ಬ್ರಾಹ್ಮೀ ಮುಹೂರ್ತ

ವಿಶ್ವಾಸ್. ಡಿ. ಗೌಡ, ಸಕಲೇಶಪುರ

ನಮ್ಮ ವೇದಗಳು, ಪುರಾಣಗಳು ಮತ್ತು ಗ್ರಂಥಗಳು ಬ್ರಹ್ಮ ಮುಹೂರ್ತವನ್ನು ಅತ್ಯಂತ ಮಂಗಳಕರವೆಂದು ಉಲ್ಲೇಖಿಸುತ್ತದೆ. ಈ ಮುಹೂರ್ತದ ವಿಶೇಷ ಮಹತ್ವವನ್ನು ನಮ್ಮ ಋಷಿಮುನಿಗಳು ಹೇಳಿದ್ದಾರೆ. ಈ ಸಮಯದಲ್ಲಿ ನಿದ್ರೆ ಮಾಡುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ನಿದ್ರೆಯನ್ನು ತ್ಯಜಿಸಲು ಈ ಸಮಯ ಉತ್ತಮವಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸೌಂದರ್ಯ, ಶಕ್ತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಆರೋಗ್ಯ ಬರುತ್ತದೆ. ಬ್ರಹ್ಮ ಮುಹೂರ್ತದಲ್ಲಿ ದಿನಚರಿ ಆರಂಭಿಸುವುದರಿಂದ ಇಡೀ ದಿನ ಚೆನ್ನಾಗಿಯೇ ಸಾಗುತ್ತದೆ. ಈ ಸಮಯದಲ್ಲಿ ಪರಿಸರದಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಮತ್ತು ಈ ಸಮಯದಲ್ಲಿ ಮಾಡಿದ ಯಾವುದೇ ಕೆಲಸವು ಯಶಸ್ವಿಯಾಗುತ್ತದೆ. ಬ್ರಹ್ಮ ಮುಹೂರ್ತವನ್ನು ಏಕೆ ವಿಶೇಷವೆಂದು ಪರಿಗಣಿಸಲಾಗುತ್ತದೆ..? ಅದರ ಸರಿಯಾದ ಸಮಯ ಯಾವುದು ಎಂಬುವುದರ ಬಗ್ಗೆ ಮಾಹಿತಿ.

  • ಬ್ರಹ್ಮ ಮುಹೂರ್ತದ ಅರ್ಥವೇನು?
    ಬ್ರಹ್ಮ ಮುಹೂರ್ತವನ್ನು ರಾತ್ರಿಯ ಕೊನೆಯ ಭಾಗವನ್ನು ಅಥವಾ ರಾತ್ರಿಯ ಅಂತಿಮ ಪ್ರಹರವೇ ಎಂದು ಕರೆಯಲಾಗುತ್ತದೆ. ಅಂದರೆ ಈ ಸಮಯವು ರಾತ್ರಿ ಮುಗಿಯುವ ಮತ್ತು ಹಗಲು ಪ್ರಾರಂಭವಾಗುವ ಸಮಯ. ಬ್ರಹ್ಮ ಎಂದರೆ ಪರಮಾತ್ಮ ಮತ್ತು ಮುಹೂರ್ತ ಎಂದರೆ ಸಮಯ ಅಂದರೆ ದೇವರ ಸಮಯ.
  • ಬ್ರಹ್ಮ ಮುಹೂರ್ತದ ಸಮಯ

ಆಯುರ್ವೇದದ ಪ್ರಕಾರ ರಾತ್ರಿಯ ನಂತರ ಮತ್ತು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಇರುವ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಅಂದರೆ ಬೆಳಿಗ್ಗೆ 03:00 ರಿಂದ 06:00 ರ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ನಿದ್ರೆಯನ್ನು ತ್ಯಜಿಸಲು ಇದು ಅತ್ಯುತ್ತಮ ಸಮಯ.

  • ಬ್ರಹ್ಮ ಮುಹೂರ್ತದ ಮಹತ್ವ
    ‌ ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಪೌರಾಣಿಕ ಕಾಲದಲ್ಲಿ ಋಷಿಮುನಿಗಳು ಈ ಸಮಯವನ್ನು ಧ್ಯಾನ ಮಾಡಲು ಸೂಕ್ತ ಸಮಯವೆಂದು ಪರಿಗಣಿಸಿದ್ದಾರೆ. ಈ ಸಮಯದಲ್ಲಿ ಮಾಡಿದ ದೇವರ ಆರಾಧನೆಯು ಶೀಘ್ರದಲ್ಲೇ ಫಲವನ್ನು ನೀಡುತ್ತದೆ. ಬ್ರಹ್ಮ ಮುಹೂರ್ತದಲ್ಲಿ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ಸಮಯದ ನಿದ್ರೆಯು ಬ್ರಹ್ಮ ಮುಹೂರ್ತದ ಪುಣ್ಯಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಲಗುವುದನ್ನು ನಿಷೇಧಿಸಲಾಗಿದೆ.
  • ಒಳ್ಳೆಯ ಆಲೋಚನೆಗಳು ಮೂಡುತ್ತದೆ

‌ ಬ್ರಹ್ಮ ಮುಹೂರ್ತದಲ್ಲಿ, ಇಡೀ ಪರಿಸರವು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ ಮತ್ತು ಈ ಶಕ್ತಿಯು ನಮ್ಮೊಳಗಿನ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಸಮಯದಲ್ಲಿ ಏಳುವುದರಿಂದ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮತ್ತು ಉತ್ಸಾಹ ಹೆಚ್ಚಾಗುತ್ತದೆ.

  • ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಆಗುವ ಲಾಭಗಳು
  • ಯಶಸ್ಸು ಪ್ರಾಪ್ತಿ

ಧಾರ್ಮಿಕ ನಂಬಿಕೆಯ ಪ್ರಕಾರ, ಈ ಸಮಯದಲ್ಲಿ ದೇವರುಗಳು ಮತ್ತು ಪೂರ್ವಜರು ನಮ್ಮ ಮನೆಗಳಿಗೆ ಬರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ.

  • ಆಧ್ಯಾತ್ಮಿಕ ಶಕ್ತಿ ದೊರೆಯುವುದು
    ಬ್ರಹ್ಮ ಮುಹೂರ್ತದಲ್ಲಿ ನಿದ್ದೆಯನ್ನು ತ್ಯಜಿಸಿ ಏಳುವ ವ್ಯಕ್ತಿಯು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತಾನೆ ಮತ್ತು ಜೀವನದಲ್ಲಿ ಯಾವಾಗಲೂ ಸಂತೋಷವನ್ನು ಹೊಂದುತ್ತಾನೆ.
  • ಬ್ರಹ್ಮ ಜ್ಞಾನ ಪ್ರಾಪ್ತಿ
    ಬ್ರಹ್ಮ ಮುಹೂರ್ತದಲ್ಲಿ ಮಾಡುವ ಧ್ಯಾನದ ಅಭ್ಯಾಸವು ಸ್ವಯಂ ವಿಶ್ಲೇಷಣೆ ಮತ್ತು ಬ್ರಹ್ಮ ಜ್ಞಾನವನ್ನು ಪಡೆಯಲು ಉತ್ತಮ ಸಮಯವಾಗಿದೆ.
  • ದೈಹಿಕ ಶಕ್ತಿ ಹೆಚ್ಚಾಗುತ್ತದೆ
    ‌ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ದೇಹದಲ್ಲಿ ದೈಹಿಕ ಶಕ್ತಿ ಮತ್ತು ತ್ರಾಣ ಹೆಚ್ಚಾಗುತ್ತದೆ. ಇದು ದೇಹವನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡುತ್ತದೆ.
  • ಹೊಸ ಶಕ್ತಿ ತುಂಬುವುದು
    ‌ ಆಯುರ್ವೇದದ ಪ್ರಕಾರ, ಬ್ರಹ್ಮ ಮುಹೂರ್ತದಲ್ಲಿ ಎದ್ದು ನಡೆದಾಡಲು ಹೋದ ನಂತರ, ಜೀವಶಕ್ತಿಯೊಂದಿಗೆ ಶುದ್ಧ ಜೀವ ಗಾಳಿಯ ಸೇವನೆ ಮತ್ತು ಸ್ಪರ್ಶವು ನಮ್ಮೊಳಗೆ ಹೊಸ ಶಕ್ತಿಯನ್ನು ತುಂಬುತ್ತದೆ.
  • ದೇಹ ಸದೃಢವಾಗಿರುವುದು
    ಬ್ರಹ್ಮ ಮುಹೂರ್ತದಲ್ಲಿ ಏಳುವ ವ್ಯಕ್ತಿಗೆ ಉತ್ತಮ ಆರೋಗ್ಯ, ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನ ದೊರೆಯುತ್ತದೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಇದು ಸರಿಯಾದ ಸಮಯ. ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಮಾನಸಿಕ ಒತ್ತಡ, ಆತಂಕ, ನಿದ್ರಾಹೀನತೆ ಮತ್ತು ಹತಾಶೆಯಂತಹ ವಿವಿಧ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ ಎಂದು ವಿಜ್ಞಾನ ಹೇಳುತ್ತದೆ.
  • ವಿಜ್ಞಾನಿಗಳ ಪ್ರಕಾರ, ಬ್ರಹ್ಮ ಮುಹೂರ್ತ
    ವಿಜ್ಞಾನಿಗಳ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ವಾತಾವರಣವು ಮಾಲಿನ್ಯದಿಂದ ಮುಕ್ತವಾಗಿರುತ್ತದೆ. ಶುದ್ಧ ಪರಿಸರದಲ್ಲಿ, ಆಮ್ಲಜನಕದ ಅನಿಲದ ಶೇಕಡಾವಾರು ಪ್ರಮಾಣವೂ ಹೆಚ್ಚಾಗಿರುತ್ತದೆ.
  • ಭಗವಂತನ ಆರಾಧನೆಗೆ ಸೂಕ್ತ ಸಮಯ
    ಈ ಸಮಯದಲ್ಲಿ ಮಾಡುವ ಪೂಜೆ ಮತ್ತು ಪ್ರಾರ್ಥನೆಗಳು ನೇರವಾಗಿ ಭಗವಂತನನ್ನು ತಲುಪುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಬ್ರಹ್ಮ ಮುಹೂರ್ತವನ್ನು ಭಗವಂತನನ್ನು ಆರಾಧಿಸಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ.‌ ‌ ‌‌ ‌ ‌ ‌ ‌ ‌
  • ಬ್ರಾಹ್ಮೀ ಮುಹೂರ್ತ ವಿಶೇಷ ವಿಚಾರಗಳು

1)ಯಾರು ಬ್ರಹ್ಮ ಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ
ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.

2) ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂ ಬುದ್ಧಿ ಉಲ್ಲಸಿತವಾಗಿರುತ್ತವೆ.

3) ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ.

4)ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ. ದೇವರಿಗೆ ಅಭಿಷೇಕ, ಅಲಂಕಾರ ಹಾಗೂ
ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.

5)ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.

6)ಮನುಷ್ಯನ ಜ್ಞಾನ, ವಿವೇಕ, ಶಾಂತಿ, ಸುಖಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ.

7)ಭಗವಂತನ ಸ್ಮರಣೆಯ ನಂತರ ಮೊಸರು, ತುಪ್ಪ, ಕನ್ನಡಿ, ಬಿಲ್ವಪತ್ರೆ, ಹೂವಿನ ಮಾಲೆ ಮುಂತಾದ ಪವಿತ್ರ ವಸ್ತುಗಳನ್ನು ನೋಡುವುದರಿಂದ ದಿನ ಶುಭವಾಗಿರುತ್ತದೆ.

8)ಸೀತೆಯನ್ನು ಹುಡುಕುತ್ತಾ ಸಾಗಿದ ಆಂಜನೇಯ ಬ್ರಹ್ಮ ಮುಹೂರ್ತದಂದೇ ಅಶೋಕವನ ತಲುಪಿದ್ದ. ಅಲ್ಲಿ ವೇದ ಮಂತ್ರಗಳ ಉಚ್ಛಾರಣೆಯನ್ನು ಕೇಳಿದ್ದ, ಮತ್ತು ಯಜ್ಞಾದಿ ಕಾರ್ಯಗಳನ್ನು ನೋಡಿದ್ದನೆಂದು ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಲಾಗಿದೆ.

9)ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ಶಾಂತ ಹಾಗೂ ಸ್ಥಿರವಾಗಿರುತ್ತದೆ. ವಾತಾವರಣದಲ್ಲಿ ಶುದ್ಧತೆಯೂ ಹೆಚ್ಚಿರುತ್ತದೆ. ಆಗ ದೇವರ ಉಪಾಸನೆ, ಧ್ಯಾನ, ಯೋಗ, ಪೂಜೆಗಳನ್ನು ಮಾಡುವುದರಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯದಿಂದ ಕೂಡಿರುತ್ತವೆ.

10)ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಲೋಕಾಃ ಸಮಸ್ತಾಃ ಸುಖಿನೋ ಭವಂತು