ದೀಪೋತ್ಸವದ ಬೆಳಕಿನ ಹಬ್ಬ ದೀಪಾವಳಿ
“”””””””””””””””

ಹಿಂದೂ ಧರ್ಮದ ಸಂಸ್ಕೃತಿಗೆ ಒಳಪಟ್ಟಂತೆ ಒಂದೊಂದು ಹಬ್ಬದ ಆಚರಣೆಗೂ ವೈಶಿಷ್ಟತೆ ಹಾಗೂ ಪೌರಾಣಿಕ ಹಿನ್ನೆಲೆಯಿಂದ ಕೂಡಿದೆ.
ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ” ಅಸತ್ಯದಿಂದ ಸತ್ಯದೆಡೆಗೆ ಅಜ್ಞಾನದಿಂದ ಸುಜ್ಞಾನದೆಡೆಗೆ ಮೃತ್ಯುವಿನಿಂದ ಅಮೃತತ್ವದತ್ತ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬ ಅರ್ಥವನ್ನು ನೀಡುತ್ತದೆ.
ದೀಪಾವಳಿ ಮೂರು ದಿವಸದ ಆಚರಣೆಯಾಗಿದೆ. ಮೊದಲ ದಿವಸ ನರಕ ಚತುರ್ದಶಿ. ಎಂದರೆ ಶ್ರೀ ಕೃಷ್ಣನು ನರಕಾಸುರನೆಂಬ ರಾಕ್ಷಸನ ಹಿಂಸೆಯಿಂದ ನಮ್ಮನ್ನು ಪಾರು ಮಾಡೆಂದು ಇಂದ್ರನು ಭಗವಂತನಿಗೆ ಮೊರೆಹೋಗುತ್ತಾನೆ. ಆಗ ಶ್ರೀ ಕೃಷ್ಣನು ಸಮ್ಮತಿಸಿ ನರಕಾಸುರನನ್ನು ಸಂಹರಿಸುತ್ತಾನೆ.ದುಷ್ಟ ಸಂಹಾರದ ಸಂಕೇತವಾಗಿ ಆ ದಿನವನ್ನು ಎಲ್ಲರೂ ಪಟಾಕಿಗಳನ್ನು ಸಿಡಿಸಿ ಮನೆಯ ಮುಂದೆ ದೀಪವನ್ನು ಬೆಳಗಿಸಿ ಸಂಭ್ರಮಿಸುವ ದಿನವೇ ನರಕ ಚತುರ್ದಶಿಯ ಆಚರಣೆಯಾಗಿದೆ.

  • ಧನಲಕ್ಷ್ಮಿಯ ಪೂಜಾರಾಧನೆ ::– ದೀಪಾವಳಿಯ ಎರಡನೇ ದಿವಸ ಮನೆ ಮನೆಗಳಲ್ಲಿ ಲಕ್ಷ್ಮಿ ಸ್ವರೂಪಳಾದ ಜ್ಯೋತಿಯನ್ನು ಬೆಳಗಿಸಿ ಸಂಪ್ರದಾಯ ಬದ್ಧವಾಗಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತೇವೆ. ಸಾಮಾನ್ಯವಾಗಿ ಲಕ್ಷ್ಮಿ ಪೂಜೆಯ ದಿನದಂದು ಮುಂಭಾಗದ ಬಾಗಿಲ ಮುಂದೆ ರಂಗೋಲಿ ಇಟ್ಟು ಬಣ್ಣಗಳಿಂದ ಅಲಂಕರಿಸಿ ವಸಲಿಗೆ ಸಗಣಿ ಉಂಡೆಗಳನ್ನು ಇಟ್ಟು ಮಧ್ಯದಲ್ಲಿ ಚೆಂಡು ಹೂಗಳಿಂದ ಅಲಂಕರಿಸುವುದು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದು. ರೈತಾಪಿ ಜನರು ತಮ್ಮ ಗೋವುಗಳನ್ನು ಪೂಜಿಸಿ ತಿಂಡಿತಿನಿಸುಗಳನ್ನು ಗೋವುಗಳಿಗೆ ನೀಡುತ್ತಾರೆ.
  • ದೀಪಾವಳಿಯ ಲಕ್ಷ್ಮಿಪೂಜೆಯ ದಿನದಂದು ಅಭ್ಯಂಜನ ಸ್ನಾನ( ಎಣ್ಣೆಯ ಸ್ನಾನ) ಮಾಡುವುದು ಹಿಂದಿನಿಂದ ಬಂದ ಪದ್ದತಿಯಾಗಿದೆ. ಎಣ್ಣೆ ಲಕ್ಷ್ಮಿಯ ಸಂಕೇತವೆಂದು ಅಭ್ಯಂಜ ಸ್ನಾನದಿಂದ ಮೈ ಮನ ಶುದ್ಧಿಯಾಗಿ ದೇಹದ ಉಷ್ಣಾಂಶವನ್ನು ಶಮನಗೊಳಿಸುತ್ತದೆ,ಎಂದು ಹಿರಿಯರು ಹೇಳುತ್ತಾರೆ.ನಮ್ಮ ನರನಾಡಿಗಳು ಪುನಶ್ಚೇತನಗೊಳ್ಳಲು ಎಣ್ಣೆ ಸ್ನಾನ ಸಹಕಾರಿಯಾಗುತ್ತದೆ. ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ. ವಯಸ್ಸಾದಂತೆಲ್ಲಾ ದೇಹದ ಮೇಲಿನ ತೊಗಲು ಎಂದರೆ ಚರ್ಮವು ಬೇಗ ಸುಕ್ಕುಗಟ್ಟುವುದನ್ನು
    ತಡೆಗಟ್ಟಬಹುದು. ವಾರಕ್ಕೊಮ್ಮೆ ನಿಯಮಿತವಾಗಿ ಎಣ್ಣೆಯ ಮಸಾಜ್ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೆಂದು ಆಯುರ್ವೇದಲ್ಲಿ ಹೇಳಲಾಗಿದೆ.
  • ಸ್ವಚ್ಛ ಶುದ್ಧ ಮನಸ್ಸಿನಲ್ಲಿ ದೈವಿಕ ಆಧ್ಯಾತ್ಮ ಭಾವನೆಗಳು ಮೂಡುತ್ತವೆ. ಕುಟುಂಬಗಳಲ್ಲಿ ಶಾಂತಿ ಸಮೃದ್ಧಿ ಸಂಪತ್ತು ನೆಲಸಲೆಂದು ಸಿಹಿಖಾದ್ಯಗಳು ಫಲಪುಷ್ಪ ತಾಂಬೂಲವನ್ನು ಲಕ್ಷ್ಮಿದೇವಿಗೆ ಅರ್ಪಿಸಿ ಭಕ್ತಿಯಿಂದ ಬೇಡುತ್ತೇವೆ.ಕೆಲವರು ದೇವಿಗೆ ಕಜ್ಜಾಯವನ್ನು ಮಾಡಿ ನೈವೇದ್ಯಕ್ಕಿಟ್ಟು ಪ್ರಾರ್ಥಿಸುವ ಸಂಪ್ರದಾಯವಿದೆ.

ಅಂಗಡಿಗಳ ಮಾಲೀಕರು ಧನಲಕ್ಷ್ಮಿಯ ಪೂಜಾರಾಧನೆಯನ್ನು ಯಾವುದೇ ಸಂಕಷ್ಟಗಳು ಬಾರದಿರಲೆಂದು ಸಮೃದ್ಧಿ ಭಾಗ್ಯ ಕರುಣಿಸೆಂದು ದೇವಿಯನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಸ್ನೆಹ ಬಂಧುಗಳಿಗೆ ಸಿಹಿಯನ್ನು ಹಂಚಿ ಸಂತಸ ಪಡುತ್ತಾರೆ.ಯಾರ ಮನೆಯಲ್ಲಿ ನಿತ್ಯ ಹಗಲು ರಾತ್ರಿ ದೀಪ ಪ್ರಕಾಶಮಾನವಾಗಿ ಬೆಳಗುತ್ತದೋ ಅಲ್ಲಿ ಲಕ್ಷ್ಮಿನಾರಾಯಣರು ನೆಲೆಸಿರುತ್ತಾರೆಂದು ಧಾರ್ಮಿಕ ಜ್ಞಾನಿಗಳು ಹೇಳಿದ್ದಾರೆ.

ಬಲಿಪಾಢ್ಯಮಿಯ ಪೌರಾಣಿಕ ಹಿನ್ನೆಲೆ:::– ಭಕ್ತ ಪ್ರಹ್ಲಾದನ ಮೊಮ್ಮಗನೇ ಬಲಿಚಕ್ರವರ್ತಿ.ಬಲಿಯು ದಾನ ಮಾಡುವುದರಲ್ಲಿ ಬಹಳ ಉದಾರಿಯೆಂದು ಹೆಸರುವಾಸಿಯಾದವನು.ವಿಷ್ಣುವಿನ ಪರಮಭಕ್ತನು ಆಗಿದ್ದನು. ಇವನಿಗೆ ಇಂದ್ರಪದವಿಯನ್ನು ಪಡೆಯಬೇಕೆಂಬ.ಆಸೆ ಅಂಕುರಿಸಿತು.ಆದ್ದರಿಂದ ಬಲಿಚಕ್ರವರ್ತಿ ಬಲಿಷ್ಠನಾಗಲು ದಾನವರ ಗುರುಗಳಾದ ಶುಕ್ರಚಾರ್ಯರ ನೇತೃತ್ವದಲ್ಲಿ ನೂರು ಮಹಾಯಾಗಗಳನ್ನು ಮಾಡಲು ಮುಂದಾಗುತ್ತಾನೆ. ತೊಂಬತ್ತೊಂಬತ್ತು ಯಾಗಗಳನ್ನು ಪೂರೈಸಿ ನೂರನೇ ಯಾಗಕ್ಕೆ ಸಿದ್ಧಮಾಡಿಕೊಳ್ಳುತ್ತಿರುತ್ತಾನೆ.ಇವನ ಯಾಗದ ಕೀರ್ತಿ ಇಂದ್ರಲೋಕದವರೆಗೂ ಹಬ್ಬುತ್ತದೆ.ಸಮಯ ಸಾಧಿಸಿ ಇಂದ್ರನ ರಾಜದಾನಿಯಾದ ಅಮರಾವತಿಗೂ ಮುತ್ತಿಗೆ ಹಾಕುತ್ತಾನೆ.ಬಲಿಯ ಈ ಅನಿರೀಕ್ಷಿತ ದಾಳಿಯನ್ನು ಸಹಿಸಲಾಗದ ಇಂದ್ರ ಮುಂತಾದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.

ದೇವತೆಗಳ ಬೇಡಿಕೆಗೆ ಒಪ್ಪಿಕೊಂಡ ವಿಷ್ಣು ಚಿಕ್ಕ ಬಾಲಕನಾಗಿ ವಟುವಿನ ರೂಪದಲ್ಲಿ ಬಲಿಯ ಬಳಿಗೆ ಬರುತ್ತಾನೆ.ವಾಮನನಿಗೆ ಭಕ್ತಿಯಿಂದ ವಂದಿಸಿ ಗೌರವಿಸಿ ಕುಳ್ಳಿರಿಸಿ ನೀವು ಇಲ್ಲಿಗೆ ಬಂದ ಉದ್ದೇಶವನ್ನು ತಿಳಿಸಿದರೆ ಅದನ್ನು ಈಡೇರಿಸಲು ನಾನು ಸಿದ್ಧನಿದ್ದೇನೆ ಎಂದನು. ಬಲಿಚಕ್ರವರ್ತಿ. ಬಲಿ ನನಗೆ ನಿನ್ನ ರಾಜ್ಯಕೋಶಗಳು ಯಾವುದು ಬೇಕಾಗಿಲ್ಲ. ನನಗೆ ನೀನು ದಾನ ನೀಡಲು ಬಯಸುವುದಾದರೆ ಕೇವಲ ನನ್ನ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೊಟ್ಟರೆ ಸಾಕು ಎಂದನು,ವಾಮನ ವಿಷ್ಣುದೇವ.
ಬಲಿಗೆ ವಟುವಿನ ಮಾತು ಕೇಳಿ ನಗುತ್ತಾ ಇದಕ್ಕಾಗಿ ಇಲ್ಲಿಯವರೆಗೆ ಬರಬೇಕಾಗಿತ್ತಾ! ಎಂದು ಅನುಮಾನಿಸಿದನು.ಆದರೂ ಚಕ್ರವರ್ತಿಯು ಆಗಲೇ ಮಾತು ಕೊಟ್ಟಿದ್ದರಿಂದ ವಚನ ಭ್ರಷ್ಟನಾಗಲು ಮನಸ್ಸು ಒಪ್ಪಲಿಲ್ಲ.ವಾಮನನು ಕೇಳಿದ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಉದಾರ ಮನದಿಂದ ನೀಡಿದನು.ನಂತರ ತಾವು ಅಪೇಕ್ಷಿಸಿದ ಸ್ಥಳದಲ್ಲಿ ಭೂಮಿಯನ್ನು ಪಡೆದುಕೊಳ್ಳಿ ಎಂದನು.

ಆಗ ವಟು ವಿಷ್ಣುವು ಒಂದು ಹೆಜ್ಜೆಯನ್ನು ದೇವಲೋಕದ ಮೇಲಿಟ್ಟು ಇನ್ನೂಂದು ಹೆಜ್ಜೆಯಿಂದ ಭೂಮಿಯನ್ನೆ ಅಳೆದು ಆಕ್ರಮಿಸಿ,ನನ್ನ ಮೂರನೇ ಹೆಜ್ಜೆ ಎಲ್ಲಿಡಲಿ? ಎಂದು ಬಲಿಚಕ್ರವರ್ತಿಯನ್ನು ಕೇಳುತ್ತಾನೆ.
ಆಗ ಬಲಿಯು ಭಗವಂತನ ಅಪಾರ ಮಹಿಮೆಯನ್ನು ಅರಿತು ಇನ್ನೊಂದು ಹೆಜ್ಜೆಯನ್ನು ನನ್ನ ತಲೆಯ ಮೇಲಿಡಿ ಎಂದು ವಾಮನಾದ ವಿಷ್ಣುವಿಗೆ ಹೇಳುತ್ತಾನೆ.ಅಂತೆಯೇ ವಿಷ್ಣು ತನ್ನ ಮೂರನೆ ಹೆಜ್ಜೆಯನ್ನು ಬಲಿಯ ತಲೆ ಮೇಲಿಟ್ಟು ಅವನನ್ನು ಪಾತಾಳಕ್ಕೆ ತಳ್ಳುತ್ತಾನೆ.ಬಲಿಯ ಭಕ್ತಿ ಹಾಗೂ ದಾನಕ್ಕೆ ಮೆಚ್ಚಿ ವಿಷ್ಣು ಏನಾದರೂ ವರಕೇಳು ಎನ್ನುತ್ತಾನೆ.

ಆಗ ಬಲಿಚಕ್ರವರ್ತಿಯು ನಾನು ವರ್ಷಕ್ಕೊಮ್ಮೆ ಭೂಲೋಕದಲ್ಲಿ ಸಂಚರಿಸುವ ವರವನ್ನು ನೀಡೆಂದು ಕೇಳಿಕೊಳ್ಳುತ್ತಾನೆ.ಆಗ ವಿಷ್ಣುವು ಅಶ್ವಿಜಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದೆಂದು ವರ ನೀಡುತ್ತಾನೆ.ಬಲಿಪಾಡ್ಯಮಿಯ ದಿನ ಬಲಿಚಕ್ರವರ್ತಿ ಭೂಲೋಕಕ್ಕೆ ಬಂದು ದೀಪಾವಳಿಯಲ್ಲಿ ದೀಪದ ಬೆಳಕನ್ನು ನೋಡಿ ಆನಂದಪಡುತ್ತಾನೆಂದು ಪೌರಾಣಿಕ ಕಥೆಯಿಂದ ತಿಳಿದುಬರುತ್ತದೆ.ಅಂದು ಮನೆ ಮನೆಗಳ ಮುಂದೆ ದೀಪಗಳನ್ನು ಹಚ್ಚಿ ಬಲೀಂದ್ರನ ಸ್ವಾಗತದ ದಿನವೇ ಬಲಿಪಾಡ್ಯಮಿಯೆಂದು ಆಚರಿಸಲಾಗುತ್ತದೆ.

– ಯಶೋಧ ರಾಮಕೃಷ್ಣ ಮೈಸೂರು