ಹಲೋ
ಸಿಕ್ಕಿಂ ಅಪ್ಪರ್ ಬೋರಾಂಗೋ
ಅದೊಂದು ದಿನ ನಾನು ನನ್ನ ಪತಿಯ ಬಳಿ ದಸರಾ ರಜೆಯಲ್ಲಿ ಪ್ರವಾಸಕ್ಕೆ ಹೋಗೋಣವೆಂದೆ. ಸರಿ,ಅವರು ಮಗಳ ಬಳಿ ಈ ಪ್ರಸ್ತಾಪ ಎತ್ತಿದಾಗ, ಅವಳು ನಾವು ಸಿಕ್ಕಿಂಗೆ ಹೋಗಲು ಬುಕ್ ಮಾಡಿದ್ದೇವೆ. ನೀವೂ ಬರುವಿರಾದರೆ ಬುಕ್ ಮಾಡುತ್ತೇವೆ ಎಂದಳು. ಸರಿ ಮಗಳು ಅಳಿಯ ಮೊಮ್ಮಕ್ಕಳ ಜೊತೆ ಸಂತೋಷವಾಗಿ ಕಾಲಕಳೆಯಬಹುದಲ್ಲ ಹಾಗಿದ್ದರೆ
ಅವರ ಜೊತೆ ಹೋಗೋಣವೆಂದು ನಿರ್ಧಾರವಾಯಿತು. ವಿಮಾನ ದರ ಹೆಚ್ಚಾದರೂ ಸರಿ ಎಂದು ಮಗಳು ಬುಕ್ ಮಾಡಿದಳು. ಅಕ್ಟೋಬರ ೫ ಹೊರಡುವ ದಿನ ಬೆಳಿಗ್ಗೆ ಎರಡೂವರೆಗೆ ಎದ್ದು ತಯಾರಿ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಬಾಡಿಗೆ ಕಾರಿನಲ್ಲಿ ಹೊರಟು ಅಲ್ಲಿ ಚೆಕಿಂಗ್ ಮುಗಿಸಿ
ವಿಮಾನಕ್ಕೆ ಕಾಯುತ್ತ ಕುಳಿತೆವು. ನನ್ನ ಮಗಳು ಅಳಿಯ ಮೊಮ್ಮಕ್ಕಳು ಸ್ವಲ್ಪ ತಡವಾಗಿ ಅಲ್ಲಿಗೆ ಬಂದರು. ಮಕ್ಕಳಿಗೆ ಒಂದು, ಎರಡು ಮುಖ್ಯ. ಅದು ಯಾವಾ ಬರುತ್ತೆ ಎಲ್ಲಿ ಬರುತ್ತೆ ಹೇಳಲಾಗದು. ಮುನ್ನೆಚ್ಚರಿಕೆ ಪ್ರವಾಸದಲ್ಲಿ ಅಗತ್ಯ. ವಿಮಾನನಿಲ್ದಾಣದಲ್ಲಿ ಅವುಗಳನ್ನು ಮುಗಿಸಿ ದುಬಾರಿ ಬೆಲೆಯ ಕಾಫಿ ಸ್ಯಾಂಡವಿಚ್ ತಿಂದು ವಿಮಾನ ಏರಿದೆವು.
ಒಟ್ಟೂ ಎಂಟು ದಿನದ ಪ್ರವಾಸ.
ವಿಮಾನದಲ್ಲಿ ಮೋಡಗಳ ವೈವಿಧ್ಯ ಅವುಗಳ ಚಿತ್ತಾರ ಆಗಸದ ಅಂದ
ನಿಜಕ್ಕೂ ಆ ಅನುಭವ ಖುಶಿಯ ಕೊಟ್ಟಿತ್ತು. ಮೋಡದ ಒಳಗೆ,ಮೋಡದ ಮೇಲೆ, ಮೋಡದ ಕೆಳಗೆ ಮೋಡಿಯಾಗಿತ್ತು ಈ ಮನ. ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಬಾಗ್ ಡೋಗ್ರಾ ವಿಮಾನ ನಿಲ್ದಾಣ ತಲುಪಿದೆವು.
ಅಲ್ಲಿಂದ ಮೈನಕ್ ಟೂರಿಸ್ಟ ಪ್ರಾಪರ್ಟಿಯಲ್ಲಿ ವಾಸ ಮಾಡಲು ನಮಗೆ ತಿಳಿಸಲಾಗಿತ್ತು. ಅಲ್ಲಿ ಎರಡು ಕೋಣೆ ಪಡೆದು ಅಕ್ಕ ಪಕ್ಕದ ಮನೆ ಮಾಡಿಕೊಂಡು ನಾವು ಮಕ್ಕಳು ಕೂಡಿ ಆಡಿದೆವು.
ಒಂದು ರಾತ್ರಿ ಅಲ್ಲಿ ಕಳೆದು ಮಾರನೇ ದಿನ ತಿಂಡಿ ಮುಗಿಸಿ ೮.೩೦ ಕ್ಕೆ ಜೀಪಿನಲ್ಲಿ ಸಿಕ್ಕಿಂ ಕಡೆ ಹೊರಟೆವು. ಮಕ್ಕಳು ೬ ತಾಸು ಕುಳಿತು ಹೇಗೆ ಪ್ರಯಾಣ ಮಾಡುವರೋ ಎಂಬ ಯೋಚನೆಯಾಗಿತ್ತು. ಅಂತೂ ನನ್ನ ಮಗಳು ಅಳಿಯ ನಮ್ಮ ಸಹಾಯದೊಂದಿಗೆ ಸೇರಬೇಕಾದ ಸ್ಥಳ ತಲುಪಿದೆವು. ಸಿಕ್ಕಿಂ ಸಣ್ಣ ಪ್ರದೇಶವಾದರೂ ನಮ್ಮ ಬೆಂಗಳೂರಿನ ಹತ್ತು ಪಟ್ಟು ಇದೆ.
ತಿಸ್ತಾ ನದಿಯ ದಡದುದ್ದ ರಸ್ತೆ,ಅಲ್ಲಲ್ಲಿ ಭೂಕುಸಿತವಾದ ಕುರುಹು, ದಾರಿ ಘಟ್ಟಮಯ, ದುರ್ಗಮವಾದ ಕಿರಿದಾದ ಮಾರ್ಗ, ಅದರೆ ಪ್ರಕೃತಿ ಸೊಬಗು ಅವರ್ಣನೀಯ. ಮನಸಿಗೆ ಹಿತ, ಭಾವನೆಯು ಸ್ಮಿತ, ರೋಮಾಂಚನ ಅಗಸದ ವಿಸ್ಮಯ ಚೇತೊವಿಹಾರ. ಅಲ್ಲಲ್ಲಿ
ವಾಹನ ದಟ್ಟಣೆ, ನಾವು ಸಿಕ್ಕಿಂ ನ ಅಪ್ಪರ್ ಬೋರಾಂಗೊ ತಲುಪಿದಾಗ ಕತ್ತಲು ಆವರಿಸಿತ್ತು.
ನಾವು ಅಪ್ಪರ್ ಬೋರಾಂಗೋ ಜನರಿಂದ ಶಾಸ್ತ್ರೋಕ್ತವಾಗಿ ಸ್ವಾಗತಿಸಲ್ಪಟ್ಟೆವು. ಒಟ್ಟೂ ಮೂವತ್ತು ಮಂದಿಯನ್ನು ಕಲೆಹಾಕಿ ಹೈದರಾಬಾದಿನ ಗಂಗಾಧರ ಮತ್ತು ರಮ್ಯ ಅವರ ಇಬ್ಬರು ಹೆಣ್ಣು ಮಕ್ಕಳು ಅಲ್ಲಿಗೆ ಬರಮಾಡಿಕೊಂಡರು. ನಮಗೆ ಶಾಲು ಹಾಕಿ ಅಕ್ಷತೆ ಕುಂಕುಮವಿಟ್ಟು ಮಂತ್ರ ಘೋಷದೊಂದಿಗೆ ಸ್ವಾಗತಿಸಿ, ಮೂರು ವಿಭಾಗ ಮಾಡಿ ಮೂರು ಹೋಂ ಸ್ಟೇ ಗಳಿಗೆ ಕಳುಹಿಸಿದರು. ಕತ್ತಲು, ದುರ್ಗಮವಾದ ದಾರಿ, ಸಂಪೂರ್ಣ ಕಾಡು, ಉಂಬುಳಗಳ ಭಯ, ಅಂತೂ ಬೆಳಕಿಗಾಗಿ ಮೊಬೈಲ್ ಜೊತೆ ಕೆಳಗಿಳಿದು ಮನೆ ತಲುಪಿದೆವು. ನೋಡಿದರೆ ಕರೆಂಟ್ ಇಲ್ಲ ಕತ್ತಲಿನಲ್ಲೇ ಕೋಣೆ ಸೇರಿ ಮನೆಯಲ್ಲಿ ಊಟ ಮಾಡಿದೆವು.
ದಾರಿಯಲ್ಲಿ ಬರುವಾಗ ಒಂದು ಲೀಚ್ ನನ್ನ ಮೊಮ್ಮಗನ ಕಾಲೇರಿತ್ತು. ಮಕ್ಕಳು ಸುಸ್ತಾಗಿದ್ದರು. ನಾವೂ ಸುಸ್ತಾಗಿದ್ದೆವು. ಊಟ ಮುಗಿದ ತಕ್ಷಣ ಕತ್ತಲೆಯಲ್ಲಿ ಏನು ಮಾಡುವದು? ಹೋಂ ಸ್ಟೇ ಜನ
ಗುರಂಗ್ ಜನಾಂಗ. ಬೌದ್ದರು, ಸಹೃದಯಿಗಳು. ನಮ್ಮನ್ನು ಪ್ರೀತಿಯಿಂದ ಕಂಡರು. ತಾಮುದಿ ಹೋಂಸ್ಟೆ ನಾವು ಇಳಿದುಕೊಂಡಿದ್ದು. ನಮ್ಮ ಹಾಗೆ ಇನ್ನೊಂದು ಕುಟುಂಬ ವಿಕ್ರಮ, ಹರಿಚಂದನ ಅವರ ಮಗ ಕಾರ್ತಿಕೇಯ.ಎರಡು ಕುಟುಂಬಗಳು ತಾಮುದಿ ಹೋಂ ಸ್ಟೇ ಯಲ್ಲಿ ಆರು ದಿನ ವಾಸವಾಗಿದ್ದೆವು. ಮಾರನೇ ದಿನ ಬೆಳಿಗ್ಗೆ ರೋಟಿ ಕರಿ ಬೆಳಗಿನ ಉಪಹಾರ, ಹಸುವಿನ ಹಾಲು, ಆಯಿತು, ಇಲ್ಲಿ ಎಲ್ಲವೂ ಸಾವಯವ ಪದಾರ್ಥ. 10 ಗಂಟೆಯ ಸಮಯಕ್ಕೆ ಉಳಿದೆರಡು ಹೋಂ ಸ್ಟೇಯಲ್ಲಿ ವಾಸವಿದ್ದ ಕುಟುಂಬಗಳು ಗಂಗಾಧರ,ರಮ್ಯ,ಅವರಿಬ್ಬರು ಅನನ್ಯ ಅಮೂಲ್ಯ ಹೆಣ್ಣು ಮಕ್ಕಳ ಜೊತೆ ತಾಮುದಿ ಹೋಂ ಸ್ಟೇಗೆ ಬಂದರು. ತಾಮುದಿಯಲ್ಲಿ ಆ ದಿವಸ ಸಾಂಪ್ರದಾಯಿಕ ಆಹಾರಗಳ ಪರಿಚಯ. ಮೋಮೊ,ಶೆಲ್ ರೋಟಿ,ಕಬ್ಜೆ ಸ್ವತಃ ನಮ್ಮ ಮುಂದೆ ಮಾಡಿ,ನಮ್ಮಿಂದ ಮಾಡಿಸಿ ಬಡಿಸಿದರು.ಎಲೆಗಳಿಂದ ತಿನ್ನಲು ತಟ್ಟೆ ಮಾಡಿದ್ದರು. ತಿಂಡಿಗಳು ರುಚಿಯಾಗಿದ್ದವು. ಸೀಮೆ ಬದನೆಕಾಯಿಯ ಕುಂಬಳ ಕಾಯಿಯ ಉಪಯೋಗ ಬಹಳವಾಗಿತ್ತು.ಸಾಸಿವೆ ಎಣ್ಣೆಯಲ್ಲಿ ಅಡುಗೆ.4 ಗಂಟೆಯವರಗೂ ತಿಂಡಿ ಕಾರ್ಯಕ್ರಮ ಮಾತುಕತೆ. ಎಲ್ಲರೂ
ಅವರವರ ಹೋಂ ಸ್ಟೇಗೆ ಹೋದರು.ತಾಮುದಿ ಹೋಂ ಸ್ಟೇಗೆ ಬರುವಾಗ ಹೋಗುವಾಗ ಹತ್ತಿ ಇಳಿಯುವದೇ ಬಹಳ ಕಷ್ಟ.ಕೋಲು ಹಿಡಿದು ನಾನು ನನ್ನ ಪತಿ ಹತ್ತಿಳಿಯುತ್ತಿದ್ದೆವು.ನನ್ನ ಇಬ್ಬರು ಮೊಮ್ಮಕ್ಕಳೊಡನೆ ಮಗಳು ಅಳಿಯ ಹತ್ತಿಳಿಯುತ್ತಿದ್ದರು.ಆದರೆ ಆ ಮನೆಯ ಜನ ಸಲೀಸಾಗಿ ಹತ್ತಿಳಿಯುತ್ತಾರೆ.ಅಲ್ಲಿ ಬೆಳಗಿನ ದೃಶ್ಯ ಅತೀ ಸುಂದರ.ಮಂಜು ಮುಸುಕು,ಆಗಸದ ದಿಬ್ಬಣ,ಚಿತ್ತಾರ,ಆ ಸೃಷ್ಟಿಕರ್ತನ ಕುಂಚ ಅತೀ ವಿಸ್ಮಯ,ಮನೋಹರ,ಚಿತ್ತಾಕರ್ಷಕ, ವರ್ಣಿಸಲಸದಳವು. ಸಾಯಂಕಾಲ ೫ ಗಂಟೆಗೆ ಕತ್ತಲು ಆವರಿಸಿದರೆ ಬೆಳಗು ಕೂಡಬೇಗನೇ.ಪೂರ್ವ ದಿಗಂತ ಬೆಳಕಾಗಿ ಪಶ್ಚಿಮದೆಡೆ ಕಿರಣಗಳು ಹಾಯ್ದು ನಮಗೆ ಬೆಳಗಿನನುಭವ.
ಅಂತೆಯೇ ಪೂರ್ವ ದಿಗಂತದತ್ತ ಕತ್ತಲು ಹರಿದು ಸಾಯಂಕಾಲವಾಗಿ
ಪಶ್ಚಿಮ ದತ್ತ ಸೂರ್ಯಾಸ್ತದವರೆಗೂ ಬೆಳಕಿನನುಭವ. ಮೂರ್ನಾಲ್ಕು ದಿನವೂ ವಿದ್ಯುತ್ ಕೈ ಕೊಟ್ಟು ಬಂದು ಹೋಗುತ್ತಿತ್ತು.ಚಳಿ,ಬಿಸಿಲು,ಮಳೆ,ಈ ಮೂರು ಅಲ್ಲಿ ಆಗಾಗ ಸಾಮಾನ್ಯ.ಹಾಗಾಗಿ ಕಾಲಿಗೆ ಬೂಟು,ರೇನ್ ಕೋಟು,ಸ್ವೆಟರ್ ಇವೆಲ್ಲ ಅವಶ್ಯಕ. ಕಾಂಚನ ಜುಂಗಾ ರೇಂಜಿನಲ್ಲಿ ಈ ಪ್ರದೇಶವಿದೆ.
ರಾತ್ರಿ ಪಲ್ಯ ಅನ್ನ ಸಾರು ಊಟ.ಇಲ್ಲಿ ಪದಾರ್ಥ ಅಥವಾ ವ್ಯಂಜನಗಳಿಗೆ ಉಪ್ಪು ಖಾರ ಹಾಕುವದಿಲ್ಲ.ಉಪ್ಪಿನಕಾಯಿ ಜೊತೆ ಸೇರಿಸಿ ಊಟ ಮಾಡಬೇಕು. ಕೇಳಿದರೆ ಉಪ್ಪು ಕೊಡುತ್ತಾರೆ. ಮೊಸರು ಕೂಡ ಶುದ್ದ ಹಸುವಿನ ಹಾಲಿನದು.ತುಪ್ಪ ಜೊತೆ ಊಟ. ಪ್ರೀತಿಯಿಂದ ಊಟ ತಿಂಡಿ ಕೊಟ್ಟು ಕೈ ಮುಗಿಯುತ್ತಾರೆ.ನಾವೂ ಕೂಡ ಅವರ ಬಳಿ ತುಂಬಾ ಆತ್ಮೀಯವಾಗಿ ಹೊಂದಿಕೊಂಡೆವು.
ಹಿಂದಿ ಇಂಗ್ಲೀಷ ಭಾಷೆ ಬಳಸಿ ಮಾತಾಡಿದೆವು.ಗುರಂಗ ಬುಡಕಟ್ಟು ಜನಾಂಗ ನೇಪಾಳ ಮೂಲದವರು.ಅವರ ಮಾತೃಭಾಷೆ ನೇಪಾಲಿ.ಬಹಳಷ್ಟು ವರ್ಷಗಳಿಂದ ಅಪ್ಪರ್ ಬೋರಾಂಗೊದಲ್ಲಿ ವಾಸಿಸಿ ಇಲ್ಲಿಯ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿದ್ದಾರೆ.ಅವರದೇ ಆದಂತಹ ಸಾಂಪ್ರದಾಯಿಕ ಸಂಸ್ಕೃತಿಗಳು ಅಲ್ಲಿ ಕಂಡುಬರುತ್ತದೆ. ಮಾರನೇ ದಿನ ೮ ನೇ ತಾರೀಕು ನಮಗೆ ಅಪ್ಪರ್ ಬೋರಾಂಗೊ ಸರ್ಕಾರಿ ಶಾಲೆಗೆ ಕರೆದೊಯ್ದರು.ಅಲ್ಲಿ ಮಕ್ಕಳ ಜೊತೆ ಪರಸ್ಪರ ಸಂವಹನ ನಡೆಸುವದು ಮುಖ್ಯ ಉದ್ದೇಶವಾಗಿತ್ತು.ಅಲ್ಲಿಯೂ ನಮ್ಮನ್ನು ನೋಡಿ ಮಕ್ಕಳು ಶಿಕ್ಷಕರು ಖುಶಿ ಪಟ್ಟರು.ಮತ್ತೆ ಹೋಂ ಸ್ಟೇಗೆ ಬಂದೆವು.ಊಟ ಚಹ ಸಾಯಂಕಾಲವಾಗುತ್ತಿದ್ದಂತೆ ಅಸ್ತ್ರ ಒಲೆಯಲ್ಲಿ ಬೆಂಕಿ ಉರಿಸಿ ಅಡುಗೆ ಜೊತೆ ಚಳಿ ಕಾಯುವ ವ್ಯವಸ್ಥೆ ಇಲ್ಲಿದೆ.ಅಡುಗೆ ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳಿ ಬನ್ನಿ ಎನ್ನುತ್ತಾರೆ. ಅತಿಥಿಗಳು ಇದ್ದಾಗ ಅಡುಗೆ ಮೂರು ಹೊತ್ತು ಬಿಸಿಬಿಸಿಯಾಗಿ ಮಾಡುವದು ದೊಡ್ಡ ಕೆಲಸ ಅವರಿಗೆ.ಮನೆಯಲ್ಲಿ ಕೂಡುಕುಟುಂಬಗಳಾದ ಕಾರಣ ಒಬ್ಬೊಬ್ಬರು ಹಂಚಿಕೊಂಡು ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ೯ ನೇ ತಾರೀಕು ಎಲ್ಲರೂ ರಾಹುಲ ಹೋಂ ಸ್ಟೇಗೆ ಹೋದೆವು.ಅಲ್ಲಿ ಸಾಂಪ್ರದಾಯಿಕ ಕೃಷಿಯ ಕುರಿತು ಸಂಪನ್ಮೂಲ ವ್ಯಕ್ತಿಯಾದ ಘನಶ್ಯಾಮ ಅವರು ವಿವರಣೆ ಕೊಟ್ಟರು.ಗದ್ದೆಯಲ್ಲಿ ಇಳಿದು ಸಾಂಪ್ರದಾಯಿಕವಾಗಿ ಊಳುವದು,ಕಡಿಯುವದು,ಕಳೆತೆಗೆಯುವದು,ಎಲ್ಲವನ್ನೂ ಮಾಡಿ ಮಾಡಿಸಿ ಅನುಭವ ಕೊಟ್ಟರು.ಬಯೋ ಡೈವರ್ಸಿಟಿ ಪರಿಚಯ ಇಲ್ಲಿತ್ತು. ಊಟ ಮುಗಿಸಿ ಮಾತುಕತೆಯ ನಂತರ ಮಿಲೆಟ್ ಭಾಂಗ್ ಮಾಡಿ ರುಚಿ ತೋರಿಸಿದರು.ಇದು ನಮ್ಮೂರಿನ ಕಳ್ಳು ಎನ್ನಬಹುದು.ಮತ್ತೆ ನಮ್ಮ ನಮ್ಮ ಜಾಗಕ್ಕೆ ನಾವು ತೆರಳಿದೆವು.
ಹೊರಡುವಾಗ ದುಷ್ಟ ಶಕ್ತಿಗಳು ಬರಬಾರದೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತಾರೆ.ಒಂದು ದಿನ ಅಕ್ಕಿ ಕೊಟ್ಟು ಅಗಿಯಲು ಹೇಳಿದರು.ಗೋಪಿ ಚಂದನವನ್ನು ಹಣೆಗೆ ಹಚ್ಚುತ್ತಾರೆ.ದೈವಿಕ ಶಕ್ತಿಯ ಮೇಲೆ ನಂಬಿಕೆ ಇವರಿಗೆ .೧೦ ನೇ ತಾರೀಕು ದೂರದ ಪಯಣ Hot Spring ನೋಡಿದೆವು.ಇಲ್ಲಿ ೧೦೦೦ ಮೆಟ್ಟಿಲು ಇಳಿದು ಬಿಸಿ ನೀರಿನ ಚಿಲುಮೆಗೆ ಹೋಗಬೇಕು.ಅಲ್ಲಿ ಒಂದು ಕಡೆ ಬಿಸಿ ನೀರು ಇನ್ನೊಂದು ಕಡೆ ತಂಪು ನೀರಿನ ಕೊಳ್ಳ ಇದೆ.ಈ ಬಿಸಿ ನೀರು ಔಷಧ ಗುಣ ಹೊಂದಿದೆ.ಮೂರು ತಾಸು ಇಳಿದು ಹತ್ತಲು ಸಮಯ ಹಿಡಿಯಿತು.ಅಲ್ಲಿಯೇ ಸ್ವಲ್ಪ ದೂರದಲ್ಲಿ ಊಟ ಮಾಡಿ ಬುದ್ದಪಾರ್ಕ ನೋಡಿ ಶಾಪಿಂಗ್ ಮಾಡಿ ಅಲ್ಲಿಂದ ಹೊರಟೆವು.ಮತ್ತೆ
ಬುದ್ದ ಮಾನೆಸ್ಟ್ರಿ ನೋಡಿ ವಾಪಸ್ಸಾದೆವು.೧೧ ನೇ ತಾರೀಕು ರಾಹುಲ ಹೋಂ ಸ್ಟೇ ಯಲ್ಲಿ ಉಣ್ಣೆ ಬಟ್ಟೆ ನೇಯ್ಗೆ ಟಗರಿನ ಕೂದಲನ್ನು ಕತ್ತರಿಸುವ ಸಾಂಪ್ರದಾಯಿಕ ವಿಧಾನ ನೋಡಿದೆವು.ಅಲ್ಲಿ ಸಾಂಪ್ರದಾಯಿಕ ಉಣ್ಣೆಯ ನೆಲಹಾಸು,ಟೊಪ್ಪಿಗೆ,ಕೋಟುಗಳನ್ನು ಬೇಕಾದವರು ಕೊಂಡರು.ಉಣ್ಣೆ ನೇಯ್ಗೆಯನ್ನು ಇಷ್ಟವಾದವರು ಮಾಡಿದರು.ಅಲ್ಲಿಯ ತರತರದ ಹೂವುಗಳು ಸಂತಸ ನೀಡಿದವು.
ಸಾಂಪ್ರದಾಯಿಕ ಮಜ್ಜಿಗೆ ಕಡೆವ ವಿಧಾನ,ಹಾಲು ಕರೆಯುವ ವಿಧಾನ
ಎಲ್ಲವೂ ನಮ್ಮೂರನ್ನು ನೆನಪಿಸಿದವು ನನಗೆ. ಸಾಂಪ್ರದಾಯಿಕ ಕೃಷಿ ವಿಧಾನ ನಮ್ಮೂರಿನ ವಿಧಾನಗಳಿಗೆ ಹತ್ತಿರವಾಗಿತ್ತು.ಎತ್ತು ನೇಗಿಲು,ಕುಟಾರೆ ಎಲ್ಲವೂ ಬಾಲ್ಯದಲ್ಲಿ ಅಮ್ಮನ ಮನೆಯಲ್ಲಿ
ನೋಡಿದ ಆಡಿದ ಸಂಗತಿಗಳಿಗೆ
ಇಂಬಾದವು. ಎರಡು ಟಗರಿನ ನಡುವೆ ಕಾಳಗವೂ ಆಯಿತು.
ಕೋಳಿ ಅಂಕ ಇದ್ದಂತೆ ಟಗರ ಅಂಕವಿಲ್ಲಿ. ಎಲ್ಲರೂ ಇಲ್ಲಿಯ ಸಾಂಪ್ರದಾಯಿಕ ವೃತ್ತಿಗೆ ಮನರಂಜಿಸಿಕೊಂಡರು. ಹಳ್ಳಿಯ ಜೀವನ ಹಸಿರಿನ ತೊಟ್ಟಿಲಿನಲ್ಲಿ
ಮಲಗಿ ಒತ್ತಡದಿಂದ ದೂರವಾದರು.
ಊಟ ನಂತರ ಮನರಂಜನಾ ಕಾರ್ಯಕ್ರಮ.ಸಾಂಪ್ರದಾಯಿಕ ನೃತ್ಯದ ಜೊತೆ ಎಲ್ಲ ಅತಿಥಿಗಳ ಅಭಿಪ್ರಾಯವನ್ನು ಸಂಗ್ರಹಿಸಿದರು.ನಾನು ಕನ್ನಡ ಕವನ ಹಾಡಿದೆ.ನನ್ನ ಮಗಳು ಪ್ಲಾಸ್ಟಿಕ್ ರಿಸೈಕ್ಲಿಂಗ್ ಬಗ್ಗೆ ಸಂದೇಶ ನೀಡಿದಳು.ನನ್ನ ಅಳಿಯ ಜೊತೆ ಜೊತೆಯಲಿ ಹಾಡಿದರು.ಗಂಗಾಧರರವರು ಮಾತಾಡಿದರು ಹಾಡಿದರು.ಅವರ ಮಕ್ಕಳು ಹೋಂ ಸ್ಕೂಲ್ ಅಂತೆ.
ಜೀವನವನ್ನು ಅನುಭವಿಸಿ,ಆಸೆ ಪಟ್ಟಿದ್ದ ಕಲಿತು ಶಿಕ್ಷಣ ಪಡೆಯುತ್ತಿದ್ದಾರೆ.ಅವರೂ ಇಂಗ್ಲೀಷ ಹಾಡು ಹಾಡಿದರು.ವಾಪಸ್ ನಮ್ಮ ಜಾಗಕ್ಕೆ ಬಂದೆವು.ಮಾರನೇ ದಿನ ಬೆಳಿಗ್ಗೆ ಮೂರು ಗಂಟೆಗೆ ಎದ್ದು ತಯಾರಾಗಿ ಬಾಗ್ ಡೋಗ್ರಾಕ್ಕೆ ಬರಬೇಕಿತ್ತು.ತಿಂಡಿ ತಿಂದು ಚಹ ಕುಡಿದಾಯ್ತು.ಮತ್ತೆ ನಮ್ಮನ್ನೆಲ್ಲ ಕರೆದು ಅತಿಥಿ ದೇವೋಭವ ಎಂದು ಶಾಲು ಹೊದೆಸಿದರು.
ರೋಟಿ ಪಲ್ಯ ಕಟ್ಟಿಕೊಟ್ಟರು.
ಅತ್ಯಂತ ಪ್ರೀತಿಯಿಂದ ಜೀಪಿನವರೆಗೂ ಬಂದು ಬೀಳ್ಕೊಟ್ಟರು.ಅವರ ಊಟ ತಿಂಡಿ
ಮಾತುಕತೆ ಕಟ್ಟಿಕೊಟ್ಟ ಸಾಂಪ್ರದಾಯಿಕ ಶೈಲಿ ಎಲ್ಲದರ ಜೊತೆ ಜೀಪಿನಲ್ಲಿ ಬಾಗ್ ಡೋಗ್ರಾ ತಲುಪಿದೆವು.ಅಲ್ಲಿಂದ ೨.೩೦ ರ ವಿಮಾನದಲ್ಲಿ ಬೆಂಗಳೂರಿಗೆ ಬಂದೆವು.೧೨ ತಾರೀಕಿನ ಸಂಜೆ ೭.೩೦ ಕ್ಕೆ ಮನೆ ತಲುಪಿದೆವು ಸಿಕ್ಕಿಂ ನಲ್ಲಿ ನಂಬಿಕೆ ವಿಶ್ವಾಸ ಜಾಸ್ತಿ.ಅಲ್ಲಿ ಅತಿಥಿಗಳಿಗೆ ಕೊಟ್ಟ ಕೋಣೆಗೆ ಬೀಗ ಹಾಕುವ ಪದ್ದತಿ ಇಲ್ಲ.ಎಲ್ಲೆ ಹೋದರೂ ಕೋಣೆಯ ಚಿಲಕ ಮಾತ್ರ ಹಾಕಿ ಹೋಗುತ್ತಿದ್ದೆವು.ಅಲ್ಲಿ ಕಳ್ಳತನ ದರೋಡೆ ಇಲ್ಲ. ಹೀಗೆ ಅನುಭವ.ಹೀಗೆ ಸಂತಸ,ಹೀಗೆ ಕಲಿಯುವ ಕ್ರಮ ಎಂದರೆ ತಪ್ಪಿಲ್ಲ
– ಕಲ್ಪನಾಅರುಣ