ಸೋಲಿನ ಪಾಠ

“ಯಶಸ್ಸಿನ ಕಥೆಗಳನ್ನು ಮಾತ್ರ ಓದಬೇಡಿ ಅಲ್ಲಿ
ನಿಮಗೆ ಸಂದೇಶಗಳಷ್ಟೇ ಸಿಗುತ್ತವೆ
ಸೋಲಿನ ಕಥೆಗಳನ್ನು ಓದಿ ಆಗ
ಗೆಲ್ಲುವ ಐಡಿಯಾವು ಸಿಗುತ್ತದೆ”

ಡಾ। ಎ.ಪಿ.ಜೆ. ಅಬ್ದುಲ್ ಕಲಾಂ

ಡಾ। ಎ.ಪಿ.ಜೆ. ಅಬ್ದುಲ್ ಕಲಾಂ ರವರು ಹೇಳುವಂತೆ ಸೋಲು ನಮಗೆ ಗೆಲ್ಲುವ ದಾರಿಯನ್ನು ತೋರಿಸುತ್ತದೆ. ಸದಾ ನಾವು ಗೆಲುವಿನ ಹಾದಿಯಲ್ಲೇ ಸಾಗಲು ಪ್ರಯತ್ನಿಸುತ್ತೇವೆ. ಅದು ತಪ್ಪಲ್ಲ ಆದರೆ ಆ ದಾರಿ ಅಷ್ಟು ಸುಲಭವಲ್ಲ, ಕಷ್ಟ ನಷ್ಟ ಏನೇ ಎದುರಾದರೂ ಹೆದರುತ್ತ ಎದೆಗುಂದಿ ಹಿಮ್ಮೆಟ್ಟದೆ ಮುಂದೆ ಸಾಗುತ್ತಿರಬೇಕು. ಒಮ್ಮೆ ಸೋತರೂ ಗೆಲುವಿನ ದಾರಿಯನ್ನು ಹುಡುಕಬೇಕು. ನಡೆಯುವ ವ್ಯಕ್ತಿ ಎಡವೋದು ಸಹಜ ಎಡವಿದಾಗಲೇ ಹೇಗೆ ನಡೆಯಬೇಕೆಂದು ಕಲಿಯುತ್ತೇವೆ. ಸೋಲು ಗೆಲುವಿನ ಮೆಟ್ಟಿಲು ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಬದುಕುವ ರೀತಿಯನ್ನು ಕಲಿಯುತ್ತೇವೆ. ಕಲಿಕೆಯಲ್ಲಿ ಆಸಕ್ತಿ ಮೂಡಿದಾಗಲೇ ಉತ್ತಮ ವ್ಯಕ್ತಿತ್ವವನ್ನು ಪಡೆದು ಯಶಸ್ಸಿನ ಮೆಟ್ಟಿಲೇರುತ್ತೇವೆ.

ಸಕಲ ವಿದ್ಯಾ ಪಾರಂಗತನಾದವನು
ಜೀವನದಲ್ಲಿ ಸೋಲನ್ನು ಅರಿಯನು
ಬದುಕುವ ಮಾರ್ಗವನ್ನು ತಾನು ತಿಳಿದು
ಕಾಯಕ ನಂಬಿ ಸುಖದಲ್ಲಿ ಬಾಳುವನು

ಮನದಲ್ಲಿ ಕೀಳರಿಮೆ ಸಂಕುಚಿತ ಸ್ವಭಾವಗಳು ಇದ್ದಾಗ ನಮ್ಮ ಏಳ್ಗೆಗೆ ಅಡ್ಡಿಯಾಗುವುವು. ಆಗ ನಾವು ಕೈಗೊಂಡ ಕಾರ್ಯ ಅಪೂರ್ಣವಾಗಿ ಯಶಸ್ಸಾಗದೆ ಸೋಲುಂಟಾಗುವುದು. ಬರುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ನಿಂತಾಗ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಸೋತು ಗೆದ್ದಾಗಲೆ ಜೀವನದ ಮೌಲ್ಯ ಅರಿವಾಗುವುದು, ಒಂದು ಸಲ ಸೋತ ಮಾತ್ರಕ್ಕೆ ಅಲ್ಲಿಗೆ ನಮ್ಮ ಜೀವನ ಅಂತ್ಯವಲ್ಲ ಮರಳಿ ಪ್ರಯತ್ನ ಮಾಡುತಿರಲು ಒಂದು ದಿನ ಗೆಲ್ಲುವೆವು. ನಾವು ಮಾಡುವ ಕಾಯಕ ಯಾವುದಾದರೂ ಅದನ್ನು ಗೌರವಿಸಬೇಕು ಆದಾಯ ಎಷ್ಟೇ ಇದ್ದರೂ ಅದರಲ್ಲೇ ತೃಪ್ತಿಯನ್ನು ಹೊಂದಬೇಕು. ಆಗ ನಮ್ಮ ಬಾಳಿನಲ್ಲಿ ಸೋಲೆಂಬುವ ಮಾತೆ ಇರುವುದಿಲ್ಲ. ಸದಾ ಹಸನ್ಮುಖಿಯಾಗಿದ್ದಾಗ ಸೋಲು-ಗೆಲುವು, ನೋವು-ನಲಿವು ಎಲ್ಲವನ್ನೂ ಸಮಭಾವದಿಂದ ಸಮಭಾವದಿಂದ ಸ್ವೀಕರಿಸುತ್ತೇವೆ. “ಸೋಲಿನಿಂದ ಪಾಠ” ಕಲಿತು ಗೆಲ್ಲುವ ಉಪಾಯಗಳನ್ನು ತಿಳಿದುಕೊಂಡಾಗ ಸೋಲು ಎನ್ನುವ ಪದವು ನಮ್ಮ ಬಳಿಗೆ ಸುಳಿಯಲಾರದು. ಒಂದು ವೇಳೆ ಸೋತರೂ ಸೋತೆನೆಂದು ಮನವು ಕುಗ್ಗದಿರಲಿ ಸೋತು ಗೆದ್ದವನ ಛಲ ನೋಡಿ ಬದಲಾದಾಗ ಸೋಲಿನ ಕಾವು ತಟ್ಟದಂತೆ ಮುಂದೆ ಗೆಲ್ಲಬೇಕೆಂಬ ಪ್ರಯತ್ನದಲ್ಲೇ ಸಾಗುತ್ತಿರಬೇಕು. ನಮ್ಮ ಜೀವನದಲ್ಲಿ ನಿಜವಾದ ಸೋಲು ಯಾವುದೆಂದರೆ ಪ್ರಯತ್ನವನ್ನೇ ಪಡದೆ ಸೋಮಾರಿಯಾಗಿರುವುದು. ಈ ಸೂಕ್ಷ್ಮ ನಮ್ಮ ಮನಸನ್ನು ತಟ್ಟಿದಾಗ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಹಿಮ್ಮೆಟ್ಟಲಾರೆವು.

ಸಾಧಕರ ಹಾದಿಯನ್ನು ಅನುಸರಿಸಿದಾಗ ಸಾಧನೆಯ ಹಿಂದಿರುವ ಶ್ರಮ ಎಷ್ಟಿದೆಯೆಂದು ಮನದಟ್ಟಾಗುತ್ತದೆ. ಆಗಲೇ ನಾವು ಸಾಧನೆ ಮಾಡುತ್ತ ಗೆಲುವಿನ ಹಾದಿಯನ್ನು ಸವೆಸುತ್ತೇವೆ. ಒಂದಲ್ಲ, ಎರಡಲ್ಲ ಹತ್ತು ಭಾರಿ ಸೋತರೂ ಮರಳಿ ಯತ್ನವಿರಬೇಕು. ಜನರ ವ್ಯಂಗ್ಯ, ಕುಹಕ ನುಡಿಗಳಿಗೆ ಕಿವಿ ಕೊಡದೆ ತಾನು ಸಾಗಬೇಕಾದ ಹಾದಿ ಕಡೆ ಏಕಾಗ್ರತೆಯಿಂದ ಸಾಗುತ್ತಿರಬೇಕು. ಆಗ ನಮಗೆ ಯಶಸ್ಸಿನ ಹಾದಿ ತಾನಾಗೆ ಗೋಚರಿಸುತ್ತದೆ.

ನಮ್ಮ ಪ್ರತಿ ಕಾರ್ಯವನ್ನು ನೋಡಿ ಸಹಿಸದ ಜನ ನಿಂದಿಸುತ್ತ ಇರುತ್ತಾರೆ. ಅಂತಹವರ ನಿಂದನೆ ಮಾತುಗಳಿಗೆ ಎದೆಗುಂದಿ ಹಿಮ್ಮೆಟ್ಟದೆ ಮುನ್ನಡೆಯುವ ಛಲ ಹೊಂದಬೇಕು. ಏಕೆಂದರೆ ನಿಂದನೆ ಮಾತುಗಳೆ ಸಾಣೆ ಕಲ್ಲಿನಂತೆ ಅವು ಸದಾ ನಮಗೆ ಹುರುಪು ನೀಡಿ ನಮ್ಮಲ್ಲಿ ಚೈತನ್ಯ ತುಂಬುತ್ತವೆ. ಹಾಗೂ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುತ್ತವೆ. ಪ್ರತಿ ಕ್ಷೇತ್ರದಲ್ಲಿ ಸಾಧಕರಿಗೆ ಪ್ರತಿ ಸ್ಪರ್ಧಿಗಳು, ಹಿತ ಶತ್ರುಗಳು ಬೆನ್ನಿಂದೆ ಇರುತ್ತಾರೆ. ಅಲ್ಲದೆ ನಮಗೆ ಶುಭ ಹಾರೈಸುವಂತ ಸನ್ಮಿತ್ರರು ಇರುತ್ತಾರೆ. ಇದೇ ಜೀವನ ಇದನ್ನು ಅರ್ಥ ಮಾಡಿಕೊಂಡು ಹೆಜ್ಜೆ ಮುಂದಿಟ್ಟಾಗ ಗೆಲುವು ನಮ್ಮದಾಗುತ್ತದೆ.ಆಗ ಸೋಲಿನ ಎಲ್ಲಾ ದಾರಿಗಳು ಮುಚ್ಚಿ ಹೋಗುತ್ತವೆ. ನಮ್ಮ ಬಾಳಬಂಡಿ ನಡೆಸಲು ನಾವೆ ಚಾಲಕರು ಅದನ್ನು ಸನ್ಮಾರ್ಗದಲ್ಲಿ ನಡೆಸುವ ಕೈ ಚಳಕ ಹೊಂದಬೇಕು ಇದರಿಂದ ನಾವು “ಸೋಲಿನಿಂದ ಪಾಠ” ಕಲಿಯುತ್ತೇವೆ. ನಮ್ಮ ದಾರಿ ತಪ್ಪಿಸುವ ವಂಚಕರು ಇರುತ್ತಾರೆ ಅಂತವರ ಬಗ್ಗೆ ಜಾಗ್ರತೆ ವಹಿಸಬೇಕು. ಇಂತವರ ಮಾತು ನಂಬಿ ನಡೆದಾಗ ಸೋಲು ಖಚಿತ, ಎಲ್ಲಾ ಕಳೆದುಕೊಂಡ ಮೇಲೆ ತಾವು ಮಾಡಿದ ತಪ್ಪಿನ ಅರಿವಾಗುತ್ತದೆ. ಆದರೆ ಕಾಲ ಮಿಂಚಿಹೋಗಿರುತ್ತದೆ, ಇಂತಹ ಸೋಲಿನಿಂದ ಚೇತರಿಸಿಕೊಳ್ಳುವುದು ಸುಲಭವಲ್ಲ.

ಪಿ.ಲಂಕೇಶ್ ರವರು ಹೇಳುವಂತೆ-
“ಗೆಲುವಿನ ಖಚಿತತೆಯಲ್ಲೂ
ಸೋಲಿನ ಎಚ್ಚರವಿರಬೇಕು”

ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸ ನಮಗಿದ್ದರೂ ಸೋಲಿನ ಬಗ್ಗೆ ಎಚ್ಚರವೂ ಇರಬೇಕು. ಅತಿಯಾದ ಆತ್ಮವಿಶ್ವಾಸವು ಸಹ ಪಥನಕ್ಕೆ ಕಾರಣವಾಗಬಹುದು ಅದನ್ನು ತಿಳಿದು ಬಾಳಿದಾಗ ಗೆಲ್ಲುವ ನಿರೀಕ್ಷೆ ನಮಗಿರುತ್ತದೆ

“ಗೆಲ್ಲತ್ತೇನೆ ಎಂದು ಬಂದವನು
ಸೋಲುವುದಕ್ಕೂ ಸಿದ್ಧನಿರಬೇಕು”
– ದ.ರಾ. ಬೇಂದ್ರೆ

ಲೇಖಕಿ: ಎ.ಸರಸಮ್ಮ
ಚಿಕ್ಕಬಳ್ಳಾಪುರ
ದೂ – 9481587343