ಗಜರಾಜ
******
ಕೊರಳಿನ ಗಂಟೆಯ ಸದ್ದನು ಕೇಳುತ
ಬಂದನು ಪುಟ್ಟನು ಎದುರಲ್ಲಿ
ಕೈಯಲಿ ಹಿಡಿದನು ಬಾಳೆಯ ಹಣ್ಣನು
ಆನೆಗೆ ನೀಡಲು ಬಳಿಯಲ್ಲಿ ll

ಪ್ರೀತಿಯ ತೋರಿಸು ಸ್ನೇಹದಿ ಬರುವನು
ಉದ್ದನೆ ಸೊಂಡಿಲ ಗಜರಾಜ
ನಾಮವ ಹಾಕಿದ ಚಂದದಿ ನಿಂತಿಹ
ನಾಡಿಗೆ ಬಂದಿಹ ಗುಣತೇಜ ll

ಅಂಕುಶ ದಿಂದಲಿ ಪಳಗಿಸಿ ಸಾಕುವ
ನಾಡಿನ ಪ್ರಾಣಿಯು ಇವನೀಗ
ದೇಗುಲದಲ್ಲಿಯು ದೇವರ ಹೊರುವನು
ಮುದ್ದಿನ ಕಣ್ಮಣಿ ಅವನೀಗ ll

ಆನೆಯ ಬಲವದು ತಿಳಿದರೆ ಭಯದಲಿ
ಎದುರಲಿ ನಿಲ್ಲಲು ಹೆದರುವನು
ಕೋಪವ ಬರಿಸದೆ ಮುದ್ದಿಸಿ ಮಾವುತ
ಹೇಳಿದ ಹಾಗೆಯೆ ಕೇಳುವನು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ