Table of Contents

ಕೋಪವೆಂಬ ಕಳೆಯ ಕಿತ್ತೊಗೆಯಿರಯ್ಯ

ಮಾನವನ ಆಂತರಿಕ ಭಾವನೆಗಳ ಅಗೋಚರ ಶಕ್ತಿಯೇ ಕೋಪ . ಕೋಪದಿಂದ ಅನಾಹುತಗಳೇ ಹೆಚ್ಚು. ಕೋಪವೆಂಬ ಅಸ್ತ್ರವ ಬಿಟ್ಟರೆ ಮನುಜ ದೈವತ್ವವನ್ನು ಪಡೆಯ ಬಹುದು. ಕಾಮ, ಕ್ರೋಧ, ಮೋಹ, ಲೋಭ ಮತ್ಸರವನ್ನು ಬಿಟ್ಟಾಗ ಮಾತ್ರ ಮಾನವನಿಗೆ ದೈವಸಾಕ್ಷಾತ್ಕಾರವಾಗುತ್ತದೆ.

ಕೋಪದ ಹುಟ್ಟು ಎಲ್ಲಿಂದ? ಕೋಪ ಹೇಗೆ ಬರುತ್ತದೆ ? ಹೇಗೆ ಮಾಯವಾಗುತ್ತದೆ ? ಎಂಬುದರ ಬಗ್ಗೆ ಯಾರೂ ಅರಿಯರು. ಕೋಪದ ಹುಟ್ಟು ನಮ್ಮ ದೇಹವೇ ಆಗಿರುವುದು ವಿಪರ್ಯಾಸವೇ ಸರಿ. ಕೋಪಕ್ಕೆ ಸರಿಯಾದ ಕಾರಣ ತಿಳಿಯುವುದು ಕಷ್ಟ. ಕೋಪ ಹೇಗೆ ಮಾಯವಾಗುತ್ತದೆ ಅದೂ ಸಹ ತಿಳಿದಿಲ್ಲ. ಬಹುಶಃ ಮೂಗಿನ ತುದಿಯಲ್ಲಿ ಕೋಪವಿದೆಯೋ ಕಂಡವರಾರು? ಅದರ ರೂಪ , ವೇಷ – ಭೂಷಣ ಯಾವುದೂ ನಮ್ಮ ಅರಿವಿಗಿಲ್ಲ . ಇಂತಹ ಅಗೋಚರ ಶಕ್ತಿಯ ಬಗ್ಗೆ 12 ನೇ ಶತಮಾನದ ವಿಶ್ವಗುರು ಬಸವಣ್ಣನವರು ಹೀಗೆ ಹೇಳುತ್ತಾರೆ.

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ

ತನಗೆ ಮುನಿದರೆ ತಾ ಮುನಿಯ ಲೇಕಯ್ಯ, ಎಂದರೆ
ನಮ್ಮ ಮೇಲೆ ಯಾರಾದರೂ ಕೋಪಿಸಿ ಕೊಂಡರೆ ನಾವೇಕೆ ಅವರ ಬಗ್ಗೆ ಕೋಪಿಸಿಕೊಳ್ಳಬೇಕು.
ತನಗಾದ ಆಗೇನು ಅವರಿಗಾದ
ಚೀಗೇನು ನಮ್ಮನ್ನು ನೋಡಿ ಬೇರೆಯವರು ಕೋಪಗೊಂಡರೆ ಅವರಿಗಾದ ಲಾಭವೇನು ? ನನಗಾದ ನಷ್ಟ ವೇನು ? ಕೋಪಗೊಳ್ಳುವುದರಿಂದ
ಯಾರಿಗೂ ಲಾಭವಿಲ್ಲ ,ಯಾರಿಗೂ ನಷ್ಟವಿಲ್ಲ . ಕೋಪ ನಮ್ಮ ಅಹಂನ ಸಂಕೇತವಾಗಿದೆ. ಕೋಪದಿಂದಾಗುವ ಲಾಭಕ್ಕಿಂತ ಹಾನಿಯೇ ಹೆಚ್ಚು.
ಕೋಪ ನಮ್ಮ ಮನಸ್ಸು ಮತ್ತು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೋಪದಿಂದ ಕೊಯ್ದು ಕೊಂದ ಮೂಗು ಮತ್ತೆ ಬರುವುದಿಲ್ಲ.

ಮನದ ಕೋಪದಿಂದ ನಮ್ಮ ಅರಿವಿಗೆ ಕೇಡಾಗುತ್ತದೆ. ಕೋಪವು ಅಜ್ಞಾನದಂತೆ. ಕೋಪಗೂಂಡಾಗ ನಮ್ಮ ಮನಸ್ಸು ಒಳಿತು ಕೆಡುಕಿನ ವಿವೇಕವನ್ನು ದಾಟಿ ಅಸುರತ್ವವನ್ನು ಪಡೆಯುತ್ತದೆ.

ಬಸವಣ್ಣನವರು ಕೋಪವನ್ನು ಕಿಚ್ಚಿಗೆ ಹೋಲಿಸಿದ್ದಾರೆ. ಬೆಂಕಿ ಮೊದಲು ತನ್ನ ಮೂಲ ಸ್ಥಾನವನ್ನು ಸುಡ ಲಾರಂಭಿಸುವಂತೆ ಮನೆಯೊಳಗಿನ ಬೆಂಕಿ ತನ್ನ ಮನೆಯನ್ನೇ ಸುಟ್ಟು ನಾಶ ಮಾಡುತ್ತದೆ. ಅದೇ ರೀತಿ ಕೋಪವು ತನ್ನನ್ನು ಆಶ್ರಯಿಸಿದ ದೇಹವನ್ನೇ ಮೊದಲು ಆಹುತಿ ಮಾಡುತ್ತದೆ. ನಂತರ ನೆರೆಮನೆಯವರ ಕಡೆ ಧಾವಿಸುತ್ತದೆ.

ಕೋಪದಿಂದ ಮತ್ತೊಬ್ಬರಿಗೆ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡುವುದು ಮನುಷ್ಯತ್ವದ ಎಲ್ಲೆ ದಾಟಿ ಅಸುರತನಕ್ಕೆ ನಾಂದಿ ಹಾಡಿದಂತೆ . ಇಲ್ಲಿ “ನಾನು” ಎಂಬ ಅಹಂಕಾರವೇ ಕೋಪಕ್ಕೆ ಕಾರಣವಾಗುತ್ತದೆ. ಕನಕದಾಸರು ಹೇಳುವಂತೆ “ನಾನು” ಹೋದರೆ ಹೋದೆನು. ನಾನು ಎಂಬುದು ನಮ್ಮೊಳಗಿನ ಅಹಂಕಾರ ವಲ್ಲದೆ ಮತ್ತೇನೂ ಅಲ್ಲ. ನಾನು ಎಂಬ ಅಹಂ ದೂರಾದರೆ ಕೋಪ ನಾಶವಾದಂತೆ.
ಕೋಪ ನಿಗ್ರಹಿಸಿ ಆಸೆಯ ಮೋಹ ದಿಂದ ಹೊರಬನ್ನಿ ಎಂದು ಗೀತೆಯು ಹೇಳುತ್ತದೆ. ಬಸವಣ್ಣನವರು ಕೋಪದ ಬಗ್ಗೆ ಮನ ಮುಟ್ಟುವಂತೆ ವಿವರಿಸಿದ್ದಾರೆ.

ಮನದ ಹೊಲದಲ್ಲಿ ಹುಲುಸಾಗಿ
ಬೆಳೆದ ಕೋಪವೆಂಬ ಕಳೆಯ
ಬೇರು ಸಹಿತ ಕೀಳದಿದ್ದರೆ
ಹೆಮ್ಮರವಾಗಿ ಬೆಳೆದು ನಿಮ್ಮಯ
ಮನಃ ಶಾಂತಿಯ ದೂರ
ಮಾಡುವುದು ನೋಡು ಮಾದೇಶ್ವರ

    • – ಇಂದಿರಾ ಲೋಕೇಶ್, ಹಾಸನ