ವಾಸ್ತುಶಿಲ್ಪದ ತೊಟ್ಟಿಲು- ಐಹೊಳೆ

……ಮುಂದುವರೆದ ಭಾಗ

ಬೃಹತ್ ಶಿಲಾಗೋರಿಗಳು:

ಐಹೊಳೆಯ ಮೇಗುತಿ ದೇವಾಲಯದ ಪೂರ್ವಕ್ಕಿರುವ ಗುಡ್ಡದಮೇಲಿನ ಹರವಿನಲ್ಲಿ ಕೆಲವು ಬೃಹತ್ ಶಿಲಾ ಗೋರಿಗಳಿವೆ. ಇಲ್ಲಿ ಇಂಥಹ ಅವಶೇಷಗಳು ಮೊದಲು ಬಹಳವಿದ್ದು ಈಗ ಸುಮಾರು ಶಿಲಾಗೋರಿಗಳನ್ನು ಕಾಣಸಿಗುತ್ತವೆ. ಈ ಶಿಲಾಗೋರಿಗಳು ಒರಟು ಕಲ್ಲು ಬಂಡೆಗಳ ಮೇಲಿದ್ದು ಮೇಲೆ ಹೊದ್ದಿಸಲಾಗಿರುವ (ದಯಾಸಗಲ್ಲು) ಬಂಡೆಗಲ್ಲು 2.13 ಮೀಟರ ಅಗಲ ಮತ್ತು 20.32 ಸೆಂ.ಮೀ. ದಪ್ಪಮತ್ತು 3.05 ಮೀ. ಉದ್ದವಿದೆ.

ಪುರಾತತ್ವ ಇಲಾಖೆ ಉಗಮ:

ಭಾರತೀಯ ಪುರಾತತ್ವ ಸಂರಕ್ಷಣೆ ಇಲಾಖೆಯು (ಎ.ಎಸ್.ಐ) 1861ರಲ್ಲಿ ಬ್ರಿಟೀಷ್ ಆಡಳಿತ ಕಾಲದಲ್ಲಿ ರೂಪಗೊಂಡಿತು. ಅದರಂತಯೇ ಭಾರತೀಯ ಪುರಾತತ್ವ ಸಂರಕ್ಷಣೆಯ ಇಲಾಖೆಯು 17-10-1912ರ ರಾಜಪತ್ರದಲ್ಲಿ ಐಹೊಳೆಯ ಸ್ಮಾರಕಗಳನ್ನು ರಕ್ಷಣೆ ಮಾಡಲಿಕ್ಕೆ ಪ್ರತಿಪಾದನೆ ಹೊರಡಿಸಿತು. ನಂತರ 12-11-1914ರ ರಾಜ ಪತ್ರದಲ್ಲಿ ಆ ಸ್ಮಾರಕಗಳ ರಕ್ಷಣೆಗೆ ನಿರ್ಣಯ ಕೈಗೊಂಡಿತು. ಐಹೊಳೆಯಲ್ಲಿ 123 ದೇಗುಲಗಳಿದ್ದು ಅವನ್ನು ಪುರಾತತ್ವ ಇಲಾಖೆಯವರು 22 ವಿಭಾಗವಾಗಿ ವಿಂಗಡಿಸಿದ್ದಾರೆ. ಇವನ್ನು ಐಹೊಳೆಯಲ್ಲಿ ಅದರ ಸಮೀಪದ ಪರಿಸರದಲ್ಲಿ ಕಾಣುವಿರಿ.

ಖ್ಯಾತ ಕಲಾ ವಿಮರ್ಶಕ ಪರ್ಸಿಬ್ರೌನ್ ಐಹೊಳೆಯನ್ನು “ದೇವಾಲಯಗಳ ತೊಟ್ಟಿಲು” ಎಂದು ವರ್ಣಿಸಿರುತ್ತಾನೆ. ಈ ಪರ್ಸಿಬ್ರೌನ್ ಮತ್ತು ಹೆನ್ರಿ ಕಝನ ಎಂಬ ಬ್ರಿಟಿಷ ಅಧಿಕಾರಿಗಳು ಈ ದೇವಾಲಯಗಳ ಸರ್ವೇಕ್ಷಣಾ ಕಾರ್ಯವನ್ನು ಮಾಡುವ ಸಮಯದಲ್ಲಿ ಇಲ್ಲಿರುವ ಎಲ್ಲಾ ದೇವಾಲಯಗಳ ಒಳಗಡೆ ಸ್ಥಳೀಯ ಜನರು ವಾಸವಾಗಿದ್ದರು. ಅವರು ಈ ದೇವಾಲಯಗಳನ್ನು ತಮ್ಮಸ್ವಂತ ಮನೆಗಳನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿರುವ ಸಮಯದಲ್ಲಿ ಈ ಅಧಿಕಾರಿಗಳು ದೇವಾಲಯಗಳಿಗೆ ಭೇಟಿಕೊಟ್ಟು ಅವರ ಹೆಸರು ಉದ್ಯೋಗ, ಜಾತಿ ಕೇಳಿ ತಮ್ಮ ಪುಸ್ತಕದಲ್ಲಿ ಸೇರಿಸಲಾಗಿ ಮುಂದೆ ಈ ದೇವಾಲಯಗಳಿಗೆ ಸ್ಥಳೀಯ ಹೆಸರು ಬರಲು ಕಾರಣವಾಯಿತು.

ದೇವಾಲಯ ಕಲೆಯು ಇಲ್ಲಿ ಪ್ರಜ್ವಲವಾಗಬೇಕಾದರೆ ಎರಡು ವಾಸ್ತವಾಂಶಗಳಾದ “ಅಯ್ಯಾವೊಳೆಯು” 500 ಶಿಲ್ಪಕಲಾ ಪಂಡಿತರು ಹಾಗೂ ಕೇಂದ್ರ ವ್ಯಾಪಾರಿ ಸಂಘದ ಪ್ರೋತ್ಸಾಹ ಮತ್ತು ದೇವಾಲಯ ಎಂಬುದು ಗೋಚರಿಸುತ್ತದೆ. ನಿರ್ಮಾಣಕ್ಕೆ ಬೇಕಾದ ಕೆಂಪು ಮರಳುಗಲ್ಲಿನ ಸಮೃದ್ಧತೆ ಎಂಬುದು ಗೋಚರಿಸುತ್ತದೆ.

ಪ್ರಮುಖ ದೇವಾಲಯಗಳು:

1) ಗೌಡರ ದೇವಾಲಯ (5ನೆಯ ಶತಮಾನ) 2) ಲಡಾಕ್ ಖಾನ್ ದೇವಾಲಯ( ಕ್ರಿ.ಶ 450) 3) ಚಕ್ರ ಗುಡಿ (8ನೆಯ ಶತಮಾನ) 4) ಬಡಿಗೇರ ಗುಡಿ (ಸೂರ್ಯನ ಗುಡಿ 9ನೆಯ ಶತಮಾನ) 5) ಸೂರ್ಯನಾರಾಯಣ ದೇವಾಲಯ (7ನೆಯ ಶತಮಾನ ) 6) ದುರ್ಗದ ದೇವಾಲಯ ಕ್ರಿ.ಶ (742) 7) ನಾಯಿದರ ದೇವಾಲಯ 8) ಚಪ್ಪರದ ದೇವಾಲಯ( ಕ್ರಿ.ಶ 8 ನೆಯ) 9 ) ಅಂಬಿಗೇರ ದೇವಾಲಯಗಳ ಸಂಕೀರ್ಣ 10) ಚಿಕ್ಕಿಗುಡಿ ಸಮುದಾಯ (6- 7 ನೆಯ ಶತಮಾನ) 11) ಹುಚ್ಚಿನಲ್ಲಿ ದೇವಾಲಯ ಕ್ರಿ.ಶ 708 12) ರಾವಳಫಡಿ ಅಥವಾ ಬ್ರಾಹ್ಮಿಣಿ ಕಾಲ್ ಗುಹೆ (ಕ್ರಿ.ಶ 675 -700) 13) ಬೌದ್ಧ ಚೈತ್ಯಾಲಯ (ಕ್ರಿ.ಶ 6 ನೆಯ ಶತಮಾನ ) 14) ಮೇಗುತಿ ಜಿನಾಲಯ (ಕ್ರಿ.ಶ 634) 15) ಜೈನ ಗುಹೆ (ಕ್ರಿ.ಶ 675 -700) 16) ಚರಂತಿಮಠ 17) ಜೈನಬಸದಿಗಳು (11ನೆಯ ಶತಮಾನ) 18) ಮಲ್ಲಿಕಾರ್ಜುನ ದೇವಾಲಯಗಳ ಸಂಕೀರ್ಣ ( 8ನೆಯ ಶತಮಾನ) 19) ಜ್ಯೋತಿರ್ಲಿಂಗ ದೇವಾಲಯಗಳ ಸಂಕೀರ್ಣ 20) ವಿರೂಪಾಕ್ಷ ಗುಡಿ (ಗೌರಿಗುಡಿ 12ನೆಯ ಶತಮಾನ) 21) ತ್ಯಂಬಕೇಶ್ವರ ದೇವಾಲಯಗಳ ಸಂಕೀರ್ಣ (ಕ್ರಿ.ಶ 12) 22) ಕೂಂತಿ ಗುಡಿಯ ಸಮುಚ್ಚಯ 23) ಹುಚ್ಚಪ್ಪಯ್ಯ ಮಠ( 6ನೆಯ ಶತಮಾನ) 24) ಜೈನ ಗುಡಿಗಳ ಗುಂಪು 25) ರಾಚಿ ಗುಡಿ (11ನೆಯ ಶತಮಾನ) 26) ಎಣಿಯರ ಗುಡಿ (11 -12ನೇ ಶತಮಾನ) 27) ತಾರಬಸಪ್ಪ ಮತ್ತು ಹಳ್ಳಿ ಬಸಪ್ಪ ಸಂಕೀರ್ಣ 28) ಶ್ರೀ ರಾಮಲಿಂಗೇಶ್ವರ ದೇವಾಲಯಗಳ ಸಮೂಹ 29) ಗಳಿಗನಾಥ ದೇವಾಲಯಗಳ ಸಮುಚ್ಚಯ.

ಈ ಗ್ರಾಮವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ. ಇದು 5,000 ಜನಸಂಖ್ಯೆಯನ್ನು ಹೊಂದಿದೆ. ಈ ಐತಿಹಾಸಿಕ ಸ್ಥಳಕ್ಕೆ ಬರಲು ಅನೇಕ ರಸ್ತೆ ಸಾರಿಗೆ ಸಂಪರ್ಕದ ಸೌಲಭ್ಯಗಳಿವೆ. ಇದು ಹೊಸಪೇಟೆಯಿಂದ ಹುನಗುಂದ, ಅಮಿನಗಡ ಮಾರ್ಗವಾಗಿ 130 ಕಿ.ಮೀ. ಅಂತರದಲ್ಲಿದೆ. ವಿಜಾಪೂರದಿಂದ ಆಲಮಟ್ಟಿ ಡ್ಯಾಂ, ಕೂಡಲಸಂಗಮ, ಅಮಿನಗಡ ಮಾರ್ಗವಾಗಿ 115 ಕಿ.ಮೀ. ಅಂತರದಲ್ಲಿದೆ. ಬೆಳಗಾವಿಯಿಂದ ಯರಗಟ್ಟಿ, ಲೋಕಾಪೂರ, ಬಾಗಲಕೋಟ, ಶಿರೂರ ಮಾರ್ಗವಾಗಿ 181 ಕಿ.ಮೀ. ಅಂತರದಲ್ಲಿದೆ. ಹುಬ್ಬಳಿಯಿಂದ ನರಗುಂದ, ಬಾದಾಮಿ ಮುಖಾಂತರ 150 ಕಿ.ಮೀ. ಅಂತರದಲ್ಲಿದೆ. ಗದಗ ಮತ್ತು ಸೊಲ್ಲಾಪೂರ ರೈಲು ನಿಲ್ದಾಣಗಳಿಗೆ, ಬಾಗಲಕೋಟ ಮತ್ತು ಬಾದಾಮಿ ಹತ್ತಿರದಲ್ಲಿದೆ. ಬಾದಾಮಿಯಿಂದ ಬನಶಂಕರಿ, ಮಹಾಕೂಟ, ಐಹೊಳೆ, ಶಿವಯೋಗಮಂದಿರಕ್ಕೆ ರಸ್ತೆ ಸಾರಿಗೆ ಬಸ್ಸು ಮತ್ತು ಖಾಸಗಿ ಕಾರು, ಜೀಪು, ಆಟೋರಿಕ್ಷಾಗಳ ಸೌಲಭ್ಯಗಳಿವೆ.

ಐಹೊಳೆ ಗ್ರಾಮನಾಮ ವಿವೇಚನೆ:

ಗ್ರಾಮನಾಮಗಳ ಅಧ್ಯಯನವನ್ನು ಸ್ಥಳೀಯ ಭೌಗೋಳಿಕ, ರಾಜಕೀಯ, ಸಾಂಸ್ಕೃತಿಕ ಸ್ವರೂಪ ಹಾಗೂ ಇತಿಹಾಸಗಳನ್ನು ತೆರೆದು ತೋರಿಸುತ್ತದೆ. ಯಾವುದೇ ಗ್ರಾಮವನ್ನು ತೆಗೆದುಕೊಂಡರೂ ಅಲ್ಲಿ ಪಂಡಿತ, ಪಾಮರ ಮತ್ತು ನಿಜ ಎಂಬ ಮೂರು ಬಗೆಯ ನಿಷ್ಪತ್ತಿಗಳು ಕಂಡುಬರುತ್ತವೆ.

ಲೇಖಕರು: ವಿಶ್ವಾಸ್ ಡಿ .ಗೌಡ, ಸಕಲೇಶಪುರ