ದೈನಂದಿನ ಬದುಕಿನಲ್ಲಿ ಕನ್ನಡ

ವಿಶ್ವಾಸ್ ಡಿ.ಗೌಡ, ಸಕಲೇಶಪುರ

  • ವ್ಯಕ್ತಿಗೆ ಸಂಬಂಧಿಸಿದಂತೆ
  1. ನನ್ನ ನುಡಿ ಕನ್ನಡ, ನನ್ನ ನಾಡು ಕರ್ನಾಟಕ ಎಂಬ ಹೆಮ್ಮೆ ಸದಾ ಜಾಗೃತವಾಗಿರಲಿ. ಕನ್ನಡ ೨೩೦೦ ವರ್ಷಗಳ ಇತಿಹಾಸವುಳ್ಳ ಅತಿ ಪ್ರಾಚೀನ ಭಾಷೆ ಎಂಬ ಅರಿವು ನಿಮ್ಮಲ್ಲಿ ಸದಾ ಇರಲಿ.
  2. ನಮ್ಮ ಸಂಸ್ಕೃತಿ ಭಾರತದ ಅತ್ಯುತ್ತಮ ಸಂಸ್ಕೃತಿಗಳಲ್ಲೊಂದು ಎಂಬುದನ್ನು ನೆನಪಿಡಿ, ಒಂದು ಕಾಲಘಟ್ಟದಲ್ಲಿ ಮಧ್ಯ ಭಾರತದ ವರೆಗೆ ಕರ್ನಾಟಕ ವ್ಯಾಪಿಸಿತ್ತು.
  3. ನಾನು ಮೊದಲು ಕನ್ನಡಿಗ, ನಂತರ ಭಾರತೀಯ ಎಂಬುದೇ ನಿಜವಾದ ದೇಶಪ್ರೇಮ, ನಾಡ ಪ್ರೇಮ, ದೇಶಪ್ರೇಮ ಎರಡೂ ಪರಸ್ಪರ ವಿರೋಧಿಗಳಲ್ಲ.
  4. ಮನೆಯ ಒಳಗೆ, ಹೊರಗೆ, ಎಲ್ಲ ಕಡೆಯೂ, ಕನ್ನಡದಲ್ಲೇ ಮಾತನಾಡಿ. ಮಾತಿನ ಮಧ್ಯೆ ಬೇರೆ ಭಾಷೆಯ ಪದಗಳೂ ವಾಕ್ಯಗಳೂ ನುಸುಳಿ ಬಂದರೆ ಯೋಚಿಸಬೇಡಿ, ಅನ್ಯ ಭಾಷಿಕರು ಕನ್ನಡ ಮಾತನಾಡುವುದಿಲ್ಲ ಎಂದು ಗೊಣಗ ಬೇಡಿ. ನೀವು ಅವರೊಡನೆ ಕನ್ನಡದಲ್ಲೇ ಮಾತನಾಡಿ, ಅನಿವಾರ್ಯವಾಗಿ ಅವರು ಕನ್ನಡ ಕಲಿಯುವ ವಾತಾವರಣ ನಿರ್ಮಿಸಿ, ಇನ್ನೊಬ್ಬ ವ್ಯಕ್ತಿಗೆ ನಿಮ್ಮ ನುಡಿ ಅರ್ಥವಾಗುವುದಿಲ್ಲವೆಂದು ಖಚಿತವಾಗುವ ವರೆಗೆ ಕನ್ನಡ ದಲ್ಲೇ ಮಾತನಾಡಿ, ಮಾತನಾಡುವಾಗ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬಳಸಬೇಡಿ.
  5. ಕರ್ನಾಟಕದಲ್ಲಿ ನೆಲೆಸಿರುವ ವ್ಯಕ್ತಿ ಕನ್ನಡವನ್ನು ಕಲಿತಿರ ದಿದ್ದರೆ ಕನ್ನಡವನ್ನು ಕಲಿಯಬೇಕು ಎಂಬುದನ್ನು ಸೌಜನ್ಯ ದಿಂದ ತಿಳಿಸಿ; ಅವರಿಗೆ ಕನ್ನಡವನ್ನು ಕಲಿಸಿ. ಅವರು ತಪ್ಪು ತಪ್ಪಾಗಿ ಕನ್ನಡದಲ್ಲಿ ಸಂಭಾಷಿಸಿದರೆ, ಭಾಷಣ ಮಾಡಿದರೆ ಹಿಗ್ಗಿ ಪ್ರೋತ್ಸಾಹಿಸಿ,
  6. ಮನೆಗೆ ಕನ್ನಡ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ತರಿಸಿ ಇಂಗ್ಲಿಷ್ ಪತ್ರಿಕೆ ಅನಿವಾರವಾದರೆ ಮಾತ್ರ ತರಿಸಿ; ಕನ್ನಡ ಪತ್ರಿಕೆ ಕಡ್ಡಾಯವಾಗಿ ತರಿಸಿ. ನಿಮ್ಮ ಬಂಧುಗಳ ಗೆಳೆಯರ ಮನೆಗಳಲ್ಲೂ ತರಿಸಲು ಪ್ರೋತ್ಸಾಹಿಸಿ, ಕನ್ನಡದ ಕಿರುಪತ್ರಿಕೆಗಳಿಗೆ ಚಂದಾದಾರರಾಗಿ ಪ್ರೋತ್ಸಾಹಿಸಿ.
  7. ವ್ಯಾಪಾರ-ವಹಿವಾಟು ನಡೆಸುವಾಗ, ಪದಾರ್ಥಗಳನ್ನು ಖರೀದಿಸುವಾಗ ಕನ್ನಡಿಗರ ಅಂಗಡಿಗಳಿಗೆ ಹೋಗಿ, ಕರ್ನಾಟಕದಲ್ಲಿ ತಯಾರಾದ, ಕನ್ನಡಿಗರು ತಯಾರಿಸಿದ ಪದಾರ್ಥಗಳನ್ನು ಕೊಂಡು ಪ್ರೋತ್ಸಾಹಿಸಿ.
  8. ಹಣ್ಣು-ತರಕಾರಿ ಮಾರುವವರು, ಮನೆಗೆ ಬಂದು ವ್ಯಾಪಾರ ಮಾಡುವ ಜನರೊಂದಿಗೆ ಕನ್ನಡದಲ್ಲೇ ಮಾತನಾಡಿ.
  9. ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ, ಅವರಿಗೆ ಮನೆಯಲ್ಲಿ ಕನ್ನಡ ಚಿತ್ರ ಪುಸ್ತಕ, ಕಥೆ ಪುಸ್ತಕ ಓದಲು ಪ್ರೋತ್ಸಾಹಿಸಿ.
  10. ಮಕ್ಕಳಿಗೆ ಕರ್ನಾಟಕದ ಬಗ್ಗೆ ಪ್ರೀತಿ ಅಭಿಮಾನ ಮೂಡಿ ಬರುವಂತೆ ವಿಷಯ ತಿಳಿಸಿ; ಕತೆ ಹೇಳಿ; ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳ ಪುಸ್ತಕಗಳನ್ನು ಓದಿ ಹೇಳಿ.
  11. ಕನ್ನಡ ಪುಸ್ತಕಗಳನ್ನು ಕೊಂಡು ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯವನ್ನು ರೂಪಿಸಿ. ಅಲ್ಲಿ ಕನ್ನಡ ನಿಘಂಟುಗಳು, ವಿಶ್ವಕೋಶಗಳು ಇರಲಿ.
  12. ನಿಮ್ಮ ಮಕ್ಕಳನ್ನು, ನಿಮಗೆ ಗೊತ್ತಿರುವ ಮಕ್ಕಳನ್ನು ಐ.ಎ.ಎಸ್, ಐ.ಪಿ.ಎಸ್ ಮೊದಲಾದ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಿಸಲು ಪ್ರೋತ್ಸಾಹಿಸಿ,
  13. ಆಕಾಶವಾಣಿ, ದೂರದರ್ಶನಗಳಲ್ಲಿ ಕನ್ನಡ ಕಾಠ್ಯಕ್ರಮ ಗಳನ್ನು ಕೇಳುವುದಕ್ಕೆ ನೋಡುವುದಕ್ಕೆ ಆದ್ಯತೆ ಇರಲಿ. ಡಿ ಅಲ್ಲಿನ ಕಾಠ್ಯಕ್ರಮಗಳು ಕಳಪೆಯಾಗಿದ್ದರೆ ಅವುಗಳ ನಿರ್ದೇಶಕರಿಗೆ ಪತ್ರ ಬರೆದು ತಿಳಿಸಿ.
  14. ಕನ್ನಡ ಚಲನಚಿತ್ರಗಳನ್ನು ನೋಡಿ, ಕನ್ನಡ ಧ್ವನಿಮುದ್ರಿಕೆ ಗಳನ್ನು ಕೊಂಡುಕೊಳ್ಳಿ, ಕನ್ನಡ ವಾಹಿನಿಗಳನ್ನೇ ನೋಡಿ. ರೀಮೇಕ್ ಚಿತ್ರ, ಕನ್ನಡ ಸಂಸ್ಕೃತಿಗೆ ಹೊಂದದ, ಸಭ್ಯತೆಯ ಎಲ್ಲೆ ಮೀರಿದ ಚಿತ್ರಗಳನ್ನು ತಿರಸ್ಕರಿಸಿ.
  15. ನಿಮ್ಮ ಅರ್ಜಿಗಳೆಲ್ಲ ಕನ್ನಡದಲ್ಲಿರಲಿ, ಬ್ಯಾಂಕ್‌ ವಹಿವಾಟು ಕನ್ನಡದಲ್ಲಿರಲಿ, ಎಲ್ಲ ಕಡೆಗೂ ಕನ್ನಡದಲ್ಲೇ ರುಜುಮಾಡಿರಿ. ನಿಮ್ಮ ವ್ಯವಹಾರ ಇರುವಲ್ಲೆಲ್ಲ ಸಂಬಂಧ ಪಟ್ಟವರಿಗೆ ಅಧಿಕೃತ ಅರ್ಜಿ ಸಲ್ಲಿಸಿ ನಿಮ್ಮ ಸಹಿಯನ್ನು ಕನ್ನಡಕ್ಕೆ ಬದಲಿಸಿಕೊಳ್ಳಿರಿ ಇದಕ್ಕೆ ಕಾನೂನಿನ ಯಾವ ತೊಡಕೂ ಇಲ್ಲ

    ಮುಂದುವರೆಯುತ್ತದೆ