ಅಭಿಲಾಷೆ ಕಾದಂಬರಿ ಸಂಚಿಕೆ -61
ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ 🙏🙏
ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 60ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ.
- ಹಿಂದಿನ ಸಂಚಿಕೆಯಲ್ಲಿ
- ಅಭಿಜಿತ್ ಪುನಃ ಗೆ ಪುನಃ ವಾಪಸ್ ಬರಲು ಆರು ತಿಂಗಳುಗಳಾಗುತ್ತದೆ. ಅಲ್ಲಿಯವರೆಗೂ ಕಾಯುತ್ತೀಯಾ ಎಂದು ಆಶಾಳನ್ನು ಪ್ರಶ್ನಿಸಿದಾಗ, ಆಶಾಳ ಮೌನವೇ ಉತ್ತರವಾಗಿರುತ್ತದೆ.
ಕಥೆಯನ್ನು ಮುಂದುವರೆಸುತ್ತಾ
ತನ್ನಮ್ಮ ಕೇಳಿದ ಪ್ರಶ್ನೆಗೆ ಆಶ ಮೌನವಾಗಿರುವುದನ್ನು ಕಂಡು,
ಆಶಾ ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮಾ ಎಂದು ಅವರಮ್ಮ ಒತ್ತಾಯ ಮಾಡಿದಾಗ
ಅಮ್ಮಾ ನಾನೇನು ಹೇಳಲಿ? ಅವರು ಸರಿಯಾಗಿ ಆರು ತಿಂಗಳಿಗೆ ಬರುತ್ತಾರೆಂದರೆ ಕಾಯಬಹುದಮ್ಮಾ,,, ಆದರೆ ಇನ್ನೂ ಹೆಚ್ಚಿನ ದಿನ ಬರದೇ ಇದ್ದರೇನು ಮಾಡುವುದೆಂದು ಆಶಾ ಅವಳಮ್ಮನನ್ನೇ ಪ್ರಶ್ನಿಸುತ್ತಾಳೆ.
ಇದಕ್ಕೆಲ್ಲಾ ಹುಡುಗನ ಅಪ್ಪನೇ ಉತ್ತರಿಸಬೇಕೆಂದು ಹೇಳುತ್ತಿರುವ ವೇಳೆಗೆ,
ಕೈ ತೊಳೆಯಲು ಹೋಗಿದ್ದ ಕೋದಂಡರಾಂ ರವರು ಕೈಯ್ಯನ್ನು ಹೆಗಲಿನ ಮೇಲಿದ್ದ ಟವಲಿನಿಂದ ಒರೆಸಿಕೊಳ್ಳುತ್ತಾ,,,ಯಾರು ಯಾವ ಪ್ರಶ್ನೆಗೆ ಉತ್ತರಿಸಬೇಕೆಂದು ಕೇಳಲು
ಅದೇ ರೀ ಮದುಮಗ ಈಗ ಕೆಲಸಕ್ಕೆ ಹೋದರೆ ಪುನಃ ಯಾವಾಗ ಬರುತ್ತಾರೆಂದು ಅವರೇ ಉತ್ತರಿಸಬೇಕೆಂದು ಹೇಳುತ್ತಿದ್ದೆ ಎಂಬ ಅವರ ಪತ್ನಿಯ ಮಾತಿಗೆ,
ಹೌದಮ್ಮಾ ನಿನ್ನ ಅದೃಷ್ಟಕ್ಕೆ ಬೇಗಲೂ ಬರಬಹುದು, ಅಥವಾ ದುರಾದೃಷ್ಟಕ್ಕೆ ಆರುತಿಂಗಳೋ ವರ್ಷವೋ ಆದರೂ ಆಗಬಹುದು. ಇದಕ್ಕೆಲ್ಲಾ ಸರಿಯಾದ ಉತ್ತರ ಈಗಲೇ ಸಿಗುವುದಿಲ್ಲ. ಅದಕ್ಕೂ ತಿಂಗಳು ಕಾಯಬೇಕಾಗಬಹುದೆಂದು ಕೋದಂಡರಾಂ ಹೇಳುತ್ತಾರೆ.
ಏನ್ರೀ,, ಅಲ್ಲಿಯವರೆಗೂ ಮಗಳು ಕಾಯಬೇಕಾ ಎಂದು ಅವರ ಪತ್ನಿ ಪ್ರಶ್ನಿಸಿದಾಗ
ಇನ್ನೇನು ಮಾಡುತ್ತೀಯಾ? ಬೇರೆ ಹುಡುಗನನ್ನು ನೋಡಿ ಮದುವೆ ಮಾಡುವುದಕ್ಕೆ ಆಗುತ್ತದಾ? ಮಗಳು ಮನೆಯಲ್ಲಿ ಆರಾಮವಾಗಿರಲಿ ಬಿಡು ಎಂದು ಕೋದಂಡರಾಂ ಹೇಳಿದಾಗ
ನಿಮ್ಮ ಮಾತು ಕೇಳಿದರೆ ಕಾಯುವುದರಲ್ಲಿ ಅರ್ಥವಿಲ್ಲ ಎನಿಸುತ್ತದೆಂಬ ಪತ್ನಿಯ ಮಾತಿಗೆ
ಹಾಗಾದರೆ ಏನು ಮಾಡಬೇಕು ಎನ್ನುತ್ತೀಯಾ? ಎಂದು ಕೋದಂಡರಾಂ ಪ್ರಶ್ನಿಸಲು
ಬೇರೆ,,,,,, ಎನ್ನುವಷ್ಟರಲ್ಲಿ
ನೋ ನೋ ಆಗಲ್ಲಾ,, ಅವರಿಗೆ ಮಾತು ಕೊಟ್ಟಿದ್ದೇವೆ. ಅವರು ಬರುವ ತನಕ ಕಾಯಲೇಬೇಕು. ಬೇರೆ ದಾರಿಯೇ ಇಲ್ಲವೆಂದು ಕೋದಂಡರಾಂ ಹೇಳಲು,
ಹಾಗಲ್ಲಾ ರೀ,,,,, ನನ್ನ ಮಾತು ಕೇಳಿ,,, ಎಂದು ಆಶಾಳಅಮ್ಮನ ಮಾತಿಗೆ,
ಮಗಳು ಏನು ಹೇಳುತ್ತಾಳೆ ಮೊದಲು ಕೇಳು ಎನ್ನುತ್ತಾ, ಆಶಾಳ ಕಡೆ ತಿರುಗಿ,, ಮಗಳೇ ನಿನ್ನ ಅಭಿಪ್ರಾಯ ಏನಮ್ಮಾ,,, ಎಂದು ಮಗಳನ್ನು ಕೋದಂಡರಾಂ ಪ್ರಶ್ನಿಸಲು,
ಅಪ್ಪಾ ನನ್ನ ಮದುವೆ ಯಾವಾಗ ಆಗಬೇಕೆಂದಿದೆಯೋ ಆ ಸಮಯಕ್ಕೆ ಆಗಲಿ, ಈಗ ನೀನು ಬೇರೆ ಗಂಡು ಹುಡುಕಿ ಮದುವೆ ನಿಶ್ಚಯ ಮಾಡಿದರೆ, ಅಕಸ್ಮಾತ್ ಅವರೇ ಬೇಗ ಬಂದರೆ ಏನು ಉತ್ತರ ಹೇಳುತ್ತೀಯಾ? ಎಂದು ಆಶಾ ಪ್ರಶ್ನಿಸಲು
ಹೌದಮ್ಮಾ ನಿನ್ನ ಮಾತು ನಿಜ ಕಣಮ್ಮಾ, ಆಗ ತಪ್ಪಿತಸ್ಥರು ನಾವೇ ಆಗುತ್ತೇವೆ. ನಮ್ಮ ಮಗ ಬರುವುದು ಎಷ್ಟು ದಿನಗಳಾಗುತ್ತದೋ ಗೊತ್ತಿಲ್ಲ, ನೀವು ಬೇರೆ ಸಂಬಂಧ ನೋಡಿಕೊಳ್ಳಿ ಎಂದು ಗಂಡಿನ ಕಡೆಯವರು ಅವರಾಗಿಯೇ ಹೇಳಿದರೆ ನಾವು ಮುಂದುವರೆಯಬಹುದು. ಇಬ್ಬರೂ ಯಾವುದೇ ರೀತಿಯ ಕಮಿಟ್ ಮೆಂಟ್ ಆಗಿಲ್ಲ. ನಿಶ್ಚಿತಾರ್ಥವೂ ಆಗಿಲ್ಲ, ಅವರವರ ಇಷ್ಟಾನುಸಾರವಾಗಿ ಮಾಡಿಕೊಳ್ಳಬಹುದೆಂದಾಗ
ನೋಡೋಣ ಹುಡುಗನ ತಂದೆ ಯನ್ನು ನೀವೇ ಕೇಳಿರೆಂದು ಅವರ ಪತ್ನಿ ನುಡಿಯಲು
ಛೇ ,,ಛೇ,, ಎಲ್ಲಾದರೂ ಉಂಟಾ? ಅವರೇ ವಿಷಯ ಪ್ರಸ್ತಾಪ ಮಾಡಿ ಹೇಳಿದರೆ ಬಾಧಕವಿಲ್ಲವೆನ್ನುತ್ತಾ ಕೋದಂಡರಾಂ ರವರು ತಮ್ಮ ರೂಮಿಗೆ ಹೋಗುತ್ತಿರುವಾಗ
ರೀ ಪೂರ್ತಿ ಮಾತನಾಡಿ ಹೋಗಬಾರದಾ ಯಾವಾಗಲೂ ಹೀಗೆ ಮಾಡುತ್ತೀರೀ, ಯಾವುದಾದರೂ ಸೀರಿಯಸ್ ವಿಷಯ ಮಾತನಾಡುತ್ತಿರಬೇಕಾದರೆ ಅರ್ಧಕ್ಕೆ ಬಿಟ್ಟು ಹೋಗುತ್ತೀರಿ ಎಂದು ಅವರ ಪತ್ನಿ ಆಕ್ಷೇಪಿಸಲು
ಇನ್ನೇನಿದೆ ಮಾತಾಡುವುದಕ್ಕೆ? ಗಂಡಿನ ತಂದೆಯಿಂದ ಉತ್ತರ ಬರುವವರೆಗೂ ಕಾಯಲೇ ಬೇಕು ಎಂದು ಕೋದಂಡರಾಂ ನುಡಿದಾಗ
ಇನ್ನೆರಡು ದಿನಗಳಲ್ಲಿ ಹತ್ತಿರದ ನೆಂಟರುಗಳು ಬಂದು ಇಳಿಯುತ್ತಾರೆ.
ನನ್ನ ತಂಗಿ ನಿಮ್ಮ ತಂಗಿ ಇಬ್ಬರೂ ನಿನ್ನೆವರೆಗೂ ಇದ್ದು ಎರಡು ದಿನಗಳಲ್ಲಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ. ಅವರು ಬಂದಿಳಿದರೆ ಏನು ಮಾಡೋದೆಂದು ಅವರ ಪತ್ನಿ ಪ್ರಶ್ನಿಸಿದಾಗ,
ಅದಕ್ಕೇಕೆ ಯೋಚಿಸಬೇಕು? ಈಗಿನ ಕಾಲದಲ್ಲಿ, ಚಿಟಿಕೆ ಹೊಡೆಯುವುದರೊಳಗೆ ಪ್ರಪಂಚಕ್ಕೇ ಸಾರಬಹುದು, ನಾಳೆಯೇ ಪೇಪರ್ ನಲ್ಲಿ ಅಭಿಜಿತ್ ಆಶಾ ವಿವಾಹವನ್ನು ಮುಂದೂಡಲಾಗಿದೆಯೆಂದು ಅನೌನ್ಸ್ ಮೆಂಟ್ ಕೊಟ್ಟು, ವಾಟ್ಸಪ್ ನಲ್ಲಿಯೂ ಎಲ್ಲರಿಗೂ ಇನ್ಫರ್ಮೇಷನ್ ಕಳುಹಿಸಿದರೆ ಆಯ್ತು ಎಂದು ಕೋದಂಡರಾಂ ಮಾತಿಗೆ
ಏನು ಮಾಡುತ್ತೀರೋ ಮಾಡಿ ಎನ್ನುತ್ತಾರೆ.
ಆಶಾ ಕೂಡಾ ನಿರಾಶಳಾಗಿ ಕೈ ತೊಳೆಯಲು ಹೋದಾಗ
ಎಲ್ಲಿಯವರೆಗೆ ಬರುತ್ತದೋ ಬರಲೆಂದುಕೊಳ್ಳುತ್ತಾ ಆಶಾಳ ಅಮ್ಮ ಊಟ ಮಾಡಲು ಹೋಗುತ್ತಾರೆ.
ಮಾರನೇ ದಿನನೇ ಕೋದಂಡರಾಂರವರು ಪೇಪರ್ ನಲ್ಲಿ ಕಾರಣಾಂತರದಿಂದ ಅಭಿಜಿತ್ ಆಶಾ ವಿವಾಹವನ್ನು ಮುಂದೂಡಲಾಗಿದೆಯೆಂದು ಪ್ರಕಟಿಸಿರುತ್ತಾರೆ.
ಹಾಗೆಯೇ ನೆಂಟರು ಸ್ನೇಹಿತರಿಗೆ ಫೋನ್ ಮೂಲಕ ತಿಳಿಸಿದ್ದು, ಆಶ ತನ್ನ ಸ್ನೇಹಿತರಿಗೆ ಭಾರವಾದ ಹೃದಯದೊಂದಿಗೆ ವಾಟ್ಸಪ್ ಮೆಸೇಜ್ ಕಳುಹಿಸಿರುತ್ತಾಳೆ.
ಪೇಪರ್ ನೋಡಿದವರು ಕೋದಂಡರಾಂ ರವರಿಗೆ ಫೋನ್ ಮಾಡಿ ಮದುವೆ ಮುಂದೂಡಲು ಕಾರಣವೇನೆಂದು ಕೇಳುತ್ತಿದ್ದು,
ಕೋದಂಡರಾಂ ರವರು ಭಾವಿ ಅಳಿಯಂದ್ರು ತುರ್ತಾಗಿ ಆರ್ಮಿ ಹೆಡ್ ಕ್ವಾರ್ಟರ್ಸ್ ಗೆ ಹೋಗಲೇಬೇಕಾಗಿದ್ದರಿಂದ ಮದುವೆ ಮುಂದೂಡಿದ್ದೇವೆಂದು ಹೇಳುತ್ತಿರುವುದು ಸಾಮಾನ್ಯವಾಗಿರುತ್ತದೆ.
ಕೆಲವರು ಕಾರಣ ಕೇಳಿ ಸಾರ್ ನಿಮ್ಮ ಭಾವಿ ಅಳಿಯ ಬೇಗ ಬಂದು ನಿಮ್ಮ ಮಗಳ ಮದುವೆ ಬೇಗ ಆಗಲೆಂದು ಹೇಳುತ್ತಿದ್ದು,
ಇನ್ನೂ ಕೆಲವರು ಬೇರೆ ರೀತಿಯಲ್ಲಿ ಕೊಂಕು ಮಾತು ಆಡುತ್ತಿದ್ದು, ಇದನ್ನೆಲ್ಲಾ ಕೇಳಿ ಕೋದಂಡರಾಂ ರವರು ಛೇ ಏನು ಜನಗಳೋ? ಅವರ ಮಕ್ಕಳಿಗೆ ಹೀಗೆ ಆಗಿದ್ದರೆ ಏನು ಮಾಡುತ್ತಿದ್ದರೆಂದು ತುಂಬಾ ಬೇಸರಪಟ್ಟುಕೊಳ್ಳುತ್ತಾರೆ.
ವಿಕ್ರಮ್ ಗೆ ವಿಷಯ ತಿಳಿದು, ರಾತ್ರಿ ಹನ್ನೊಂದು ಗಂಟೆಗೆ ಬೇರೆ ಮೊಬೈಲಿನಿಂದ ಆಶಾಗೆ ಫೋನ್ ಮಾಡಿ, ಆಶಾ ಈಗಲೂ ಕಾಲ ಮಿಂಚಿಲ್ಲ ನೀನು ಹ್ಞೂಂ ಎಂದರೆ ಸಾಕು, ಈಗ ನಿಗದಿಯಾಗಿರುವ ಛತ್ರದಲ್ಲಿ ಅದೇ ವೇಳೆಯಲ್ಲಿ ಮದುವೆಯಾಗೋಣ, ಮದುವೆ ಸ್ವರ್ಗಲೋಕದಲ್ಲಿ ನಿಗದಿಯಾಗಿರುತ್ತದಂತೆ, ನನ್ನನ್ನು ಬಿಟ್ಟು ನೀನು ಬೇರೆ ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ. ನಾನು ನೀನು ಒಳ್ಳೆಯ ಜೋಡಿ, ಮೇಡ್ ಫಾರ್ ಈಚ್ ಅದರ್ ಎಂದ ತಕ್ಷಣ
ನಿನ್ನಂತ ದ್ರೋಹಿಯ ಕುಟುಂಬದ ಸೊಸೆಯಾಗುವುದು ನನಗೆ ಇಷ್ಟವಿಲ್ಲ. ನೀನು ಎಷ್ಟೇ ಹೇಳಿದರೂ ನನ್ನ ನಿನ್ನ ಪ್ರೀತಿ ಸ್ನೇಹ ಕಡಿದುಹೋಯ್ತು ಇನ್ನೊಂದು ಸಲ ಮದುವೆ ವಿಚಾರ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲವೆಂದು ಹೇಳಿದಾಗ
ಇಂದಲ್ಲ ನಾಳೆ ನನ್ನ ಬಳಿ ಬಂದೇ ಬರುತ್ತೀಯಾ ಎಂದು ಹೇಳಿದಾಗ
ನಾನು ಸತ್ತರೂ ನಿನ್ನ ಬಳಿ ಬರುವುದಿಲ್ಲವೆಂದು ಆಶಾ ಹೇಳುತ್ತಾಳೆ.
ನೀನು ಹೇಗೆ ಬರುವುದಿಲ್ಲವೋ ನಾನೂ ನೋಡುತ್ತೇನೆಂದು ವಿಕ್ರಮ್ ನುಡಿಯಲು
ನೀನೇನೂ ಮಾಡುವುದಕ್ಕೆ ಆಗುವುದಿಲ್ಲವೆಂದು ಹೇಳಿ ಆಶಾ ಫೋನ್ ಆಫ್ ಮಾಡುತ್ತಾಳೆ.
ಮುಂದುವರೆಯುತ್ತದೆ
- ಈ ಸಂಚಿಕೆಯಿಂದ ತಿಳಿದುಬರುವ ಮುಖ್ಯವಾದ ಅಂಶ ಏನೆಂದರೆ
ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ, ಮನುಷ್ಯ ಏನಾದರೂ ಕೆಳಕ್ಕೆ ಬಿದ್ದರೆ ಅವನನ್ನು ಇನ್ನೂ ತುಳಿಯಲು ಪ್ರಯತ್ನಿಸಬಹುದು. ಮನುಷ್ಯ ಸರಿಯಾಗಿದ್ದರೂ ಕೂಡಾ ಅವನ ದ್ವೇಷಿಗಳೇನಾದರೂ ಇದ್ದರೆ, ಮೊಸರಿನಲ್ಲಿ ಕಲ್ಲು ಹುಡುಕುವಂತೆ, ಅವನಲ್ಲಿ ತಪ್ಪನ್ನು ಹುಡುಕುತ್ತಾರೆ, ಅಕಸ್ಮಾತ್ ಏನಾದರೂ ತಪ್ಪು ಸಿಕ್ಕಿದರಂತೂ ಅಪಪ್ರಚಾರ ಮಾಡದೆ ಬಿಡುವುದೇ ಇಲ್ಲ.
ಇನ್ನೂ ಕೆಲವರು ಬೆಂದ ಮನೆಯಲ್ಲಿ ಸಿಕ್ಕಿದ್ದೇ ಲಾಭ ಸಾಕೆಂದುಕೊಳ್ಳುವವರೂ ಇರಬಹುದು. ಆದರೆ ಕಷ್ಟ ದುಃಖದಲ್ಲಿ ಭಾಗಿಯಾಗಿ ವ್ಯಥೆಪಟ್ಟು ಸಾಂತ್ವನ ಹೇಳುವವರೇ ನಿಜವಾದ ಸ್ನೇಹಿತರಾಗುತ್ತಾರೆ.
ಅಭಿಲಾಷೆ ಕಾದಂಬರಿ ಸಂಚಿಕೆ -62
ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ 🙏🙏
ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 62ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ.
- ಹಿಂದಿನ ಸಂಚಿಕೆಯಲ್ಲಿ
ಆಶಾ ಅಭಿಜಿತ್ ಮದುವೆ ಮುಂದೂಡಿಕೆಯಾಯ್ತೆಂದು ವಿಕ್ರಮ್ ಪುನಃ ಆಶಾಳಲ್ಲಿ ತನ್ನನ್ನೇ ಮದುವೆಯಾಗಲು ಕೇಳಿದಾಗ, ಅವನ ಆಹ್ವಾನವನ್ನು ಆಶಾ ತಿರಸ್ಕರಿಸುತ್ತಾಳೆ. ನೀನು ಹೇಗೆ ಬೇರೆಯವರನ್ನು ಮದುವೆಯಾಗುತ್ತೀಯೋ ನಾನು ನೋಡುತ್ತೇನೆಂದು ವಿಕ್ರಮ್ ಹೇಳಿರುತ್ತಾನೆ
- ಕಥೆಯನ್ನು ಮುಂದುವರೆಸುತ್ತಾ
ವಿಕ್ರಮ್ ನು ಮದುವೆಯಾಗೆಂದು ಪುನಃ ಪೀಡಿಸಿದಾಗ, ಇನ್ನೊಂದು ಸಲ ಮದುವೆಯಾಗೆಂದು ಹೇಳಿದರೆ ನಾನು ಸುಮ್ಮನಿರುವುದಿಲ್ಲವೆಂದು ಆಶಾ ಎಚ್ಚರಿಕೆ ಕೊಟ್ಟಾಗಲೂ
ನೀನು ಹೇಗೆ ಬೇರೆಯವರನ್ನು ಮದುವೆಯಾಗುತ್ತೀಯಾ ನೋಡುತ್ತೇನೆಂದು ವಿಕ್ರಮ್ ಹೇಳಿರುವುದರಿಂದ ಆಶಾಳ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಆತಂಕವಾದರೂ, ಹ್ಞೇಂ ಇವನೇನು ಮಾಡಬಲ್ಲಾ ಎಂದುಕೊಂಡಿರುತ್ತಾಳೆ.
ಮಾರನೇ ದಿನ ವಿಕ್ರಮ್ ಅಣ್ಣನಿಗೆ ಕೋರ್ಟ್ ಜಾಮೀನು ನೀಡಿದ್ದರಿಂದ ಹೊರಗೆ ಬರುತ್ತಾನೆ.
ಅವನನ್ನು ಕರೆದುಕೊಂಡು ಬರಲು ವಿಕ್ರಮ್ ಹೋಗಿದ್ದು, ಕಾರಿನಲ್ಲಿ ಇಬ್ಬರೂ ಒಟ್ಟಿಗೆ ಬರುತ್ತಿರುವಾಗ
ವಿಕ್ರಮ್ ಮಾತನಾಡಿ, ಅಣ್ಣಾ ನೀನು ಈ ರೀತಿ ಮಾಡಬಾರದಿತ್ತಣ್ಣಾ, ಈಗ ನೋಡು, ನಾನು ಪ್ರೀತಿಸಿದ್ದ ಆಶಾ ನನ್ನಿಂದ ದೂರವಾದಳು. ಮದುವೆಯನ್ನು ಖಡಾಖಂಡಿತವಾಗಿ ಮಾಡಿಕೊಳ್ಳುವುದಿಲ್ಲವೆಂದು ಹೇಳಿಬಿಟ್ಟಿದ್ದಾಳೆ. ಅವಳಿಲ್ಲದೆ ನಾನು ಹೇಗೆ ಬದುಕಲಣ್ಣಾ ಎಂದು ದೈನ್ಯತೆಯಿಂದ ಕೇಳಿದಾಗ,
ಸಾರೀ ಕಣೋ ನಾನು ನೀನು ಪ್ರೀತಿಸುತ್ತಿದ್ದವಳನ್ನು ಕಿಡ್ನಾಪ್ ಮಾಡಿ, ಅವಳಪ್ಪನಿಂದ ಕೋಟಿ ಹಣ ಪಡೆದು ಅಪ್ಪನ ಸಾಲನನ್ನೂ ತೀರಿಸಿದರೆ, ಆ ಹುಡುಗಿಯನ್ನು ಮದುವೆಕೊಡುತ್ತಾರೆಂದುಕೊಂಡು ಆ ರೀತಿ ಮಾಡಿದೆ. ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲು ಹೋದೆ. ಆದರೆ ಅದು ನನಗೇ ತಿರುಗುಬಾಣವಾಗುತ್ತದೆಂದು ಗೊತ್ತಾಗಲಿಲ್ಲವೆಂದು ಹೇಳುತ್ತಾನೆ.
ಇದರಿಂದ ಇಬ್ಬರಿಗೂ ತೊಂದರೆಯಾಯಿತಷ್ಚೇ ಎಂದು ವಿಕ್ರಮ್ ಹೇಳಿದಾಗ,
ಈಗೇನು? ನಿನ್ನನ್ನು ಆ ಹುಡುಗಿ ಮದುವೆ ಮಾಡಿಕೊಳ್ಳಬೇಕು ಅಲ್ಲವೇ ಎಂದು ಕೇಳಲು
ಹೌದಣ್ಣಾ, ಆದರೆ ಪುನಃ ಕಿಡ್ನಾಪ್ ಮಾಡಿ ನನ್ನ ಜೊತೆಗೆ ಮದುವೆ ಮಾಡಿಸುತ್ತೇನೆಂದು ಮಾತ್ರ ಹೇಳಬೇಡ. ಅಷ್ಟೇ. ಈಗ ಅದು ಸಾಧ್ಯನಾಗುವುದೇ ಇಲ್ಲ ಅವಳು ನನ್ನಿಂದ ದೂರ ಹೋಗಿದ್ದಾಳೆಂದು ವಿಕ್ರಮ್ ನುಡಿಯುತ್ತಾನೆ,
ನೋಡೋಣ ಬೇರೆ ರೀತಿಯಲ್ಲಿ ಪ್ಲಾನ್ ಮಾಡೋಣವೆಂದು ವಿಕ್ರಮ್ ಅಣ್ಣ ನುಡಿಯುವ. ವೇಳೆಗೆ ಮನೆಯ ಮುಂದೆ ಕಾರು ಬಂದು ನಿಂತಾಗ,
ಇಬ್ಬರೂ ಕಾರಿನಿಂದ ಇಳಿದು ಮನೆಯೊಳಗೆ ಹೋಗುತ್ತಾರೆ.
ಈ ಕಡೆ, ಒಂದು ವಾರದಲ್ಲಿ ತನ್ನ ಮದುವೆಯಾಗುವುದು ನಿಂತು ಹೋಯಿತಲ್ಲಾ, ಮದುವೆಯಾಗಿದ್ದರೆ ವಿಕ್ರಮ್ ನ ಕಾಟ ತಪ್ಪುತ್ತಿತ್ತು, ಈಗಲೂ ಅವನ ಕಾಟ ತಪ್ಪಿಸಿಕೊಳ್ಳಲು, ಅಪ್ಪನ ಶಿಷ್ಯರಾದ ಇನ್ಸ್‌ಪೆಕ್ಟರ್ ಗೆ ಹೇಳಿ ಅವನನ್ನು ಅವಾಯ್ಡ್ ಮಾಡಬಹುದು, ಆದರೆ ಅವನದ್ದೂ ಭವಿಷ್ಯದ ಪ್ರಶ್ನೆ. ಎಲ್ಲಾದರೂ ಹೋಗಿ ಬದುಕಿಕೊಳ್ಳಲಿ ಎಂದು ಬಿಟ್ಟರೂ ನನಗೇ ಸವಾಲು ಹಾಕುತ್ತಾನೆ ಎಂದುಕೊಂಡು ಕುಳಿತಿರುವಾಗ,
ಮೊಬೈಲ್ ರಿಂಗ್ ಆಗಿದ್ದು, ಯಾರಿರಬಹುದೆಂದು ನೋಡಿ, ತನ್ನ ಸ್ನೇಹಿತೆಯ ಹೆಸರಿದ್ದಕ್ಕೆ ರಿಸೀವ್ ಮಾಡಿ, ಹಲೋ ಏನಮ್ಮಾ ಸಮಾಚಾರಾ? ಇದ್ದಕ್ಕಿದ್ದಂತೆ ಫೋನ್ ಮಾಡಿದ್ದೀಯಾ ಎಂಬ ಆಶಾಳ ಪ್ರಶ್ನೆಗೆ,
ನೀನು ಕಳುಹಿಸಿದ ಮದುವೆ ಮುಂದೂಡಿರುವ ಮೆಸೇಜ್ ನೋಡಿ ಬಹಳ ಬೇಸರವಾಯಿತು ಕಣೇ ಎಂದು ವಿಷಾದ ವ್ಯಕ್ತಪಡಿಸುತ್ತಾಳೆ ಅವಳ ಸ್ನೇಹಿತೆ.
ಏನು ಮಾಡೋದು? ಅದು ಅರ್ಜಂಟಾಗಿ ಬರಬೇಕೆಂದು ಹೆಡ್ ಕ್ವಾರ್ಟರ್ಸ್ ರವರು ಫೋನ್ ಮಾಡಿ ಹೇಳಿದರಂತೆ ಹೋಗಿದ್ದಾರೆ. ಬಂದ ನಂತರ ಮದುವೆ ಕಾರ್ಯಕ್ರಮ ನಡೆಯುತ್ತದೆಂದು ಹೇಳಲು,
ಬೇಗ ಮದು ಮಗ ಬಂದು ನಿಮ್ಮ ಮದುವೆ ನಡೆಯಬೇಕೂ ಕಣೇ ಎಂಬ ಅವಳ ಸ್ನೇಹಿತೆಯ ಮಾತಿಗೆ,
ಯಾವಾಗ ನಡೆಯಬೇಕೆಂದಿದೆಯೋ ನಡೆಯುತ್ತದೆಂದು ಆಶಾ ನಿರಾಶಾಭಾವದಿಂದ ಹೇಳುತ್ತಾಳೆ.
ಆದಷ್ಟೂ ಬೇಗ ಮದುವೆ ಮಾಡಿಕೊಳ್ಳೇ,,, ಏಕೆಂದರೆ
ಯಾವ್ಯಾವುದೋ ಯೂ ಟ್ಯೂಬಿನಲ್ಲಿ ನಿನ್ನ ಬಗ್ಗೆ ಬಹಳ ಕೆಟ್ಟದಾಗಿ ಪ್ರಸಾರ ಮಾಡುತ್ತಿದ್ದಾರಂತೆ ಎಂದು ಹೇಳಿದ ತಕ್ಷಣ
ಆಶಾಳಿಗೆ ದಿಗ್ಭ್ರಮೆಯಾಗಿ, ಏ,,,,ಏನು ಹೇಳುತ್ತಿದ್ದೀಯಾ? ಆ ಯೂ ಟ್ಯೂಬ್ ನೀನೂ ನೋಡಿದ್ದೀಯಾ ಅದರಲ್ಲಿ ನನ್ನ ಬಗ್ಗೆ ಏನು ಕೆಟ್ಟದಾಗಿ ಪ್ರಸಾರ ಮಾಡುತ್ತಿದ್ದಾರೆಂದು ಆಶಾ ಪ್ರಶ್ನಿಸಿದಾಗ
ಇಲ್ಲಾ ಕಣೇ ನನ್ನ ಸ್ನೇಹಿತೆ ಹೇಳಿದಳು, ಮೊನ್ನೆ ನಿನ್ನ ಮದುವೆ ಮುಂದೂಡಿರುವುದನ್ನು ನನ್ನ ಸ್ನೇಹಿತೆಗೆ ಹೇಳಿದ್ದೆ. ಅವಳು ಕೂಡಾ ಬೇಸರ ಪಟ್ಟುಕೊಂಡಿದ್ದಳು. ಇವತ್ತು ಫೋನ್ ಮಾಡಿ ಈ ವಿಚಾರ ಹೇಳಿದಳೆಂದಾಗ,
ಇದೆಲ್ಲಾ ವಿಕ್ರಮ್ ದೆ ಕೆಲಸವೆಂದು ಗೊತ್ತು ಕಣೇ,,,ಅವನೇ ಇದನ್ನೆಲ್ಲಾ ಮಾಡಿಸುತ್ತಿದ್ದಾನೆಂದು ಆಶಾ ಹೇಳುತ್ತಾಳೆ.
ಯಾಕೆ ಅವನಿಗೂ ನಿನಗೂ ಏನು ಮನಸ್ಥಾಪ ಬಂತೆಂಬ ಅವಳ ಸ್ನೇಹಿತಳ ಪ್ರಶ್ನೆಗೆ,
ಆಶಾ ನಡೆದದ್ದೆಲ್ಲವನ್ನೂ ಹೇಳುತ್ತಾಳೆ.
ಅವನ ಜೊತೆಗೆ ಮದುವೆ ನಿರಾಕರಿಸಿ ಒಳ್ಳೆಯ ಕೆಲಸ ಮಾಡಿದೆ ಬಿಡು ಎನ್ನುತ್ತಾಳೆ ಅವಳ ಸ್ನೇಹಿತೆ.
ನನ್ನ ವಿಷಯ ಯಾವ ಯೂ ಟ್ಯೂಬ್ ಛಾನಲ್ ನಲ್ಲಿ ಬರುತ್ತಿದೆ ಹೇಳೆ ನನಗೇಕೋ ತುಂಬಾ ಭಯವಾಗುತ್ತಿದೆ ಎನ್ನುತ್ತಾಳೆ ಆಶಾ.
ನಾನು ತಿಳಿದುಕೊಂಡು ಫೋನ್ ಮಾಡುತ್ತೇನೆಂದಾಗ,
ಆಯ್ತು ಕಣೇ ಎಂದು ಹೇಳಿ ಫೋನ್ ಆಫ್ ಮಾಡಿ, ಅಯ್ಯೋ ಯಾವ ಛಾನಲ್ ನಲ್ಲಿ ಬರುತ್ತಿದೆಯೋ ಏನೋ ಎಂದು ಆಶಾಳಿಗೆ ಮನಸ್ಸಿನಲ್ಲಿ ಹತಾಷ ಭಾವನೆ ಮೂಡುತ್ತದೆ.
ರಾತ್ರಿ ಹನ್ನೊಂದು ಗಂಟೆಗೆ ಪುನಃ ಅವಳ ಸ್ನೇಹಿತೆ ಫೋನ್ ಮಾಡಿದಾಗ,
ಫೋನ್ ರಿಸೀವ್ ಮಾಡಿದ ಆಶಾ ಯೂ ಟ್ಯೂಬ್ ಛಾನಲ್ ಗೊತ್ತಾಯ್ತಾ ಎಂದು ಕಳವಳದಿಂದ ಕೇಳುತ್ತಾಳೆ.
ಇಲ್ಲಾ ಕಣೇ ಯಾರೋ ಆ ಟ್ಯೂಬ್ ಛಾನಲ್ ನ ಡಿಲೀಟ್ ಮಾಡಿದ್ದಾರಂತೆ, ಎಲ್ಲೂ ಆ ಛಾನಲ್ ಸಿಗುತ್ತಿಲ್ಲವಂತೆ ಎಂದು ಹೇಳಿದಾಗ,
ಥ್ಯಾಂಕ್ ಗಾಡ್ ಎಂದು ಆಶ ನಿಟ್ಟುಸಿರು ಬಿಡುತ್ತಾಳೆ.
ನಿನ್ನ ಮೇಲೆ ಕೆಟ್ಟದಾಗಿ ಬಂದಿದೆ ಎಂದು ಕೇಳಿ ನನಗೂ ಆ ಛಾನಲ್ ಮಾಡಿದ್ದವನ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿತ್ತು ಎನ್ನುತ್ತಾ, ನಿನಗೆ ಸಮಾಧಾನ ಮಾಡಲು ಹೇಳಿದೆ ಎಂದಾಗ
ಥ್ಯಾಂಕ್ಸ್ ಕಣೇ ಎಂದು ಹೇಳಿ ಫೋನ್ ಆಫ್ ಮಾಡಿ ಸಮಾಧಾನದಿಂದ ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ, ಪುನಃ ಮೊಬೈಲ್ ರಿಂಗ್ ಆದಾಗ, ರಿಸೀವ್ ಮಾಡಿ ಹಲೋ ಎಂದು ಆಶಾ ಹೇಳಲು
ಬೇರೆ ಸ್ನೇಹಿತರು ಮಾತನಾಡಿ, ಯೂಟ್ಯೂಬ್ ಛಾನಲ್ ವಿಷಯನ್ನು ಹೇಳಿದ ತಕ್ಷಣ ಸಮಾಧಾನಗೊಂಡಿದ್ದ ಅವಳ ಮನಸ್ಸು ಪುನಃ ಕಳವಳಗೊಂಡು, ಹೃದಯದ ಬಡಿತ ಹೆಚ್ಚುತ್ತದೆ. ಪ್ಲೀಸ್ ಆ ಛಾನಲ್ ಹೆಸರು ಹೇಳಿ ಈಗಲೇ ಪೋಲಿಸ್ ಕಂಪ್ಲೇಂಟ್ ಕೊಡುತ್ತೇನೆಂದು ಆಶ ಹೇಳಿದಾಗ
ಅವರೂ ಕೂಡಾ ಆ ಛಾನಲ್ ಡಿಲೀಟ್ ಆಗಿದೆಯೆಂದು ಹೇಳುವುದನ್ನು ಕೇಳಿ,
ಅಯ್ಯೋ ಈ ವಿಚಾರ ಎಲ್ಲರಿಗೂ ತಲುಪಿದ ಮೇಲೆ ಛಾನಲ್ ಡಿಲೀಟ್ ಮಾಡಿಬಿಟ್ಟಿದ್ದಾರೆ ಖತರ್ನಾಕ್ ಗಳು ಎಂದುಕೊಂಡು, ಅಕಸ್ಮಾತ್ ಛಾನಲ್ ಹೆಸರು ಸಿಕ್ಕಿದರೆ ಬೇಗ ತಿಳಿಸಿರೆಂದು ಫೋನ್ ಆಫ್ ಮಾಡಿ, ಅಯ್ಯೋ ಇನ್ನು ಎಷ್ಟು ಜನ ಛಾನಲ್ ನೋಡಿದ್ದಾರೋ? ಇದೇರೀತಿ ಎಷ್ಟು ಜನ ಫೋನ್ ಮಾಡುತ್ತಾರೋ? ನನ್ನ ಬಗ್ಗೆ ಅದೇನು ಕೆಟ್ಟ ಸಂದೇಶ ಎಲ್ಲರಿಗೂ ಹೋಗಿದೆಯೋ? ನಾಳೆಯಿಂದ ಹೇಗಪ್ಪಾ ಎಲ್ಲರ ಮುಂದೆ ಓಡಾಡಲಿ ಎಂದು ಚಿಂತೆಗೊಳಗಾಗುತ್ತಾಳೆ. ಇದೆಲ್ಲವೂ ಆ ಕಂತ್ರಿ ವಿಕ್ರಮ್ ಕೆಲಸವೇ ಇರಬೇಕೆಂದುಕೊಂಡು, ನನಗೆ ಪರಿಚಯವಿರುವವರಿಗೆ ಸಮಜಾಯಿಷಿ ಹೇಳಬಹುದು, ಅವರಿಗೂ ನನ್ನ ವಿಷಯ ತಿಳಿದಿರುತ್ತದೆ. ಆದರೆ ಬೇರೆಯವರು ಇದನ್ನೇ ನಂಬುತ್ತಾರೆ. ಒಂದು ಸಲ ಕೆಟ್ಟದಾಗಿ ಗಾಸಿಪ್ ಹರಡಿದರೆ ಅದನ್ನು ತಡೆರುವುದಕ್ಕೆ ಆಗುವುದಿಲ್ಲ. ಮೊದಲೇ ಅಪ್ಪ ಅಮ್ಮ ಮದುವೆ ಮುಂದೂಡಿದ ಬಗ್ಗೆ ಬೇಸರಗೊಂಡಿದ್ದಾರೆ. ಈಗ ಈ ಸುದ್ದಿ ಕೇಳಿ ಇನ್ನೆಷ್ಟು ನೋವು ಅನುಭವಿಸುತ್ತಾರೋ ಎಂದು ಚಿಂತೆಗೊಳಗಾಗುತ್ತಾಳೆ.
ಮುಂದುವರೆಯುತ್ತದೆ