ಅಬಕಾರಿ ಕಥೆಗಳು – 1. ಸಂಗವ್ವ
ಅತ್ತಿಕಾಲ ಹೋಗಿ ಸೊಸಿಕಾಲ ಬಂದ ಬಳಿಕ ಸಂಗವ್ವನ ಬಾಳೇವು ಬ್ಯಾಡಬ್ಯಾಡ. ಇದ್ದೊಬ್ಬ ಮಗಳನ್ನ ಕೊಟ್ಟ ಮ್ಯಾಲೆ ಗೂಗೆಂಥ ಬೀಗರ ಮನಿಕಡೆ ಕಾಲಾಕಾಕ ಮನ್ಸು ಬರ್ತಿದ್ದಿಲ್ಲ. ಹಬ್ಬಕ ಕರಿಯಾಕೋದ್ರ ಮಗುಳು ಅನ್ನಾಕಿ ಗಂಡನ ಕಡೆ ಮಕ ಮಾಡಿ ಹೊಲ್ದಾಗ ಕೆಲ್ಸೈದವ ಅಂತಿದ್ಲು. ಇಂಥ ಐನಾತಿ ಬೀಗುಸ್ತಾನ ಯಾಕನ ಮಾಡಿದ್ವೆನು ಅಂತ ಸಂಗವ್ವ ಸಾಕಷ್ಟಸಲ ಕುಟಿಗೆಂದು ಸಾಯ್ತಿದ್ಲು. ಮಗಳ ಕತಿ ಅಗ್ಸಿ ಬಾಗ್ಲಾದ್ರ, ಇಬ್ರ ಗಣಮಕ್ಳ ಕತಿ ಊರ್ಬಾಗ್ಲಿ ಆಗಿತ್ತು.
ವಯಸ್ಸಾದ ಮ್ಯಾಲೆ ಜೀವಕ ಸಮಾಧಾನ ಇಲ್ದಂಗ ಆಗಿದ್ದ ಸಂಗವ್ವ ಲೋಕಾರೂಢಿಯಂಗ ಖರ್ಚು ಕಮ್ಮ್ಯಾತಾದಂತ ಮಕ್ಕಳ ಮದುವೀನ ಒಮ್ಮಿಗೆ ಮಾಡಿದ್ದು ತಪ್ಪೇನು ಇರ್ಲಿಲ್ಲ. ವಾರ್ನೀರು ಆಗಾತನ ಬಾಯ್ತುಂಬ ಅತ್ತೆ ಅತ್ತೆ ಅಂತ ಕರಿತಿದ್ದ ಸೊಸಿದೋರು ಎಲ್ಡುಸಲ ತೌರ್ಮನಿಗೆ ಹೋದ್ಮೇಲೆ ತುಂಬಾ ಬದ್ಲಾಗಿದ್ರು. ಅತ್ತಿನ ಕಂಡ್ರ ಸ್ವಾಟಿನ ತಿರ್ವುತ್ತಿದ್ರು. ತಾಳಿ ಕೊಳ್ಳಾಗ ಬಿದ್ದು ತಿಂಗಳ ಕಳ್ದರೂ ಅಂಗ್ಳದಾಗ ಕಸ ಬಳಿಯಾದು, ಅಡುಗಿ ಮಾಡಾದು ಬುಟ್ರ ಹೊರಗ ಕಾಲು ಇಡ್ತಿದ್ದಿಲ್ಲ. ತಮ್ಮ ಗಂಡದೋರ್ನ ಊರ್ಬಾಯಿಗೆ ನೀರು ತರಾಕ, ತಿಪ್ಪಿಗೆ ಎಂಡೆಕಸ ಹಾಕಾಕ ಕಳ್ಸುತಿದ್ರು. ಊರಿಗೆ ಮಿಕ್ಕಿದ ಸೊಸಿದೋರು ನನಗ ಸಿಕ್ರಲಾ! ಅಂತ ಭಾವಿಸಿದ ಸಂಗವ್ವಗ ಆಗಾಗ ಒಪ್ಪರೆ ತಲಿನೋವು ಬರ್ತಿತ್ತು. ಆ ಸಿಟ್ಟಿನಾಗ ಹೊಟ್ಟೆಲುಟ್ಟಿದ ಬಂಡ್ನನ್ಮಕ್ಳಿಗೆ ಬೈಕ್ಯಾಂತ ಕುಂದ್ರುತಿದ್ದಳು. ಕೈಗೆ ಬಳೆ ಹಾಕ್ಕೆರಲೊ, ಸೀರೆ ಉಟುಗರಲೊ, ನಿಮುಗ ಯವಗನ ಬುದ್ಧಿ ಬರ್ತಾದನು? ಇನ್ನ ಎಷ್ಟಂತ ನನ್ನ ಸತಾಯ್ಸಿ ನೀರು ಕುಡ್ತೀರಲೊ? ಅಂತ ಹೆಂಡ್ರ ಮುಂದ ಮಕ್ಳನ ಮಕಮಕ ಅಂತಿದ್ಲು.
ತಲಿಮ್ಯಾಗ ಸೆರ್ಗ ಹಾಕ್ಕೆಲಾರ್ದಂಗ ತಿರ್ಗಾಡೊ ಸೊಸಿದೇರ್ಗೂ ಸೇರ್ತಿದ್ದಿಲ್ಲ. ಅಕಿನ ನೋಡಿ ಕಲ್ರಿ, ಇಕಿನ ನೋಡಿ ಕಲ್ರಿ ಅಂತ ಮಾಡ್ಕೆಂದು ತಿನೋರ ಕಡೆ ಬೊಟ್ಟು ಮಾಡಿ ತೋರ್ಸುತಿದ್ಲು. ಯಪ್ಪಾ ಅನ್ಲಾರ್ದಂಗ ಮಾಡ್ಕೆಂತಿಂದು ಊರಿಗೆ ಹೆಸ್ರು ತರ್ಬೇಕಲೆ! ನಿಮ್ಮಂಗ ಸೌಸಾರ ಮಾಡಿದ್ರ, ಮುರೆಚೆಂಜೆಲೆ ನಿಮ್ಮಾವನ ಕೈಯ್ಯಾಗ ಮಣ್ಣು ಸೇರ್ತಿದ್ದೆ! ಅಂತ ಬದುಕುವ ಬಗೆ ಹೇಳುತಿದ್ಲು. ಅತ್ತಿ ಮುಂದ ಉಸ್ರು ಎತ್ತಾಕ ಧೈರ್ಯ ಸಾಲದ ಸೊಸಿದೋರು ರಾತ್ರಿ ಮಕ್ಕಂದಾಗ ಗಂಡ್ರ ಮುಂದ ಚಾಡಿ ಹೇಳಿ, ಅತ್ತಿ ಧ್ವನಿ ಎತ್ಲಾರ್ದಂಗ ಮಾಡಿದ್ರು. ಇದ್ನಕಂಡು ಸಂಗವ್ವಗ ಇನಷ್ಟು ಉರಿತಿ. ಬೆಂಕಿಗೆ ಚಿಮಿಣೆಣ್ಣೆ ಉಗ್ಗಿದಂಗ ಆತಿ. ನಾನಂತ ತಪ್ಪು ಮಾಡಿದ್ರ ನನ್ಮಕ್ಳು ನನ್ನ ಕಡುದಾಕ್ಲಿ! ನಿನ್ನೆಮನ್ನೆಬಂದ ಹೆಂಡ್ರ ಮಾತ್ಕೇಳಿ ತಾಯಿಗೆ ಅನಂಗ ಆದ್ರಲಾ? ಅಂತ ಮುದೇಕಿ ಜಗ್ಗಿ ಕುಲ್ಲಿದ್ಲು. ಗಂಡ ಅಂಬೋನು ಬದುಕಿದ್ದಾಗ ಕಾಲ್ಕಸ ಮಾಡಿದ್ದ ಸಂಗವ್ವಗ ಈಗ ಅವುನು ಇದ್ದಿದ್ರ ಚೊಲಿತ್ತಂತ ಪಶ್ಚಾತಾಪ ಆಗಾಕತ್ತಿತ್ತು. ಸೊಸಿದೋರಿಗೆ ಅನ್ನೋ ಮಾತ್ನ ಗಂಡಗ ನೆವ್ನಾಕಿ ಬೈಬೋದಿತ್ತು. ಎಂತಾ ಮಕ್ಳುನ ಹುಟ್ಟಿಸಿದೆಲೋ? ಎಂತಾ ಸೊಸಿದೋರ್ನ ತಂದೆಲೋ? ಹೋಟ್ಲಾಗ ನಮ್ಮನೆ ಸುದ್ದಿನ ಮಾತಾಡಕತ್ತ್ಯಾರಲೋ! ಅಂತ ಮನೆ ಜವಾಬ್ದಾರಿನ ಗಂಡನ ಕೊಳ್ಳಿಗೆ ಕಟ್ಟಿ, ದಾರಿಬಿಟ್ಟ ಸಂಸಾರಾನ ತಹಬಂದಿಗೆ ತರ್ಬೌದಿತ್ತೆಂತ ಮಮ್ಮಲ ಮರುಗುತಿದ್ಲು.
ಒಂಟಿ ಮುದುಕಿಯ ಪೆಂಟಿ ಮಾತುಗಳಿಗೆ ಸೊಕ್ಕಿನ ಸೊಸಿದೋರು ಉರುದು ಬುಳುತಿದ್ರು. ತಿಂಗ್ಳ ಅನಟಿಗೆ ತಂತಂ ಪತಿದೋರ್ನ ಸೆರ್ಗು ಹಿಡ್ದು ತಿರ್ಗಾಡಂಗ ಮಾಡಿ ಮಧ್ಯಾನೊತ್ತು ಮಸ್ತ್ ಮಂಚಕ ಮಕ್ಕಂತಿದ್ರು. ಸೊಸಿದೋರ ಮುಂದ ತಂದು ಯವಾಗ ನಡೆಂಗಿಲ್ಲಂತ ಗೊತ್ತಾತೋ, ಇದು ಚೊಲಲ್ಲಂತ ಎಣಿಸಿದ ಸಂಗವ್ವ ಗಂಡ ಸತ್ತ ಗುಡಿಸಿಲ್ಯಾಗ ಮತ್ತೆ ವಾಸ ಮಾಡಾಕ ಚಾಲು ಮಾಡಿದ್ಲು. ನೆಗೆಣ್ಣೋರು-ನೆಗೆಣ್ಣೋರು ಎಣ್ಣೆ-ಸೀಗೆಕಾಯಿ ಆದ್ಮೇಲೆ ಅಣ್ಣತಮ್ಮರ ಮಧ್ಯೆ ಸಣ್ಣಾಗಿದ್ದ ಬಿರುಕು ದೊಡ್ಡದಾತಿ. ಕೂಡಿ ಬಾಳಾದು ಕಲಿಯುಗದಾಗ ಸಾಧ್ಯ ಇಲ್ಲಂತ ಊರ ಮುಖಂಡರ ಮುಂದ ಸಂಗವ್ವನ ಆಸ್ತಿ ಪಾಲು ಆತಿ. ದೊಡ್ಮಗ ಪಂಪಣ್ಣ ಹೆಣ್ತಿ ಮಾತು ನೆಚಿಗೆಂದು ಬೀಗ್ರೂರು ಸೇರಿದ. ಸಣ್ಮಗ ಸಿದ್ದಪ್ಪ ಜಂತಾಮನಿ ಕಟಿಸೆಂದು ಹೊಲಮನಿ ನೋಡಿಕ್ಯಾಂತ ಎಲ್ಲಾರ ಮನಿ ದೋಸೆನೂ ತೂತು ಅನಂಗ ತನ್ಮನಿಗೆ ತಾನಿದ್ದ.
ಎಲ್ಲಾಕಡೆ ವರ್ಷಕ್ಕೀಟು ಮಳೆ ಕಮ್ಮಿ ಆಗಿ ಬಿತ್ತಿದ ಬೆಳೆ ಕೈಗೆ ಬರ್ಲಾರ್ದಂಥ ವಾತಾವರಣ ಸೃಷ್ಟಿ ಆಗ್ಯಾದ. ಎಲ್ಡು ವರ್ಷಕ್ಕೊಮ್ಮೆ ಮೂರು ವರ್ಷಕ್ಕೊಮ್ಮೆ ಬರ್ಗಾಲ ಬುಳಾಕತ್ಯಾದ. ದನಗಳಿಗೆ ಮೇಸಾಕ ಮೇವಿಲ್ದ, ಕುಡುಸಾಕ ನೀರಿಲ್ದ ಜಾನುವಾರಗಳನ ಮಾರಿ ಬೆಂಗ್ಳೂರಿಗೆ ಹೋಗಾ ಮಂದಿ ಹೆಚ್ಚಾಗ್ಯಾದ.
ಕರ್ನಾಟಕದ ಮಂದಿ ಬಯಲು ಹೊಲಗಳನ ಮಾಡಾಕ ಅಂಜಾ ಟೈಮಿನಾಗ ಆಂಧ್ರದ ರೆಡ್ಡೇರು ಅದೇ ಬೈಲು ಹೊಲಗಳನ ಪಾಲಿಗೆ ತಗಂದು, ಹೊಲ್ದಾಗ ಗುಡ್ಸಿಲಿ ಹಾಕಿ, ನೋಡಿದೋರು ಸೈ ಅನಂಗ ಮಾಡಿಕೆಂದು ತಿಂತಾರ. ಆಂದ್ರ ಮತ್ತು ತೆಲಂಗಾಣದ ಗಡಿಭಾಗಕ್ಕೆ ಹೊಂದಿಕೊಂಡ ಕರ್ನಾಟಕದ ಪ್ರತಿ ಜಿಲ್ಲೆದಾಗ ರೆಡ್ಡಿಗಳ ಸಂಖ್ಯೆ ಹೆಚ್ಚಾಗಕತ್ಯಾದ. ಇಂತಹ ಸಂದರ್ಭದಾಗ ಸಂಗವ್ವನ ಮಕ್ಕಳಾದ ಪಂಪಣ್ಣ ಹಾಗೂ ಸಿದ್ದಪ್ಪ ತಮ್ಮ ಹೊಲಗಳನ್ನ ಮಲ್ಲಾರೆಡ್ಡಿ ಎಂಬಾತಗ ಪಾಲಿಗೆ ಕೊಟ್ಟರು. ಈ ಸಂಗತಿ ಸಂಗವ್ವಗ ಸಮಾಧಾನ ತಂದಿರ್ಲಿಲ್ಲ. ಎಷ್ಟನ ಬೆಳಿಲಿ ಮನೆವ್ರೆ ಮಾಡ್ಕೆಂದು ತಿನ್ಬೇಕು. ಭೂಮಿತಾಯಿ ಒಂದೊರ್ಷ ಕೊಡ್ಲಿಲ್ಲಂದ್ರ ಇನ್ನೊಂದೊರ್ಷ ಕೊಡ್ತಾಳ. ರೈತ್ರು ನಂಬಿಕೀನ ಕಳ್ಕಾಬಾರ್ದು ಅಂತ ಸಂಗವ್ವನ ಗಂಡ ಸತ್ಯಪ್ಪ ಹೇಳ್ತಿದ್ದ. ಎಂತಾ ತಂದಿಗೆ ಎಂತಾ ಮಕ್ಳು ಹುಟ್ಟಿದ್ರಲಾ? ಅಂತ ಸಂಗವ್ವ ಭಾಳ ಚಿಂತಿ ಮಾಡಿದ್ಲು. ನಿಮ್ ತಾತ್ನೋರು ಮಾಡಿದ ಆಸ್ತೀನ ಉಳುಸ್ರಲೋ! ಅಂತ ರೆಡ್ಡಿಗೆ ಪಾಲಿಗೆ ಕೊಡಾಕ ಅಡ್ಡಗಾಲು ಹಾಕಿದ್ಲು. ಅಕಿ ಹಂಗ ಮಾಡಾಕ ಕಾರಣ ಇತ್ತು. ಈ ರೆಡ್ಡಿಗಳು ಮೊದ್ಲ ಹೊಲ್ದಾಗ ಕಾಲಿಡ್ತಾರಾ ಆಮ್ಯಾಗ ಮಾಲಕ್ರಿಗೆ ಸಾಲ ಕೊಟ್ಗಂತ ಹೋತಾರ. ಆ ಸಾಲಾನ ಟೈಮಿಗೆ ತೀರ್ಸಲಿಲ್ಲಂದ್ರ ತಮ್ ಹೆಸ್ರಿಗೆ ಆ ಹೊಲಾನ ಮಾಡಿಸೆಂತಾರ. ಇಂತ ಘಟನೆಗಳ್ನ ಸಾಕಷ್ಟು ಕಂಡಿದ್ದ ಸಂಗವ್ವಗ ಇಸ್ಪಾಟ, ಮಟಗ, ಕುಡಿಯಾ ಚಟ ಇದ್ದ ತನ್ಮಕ್ಳು ಕೂಡ ಸಾಲದ ಸುಳಿಗೆ ಸಿಕ್ಕೆಂದು ಇದ್ದ ಹೋಲಾನೂ ಕಳ್ಕಂತಾರೆಂಬ ಭಯ ಇತ್ತು. ಆದ್ರ ಸೊಸಿದೋರು ಅತ್ತೆಯ ಮಾತು ನಡಿಯಾಕ ಬುಡ್ಲಿಲ್ಲ. ಮಾಡ್ಕೆಂದು ತಿಂದು ಮುಂದ ಬರ್ಬೇಕಂದ್ರ ನಮತ್ತಿದು ಬಲು ಕಾಟಂತ ಊರ್ತುಂಬ ಹೇಳಿಕೆಂದು ಬಂದ್ರು. ಅತ್ತೆನ ಮೂಲಿಗೆ ಕುಂದ್ರಿಸಿ ಮಲ್ಲಾರೆಡ್ಡಿಗೆ ಹತ್ತೆಕರೆ ಹೊಲಾನ ಪಾಲಿಗಾಕಿ ಸಿದ್ದಪ್ಪ ಬೆಂಗ್ಳುರಿಗೆ ಗುಳೆ ಹೋದ್ರ, ಪಂಪಣ್ಣ ಸಿರುಗುಪ್ಪದಾಗ ಎತ್ತಿನಬಂಡಿ ಹೊಡ್ಕಂತ ಜೀವನ ಸಾಗುಸ್ತಿದ್ದ. ಮುದೇಕಿಯ ನಿಗಾ ಯಾರು ನೋಡ್ತಾರಂಬ ಕನಿಷ್ಟ ತಿಳುವಳಿಕೆ ಮಕ್ಳಿಗೆ ಸೋಸೇರಿಗೆ ಇರ್ಲಿಲ್ಲ. ನಿಮುಗೂ ನನ್ನಂಗ ಗೊಳಾಡದು ಬರ್ತಾದ ನೋಡಂತ್ರಿ ಅಂಬ ಸಂಕಟದ ಮಾತಾಡುತ್ತಿದ್ದ ಸಂಗವ್ವ ಸಿದ್ದಪ್ಪ ಬೆಂಗ್ಳೂರಿಗೆ ಹೋಗಾದಿನ ನಮಪ್ಪ ನಿನೇ ಕಾಯೆಪ ಅಂತ ಮುಗುಲ ಕಡೆ ಕೈ ಮುಗುದಿದ್ಲು.
ಚಲನಚಿತ್ರ ನಟ-ನಟಿಯರು ಗಾಂಜಾ ಕೇಸಾಗ ಸಿಗೆ ಹಾಕ್ಕೆಂದ ಮ್ಯಾಲೆ ಅಬಕಾರಿ ಇಲಾಖೆ ಒಳಗ ಚುರುಕು ಜಾಸ್ತಿ ಆತಿ. ಬಳ್ಳಾರಿಯ ಅಬಕಾರಿ ಡಿಸಿಯವರು ವಲಯದ ನಿರೀಕ್ಷಕರು ಮತ್ತು ಉಪ ನಿರೀಕ್ಷಕರ ತುರ್ತು ಸಭೆ ಕರುದು ವಾರದೊಳಗ ಒಂದನ ಗಾಂಜಾ ಕೇಸು ಆಗ್ಬೇಕಂತ ಕಡಕ್ಕಾಗಿ ಹೇಳಿದ್ರು. ಸಿರುಗುಪ್ಪ ವಲಯದ ನಿರೀಕ್ಷಕರಾದ ಸಂತೋಷ ಸಾಹೇಬರು ಅವತ್ತು ಸಂಜಿನೆ ಸಿಬ್ಬಂದಿನ ಫಾಲಿನ ಮಾಡಿಸಿ ವಾರದೊಳಗ ಗಾಂಜಾ ಪ್ರಕರಣ ಆಗಲಿಲ್ಲಂದ್ರ ಮುಲಾಜಿಲ್ದ ನಿಮ್ಯಾಗ ರಿಪೋಟು ಬರ್ತಿನಿ. ನಾನು ಉಳಿಲಿಲ್ಲಂದ್ರ ನಿಮ್ನ ಉಳುಸಾ ಮಾತಿಲ್ಲ ಅಂತ ಕುತ್ತಿಗೆ ಮ್ಯಾಲೆ ಕುಂತಂಗ ಮಾಡಿದ್ರು. ಮೊದುಲು ನಾನು ಆಮ್ಯಾಗ ನೀವು ಅಂಬ ಜಂಭತನ ಇತ್ತು.
ಸಿರುಗುಪ್ಪ ತಾಲೂಕುದಾಗ ಸುಮಾರು ನೂರು ಹಳ್ಳಿಗಳು ಐದಾವ. ಸಿರುಗುಪ್ಪದ ಅಬಕಾರಿ ಕಚೇರಿಯವರು ಇಡೀ ತಾಲೂಕುನ ಏಳು ರೂಟುಗಳಾಗಿ ಮಾಡ್ಯಾರ. ನಾಗಪ್ಪ ಅಂಬ ಪೇದೆಗೆ ಬಗ್ಗೂರು ಮಾರ್ಗ ಬಂದಿತ್ತು. ಈ ರೂಟಿನಾಗ ಬಗ್ಗೂರು, ರಾರಾವಿ, ಶಾಲಿಗನೂರು, ಬೆಂಚಿಕ್ಯಾಂಪು, ಬಂಡ್ರಾಳ, ಕೆ. ಸೂಗೂರು, ಕೆ. ಬೆಳಗಲ್ಲು, ಮುದೇನೂರು ಅಂಬ ಗ್ರಾಮಗಳು ಬರ್ತಾವ.
ನಾಗಪ್ಪ ದಿನಾ ತನ್ನ ರೂಟಿನಾಗ ಹೋತಿದ್ದ. ಸಾರ್ವಜನಿಕರಲ್ಲಿ ಗಾಂಜಾ ಬಗ್ಗೆ ಕೇಳ್ತಿದ್ದ. ಬರಿಕೈಲೆ ಬಂದು ಸಾಹೇಬರತಕ ಬೈಸೆಂತಿದ್ದ. ಅತ ಸೊಲ್ಪ ಪುಕುಳ ಇದ್ದ. ಸಾಬ ಬೆಯ್ಯಾದು ನೋಡಿ ಸರ್ಯಾಗಿ ಊಟ ಸೇರ್ಲಾರ್ದಂಗ, ನಿದ್ದಿ ಹತ್ತಲಾರ್ದಂಗ ಆಗಿತ್ತು. ಕೆಲಸದ ಒತ್ತಡದಿಂದಾಗಿ ನಾಕೈದು ವರ್ಷದ ಹಿಂದನೇ ಕುಡ್ಯಾದು ಕಲ್ತಿದ್ದ. ಈಗ ಗಾಂಜಾದ ಟೆನ್ಷನ್ನಿಂದ ದಿನಾ ಒಂದು ಪಾಕಿಟಿಗೆ ಇದ್ದತ ಎಲ್ಡು ಪಾಕಿಟಿಗೆ ಬಂದಿದ್ದ. ನೌಕ್ರಿ ಹೋದ್ರ ಹೋಗ್ಲಿ ಮೊದ್ಲ ನೀವು ಚೊಲ ಇರ್ರೆಂತ ಹೆಣ್ತಿ ಧೈರ್ಯ ತುಂಬಿದ್ರೂ ನಾಗಪ್ಪನ ಒಳಗ ಪುಕುಪುಕು ಅನಾದು ನಿಂತಿದ್ದಿಲ್ಲ.
ಮಾಹಿತಿದಾರರನ್ನ ಸಾಕೋದು ತುಂಬಾ ಕಷ್ಟದ ಕೆಲಸ. ಅವರು ಕುಡಿಯಾಕ ಕೇಳಿದ್ರ ಕೊಡ್ಬೇಕು. ತಿನಾಕ ಕೇಳಿದ್ರ ಕೊಡ್ಬೇಕು. ಖರ್ಚಿಗೆ ರಕ್ಕ ಇಲ್ಲಂದ್ರೂ ನೋಡಿಕೆಬೇಕು. ಇವತ್ತಿನ ಕೂಲಿ ಕೊಟ್ರ ನಿಮ್ಮಿಂದ ಬರ್ತೀನಿ ಇಲ್ಲಂದ್ರ ಬರಂಗಿಲ್ಲಂತ ಕಡಾಮುಡಿ ಹೇಳ್ತಾರ. ಗಾಂಜಾ ನಿರ್ಮೂಲನ ಮಾಡಾಮು. ಸಣ್ಣ ಸಣ್ಣ ಹುಡುಗುರು ಹಾಳಾಗೋದನ್ನ ತಡಿಯಾಮು. ಸಮಾಜ ಸುಧಾರ್ಸಾಕ ಪೋಲಿಸ್ರಿಗೆ ಸಹಾಯ ಮಾಡಾಮು ಅಂಬೋರು ತೀರಾ ಕಡಿಮೆ. ಫಕ್ಕಾ ಮಾಹಿತಿ ಗೊತ್ತಿದ್ರೂ ನಮುಗ್ಯಾಕ ಬೇಕಂತ ಬಾಯಿ ಮುಚಿಗೆಂದು ಇರಾ ಜನಾನೇ ಜಾಸ್ತಿ. ಕೆಲ್ವೊಂದು ಚಾರ್ಸೌಬೀಸ್ ಮಾಹಿದಾರ್ರು ತಮ್ಗ ಮಾಹಿತಿ ಗೊತ್ತಿದ್ರೂ ವಾರಗಟ್ಟಲೇ ಪುಗ್ಸಟ್ಟೆ ತಿಂದು ತೇಗ್ತಾರ. ಪೋಲಿಸೋರು, ಅಬಕಾರಿಯೋರು ಇಬ್ರು ಒಳಗ ಯಾರು ಹೆಚ್ಚು ದುಡ್ಡು ಕೊಡ್ತಾರೋ ಅವ್ರಿಗೆ ಇನ್ಫಾರ್ಮೇಷನ್ನು ಕೊಡುವ ಚಾಲಾಕಿಗಳೂ ಐದಾರ.
ಈ ನಾಕು ದಿನದಾಗ ಆ ಮಾಹಿತಿದಾರ ಈ ಮಾಹಿತಿದಾರ ಅಂತ ನಾಗಪ್ಪ ಆರೇಳು ಸಾವ್ರ ಕಳ್ಕಂದ. ತನ್ನಿಂದ ಗಾಂಜಾ ಕೇಸಾದ್ರ ಇಲಾಖೆಯ ಗುಪ್ತನಿಧಿನ ತಾನೆ ಇಸ್ಗಬೇಕು. ಇಷ್ಟು ಖರ್ಚಾಗ್ಯಾದಂತ ಸಾಹೇಬರಿಗೆ ಹೇಳ್ಬೇಕಂತ ಲೆಕ್ಕ ಹಾಕಿದ್ದ. ನಾವೊಂದು ಎಣಿಸಿದ್ರ ದೇವ್ರೊಂದು ಬಗಿತಾನ ಅಂಬಂಗ ಎಲ್ಲಿ ತಲಾಷೆ ಮಾಡಿದ್ರೂ ಗಾಂಜಾದ ಸುದ್ದಿ ಸಡಗ್ನ ಪತ್ತೆ ಆಗ್ಲಿಲ್ಲ. ಅದಕ್ಕೆ ಕಾರಣ: ಗಾಂಜಾದಾಗ ಸಿಕ್ಕ ಫಿಲ್ಮು ಮಂದಿನ ಟಿವಿಯವರು ಮುರೊತ್ತು ಹಾಕ್ಕೆಂದು ರುಬ್ಬಿದ್ದರಿಂದ ಹಳ್ಳಿಗಳಾಗ ಸಾಕಷ್ಟು ಜಾಗೃತಿ ಮೂಡ್ಯಾದ. ಹಳ್ಳಿಯ ಹೊಲದಾಗ ಗಾಂಜಾ ಗಿಡ ಬೆಳಿಲಿಲ್ಲಂದ್ರ ಪಟ್ಟಣಕ ಹೆಂಗ ಬರ್ತಾದ? ಗಾಂಜಾ ದಂದೆ ಬೆಂಗ್ಳೂರಂತ ಸಿಟಿಯಾಗ ಗಲ್ಲಿ ಗಲ್ಲಿಗೆ ಹಬ್ಯಾದ. ಪೆಡ್ಲರ್ಗಳನ್ನ ಹಿಡಿಯೋದ್ರಲ್ಲಿ ಪೋಲಿಸೋರು, ಅಬಕಾರಿಯೌರು ವಿಫಲ ಆಗ್ಯಾರಂತ ಮೇಜು ಕುಟ್ಟಿ ವಿಮರ್ಶೆ ಮಾಡ್ಯಾರ.
ಅವತ್ತು ಆತಿವಾರ. ನಾಗಪ್ಪ ಸಹೋದ್ಯೋಗಿ ಶಿವರಾಜನ ಕುಡ ಬೈಕು ತಗಂದು ಗಾಂಜಾ ಹುಡುಕಾಕ ಹೊಂಟ. ಹಳೆಕೋಟೆ, ತೆಕ್ಕಲಕೋಟೆ ಗುಡ್ಡದಾಗ ಹಿಂದುಕ ಕಳ್ಳಭಟ್ಟಿ ಮಾಡ್ತಿದ್ರಂತ. ಈಗ ಯಾರಾದ್ರೂ ಗುಡ್ಡದಾಗ ಗಾಂಜಾಬೀಜ ಉಗ್ಗಿದ್ರೆ? ಅಂಬ ಕುತೂಹಲ ನಾಗಪ್ಪನಿಗೆ. ಅಂತಹ ದೆವ್ನಂತ ಗುಡ್ಡಗಳನ್ನ ಏರಿ ಗಾಂಜಾ ಹುಡುಕಾದು ನೆನಿಸೆಂದ ಶಿವರಾಜನ ಎದೆ ಝಲ್ ಅಂತು. ಗುಡ್ಡದಾಗ ಯಾರನ ಗಾಂಜಾ ಹಾಕ್ತಾರನು? ಅಂತ ಹಿಂಜರಿಕೆ ಮಾತಾಡಿದ. ಭಾನುವಾರದ ರಜಾನ ಭಾಡೂಟ ತಿಂದು ಅರಾಮ ಕಳಿಬೇಕೆಂಬ ಸ್ವಭಾವದ ಮನುಷ ಆತ. ಶಿವರಾಜ ನೌಕರಿಗೆ ಸೇರಿ ನಾಕೊರ್ಷ ಆಗಿತ್ತು. ಆದ್ರೂ ಇಲ್ಲಿತನ ಅವನ ಬ್ಯಾಚಿಗೆ ಇಲಾಖಾ ಟ್ರೈನಿಂಗು ಆಗಿರ್ಲಿಲ್ಲ. ಆದ್ರಿಂದ ಅವ್ನಿಗೆ ತನಿಖಾ ವಿಷಯಗಳು, ಇಲಾಖಾ ಸೂಕ್ಷ್ಮಗಳು ಕೂಲಂಕಷವಾಗಿ ಗೊತ್ತಿರ್ಲಿಲ್ಲ. ಕೆಲ್ವೊಮ್ಮೆ ವೃತ್ತಿಗಾಗಿ ಜೀವಾನೇ ಮುಡಿಪಾಗಿ ಇಡ್ಬೇಕೆಂಬ ಕರ್ತವ್ಯಪ್ರಜ್ಞೆಯೂ ಅವನಲ್ಲಿ ಇರ್ಲಿಲ್ಲ.
“ಚಾಳಿ ಅಪರಾಧಿಗಳು ಸರ್ಕಾರದ ಗೈರಾಣಿ ಭೂಮ್ಯಾಗ, ಬೆಟ್ಟ, ಗುಡ್ಡದಾಗ, ಹಳ್ಳದ ದಂಡ್ಯಾಗ, ನದಿ ದಂಡ್ಯಾಗ ಯಾರಿಗೆ ಗೊತ್ತಾಗಲಾರ್ದಂಗ ಗಾಂಜಾ ಬೆಳಿತಾರ. ಮಲೆನಾಡ ಕಾಡಾಗ ಹೆಚ್ಚು ಮಾಡ್ತಾರ. ಅಕಸ್ತಾತ್ ಸರ್ಕಾರಿ ಜಾಗದಾಗ ಪೋಲಿಸನೌರಿಗೆ ಅಬಕಾರಿಯೌರಿಗೆ ಗಾಂಜಾ ಪತ್ತೆ ಆದ್ರೂ ಗಾಂಜಾಬೀಜ ಹಾಕಿದೋನಿಗೆ ಏನೂ ಆಗಂಗಿಲ್ಲ. ಅವ್ನಿಗೆ ಗಾಂಜಾ ಬೀಜಗಳು ಮಾತ್ರ ನಷ್ಟ ಆತಾವ! ಆದ್ರೆ ಗಾಂಜಾ ಸಿಕ್ಕ ಜಾಗದೌರಿಗೆ ಕುತ್ತಿಗ್ಗೆ ಬರ್ತಾದ. ಸಂಬಂಧಪಟ್ಟ ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಲೆದಂಡ ಆತಾದ” ಆರೋಪಿಗಳು ಯಾಕ ಸರ್ಕಾರಿ ಜಾಗ ಇನ್ನೊಬ್ಬರ ಹೊಲಾನ ಟಾರ್ಗೇಟ್ ಮಾಡ್ತಾರಂತ ಅವರು ಪಾರಾಗುವ ಒಳಗುಟ್ಟು ಹೇಳಿದ ನಾಗಪ್ಪ.
“ಹೌದನು!” ಹೊಸವಿಷಯ ತಿಳಿದ ಶಿವರಾಜ ಆಶ್ಚರ್ಯ ವ್ಯಕ್ತಪಡಿಸಿದ.
“ಹೌದು ಮತೆ. ಸರ್ಕಾರಿ ನೌಕ್ರಿ ಅಂದ್ರ ಹಗುರಂತ ಮಾಡಿದ್ದೆನು? ಮೈತುಂಬ ಮುಳ್ಳು ಇದ್ದಂಗಪ. ಹಣೆಬರ ಕೆಟ್ಟಿತಪಂದ್ರ ಈ ನೌಕ್ರಿನೇ ಬ್ಯಾಡ ಅನ್ಸುತಾದ, ಏನಂತ ತಿಳ್ಕಂಡಿದ್ದಿ? ಆಫೀಸಾಗ ಅರಾಮ ಕುಂತು ತಿಂಗ್ಳ ತಿಂಗ್ಳ ಪಗಾರ ಎಣುಸ್ತಾರಂತ ಜನ ತಿಳ್ದಾರ. ಕೆಲ್ಸ ಮಾಡೋನಿಗೆ ಗೊತ್ತಿರ್ತಾದ ಅದ್ರ ಟೆನ್ಷನ್ನು. ಅಧಿಕಾರಿಗಳ ಕಿರುಕುಳ ತಾಳಲಾರ್ದ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೆಂದಾರ, ರಾಜಿನಾಮೆ ಕೊಟ್ಟಾರ ಗೊತ್ತಾದಿಲ್ಲ?” ನಾಗಪ್ಪ ಸೊಲ್ಪ ಸಿಟ್ಟಿಗಿ ಬಂದು ಹೇಳಿದ.
“ಯಾರ್ ಏನನ ಮಾಡಿಕೆಲಿ ಬುಡಣ ನಮುಗೊಂದು ಗಾಂಜಾ ಕೇಸಾದ್ರ ಸಾಕು. ಸಾಬ ಬಾಯಿಗೆ ಬಂದಂಗ ಬೈತಾನ. ಅವುಂದೇನು ಬಾಯಾ ಏನ ಬೊಂಬಾಯ ಬುಡಪ! ದಿನಾ ಯಾವನು ಅನಿಸೆಂತಾನೋ ಮಾರಾಯ” ಅಂತ ಶಿವರಾಜ ಸಹಕರಿಸುವ ಮಾತಾಡಿ, ಇವತ್ತು ಗಾಂಜಾ ಸಿಗ್ಲೆಂತ ಗುಡ್ಡದ ಮಲ್ಲಯ್ಯಗ ಕೈ ಮುಗುದ.
ತೆಕ್ಕಲಕೋಟೆ ಖಾನವಳಿಯಾಗ ಇಬ್ಬರದು ಊಟ ಆತಿ. ಒಬ್ಬ ಮಾಹಿತಿದಾರಗ ಭೆಟ್ಟ್ಯಾಗಿ ಖರ್ಚಿಗೆ ಬರ್ತಾದಂತ ನೂರ್ರುಪಾಯಿ ಕೊಟ್ಟರು. ಆಮ್ಯಾಗ ಗಾಂಜಾ ಹುಡುಕಾಕ ಹೊಲಗಳಗ ಹೊಂಟ್ರು. ಯಾರಿಗೆ ಕೂನ ಸಿಗ್ಲಾರ್ದಂದ ಅಂಗಿ ಲುಂಗಿ ಹಾಕ್ಕೆಂದು ಕೊಳ್ಳಾಗ ಟವಾಲು ಹಾಕ್ಕೆಂದು ರೈತರಂಗ ಕಾಣ್ತಿದ್ರು. ಯಾರನ ನೀವ್ಯಾರು? ಇಕಡ್ಯಾಕ ಬಂದೀರಂತ ಪ್ರಶ್ನೆ ಮಾಡಿದ್ರ ಎಮ್ಮೆ ಕಳುದಾವ ಹುಡುಕಾಕ ಬಂದೀವಿ ಅಂತಿದ್ದರು. ಮೊಲದ ಬ್ಯಾಟಿಗೆ ಬಂದೀವಿ ಅಂತಿದ್ದರು. ಜನರಿಗೆ ಅನುಮಾನ ಬರ್ಲಾರ್ದಂಗ ಉತ್ರ ಕೊಟ್ಗಂತ ಗುಪ್ತ ತನಿಖೆ ನಡಿಸಿದ್ರು.
ಸುಮಾರು ನಾಗ್ಗಂಟೆ ಆಗಿತ್ತು. ನಾಗಪ್ಪಗ ತೆಕ್ಕಲಕೋಟೆ ಮಾಹಿತಿದಾರನಿಂದ ಪೋನು ಬಂತು.
“ನನ್ಗ ಹತ್ತು ಸಾವ್ರ ಕೊಟ್ರ ನಿಮಗ ಗಾಂಜಾ ಮಾಹಿತಿ ಕೊಡ್ತಿನಿ ಸಾರ್” ಅಂತ ಕೊಕ್ಕೆ ಹಾಕಿದ.
ಸಿಹಿ ಸುದ್ದಿ ಕೇಳಿದ ನಾಗಪ್ಪ- ಆತಿ ಎಲ್ಲ್ಯಾದ ಮೊದ್ಲೇಳು ಅಂತ ಪುಸುಲಾಯಿಸಿದ.
“ಇಲ್ಲ ಸಾರ್, ಮೊದ್ಲ ರಕ್ಕ ಕೊಡ್ರಿ ಆಮ್ಯಾಗ ಹೇಳ್ತಿನಿ. ಅಚ್ಚೆವರ್ಷ ಇದ್ರಂಗ ಪೋಲಿಸ್ನೌರಿಗೆ ತೋರ್ಸಿದ್ದೆ. ಐದ್ಸಾವ್ರ ಕೊಡ್ತಿನಂದ್ರು ಕೇಸಾದ ಮ್ಯಾಗ ಒಂದ್ರುಪಾಯಿನೂ ಕೊಡ್ಲಿಲ್ಲ” ಮಾಹಿತಿದಾರ ಹೇಳೋದು ಖರೆವಿತ್ತು. ಕೆಲವೊಬ್ರು ಕೆಲ್ಸ ಆದಮ್ಯಾಗ ಹೊಲ್ಸು ರಂಡೆ ಅಂತಾರ. ಅವುನು ಕಷ್ಟಪಟ್ಟದ್ಕ ರಿಸ್ಕು ತಗಂಡದ್ಕ ಅವ್ನಿಗೆ ಫಲ ಸಿಗ್ಲೇಬೇಕು. ಪೇಚಿಗೆ ಸಿಕ್ಕಂದ ನಾಗಪ್ಪ ಇರೋ ಸಂಗತಿನ ತಿಳ್ಸಾಕ ಸಾಹೇಬ್ರಿಗೆ ಖುಷಿಯಿಂದ ಫೋನಚ್ಚಿದ. ಎಷ್ಟು ಗಿಡೈದಾವ ಸಾಬ ಕೇಳಿದ. ನಾಗಪ್ಪ ಗದ್ದಲದಾಗ ಅದ್ನ ಕೇಳಿದ್ದಿಲ್ಲ.
“ಒಂದ್ಗಿಡ ಇದ್ರ ಹತ್ಸಾವ್ರ ಕೊಡ್ತಿದ್ದೆನು? ಮೊದ್ಲ ಎಷ್ಟು ಗಿಡಾವ? ಎಲ್ಲೈದಾವ? ಕೇಳ್ಬೇಕು. ಎಷ್ಟು ಕೇಜಿ ಆತಾದಂತ ಲೆಕ್ಕ ಹಾಕ್ಬೇಕು. ಕಡಿಗೆ ಅಷ್ಟು ಆಗಂಗಿಲ್ಲ ಇಷ್ಟು ತಗಂತ ಮಾಹಿತಿದಾರ್ನ ರಮುಸ್ಬೇಕಪ” ಅಂತ ತನಿಖಾ ಸೂಕ್ಷ್ಮಗಳನ್ನ ಸಾಹೇಬರು ಸಿಬ್ಬಂದಿಗೆ ಹೇಳಿದ್ರು. ನಂತರ ನಾಗಪ್ಪ ಮಾಹಿತಿದಾರಗ ಕರೆ ಮಾಡಿ ಕೇಳಿದ.
“ಐದ್ನೈದು ಇಪ್ಪತ್ತು ಗಿಡ ಇರ್ಬೌದು ಸಾರ್. ಹತ್ತಿ ಹೊಲ್ದಾಗ ಐದಾವ. ಹುವ್ವು ಕಾಯಿ ಬುಟ್ಟಾದ. ಸನ್ಯಾಕೋದ್ರ ಗಮ್ಮಂತ ವಾಸ್ನಿ ಬರ್ತಾದಂತ ನನ್ ಹೆಣ್ತಿ ಹೇಳ್ಯಾಳ” ಅಂಬ ನಿಖರ ಮಾಹಿತಿ ಕೊಟ್ಟ. ಅವುನು ಹೇಳಾದು ಕೇಳಿದ್ರ ಸುಮಾರು ಮುವತ್ತು ಕೇಜಿ ನಲವತ್ತು ಕೇಜಿ ಆಗ್ಬೌದಂತ ನಾಗಪ್ಪ ಅಂದಾಜು ಮಾಡಿದ. ತಕ್ಷಣನೆ ಸಾಹೇಬ್ರಿಗೆ ಸಿಹಿಸುದ್ದಿ ಮುಟ್ಟಿಸಿದ. ಮಾಹಿತಿದಾರಗ ಐದು ಸಾವ್ರ ಕೊಡುವ ನಿಷ್ಕರ್ಷೆ ಆತಿ.
ಗಾಂಜಾ ಬೆಳುದ ಹೊಲಾನ ತೋರ್ಸಾಕ ಕೂಡ್ಲೇ ತೋರ್ಸಾಕ ಮಾಹಿತಿದಾರ ಒಪ್ಲಿಲ್ಲ. ಕತ್ಲಾಗತನ ಜನ ತಿರ್ಗಾಡ್ತಾರ. ಯಾರಾದ್ರೂ ನೋಡಿದ್ರ ನನ್ನ ಕಡ್ದಾಕ್ತಾರಂತ ತಾನು ಬಚಾವು ಆಗೋದನ್ನ ಯೋಚಿಸಿದ. ಮಾಹಿತಿದಾರ ಹೇಳಾದು ನಿಜ. ಅವನ ಹೆಸ್ರು ಮತ್ತು ಚಹ್ರೆ ಮುಚ್ಚಿಡಾದು ಇಲಾಖೆಯವರ ಜವಾಬ್ದಾರಿ. ಅದ್ಕ ರಾತ್ರಿ ಆಗತನ ಕಾದು, ಗಾಂಜಾ ಬೆಳ್ದ ಹೊಲದ ಕಡೆ ಮೂವಾರು ಒಂದೇ ಬೈಕಾಗ ರಾರಾವಿ ಗ್ರಾಮಕ ಹೋದ್ರು. ಹೆಂಡತಿ ಹೇಳಿದ ಗುರುತಿನ ಮ್ಯಾಗ ಗಾಂಜಾ ಹೊಲ ಕಂಡು ಹಿಡಿಯಾಕ ಮಾಹಿತಿದಾರಗ ಆಗ್ಲಿಲ್ಲ.
ಮಲ್ಲಾರೆಡ್ಡಿ ಭಾಳ ಚಾಲಾಕಿ ಮನುಷ. ಹತ್ರುಪಾಯಿ ಕಳ್ದಲ್ಲೇ ಇಪ್ಪತ್ರುಪಾಯಿ ತೆಗಿಯೋ ಚಾರ್ಸೌವ್ಬೀಸ್ ಆಸಾಮಿ. ಯಾವುದೇ ಊರಾಗ ಹೊಲ ಮಾಡಿದ್ರೂ ಮುರ್ನಾಕು ವರ್ಷಕ್ಕಿಂತ ಹೆಚ್ಚಿಗೆ ಇರ್ತಿದ್ದಿಲ್ಲ. ರೈಚೂರು ಜಿಲ್ಲೆಯ ದೇವದುರ್ಗ ತಾಲೂಕಿನಾಗ ಹೊಲಗಳನ ಪಾಲಿಗೆ ಮಾಡಿ, ರೈತರ ರಕ್ಕ ಮುಣಿಸಿ, ಮನ್ಯಾಗ ದೀಪ ಹಚ್ಚಿ ರಾತ್ರೋ ರಾತ್ರಿ ಪರಾರಿಯಾದ ಪುಡಾರಿ ಅವ್ನು. ಕರ್ನಾಟಕದ ಜನ ಅಪರಂಜಿ ಅಂತೋರು. ಜಲ್ದಿ ಇನ್ನೊಬ್ರನ ನಂಬಿ ಬುಡ್ತಾರ. ಇಂತಾ ಮೋಸದ ಮಂದಿಗೆ ಕಂಪ್ಲೇಟು ಕೊಡಂಗಿಲ್ಲ. ಪೇಪರ್ದಾಗೂ ಹಾಕ್ಸಂಗಿಲ್ಲ. ದೇವ್ರು ಕರಾಮತ್ದೌನಾದ್ರ ಗೋಣು ಮುರ್ದೋರಿಗೆ ಸರ್ಯಾಗಿ ಬರೆ ಎಳಿತಾನಂತ ಹಿಡಿಶಾಪ ಹಾಕಿ ಸುಮ್ನೆ ಆದ ಎಷ್ಟೋ ರೈತ್ರು ಐದಾರ.
ಹಿಂಗ ಮೋಸ ಮಾಡಿ ಲಕ್ಷಾಂತರ ಗಂಟು ಮಾಡಿಕೆಂದು ತಾಲೂಕು, ಜಿಲ್ಲೆಗಳನ ಬದುಲು ಮಾಡಿಕೆಂತ ಹೋತಿದ್ದ ಮಲ್ಲಾರೆಡ್ಡಿ ಅದ್ನೆ ಬಂಡವಾಳದ ಬದುಕು ಮಾಡ್ಕೆಂದಿದ್ದ. ನಮ್ಮ ಜನ ಕೆಲ್ವೊಮ್ಮೆ ಸುಣ್ಣದ ನೀರನ್ನ ಹಾಲಂತ ಅಂದುಕೊಳ್ಳುವ ಜನ. ಅದು ಸುಣ್ಣದ ನೀರಂತ ಗೊತ್ತಾದ್ರೂ ಸುಮ್ಮನಿರುವ ಜನ. ತಲತಲಾಂತರ ಊರ ಗೌಡನ ಗೌಡ್ಕಿ ಕಿರ್ಕಿರಿ ಸಾಕಾದ ಜನ್ರು ಗೌಡನಂಗೆ ಬಿಳೆ ಅಂಗಿ ಲುಂಗಿ ಉಟುಗಂದು ಐನುರ್ರುಪಾಯಿ ನೋಟುನ ಬಕ್ಕಣದಾಗ ಇಟ್ಗಂದು ಬುಡ್ ಬುಡ್ ಅಂತ ಬುಲೇಟಲ್ಲಿ ತಿರುಗುವ ರೆಡ್ಡಿಗಳು ಕರ್ನಾಟಕದ ಜನಗಳಿಗೆ ಮೆಚ್ಚಿನೌರು ಆಗ್ಯಾರ. ಬಹುತೇಕ ರೆಡ್ಡಿಗಳು ಒಳ್ಳೆ ಮಂದಿ. ಅರ್ಧಮರ್ಧ ಕನ್ನಡ ಕಲ್ತು ಸ್ಥಳೀಯರ ಕುಡಾನೇ ಕೂಲಿ ಮಾಡುಸ್ತಾರ. ರೆಡ್ಡಿಯ ಹೆಣ್ತಿ ರಡ್ಡೆಮ್ಮ ಅಂತೂ ನಮ್ ಹೆಂಗಸ್ರಂಗ ಮೆದುವಲ್ಲ. ನಾಕು ಮಂದಿನ ತಿರ್ವಿ ಹೊಗೆಂಗ ಇರ್ತಾರ. ನಾಕಾಳಿನ ಕೆಲ್ಸ ಮಾಡಂಗ ಇರ್ತಾರ. ಗಂಡ ಊರಿಗೋದಾಗ ಅಡುವ್ಯಾಗಿನ ಗುಡಿಸಲ್ಯಾಗ ಒಬ್ರೆ ಇದ್ರೂ ಅಂಜೋ ಜಾಯಮಾನದವರಲ್ಲ. ತಮ್ಮ ಮಕ್ಕಳನ್ನ ಆಂಧ್ರದಲ್ಲಿ ಓದ್ಸಾಕ ಹಾಕಿ ಗಂಡ-ಹೆಣ್ತಿ ಇಬ್ರೆ ಕರ್ನಾಟಕಕ ಬರ್ತಾರ. ನಮ್ಮಲ್ಲಿ ಕಡಿಮೆ ರೇಟಿಗೆ ಹೊಲಗಳನ್ನ ಮಾಡಿ ಹತ್ತಾರು ವರ್ಷದಾಗ ಒಬ್ಬ ಮನುಷರಾತಾರ. ಖರೀದಿಸಿದ ಹೊಲದಾಗೆ ಸಿಮೆಂಟುಮನೆ ಕಟ್ಟಿಸಿ ಕರೆಂಟು ವೈರು ಎಳಿಸಿ, ಓಟಿಂಗ್ ಕಾರ್ಡು, ರೇಷನ್ ಕಾರ್ಡು ಮಾಡಿಸೆಂದು ಕ್ಯಾಂಪು ಅಂತ ತಮ್ಮದೇ ಊರು ಕಟ್ಟುತಾರ.
ಜೀವನದಾಗ ಏರುಪೇರು ಇದ್ದೇ ಇರ್ತಾದ. ಜನ್ರಿಗೆ ಮಾಡಿದ ಮೋಸದ ಫಲ ಅಂಬಂಗ ಮಲ್ಲಾರೆಡ್ಡಿ ಇತ್ತೀಚೆಗೆ ತುಂಬಾ ಲಾಸು ಆಗಾಕತ್ತಿದ್ದ. ಕೈ ಇಟ್ಟಲ್ಲೆಲ್ಲಾ ಉಲ್ಟಾ ಹೊಡ್ಯಾಕತ್ತಿತ್ತು. ಕಾಳುಕಡಿ ಕೂಲಿನಾಲಿಯ ಖರ್ಚು ತೆಗುದು ಸಂಸಾರದ ಸಂತೆ ಮಾಡಷ್ಟು ಹಣ ಕೈಗೆ ಬಂದ್ರೂ ರಾತ್ರೋರಾತ್ರಿ ಶ್ರೀಮಂತ ಆಗಾಕ ಅಡ್ಡದಾರಿ ಹಿಡಿದಿದ್ದ. ಪಾಲಿಗೆ ಮಾಡಿದ ಹೊಲದಾಗ ಗಾಂಜಾ ಹಾಕಿ ಪೆಂಡೆಗಟ್ಟಲೆ ರಕ್ಕ ಎಣ್ಸುತಿದ್ದ.
ಸಂಗವ್ವನ ಹೊಲದಾಗೂ ಯಾರಿಗೆ ಗೊತ್ತಾಗಲಾರ್ದಂಗ ಎಲ್ಡೊರ್ಸ ಹತ್ತಿ ಬೆಳೆಯಾಗ ಗಾಂಜಾ ಹಾಕಿದ್ದ. ಕಳ್ಳ ಮೈತುಂಬ ಕಣ್ಣು ಮಾಡಿ ಎಷ್ಟೇ ಜಾಗೃತಿ ಇದ್ರೂ ಒಮ್ಮೆನ ಸಿಗೆ ಹಾಕ್ಕೆಂತಾನ ಅಂಬಂಗ ಮಲ್ಲಾರೆಡ್ಡಿ ಜಾತಕ ಹೊರಗ ಬಂದಿದ್ದು ರೋಚಕ! ಅಲ್ಲಿಗೆ ಅತನ ಪಾಪದ ಕೊಡ ತುಂಬಿರ್ಬೇಕು. ಊರಿನೌರಿಗೆ ತನ್ನ ಬಂಡವಾಳ ಗೊತ್ತಾದ್ರ ಕೆಲ್ಸ ಕೆಡ್ತಾದಂತ ಕೂಲಿ ಆಳುಗಳನ್ನ ದೂರದ ಊರಿಂದ ಕರ್ಸುತಿದ್ದ. ಗಾಂಜಾದ ಗಿಡಗಳನ್ನ ಕೂಲಿಕಾರ ಹೆಂಗಸರು ನೋಡಿದರೂ ಯಾರಿಗೆ ಹೇಳ್ಬೇಕು? ಇಂತಾ ಖೂನಿ ಆಗೋ ವಿಷಯಾನ ಇನ್ನೊಬ್ರ ಮುಂದ ಹೇಳಿದ್ರ ತಮುಗ ತೊಂದ್ರೆ ಅಂಬ ಮನಸ್ಥಿತಿ ಇರಾಕಲ್ಕ ಯಾರೂ ಅಷ್ಟು ಧೈರ್ಯ ಮಾಡಿ ಪೋಲಿಸ್ರಿಗೆ ಹೇಳಂಗಿಲ್ಲ. ಅಕಸ್ಮಾತ್ ಮಾತಿಗೆ ಬಂದಾಗ ಹೇಳಿದ್ರೂ ಗಾಂಜಾ ಗಿಡ ಹಾಕಿದ ಆ ಊರು ಆ ಹೊಲದ ಪರಿಚಯ ಇಲ್ಲದೋರು, ತಮ್ಮನಿಗೆ ತಾವು ಇರುವ ಮನಸ್ಥಿತಿಯೌರು ಯಾಕ ತಲೆ ಕೆಡಿಸೆಂತಾರ?
ದೇವ್ರು ಕೊಡಾಕ ನಿಂತ್ನಪಂದ್ರ ತಗಾಕೂ ಕಷ್ಟ ಆತಾದ. ಮಲ್ಲಾರೆಡ್ಡಿಗೂ ಹಂಗೆ ಆಗಿತ್ತು. ಅತ್ನ ಹೆಗ್ಲೇರಿದ ಶನಿದೇವ್ರು ಗಟ್ಟಿಗಿ ಕುಂತಿದ್ದ. ರಾರಾವಿ ಗ್ರಾಮದಾಗ ಸಂಗವ್ವನ ಹೊಲ ಮಾಡಿದ್ದ. ಕಳೇವು ಇದ್ದಾಗ, ಹತ್ತಿ ಬುಡುಸಾಗ ಟಂಟಂದಾಗ ದೂರದ ತೆಕ್ಕಲಕೋಟೆಯ ಜನಗಳನ್ನ ಕೂಲಿಗೆ ಕರಿಸಿ ತಾನೇ ಶ್ಯಾಣ್ಯಾ ಅಂನ್ಕಂಡಿದ್ದ. ತನ್ನ ಅಡ್ಡಕಸುಬು ಯಾರಿಗೆ ಗೊತ್ತಾಗಂಗಿಲ್ಲಂತ ತಿಳ್ದಿದ್ದ. ಇಷ್ಟು ದಿನ ಇಂಥ ಉಪಾಯ ಮಾಡಿನೆ ಪೋಲಿಸರ ಕಣ್ಣಾಗ ಮಣ್ಣು ಹಾಕಿದ್ದ. ಆದರೆ ಕಳ್ಳ ಎವತ್ತಿದ್ರೂ ಸಿಕ್ಕೇ ಸಿಗ್ತಾನ ಅಂಬಾಕ ಈ ಪ್ರಕರಣನೇ ಸಾಕ್ಷಿ.
ಹೊಲಾನ ಇನ್ನೊಬ್ರಿಗೆ ಮಾಡಾಕ ಕೊಟ್ಟ ಮ್ಯಾಲೆ ಪುಗ್ಸಟ್ಟೆ ಹೊಲದ ಕಡೆ ಹೋಗಿ ಚಪ್ಲಿ ಯಾಕ ಸವಿಸ್ಯಾದು ಅನ್ನೋದು ಸಂಗವ್ವ ಮತ್ತು ಅಕಿಯ ಮಕ್ಕಳ ಲೆಕ್ಕಾಚಾರ ಅಷ್ಟೇ ಅಲ್ಲ; ಜನಗಳ ಅತಿಯಾದ ಜಾಣತನವು ಅಪಾಯಕ್ಕೆ ಕಾರಣ ಅಂಬುದು ತೆಗ್ದಿಡುವ ಮಾತಲ್ಲ. ಹೊಲಾನ ಹೊತುಗಂದು ಹೋಗಾಕ ಆತಾದನು? ಅಂಬ ಆತ್ಮವಿಶ್ವಾಸ ಎಲ್ಲಾರ್ದು.
ಬೆಂಗಳೂರ್ಗೆ ದುಡಿಯಾಕೋದ ಸಿದ್ದಪ್ಪ ಊರುಜಾತ್ರಿಗೆ, ಅಲಾಯಿ ಹಬ್ಬಕ್ಕ ಬಂದು ಹೋತಿದ್ದ. ಪಂಪಣ್ಣ ಸನ್ಯಾಕಿದ್ರೂ ಊರಿಗೋದ್ರ ಒಣಕಿರ್ಕಿರಿ, ಖರ್ಚು ಹೆಚ್ಚಂತ ಯೋಚಿಸುತ್ತಿದ್ದ. ಒಂದುದಿನ ಬಂಡಿ ಹೊಡಿಯಾದ ಬುಟ್ರ ಸಾವ್ರುಪಾಯಿ ಹೋತಾದಂತ ಪಕ್ಕಾಲೆಕ್ಕದ ಜೀವನ ನಡಿಸಿದ್ದ. ಸಂಗವ್ವಗ ಗಂಡನಿಂದನೂ ಸುಖ ಸಿಗ್ಲಿಲ್ಲ. ಮಕ್ಳಿಂದನೂ ಸುಖ ಸಿಗ್ಲಿಲ್ಲ. ಅಕಡೆ ಸೊಸಿದೋರಿಂದನೂ ಸುಖ ಸಿಗ್ಲಿಲ್ಲ. ಊರಾಗ ಕುಲುದೋರ ಮನೆಗಳು ಇರಾಕಲ್ಕ ಎದೆ ಉಬ್ಸಿ ನಡುದ್ರೂ ಆಡಿಕೆಂತಾರ. ಬಗ್ಗಿ ನಡುದ್ರೂ ಬಂದಾನಾದ. ಅದ್ಕ ತನ್ನ ದುಖ್ಖಾನ ಯಾರ್ಮುಂದ ಹೇಳ್ಳಾರ್ದ ಒಳಗೊಳಗ ಕುಲ್ಲಿಕ್ಯಾಂತ ಕುಂತಿದ್ಲು. ಯಾರ್ಮುಂದನ ಹೇಳಾಕೋದ್ರ, ಬಾಯಿಗೆ ಬೀಗ ಇಲ್ದ ಜನಗಳು- ಯಾಕ ಮಕ್ಳುನ ಹುಟ್ಸಬೇಕವಾ, ಯಾಕ ಹಾರ್ಯಾಡಕ ಬುಡ್ಬೇಕವಾ, ಇನ್ನೊಬ್ರಿಗೆ ಯಾಕ ಮೂಲಾಗ್ಬೇಕವಾ ಅಂತ ಬುದ್ಧಿ ಹೇಳ್ತಾರ. ತನ್ಮುಂದ ಸರ್ಯಾಗಿ ಸಿಂಬ್ಳ ಸೀದಾಕ ಬರ್ಲಾರ್ದೌರ ಈಗ ದೊಡ್ಡೋರಾಗಿ ಹೇಳಾಕ ಬಂದ್ರ ಅವ್ರ ಕುಡ ಅನಿಸೆಂದು ಹೆಂಗ ನಿದ್ದಿ ಮಾಡಾಕ ಆತಾದ? ಅದ್ಕ ಸಂಗವ್ವ ಜಡ್ಡು ಬಂದ್ರೂ ಜಾಪತ್ರೆ ಬಂದ್ರೂ ಕುಲದೌರ್ನ ಮಾತ್ರ ಕರ್ಯಾಕ ಹೋತಿದಿಲ್ಲ. ನಾಕ್ಮಾತು ಬೈದ್ರೂ ಪರ್ವಾಗಿಲ್ಲಂತ ಬ್ಯಾರೆ ಜಾತಿಯೌರ್ನ ಕರಿತಿದ್ಲು. ಸಂಗವ್ವಕ್ಕ ನಿನ್ಗ ಎಂತಾ ಗತಿ ಬಂತಲಂಗೆ? ಅಂತ ಯಾರನ ಮರುಕ ಪಟ್ಟ ದಿನ ಅಕಿಗೆ ವಟ್ಟಾ ನಿದ್ದಿ ಹತ್ತಿದ್ದಿಲ್ಲ. ಎಂತೌರು ಹುಟ್ಟಿದ್ರಲಾ? ಅಂತ ಚಿಂತಿ ಬುಳ್ತಿತ್ತು. ನಿಮ್ನ ಓಸುರ್ಲಿ, ನಿಮ್ನ ದಂಡೆರ್ಲಿ, ತಾಯಿಮಾತು ಕೇಳ್ಳಾರ್ದೋನು ನಾಯಿಬಟ್ಟೆ ಆತಾನಲೋ! ಅಂಬ ಶಾಪಗಳು ಮನ್ಸಿಂದ ಉಚ್ಚಿ ಬುಳ್ತಿದ್ವು. ಸಂಸಾರ ಸಾಕಾದ ಸಂಗವ್ವಗ ಬದುಕುವ ಚೈತನ್ಯ ಇರ್ಲಿಲ್ಲ. ಜಲ್ದಿ ಸತ್ರ ಸಾಕಪ ಅಂತ ಕುಣ್ಯಾಗ ಕಾಲ್ಬುಟ್ಟು ಕುಂತಿದ್ಲು.
ನೂರ್ಕಲ್ಲು ಎಸೆದ್ರ ಅದ್ರಾಗ ಒಂದು ಕಲ್ಲನ ತಟ್ಟಂಗಿಲ್ಲನು? ಅಂಬಂಗ ಮಣಕಾಲಚ್ಚಿ ಹಡುದು, ಎದೆಹಾಲು ಕುಡ್ಸಿ ಬೆಳ್ಸಿದ ತಾಯೀನ ಭಿಕಾರಿಯಂಗ ಬಿಸಾಕಿ ಹೆಂಡರ ಜತಿಗಿ ಸುಖದಲ್ಲಿರೋ ಪಂಪಣ್ಣ ಮತ್ತು ಸಿದ್ದಪ್ಪಗ ಕಂಡೋರ ಕಾಲು ಹಿಡಿಯೋ ಸಮಯ ಬಂತು. ನಾಗಪ್ಪ ಸಾರ್ ತೆಕ್ಕಕೋಟೆದಾಗ ಮಾಹಿತಿ ತೆಗೆದ್ರ ರಾರಾವಿ ಊರಾಗ ಸುದ್ದಿ ಹೊಂಟಿತ್ತು. ಮಾಹಿತಿದಾರನ ಹೆಣ್ತಿ ಮಲ್ಲಾರೆಡ್ಡಿನ ಹೊಲುಕ ಹತ್ತಿಬುಡ್ಸಾಕ ಹೋಗಿದ್ಲು. ಅಲ್ಲಿ ಗಾಂಜಾದ ಗಿಡಗಳ್ನ ನೋಡಿದ್ಲು. ಹೈದಿನೈದು ದಿನಗಳಾದ್ರೂ ಅಕಿಗೆ ಗಾಂಜಾ ಬಗ್ಗೆ ಯಾರೂ ಕೇಳಿದ್ದಿಲ್ಲ. ಅಕಿನೂ ಯಾರ ಮುಂದ ಹೇಳಾಕ ಹೋಗಿದ್ದಿಲ್ಲ. ಇಲ್ಲುದ್ದು ನಮಗ್ಯಾಕ ಬೇಕಂತ ಎಲ್ಲಾ ಮರ್ತು ಕುಂತಿದ್ಲು. ಯವಾಗ ತನಗಂಡ ಎಲ್ಲೆನ ಗಾಂಜಾ ನೋಡಿದ್ದೆನಲೇ? ಅಂತ ಕೇಳಿದಾಗ ಸಡಗ್ನೆ ಅಕಿ ಹೇಳ್ಳಿಲ್ಲ. ಮೊದ್ಲು ಯಾಕಂತ ಕೇಳಿದ್ಲು. ನೋಡಿದ್ರ ಹೇಳಂತ ಪತಿರಾಯ ಒತ್ತಾಯ ಮಾಡಿದ. ಮಾಹಿತಿ ಹೇಳಿದ್ರ ಪೋಲಿಸ್ರು ರಕ್ಕ ಕೊಡ್ತಾರಂತ ಪುಸುಲಾಯ್ಸಿದ. ರಕ್ಕ ಅಂದಮ್ಯಾಗ ಸತ್ತ ಹೆಣಾನೂ ಎದ್ದು ಕುಂದ್ರೋ ಹೊತ್ತಿನಾಗ ಅಕಿನ ಮನಸೂ ಹುಳಿಹುಳಿ ಆಗಿ ಸಣ್ಣಾಗಿ ಬಾಯಿ ಬುಟ್ಲು. ರಾರಾವಿಗೆ ಮೊನ್ನೆ ಕೂಲಿ ಹೋಗಿದ್ವೆಲಾ?. ಮಲ್ಲಾರೆಡ್ಡಿ ಅಂಬತ ಪಾಲಿಗೆ ಮಾಡ್ಯಾನಂತ ನೋಡು! ಆ ಹೊಲ್ದಾ ಐದಾವ ಅಂಬ ಸುಳುವು ಕೊಟ್ಟಳು. ತನಗ ಗೊತ್ತಿದ್ದಷ್ಟು ಅವ್ಡುಸೌಡಾಗಿ ಹೇಳಿದ್ಲು. ಕುಡಿಯಾ ಗಂಡಗ ಮರ್ಯಾದಿ ಕೊಡೋದು ಬುಟ್ಟು ಭಾಳ ದಿನ ಆಗಿತ್ತು. ಅಕಿಗೆ ಹೊಲದ ಮಾಲಿಕ್ರು ಯಾರಂತನೂ ಗೊತ್ತಿದ್ದಿಲ್ಲ.
ಅಂತೂ ನಾಗಪ್ಪ ಸಾರ್ನ ಪ್ಲ್ಯಾನು ಫಲ ಕೊಟ್ಟಿತ್ತು. ಕೂಲಿ ಮಾಡುವ ಹೆಂಗಸರಿಗೆ ಕೇಳಿದ್ರ ಹೊಲ್ದಾಗ ಗಾಂಜಾ ಬೆಳ್ದ ಮಾಹಿತಿಗಳು ಸುಲಭವಾಗಿ ಸಿಗ್ತಾವಂತ ನಾಗಪ್ಪ ಮತ್ತು ಶಿವರಾಜ ಚರ್ಚೆ ಮಾಡಿದ್ದರು. ಅರ್ಧಮರ್ಧ ಮಾಹಿತಿ ಕೊಟ್ಟ ಮಾಹಿತಿದಾರಗ ಕಿಸ್ಯಾಗ ಒಂದ್ಸಾವರ ಇಟ್ಟರು. ಹಂಗೆ ನೋಡಿಕ್ಯಾಂತಿರು ಎಲ್ಲೆನ ಗೊತ್ತಾದ್ರ ಪೋನ್ಮಾಡಂತ ಗುರುಗೇ ತಿರುಮಂತ್ರ ಹಾಕಿದರು.
ನೂಲೆಳೆ ಸಿಕ್ರ ಜನ್ಮನೇ ಜಾಲಾಡುವ ಖಾಕಿಯವ್ರಿಗೆ ಬೆಳ್ಳು ಕೊಟ್ರ ಹಸ್ತ ನುಂಗುವ ಕಲೆ ಕರಗತ ಇರ್ತಾದ. ಕತ್ತಲಾಗಿ ಬೆಳುಕು ಹರೆಟಿಗೆ ಯಾರ್ ಹೊಲಾನ ಯಾರು ಮಾಡ್ಯಾರ? ಅದು ಎಲ್ಲ್ಯಾದ? ಅಂಬ ಮಾಹಿತಿನ ತಮ್ಮ ಲಾಭಕ್ಕಾಗಿ ಏನಾದರೂ ಮಾಡುವ ಜನಗಳಿಂದ ಅತಿಸುಲಭದಾಗ ತೆಗಿಬೌದು. ಕೈಗೆ ಸ್ವರ್ಗ ಸಿಕ್ಕ ಖುಷಿಯಲ್ಲಿರೋ ನಾಗಪ್ಪ ಸಂಗವ್ವಗೆ ಎದುರು ಇರೋರಿಂದ ತನ್ಕೆಲಸ ಮಾಡಿಕೊಂಡ.
ಮಾಹಿತಿದಾರ ಹೊಲಾನ ತೋರ್ಸಾಕ ವಿಫಲ ಆದಮ್ಯಾಲೆ ನಾಗಪ್ಪಗ ನಿರಾಸೆ ಆಗಿತ್ತು. ಮಲ್ಲಾರೆಡ್ಡಿ ಅಂಬೋನು ರಾರಾವಿ ಗ್ರಾಮದಾಗ ಯಾರ ಹೊಲ ಮಾಡ್ಯಾನ? ಅಂತ ಯಾರ್ನು ಕೇಳಿದ್ರೂ ನನ್ಗ ಗೊತ್ತಿಲ್ಲ ನಿನ್ಗ ಗೊತ್ತಿಲ್ಲ ಅನಾಕತ್ತಿದ್ರು. ಕೈಗೆ ಬಂದ ತುತ್ತು ಬಾಯಿಗೆ ಬರ್ಲಾರ್ದಂಗ ಆಗಾಕತ್ತ್ಯಾದಲ? ಅಂತ ಕೊರಗಿದ ನಾಗಪ್ಪ ಇನ್ನಷ್ಟು ತಲೆ ಓಡ್ಸಿದ. ಅದು ಸಂಗವ್ವನ ಹೊಲಂತ ಗೊತ್ತಾದ ಮ್ಯಾಗ ಅಕಿಗೆ ಆಗದ ಕುಲಸ್ಥರ ಹಿಂದ ಬಿದ್ದು ಕೆಲ್ಸ ಮಾಡಿಕೆಂದ. ಹೊಲ ತೋರ್ಸೋ ವಿಷಯದಾಗ ಸ್ವಲ್ಪ ಗಡಿಬಿಡಿ ಆತಿ. ರಾತ್ರಿ ಹನ್ನೊಂದು ಗಂಟೆ ಮ್ಯಾಗ ಬಂದ್ರ ಹೊಲ ತೋರಸ್ತೀನಂತ ಮಾಹಿತಿದಾರ ಪಟ್ಟು ಹಿಡಿದ. ನಾವೈದಿವಿ ನಿನ್ಗ ಏನಾಗಾಕ ಬುಡಂಗಿಲ್ಲಂತ ನಾಗಪ್ಪ ಧೈರ್ಯ ಕೊಟ್ರೂ ಅವುನು ಮುಂದ ಬರ್ಲಿಲ್ಲ. ತೋರ್ಸಿದೋರು ಯಾರಂತ ಗೊತ್ತಾದ್ರ ಸಾಯತನ ಊರಾಗ ಕೆಟ್ಟೆಸ್ರು. ಕೆಲ್ಸ ಆಗಾತನ ಪೋಲಿಸ್ರು ಉಬ್ಬುಸ್ತಾರಂತ ಅವ್ನಿಗೆ ಚೊಲತ್ನಾಗಿ ಗೊತ್ತಿತ್ತು. ಒಂದಿನದ ಬಾಳೆವಲ್ಲ ಸಾರ್, ನಮ್ನ ಸಿಗೆ ಹಾಕಬ್ಯಾಡ್ರಿ ಸಾರ್ ಅಂತ ಕೈ ಮುಗುದು ಹಗಲತ್ತು ತೋರ್ಸಾಕ ಹಿಂದಕ ಸರ್ಕಂದ. ಕೆಲಸ ಆಗ್ಬೇಕಂದ್ರ ಕೆಲ್ವೊಮ್ಮೆ ಕೆಲಸ ಮಾಡಿಕೊಡೋರ ದಾರ್ಯಾಗ ಹೋಗ್ಬೇತಾದ. ಅವ್ರು ಹೇಳಿದಂಗ ಕೇಳ್ಬೇಕಾತದ. ನಾಗಪ್ಪನೂ ಹಂಗೆ ಮಾಡಿದ. ಮರುದಿನ ಚೂರ್ಜ ಮುಳುಗತನ ಕಾಯ್ದು ರಾತ್ರಿ ಹತ್ತು ಗಂಟೇಕ ಎಲ್ಲಾರೂ ಮಕ್ಕಂದ ಮ್ಯಾಲೆ ಮಾಹಿತಿದಾನ ಕರ್ಕಂದು ಸಂಗವವ್ವನ ಹೊಲದ ಕಡೆ ಹಾಲುಕುಡ್ಯಾ ಬೆಕ್ಕು ಸಪ್ಪಳಿಲ್ದಂಗ ಹೋಗುವಂಗ ಹೋಗಿ ಗಾಂಜಾ ಗಿಡಗಳು ಇರೋದನ್ನ ಖಾತ್ರಿ ಮಾಡಿಕೆಂದು ಬಂದ್ರು.
ಮಾಹಿತಿ ಫಕ್ಕಾ ಇದ್ದರೂ ಅವತ್ತು ರಾತ್ರಿನೇ ರೈಡು ಮಾಡಲಿಲ್ಲ. ಅದಕ್ಕೆ ಕಾರಣ- ನಮ್ಮನ್ನು ಯಾರೂ ನೋಡಿಲ್ಲೆಂಬ, ಸುದ್ದಿ ಗೊತ್ತಾಗಿ ಗಾಂಜಾ ಗಿಡ ಕಿತ್ತಿ ಹಾಕಂಗಿಲ್ಲೆಂಬ ಅಂಧವಿಶ್ವಾಸ ಅವರಲ್ಲಿತ್ತು. ರಾತ್ರಿಯಲ್ಲಿ ಘೋರ ಕೇಸು ಮಾಡಿದಾಗ ಸಾಕಷ್ಟು ತೊಂದರೆಗಳು ಆತಾವ. ಆರೋಪಿನ ಅರೆಸ್ಟ್ ಮಾಡಿದ್ರ ಅವ್ರಿಗೆ ಮೆಡಿಕಲ್ ಚಕಪ್ ಮಾಡಿಸ್ಬೇಕು. ಜಡ್ಜು ಸಾಹೇಬ್ರು ಬೆಳಿಗ್ಗೆ ಓಪನ್ ಕೋರ್ಟಿಗೆ ಬರ್ರಿ ಅಂತ ಹಿಂದಕ ಕಳಿಸಿದ್ರ ಬೆಳತನ ಆರೋಪಿನ ಕಚೇರಿದಾಗ ಇಟ್ಗಂದು ಕಣ್ಣಾಗ ಎಣ್ಣೆ ಬುಟ್ಗಂದು ಕಾಯೋದು ತುಂಬಾ ಕಷ್ಟದ ಕೆಲಸ. ಆರೋಪಿ ಪರಾರಿ ಆದ್ರ, ಹೆಚ್ಚುಕಮ್ಮಿ ಮಾಡಿಕೆಂದ್ರ ಕಾವಲಿಗೆ ಇದ್ದ ಸಿಬ್ಬಂದಿಗಳ ತಲೆದಂಡ ಆತಾದ. ಅಬಕಾರಿ ಕಚೇರಿದಾಗ ಪೋಲಿಸ್ ಸ್ಟೇಷನಲ್ಲಿ ಇರಂಗ ಆರೋಪಿಗಳನ ತಾತ್ಕಾಲಿಕವಾಗಿ ಇಡುವ ಸೆಲ್ ಇಲ್ಲ. ಆರ್ಥಿಕತೆಯಲ್ಲಿ ಸರ್ಕಾರಕ್ಕೆ ಬೆನ್ನೆಲುಬಾದ ಅಬಕಾರಿಯವ್ರಿಗೆ ಬಾಡಿಗಿ ಮನೇಲಿ ಜೀವನ ಮಾಡೋ ಪರಿಸ್ಥಿತಿ ಐತೆ. ಅವ್ರಿಗೆ ತಮುದು ಅಂತ ಸ್ವಂತ ಕಟ್ಟಡನೆ ಇಲ್ಲ.
ವಾಸ್ತವಾಂಶ ಹಿಂಗಿರುವಾಗ ತಮ್ಮ ರಕ್ಷಣೆಯೂ ಮುಖ್ಯ ಅಂತ ಭಾವಿಸುವ ಲೋಕನೌಕರರು ತಮಗ ಬೇಕಾದಂಗ ಸಣ್ಣಪುಟ್ಟ ಬದಲಾವಣೆನ ಮಾಡಿಕೆಂತಾರ. ಪೇದೆ ನಾಗಪ್ಪನು ಸಂಗವ್ವನ ಹೊಲದಾಗ ನಿಂತು ಇನ್ಸಪೆಕ್ಟರ್ ಸಾಹೇಬ್ರಿಗೆ ಪೋನ್ ಮಾಡಿದ್ದ. ಅವ್ರು ಹೇಳಿದ್ದು ಅದನ್ನೆ- ಈಗ ವಾಪಸ್ ಬರ್ರಿ. ನಾಳೆ ಬೆಳಿಗ್ಗೆ ಜಲ್ದಿ ರೆಡಿಯಾಗ್ರಿ. ನೀನು ಶಿವರಾಜ ಆರ್ಗಂಟೆ ಅನಟಿಗೆ ಸ್ಪಾಟಿಗೆ ಹೋಗ್ರಿ. ನಾನು ಹತ್ತು ಗಂಟೇಕ ತಸಿಲ್ದಾರ ಸಾಹೇಬ್ರನ ಭೆಟ್ಯಾಗಿ ಕರ್ಕಂದು ಬರ್ತಿನಿ. NDPS ಡಾಕುಮೆಂಟ್ ಮಾಡಾಕ ತುಂಬಾ ಟೈಮು ತಗಂತಾದ. ಆರೋಪಿನ ಆದಷ್ಟು ಜಲ್ದಿ ಜೈಲಿಗೆ ಬುಟ್ಟು ಬರ್ಬೇಕು. ರಾತ್ರಿ ಹತ್ಗಂಟೆ ಆದಮ್ಯಾಲೆ ಮನೆಕಡೆ ಬರಬ್ಯಾಡ್ರಿ ಅಂತ ಜಡ್ಜು ಸಾಹೇಬ್ರು ಮೊನ್ನೆನೆ ವಾಪಸ್ ಕಳ್ಸಿಲ್ಲನು? ಅವತ್ತು ಬೆಳತನ ಕಾದು ಬೆಳಿಗ್ಗೆ ಕೋರ್ಟಿಗೆ ಕರ್ಕಂದು ಹೋಗಿಲ್ಲನು? ಈಸಲ ಆ ರಿಸ್ಕೇ ಬ್ಯಾಡ ಅಂತ ಯೋಜನೆ ಹೇಳಿದರು. ಇವತ್ತುನೂ ತಡ ಆತೆಂದ್ರ ಆರೋಪಿನ ಯಾರು ಕಾಯೋದು? ಅಂಬ ಅಂಜಿಕೆ ನಾಗಪ್ಪಗ ಕಾಡಾಕತ್ತಿತ್ತು. ಆರೋಪಿನ ಹೆಣ ಕಾಯ್ದಂಗ ಬೆಳತನ ಕಾಯೋದು ಇಡೀ ಸರ್ವಿಸದಾಗ ಬ್ಯಾಡಾದ ಕೆಲಸ ಆಗಿತ್ತು.
ಅಬಕಾರಿ ಜೀಪುಗಳು ಸಂಗವ್ವನ ಹೊಲದ ಕಡೆ ಬಂದ ಮ್ಯಾಲೆ ಮಲ್ಲಾರೆಡ್ಡಿ ಊರು ಬಿಟ್ಟ. ಸಂಗವ್ವಗೂ ಬೀಗರೂರಿಗೆ ಹೋಗಂತ ಬೇಕಾದೋರು ಹೇಳಿದ್ರು. ಆರೋಪಿಗಳು ನಾಪತ್ತೆ ಆಗಿದ್ರಿಂದ ಎಮ್ಮೆಲ್ಲೆ ಸಾಹೇಬರು ಅಡ್ಡ ಬಂದದ್ಕ ಅಳಿದುತೂಗಿ ಮಲ್ಲಾರೆಡ್ಡಿ ಮೇಲೆನೆ ಪರಾರಿ ಪ್ರಕರಣ ದಾಖಲಾತಿ.
ಹೆಚ್ಚಿನ ತನಿಖೆಗಾಗಿ ಹೊಲದ ಮಾಲೀಕರನ್ನ ತನಿಖಾಧಿಕಾರಿಗಳು ಕಚೇರಿಗೆ ಕರೆಸಿದ್ರು. ತಮ್ಮ ಹೊಲದ ಮ್ಯಾಲೆ ಕೇಸಾದ ಸುದ್ದಿ ಕೇಳಿ ಎದೆಗುಂಡಿಗಿ ಒಡೆದಂತಾಗಿದ್ದ ಪಂಪಣ್ಣ ಎದ್ನೋ ಬಿದ್ನೋ ಅಂತ ಎಮ್ಮೆಲ್ಲೆ ಪಿಎನ ಮುಂದಾಕ್ಕೆಂದು ಅಬಕಾರಿ ಕಚೇರಿಗೆ ಬಂದ. ಯಾರೇ ಕೈ ಹಾಕಿದ್ರೂ ಗಾಂಜಾದ ಕೇಸ್ ನ ಮುಚ್ಚಿ ಹಾಕಂಗ ಇರ್ಲಿಲ್ಲ.
“ಆ ಮಲ್ಲಾರೆಡ್ಡಿನ ಹಿಡ್ಕಂದು ಬರ್ಬೇಕು. ಹಂಗಾದ್ರ ನಿಮ್ನ ಬುಡ್ತಿನಿ. ಇಲ್ಲಂದ್ರ ನಿಮ್ನ ಕೇಸಾಗ ಸೇರುಸ್ತೀನಿ” ಅಂತ ಪಂಪಣ್ಣಗ ಮಕದಾಗ ನೀರು ಇಳೆಂಗ ಸಾಹೇಬ್ರು ಹೇಳಿದ್ರು. ಬಿಲಿಪಾಢ್ಯಮಿಗೆ ಕಚೇರಿಗೆ ಪೂಜೆ ಮಾಡಿರ್ತಾರಲಾ! ಅದ್ಕ ಸ್ಟೇಷನ್ ಒಳಗ ಅಧಿಕಾರಿಗಳಿಗೆ ನೂರಾನೆ ಬಲ ಇರ್ತಾದ. ಎಮ್ಮೆಲ್ಲೆ ಕಡಿಂದ ಬಂದ್ರೂ ಮಿನಿಷ್ಟರ್ ಕಡಿಂದ ಬಂದ್ರೂ ಜೋರು ಮಾತ್ರ ಕಮ್ಮಿ ಆಗಂಗಿಲ್ಲ. ಸ್ಟೇಷನದಾಗ ಹುಲಿನೂ ಇಲಿ ಆತಾದ. ಆದ್ರೂ ಕ್ಷೇತ್ರದ ಶಾಸಕರನ್ನ ಎದುರು ಹಾಕ್ಕೆಂದೂ ನೌಕ್ರಿ ಮಾಡಾದು ಸವಾಲಿನ ಇತ್ತು. ಅದ್ಕ ನನ್ ಕೈಲಾದ ಸಹಾಯ ಮಾಡ್ತೀನಂತ ನಿರೀಕ್ಷಕರು ಒಪಿಗೆಂದ ಮ್ಯಾಲೆನೆ ಪಂಪಣ್ಣ ಉಸುರಾಡಿಕ್ಯಾಂತ ಊರಿಗೆ ಹೋದ.
ಹೊಲದ ಮಾಲಿಕರನ್ನ ಕೇಸಾಗ ಸೇರಿಸೋ ಪ್ರಾವಿಜನ್ ಇದ್ದರೂ ಉಳಿಸೋ ಪ್ರಯತ್ನ ನಡುದಿತ್ತು. ಅಕಸ್ಮಾತ್ ಆರೋಪಿ ಸಿಕ್ರ ಅವನ ಕಡಿಂದ- ಇಂತವರ ಹೊಲಾನ ನಾನೇ ಪಾಲಿಗೆ ಮಾಡಿದ್ದು, ನಾನೇ ಗಾಂಜಾ ಹಾಕಿದ್ದು, ಈ ಗಾಂಜಾನ ಬೆಳ್ಯಾಕ ಹೊಲದ ಮಾಲಿಕರ ಪ್ರೇರಣೆ ಆಗಲಿ ಸಹಕಾರ ಆಗಲಿ ಇಲ್ಲ. ಈ ಗಾಂಜಾ ಕೇಸಿಗೂ ಹೊಲದ ಮಾಲಿಕರಿಗೂ ಯಾವುದೇ ಸಂಬಂಧ ಇಲ್ಲ. ಇದೆಲ್ಲಾ ನಾನೇ ಮಾಡಿದ್ದು, ಇದ್ಕೆಲ್ಲಾ ನಾನೇ ಹೊಣೆ ಎಂಬ ಸ್ವಖುಷಿ ಹೇಳಿಕೆ ಬರಿಸಿಕೊಂಡು ಮಲ್ಲಾರೆಡ್ಡಿನ ಜೈಲಿಗೆ ಹಾಕಿದ್ರ ಮಾತ್ರ ಸಂಗವ್ವ ಮತ್ತು ಅಕಿನ ಮಕ್ಕಳನ್ನು ಪ್ರಕರಣದಿಂದ ಬಚಾವು ಮಾಡಬೌದಿತ್ತು. ಇನ್ಸಪೆಕ್ಟರ್ ಸಾಹೇಬ್ರಿಗೆ ಇಂತದ್ರಾಗ ಸಾಕಷ್ಟು ಅನುಭವ ಇತ್ತು. ಕೆಲವು ಸೇಂದಿ, ಮದ್ಯದ ಕೇಸಗಳಾಗ ಗಾಡಿ ಮಾಲಕರನ್ನ ಇದೇ ಆಧಾರದ ಮ್ಯಾಗ ಬುಟ್ಟಿದ್ದರು. ಅದೇ ಧೈರ್ಯ ಅವ್ರಿಗೆ ಈಗಲೂ ಇತ್ತು. ತನಿಖಾಧಿಕಾರಿಗೆ ಹಿಂಗೇ ತನಿಖೆ ಮಾಡ್ರಿ ಅಂತ ಯಾವ ಕಾನೂನು ಪುಸ್ತುಕದಾಗೂ ಹೇಳಿಲ್ಲ. ಯಾರ ನಿರ್ದೇಶನನೂ ಇಲ್ಲ. ಅದರ ಲಾಭಾನ ಎಷ್ಟೋ ತನಿಖಾಧಿಕಾರಿಗಳು ತಗಂತಿರೋದು ಸುಳ್ಳಲ್ಲ!!
ಕಾನೂನಿನ ಅರುವು ಇಲ್ಲದ ಸಂಗವ್ವ ಮತ್ತು ಅಕಿನ ಮಕ್ಕಳು ಲೋಕಾರೂಢಿಯಂಗ ವೈರಿ ಅಲ್ಲದ ಮನುಷ ನಮಗೇನು ಮಾಡ್ತಾನ? ನಮುಗ್ಯಾಕ ಮೋಸ ಮಾಡ್ತಾನ? ಅನಕಂದು ಮಲ್ಲಾರೆಡ್ಡಿ ಬೊಗಳೆ ಮಾತು ಕೇಳಿಕೆಂದು ರಕ್ಕದಾಸಿಗೆ ಬಿದ್ದು ಯಾವುದೇ ದಾಖಲೆ ಬರಿಸೆಲಾರ್ದಂಗ ತಮ್ಮ ಹೊಲಾನ ಅವ್ನಿಗೆ ಪಾಲಿಗೆ ಕೊಟ್ಟಿದ್ರು. ಮಲ್ಲಾರೆಡ್ಡಿ ಮೂಲತಃ ಎಲ್ಲಿಯೌನು? ಅಂತಾನೂ ತಿಳ್ಕಂದಿಲ್ಲ. ಆಧಾರ ಕಾರ್ಡು, ಓಟಿಂಗು ಕಾರ್ಡುನೂ ಚೆಕ್ಕು ಮಾಡಿಲ್ಲ. ಮನುಷನ ನಂಬಲಾರ್ದ ಮತ್ಯಾರ್ನ ನಂಬಬೇಕಂತ ನಂಬಿಕೆಯ ಮ್ಯಾಲೆ ನಂಬಿಕೆ ಇಟ್ಟಿದ್ರು. ನಮುದು ಆಂಧ್ರ, ಕರ್ನೂಲಾಗ ನಮುವು ಮನೆಗಳು ಐದಾವ ಅಂತ ಮಲ್ಲಾರೆಡ್ಡಿ ಹೇಳಿಕೆಂದಿದ್ದ. ಈಗ ಅಷ್ಟು ದೊಡ್ಡದಾಗ ಕರ್ನೂಲಾಗ ಮಲ್ಲಾರೆಡ್ಡಿಯನ್ನ ಎಲ್ಲೆಂತ ಹುಡುಕೋದು? ಅಣತಮ್ರು ಹೋಗಿ ಹುಡುಕಿ ಬಂದ್ರೂ ಪ್ರಯೋಜನ ಆಗ್ಲಿಲ್ಲ. ಅವುನು ಕ್ರಿಮಿನಲ್ ಐದಾನ. ನಿಮುಗ ಖಂಡಿತ ಸಿಗಂಗಿಲ್ಲಂತ ಇನ್ಸಪೆಕ್ಟರ್ ಸಾಬ್ರು ಮೊದ್ಲೇ ಹೇಳಿದ್ರು.
ಮೂರು ಹಡುದು, ಅವ್ರ ಮದುವಿ ಮಾಡಿ, ಮೊಮ್ಮಕ್ಕಳನ್ನ ನೋಡಿ, ಮುಪ್ಪಾನ ಮುದೇಕಿ ಆಗಿ ನಡ್ಯಾಕ ಬರ್ಲಾರದ ಸಂಗವ್ವಗ ಮುಂದೊಂದು ದಿನ ಹಿಂಗಾತದಂತ ಕನುಸೂ ಬಿದ್ದಿದ್ದಿಲ್ಲ. ತಾನು ಸೊಸೆಯಾಗಿ ಬಂದಾಗ ಹಿರೇರು ಮಾಡಿದ ಆಸ್ತೀನ ಕುಡುಕ ಗಂಡ ಮಾರಿಕೆಂದು ತಿಂತಾನಂತ ಅವ್ನು ಜೀವಂತ ಇರಾಕಲ್ಕೇ ಮಾವನ ಹೆಸ್ರಿಲೆ ಇದ್ದ ಹೊಲಾನ ತನ್ನ ಹೆಸ್ರಿಗೆ ಮಾಡಿಕೆಂದಿದ್ಲು. ಹೊಲ ನನ್ನೆಸ್ರಿಗೆ ಆಗ್ಯಾದಂತ ಹಿಗ್ಗೇನು ಇರ್ಲಿಲ್ಲ. ಮಕ್ಕಳನ್ನ ಬೆಳುಸಾದು, ಗಂಡನ ಸಂಬಳಸದ್ರಗನೇ ಅಕಿನ ಅಂಗಾಮ ಕಳುದಿತ್ತು. ಮುದ್ದಿನ ಹೆಂಡರ ಶೂರಮಕ್ಕಳ ಮಾತು ಕೇಳಿ ಪಿರ್ತಾರ್ಜಿತ ಆಸ್ತಿನ ಭಾಗ ಮಾಡಿದ್ಲು. ಅವ್ವ ಸತ್ತ ಮ್ಯಾಗ ನಮ್ಮೆಸ್ರಿಗೆ ಮಾಡಿಕ್ಯಾಮು ಅಂತ ಪಂಪಣ್ಣ, ಸಿದ್ದಪ್ಪ ಒಂದೆಲ್ಡು ಸಲ ಮಾತಾಡಿಕೆಂದಿದ್ರು. ಅಷ್ಟ್ರಾಗ ಇಷ್ಟೆಲ್ಲಾ ಆಗಿತ್ತು.
ತಪ್ಪು ಮಾಡಿದ್ರ ಮನಸಾಕ್ಷಿ ಅನ್ನಾದು ಒಬ್ರೆ ಇದ್ದಾಗ ಕಾಡ್ತಾದ. ಈಗ ತನಿಖಾಧಿಕಾರಿಯ ಮುಂದ ಎರಡು ತೊಳಲಾಟಗಳು ಇದ್ದವು. ಸಂಗವ್ವನ ಆಸ್ತಿ ಭಾಗ ಆಗಿದ್ದು ನಿಜವಿತ್ತು. ಆಬಗ್ಗೆ ಊರಲ್ಲಿ ಪಂಚಿನಾಮೆ ಮಾಡಿದಾಗ ಗೊತ್ತಾತಿ. ಪಂಪಣ್ಣ ಮತ್ತು ಸಿದ್ದಪ್ಪರು- ಆ ಹೊಲ ನಮ್ ಪಾಲಿಗೆ ಬಂದಾದ. ಹೊಲದ ಆಗುಹೋಗುಗಳಿಗೆ ನಾವೇ ಜವಾಬ್ದಾರ್ರು ಅಂತ ಒಂದು ಪತ್ರ ಬರ್ದು ಕೊಟ್ಟರೆ ಮತ್ತು ಸಂಗವ್ವ- ನಾನು ನನ್ನ ಮಕ್ಳಿಗೆ ಹೊಲಾನ ಭಾಗಮಾಡಿ ಕೊಟ್ಟೀನಿ. ಹೊಲ ಭಾಗ ಆದಮ್ಯಾಲೆ ಆ ಹೊಲಕೂ ನನಗೂ ಯಾವ ಸಂಬಂಧ ಇಲ್ಲಂತ ಹೇಳಿಕೆ ಕೊಟ್ಟರೆ, ಹೊಲದ ದಾಖಲೆಗಳು ಸಂಗವ್ವನ ಹೆಸ್ರಾಗ ಇದ್ದರೂ ಅಕಿನ ಈ ಪ್ರಕರಣದಿಂದ ಕೈ ಬಿಡಬೌದಿತ್ತು. ಆದರೆ ಈಗ ಯವ್ವನಕ್ಕೆ ಕಾಲಿಟ್ಟ, ತಮ್ಮದಲ್ಲದ ತಪ್ಪಿನಿಂದ ಜೈಲು ಪಾಲಗಲಿರುವ ಪಂಪಣ್ಣ ಮತ್ತ ಸಿದ್ದಪ್ಪನ ಬಗ್ಗೆ ಯೋಚಿಸುವುದಾದರೆ, ಮುದುಕಿ ಸಂಗವ್ವನ ಮ್ಯಾಲೆನೆ ಚಾರ್ಜುಶೀಟು ಹಾಕೋದು ಸರಿಯಿತ್ತು. ಸಂಗವ್ವ ಹೆಂಗಿದ್ರೂ ಪೂರ್ಣ ಬದುಕು ಕಂಡವಳು. ಅಕಸ್ಮಾತ್ ಕೇಸು ಕೋರ್ಟಲ್ಲಿ ನಡಿವಾಗಲೇ ಅಕಿ ಸತ್ತರೆ ಆ ಕೇಸು ಅಲ್ಲಿಗೆ ಮುಕ್ತಾಯ ಆತಾದ.
ಮೂರು ತಿಂಗಳು ಒಳಗ ಚಾರ್ಜಶೀಟ್ ಕೋರ್ಟಿಗೆ ಕೊಡ್ಬೇಕಿತ್ತು. ಇನ್ನೂ ಮಲ್ಲಾರೆಡ್ಡಿಯ ಪತ್ತೆ ಆಗರಲಿಲ್ಲ. ಮಲ್ಲಾರೆಡ್ಡಿ ಸಿಕ್ಕು- ನಾನೇ ಈ ಕೃತ್ಯ ಮಾಡೀನಂತ ಒಪ್ಪಿಕೊಳ್ಳದ ಹೊರತು ಹೊಲದ ಮಾಲೀಕರನ್ನು ಕೇಸಿಂದ ಕೈ ಬಿಡಾಕ ಬರುತ್ತಿರಲಿಲ್ಲ. ಆರೋಪಿ ನಾಪತ್ತೆಯಾದರೆ ಅಥವ ಗುರುತಿಸಲು ಅಸಾಧ್ಯವಾದರೆ ಕೃತ್ಯ ನಡೆದ ಜಾಗ ಅಥವ ವಸ್ತು ಯಾರ ಹೆಸರಲ್ಲಿ ಇರ್ತಾದೋ ಆ ವ್ಯಕ್ತಿಗಳನ್ನ ಆರೋಪಿಗಳನ್ನಾಗಿ ಮಾಡುವ ಪ್ರಕ್ರಿಯೆ ಕಾನೂನಿನಾಗ ಐತಿ.
ಕೊನೆದಿನ ತನಿಖಾಧಿಕಾರಿಗಳು ಸಂಗವ್ವನ ಕುಟುಂಬಾನ ಕಚೇರಿಗೆ ಕರಿಸಿದ್ರು. ಸ್ಟೇಷನ್ ಮೆಟ್ಟಿಲು ಅತ್ತದ ಸಂಗವ್ವ ಖಾಕಿಮಂದಿನ ಕಂಡು ಕಕ್ಕಾಬಿಕ್ಕಿ ಆದ್ಲು. “ನಾನು ಹೇಳಿದೆಲೋ ಅವ್ನಿಗೆ ಹೊಲ ಕೊಡಬ್ಯಾಡ್ರೆಂತ! ಅವತ್ತು ನನ್ಮಾತು ಕೇಳಿದ್ರ ಇವತ್ತು ಈ ಗತಿ ಬರ್ತಿತ್ತನಲೋ! ನಿಮ್ಗ ಏನು ಮಾಯಾ ಮುಚ್ಚಯಾದನಲೋ! ನಾನು ಸತ್ರ ಎಲ್ಲಾ ಚೊಲಾತದಂತ ಕಾಣ್ತದಲೋ” ಅಂತ ಸತ್ತಾಗ ಅಳುವಂಗ ಚಾಲು ಮಾಡಿದ್ಲು. “ಇದೇನು ಮನೆಂತ ತಿಳಿದಿದ್ಯಾ, ಏನ ಸ್ಟೇಷನಂತ ತಿಳಿದಿದ್ಯಾ?” ಅಂತ ಸಾಹೇಬರು ಗದರಿದಾಗ ಸೆರಗಿಲೆ ಗಪ್ನ ಬಾಯಿ ಮುಚಿಗೆಂದ್ಲು. ಅಕಿನ ಕಣ್ಣಾಗ ನೀರು ಸೋರಾಕ ಶುರು ಮಾಡಿತ್ತು. ಸಂಗವ್ವ ಕಣ್ಣುನ ಕೆಳಗ ಮ್ಯಾಗ ಮಾಡಾದು ನೋಡಿ ಇದೇನು ಬಂತಪ ಅಂತ ಸಾಹೇಬರು ಸೊಲ್ಪ ಅಳುಕಿದದ್ರೂ ತುಳುಕಾಡಲಿಲ್ಲ. ತಾಯಿನ ರಮುಸಾಕ ಮಕ್ಳಿಗೆ ಹೇಳಿದ್ರು. ಆಮ್ಯಾಲೆ ಮೂವ್ರನ ಎದುರಿಗೆ ಕೂಡಿಸಿಕೊಂಡು ಅರ್ಥಾಗುವಂಗ ತಿಳಿಸಿದ್ರು. ಆರೋಪಿಗಳದು ಒಂದೇ ಬೇಡಿಕೆ; ನಮ್ನ ಈ ಕೇಸಿಂದ ಕೈಬುಡ್ರಿ ಅಂಬೋದು. ಕೇಸಿಗೆ ಒಬ್ಬರಾದ್ರೂ ಆರೋಪಿ ಬೇಕು, ಇಬ್ರುನ ಬುಡಾಕ ಬರಂಗಿಲ್ಲ ಆನ್ನುವ ತನಿಖಾಧಿಕಾರಿಗೆ ವಿಚಿತ್ರ ವೇದನೆ ಅನುಭವಿಸುವಂಗ ಆಗಿತ್ತು.
ಸಾಹೇಬರ ಕೆಂಡದಂತ ಮಾತುಗಳನ ಕೇಳಿ ಸಂಗವ್ವ ರೆಪ್ಪಿ ಬಡಿಲಾರ್ದಂಗ ಗ್ವಾಡೆ ನೋಡಾಕತ್ತಿದ್ಲು. ಪಂಪಣ್ಣ, ಸಿದ್ದಪ್ಪ ಮಕಮಕ ನೋಡಾಕತ್ತಿದ್ರು. ಇಬ್ರಿಗೂ ಈ ಕೇಸಾಗ ಸೇರಾಕ ಸುತರಾಂ ಇಷ್ಟ ಇರ್ಲಿಲ್ಲ. ಕೊನೆಗೆ ಹಡೆದವಳ ಕಡೆ ದೃಷ್ಟಿ ಹಾಯಿಸಿದ್ರು. ನೀನೇ ಏನನ ಮಾಡಿ ನಮ್ನ ಪಾರು ಮಾಡಂಗೆ ಅಂಬಂಗಿತ್ತು ಅವರ ನೋಟ. ತಾಯಿ ಮನಸು ಮಾಡಿದ್ರ ತಾವು ಓಳಾತೀವಿ ಅಂಬ ಭರವಸೆ ಅವರೊಳಗೆ ಮೂಡಿತ್ತು. ಇಲ್ಲಂದ್ರ ಜೈಲೂಟ ಉಣಬೇಕಾತದಂಬ ಭಯಾನೂ ಕಾಡಾಕತ್ತಿತ್ತು.
ಮಕ್ಕಳು ಮಾಡಿದ ಪಾಪಗಳು ಸೊಸಿದೊರು ಕೊಟ್ಟ ಕಷ್ಟಗಳು ಸಂಗವ್ವನ ಮುಂದ ಕುಣಿದಾಡಿದವು. ಮಕ್ಕಳಿಗೆ ಪಾಠ ಕಲಸಾಕ ಅವಕಾಶ ಇದ್ದರೂ ಅಕಿ ತನ್ನ ಮಕ್ಕಳನ್ನ ಬುಟ್ಟು ಕೊಡಲಿಲ್ಲ. ಅವ್ರುನ ಜೈಲಿಗೆ ಕಳಿಸುವ ಯೋಚನೇನೂ ಮಾಡಲಿಲ್ಲ. ಅದೇ ಮಕ್ಕಳನ್ನು ಹಡಿಯುವಾಗ ಸಾಕಷ್ಟು ನೋವು ಉಂಡಿದ್ದು ಅಕಿಗಿನ್ನೂ ನೆನಪಾದ. ಹೆರಿಗೆ ಆಗಾಕಲ್ಕ ನಾನು ಸತ್ರೂ ಪರ್ವಾಗಿಲ್ಲ ನನ್ ಮಕ್ಳು ಉಳಿಬೇಕು ಅಂತ ಮಕ್ಕಳಿಗಾಗಿ ತನ್ನ ಜೀವಕ್ಕೆ ಬೆಲೆ ಕೊಡದ ಅಕಿ ಜುಜುಪಿ ಜೈಲಿನ ವಿಷಯದಲ್ಲಿ ಗಂಡುಮಕ್ಕಳನ್ನ ಬಿಟ್ಟು ಕೊಡ್ತಾಳ? ತನ್ನದಲ್ಲದ ತಪ್ಪನ್ನು ತನ್ನ ಮ್ಯಾಲೆ ಹಾಕಿಕೊಂಡಳು. ಭಾಗ ಮಾಡಿದ ಆಸ್ತಿಗೆ ಮಕ್ಕಳನ್ನ ಉಳಿಸಾಕ ಮತ್ತೆ ವಾರಸುದಾರಳಾದಳು. ಮನ್ಯಾಗ ತನ್ಮಾತು ನಡಿತಿತ್ತಂದ್ರ ಆ ಮಲ್ಲಾರೆಡ್ಡಿಗೆ ಹೊಲಾನೇ ಕೊಡ್ತಿರಲಿಲ್ಲ. ಭೂಮಿತಾಯಿ ಕೊಟ್ಟಷ್ಟು ಕೊಡ್ಲಿ ನಾವೇ ಮಾಡಿಕೆಂದು ತಿನ್ಬೇಕೆಂಬ ವಾದ ಸಂಗವ್ವಂದು ಆಗಿತ್ತು.
ಸೊಲ್ಪ ಸಮಯ ಆದ ನಂತರ…
“ನನ ಮಕ್ಳು ಏನೂ ತಿಳಿಲಾರ್ದೋರು ಸಾರ್. ನಾವು ಓದಿಲ್ಲ ಸಾರ್. ನಮುಗ ಕಾನೂನು ಗೊತ್ತಿಲ್ಲ ಸಾರ್. ಯಾವನ್ನಾ ನಂಬಿ ಮಾಡ್ಕೆಂದು ತಿಂತಾನಂತ ಹೊಲ ಕೊಟ್ಟಾರ. ಅವ್ನು ನಮ್ನ ಸಿಗೆ ಹಾಕಿ ಓಡಿ ಹೋಗ್ಯಾನ. ನೀವು ಏನನ ಮಾಡ್ರಿ. ಕೋಟಿಗೆನ ಹಾಕ್ರಿ, ಜೈಲಿಗೆನ ಹಾಕ್ರಿ. ನಂದೇನು ಎಲ್ಲಾ ಆಗ್ಯಾದ. ನನ ಮಕ್ಳು ಬಾಳಿ ಬದ್ಕಬೇಕಾದೋರು” ಅಂತ ಮತ್ತೆ ಗಳಗಳ ಅಳಾಕ ಶುರು ಮಾಡಿದ್ಲು. ಅಕಿ ಹೇಳದ್ರಾಗ ಸಂಗವ್ವನ ನಿಲುವು ಸಾಹೇಬರಿಗೆ ಗೊತ್ತಾತಿ. ಸಂಗವ್ವನ ಜೈಲಿಗೆ ಹಾಕಾಕ ತಯಾರಿ ನಡಿತಿ. ಅಕಿನ ಕೈಗೆ ಬೇಡಿ ತೊಡಿಸಿದ್ರು. ಲೇಡಿ ಕಾನಸ್ಟೇಬಲ್ಗಳು ತಲಾಕೊಂದು ಕೈ ಹಿಡಿದ್ರು. ಬಳ್ಳಾರಿ ಜೈಲಿಗೆ ಹೋಗಾಕ ಕಚೇರಿ ಜೀಪು ತಯಾರಾತಿ. ಸಂಗವ್ವ ಕಲ್ಮನುಸು ಮಾಡಿ ಜೀಪಾಗ ಕುಂದ್ರಾಕ ಹೊಂಟಳು. ಇನ್ನೇನು ಗಾಡ್ಯಾಗ ಕುಂದುರ್ಬೇಕು “ಯವ್ವಾನಮ್ನ ಕ್ಷಮಿಸಿ ಬುಡಂಗೆ, ನಮ್ಮಿಂದ ತಪ್ಪಾತೆಂಗೆ” ಅಂತ ಇಬ್ಬರು ಮಕ್ಕಳು ಕಣ್ಣೀರು ಸುರಿಸುತ್ತಾ ತಾಯಿಯ ಕಾಲು ಹಿಡಿದ್ರು. ತಾಯಿ ಮತ್ತು ಮಕ್ಕಳ ಪೇಚಾಟ ನೋಡಿ ಸಾಹೇಬರ ಕಲ್ಲು ಮನಸು ಕರಗಿದಂಗ ಆತಿ. ಈ ಕೇಸ್ನ ಯಾಕನ ಮಾಡಿದ್ವೆನು ಅಂಬ ಭಾವನೆ ಮಿಂಚಂಗ ಸುಳಿದು ಹೋತಿ.
ಸಾಹಿತಿ: ಶ್ರೀ ಅಕ್ಬರ್ ಅಲಿ, ಕುರಕುಂದ
ಅಬಕಾರಿ ಇಲಾಖೆ, ಸಿರುಗುಪ್ಪ ವಲಯ