ಲಿಟ್ಟುಕೊಂಡ ತಕ್ಷಣ ನೆತ್ತಿ ಹತ್ತಿ ಕೆಮ್ಮಲು ಶುರುಮಾಡುತ್ತಾಳೆ.
ಅವಳಮ್ಮಾ ತಲೆ ನೇವರಿಸುತ್ತಾ ನೀರು ಕುಡಿಯಮ್ಮಾ ಎಂದು ಹೇಳಿದಾಗ
ಕೆಮ್ಮುತ್ತಲೇ ಒಂದೊಂದೇ ಗುಟುಕು ನೀರು ಕುಡಿದು ಅಮ್ಮಾ ನನಗೆ‌ ಸಾಕಮ್ಮಾ ಎಂದಾಗ
ಊಟವನ್ನೇ ಮಾಡಲಿಲ್ಲವಲ್ಲಮ್ಮಾ, ಹಸಿವಾಗುವುದಿಲ್ಲವಾ? ನಿಧಾನವಾಗಿ ಊಟ‌ ಮಾಡಮ್ಮಾ ಎಂದು ಅವಳಪ್ಪನೂ ಹೇಳಲು
ಅವಳಪ್ಪ ಮಾತನಾಡಿದ್ದಕ್ಕೆ‌, ನನ್ನ ಮೇಲೆ ನನ್ನಪ್ಪನಿಗೆ ಕೋಪವಿಲ್ಲವೆಂದುಕೊಂಡು, ಅಪ್ಪಾ ನನ್ನದು‌ ತಪ್ಪಾಯ್ತಪ್ಪಾ ಎಂದು ಹೇಳುತ್ತಾಳೆ.
ಮಗಳೇ ನೀನೇನು ತಪ್ಪು ಮಾಡಿದ್ದೀಯಾ? ಎಂಬ ಅವಳಪ್ಪನ ಪ್ರಶ್ನೆಗೆ
ನಾನು ಮೊನ್ನೆ ರಾತ್ರಿ ವಿಕ್ರಮ್ ಕರೆದನೆಂದು ಹೋಗಬಾರದಿತ್ತಪ್ಪಾ ಎನ್ನುತ್ತಾಳೆ
ನಿನ್ನ ಮೇಲೆ ಖಂಡಿತಾ ನಮಗೆ ಕೋಪವಿಲ್ಲಮ್ಮಾ, ನೀನು‌ ಸುರಕ್ಷಿತವಾಗಿ ಬಂದೆಯಲ್ಲಾ ಅಷ್ಟೇ ಸಾಕಮ್ಮಾ, ನಮ್ಮ ಇನ್ಸ್ ಪೆಕ್ಟರ್ ನಿನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಬಹಳ ಶ್ರಮ ಪಟ್ಚರಮ್ಮಾ ಎಂದು ಅವಳಪ್ಪ ಹೇಳಲು
ಆಶಾ ಅಪ್ಪನ ಜೊತೆ ಮಾತನಾಡುತ್ತಾ, ಒಂದೊಂದೇ ತುತ್ತು ಊಟ ಮಾಡಲು ಶುರು ಮಾಡುತ್ತಾಳೆ.
ಮಗಳು ಸಮಾಧಾನದಿಂದ ಊಟ‌ ಮಾಡುತ್ತಿರುವುದನ್ನು ನೋಡಿದ ಕೋದಂಡರಾಂರವರು, ಮಗಳೇ ನಿನ್ನನ್ಮು ಕಿಡ್ನಾಪ್ ಮಾಡಿದವರು ಯಾರೆಂದು ಗೊತ್ತಾಯ್ತಾ ಎನ್ನಲು
ಅಪ್ಪಾ ಯಾರಾದರೇನು ಅವರಿಗೆ ಸರಿಯಾದ ಶಿಕ್ಷೆ ಕೊಡಿಸುವಂತೆ ಇನ್ಸ್ ಪೆಕ್ಟರ್ ಗೆ ಹೇಳಪ್ಪಾ ಎಂಬ ಆಶಾಳ ಮಾತಿಗೆ,
ಮಗಳೇ ನಿನ್ನನ್ನು ಕಿಡ್ನಾಪ್ ಮಾಡಿದವರು ಯಾರೆಂದು ತಿಳಿದರೆ ನೀನು ಬೆಚ್ಚಿಬೀಳುತ್ತೀಯಾ ಎಂದು ಅವಳಪ್ಪ ನುಡಿಯಲು
ಹಾಗಾದರೆ ‌ ಯಾರಪ್ಪಾ ಅವರು? ಎಂದು ಆಶಾ ಪ್ರಶ್ನಿಸಿದಾಗ
ನೀನು ಅದೇನೋ ಲವ್ ಮಾಡುತ್ತಿದ್ದೇನೆಂದು ಹೇಳುತ್ತಿದ್ದೆಯಲ್ಲಾ, ಆ ಹುಡುಗನ ಅಣ್ಣನೇ ಕಣಮ್ಮಾ ನಿನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಎಂದ ತಕ್ಷಣ
ನೋ ನಾನು ಇದನ್ನು ನಂಬುವುದಿಲ್ಲಪ್ಪಾ, ಸುಮ್ಮನೆ ಅವರ ಮೇಲೆ ಗೂಬೆ ಕೂರಿಸಬೇಡಾ ಎಂದು ಆಶಾ ನುಡಿಯಲು
ನಾನು ಇದರಲ್ಲಿ ಸುಳ್ಳು ಹೇಳಿ ಸಾಧಿಸಬೇಕಾದ್ದೇನೂ ಇಲ್ಲಮ್ಮಾ, ಎಂದು ಕೋದಂಡರಾಮ್ ಹೇಳಿದ ಮಾತಿಗೆ
ನಾನು ವಿಕ್ರಮ್ ಮದುವೆಯಾಗುವುದು ನಿನಗೆ ಇಷ್ಟವಿಲ್ಲ, ಅದಕ್ಕೆ ಅವರ ಮೇಲಿನ ದ್ವೇಷಕ್ಕಾಗಿ ಈ ರೀತಿ ಹೇಳುತ್ತಿದ್ದೀಯಾ ಎಂದು ಆಶಾ ನುಡಿಯಲು
ನೀನು ಕಿಡ್ನಾಪರ್ ಕುಟುಂಬದ ಪರವಾಗಿ ಮಾತನಾಡಿದರೆ ನೀವು ಮೂರು‌ ಜನರೂ ಸೇರಿ ನನ್ನಿಂದ ಹಣ ದೋಚಲು ಪ್ಲಾನ್ ಮಾಡಿದ್ದೀರೆಂದು ಇನ್ಸ್ ಪೆಕ್ಟರ್ ನಿನ್ನನ್ನೂ ವಿಚಾರಣೆ ಮಾಡುತ್ತಾರಮ್ಮಾ, ಅದಕ್ಕೆ ಅವಕಾಶ ಕೊಡಬೇಡಾ, ನಿಮ್ಮಪ್ಪನ ಮಾತನ್ನು ನಂಬು, ಪುನಃ ಅವರೊಂದಿಗೆ ಹೋಗಬೇಡಾ ಎಂದು ಹೇಳಿದಾಗ
ಅಪ್ಪಾ ನನಗೇಕೋ ನಿನ್ನ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ. ನಾನು ಅವರ ಪರವಾಗಿ ಹೋಗದಿರಲು ಇನ್ಸ್ ಪೆಕ್ಟರ್ ರವರು ವಿಚಾರಣೆ ಮಾಡುತ್ತಾರೆಂದು ಹೆದರಿಸುತ್ತಿದ್ದೀಯಾ ಅಲ್ಲವೇ ಎಂದು ಆಶಾ ಖಾರವಾಗಿ ಕೇಳಲು
ಕೋದಂಡರಾಮ್ ರವರು ತನ್ನ ಪತ್ನಿಯ ಕಡೆಗೆ ತಿರುಗಿ, ನಿನ್ನ ಮಗಳನ್ನು ಹೇಗೆ ನಂಬಿಸುವುದೇ? ನನಗಂತೂ ಅರ್ಥವಾಗುತ್ತಿಲ್ಲವೆಂದು ಹೇಳಲು
ಅಪ್ಪ ಅಮ್ಮನ ಮಾತೇ ಕೇಳದಿದ್ದ ಮೇಲೆ ಅವಳಿಷ್ಟ ಏನಾದರೂ ಮಾಡಿಕೊಳ್ಳಲಿ ಬಿಡ್ರೀ ಎಂದು ಅವರ ಪತ್ನಿಯ ಮಾತಿಗೆ
ಮುಂದೆ ಇವಳು ಕಷ್ಟಕ್ಕೆ ಸಿಲುಕಿಕೊಂಡರೆ ಈ ಕಣ್ಣುಗಳಿಂದಲೇ ನೋಡಬೇಕಲ್ಲಾ? ಇಷ್ಟಾದರೂ ಇವಳಿಗೆ ಬುದ್ದಿ ಬಂದಿಲ್ಲವಲ್ಲೇ ಎಂದು ಪಶ್ಚಾತ್ತಾಪ ಪಟ್ಟು, ನೋಡಮ್ಮಾ ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ಇನ್ಸ್ ಪೆಕ್ಟರ್ ಹೇಳಿದರೆ ನಂಬುತ್ತೀಯಾ‌ ಎಂದು ಕೋದಂಡರಾಮ್ ರವರು ಹತಾಷರಾಗಿ ಕೇಳಲು
ಅಪ್ಪಾ ಇನ್ಸ್ ಪೆಕ್ಟರ್ ರವರು ನಿಮ್ಮ ಶಿಷ್ಯರೆಂಬುದು ನನಗೆ ಗೊತ್ತಪ್ಪಾ, ನೀನು ಹೇಳಿದಂತೆ ಕೇಳುತ್ತಾರೆ ಎಂಬುದೂ ಗೊತ್ತು, ಇದನ್ನು ನಾನು ನಂಬುವುದಿಲ್ಲವೆಂದು ಆಶಾ ಖಡಾಖಂಡಿತವಾಗಿ ಹೇಳುತ್ತಾಳೆ.
ಮಗುವಿನಿಂದ ಸಾಕಿ ಸಲಹಿ ಪ್ರೀತಿಯಿಂದ ಬೆಳೆಸಿ ದೊಡ್ಡವಳನ್ನಾಗಿ ಮಾಡಿದ ನೀನೇ ನಮ್ಮ ಮಾತು ನಂಬದಿದ್ದ ಮೇಲೆ ಬೇರೆ ಯಾರು ತಾನೇ ನಮ್ಮ ಮಾತು ನಂಬುತ್ತಾರೆ ಎನ್ನುತ್ತಾ, ಅರ್ಧಕ್ಕೆ ಊಟವನ್ನು ಬಿಟ್ಟು ಹೋಗುತ್ತಿರುವಾಗ
ಅಪ್ಪ ಮಗಳು ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುವುದು ಬೇಡವೆಂದು ಎಷ್ಟು ಸಲ‌ ಹೇಳಿದರೂ ನೀವು ನನ್ನ ಮಾತು ಕೇಳುವುದಿಲ್ಲ. ಹೋಗಲೀ ಊಟಕ್ಕೆ ಕುಳಿತುಕೊಂಡರೆ ಸುಮ್ಮನೆ ಊಟ ಮಾಡಿ ಹೋಗುತ್ತೀರಾ? ಅದೂ ಇಲ್ಲಾ ,,,,,‌ ಯಾವುದೋ ವಿಷಯ ತೆಗೆದುಕೊಂಡು ರಾದ್ದಾಂತ ಮಾಡಿ ಊಟ‌ ಬಿಟ್ಟು ಹೋಗುವುದು ನಿಮಗೆ ರೂಡಿಯಾಗಿದೆ ಛೇ ಎಂದು ಅವಳಮ್ಮ ಪಶ್ಚಾತ್ತಾಪ ಪಡುತ್ತಾರೆ.
ಇನ್ನೇನಮ್ಮಾ ಸುಮ್ಮ ಸುಮ್ಮನೆ ಏನೇನೋ ಹೇಳಿ ನಾನು ಪ್ರೀತಿಸುತ್ತಿರುವವರ ಮೇಲೆ ದ್ವೇಷ ಬರುವಂತೆ ಮಾಡಲು ಪ್ರಯತ್ನಿಸಿದರೆ ನಾನು ಹೇಗೆ ನಂಬಲಮ್ಮಾ ಎಂದು ಆಶಾ ಪ್ರಶ್ನಿಸಲು.
ಎದ್ದೇಳೇ ಮೇಲೆ, ಅಪ್ಪ ಅಮ್ಮನನ್ನೇ ನಂಬದವಳು ನಿನ್ನೆ ಮೊನ್ನೆ ಬಂದವನ ಮೇಲೆ ಅದೇನು ನಂಬಿಕೆಯೇ ನಿನಗೆ? ಈ ಜನ್ಮದಲ್ಲಿ ನಿನಗೆ ಬುದ್ದಿ ಬರುವುದಿಲ್ಲ. ನಮ್ಮ ಮಗಳು ಮೋಸಕ್ಕೆ ಸಿಲುಕಿ ಕಷ್ಟಪಡಬಾರದೆಂದು ನಿನ್ನ ಒಳ್ಳೆಯದಕ್ಕೆ ಹೇಳಿದರೆ ನೀನು ಸ್ವತಃ ಅಪ್ಪ ಅಮ್ಮನನ್ನೇ ನಂಬದಂತಾಗಿದ್ದೀಯಲ್ಲಾ? ಅವನು ಅದೆಂತಾ ಮಂಕು ಬೂದಿ ಎರಚಿ, ನಿನ್ನ ಬ್ರೈನ್ ವಾಶ್ ಮಾಡಿದ್ದಾನೆ, ಅವನನ್ನೇ ನಂಬಿ ಅನುಭವಿಸು ಹೋಗು ಎಂದು ಕೋಪದಿಂದ ಅವಳಮ್ಮ ನುಡಿಯುತ್ತಿರುವಾಗ
ಕೋದಂಡರಾಂ ‌ರವರು ಕೈ ತೊಳೆದು ಹೆಗಲ ಮೇಲಿನ ಟವಲಿನಲ್ಲಿ ಕೈ ಒರೆಸಿಕೊಳ್ಳುತ್ತಾ, ಅವಳು ಕಷ್ಟಪಡುತ್ತಿದ್ದರೆ ನಾವುಗಳು ಈ ಕಣ್ಣಿನಿಂದ ನೋಡಿ ಹೇಗೆ ಸಹಿಸಿಕೊಂಡಿರೋಣವೇ ಎಂದು ಬಹಳ ವಿಷಾದದಿಂದ ಹೇಳಿದಾಗ
ಇಂತಹ ಮಗಳನ್ನು ಪಡೆದಿದ್ದಕ್ಕೆ ಅನುಭವಿಸೋಣ ಬಿಡಿ ಇನ್ನೇನು ಮಾಡುವುದಕ್ಕಾಗುತ್ತದೆಂದು ಅವಳಮ್ಮ ಸೆರಗಿನಿಂದ ಕಣ್ಣನ್ನು ಒರೆಸಿಕೊಳ್ಳುತ್ತಾರೆ.
ಆಶಾ ಏನೂ ಮಾತನಾಡದೆ ಕೈ ತೊಳೆದು ತನ್ನ ರೂಮಿಗೆ ಹೋಗಿ, ಅಪ್ಪ ಹೇಳುತ್ತಿರುವುದು ನಿಜವಾ? ವಿಕ್ರಮ್ ಅಣ್ಣನೇ ಕಿಡ್ನಾಪರ್ ಎಂಬುದು ನಿಜವಾ ಎಂದು ನಾನಾ ಯೋಚನೆ ಮಾಡುತ್ತಾ ಕುಳಿತುಕೊಂಡಿಕುವಾಗ
ಮೊಬೈಲ್ ರಿಂಗ್ ಆಗುತ್ತದೆ, ಯಾರದ್ದೆಂದು ನೋಡಲು, ವಿಕ್ರಮ್ ಹೆಸರು ಇದ್ದುದ್ದರಿಂದ ಹಲೋ ಎನ್ನುತ್ತಾಳೆ
ಆಶಾ ಡಿಯರ್ ಹೇಗಿದ್ದೀಯಾ ಎಂದು ವಿಕ್ರಮ್ ಪ್ರಶ್ನಿಸಿದಾಗ
ಈಗ ಸ್ವಲ್ಪ ಪರವಾಗಿಲ್ಲವೆಂದು ಸಮಾಧಾನದಿಂದ ಉತ್ತರಿಸುತ್ತಾ, ನಿನ್ನ ಧ್ವನಿಯಲ್ಲಿ ವ್ಯತ್ಯಾಸವಿದ್ದಂತಿದೆ ಏನಾಯ್ತು ವಿಕ್ರಮ್ ಮೈಯ್ಯಲ್ಲಿ ಹುಷಾರಿಲ್ಲವಾ ಎಂದು ಆಶ‌ ಪ್ಪಶ್ನಿಸಿದಾಗ
ವಿಕ್ರಮ್ ತನ್ನ ಮನಸ್ಸಿನಲ್ಲಿ ಆಶಾಳಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ, ನನ್ನ ಮೇಲೆ ಕೋಪವೂ ಬಂದಿಲ್ಲವೆಂದುಕೊಂಡು, ಏನು ಮಾಡೋದು ಆಶಾ ನಾವುಗಳು ಸಮಾಧಾನದಿಂದ ಇರಬೇಕೆಂದರೂ ಬೇರೆಯವರು ಬಿಡುತ್ತಿಲ್ಲವಲ್ಲಾ ಎಂದು ವಿಷಾದದಿಂದ ವಿಕ್ರಮ್ ನುಡಿದಾಗ
ಅಯ್ಯೋ ಅಂತಾದ್ದು ಏನಾಯ್ತಪ್ಪಾ ಎಂದು ಆಶಾ ಮರು ಪ್ರಶ್ನಿಸುತ್ತಾಳೆ.
ನಮ್ಮಣ್ಣನನ್ನು ಪೋಲೀಸ್ ರವರು ಹಿಡಿದುಕೊಂಡು ಹೋಗಿದ್ದಾರೆ, ಅವನನ್ನು ಬಿಡಿಸಿಕೊಂಡು ಬರುವವರೆಗೆ ನಮಗೆಲ್ಲಿ ನೆಮ್ಮದಿ ಇರುತ್ತದೆಂದು ವಿಕ್ರಮ್ ಹೇಳಿದಾಗ
ನಿಮ್ಮಣ್ಣನನ್ನು ಏತಕ್ಕೆ ಹಿಡಿದುಕೊಂಡು ಹೋಗಿದ್ದಾರೆ? ಅವರೇನು ತಪ್ಪು ಮಾಡಿದ್ದಾರೆಂದು ಆಶಾ ಪ್ರಶ್ನಿಸಿದಾಗ
ನಮ್ಮಿಬ್ಬರಿಗೆ ಒಳ್ಳೆಯದು ಮಾಡುವುದಕ್ಕೆ ಹೋಗಿ ಅವನು ಸಿಕ್ಕಿಕೊಂಡಿದ್ದಾನೆಂಬ ವಿಕ್ರಮ್ ಮಾತಿಗೆ
ವಿಕ್ರಮ್ ಏನು ಹೇಳುತ್ತಿದ್ದೀಯಾ? ನಿಮ್ಮಣ್ಣ ನಮಗೇನು ಒಳ್ಳೆಯದು ಮಾಡಲು ಹೋಗಿದ್ದರು ಸರಿಯಾಗಿ ಬಿಡಿಸಿ ಹೇಳು ಎಂದು ಆಶಾ ಕೇಳಲು
ನಿನಗೆ ಹೇಗೆ ಹೇಳಲೆಂದು ಗೊತ್ತಾಗುತ್ತಿಲ್ಲ ಆಶಾ, ನನ್ನ ಮಾತಿನ ಮೇಲೆ ನಂಬಿಕೆ ಇದೆಯೋ ಇಲ್ಲವೋ ಎಂದು ವಿಕ್ರಮ್ ಹೇಳಿದ ಮಾತಿಗೆ
ನಿನ್ನ ಮೇಲೆ ನಂಬಿಕೆ ಇದ್ದದ್ದಕ್ಕೆ ತಾನೇ ನಾನು ನಿನ್ನನ್ನು ಲವ್ ಮಾಡಿದೆ. ನಿನಗೆ ನನ್ನ ಮೇಲೆ ನಂಬಿಕೆ ಇದ್ದರೆ ವಿಷಯ ಹೇಳೆಂದು ಆಶಾ ನುಡಿದಾಗ
ವಿಕ್ರಮ್ ತನ್ನ ಮನಸ್ಸಿಗೆ ಧೈರ್ಯ ತಂದುಕೊಂಡು ಗಂಟಲು ಸರಿಪಡಿಸಿಕೊಳ್ಳುತ್ತಾ, ಆಶಾ ಡಿಯರ್ ನಮ್ಮಪ್ಪನಿಗೆ ಸಾಲ‌ ಇರುವ ವಿಷಯ ನಿನಗೆ ಗೊತ್ತಲ್ಲವಾ ಎಂದು ಪ್ರಶ್ನಿಸಿದಾಗ
ಹ್ಞೂಂ ಗೊತ್ತು ನಿಮ್ಮಪ್ಪನಿಗೆ ಕೋಟ್ಯಾಂತರ ರೂಪಾಯಿ ಸಾಲ ಇರುವುದು ಗೊತ್ತು ಹಾಗೆಯೇ ನಮ್ಮಪ್ಪ ಸಾಲ‌ ತೀರುವವರೆಗೂ ನಮ್ಮಿಬ್ಬರ ಮದುವೆ ಮಾಡುವುದಿಲ್ಲವೆಂದು ಹೇಳಿರುವುದೂ ಗೊತ್ತು ಮುಂದೆ ಹೇಳೆಂದು ಆಶಾಳ ಮಾತಿಗೆ
ವಿಕ್ರಮ್ ನಮ್ಮಣ್ಣನು,,,,, ಎಂದಷ್ಚೇ ಹೇಳಿ ಮಾತು ನಿಲ್ಲಿಸಿದಾಗ,
ನಿಮ್ಮಣ್ಣನು,,,,, ಎಂದು ಅರ್ಧಕ್ಕೆ ಮಾತು ನಿಲ್ಲಿಸಿದರೆ ನನಗೇನು ಅರ್ಥವಾಗಬೇಕು ಎಂದು ಆಶಳ‌ ಪ್ರಶ್ನೆಗೆ
ನಮ್ಮಣ್ಣನು ನಮ್ಮ ಕಷ್ಟವನ್ನು ನೋಡಲಾರದೆ, ನಮ್ಮಪ್ಪನ ಸಾಲ‌ವನ್ನು ಹೇಗಾದರೂ ತೀರಿಸಿದರೆ ನಿಮ್ಮಪ್ಪ ನಮ್ಮಿಬ್ಬರ ಮದುವೆಗೆ ಒಪ್ಪುತ್ತಾರೆಂದು, ಬೇರೆ ದಾರಿ‌ಕಾಣದೆ ನಿನ್ನನ್ನು ಕಿಡ್ನಾಪ್ ಮಾಡುವ ನಾಟಕವಾಡಿ, ನಿಮ್ಮಪ್ಪನಿಂದ ಹಣವನ್ನು ಪಡೆದು ಅದರಿಂದ‌ ನಮ್ಮಪ್ಪನ ಸಾಲ‌ತೀರಿಸಿದರೆ, ನಿಮ್ಮಪ್ಪ ನಮ್ಮಿಬ್ಬರ ವಿವಾಹವನ್ನು ಮಾಡುತ್ತಾರೆಂಬ ನಂಬಿಕೆಯಿಂದ ನಿನ್ನನ್ನು ಕಿಡ್ನಾಪ್ ಮಾಡಿ ನಿನಗೆ ಏನೂ ತೊಂದರೆ ಕೊಡದೆ ಒಂದು ಕಡೆ ಇಟ್ಟಿದ್ದ, ಪೋಲೀಸ್‌ ಇನ್ಸ್‌ಪೆಕ್ಟರ್ ರವರಿಂದ ನಮ್ಮಣ್ಣನ ಪ್ಲಾನ್ ಫ್ಲಾಪ್ ಆಗಿ, ಈಗ‌ ನಮ್ಮಣ್ಣ ಪೋಲೀಸರ ಅತಿಥಿಯಾಗಿದ್ದಾನೆ. ನಮ್ಮಿಂದ ನಮ್ಮಣ್ಣ ಕಷ್ಟಪಡುವಂತಾಗಿದೆ ಎಂದು ವಿಕ್ರಮ್ ಹೇಳುತ್ತಾನೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಿಂದ ಕಂಡು ಬರುವ ಮುಖ್ಯವಾದ ಅಂಶ ಏನಂದರೆ

ಮಕ್ಕಳು ದೊಡ್ಡವರಾದ ಮೇಲೆ ಹೆತ್ತವರನ್ನು ನೋಡಿಕೊಳ್ಳುವುದು ಬೇಡ, ಕಡೇಪಕ್ಷ ಅವರಿಗೆ ಮಾನಸಿಕನಾಗಿ ಹಿಂಸೆ ನೀಡದಂತೆ ಇದ್ದರೂ ಹೆತ್ತವರಿಗೆ ಎಷ್ಚೋ ಉಪಕಾರ ಮಾಡಿದಂತಾಗುತ್ತದೆ.
ಮಕ್ಕಳ ಸ್ವಯಂಕೃತ ಅಪರಾಧದಿಂದ ಕೆಲವೊಮ್ಮೆ ದೊಡ್ಡವರೂ ಕಷ್ಚಕ್ಕೆ ಸಿಲುಕುವಂತಾಗುತ್ತದೆ. ಅದನ್ನು ಧೈರ್ಯವಾಗಿ ಎದುರಿಸಿ ಮಕ್ಕಳನ್ನು ಪಾರುಮಾಡಲು ಹೆತ್ತವರು ಬಹಳವೇ ಕಷ್ಚ ಪಡಬೇಕಾಗುತ್ತದೆ. ಆದಷ್ಟೂ ಮಕ್ಕಳು ಜೀವನದಲ್ಲಿ ಎಚ್ಚರಿಕೆಯಿಂದ ಮುನ್ನಡೆಯಬೇಕಾಗುತ್ತದೆ. ತಮಗೆ ತಿಳಿಯದೆ ಮುಂದುವರೆದು ಅನಗತ್ಯವಾಗಿ ಕಷ್ಟಕ್ಕೆ ಸಿಲುಕುವ ಮೊದಲು ದೊಡ್ಡವರ ಸಲಹೆ ಸೂಚನೆ ಪಡೆದು ಮುಂದುವರೆಯುವುದು ಒಳ್ಳೆಯದು. ಆದರೆ ಮಕ್ಕಳು ಕೆಟ್ಟಕಾರ್ಯ ಮಾಡಲು ದೊಡ್ಡವರು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಅಲ್ಲವೇ?
ಮನುಷ್ಯ ತಾನು ಮಾಡಿದ ತಪ್ಪನ್ನು ಮರೆಮಾಚಿಕೊಳ್ಳಲು ನಡೆದ ಘಟನೆಯನ್ನು ತಮಗಿಷ್ಟ ಬಂದಂತೆ ಹೇಗಾದರೂ ತಿರುಚಬಹುದು. ಆದರೆ ನಂಬುವವರು ಮೂರ್ಖರಾಗಬಾರದಷ್ಚೇ. ಇಲ್ಲಿ ತನ್ನಣ್ಣ ಮಾಡಿದ ತಪ್ಪನ್ನು, ಮುಚ್ಚಿಕೊಳ್ಳಲು, ವಿಕ್ರಮ್ ನಮ್ಮಿಬ್ಬರ ವಿವಾಹ ಮಾಡಿಸಲು ನಿನ್ನನ್ನು ಕಿಡ್ನಾಪ್ ಮಾಡಿದನೆಂದು ಆಶಾಳಿಗೆ‌ ಕಥೆ ಕಟ್ಟಿ ನಾಟಕವಾಡುತ್ತಿದ್ದಾನೆ. ಈ ಮಾತನ್ನು ಆಶಾ ನಂಬುವಳೋ ಬಿಡುವಳೋ ನಾಳೆಯ ಸಂಚಿಕೆಯಲ್ಲಿ ತಿಳಿಯುತ್ತದೆ.