ಮುಂಜಾವಿನ ಮಾತು
ಗಂಜಿಯಲಿ ಅಂಜದ ಬಲ
ಅನ್ನಮದವಿಳಿದು ಬಿಡದೇ
ಮುಪ್ಪಿನಲೊಪ್ಪುವ ಮನ
ಪ್ರಾಯಮದ ಅಳಿಸದೇ
ಗುಣದ ಗಣಿಯ ಹಿರಿಮೆಯಲಿ
ಹಣದಮದ ಕರಗದೇ
ಧ್ಯಾನದ ಮಡಿಲಿನಲಿ
ಅಷ್ಟಮದ ಅಳಿದು
ಶಿಷ್ಟತೆಗೆ ಇಷ್ಟವಾದ ಮನವೇ
ನಿನಗಿದೋ ನಮನ
ಮುಂಜಾವಿನ ಮಾತು
ಜಗದ ಸಂತೆಯ ಸರಕಿನ
ವಹಿವಾಟಿಗೆ ಕಟ್ಟುತ ಸುಂಕ
ಪಡುತಲಿ ಸಂಕಟ
ಹೊರಟು ಏಕಾಂತವನರಸಿ
ಕಣ್ಮುಚ್ಚಿ ಕುಳಿತಲ್ಲಿ
ನಡೆದುದ ನೆನೆದು ನರಳುತಿರೆ
ಸಾರ್ಥಕವೇ ಬದುಕು
ಎಲ್ಲ ಗೊಂದಲವ ಸರಿಸಿ
ಇರುವಲ್ಲಿ ತನ್ನಲ್ಲಿಯೇ
ಅಡಗಿದ ಆನಂದ
ಆಸ್ವಾದಿಸುವೆ ಮನವೇ
ಮುಂಜಾವಿನ ಮಾತು
ಹಸಿವು ನೀರಡಿಕೆ ನಿದ್ರೆ
ದೈಹಿಕ ಸುಖಗಳೆಲ್ಲವು
ಜೀವನದ ಅಂಶಗಳು
ಆದರದೇ ಜೀವನವಲ್ಲ
ಮೃಗೀಯ ಗುಣಗಳಿಂದ
ಮುಕ್ತವಾದ ಪ್ರಜ್ಞಾಪೂರ್ವಕ
ಬದುಕಿನ ಆಯ್ಕೆಯು
ನಿನ್ನದಾಗಿದೆ ಮನವೇ
ಮುಂಜಾವಿನ ಮಾತು
ಬೆಳಕು ಭರವಸೆಯ ಹೆಗಲು
ಕತ್ತಲು ನೊಂದ ಸ್ವಾಭಿಮಾನದ
ಜೀವಕೆ ಸಾಂತ್ವನದ ಕಡಲು
ಹಗಲು ಕಳೆದೀತು ದಿಗಿಲು
ಇರುಳು ಕಣ್ಣೀರಿಗೆ ಮಡಿಲು
ನೆರಳು ಬೆಳಕಿನಾಟದ ವೇದಿಕೆ
ಅರಿತು ನಟಿಸಿದರಿಲ್ಲ ನರಳಿಕೆ
ಸ್ವರವಾಗಿಹೆ ಜೀವನ ಕಾವ್ಯಕೆ ಮನವೇ
– ರತ್ನಾಬಡವನಹಳ್ಳಿ