ಚಿರವಿರಹಿ ರಾಧೆ

ರಾಧೆ ಬಾಲ್ಯದ ಗೆಳತಿ ಕೃಷ್ಣನಿಗೆ ಜೊತೆಗಾತಿ
ಮಾಧವಗು ಅವಳಲ್ಲಿ ತುಂಬು ಪ್ರೀತಿ
ಸಾಧಕವು ಕೃಷ್ಣನಾ ಮುರಳಿಯಾ ಗಾನವದು
ಮೋದವದೆ ಇಬ್ಬರೂ ಜೊತೆಯಲಿರಲು

ಮಾಧವನ ಮುರಳಿಯನು ಕೇಳುತಲಿ ಮನಸೋತು
ರಾಧೆ ತಾ ಹಗಲಿರುಳು ಕೃಷ್ಣನನೆ ನೆನೆದು
ಮೋದದಲಿ ಮೈಮರೆತು ಸ್ಮರಿಸುತಲಿ ಕೇಶವನ
ರೋದನೆಯು ಅವನಿರದೆ ರಾಧೆಗೆಂದು

ಗಾಢ ಪ್ರೀತಿಯ ಹೊಂದಿ ಮನದಲ್ಲಿ ಕೃಷ್ಣನಲಿ
ರೂಢಿಯನು ಮರೆತವಳು ಅವನಿಗಾಗಿ
ಓಡುತಿದ್ದಳು ಮುರಳಿ ಗಾನವನು ಕೇಳುತಲೆ
ದೂಡಿ ಮತ್ತೆಲ್ಲ ಬೃಂದಾವನಕೆ

ಲೋಕ ಉದ್ಧರಿಸಲೇ ಹುಟ್ಟಿದವ ಶ್ರೀಕೃಷ್ಣ
ಮೂಕನಾಗಲೆಬೇಕು ಕೆಲವು ಬಾರಿ
ನೂಕಿ ಸ್ವಂತದ ಚಿಂತೆ ದುಷ್ಟಶಿಕ್ಷಣಕಾಗಿ
ಗೋಕುಲವ ಬಿಟ್ಟವನು ಹೊರನಡೆದನು

ಅಗಲಿ ಕೃಷ್ಣನ ರಾಧೆ ಬದುಕು ದುಸ್ತರವಾಯ್ತು
ನೊಗದಲ್ಲಿ ಸಿಲುಕಿದಳು ಮದುವೆಯಾಗಿ
ಮೊಗದಲ್ಲಿ ಕಳೆಯಿಲ್ಲ ಮಕ್ಕಳಾದರು ಆಕೆ
ಅಗಲಿಕೆಯ ತಾಳದೆಯೆ ಮನೆ ತೊರೆದಳು

ನಡೆಯುತಲಿ ದ್ವಾರಕೆಗೆ ಕೃಷ್ಣನನು ಹುಡುಕುತ್ತ
ಕಡೆಗೆ ಸೇರಿದಳವಳು ಕೃಷ್ಣನರಮನೆಯ
ಒಡಲಾಳದಲಿ ಪ್ರೀತಿ ಇದ್ದರೂ ಮೊದಲಂತೆ
ತಡವರಿಸುತಿಬ್ಬರೂ ಮೂಕರಾಗಿ

ವರುಷಗಳು ಉರುಳಿತ್ತು ವಯಸದುವು ಮಾಗಿತ್ತು
ಮುರಳಿಲೋಲನು ವ್ಯಸ್ತ ಕಾರ್ಯಭಾರದಲಿ
ಅರವತ್ತು ದಾಟಿತ್ತು ರಾಧೆಗೂ ಮುಪ್ಪಾಗ
ಮರಳದಾಯಿತು ಸಲಿಗೆ ಹಿಂದಿನಂತೆ

ಭರಿಸಲಾಗದೆ ರಾಧೆ ಕೆಲಸವನು ತ್ಯಜಿಸಿದಳು
ಅರಮನೆಯ ಬಿಟ್ಟವಳು ಹೊರನಡೆಯಲು
ಭರದಿ ಬಂದನು ಕೃಷ್ಣ ರಾಧೆಯೆಡೆ ನೋವಿನಲಿ
ಮುರಳಿಯನು ನುಡಿಸಿದನು ಅವಳಾಸೆಯಂತೆ

ಲೀನಳಾದಳು ರಾಧೆ ಮುರಳಿಯನು ಕೇಳುತಲಿ
ದೀನತೆಯ ತೋರುತ್ತ ಐಕ್ಯಳವಳು
ಮಾನಧನಳಾ ರಾಧೆ ಕೃಷ್ಣನನೆ ಪ್ರೀತಿಸುತ
ತಾನವನ ಕಣ್ಮುಂದೆ ಮರಣ ಹೊಂದಿದಳು

ನೊಂದನವ ಶ್ರೀಕೃಷ್ಣ ರಾಧೆಯಾ ಕೊನೆಕಂಡು
ಬೆಂದು ಮನದಲ್ಲವನು ಕೊಳಲ ಬಿಸುಟ
ಮುಂದೆಂದು ಕೊಳಲನ್ನು ಮುಟ್ಟಲಿಲ್ಲವು ಕೃಷ್ಣ
ಎಂದು ಮರೆಯದ ಪ್ರೀತಿ ಕೃಷ್ಣಕಾಂತೆ

  • ಮಾಲತಿ ಮೇಲ್ಕೋಟೆ | ಮುಕ್ತಕ ಧಾಟಿಯಲ್ಲಿ ರಚಿಸಿದ ಕವನ