ಓಂಕಾರ ಪೂರ್ವಂಕಂ ದೇವಂ ಸರ್ವದುಂಖ ನಿವಾರಕಂ ಸರ್ವಂ ಶಿವಾರ್ಪಣಮಸ್ತು
“”””””””'”””””””””””””””””””””””'””””””””””””””””””””

ಶಿವರಾತ್ರಿಯ ಹಬ್ಬವನ್ನು ಮಾಘಮಾಸದ ಕೊನೆಯ ಕೃಷ್ಣಪಕ್ಷದಲ್ಲಿ ಬರುವ ಹಿಂದೂಗಳ ಪವಿತ್ರ ಹಬ್ಬವಾಗಿದೆ. ನಮ್ಮ ಧರ್ಮದಲ್ಲಿ ಆಧ್ಯಾತ್ಮ‌ ಸಂಸ್ಕಾರವು ಕೂಡ ಪ್ರತಿಯೊಬ್ಬರ ಜೀವನದಲ್ಲಿ ಒಂದು ಭಾಗವಾಗಿ ಬೆರೆತಿದೆ.ಅವರವರ ಭಕ್ತಿ ನಂಬಿಕೆ ಸಂಸ್ಕಾರಕ್ಕೆ ಅನುಸಾರವಾಗಿ ಶಿವನನ್ನು ಪ್ರಾರ್ಥಿಸುತ್ತೇವೆ.ಪರಂಪರೆಯ ಸಂಸ್ಕೃತಿಯನ್ನು ಸಾಂಪ್ರದಾಯಬದ್ದವಾಗಿ ಅನುಸರಿಸುತ್ತ ಬಂದಿದ್ದೇವೆ.ಶಿವನನ್ನು ಹಲವಾರು ನಾಮಗಳಿಂದ ಆರಾಧಿಸುತ್ತೇವೆ. ಶಂಕರ,ಸದಾಶಿವ, ಈಶ್ವರ ಮಹಾದೇವ,ನಾಗಭೂಷಣ,ಶಶಿಶೇಖರ ನಿರಂಜನ ಹೀಗೆ ಅನೇಕ ನಾಮದಿಂದ ಲಿಂಗಾಕಾರ ರೂಪದಲ್ಲಿ ಶಿವನು ಸರ್ವರಿಂದ ಪೂಜಿಸಲ್ಪಡುತ್ತಾನೆ.
ಚಂದ್ರ,ಸೂರ್ಯ, ಅಗ್ನಿಯ ಅಂಶದಿಂದ ಕೂಡಿದ ಮೂರು ಕಣ್ಣುಳ್ಳ ಶಿವನಿಗೆ ಮುಕ್ಕಣ್ಣನೆಂಬ ಹೆಸರು ಬಂದಿದೆ.ಶಿವರಾತ್ರಿಯ ದಿನದಂದು ಶಿವನ ದೇವಾಲಯಗಳಲ್ಲಿ ಮುಂಜಾನೆಯಿಂದ ಐದು ಆರು ಗಂಟೆಗಳಿಗೊಮ್ಮೆ ಮತ್ತೆ ಮರುದಿವಸ ಬೆಳಗಿನ ಜಾವದವರೆಗೂ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಪೂಜೆ ನಡೆಯುತ್ತಲೇ ಇರುತ್ತದೆ. ಗಂಗಾಧರನಿಗೆ ಗಂಗಾಜಲದಿಂದಲೇ ಅಭಿಷೇಕ ಮಾಡಿದರೆ ಅವನು ಪ್ರೀತಿನಾಗುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ಶಿವರಾತ್ರಿಯಂದೆ ಶಿವನು ಕೈಲಾಸದಿಂದ ಭೂಮಿಗೆ ಇಳಿದು ಬರುತ್ತಾನೆ,ಎಂಬ ಪ್ರತೀತಿ ಯಿದೆ,ಹಾಗೂ ಶಿವರಾತ್ರಿಯ ದಿವಸವೇ ಪಾರ್ವತಿ ದೇವಿಯನ್ನು ವಿವಾಹವಾದನೆಂದು ಕಥೆಗಳಿಂದ ತಿಳಿದು ಬರುತ್ತದೆ ಭಗೀರಥನ ತಪಸ್ಸಿಗೆ ಮೆಚ್ಚಿ ಶಿವನು ಗಂಗೆಯನ್ನು ಹರಿಯಲು ಬಿಟ್ಟಿದ್ದು ಶಿವರಾತ್ರಿಯ ದಿನವೆಂದೇ ಪುರಾಣ ಕಥೆಗಳಲ್ಲಿ ಉಲ್ಲೇಖವಿದೆ. ಸರ್ವವ್ಯಾಪಿಯಾದ ಶಿವನ ದಿವ್ಯ ಮಹಿಮೆ ಅನಂತವಾದದು.
ಶಿವನು ಅಲಂಕಾರ ಪ್ರಿಯನಲ್ಲ ಅಭಿಷೇಕ ಪ್ರಿಯ ಶಿವಲಿಂಗದ ಮೇಲೆ ನೇರವಾಗಿ ತೂಗುತ್ತಿರುವ ಕಲಸದಿಂದ ಒಂದೊಂದೇ ಹನಿಬಿಂದು ನೀರು ಸದಾ ಲಿಂಗದ ಮೇಲೆ ಬೀಳುತ್ತಲೇ ಇರುವುದನ್ನು ಕಾಣುತ್ತೇವೆ. ಇದು ಶಾಂತಿಯ ಸಂಕೇತವು ಆಗಿದೆ. ಶಿವನ ಧ್ಯಾನದಲ್ಲಿ ಬಲಗೈಯಲ್ಲಿ “ಓಂ”ಎಂಬ ಅಕ್ಷರವು ಕಂಡುಬರುವುದು ಅವನು ಭಕ್ತರ ಅಭಯದಾತನೆಂದು ಅಂತರಾತ್ಮದ ಶುದ್ಧಭಕ್ತಿಗೆ ಶಿವ ಒಲಿಯುತ್ತಾನೆ ಎಂಬುದನ್ನು ಸೂಚಿಸುತ್ತದೆ.
“ಸಂಗಕ್ಕಿಲ್ಲ ಲಿಂಗಭೇದ ಭಕ್ತಿಗಿಲ್ಲ ಬಡವ ಬಲ್ಲಿದ” ನಿಷ್ಕಲ್ಮಶ ಮನಸ್ಸುಳ್ಳವರೇ ನಿಜಭಕ್ತರು ಎಂದಿದ್ದಾರೆ ಶರಣರು. ಶಿವರಾತ್ರಿಯಂದು ಉಪವಾಸವಿದ್ದು ಶಿವಧ್ಯಾನ ಪೂಜೆ ಪ್ರಾರ್ಥನೆ ಜಾಗರಣೆಯಿಂದ ನಮ್ಮ ಸಂಚಿತ ಪಾಪಗಳು ಕಳೆದು ಪುಣ್ಯಫಲವು ಲಭಿಸುತ್ತದೆ ಎಂಬುದು ಭಕ್ತರ ಬೇಡಿಕೆಯಾಗಿದೆ. ಆ ದಿನ ಅನ್ನ ಆಹಾರಾದಿಗಳನ್ನು ವ್ಯರ್ಜಿಸಿ ಸಾಯಂಕಾಲ ಪೂಜೆಯ ನಂತರ ಫಲಹಾರವನ್ನು ಸೇವಿಸುತ್ತಾರೆ. ಅಂದು ಮನೆಯಲ್ಲೇ ಶಿವನ ಅಷ್ಟೋತ್ತರ,ಲಿಂಗಾಷ್ಟಕಮ್ ಸೋತ್ರವನ್ನು ಪಠಿಸುತ್ತಾ ತ್ರಿಪುಂಡಹಾರಿಗೆ ಪ್ರಿಯವಾದ ಭಸ್ಮ ತ್ರಿದಳ ಬಿಲ್ವಪತ್ರೆಯಿಂದ ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಸಂಕಲ್ಪವು ಶಿವಭಕ್ತರದ್ದಾಗಿದೆ.ಮಹಾಶಿವರಾತ್ರಿಯೇ ಶುಭರಾತ್ರಿ ಎಂದು ಶಿವಲಿಂಗಕ್ಕೆ ಹಾಲು ಮೊಸರು ಸಕ್ಕರೆ,ತುಪ್ಪ ಜೇನುತುಪ್ಪ ಪತ್ರೆ ಪುಷ್ಪಗಳನ್ನು ಭಕ್ತರು ಮಂದಿರಗಳಿಗೆ ಕೊಟ್ಟು ಅಭಿಷೇಕದಿಂದ ಅರ್ಚಿಸಿದ ಪಂಚಾಮೃತವನ್ನು ಸೇವಿಸಿ ಪುನೀತರಾಗುತ್ತಾರೆ. ಶಿವನ ಮಂದಿರಗಳಲ್ಲಿ ಶಿವಭಕ್ತರು ರಾತ್ರಿಯಿಡಿ ಜಾಗರಣೆ ಇದ್ದು ಅಲ್ಲಿ ನಡೆಯುವ ಪ್ರವಚನ ಶಿವಪುರಾಣ ಕಥೆಗಳನ್ನು ಕೇಳುತ್ತಾ ಶಿವನ ಧ್ಯಾನದಲ್ಲಿ ಪರವಶರಾಗುತ್ತಾರೆ. ಜಾಗರಣೆ ಎಂದರೆ ಮನಸ್ಸು ಧ್ಯಾನದಲ್ಲಿ ಜಾಗ್ರತವಾಗಿರುವುದು ಎಂಬ ಅರ್ಥ ನೀಡುತ್ತದೆ. ಶಿವರಾತ್ರಿಯ ಮರುದಿವಸ ಶುಚಿರ್ಭೂತರಾಗಿ ಮತ್ತೆ ಶಿವನ ದರ್ಶನವನ್ನು ಮಾಡಿ ಮನೆಯಲ್ಲಿ ಸಿಹಿಯನ್ನು ಮಾಡಿ ದೇವರಿಗೆ ಅರ್ಪಿಸಿ ಪ್ರಾರ್ಥಿಸಿ ನಂತರ ಅವರ ಉಪವಾಸ ವ್ರತವೂ ಮುಗಿದು ಸಂತೃಪ್ತಿ ಹೊಂದುತ್ತಾರೆ.
ಶತಮಾನಗಳಿಂದಿನ ಅನೇಕ ಶರಣರು ಸಂತರು ಶುದ್ಧಾತ್ಮ ಭಕ್ತಿಯಿಂದ ಶಿವನನ್ನು ಹೃದಯದಲ್ಲಿ ಸ್ಥಾಪಿಸಿ ಈ ಜಗತ್ತೇ ಶಿವಮಯವೆಂದು ಅವನದೇ ಬ್ರಹ್ಮಾಂಡ ಅಸ್ತಿತ್ವವೆಂದು ಆರಾಧಿಸಿ ಸಾಕ್ಷಾತ್ಕರಿಸಿಕೊಂಡು ದೈವಾಂಶ ಸಂಭೂತ ಸತ್ಪುರುಷರೆನಿಸಿದ್ದಾರೆ. “ಜಗದಗಲ,ಮುಗಿಲಗಲ, ಮಿಗೆಯಗಲ,ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ ಅಗೋಚರ ಅಪ್ರತಿಮ ಲಿಂಗವೇ ಕೂಡಲಸಂಗಮದೇವ” ಎಂದು ಬಸವಣ್ಣನವರು ಶಿವನ ಮಹಿಮೆಯನ್ನು ಬಣ್ಣಿಸಿದ್ದಾರೆ. ಸೃಷ್ಟಿ, ಸ್ಥಿತಿ,ಲಯಕರ್ತನಾದ ಜಗದೀಶನ ದಿವ್ಯ ಪ್ರಭೆಯನ್ನು ಕೊಂಡಾಡಿದ್ದಾರೆ. ನಂಬಿಕೆಯೇ ದೇವರು ನಾಮಸ್ಮರಣೆಯೇ ಉಸಿರಾದಾಗ ಬಾಹ್ಯ ಜಗತ್ತಿನ ಜಂಜಡಗಳು ದೂರವಾಗುತ್ತ ಮನಶ್ಯಾಂತಿಯು ನಮ್ಮದಾಗುತ್ತದೆ.
“ಸತ್ಯಂ ಶಿವಂ ಸುಂದರಂ” ನಿರಾಕಾರ ನಿರ್ಗುಣ ನಿರ್ವಿಕಾರ ಸತ್ಯ ನಿತ್ಯನು ಪವಿತ್ರಾತ್ಮನು ಶಂಕರನಾಗಿದ್ದಾನೆ. ಶಿವನೆಂದರೆ ಅವನೊಬ್ಬ ಧ್ಯಾನ ಸ್ಥಿತಿಯ ಯೋಗಿ ತಪಸ್ವಿಯಾಗಿದ್ದಾನೆ. ಅಷ್ಟೇ ಭಕ್ತರ ಬೇಡಿಕೆಗೆ ಸಂತುಷ್ಟನಾಗಿ ಒಲಿಯುವ ರುದ್ರ ತಾಂಡವನು ಆಗಿದ್ದಾನೆ. “ಕತ್ತಲೆಯಿಂದ ಬೆಳಕಿನೆಡೆಗೆ ಅಜ್ಞಾನದಿಂದ ಸುಜ್ಞಾನದೆಡೆ”ಆಧ್ಯಾತ್ಮ ಪಥವು ದಿವ್ಯವಾದ ಆನಂದವನ್ನು ನೀಡುತ್ತದೆ. ನಮ್ಮ ಯಾವುದೇ ಧೇಯ್ಯಾದರ್ಶಗಳೆಡೆಗೆ ಸಾಗಲು ಆಂತರಿಕ ಚಿತ್ತಶುದ್ಧತೆ ಭಾವ ಸಂಕಲ್ಪಗಳು ದೃಢವಾಗಿರಬೇಕು. “ನಾನೆಲ್ಲೋ ಹುಡುಕಿದೆ ಇಲ್ಲದ ದೇವರ ಎಲ್ಲೆಲ್ಲಿ ಹುಡುಕಿದರೂ ನೀನೇ ಶಿವ”ಎಂಬ ಶರಣರ ಸೂಕ್ತಿಯಂತೆ ಭಕ್ತಿ ನಿವೇದನೆಗೆ ದೇವರು ನಮ್ಮ ಆಂತರ್ಯದಲ್ಲಿ ನೆಲೆಸಿರುತ್ತಾನೆ. ಶಿವನು ಜ್ಯೋತಿರ್ಮಯಿಯಾಗಿ ಅನಂತ ಚೈತನ್ಯ ಶಕ್ತಿಯಾಗಿದ್ದಾನೆ.
ಶಿವನ ವರಪುತ್ರನಾದ ಅಲ್ಪಾಯುಷಿ ಮಾರ್ಕಂಡೇಯನ ಆಯಸ್ಸು ಕೊನೆಯಾದಾಗ ಯಮದೂತರು ಬಂದು ಎಳೆವಾಗ ಶಿವನಲ್ಲೇ ಅನುರುಕ್ತನಾಗಿ ಭಕ್ತಿಯಿಂದ ಭಜಿಸುತ್ತಾ ಇಹಪರವನ್ನೇ ಮರೆತ. ಅವನ ಭಕ್ತಿಗೆ ಮೆಚ್ಚಿ ಶಿವನು ಅವನಿಗೆ ದೀರ್ಘಾಯುಷ್ಯವನ್ನೇ ಕರುಣಿಸಿ ಭಕ್ತರ ಪರಾಧೀನ ನೆನೆಸಿದನು. ನಿತ್ಯವೂ ಶಿವನಿಗೆ ಕುಡಿಯಲು ಹಾಲು ಅರ್ಪಿಸುತ್ತಿದ್ದ ಕೋಳೂರು ಕೊಡಗೂಸಿನ ಭಕ್ತಿ ನಿವೇದನೆಗೆ ಮೆಚ್ಚಿ ಆ ಒಂದು ಪುಟ್ಟ ಹುಡುಗಿಯನ್ನು ತನ್ನಲ್ಲೇ ಅಂತರ್ಗತನಾಗಿಸಿದ ಶಿವನ ಮಹಿಮೆ ಅನಂತವಾದದು. ಶಿವರಾತ್ರಿಯಂದೇ ಒಬ್ಬ ಬೇಡನು ಕಾಡಿನಲ್ಲಿ ಶಿವಲಿಂಗಕ್ಕೆ ರಕ್ತ ಮಾಂಸಾದಿಗಳನ್ನೇ ಅರ್ಪಿಸಿದ. ಶಿವನ ಕಣ್ಣಿಂದ ರಕ್ತ ಸೋರುತಿದೆಯಲ್ಲ ಎಂಬ ಪಶ್ಚಾತಾಪದಿಂದ ಅವನ ಕಣ್ಣುಗಳನ್ನೆ ಕಿತ್ತು ಶಿವನಿಗರ್ಪಿಸಿದ ಭಕ್ತ ಬೇಡರ ಕಣ್ಣಪ್ಪನಾಗೆ ಪ್ರಸಿದ್ಧಿಯಾದ. ಇದೆಲ್ಲಾ ಕಥೆಗಳು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಂತರ್ಯದ ಅನುಭವದ ಯೋಗದಿಂದ ಪರಮಾತ್ಮನು ನಮ್ಮೊಳಗಿನ ಆತ್ಮಶುದ್ಧಿ ಚೈತನ್ಯಶಕ್ತಿಯ ಬಿಂದುವಾಗಿದ್ದಾನೆ.
ಓಂಕಾರ ಮಂತ್ರವು ಕೇವಲ ಭಕ್ತಿ ಭಾವದ ಜೊತೆಗೆ ಶಾರೀರಿಕ ಆರೋಗ್ಯಕ್ಕೂ ಪ್ರೇರಣೆಯಾಗಿದೆ. ನಿತ್ಯ ಬೆಳಿಗ್ಗೆ ಸಾಯಂಕಾಲ ಐದತ್ತು ನಿಮಿಷ ಓಂಕಾರ ನಾಮ ಸೋತ್ರ ಪಠಣ ಮಾಡುವುದರಿಂದ ದೈಹಿಕವಾಗಿ ಬಲವರ್ಧನೆಯು ಲಭಿಸುತ್ತಾ ಚಿಂತೆಗಳು ದೂರ ಸರಿದು ದೈವಿಕ ಚಿಂತನೆಗಳು ಜಾಗೃತಗೊಳ್ಳುತ್ತವೆ. ಓಂ ಎಂಬ ದೀರ್ಘವಾದ ಉಚ್ಚಾರಣೆಯಿಂದ ಏಕಾಗ್ರತೆ ಹಾಗೂ ಮಾನಸಿಕ ಒತ್ತಡಗಳು ನಿಯಂತ್ರಿಸಲ್ಪಡುತ್ತವೆ.
ಓಂ ಸೋತ್ರದ ಕ್ರಮಬದ್ಧತೆಯಲ್ಲಿ ರಕ್ತ ಸಂಚಾರವು ಸರಾಗವಾಗಿ ಹೃದಯ ಹಾಗೂ ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ. ಶ್ವಾಸಕೋಶದಲ್ಲಿ ಕಫ ಶೀತ ನೆಗಡಿ ಅಸ್ತಮಾ ಇಂತಹ ಕಾಯಿಲೆಗಳಿಗೂ ಓಂ ಸ್ತುತಿಯು ಮನೆಮದ್ದಿನಂತೆ ಸಹಕಾರಿಯಾಗುತ್ತದೆ. ನೇರವಾಗಿ ಕುಳಿತು ಓಂ ಎಂದು ಹೇಳುವದರಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ. ಮನಶುದ್ಧಿ ದೇಹಶುದ್ಧಿಯಿಂದ ಆರೋಗ್ಯವು ವೃದ್ಧಿಸುತ್ತದೆ.
– ಯಶೋಧ ರಾಮಕೃಷ್ಣ ಮೈಸೂರು