Table of Contents

ಓ ಜೀವವೇ

ಮುಂದಡಿಯನಿಡುವೆಯಾ? ಆಲೋಚಿಸು
ಸೋಲು ಗೆಲುವಿನ ಕುರಿತು ನಿರ್ಧರಿಸು
ಸುತ್ತ ಮುತ್ತಲೆಲ್ಲ ನೀ ವೀಕ್ಷಿಸು
ಆತ್ಮ ಸಾಕ್ಷಿಯಲಿ ಕಾರ್ಯವಹಿಸು

ಆತ್ಮ ವಿಶ್ವಾಸವೆಂದೆಯಾ? ನನ್ನ ಹಿಡಿತ ,ಧೈರ್ಯ ಮಿಡಿತವಲ್ಲವೇ?
ನನ್ನ ಮೇಲಿನ ನಂಬಿಕೆ ಮನೋಬಲಗಳ ಒಕ್ಕಟ್ಟಲ್ಲವೇ?
ನನ್ನಂತರಂಗ ತರಂಗಗಳ ಪಿಸುಮಾತು ಜಾಣತನವಲ್ಲವೇ?
ಆತ್ಮನೇ ಪರಮಾತ್ಮ ಕರ್ತಾರನ
ಇಂಗಿತವೆಲ್ಲ ಆತ್ಮಬಂಧನವೇ ಅಲ್ಲವೇ?

ನಿಲ್ಲು ಜೀವವೇ ಬೆದರದಿರು ಭಯದಲ್ಲಿ
ಕೈ ಹಾಕಿದೆಡೆಯೆಲ್ಲ ಚಿನ್ನದಂತಿದೆ
ಬದುಕಲ್ಲಿ
ವಿಶ್ವಾಸವಿದ್ದಡೆ ಇಷ್ಟವಾಗುತಿದೆ
ವ್ಯವಹಾರಗಳಲ್ಲಿ
ನಿರಾಳತೆ ಸರಳತೆ ಮಾರ್ಮಿಕತೆ
ನಿತ್ಯ ಸತ್ಯಗಳಲ್ಲಿ

ಆತ್ಮವನು ಬಲಪಡಿಸು
ಸಜ್ಜನಿಕೆಯಲಿ ನಡೆ ಬಯಸು
ನಿಷ್ಟೆಯಲಿ ಸೇವೆ ನಡೆಸು
ಕೈ ಸೆರೆ ಸಿರಿ ಕಂಕಣ ತೊಡಿಸು

ಗೌರವ ರಕ್ಷೆಯಲಿ ಆತ್ಮ ಹೂವು
ಶಿರವೇರಿದ ಸಾರ್ಥಕತೆ ಬಿಗುವು
ಹಣ್ಣಾಗಿ ತೃಪ್ತಿ ನೀಡುವ ಮಾವು
ಮುಕ್ಕೋಟಿ ದೇವತೆಯಂತಹ ಗೋವು

ಆತ್ಮ ವಿಶ್ವಾಸವೊಂದು ದೇಹಬಂಧ
ಹೃದಯಪೂರ್ವಕ ವಿನಯ ಸಂಬಂಧ
ಬೆಳೆದು ಬರುತಿಹವೀ ಬಲ ಜೀವನಾಮೃತ ಗಂಧ
ಪರಿಮಳದ ಪಾತ್ರೆಯು ಸೌಜನ್ಯಮೂರ್ತಿಯು ಆತ್ಮವಿಶ್ವಾಸದಂದ

– ಕಲ್ಪನಾ ಅರುಣ