Table of Contents

ಕೃಷ್ಣೆಯ ಮಡಿಲಲ್ಲಿ
ನಾ ಬೆಳೆದಿದ್ದು ಕೃಷ್ಣೆಯ ಮಡಿಲಲ್ಲಿ
ಆಕೆಯ ಹಚ್ಚ ಹಸುರಿನ ಇಕ್ಕೆಲುಗಳಲ್ಲಿ.
ಆಕೆಯ ಜಲಧಾರೆಯ ನೋಟವೆಲ್ಲಿ?
ಆಕೆಯ ಆಗಮನದ ಆಶೆ ನನ್ನ ಕಣ್ಣಂಚಿನಲ್ಲಿ.
ಸದಾ ಮೈದುಂಬಿ ಹರಿಯುತ್ತಿದ್ದೆ
ಎಲ್ಲರ ಪಾಪಗಳನ್ನು ತೊಳೆಯುತಿದ್ದೆ
ಎಲ್ಲ ಜೀವ ಸಂಕುಲಕ್ಕೆ ಆಶ್ರಯವಾಗಿದ್ದೆ
ನಮ್ಮೂರು ಕೃಷ್ಣೆಯ ತಟ ಎಂದೆಂದೂ ಸಮೃದ್ಧಿಯ ತಾಣವಾಗಿದ್ದೆ .!
ರೈತರ ಕಣ್ಣೀರೊರೆಸುವ ಭಾಗ್ಯದಾತೆಯಾದೆ
ಮನುಜನ ದುರಾಸೆಗೆ ಬಲಿಪಶುವಾದೆ.
ನಿನ್ನ ಒಡಲನ್ನು ಬಗೆದವರು ಅಂದು.
ನಿನ್ನ ಬರುವಿಕೆಯ ಕಾಯುವರು ಇಂದು.
ಹರಿಯುವ ಕೃಷ್ಣೆ ಎಲ್ಲಿ ??
ಬತ್ತಿದ ಕೃಷ್ಣೆಯ ಅಂಗಳವೆಲ್ಲಿ ??
ಓ ! ಮನುಜ. ನಿನ್ನ ಹಣದ ದಾಹದಲ್ಲಿ ?
ದಾಹ ನೀಗಿಸುವ ಕೃಷ್ಣೆ ಮಾಯವಾದಳೆಲ್ಲಿ ??
ಓ ! ತಾಯಿ, ನಿನ್ನ ಪ್ರತೀಬಿಂದು.
ಅಮೃತಕ್ಕೆ ಸಮಾನ ಇಂದು.
ನಿನ್ನ ಬರಿದಾದ ಒಡಲನ್ನು ತುಂಬಿಸು ಎಂದೆಂದು
ತಂಪು ನೀಡುವ ನಿನ್ನ ಮಡಿಲಲ್ಲಿ ನಾ ಮತ್ತೇ ಬಂದು.
ನಾ ಮತ್ತೇ ಬಂದು.
ರಚನೆ: ಸೌ. ಸುಜಾತಾ ರಾಜಕುಮಾರ ಚೌಗಲೆ