Table of Contents

ಏಕಾಂಗಿ

ನಾನು ಮತ್ತು ನನ್ನಂತಹ ಕೆಲವು ಏಕಾಂಗಿಗಳಿಗೆ, ಒಂಟಿತನ ಇಷ್ಟಪಡುವವರಿಗೆ ಅಹಂ ಜೊತೆಗೆ ಕಿಚ್ಚಿರುತ್ತದೆ. ನನ್ನತನ, ನಮ್ಮತನವನ್ನು ಯಾವುದೇ ಸಂದರ್ಭದಲ್ಲಿಯೂ, ಯಾವ ಸಮಯದಲ್ಲಿಯೂ ಮಾರಿಕೊಳ್ಳಲ್ಲಾ. ಇದ್ದದ್ದು ಇದ್ದ ಹಾಗೆಯೇ ಹೇಳೋದು ನಮ್ಮ ಜಾಯಮಾನ ಅದು ಕೂಡ ಯಾವ ಮುಲಾಜಿಲ್ಲದೆ, ಹಾ..! ಅದು ಯಾರೇ ಆಗಿರಲಿ, ಒಂದು ಕೆಲಸ ಆಗಲಿ ಅಥವಾ ಇನ್ನೊಂದಾಗಲಿ ಆಗೋದೆ ಆದರೆ ಆಗುತ್ತೆ ನನ್ನಿಂದ ಅಂತ ಹೇಳಿ ಮಾಡೆ ಮಾಡ್ತಿವಿ ಹೊರತು ನಮ್ಮಿಂದ ಆಗೊಲ್ಲ ಅಂತ ತಿಳಿದರೂ ಆಗುತ್ತೆ ಅಂತ ಅವರಿಗೆ ಒಂದರ ಮೇಲೆ ಒಂದು ಸುಳ್ಳು ಹೇಳುತ್ತಾ ಹೋಗೂಲ್ಲ, ಹೋಗೋದು ಇಲ್ಲ. ಏನಿದ್ದರೂ ನೇರಾ ನೇರ ಮಾತು. ತಿಳಿದು ತಿಳಿದು ತಪ್ಪು ಮಾಡೋಲ್ಲ, ಒಂದೊಮ್ಮೆ, ಒಮ್ಮೊಮ್ಮೆ ತಿಳಿಯದೆ ಮಾಡಿದರೂ ಯಾವ ಅಂಜಿಕೆಯಿಲ್ಲದೆ, ಅಳುಕಿಲ್ಲದೆ ತಪ್ಪಾಯಿತು ಅಂತ ಅವರು ಯಾರೇ ಆಗಿರಲಿ ನಮಗಿಂತ ಚಿಕ್ಕವರಾದರೂ ಸರಿ ಕ್ಷಮಾಪಣೆ ಕೇಳುತ್ತೇವೆ ಹೊರತು ಅದನ್ನು ಬೆಳೆಸಲು ಇಷ್ಟಪಡುವುದಿಲ್ಲ.
ಎಷ್ಟೆ ಕಷ್ಟ ಬಂದರೂ, ತೊಂದರೆ ಆದರೂ ಪ್ರಾಮಾಣಿಕತೆಯನ್ನು ಬಿಟ್ಟು ಕೊಡೊಲ್ಲ. ಸಿಕ್ಕ ಸಿಕ್ಕವರಿಗೆಲ್ಲಾ ಸಲಾಂ ಹೊಡೆಯುತ್ತ, ಕಂಡ ಕಂಡವರಿಗೆಲ್ಲ ಕೈ ಮುಗಿಯುತ್ತ, ಕೈ ಕಟ್ಟಿ ನಿಲ್ಲುವ ಸ್ವಭಾವ ನಮ್ಮದಲ್ಲ. ಸುಳ್ಳು ಹೇಳೊಲ್ಲ, ಹಾಗೆಯೇ ಬಣ್ಣ ಹಚ್ಚದೆ, ಬಣ್ಣ ಹಚ್ಚಿದಂತೆ ನಟಿಸುವವರ ಹಾಗೆ ನಟಿಸಲೂ ನಮಗೆ ಬರೊಲ್ಲ. ಈ ಏಕಾಂಗಿತನ, ಒಂಟಿತನ ಹೇಗೆ ಬದುಕಬೇಕು ನಾವು ಅನ್ನೋದನ್ನ ಕಲಿಸಿರುತ್ತೆ ನಮಗೆ. ನಡುವಳಿಕೆ, ನಡೆ-ನುಡಿ, ವ್ಯಕ್ತಿತ್ವ, ನಗು, ಮಾತು, ಹೀಗೆ ಪ್ರತಿಯೊಂದನ್ನು ಚೊಕ್ಕಟವಾಗಿ ಕಲಿಸಿರುತ್ತೆ. ಯಾರ ಹತ್ತಿರವಾಗಲಿ ಹೇಗೆ ಮಾತನಾಡಬೇಕು, ಏನು ಮಾತನಾಡಬೇಕು, ಏನು ಮಾತನಾಡಬಾರದು ಯಾವ ಸಂದರ್ಭದಲ್ಲಿ ಹೇಗೆ ಸ್ಪಂದಿಸಬೇಕು ಅನ್ನುವುದನ್ನ ಈ ಏಕಾಂಗಿತನವೇ ಕಲಿಸೊದು. ಹಲವರಿಗೆ ನಾವು ಕುತೂಹಲದ ಪಾತ್ರವಾದರೆ, ಕೆಲವರಿಗೆ ನಮ್ಮ ಪಾತ್ರ ನೋಡಲೂ ಆಗುವುದಿಲ್ಲ.
ಹಾ..! ಆಕಸ್ಮಾತ್ ಯಾರಿಗಾದರೂ ಇಷ್ಟ ಆದರೂ ಅದು ಕೇವಲ ಆರಂಭದಲ್ಲಿ ಮಾತ್ರ, ನಂತರ ಅವರಿಗೂ ನಾವು ಬೇಸರ ಆಗೋದು ಸಹಜ. ನಾವು ಯಾವಾಗಲೂ ಒಂದೇ ತರ, ಅದು ಎಷ್ಟು ವರ್ಷ ಕಳೆದರೂ ನಾವು ಮಾತ್ರ ಬದಲಾಗೋಲ್ಲ. ಅದು ಯಾರಿಗಾಗಿಯೂ, ಯಾಕಾಗಿಯೂ ಬದಲಾಗಲ್ಲ. ಇವತ್ತೊಂತರಾ, ಇಗ ಒಂತರಾ, ನಾಳೆ ಇನ್ನೊಂದತರಾ, ಇಲ್ಲೊಂದತರಾ, ಅಲ್ಲೊಂದತರಾ, ತರ ತರವಾಗಿ ಬದುಕಲು ಬರುವುದಿಲ್ಲ ನಮಗೆ, ಅದು ಯಾವಾಗಲೂ ಒಂದೇ ತರಾ. ಅಪ್ಡೇಟ್ ಆಗೋಲ್ಲ, ಅದು ನಮಗೆ ಬೇಕಾಗಿಯೂ ಇಲ್ಲ. ಆಕರ್ಷಣೆಗಳಿಗೆ ಆಶ್ಚಯ೯ಚಕಿತರಾಗುವುದಿಲ್ಲ. ಅಂದೆಂತ ಅನುಭವ ಆಗಲಿ, ಅದ್ಭುತವಾಗಲಿ ಅದರೆಡೆಗೆ ಒಂದು ನೀರ್ಲಕ್ಷ ಭಾವ ಇದ್ದೆ ಇರುತ್ತೆ. ನಿಮಗೆ ಅದ್ಭುತವಾಗಿರುವಂತಹದ್ದು ನಮಗೆ ಏನು ಏನೇನು ಅನಿಸದೆ ಇರಬಹುದು. ನಮಗೆ ತುಂಬಾ ಆಶ್ಚಯ೯ವಾಗಿದ್ದು ನಿಮಗೆ ಏನೇನು ಇಲ್ಲವೆಂಬಂತೆ ಅನಿಸಲುಬಹುದು. ಆದರೆ ನಮ್ಮ ಮನಸ್ಸನ್ನ ಯಾರೂ ಅರ್ಥಮಾಡಿಕೊಂಡೂ ಆ ಮನಸ ಮುಟ್ಟುತ್ತಾರೆಯೋ ಅವರ ಸಂಬಂಧವನ್ನು ಉಳಿಸಿಕೊಳ್ಳುತ್ತೇವೆ ಪ್ರಾಮಾಣಿಕತೆಯಿಂದ.
ಮನಸಾಕ್ಷಿಗೆ ವಿರುದ್ಧವಾಗಿ ಯಾವಾಗಲೂ ನಡೆದುಕೊಳ್ಳಲ್ಲ. ನಮಗೆ ಇಷ್ಟವಾದುದ್ದನ್ನೆ ಮಾಡುತ್ತೇವೆ ಹೊರತು ಯಾರ ಇಷ್ಟಕ್ಕೆ ನಾವು ಸೋಲಲ್ಲ. ನಮ್ಮಗಳ ಸುತ್ತ ಸಾವಿರಾರು ಹಿಂಬಾಲಕರು ಇರುವುದಿಲ್ಲ; ಅದು ಬೇಕಾಗಿಯೂ ಇಲ್ಲ. ಎಲ್ಲೋ ಕೆಲವು ಅರ್ಥಮಾಡಿಕೊಂಡ ಮನಸ್ಸುಗಳು ಇರುತ್ತವೆ. ಆ ಮನಸ್ಸು ಕೂಡ ನಾವು ಹೀಗಿರುವುದನ್ನು, ಯಾಕಾಗಿ ನಾವು ಹೀಗಿರುತ್ತೇವೆಂದು ಅರ್ಥೈಸಿಕೊಂಡೆ ನಮ್ಮ ಹತ್ತಿರ ಆಗಿರುತ್ತಾರೆ ಹೊರತು ನಾವೇ ಅವರ ಹಿಂದೆ ಹೋಗುವುದಿಲ್ಲ. ಗುಂಪುಗಳು ಇಷ್ಟವಾಗೊಲ್ಲ, ಇನ್ನೂ ಗುಂಪಿನಲ್ಲಿ ಗೋವಿಂದನಾಗಲೂ ಇಷ್ಟವೇ ಇಲ್ಲ. ಯಾರಿಗೋ, ಯಾವುದೋ ವಿಷಯಕ್ಕೂ ಅಷ್ಟು ಬೇಗ ಸ್ಪಂದಿಸುವುದಿಲ್ಲ. ಸ್ಪಂದಿಸಿದರೆ ಅರ್ಥ ಇದ್ದೆ ಇರುತ್ತೆ ಹೊರತು ಅದು ಕಾಟಾಚಾರದ ಮಾತು ಆಗಿರುವುದಿಲ್ಲ. ನಾವು ಸುಖಾ ಸುಮ್ಮನೆ ಯಾರ ತಂಟೆಗೂ ಹೋಗೋಲ್ಲ. ಯಾರ ಕುರಿತಾಗಿಯೂ ತಿಳಿದು, ತಿಳಿಯದಿದ್ದರೂ ಅದರ ಗೋಜಿಗೆ ಹೋಗುವುದಿಲ್ಲ. ಇಷ್ಟವಾದರೆ ಮೆಚ್ಚಿ ಹರಸ್ತಿವಿ, ಇಲ್ವಾ ನಾವು ನಾವಷ್ಟೇ. ಆದರೆ ನಮ್ಮ ಸ್ವಾಭಿಮಾನಕ್ಕೆ ದಕ್ಕೆ ಬರುವಾಗ, ಬಂದಾಗ ಸಿಡಿದುಬಿಳ್ತಿವಿ; ಅದು ಕೂಡ ಯಾವಾಗಲೋ. ಆದಷ್ಟು ಕ್ಷಮಿಸಿ ಮುಂದೆ ಸಾಗುವ ಮನ ನಮ್ಮದು. ಹಾಂಗಂತ ಸುಮ್ಮನಿರುವೆವೆಂದು ಬರಿ ಕೆಣಕುತ್ತಲೆ ಇದ್ದರೆ ಅದರ ಪರಿಣಾಮ ತುಂಬಾ ಘೋರವಾಗಿರುತ್ತೆ.ಹಾಗೆ ಹೇಳಬೇಕೆಂದರೆ ನೋಡುವವರ ಕಣ್ಣಿಗೆ ನಾವು ಏನೇನು ಅಲ್ಲವೇ ಅಲ್ಲ ಅನ್ನೋ ತರ ಇರ್ತಿವಿ, ಕಾಣ್ತಿವಿ. ಆದರೆ ನಮಗೆ ಪ್ರತಿಯೊಂದು ಸೂಕ್ಷ್ಮಾಣು ಸೂಕ್ಷ್ಮ ಅರಿವಾಗುತ್ತೆ, ತಿಳಿಯುತ್ತೆ.
ನಾವು ಹೀಗೆ ಹೀಗಿಗೆ ಎಂದೂ ತೆರೆದಿಡುವುದಿಲ್ಲ ಯಾರ ಮುಂದೆಯೂ. ನಮ್ಮಿಂದ ಸಹಾಯ ಮಾಡಲು ಆದರೆ ಮಾಡುತ್ತೆವೆ ಹೊರತು ಅವರನ್ನು ಇನ್ನೂ ಕಷ್ಟಕ್ಕೆ ದೂಡುವುದಿಲ್ಲ. ಯಾರಿಗಾದರೂ ವಂಚಿಸಿ, ಯಾಮಾರಿಸಿ ನಾವು ಮಾತ್ರ ಸುಖವಾಗಿರಲು ಬಯಸುವುದಿಲ್ಲ. ಈ ಏಕಾಂಗಿತನ, ಏಕಾಂಗಿಯಾಗಿರೊದು ಅನ್ನುವುದು ಸುಮ್ಮನೇ ಅಂತೂ ಅಲ್ಲವೇ ಅಲ್ಲ. ಎಷ್ಟೋ ಜನರು ಕ್ಷಣ ಕ್ಷಣದಲ್ಲಿ ಬದಲಾಗಿ ಪೆಟ್ಟು ಕೊಟ್ಟ ನೋವು, ಇವರು ಹೀಗಿದ್ರಾ,? ಇಗ ಹೀಗಾದ್ರಾ ಅಂತ ಅನುಮಾನಿಸುವ ಅವರ ಬದಲಾವಣೆ; ದಿನಕ್ಕೊಂದು, ಕ್ಷಣಕ್ಕೊಂದು ಅವರ ವಿಧ ವಿಧವಾದ ಮುಖವಾಡಗಳು, ಬಣ್ಣ ಬಣ್ಣದ ಮಾತುಗಳು, ಬಣ್ಣ ಇಲ್ಲದೆ ನಟಿಸುವ ಆ ಪಾತ್ರಗಳು ಇವುಗಳನೆಲ್ಲಾ ನೋಡಿ ನೋಡಿ ನಮಗೆ ನಮ್ಮ ಮೇಲೆಯೇ ಅಸಹ್ಯ ಆಗಿರುತ್ತದೆ, ಏಕೆಂದರೆ ಇವರು ನಮ್ಮವರ? ನಮ್ಮ ಪರಿಚಯದವರ? ಇಷ್ಟು ದಿವಸ ಇವರ, ಇಂತವರ ಜೊತೆ ನಾನಿದ್ನ? ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುತ್ತ ನಮ್ಮಲ್ಲಿ ಏನೋ ಒಂದು ಆಳವಾಗಿ, ಬಲು ದೃಡವಾಗಿ ಬೇರೂರಿರುತ್ತೆ; ಅದುವೇ ಈ ಏಕಾಂಗಿತನ, ಒಂಟಿತನ.
ನೀವು ನಮ್ಮನ್ನ ದೂರದಿಂದ ನೋಡಿದಾಗ ಅಹಂಕಾರಿ ಅಂತ ಆರಾಮಾಗಿ ಹೇಳ್ತೀರಾ. ಆದರದು ನಮ್ಮ ಸ್ವಾಭಿಮಾನದ ಸಂದೇಶ, ಸಂಕೇತ. ನಮ್ಮಿಂದ ಯಾರಿಗೂ ನೋವಾಗಲಿ, ತೊಂದರೆಯಾಗಲಿ ಆಗೋಲ್ಲ. ಒಳ್ಳೆದನ್ನೆ ಬಯಸ್ತಿವಿ ನಮ್ಮ ಶತ್ರುಗಳಿಗೂ. ಇನ್ನೂ ಒಂದು ಹೇಳಬೇಕೆಂದರೆ ನಮಗೆ ಇಷ್ಟ ಆಗದೇ ಇರುವುದೊಂದೆ ಒಂದು, ಅದು ನಮ್ಮ ಸ್ವಾಭಿಮಾನವನ್ನು ಕೆಣಕುವಂತಹ ಮಾತುಗಳು, ಪ್ರಶ್ನೆಗಳು, ಉತ್ತರಗಳು. ಉಳಿದಂತೆ ಸ್ನೇಹ, ಪ್ರೀತಿ ವಿಶ್ವಾಸಕ್ಕೆ ಯಾವಾಗಲೂ ಒಂದು ಹೆಜ್ಜೆ ಮುಂದೆ. ಈ ನಮ್ಮಂತವರೂ ನಿಮಗಿಷ್ಟವಾಗಿ ಅದನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾದರೆ ಉಳಿಸಿಕೊಳ್ಳಬಹುದು. ಆಗೋಲ್ವಾ ದೂರ ಸರಿಯಬಹುದು. ಆದರೆ ಕಾಟಾಚಾರದ ವ್ಯಕ್ತಿತ್ವ, ಮಾತು, ನಮಗೆ ಇಷ್ಟ ವಾಗೊಲ್ಲ. ಕೊನೆಯದಾಗಿ ಹೇಳಿಬಿಡ್ತಿನಿ, ನಾವು ಯಾವತ್ತಿದ್ರೂ ಒಂದೇ ತರ, ಇನ್ನೂ ಮುಂದೆ ಎಷ್ಟೋ ವರ್ಷ ಬಿಟ್ಟು ಬಂದು ನೋಡಿದರೂ…
ಉಳಿದಂತೆ, ಇರುವಂತೆ… ನಾವು ಸರಿ ಎಂದೆನ್ನುವವರು ನಮ್ಮ ಜೊತೆ ಇರ್ತಾರೆ. ನಮಗಿಂತ ಸರಿ ಇರುವವರು ಬೇಕೆನ್ನುವವರು ಬಿಟ್ಟು ಹೋಗ್ತಾರೆ ಇಷ್ಟೇ. ಇದರಲ್ಲಿ ತಪ್ಪು ನಮ್ಮದೆನಿಲ್ಲ. ಎಲ್ಲ ಅವರವರ ಆಯ್ಕೆ, ಅವರು ಕೊಡುವ ಪ್ರಾಮುಖ್ಯತೆಯ ಮೇಲೆ ಅಷ್ಟೇ.
✍️ ವಿಜಯ Iliger
Hubli 9886063123