ಜನರು ಸೋಮಾರಿಗಳಾಗುವುದಕ್ಕೆ ವಿದ್ಯಾಭ್ಯಾಸ ಕಾರಣವೇ?

– ವಿಶ್ವಾಸ್. ಡಿ. ಗೌಡ, ಸಕಲೇಶಪುರ

ಕಳೆದ ಅನೇಕ ವರ್ಷಗಳಿಂದ ನನ್ನನ್ನು ಕಾಡುವ ಪ್ರಶ್ನೆ? ವಿದ್ಯಾಭ್ಯಾಸ ನಮ್ಮನ್ನು ಸೋಮಾರಿಗಳಾಗಿಸುತ್ತದೆಯೇ?
ನನ್ನ ಮಗ ಇನ್ನೂ 9ನೇ ಕ್ಲಾಸಿನ ಹುಡುಗ. ಅಲಸಂಡೆ ಸಾಲಿಗೆ ಗೊಬ್ಬರ ಹಾಕಿ ಮಣ್ಣು ಕೂಡಲು ಕರಕೊಂಡು ಹೋದೆ. ಒಂದು ಬದಿಯಲ್ಲಿ ನಾನು ಇನ್ನೊಂದು ಬದಿಯಲ್ಲಿ ಅವನು. ಮಣ್ಣು ಕೂಡಿದನಾದರೂ, ನನ್ನ ಬದಿಯನ್ನು ನೋಡಿ ಅವನ ಬಾಯಿಯಲ್ಲಿ ಒಂದು ಉದ್ಗಾರ ಹೊರಟಿತು. ಕೃಷಿ ಕೆಲಸ ಎಂದರೆ ಕುಶಲ ಕಾರ್ಮಿಕತೆ( ಸ್ಕಿಲ್ಡ್ ಲೇಬರ್) ಅಲ್ಲ. ಕಾರ್ಖಾನೆಗಳಿಗೆ ಅಕುಶಲ ಕಾರ್ಮಿಕ(ಅನ್ ಸ್ಕಿಲ್ಡ್ ಲೇಬರ್) ಸಲ್ಲ. ಆದರೆ ಕುಶಲತೆ ಇಲ್ಲದಿದ್ದರೆ ಸಾಲು ನೆಟ್ಟಗೆ ಬರುವುದೇ ಇಲ್ಲ. ಇದು ನನಗೆ ಶಾಲೆಯಲ್ಲಿ ಹೇಳಿ ಕೊಟ್ಟ ಪಾಠ ಹಾಗಾಗಿ ಹಾಗೆ ಹೇಳುವುದು ತಪ್ಪಲ್ಲವೇ ಎಂಬ ಪ್ರಶ್ನೆ?

ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದೆ. ಹತ್ತಾರು ಜನರು ಸೇರಿ ಮಾತುಕತೆಯಾಗುತ್ತಿತ್ತು. ಸುಮಾರು 20ರ ಪ್ರಾಯದ ಉತ್ಸಾಹಿ ತರುಣನೊಬ್ಬ ಕೃಷಿ,ಕೃಷಿ ಸಮಸ್ಯೆಗಳತ್ತ ಉತ್ಸಾಹದಿಂದ ಮಾತನಾಡುತ್ತಿದ್ದ. ಏನಾದರೂ ಇನ್ನು ಕೃಷಿ ಕಷ್ಟ. ಇವರ ಮೇಪುದು ಯಾರು? ಎಂಬ ಧಾರ್ಷ್ಟ್ಯದ ಮಾತನ್ನು ಕೆಲಸಗಾರರ ಬಗ್ಗೆ ನುಡಿಯುತ್ತಿದ್ದ . ಕುಳಿತು ಕೇಳುತ್ತಿದ್ದ ನನಗೆ ಬಹಳ ಇರಿಸು ಮುರಿಸಾಗಿತ್ತು. ಮಾತುಕತೆಯೆಲ್ಲ ಮುಗಿದ ಮೇಲೆ ಹುಡುಗನನ್ನು ಮಾತಿಗೆಳೆದೆ. ಜೀವನಕ್ಕೆ ಬೇಕಾದಷ್ಟು ತೋಟದ ವ್ಯವಸ್ಥೆ ಇದ್ದು ಸ್ವಾವಲಂಬಿಯಾಗಿ ಬದುಕಲು ಯಾವುದೇ ಸಮಸ್ಯೆ ಇಲ್ಲ ಎಂಬುದರ ಅರಿವಾಗಿತ್ತು. ದನಕರುಗಳು ಇವೆಯೇ ಮತ್ತು ಹಾಲು ಕರೆಯುವುದು ಯಾರು ಎಂದು ಪ್ರಶ್ನಿಸಿದೆ? ಸಹಜವಾಗಿ ಬಂತು, ಎರಡೇ ಇರುವುದು.ಅಮ್ಮ ಹಾಲು ಕರೆಯುವುದು. ಈಗ ಅಮ್ಮನಿಗೆ ಕೂಡೋದಿಲ್ಲ, ಕೆಲಸದವರು ಯಾರೂ ಸಿಗುವುದಿಲ್ಲ, ಹಾಗಾಗಿ ಅದನ್ನೂ ಮಾರಬೇಕೆಂದಿರುವೆ ಅಂದ. ಆಗ ತಾನೇ ಡಿಗ್ರಿ ಮುಗಿಸಿದ ಉತ್ಸಾಹಿ ಯುವಕನಿಗೆ ತಾನೂ ಒಬ್ಬ ಕೆಲಸಗಾರನಾಗಬೇಕು ಎಂಬ ಅರಿವೇ ಇರಲಿಲ್ಲ. ಅಮ್ಮನಿಗೆ ಸಹಾಯಕನಾಗಿ ತಾನು ನಿಂತು ಸ್ವಾವಲಂಬನೆಯತ್ತ ಹೆಜ್ಜೆ ಇರಿಸಬೇಕೆಂಬ ಕೆಚ್ಚೇ ಇರಲಿಲ್ಲ. ಇವೆರಡು ಘಟನೆಗಳು ಕೇವಲ ಉದಾಹರಣೆಗಳು ಮಾತ್ರ.
ನಮ್ಮ ಆತ್ಮವಿಶ್ವಾಸ ಹೆಚ್ಚಿಸುವುದಕ್ಕಾಗಿ, ಒಳಿತು ಕೆಡುಕಿನ ವಿಮರ್ಶೆಗಾಗಿ, ಯೋಚನಾ ಶಕ್ತಿಯ ವೃದ್ಧಿಗಾಗಿ, ಉತ್ತಮ ಸಂಸ್ಕಾರಕ್ಕಾಗಿ, ಪ್ರಾಪಂಚಿಕ ಜ್ಞಾನವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಕೆಲವೇ ಜನರಿಗೆ ಲಭಿಸುತ್ತಿದ್ದ ವಿದ್ಯಾಭ್ಯಾಸವನ್ನು ಶಾಲೆಗಳ ಮೂಲಕ ಸಾರ್ವಜನಿಕ ಗೊಳಿಸಲಾಯಿತು. ಆ ದಿಕ್ಕಿನಲ್ಲಿ ಒಂದಷ್ಟು ಯಶಸ್ವಿಯೂ ಆಗಿತ್ತು. ಆಗಿನ ಶಾಲೆಗಳಲ್ಲಿ ಪಾಠದೊಂದಿಗೆ ಜೀವನಾವಶ್ಯಕವಾದ (ಕಸಗುಡಿಸುವುದು, ತರಕಾರಿ ಬೆಳೆಸುವುದು, ಬಾವಿಯಿಂದ ನೀರು ಸೇದುವುದು ,ಗಾರ್ಡನಿಂಗು, ಶಾಲಾ ಅಂಗಳದ ವಿಸ್ತರಣೆ, ಸಜ್ಜಿಗೆ ಬೇಯಿಸೋದು) ಇತ್ಯಾದಿ ದೈಹಿಕ ಕಾರ್ಯಕ್ಕೆ ಒತ್ತಿತ್ತು . ಅತಿಯಾದ ಹೋಂವರ್ಕಿನ ಒತ್ತಡವಿಲ್ಲದುದರಿಂದ ಮನೆ ಕೆಲಸ ಕಾರ್ಯದಲ್ಲಿ ಬಲತ್ಕಾರವಾಗಿಯಾದರೂ ಸೇರಿಸಿಕೊಳ್ಳಲಾಗುತ್ತಿತ್ತು. ಹೀಗೆ ಶ್ರಮ ಜೀವನಕ್ಕೆ ಪಾಠದೊಂದಿಗೆ ಪೂರಕ ವಾತಾವರಣವಿತ್ತು.

ಯಾವಾಗ ವಿದ್ಯಾರ್ಜನೆ ಎಂಬುದು ಜ್ಞಾನಾರ್ಜನೆಗಿಂತ ಮುಖ್ಯವಾಗಿ ಅರ್ಥಾರ್ಜನೆಗೆ ಪ್ರಾಶಸ್ತ್ಯ ಕೊಟ್ಟಿತೋ, ಶಾಲೆಗಳೆಲ್ಲವೂ ವಿದ್ಯಾ ದಾನಕ್ಕಿಂತ ಮುಖ್ಯವಾಗಿ ವಿದ್ಯೋದ್ಯಮಗಳಾದುವೋ ಅಲ್ಲಿಗೆ ಕೃಷಿ ಎಂಬುದು ಎರಡನೇ ವರ್ಗಕ್ಕೆ ಸೇರಿತು. ಕೃಷಿಕರೆಲ್ಲರೂ ಅನ್ ಸ್ಕಿಲ್ಡ್ ಲೇಬರ್ಗಳ ಸಾಲಿಗೆ ಸೇರಿ ಹೋದರು. ಕೃಷಿ ಸಂಬಂಧಿ ಉದ್ಯೋಗಿಗಳೆಲ್ಲರಿಗೂ ನಿರುದ್ಯೋಗಿಗಳು ಎಂಬ ಪಟ್ಟವನ್ನು ಕಟ್ಟುವಂತೆ ಬೆಳೆಸಲಾಯಿತು. ಮಾನಸಿಕವಾಗಿ ಎರಡನೇ ದರ್ಜೆಯ ಉದ್ಯೋಗವೆಂಬಂತೆ ಕೃಷಿಯನ್ನು ಬಿಂಬಿಸಿದ ಕಾರಣ ಕಲಿತವರೆಲ್ಲರೂ ಕೆಲಸ ಮಾಡಿಸುವವರೇ ಆಗಬೇಕು ಎಂಬ ಭಾವ ಮನದಲ್ಲಿ ಮೂಡಿದ ಪರಿಣಾಮ ಉತ್ಸಾಹಿ ಯುವಕನ ಮೂಲಕ ಹೊರ ಬಂತು. ಕೃಷಿಯಲ್ಲಿ ಎಲ್ಲಾ ಅನುಕೂಲತೆಗಳಿದ್ದೂ,ಸಾಧ್ಯತೆಯೂ ಇದ್ದೂ ಮಗುವಿಗೆ ಕೆಲಸದ ಪಾಠವನ್ನು ಹೇಳಿಕೊಡಬೇಕಾದ ತಾಯಂದಿರು ಇಂದು ಪೇಟೆಯ ಕಡೆಗೆ ಮುಖ ಮಾಡಿರುವುದನ್ನು ನೋಡಿಲ್ಲವೇ? ಆ ತಾಯಂದಿರಿಗೂ ಸ್ವತಹ ದುಡಿಯ ಬಲ್ಲೆ ಎಂಬ ಆತ್ಮವಿಶ್ವಾಸವು ಹೊರಟು ಹೋದಂತೆ ಕಾಣುತ್ತಿಲ್ಲವೇ? ಸ್ವಾವಲಂಬಿಯಾಗಿ ಬದುಕುವುದನ್ನು ಬಿಟ್ಟು ಪರಾವಲಂಬನೆಯತ್ತ ಹೆಜ್ಜೆ ಇರಿಸುವುದು ವಿದ್ಯಾಭ್ಯಾಸದ ಉದ್ದೇಶಕ್ಕೆ ಕೊಳ್ಳಿ ಇಟ್ಟಂತಲ್ಲವೇ?

ನೆನಪಿಡಬೇಕಾದದ್ದು ಏನೆಂದರೆ ಇಂದು ಶಾರೀರಿಕ ದುಡಿಮೆಯನ್ನು ಮಾಡುವ ವರ್ಗಕ್ಕೆ, ಕುಶಲಕರ್ಮಿಗಳೆಂದು ಪೇಟೆಯ ಕಡೆ ಮುಖ ಮಾಡಿರುವ ವರ್ಗದ ಮಂದಿಗಿಂತ ಜಾಸ್ತಿ ಸಂಪಾದನೆ ಇದೆ. ಆದರೂ ಅವರ ಬಾಯಲ್ಲಿ ಕೇಳುತ್ತಿರುವ ಮಾತುಗಳು ಈ ಕಷ್ಟದ ಕೆಲಸ ನನಗೆ ಸಾಕು ನನ್ನ ಮಕ್ಕಳಿಗೆ ಬೇಡ ಎಂಬಲ್ಲಿಗೆ ಕೊನೆಗೊಳ್ಳುತ್ತದೆ. ಮುಂದಿನ ಪೀಳಿಗೆಯ ಎಲ್ಲಾ ಮಕ್ಕಳು ಕೆಲಸಗಾರರೆಲ್ಲ ಸೋಮಾರಿಗಳು ಎಂದು ನಿಂದಿಸುವಲ್ಲಿ ತಯಾರಾಗುತ್ತಿದ್ದಾರೆ. ಕೆಲಸ ಮಾಡುವವರು ಯಾರು ಎಂದು ಹುಡುಕಬೇಕಷ್ಟೆ..!! ಸ್ವಾಭಿಮಾನ ಕಲಿಸದ ವಿದ್ಯೆ, ಸ್ವಾವಲಂಬನೆ ಇಲ್ಲದ ಅರ್ಥ ನೀತಿ, ವೈರಾಗ್ಯವಿಲ್ಲದ ಸನ್ಯಾಸ ಮಾನವೀಯತೆ ಇಲ್ಲದ ಜೀವನ ವ್ಯರ್ಥ ಎಂಬ ಹಿರಿಯರ ಮಾತು ಸಾರ್ವಕಾಲಿಕ ಸತ್ಯ.