ಗಜಲ್
*********
ನೊಂದ ಹೃದಯಕೆ ತಂಪನೆರೆಯಲು ಬಂದಿತೇನು ಈ ಮಳೆ
ಹಗಲು ರಾತ್ರಿಗೂ ಕಾಟ ಕೊಡಲು ಇಳಿಯಿತೇನು ಈ ಮಳೆ
ಬಾನಾಡಿಗಳೆಲ್ಲ ಬಾಯಾರಿರಬೇಕು ಕೆರೆಗಳಲ್ಲಿ ನೀರು ಸಿಗದೆ
ನಿರೀಕ್ಷೆ ಹೆಚ್ಚಿದ್ದರೂ ಸಮಾಧಾನಿಸಲು ಬಿದ್ದಿತೇನು ಈ ಮಳೆ.
ಛಾವಣಿ ಹಾರಿದೆ,ಬದುಕು ನೀರೊಳಗೇ ಕೊಚ್ಚಿ ಹೋಗಿವೆ
ಮಳೆಗೂ ಸಿಟ್ಟಿರಬೇಕು? ತೋರಲು ಹನಿಯಿತೇನು ಈ ಮಳೆ
ನೀರು ಬೇಕು ನೀರು ಬೇಕು ಕುಡಿಯಲು ತೊಳೆದುಕೊಳ್ಳಲು
ತುಕ್ಕಿನಾ ನಲ್ಲಿಗೂ ನಗು ಮೂಡಿಸಲು ಕರುಣಿಸಿತೇನು ಈ ಮಳೆ
ಇಳೆಯ ಮೊಗದಿ ಹಸುರಿನಾ ಕಳೆ ಹೆಚ್ಚುತಿದೆ ಇಬ್ಬನಿ ಸ್ಪರ್ಶಕೆ
ನದಿ ಕಡಲು ತುಂಬಿ ಹರಿಯಲು ನೆಪವಾಯಿತೇನು ಈ ಮಳೆ
ಉತ್ತರೆಯೋ ಸ್ವಾತಿಯೋ ಚಿತ್ತವೋ ಹಸ್ತವೋ ವಿಶಾಖವೋ
ಬಿತ್ತಿದಾ ಪೈರಿಗೆ ಕಾದ ರೈತನಾ ಕುಣಿಸಲು ದಣಿಯಿತೇನು ಈ ಮಳೆ
ರವಿ.ವಿಠ್ಠಲ. ಆಲಬಾಳ
(ಕನ್ನಡಿಗ ರವಿ)
ವಿಷಯ: ನಂಬಿದವರ ಕೈ ಬಿಡದೆ ಮುನ್ನಡೆಸು
ಅನುಗ್ರಹಿಸು ಗುರುವೆ
ನಂಬಿದವರ ಕೈ ಬಿಡದೆ ಮುನ್ನಡೆಸು
ಹಂಬಲಿಸುತಿರುವೆ ದಾರಿ ತೋರಿಸು
ಬೆಂಬಿಡದೆ ಸಾಧನೆ ಮಾರ್ಗ ತಿಳಿಸು
ಅಂಜಿಕೆ ಅಧೈರ್ಯ ಹೊಡೆದೋಡಿಸು
ಸಂಬಂಧಗಳ ಬಂಧದ ಬಾಂಧವ್ಯ
ಸಂಭ್ರಮದ ಆಚರಣೆಯ ಜೀವನ
ಸಂತೋಷದ ಕ್ಷಣಗಳ ಬಾಳು ಕ್ಷಣಿಕ
ಸಮ್ಮಿಶ್ರ ದ್ವಂದ್ವಗಳ ಬದುಕು ನಶ್ವರ
ಚಣಚಣಕೆ ಭಾವನೆಗಳ ತಾಕಲಾಟ
ಚೆಂದದ ಕಾಮನೆಗಳ ಮೋಹದಾಟ
ಚಾಮರ ಬೀಸುವ ವಿಚಾರಗಳಾಟ
ಚಂಚಲ ಬುದ್ಧಿಯ ನಾಟ್ಯ ಬಯಲಾಟ
ಕರ್ಮ ಮಾರ್ಗದಿ ಕ್ರಿಯಾಶೀಲಳಾದೆ
ಭಕ್ತಿ ಮಾರ್ಗದಿ ಭಾವನಾತ್ಮಕಳಾದೆ
ಜ್ನಾನ ಮಾರ್ಗದಿ ಬಂದು ನಿಂತಿರುವೆ
ಅನುಗ್ರಹಿಸಿ ಬೆಳಕ ತೋರು ಗುರುವೆ
ಸೌ. ಅನ್ನಪೂರ್ಣ ಸಕ್ರೋಜಿ ಪುಣೆ