ಮನಸ್ಸಿನ ಸ್ಥಿತಿಪ್ರಜ್ಞತೆಯೇ ಆರೋಗ್ಯಕ್ಕೆ ಅಡಿಪಾಯ

ಮನುಷ್ಯನ ಮನಸ್ಸು ಸದಾ ಚಲಿಸುವ ಯಂತ್ರವಿದ್ದಂತೆ. ನಿದ್ರೆಯಲ್ಲಷ್ಟೇ ಮನಸ್ಸಿಗೆ ಅಲ್ಪ ವಿರಾಮ ಹಾಗೂ ವಿಶ್ರಾಂತಿ. ಮೆದುಳಿನ ಸಂದೇಶಗಳು ಮನಸ್ಸಿಗೆ ರವಾನೆಯಾಗುತ್ತದೆ. ಮನಸ್ಸು ಹೇಳಿದಂತೆ ನಾವು ಯಾವುದೇ ಕ್ರಿಯಾ ಕೆಲಸಗಳನ್ನು ಕಾರ್ಯರೂಪದಲ್ಲಿ ಮಾಡಲು ತೊಡಗಿಸಿಕೊಳ್ಳುತ್ತೇವೆ. ನಮ್ಮ ಮನಸ್ಸಿನ ತುಮುಲ ಒತ್ತಡ, ಮೋಹ ನಿರಾಸೆ, ನಿರೀಕ್ಷೆ ಎಲ್ಲಾ ಸಂಗತಿಗಳಿಗೂ ಮನಸ್ಸೇ ಮೂಲ ಕಾರಣ. ಮನಸ್ಸಿಗೂ ದೇಹಕ್ಕೂ ಪೂರಕವಾದ ಸಂಬಂಧವಿದೆ. ಭೌತಿಕ ಆಸೆಗಳೆಲ್ಲ ಕ್ಷಣಿಕ ಹಾಗೂ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ.

ಮನುಷ್ಯರಾದ ನಾವು ಸದಾ ಭ್ರಮಲೋಕದಲ್ಲೆ ಬದುಕುತ್ತಿರುತ್ತೇವೆ. ನಮ್ಮ ಭ್ರಮೆ ಕನಸುಗಳು ವಾಸ್ತವ ರೂಪಕ್ಕೆ ಯೋಜಿತವಾಗದಿದ್ದಾಗ ಮಾನಸಿಕವಾಗಿ ಚಿಂತೆಯಿಂದ ಬಳಲುತ್ತೇವೆ. ಮನಸ್ಸೆಂಬುದು ಲಗಾಮಿಲ್ಲದ ಕುದುರೆಯಂತೆ ಯಾವಾಗಲೂ ಕವಲುದಾರಿಗೆ ಚಲಿಸುತ್ತಿರುತ್ತದೆ. ಮತ್ತೊಬ್ಬರಲ್ಲಿ ಕ್ರೋಧ ದ್ವೇಷ, ಅಹಂಕಾರ, ದೋಷಪೂರಿತ ಕರ್ಮಗಳಿಂದ ಮನಸ್ಸು ಅಶಾಂತಿಯಿಂದ ಬಳಲುತ್ತದೆ. ನಮ್ಮ ಮಾನಸಿಕ ಶಕ್ತಿಯನ್ನು ಬಹಳವಾಗಿ ಉಪಯೋಗಿಸುವುದರಿಂದ ಶಾರೀರಿಕವಾಗಿ ದಣಿಯುತ್ತ ಜೊತೆಗೆ ಮನಸ್ಸಿನ ಶಕ್ತಿಯು ಕ್ಷೀಣಿಸುತ್ತದೆ. ನಾವು ಸಾಂಸಾರಿಕ ವಿಷಯಗಳ ಹೊರತಾಗಿ ವಿಶಾಲ ದೃಷ್ಟಿಯಲ್ಲಿ ಹೊರಬರಲು ಬಹಳಷ್ಟು ಸಾಧನ ಶೀಲರಾಗಬೇಕಾಗುತ್ತದೆ.

ಆರೋಗ್ಯವೆಂದರೆ ಮಾನಸಿಕ ದೈಹಿಕ ಎರಡರ ಆರೋಗ್ಯವು ಸಮಸ್ಥಿತಿಯಿಂದ ಕೂಡಿರಬೇಕು. ಉತ್ಸಾಹ ದೈಹಿಕ ಚಟುವಟಿಕೆಯಿಂದಿರುವುದು ಆರೋಗ್ಯಕ್ಕೆ ಪೂರಕವಾಗಿದೆ. ಮನಸ್ಸು ಪ್ರಸನ್ನವಾಗಿದ್ದರೆ ದೇಹವು ಆರೋಗ್ಯವಾಗಿರುತ್ತದೆ. ಮಾನಸಿಕ ನೆಮ್ಮದಿಯು ಸುಖ ಶಾಂತಿಯ ಜೀವನಕ್ಕೆ ಮೂಲವಾಗಿದೆ. ಕೆಲಸಗಳ ಅವಾಂತರ ಮನಸ್ಸಿನ ಒತ್ತಡ ನಿದ್ರಾಹೀನತೆ ಹಿಂದಿನ ಯಾಂತ್ರಿಕ ಜೀವನದಲ್ಲಿ ಸ್ಥಾನ ಗಳಿಸಿವೆ. ಕೌಟುಂಬಿಕ ವಾತಾವರಣದಲ್ಲೂ ಪರಸ್ಪರ ಹೊಂದಾಣಿಕೆಯ ಪ್ರೀತಿ ಅನ್ಯೋನ್ಯತೆಯ ಕೊರತೆ ಸಮಾಜದಲ್ಲಿ ಹೆಚ್ಚು ಕಂಡು ಬರುತ್ತಿದೆ. ಯಾವುದೇ ಸಾಂಸಾರಿಕ ಹಾಗೂ ಸಾಮಾಜಿಕ ಘಟನೆಗೂ ನಾವು ಯಾರನ್ನು ಹೊಣೆ ಮಾಡುವಂತ ಕಾಲವಲ್ಲವಿಂದು. ಬದಲಾದ ಕಾಲ ಪರಿಸರಕ್ಕೆ ಅನುಗುಣವಾಗಿ ನಾವು ಎಲ್ಲವನ್ನು ಯಥಾವತ್ತಾಗಿ ಸ್ವೀಕರಿಸುತ್ತಾ ಏನೇ ಘಟನೆಗಳಿಗೂ ನಾವು ಯಾರನ್ನು ದೂಷಿಸುವಂತಿಲ್ಲ. ಆಯಾ ಸಂದರ್ಭದಲ್ಲಿ ಏನಾಗುತ್ತದೋ ಅದನ್ನು ಒಪ್ಪಿಕೊಳ್ಳುವ ಮನೋ ಗುಣವನ್ನು ರೂಡಿಸಿಕೊಳ್ಳಬೇಕು. ಆಗುವುದೆಲ್ಲ ಒಳ್ಳೆಯದೇ ಎಂಬ ಭಗವಂತನ ನಂಬಿಕೆಯಲ್ಲಿ ಮನಸ್ಸು ಯಾವ ಒತ್ತಡಕ್ಕೂ ಒಳಗಾಗದೆ ಧನಾತ್ಮಕ ಮನೋಭಾವದಲ್ಲಿ ಸಹಜವಾಗಿ ಹೊಂದಿಕೊಳ್ಳುವ ಸಾಮರ್ಥ್ಯವು ನಮ್ಮಲ್ಲಿ ಹೆಚ್ಚುತ್ತದೆ. ಎಲ್ಲರನ್ನೂ ಗೆಲ್ಲುವ ಉತ್ತಮ ಸಾಧನವೆಂದರೆ ಪ್ರೀತಿ ವಾತ್ಸಲ್ಯ ಸಹಾನುಭೂತಿ ಆಗಿದೆ.

ಜೀವನದಲ್ಲಿ ಶಿಸ್ತು, ಸಾತ್ವಿಕ ಆಹಾರ, ಒಳ್ಳೆಯ ಚಿಂತನೆ ವ್ಯಾಯಾಮ, ಧ್ಯಾನ ಎಲ್ಲವೂ ಮನಸ್ಸಿನ ಸ್ಥಿರತೆಗೆ ಉಪಯುಕ್ತ ನಿಯಮ ಕ್ರಮಗಳಾಗಿವೆ. ಬೇರೆಯವರ ಬಗ್ಗೆ ಹೊಟ್ಟೆಕಿಚ್ಚು ಅಸೂಯೆಯಿಂದ ನಮ್ಮ ಮನಸ್ಸಿನ ಮನಶ್ಯಾಂತಿ ಹಾಳಾಗುತ್ತದೆ. ಯಶಸ್ಸು ನಿರೀಕ್ಷೆ ಬೇರೆಯವರ ಹೊಗಳಿಕೆಗೆ ಹೆಚ್ಚು ಆಶಿಸಬಾರದು. ಮಾನಸಿಕವಾಗಿ ನೆಮ್ಮದಿ ಸಂತೋಷದಿಂದಿರುವರು ಜಗತ್ತಿನಲ್ಲಿ ಯಾವುದು ಒಳ್ಳೆಯದು, ಕೆಟ್ಟದ್ದು ಎಂಬ ಅರಿವಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಮ್ಮ ಮನಸ್ಸಿನ ಉತ್ತಮ ಆಲೋಚನೆಯಂತೆ ಕೆಲಸಗಳು ಕೈಗೂಡುತ್ತವೆ. ಸುಖ ಶಾಂತಿ, ನೆಮ್ಮದಿ ಲೌಕಿಕ ಸ್ತರಗಳನ್ನು ಮೀರಿದ ಮನಸ್ಸಿಗೆ ಸಂಬಂಧಿಸಿದಾಗಿದೆ. ಅನ್ಯ ವಿಚಾರಗಳು ಆಕ್ರೋಶ ಉದ್ವೇಗಗಳು ಅತಿಯಾದರೆ ದೇಹ ಮನಸ್ಸು ರೋಗಗ್ರಸ್ತವಾಗುತ್ತದೆ. ಮನಸ್ಸೆಂಬುದು ಕಲ್ಮಶ ರಹಿತ ತಿಳಿನೀರ ಕೊಳದಂತೆ ಇರಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಸಹೃದಯ ಸ್ವಚ್ಛ ಮನಸ್ಸುಳ್ಳವರಾಗಬೇಕು. ದೇಹ ದುರ್ಬಲವಾಗದಿದ್ದರೂ ಕೆಟ್ಟ ಆಲೋಚನೆಯಿಂದ ಮನಸ್ಸು ದುರ್ಬಲವಾಗುತ್ತದೆ. ಮನಸ್ಸಿನ ಸ್ವಸ್ಥತೆ, ಅಸ್ವಸ್ಥತೆಗಳು ಒಂದು ನಾಣ್ಯದ ಎರಡು ಮುಖಗಳು. ಯಾಂತ್ರಿಕ ಜೀವನದಲ್ಲಿ ಶ್ರೀಮಂತರಿಂದ ಸಾಮಾನ್ಯರವರೆಗೂ ಅನಾರೋಗ್ಯ ಆತಂಕ ಹಣ ಗಳಿಕೆಯ ಗುರಿ ಕಲಹ ಅತಿಯಾಸೆ ನಮ್ಮ ದುಂಸ್ಥಿತಿಗೆ ಕಾರಣವಾಗಿದೆ.

ಕೋಪವೂ ಕೂಡ ನಮ್ಮೊಳಗಿನ ಸಹಜ ಪ್ರವೃತ್ತಿ. ಕೋಪ ವಿಕೋಪಕ್ಕೆ ಹೋದಾಗ ನಿಯಂತ್ರಿಸುವ ಆಂತರಿಕ ಶಕ್ತಿ ನಮ್ಮೊಳಗಿದೆ. ಶಾಂತಿ ಸಮಾಧಾನದಿಂದ ವರ್ತಿಸುವುದು ಆರೋಗ್ಯಕ್ಕೆ ಮುಖ್ಯವಾಗಿದೆ. ಒತ್ತಡ ರಹಿತ ಜೀವನಕ್ಕೆ ಎಲ್ಲಾ ಪರಿಸ್ಥಿತಿಯ ಸೋಲು ಗೆಲುವುಗಳನ್ನು ತಾಳ್ಮೆಯಿಂದ ಸಹಿಸಿಕೊಂಡಾಗ ಎಲ್ಲಾ ಸಾಮಾಜಿಕ, ಕೌಟುಂಬಿಕ ಗೊಂದಲಗಳಿಂದ ಮುಕ್ತರಾಗಬಹುದು. ವಿವೇಚನೆ ಸಹನೆ ಪ್ರೀತಿಯಿಂದ ಎಲ್ಲಾ ಒಳ ಕಲಹ ಮನಸ್ತಾಪವನ್ನು ವಿಮರ್ಶಿಸಿ ಬಗೆಹರಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ವೃದ್ಧಿಸುತ್ತದೆ. ಜೀವನದಲ್ಲಿ ಸಂತೃಪ್ತಿಯುಳ್ಳವರು ದೇವರು ಕೊಟ್ಟಷ್ಟೇ ನಮ್ಮ ಭಾಗ್ಯವೆಂದು ಆತ್ಮತೃಪ್ತಿ ಉಳ್ಳವರಾಗಿರುತ್ತಾರೆ. ಸಂಸಾರದಲ್ಲಿದ್ದರೂ ನೀರಿನಲ್ಲಿ ಹೊಳೆವ ಹನಿ ಮುತ್ತಿನ ತಾವರೆಯಂತೆ ಅಂಟಿದರೂ ಅಂಟಲಾರದವರಂತೆ ದುಃಖದಲ್ಲಿರುವವರನ್ನು ನಿರ್ಗತಿಕರನ್ನು ನೋಡಿ ನಮ್ಮನ್ನು ನಾವೇ ಅವರಿಗಿಂತ ಎಷ್ಟೋ ಸುಖಿ ಎಂದು ಸಂತೈಸಿಕೊಂಡು ಸಂತೋಷದಿಂದ ದೇವರು ನಮಗೆ ಕೊಟ್ಟಿದ್ದನ್ನು ವರದಾನವೆಂದು ತಿಳಿದು ಬದುಕನ್ನು ಬಂದಂತೆ ಸ್ವೀಕರಿಸಬೇಕು. ಆರೋಗ್ಯವಂತ ಬಡವನೇ ಶ್ರೀಮಂತನೆಂದು ಹೇಳಬಹುದು. ಆರೋಗ್ಯವಿಲ್ಲದಿದ್ದರೆ ಎಷ್ಟೇ ಹಣ ಸಂಪತ್ತಿದ್ದರೂ ಅನುಭವಿಸಲಾಗದಿದ್ದರೆ ಅದು ನಿರರ್ಥಕವೇ.

ಜ್ಞಾನದರಿವು: ಒಳ್ಳೆಯ ನಡೆ-ನುಡಿ ಆಚಾರ ವಿಚಾರ ಪ್ರಾಮಾಣಿಕತೆಯೇ ಶ್ರೀಮಂತಿಕೆಯೆಂಬ ಪರಿಜ್ಞಾನವುಳ್ಳವರಾಗಬೇಕು.
ಭಗವಂತನ ಜ್ಞಾನದರಿವು ಭಕ್ತಿ ಸ್ಮರಣೆ ಇಲ್ಲದ ಮನಸ್ಸು ಸದಾ ಚಿಂತೆಯಿಂದ ಗೊಂದಲದ ಗೂಡಾಗುತ್ತದೆ. ಆಧ್ಯಾತ್ಮ ನಮ್ಮ ಜೀವನದಲ್ಲಿ ಒಂದು ಭಾಗವಾದಾಗ ನಿರ್ಮಲವಾದ ಚಿತ್ತಕ್ಕೆ ಎಡೆ ಮಾಡುತ್ತದೆ. ಹತಾಶೆ ಅಶಾಂತಿಯಿಂದ ತಲ್ಲಣಗೊಂಡ ಮನಸ್ಸಿಗೆ ಅಧ್ಯಾತ್ಮಪಥ ಆಂತರಿಕ ಜ್ಞಾನಕ್ಕೆ ಸುಲಭ ಸರಳ ಮಾರ್ಗವಾಗಿದೆ. ಆಧ್ಯಾತ್ಮ ಚಿಂತನೆಯಿಂದ ಸದ್ಭಾವನೆಗಳು ಸಂತ್ಚಿಂತನೆಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಮಾನಸಿಕ ಒತ್ತಡ ದೈಹಿಕ ನೋವಿಗಿಂತ ಹೆಚ್ಚು ತಾಪವನ್ನುಂಟುಮಾಡುತ್ತದೆ ಯಾವುದೇ ಸಂದರ್ಭದಲ್ಲೂ ಸ್ಥಿತಪ್ರಜ್ಞತೆ ಉಳ್ಳವರಾದರೆ ಜೀವನದ ಅರ್ಥ ವಿಸ್ತರಿಸುತ್ತದೆ. ಮನಸು ಶಾಂತವಾಗಿದ್ದರೆ ದೇಹಕ್ಕೆ ಯಾವುದೇ ಆತಂಕ ಅಧೀರತೆ ಅನಾರೋಗ್ಯದಂತಹ ಅಡ್ಡ ಪರಿಣಾಮಗಳು ಮನಸ್ಸನ್ನು ಘಾಸಿಗೊಳಿಸಲಾರವು. ಕೆಲವು ಸರಳ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯದ ಗುಟ್ಟು ನಮ್ಮಲ್ಲಿ ಚೇತನವಾಗುತ್ತದೆ.

ಲೇಖಕಿ:
ಯಶೋಧ ರಾಮಕೃಷ್ಣ, ಮೈಸೂರು