ಲಂಚದ ಹೊತ್ತಿಗೆಯಲ್ಲಿ ಪ್ರಪಂಚ
“”‘””””””””””””””””””””
ಜಗವೇ ನಿದ್ರಿಸುತ್ತಾ ಲಂಚದ ಹೊತ್ತಿಗೆಯಲ್ಲಿ
ತಾಂಡವ ನೃತ್ಯವಾಡುತ
ತೆರೆಮರೆಯಲ್ಲಿ ಕೈಬೀಸಿ ಕರೆಯುತ
ಮೇಜು ಕುರ್ಚಿಗಳು ಬಾಯ್ದೆರೆದ ಲಂಚ

ವಂಚಿತ ಅಪರಾಧಿ ಪಾರಾಗಲು
ಅರಕ್ಷಕ ಸಿಬ್ಬಂದಿಗೆ ತಾಕಿದರಾಯಿತು ಲಂಚ
ಸರಿ ಸರಿದು ಕಾನೂನು ಬದ್ಧತೆ
ಜನರಕ್ಷಕರೋ ಲಂಚಭಕ್ಷಕರೋ
ಸಮಯ ಸಾಧಕರ ತೆರೆಮರೆಯಲಿ ಕೈತಾಗುವ ಲಂಚ

ರೋಗಿಯ ನೋಡಲು ತುರ್ತಾಗಿ
ದಾದಿಯರಿಗೂ ನೀಡಿದರಾಯಿತು ಲಂಚ
ಚಿಕಿತ್ಸೆಗೆ ತೆರೆದ ಬಾಗಿಲ ಆಹ್ವಾನಕೆ ಲಂಚ

ಸರಿಯದಿದ್ದರೆ ನೋಟು
ನಿಂತಲ್ಲಿ ಕೈಕಟ್ಟಿ ನಿಲ್ಲು
ಗುಟ್ಟು ಜುಟ್ಟು ಎರಡು ನನ್ನದು
ಹಬ್ಬಿಸಬೇಡವೆಲ್ಲೂ ಗುಲ್ಲು
ಆಸ್ತಿ ಹಕ್ಕು ನಿನ್ನದಾಗಲು ನೀಡಲೇಬೇಕು ಲಂಚ

ನೀಡಿದರೆ ಲಂಚ ಕೈದಿಗೂ
ಸುಖಾಸೀನ ಪಲ್ಲಂಗ
ಸವಿರುಚಿ ಭಕ್ಷಭೋಜನ
ಕಾವಲುಗಾರ ಬಿಡಲೊಳಗೆ
ಕಾತರಿಸಿ ಕಾಯುವ ಕೀಳಲು ಲಂಚ

ಕ್ಷೇತ್ರ ಕ್ಷೇತ್ರಗಳಿಗೂ ಬೇರುಬಿಟ್ಟು
ರಂಬೆ ಕೊಂಬೆಗಳಾಗಿ ಸಿಟಿಲೂಡೆದು
ಬಂಗಲೆಯೊಳಗಣ ಬಣ್ಣಿಸಲಾಗದ ಬಣ್ಣಗಳಿಗೆ
ಭದ್ರ ಬುನಾದಿ ಲಂಚ

ಕನಸಲ್ಲೂ ಕನವರಿಸಿ ಹೊರಳುವ ಲಂಚ
ಕೈ ಕೈ ತಾಗದೆ ಸರಿಯವು
ಕಡತ ಪತ್ರಗಳು ಕೊಂಚವು
ಕೈ ಮುಗಿದರೆ ಸಾಗದು ಕೆಲಸವು
ಸಹಿ ಒತ್ತಲು ಮೊದಲಾದ ಲಂಚ

ಕೊಟ್ಟವರು ಮುಂಬರಲು
ಕರೆ ಬರುವ ಮೊದಲು
ನೀ ಮರೆಯಾಗಿ ನಿಲ್ಲು
ನಿನ್ನ ಅಲೆದಾಟ ಕೇಳುವವರು ಯಾರಿಲ್ಲವಿಲ್ಲಿ
ಕೆಲಸ ಕೈಗೂಡಲು ಬೇಕೇ ಬೇಕು ಲಂಚ

ಒಳ ಸಂಧಾನದಿ ಕಾಂಚಾಣ
ತೂರುತ
ಸತ್ಯ ಸಾಕ್ಷಿಯನ್ನೇ ತಿರುಚುತ
ನ್ಯಾಯ ದೇವತೆ ತಕ್ಕಡಿ ವಾಲುತ
ಕಪಟ ಮೋಸಕ್ಕೆ ಬೆಲೆಯನಿಕ್ಕುತ
ಇದುವೇ ನಾಗರಿಕ ಲಂಚ ಪ್ರಪಂಚ

ಯಶೋದಾ ರಾಮಕೃಷ್ಣ

★★★★★★★★★★★★★★★★

ಗುಣಿತಾಕ್ಷರ ಕವನ

ಶೀರ್ಷಿಕೆ –  ನನ್ನವನು

ಬ.   ಬದುಕಿನಲಿ ಸಮೃದ್ಧಿ ತಂದವನು
ಬಾ   ಬಾಳು ಬಂಗಾರ ಮಾಡಿದವನು
ಬಿ     ಬಿಂಕದ ಸಿಂಗಾರಿ ನಾನಾಗಲು
ಬೀ   ಬೀರುತ ಬರುವನು ನಗೆಮಲ್ಲಿಗೆಯ
ಬು    ಬುದ್ಧಿವಂತ ಹೃದಯವಂತನು
ಬೂ   ಬೂದಿ ಬಣ್ಣ ಇಷ್ಟಪಡುವವನು
ಬೃ     ಬೃಹಸ್ಪತಿಯಂತೆ ಹಿರಿಯವನು
ಬೆ      ಬೆಳದಿಂಗಳ ಚಂದ್ರಮನವನು
ಬೇ.   ಬೇಸಾಯವನೂ ಪ್ರೀತಿಸುವನು
ಬೈ.     ಬೈಗುಳಗಳೆಂದೂ ಬರುವುದಿಲ್ಲ
ಬೊ    ಬೊಂಬೆಯಂತೆ ನನ್ನನಾಡಿಸುವನು
ಬೋ   ಬೋಧಿಸುವನು ಮಾತು ಮಾತಿಗೆ
ಬೌ     ಬೌದ್ಧಿಕತೆಯ ಪ್ರತೀಕ ಸತ್ಯವಂತನು
ಬಂ     ಬಂಡುಖೋರನು ಅನ್ಯಾಯಕೆ
ಬ:      ಬಹದ್ದೂರ್ ಗಂಡು ನನ್ನವನು

ಅನ್ನಪೂರ್ಣ ಸುಭಾಷ್ಚಂದ್ರ ಸಕ್ರೋಜಿ. ಪುಣೆ

★★★★★★★★★★★★★★★★

ಶೀರ್ಷಿಕೆ – ಚೈತ್ರದ ಸಿರಿಗೌರಿ

ಸೂಜಿ ಮಲ್ಲಿಗೆ ಮುಡಿದ ನನ್ನ
ಸೂಜಿಗಲ್ಲಿನ  ಚೆಲುವೆ
ಚೆಂದದಿ ಬಳಿ ಬಾರೆ

ಮುಗ್ಧ ಮಗುವಿನ ನಗೆಯವಳೆ
ಮಲ್ಲಿಗೆ ಘಮಲಿನ
ಮನದನ್ನೆ ನೀ ಬಾರೆ

ಚುಂಬಕ ಶಕ್ತಿಯ ಚೆನ್ನೆ ನೀನು
ಚಂದಿರ ನಾಚುತಿಹ
ಚಂದನದ ಗೊಂಬೆ

ಮನದಲರಳಿದ ಮಂದಾರ ಹೂವೆ
ಎದೆಯ ಕದ ತೆರೆದು
ಹೃದಯದಲಿ ನೆಲೆಸು ಬಾ

ಚಂದ್ರ ಚಕೋರಿ ಚಂಚಲ ಚಿತ್ತೆ ನೀ
ಚಿತ್ತ ಚೋರಿ ವಿಹಾರಿ
ಚೈತನ್ಯದ ಚಿಲುಮೆ

ಆಕರ್ಷಕ ಮೋಹಕ ಕಂಗಳಗಳ
ತಿಂಗಳ ಬೆಳಕಲ್ಲಿ ನನ್ನ
ನಾ ಮರೆತೆ ನಿನ್ನಲಿ

ಚಂದನದ ಪರಿಮಳ ಬೀರುವ
ಚೈತ್ರದ ಸಿರಿಗೌರಿ ನೀ
ಬಾಳು ಬೆಳಗು ಬಾ

ಅನ್ನಪೂರ್ಣ ಸು ಸಕ್ರೋಜಿ   ಪುಣೆ

★★★★★★★★★★★★★★★★
ಬುದ್ಧ ನಕ್ಕ

ಮಧ್ಯರಾತ್ರಿಯಲ್ಲಿ ನಾನು ಎದ್ದೆ
ದಿನವಿಡೀ ದಣಿದ ಮನಕೆ
ಶಾಂತಿ ನೆಮ್ಮದಿ ಅರಸುತಿದ್ದೆ

ಜಗವ ಗೆದ್ದ ಬುದ್ಧನ ನೆನಸಿದೆ
ಬುದ್ಧ ನಗುತ ಎದುರಿಗೆ ನಿಂತಿದ್ದ
ಬಾ ಕಂದಾ ನನ್ನ ಜೊತೆಗೆ ಎಂದ

ಬೆಳಕಿನ ಪುತ್ಥಳಿಯಂತಿದ್ದ ಅವನ
ಕೈ ಹಿಡಿಯಲು ತಡವರಿಸಿದೆ
ಗಂಡ ಮಕ್ಕಳು ಮಲಗಿದ್ದಾರೆ

ಅವರಿಗೆ ತಿಳಿಸದೆ  ಹೇಗೆ ಬರಲಿ
ಮುಂಜಾನೆದ್ದು ಡಬ್ಬಿ ಕಟ್ಟಬೇಕು
ನಾನು ಆಫೀಸಿಗೆ ಹೋಗಬೇಕು

ಮಾವನಿಗೆ ಮಾತ್ರೆ ಕೊಡಬೇಕು
ಅತ್ತೆಗೆ ಮಾಲಿಶ್ ಮಾಡಬೇಕು
ಎದ್ದ ತಕ್ಷಣ ಗಂಡನಿಗೆ ಚಹಾ ಬೇಕು

ಬುದ್ಧ ನೀನೇನೋ ಮಹಾತ್ಮಾ
ಗಂಡಸು ನಿಶ್ಚಿಂತ ಪುರುಷ
ನನ್ನಂತೆ ಜವಾಬ್ದಾರಿ ನಿನಗಿಲ್ಲ

ಆಸೆಗಳೇ ದುಃಖಕ್ಕೆ ಮೂಲವೆಂದೆ
ಆಸೆ ಬಯಕೆಗಳಿಲ್ಲದ ಬದುಕಿಲ್ಲ
ಸಂಸಾರ ಗೆದ್ದವರೇ ಜಾಣರಲ್ಲವೆ

ಆಗ ಬುದ್ಧ ಕರುಣೆಯಿಂದ ನಕ್ಕ
ಆಗಲಿ ಮಗು ನೀನು ಗೆದ್ದು ಬಾ
ನಾನು ನಿನಗಾಗಿ ಕಾಯುವೆನೆಂದ

ಅನ್ನಪೂರ್ಣ ಸು ಸಕ್ರೋಜಿ ಪುಣೆ