ಅಭಿಲಾಷೆ ಕಾದಂಬರಿ ಸಂಚಿಕೆ -57

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 57ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ನಿಮ್ಮಣ್ಣ ಸಿಕ್ಕಿದ್ದಾರೆ, ನೀನು ನನ್ನ ಮದುವೆಯಾದರೆ ಮಾತ್ರ ನಿಮ್ಮಣ್ಣ ಇರುವ ವಿಳಾಸ‌ ಹೇಳುತ್ತೇನೆಂದು ವಿಕ್ರಮ್ ಆಶಾಗೆ ಹೇಳಿರುತ್ತಾನೆ.

  • ಕಥೆಯನ್ನು ಮುಂದುವರೆಸುತ್ತಾ

ನನ್ನನ್ನು ಮದುವೆಯಾದರೆ ನಿಮ್ಮಣ್ಣ ಇರುವ ವಿಳಾಸವನ್ನು ಹೇಳುತ್ತೇನೆ. ಜೊತೆಗೇ ಕರೆದುಕೊಂಡು ಬರುತ್ತೇನೆಂದು ವಿಕ್ರಮ್ ಹೇಳಿದಾಗ
ವಿಕ್ರಮ್ ನ ಮಾತು ಕೇಳಿದ ಆಶಾ ನಾನು ವಿಕ್ರಮ್ ನ ಮದುವೆಯಾಗದಿದ್ದರೆ ನಮ್ಮಣ್ಣ ಕಡೇವರೆಗೂ ಸಿಗುವುದೇ ಇಲ್ಲ. ಅವನ ನೆನಪಲ್ಲೇ ಇದ್ದುಬಿಡಬೇಕಾಗುತ್ತದೆ. ವಿಕ್ರಮ್ ನ ಮದುವೆಯಾದರೆ ಆ ಕಿಡ್ನಾಪರ್ ಮನೆಯ ಸೊಸೆಯಾಗಬೇಕಾಗುತ್ತದೆಂದು ದ್ವಂದ್ವಕ್ಕೆ ಒಳಗಾಗುತ್ತಾಳೆ.
ಏನು ಮಾಡುವುದೆಂದು ತೋಚದೆ ಚಿಂತೆಗೀಡಾಗುತ್ತಾಳೆ.
ವಿಕ್ರಮ್ ಫೋನ್ ಮಾಡುವ ಮೊದಲು ಮನೆಯಲ್ಲಿ ತನ್ನ ಮದುವೆಗೆ ಏರ್ಪಾಡು ಮಾಡುತ್ತಿರುವುದನ್ನು ಕಂಡು ಸಂತಸದಿಂದ ಇದ್ದವಳು, ವಿಕ್ರಮ್ ಡಿಮ್ಯಾಂಡ್ ಕೇಳಿದ ನಂತರ ಸಂತಸವೆಲ್ಲವೂ ಜರ್ರನೆ ಇಳಿದು, ಮುಖದಲ್ಲಿ ಗೆಲುವಿಲ್ಲದೆ, ಸಪ್ಪಗಾಗಿರುತ್ತದೆ.
ಮದುವೆಯ ಮನೆಯ ಸಡಗರದಲ್ಲಿ ಯಾರೂ ಇವಳನ್ನು ಗಮನಿಸಿರುವುದಿಲ್ಲ. ಒಳಗೊಳಗೇ ದುಃಖಿತಳಾಗಿದ್ದು, ಯಾರೊಂದಿಗೂ ಮಾತನಾಡುವ ಉತ್ಸಾಹವನ್ನೇ ತೋರುತ್ತಿರುವುದಿಲ್ಲ.
ಅಂದು ರಾತ್ರಿ ಅಪ್ಪ ಮಗಳು ಊಟಕ್ಕೆ ಕುಳಿತಾಗಲೂ ಮೌನವಾಗಿಯೇ ಊಟ ಮಾಡುತ್ತಿರುವುದನ್ನು ಅವಳಪ್ಪ ನೋಡಿ
ಮಗಳೇ ಏಕಮ್ಮಾ ಸಪ್ಪಗಿದ್ದೀಯಾ? ಎಂದು ಅವಳಪ್ಪ ಪ್ರಶ್ನಿಸಲು
ಏನೂ ಇಲ್ಲಪ್ಪಾ ಎನ್ನುತ್ತಾಳೆ ಆಶಾ.
ಇಲ್ಲಮ್ಮಾ ನಿನ್ನ ಮುಖ ನೋಡಿದರೆ ಹಾಗೆನಿಸುವುದಿಲ್ಲ.‌ ಮನಸ್ಸಿನಲ್ಲಿ ಏನೋ ಕೊರಗುವಂತಿದೆ ಏನಾಗಿದೆ ಹೇಳಮ್ಮಾ, ಈ ಮದುವೆ ನಿನಗೆ ಇಷ್ಟ ಇಲ್ಲದಿದ್ದರೆ ಈಗಲೂ ಹೇಳಿಬಿಡು, ಗಂಡಿನ ಕಡೆಯವರಿಗೆ ಫೋನ್ ಮಾಡಿ ತಿಳಿಸಿಬಿಡುತ್ತೇನೆ. ಬೇರೆ ಯಾವುದಾದರೂ ಗಂಡು ನೋಡಿ ಮದುವೆ ಮಾಡಿದರಾಯ್ತೆಂದು ಅವಳಪ್ಪನ ಮಾತಿಗೆ
ಆಶಾ ಹಾಗೇನೂ ಇಲ್ಲಪ್ಪಾ ಎನ್ನುತ್ತಾಳೆ.
ಇಲ್ಲಮ್ಮಾ ನೀನು ಏನೋ ಯೋಚನೆ ಮಾಡುವಂತಿದೆ, ಬೆಳಗ್ಗೆವರೆಗೂ ತುಂಬಾ ಲವಲವಿಕೆಯಿಂದ ಇದ್ದವಳು‌ ಇದ್ದಕ್ಕಿದ್ದಂತೆ ಸಪ್ಪಗಾಗಿದ್ದೀಯಾ ಎಂದರೆ ಏನೋ ಬಲವಾದ‌ ಕಾರಣವಿರಲೇಬೇಕು, ಏನಾಯ್ತು ಹೇಳಮ್ಮಾ ಎಂದು ಅವಳಪ್ಪ ಒತ್ತಾಯಿಸಿದಾಗ,
ಆಶಾ ಊಟ ಮಾಡುವುದನ್ನು ಬಿಟ್ಟು ತಲೆತಗ್ಗಿಸುತ್ತಾಳೆ
ಅಲ್ಲೇ ಇದ್ದ ಅವಳಮ್ಮ ಅಯ್ಯೋ ದೇವರೇ ಏನಾಯ್ತಮ್ಮಾ ನಿನಗೆ? ಆಶಾ ಏಕೆ ಅಳುತ್ತಿದ್ದೀಯಾ ಹೇಳಬಾರದಾ? ಮನಸ್ಸಿನಲ್ಲಿ ಏನೋ ಇಟ್ಟುಕೊಂಡು ಕೊರಗಬೇಡಾ, ಜೋರಾಗಿ ಹೇಳಿದರೆ ತಾನೇ ನಮಗೆ ಗೊತ್ತಾಗುವುದು, ಅದಕ್ಕೆ ಪರಿಹಾರ ಕಂಡು ಹಿಡಿಯಲಿಕ್ಕೆ ಆಗುವುದು ಎನ್ನುತ್ತಾ, ತಲೆ‌ ತಗ್ಗಿಸಿಕೊಂಡು ಕುಳಿತಿದ್ದ ಆಶಾಳ‌ ತಲೆಯನ್ನು ಅವಳಮ್ಮ ನೇವರಿಸುತ್ತಾ ಕೇಳಲು
ಊಟ‌ ಮಾಡುತ್ತಿದ್ದ ಆಶಾ ಅರ್ಧಕ್ಕೆ ಊಟ ನಿಲ್ಲಿಸಿ ಅಮ್ಮನಿಗೆ ಒರಗಿಕೊಂಡು ಅಮ್ಮಾ ನಾನೇನು ಮಾಡಲಮ್ಮಾ ಎಂದು ಗೊಳೋ ಎಂದು ಅಳಲು ಶುರು ಮಾಡುತ್ತಾಳೆ.
ಮಗಳು ಅಳುವುದನ್ನು ನೋಡಿದ ಅವಳಪ್ಪನಿಗೊ ತುಂಬಾ‌ ಗಾಬರಿಯಾಗಿ, ಅಯ್ಯೋ ಮಗಳೇ ಏನಾಯ್ತಮ್ಮಾ ನಿನಗೆ? ಯಾರೇನು ಮಾಡಿದರೆಂದು ಕೇಳಿದಾಗಲೂ ಕೂಡಾ,
ಆಶ ಅಳು ನಿಲ್ಲಿಸದೆ ಜೋರಾಗಿ ಅಳುತ್ತಿರುವುದನ್ನು ಕಂಡು ಆಶಾ‌ ಏನಾಯ್ತು ಹೇಳಮ್ಮಾ, ನೀನು ಏನೂ ಹೇಳದೆ ಸುಮ್ಮನೆ ಅಳುತ್ತಿದ್ದರೆ ನಮಗೇನು ಅರ್ಥ ವಾಗಬೇಕೆಂದು ಕೇಳಲು,
ಅಪ್ಪಾ ಈಗೇನು ಮಾಡಲಪ್ಪಾ ಎಂದು ಆಶಾ ಪ್ರಶ್ನಿಸಿದಾಗ
ಯಾವ ವಿಚಾರ ಹೇಳಮ್ಮಾ, ಅವನೇನಾದರೂ ಪುನಃ ಫೋನ್ ಮಾಡಿದ್ನಾ ಎಂದು ಅವಳಪ್ಪ ಪ್ರಶ್ನಿಸಲು
ಹೌದೆಂದು ಆಶಾ ತಲೆಯನ್ನು ಕುಣಿಸುತ್ತಾಳೆ.
ಕೋದಂಡರಾಂ ರವರಿಗೆ ಕೋಪ‌ ಬಂದು, ಅವನಿಗೆ ಸರಿಯಾಗಿ ಬುದ್ದಿ ಕಲಿಸುವವರೆಗೂ ಅವನು ಸರಿಹೋಗುವುದಿಲ್ಲ. ಈಗಲೇ ಪೋಲೀಸ್ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಿಚಾರಿಸಲು ಹೇಳುತ್ತೇನೆ ಎನ್ನುತ್ತಾ, ಜೇಬಿನಿಂದ ಮೊಬೈಲ್ ತೆಗೆಯಲು ಹೋದಾಗ,
ಅಪ್ಪಾ ಬೇಡಪ್ಪಾ ಎಂದು ಆಶಾ ಹೇಳಲು
ಯಾಕಮ್ಮಾ ಬೇಡಾ, ಅವನ ಅಣ್ಣ ಜೈಲಿನಲ್ಲಿ ಕೊಳೆಯುತ್ತಿದ್ದಾನೆ, ಇವನನ್ನೂ ಕಳುಹಿಸಿದರೆ ನೆಮ್ಮದಿಯಾಗುತ್ತದೆಂದು ಕೋಪದಿಂದ ‌ಹೇಳಿದಾಗ,
ಅಪ್ಪಾ ಆ ರೀತಿ ಅಲ್ಲಪ್ಪಾ ಅದೂ ಎನ್ನುತ್ತಾಳೆ ಆಶಾ,
ಮತ್ತೇನಮ್ಮಾ ಹಾಗಾದರೆ ಎಂದು ಕೋದಂಡರಾಂ ಕೇಳಲು
ಅಪ್ಪಾ ಅದೂ, ,,,,, ಎಂದು ಅರ್ಧಕ್ಕೇ ಮಾತು ನಿಲ್ಲಿಸುತ್ತಾಳೆ
ಪೂರ್ತಿ ಹೇಳಮ್ಮಾ ಅವನಿಗೆ ಒಂದು ಗತಿ ಕಾಣಿಸುತ್ತೇನೆಂದು ಕೋಪೋದ್ರಿಕ್ತರಾಗಿ ಕೋದಂಡರಾಮ್ ಕೇಳಲು
ಅಪ್ಪಾ ,,,ಅದೂ ,,,,ಅಣ್ಣ ಸಿಕ್ಕಿದಾನಂತೆ ಎಂದ ತಕ್ಷಣ
ಕೋದಂಡರಾಮ್ ‌ರವರ ಕೋಪ‌ ಜರ್ರನೆ ಇಳಿದು ಹೋಗುತ್ತದೆ
ಎಲ್ಲಮ್ಮಾ? ನನ್ನ ಮಗ ಎಲ್ಲಿದ್ದಾನಮ್ಮಾ?ಹೇಳಮ್ಮಾ ಈಗಲೇ ಹೋಗಿ ಕರೆದುಕೊಂಡು ಬರುತ್ತೇನೆಂದು ಉತ್ಸುಕದಿಂದ ಕೇಳಲು
ಅಪ್ಪಾ ವಿಕ್ರಮ್ ಫೋನ್ ಮಾಡಿದ್ದ, ಅವನಿಗೆ ಯಾರೋ‌ ಫೋನ್ ಮಾಡಿ ನೀವು ಹುಡುಕುತ್ತಿರುವ ಹುಡುಗ ಮುಂಬೈನಲ್ಲಿದ್ದಾನೆಂದು ಹೇಳಿದರಂತಪ್ಪಾ ಎಂಬ ಆಶಾಳ ಮಾತಿಗೆ,
ಇಂತಹ ಒಳ್ಳೆಯ ವಿಷಯವನ್ನು ಹೇಳಲು ನೀನೇಕೆ ಅನುಮಾನಿಸುತ್ತಾ ಅಳುತ್ತಿದ್ದೀಯಾ? ನಿನ್ನಣ್ಣನನ್ನು ಹುಡುಕಿಕೊಟ್ಟು ಇದೊಂದು ಒಳ್ಳೆಯ ಉಪಕಾರ‌ ಮಾಡಿದಂತಿದೆ ಇನ್ನೇಕೆ ಅಳುತ್ತಿದ್ದೀಯಾ ಎಂದು ಅವಳಪ್ಪ ಪ್ರಶ್ಮಿಸಿದಾಗ
ಅದೂ ಹಾಗಲ್ಲಪ್ಪಾ? ಎಂದು ಆಶಾ ಪುನಃ ಹೇಳಲು
ಇನ್ನೇನಮ್ಮಾ ಹಾಗಾದರೆ? ಅವನಿಗೇನಾದರೂ ಹಣ ಕೊಡಬೇಕಂತಾ? ಹೇಳು ಬೇಕಾದರೆ ನಿನ್ನ ಮದುವೆಗೆ ಸ್ವಲ್ಪ ಹಣ ಇಟ್ಟುಕೊಂಡು ಕೋಟಿ ರೂಪಾಯಿಗಳನ್ನು ಕೊಟ್ಟುಬಿಡುತ್ತೇನೆ‌. ನಮ್ಮ ಮಗ ಮನೆಗೆ ಬಂದರೆ ಸಾಕೆಂದು ಅವಳಪ್ಪನ ಮಾತಿಗೆ
ಅವರಿಗೆ ಹಣ ಬೇಡವಂತೆ, ಆದರೇ,,,,
ಆದರೇನಮ್ಮಾ ಇನ್ನೇನು ಬೇಕಂತೆ ಎಂದು ಕೋದಂಡರಾಂ ಪ್ರಶ್ನಿಸಿದಾಗ
ನಾನು ಅವನನ್ನು ಮದುವೆಯಾದರೆ ಮಾತ್ರ ನಮ್ಮಣ್ಣ ಇರುವ ವಿಳಾಸ‌ ಹೇಳಿ ಮನೆಗೆ ಕರೆದುಕೊಂಡು ಬರುತ್ತಾನಂತೆ ಎಂದು ಆಶ ಹೇಳಿದ‌ ತಕ್ಷಣ
ಅಲ್ಲಿಯವರೆಗೂ ಕೋಪದಿಂದ ಮಾತನಾಡುತ್ತಿದ್ದ ಕೋದಂಡರಾಂ ರವರು ಏನೂ ಮಾತನಾಡದೆ ಮೌನವಾಗಿ ಕುಳಿತುಕೊಳ್ಳುತ್ತಾರೆ.
ಅವರ ಪತ್ನಿ ಮಾತನಾಡಿ, ಇದೇನ್ರೀ ಹುಡುಗಾಟ, ಅವನನ್ನು ಬೇಡವೆಂದು ಹೇಳಿದರೂ ಪುನಃ ಪುನಃ ತೊಂದರೆ ಕೊಡುತ್ತಿದ್ದಾನಲ್ಲಾ ಎಂದು ಪ್ರಶ್ನಿಸಲು
ನಾನು ಏನು ಮಾಡಲಿ? ಒಂದು ಬೇಕು ಎಂದರೆ ಇನ್ನೊಂದನ್ನು ಕಳೆದುಕೊಳ್ಳಬೇಕು. ಮಗ ಮಗಳು ನಮಗೆ ಎರಡು ಕಣ್ಣುಗಳಿದ್ದಾಗೆ, ಯಾವ ಕಣ್ಣು ಹೋದರೂ ಕಷ್ಟ ನಮಗೇ ಅಲ್ಲವೇ? ಹೋಗಲಿ ಅವನು ಒಳ್ಳೆಯವನಾಗಿದ್ದರೆ ಧಾರಾಳವಾಗಿ ಮದುವೆ ಮಾಡಿಕೊಡಬಹುದಿತ್ತು ಎಂದಾಗ
ಈಗ ಒಪ್ಪಿರುವ ಹುಡುಗನಿಗೆ ಏನು ಉತ್ತರ ಹೇಳುತ್ತಿದ್ರೀ? ಎಂದು ಅವರ ಪತ್ನಿ ಪ್ರಶ್ನಿಸಲು,
ಹೇಗೋ ಅವರಿಗೆ ಸಮಾಧಾನ ಮಾಡಬಹುದಿತ್ತೆಂಬ ಕೋದಂಡರಾಂ ಮಾತಿಗೆ,
ಮದುವೆಯ ಏರ್ಪಾಡು ಅವರೂ ಮಾಡಿಕೊಳ್ಳುತ್ತಿದ್ದಾರೆ, ಅದು ಈಗ ಹೇಗ್ರೀ ಬೇಡವೆಂದು ಹೇಳಕ್ಕಾಗುತ್ತದೆಂದು ಅವರ ಪತ್ನಿಯ ಮಾತಿಗೆ,
ಎಷ್ಟೋ ಮದುನೆಗಳು ಕಲ್ಯಾಣ ಮಂಟಪದ‌ ತನಕ ಬಂದು ನಿಂತಿಲ್ಲವೇ? ಇದು ನಮ್ಮ ಮಗನ ಭವಿಷ್ಯದ‌ ಪ್ರಶ್ನೆ ಹೇಗೋ ಸಮಾಧಾನ ಮಾಡಬಹುದಿತ್ತು ಎನ್ನುತ್ತಾರೆ‌ ಕೋದಂಡರಾಂ.
ಈಗ ಏನು ಮಾಡುತ್ತೀರಾ? ಎಂದು ಅವರ ಪತ್ನಿ ಪ್ರಶ್ನಿಸಲು
ನನಗೂ ಅದೇ ಅರ್ಥವಾಗುತ್ತಿಲ್ಲವೆನ್ನುತ್ತಾರೆ ಕೋದಂಡರಾಂ.
ಏನಾದರೂ ನನ್ನನ್ನು ಮದುವೆಯಾಗಲೀ ಎಂದು ಬೇಕಂತಾ ಹೇಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾನಾ ವಿಚಾರಿಸಬೇಕಿತ್ತು ಎಂದು ಅವರ ಪತ್ನಿ ನುಡಿಯಲು,
ಅದನ್ನು ಹೇಗೆ ಕಂಡು ಹಿಡಿಯುವುದು? ನನಗಂತೂ ಗೊತ್ತಾಗುತ್ತಿಲ್ಲ, ಅಕಸ್ಮಾತ್ ಮದುವೆಗೆ ಒಪ್ಪಿದ್ದೇನೆ ನಮ್ಮ ಮಗನ ವಿಳಾಸ‌ ಕೊಡು ಎಂದರೆ ಮದುವೆಯಾಗುವವರೆಗೂ ಕೊಡುವುದಿಲ್ಲವೆಂದರೆ, ಏನು ಮಾಡೋದೆಂಬ ಕೋದಂಡರಾಂ ಮಾತಿಗೆ
ರೀ ಒಂದು ಕೆಲಸ ಮಾಡಿ, ನಿಮ್ಮ ಶಿಷ್ಯ‌ ಇನ್ಸ್‌ಪೆಕ್ಟರ್ ಇದ್ದಾರಲ್ಲಾ ಅವರಿಗೆ ವಿಷಯ ತಿಳಿಸಿ ಅವರೇ ಏನಾದರೂ ಉಪಾಯ ಮಾಡುತ್ತಾರೆ. ಇಲ್ಲದಿದ್ದರೆ ಅವನನ್ನು ಕರೆಸಿ ವಿಚಾರಣೆ ಮಾಡುತ್ತಾರೆಂದಾಗ
ಪ್ರತಿಯೊಂದಕ್ಕೂ ಅವರನ್ನೇ ಕೇಳುತ್ತಿದ್ದರೆ ಹೇಗೆ? ನೀನೇ ಹೇಳು? ಅವರಿಗೂ ಬೇಸರವಾಗುವುದಿಲ್ಲವಾ? ಎಂದು ಕೋದಂಡರಾಂ ಪ್ರಶ್ನಿಸಿದಾಗ,
ಇನ್ಸ್ ಪೆಕ್ಟರ್ ಗೆ ಹೇಳಿ ಅವನಿಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆಂದು ಈಗ ತಾನೇ ಮಾತನಾಡಿದ್ರೀ ಎಂದಾಗ
ಏನೋ ಕೋಪದಲ್ಲಿ ಹೇಳಿದೆ, ಅದನ್ನೇ ಮುಂದುವರೆಸಲು ಆಗುತ್ತದಾ ಎಂದು ಕೋದಂಡರಾಂ ಪ್ಪಶ್ನಿಸಿದಾಗ
ಇದೊಂದು ಸಲ‌ ಕೇಳಿ ನೋಡೋಣ, ಗುರುಗಳ ಮನೆಯ ಕೆಲಸವೆಂದು ಅವರೇನೂ ಬೇಸರಪಟ್ಟುಕೊಳ್ಳುವುದಿಲ್ಲವೆಂದಾಗ
ನೋಡೋಣ ಅವರಿಂದ ಈ ಸಮಸ್ಯೆ ಸಾಲ್ವ್ ಆಗುವುದಿದ್ದರೆ, ನಾನೇಕೆ ಬೇಡವೆನ್ನಲಿ? ಅವನನ್ನು ಕರೆಸಿ ವಿಚಾರಿಸಿ ಮಗನ ವಿಳಾಸ ಪಡೆದರೆ ಸಾಕು, ನಾವೇ ಹೋಗಿ ಕರೆದುಕೊಂಡು ಬರುತ್ತೇನೆಂದು ಹೇಳಿ ಕೈ ತೊಳೆಯಲು ಹೋಗುತ್ತಾರೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಿಂದ ತಿಳಿದು ಬರುವ ಮುಖ್ಯವಾದ ಅಂಶವೇನೆಂದರೆ,
    ಉಪಕಾರ ಸಹಾಯ ಮಾಡುತ್ತಾರೆಂದರೆ, ಅವರಿಗೆ ಬೇಸರವಾಗುವವರೆಗೂ ಸಹಾಯ ನಿರೀಕ್ಷಿಸಬಾರದು, ಕಬ್ಬು ಸಿಹಿಯಾಗಿದೆಯೆಂದು ಬುಡವನ್ನು ಜಗಿಯಲು ಸಾಧ್ಯವಿಲ್ಲ.
    ಯಾವುದೇ ಸಮಸ್ಯೆಯಾದರೂ ಪರಿಹಾರ ಇದ್ದೇ ಇರುತ್ತದೆ. ಪರಿಹಾರವಿಲ್ಲದ ಸಮಸ್ಯೆ ಯಾವುದೂ ಇಲ್ಲ. ನಿಧಾನವಾಗಿ ಯೋಚಿಸಿ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳಬೇಕಷ್ಚೇ‌ ಅಲ್ಲವೇ?