ಬೆಂದಕಾಳೂರು
“”””””””””””””””””
ಬೆಳೆದಿದೆ ನೋಡಾ ಬೆಂಗಳೂರು ನಗರ
ಕೆಂಪೇಗೌಡನ ಕನಸಿನ ಆಗರ
ಹಸಿಪಸೆ ಕೆರೆಕಟ್ಟೆಯಲ್ಲೂ ಎದ್ದಿಹ ಮಹಲು
ನೋಟಕ್ಕೆ ನಿಲುಕದ ಗಗನಚುಂಬಿ ಬಹುಬಂಗಲೆ
ನಾನಾವೇಷ ಭೂಷಣ ಮೇಳದ ಜಾಲ
ದೂರದ ತೀರಕೆ ಹಕ್ಕಿಯ ಗೂಡು
ಯಾಂತ್ರಿಕ ನವ ನಾಗರಿಕ ಬೀಡು
ದಾರಿಯ ಉದ್ದಗಲಕೂ ವಾಹನ ದಿಬ್ಬಣ
ನಿಮಿಷಕ್ಕೊಮ್ಮೆ ನಿಲುಗಡೆ ತಾಣ
ಉಸಿರುಸಿರಿಗೂ ಹೊಗೆ ದೂಳಿನ ಧೂಪ
ನರನಾಡಿಗಳಿಗಂಟಿದ ಮಾಲಿನ್ಯ ಲೇಪ
ತಾಕದೆಲ್ಲೂ ಭೂಮಾತೆಯ ಮಣ್ಣಿನ ಕಮರು
ಹುಡುಕಲೆಲ್ಲಿ? ನಿರ್ಮಲ ಪರಿಸರ ಜಾಡು
ಒಡೆದು ಕವಲಾಗಿಹ ಹೆದ್ದಾರಿಯ ನಾಡು
ತಗ್ಗು ದಿಣ್ಣೆಯ ಹಳ್ಳಕೊಳ್ಳದ ದರ್ಶನ
ತಪ್ಪಿದರೆಚ್ಚರ ಮೃತ್ಯುವಿಗೆ ಆಹ್ವಾನ
ಅಧಿಕಾರಿಗಳ ವೈಭೋಗದ ರಾಜದಧಾನಿ
ಜನಶಕ್ತಿ ಧನಶಕ್ತಿಯ ದರ್ಪದ ಅಮಲು
ರಾಜಕೀಯ ರಂಗಾಯಣದ ಅರಸೊತ್ತಿಗೆ ಕಾರುಬಾರು
ಕಾಂಚಾಣದ ಕೋಟೆಯಲಿ ಶ್ರೀಮಂತಿಕೆಯ ತಾಂಡವ
ಸದನ ಕದನ ಮೋಜು ಮಸ್ತಿಗಳೇ
ಗೆದ್ದು ಗದ್ದುಗೆ ಏರಿದವರ ಸಿದ್ದಾಂತ
– ಯಶೋಧ ರಾಮಕೃಷ್ಣ, ಮೈಸೂರು