ಬದುಕು ವಿವಿಧ ಪಾತ್ರಗಳ ರಂಗಮಂಟಪ 

ಬದುಕೆಂಬ ರಂಗ ಮಂಟಪದಲ್ಲಿ ನಾವೆಲ್ಲಾ ಪಾತ್ರಧಾರಿಗಳು
ಆ ಭಗವಂತನೇ ಸೂತ್ರಧಾರಿ. ಅವನು ಆಡಿಸಿದಂಗೆ ಆಡುವ ನಾವು ಅನಿರೀಕ್ಷಿತ ಮಾತ್ರ. ಮೊದಲು ಭಗವಂತ ಧರ್ಮವುಳ್ಳ ಸಂಸ್ಕಾರ ತುಂಬಿದ ದಯಾನದಿ ಪಾತ್ರಗಳ ಸೃಷ್ಟಿ ಮಾಡಿದ, ರಾಮರಾಜ್ಯದಂತೆ ಕಂಗೊಳಿಸುತ್ತಿದ್ದ ಅಂದಿನ ಸುಮಧುರ ಬದುಕು.

“ನೋಡಿದನ್ನೇ ನೋಡುವ ಕಿಸು ಬಾಯಿ ದಾಸ” ಎಂಬ ಹಳ್ಳಿಗರ ಮಾತಿನಂತೆ ನೋಡಿದ್ದನ್ನೇ ನೋಡಿ ಬೇಸರಗೊಂಡ ವೀಕ್ಷಕರಂತೆ ಭಗವಂತ ಹೊಸ ಪಾತ್ರಗಳ ಸೃಷ್ಟಿಸಿದ ಕೃತಕ ಸಂಬಂಧಗಳ ಪಾತ್ರ ಸೃಷ್ಟಿಸಿದ, ಇಂದಿನ ಸಂಬಂಧಗಳಲ್ಲಿ ಮೇಲ್ನೋಟಕ್ಕೆ ಬೆಸೆದರೆ ಒಳನೋಟಕ್ಕೆ ದ್ವೇಷ ಅಸೂಯೆ ಕೋಪ ತಾಪ ಹೊಟ್ಟೆಕಿಚ್ಚು ಆವರಿಸಿದೆ, ನಿಜ ನಗು ಕಣ್ಮರೆಯಾಗಿ ಕೃತಕ ನಗು ಹುಟ್ಟಿಕೊಂಡಿದೆ. ನಶ್ವರ ಬದುಕಿನಲ್ಲಿ ಎಲ್ಲವನ್ನು ಬಿಟ್ಟು ಹೋಗಬೇಕು ಎಂಬ ತರ್ಕ ನಮಗಿದ್ದರೂ ನಾವುಗಳು ಪ್ರತಿಯೊಂದು ವಸ್ತುವಿನ ಪಾಲಿಗಾಗಿ ಸಂಬಂಧಗಳನ್ನು ಮರೆತು ಹೊಡೆದಾಡುತ್ತೇವೆ. “ಎಲ್ಲವೂ ನಿನ್ನದಲ್ಲ ನಿನ್ನದಿದ್ದರೂ ನೀ ಒಯ್ಯುವುದಿಲ್ಲ “ ಎಂದು ಅಂತರಾಳ ಕೂಗಿ ಹೇಳಿದರು ಅದನ್ನು ಕಿವಿಗೊಡದೆ ಹೊಡೆದಾಡುತ್ತೇವೆ.

ಬೇವು ಬೆಲ್ಲದಂತೆ ನಮ್ಮ ಬದುಕಿನಲ್ಲಿ ಸಮಾನವಾದ ಕಷ್ಟಸುಖಗಳು ಬಂದು ಹೋಗುತ್ತವೆ ಅದನ್ನು ನಾವು ಒಬ್ಬರೇ ಧೈರ್ಯದಿಂದ ಎದುರಿಸಬೇಕು. ಏಳುಬೀಳಿನ ನಾಟಕದಲ್ಲಿ ಸ್ವಾರ್ಥಪರತೆಯ ಸಾಧನೆಯಲ್ಲಿ ನಾಟಕ ಮುಗಿದು ಹೋಗುತ್ತಿರುವ ಪರಿ ನಮ್ಮಲ್ಲಿ ಇರುವುದಿಲ್ಲ ಕೊನೆಗೆ ಪಾತ್ರಗಳ ಅಭಿನಯ ಮುಗಿದ ಮೇಲೆ ಸಂಬಳ ಪಡೆದು ಮನೆಗೆ ಹೋಗುವಂತೆ ನಮ್ಮ ಕರ್ಮ ಫಲಾನು ಸಾರ ನಮಗೆ ಕೊಡಬೇಕಾಗಿರುವುದನ್ನು ಕೊಟ್ಟು ಭಗವಂತ ತನ್ನ ಮನೆಗೆ ಕರೆದೊಯ್ಯುತ್ತಾನೆ.

ಕೊನೆಗೆ ಎಲ್ಲವನ್ನೂ ತೊರೆದು ಹೋಗಬೇಕು ಎಂದು ತಿಳಿದ ನಾವು ನಮ್ಮ ಸುಖಕ್ಕಾಗಿ ಎಷ್ಟೋ ಜನರ ಬದುಕನ್ನೇ ಕಿತ್ತುಕೊಂಡು ನಾವು ಬದುಕುತ್ತೇವೆ ಎಂಥಹ ವಿಪರ್ಯಾಸ. ನಾಟಕಕ್ಕೆ ಪರದೆ ಎಳೆಯುವಂತೆ ನಮ್ಮ ಬದುಕಿಗೆ ಪರದೆ ಎಳೆಯುವ ಪರಮಾತ್ಮನಿಗೆ ಗೊತ್ತು ನಮ್ಮನ್ನ ಹೇಗೆ ಆಟ ಆಡಿಸಬೇಕು ಎಂದು ಇದೇ ಭವಿಷ್ಯದ ನಿಲುವು.

ಲೇಖಕರು: ಕು. ಈಶ್ವರ್ ಮಹಾಲಿಂಗ ಕಲಾಲ್
ಬಸವನಗರ, ಮಹಾಲಿಂಗಪುರ 587312