ಅಂಗಾಂಗ ದಾನ

ದೇಹವಳಿದರೂ ಉಳಿಯಬೇಕು

ನನ್ನ ಹೆತ್ತವ್ವ ಕೊಟ್ಟ ದೇಹ
ತಂದೆ ತುಂಬಿದ ಜೀವ ಭಾವ
ಇಟ್ಟ ಹೆಸರಿನೊಂದಿಗೆ ನಗುವ ಜೀವ

ಪರಾವಲಂಬಿತ ಜೀವಕೆ ಪಾಠ
ಹುಟ್ಟಿನ ಜೊತೆ ಸಾವನೂ ಇಟ್ಟ
ಹುಟ್ಟು ಸಾವು ಗುಟ್ಟಾಗಿ ಇಟ್ಟ ದೇವ

ಇಳೆ ಗಾಳಿ ಬೆಳೆ ದೇವನಿತ್ತ ದಾನ
ಬದುಕಲು ಬೆಳಕು ನೀರಿನ ದಾನ
ನನ್ನದೆನ್ನುವದು ಏನೇನೂ ಇಲ್ಲವಲ್ಲಾ

ಅಂಧರ ಬಾಳಿಗೆ ಜ್ಯೋತಿಯಾಗುವಾ
ಪವಿತ್ರ ಜ್ಞಾನದ ದೀಪ್ತಿಯಾಗುವಾ
ಈರ್ವರಬದುಕಿಗೆ ನೇತ್ರದಾನಮಾಡುವಾ

ಅನ್ನದಾನ ವಿದ್ಯಾದಾನ ವಸ್ತೃದಾನ
ರಕ್ತದಾನ ನೇತ್ರದಾನ ಎಲ್ಲಕ್ಕಿಂತ
ಅಂಗಾಂಗ ದಾನವೇ ಶ್ರೇಷ್ಠ ಮಹಾದಾನ

ದೇಹವಳಿದರೂ ಉಳಿವ ಬೆಳಕಂತೆ
ಹೊಳೆ ಹೊಳೆಯುವ ನಕ್ಷತ್ರಗಳಂತೆ
ನಾಲ್ಕಾರು ಜನರ ಬಾಳು ಬೆಳಗಿಸೋಣ

ಸುಟ್ಟು ಬೂದಿಯಾಗುವದಕಿಂತ
ಮಣ್ಣಲ್ಲಿ ಮಣ್ಣಾಗುವದಕ್ಕಿಂತ
ದೇಹದಾನ ಮಾಡಿ ಧನ್ಯರಾಗೋಣ ಬನ್ನಿ

ಅನ್ನಪೂರ್ಣ ಸು ಸಕ್ರೋಜಿ ಪುಣೆ