ಸಿಂಹಾಸನಪುರಾಧೀಶ್ವರಿ ಹಾಸನಾಂಬೆ..!
ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ದೇವರ ಹಿನ್ನೆಲೆಯಲ್ಲಿ ಬಂದಿರುವಂತಹ ಹೆಸರುಗಳಿವೆ. ಇಂತಹ ಸಾಲಿನಲ್ಲಿ ಸೇರುವ ಊರು ‘ಹಾಸನ‘. ಈ ನಗರಕ್ಕೆ ತಾಯಿ ‘ಹಾಸನಾಂಬೆ‘ಯಿಂದಲೇ ಬಂದ ಹೆಸರಿದು.
ಆದಿಶಕ್ತಿಸ್ವರೂಪಿಣಿಯೂ, ವರಪ್ರದಾಯಿನಿಯೂ ಆದ ‘ಹಾಸನಾಂಬೆ’ಗೆ ಈ ಹೆಸರು ಸಿಂಹಾಸನಪುರಿ ಎಂಬ ಹೆಸರಿನಿಂದ ಬಂದಿದೆ. ಸಿಂಹಾಸನಪುರವು ಅರ್ಜುನನ ಮೊಮ್ಮಗನಾದ ಜನಮೇಜಯ ಮಹಾರಾಜನ ಸ್ಥಳವಾಗಿತ್ತು. ಸಪ್ತಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ; ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಕಾಶಿ ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ಬರುತ್ತಿರುವಾಗ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತರು. ಅವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮಿ ದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಗಳಾದ ಚಾಮುಂಡಿ, ವಾರಾಹಿ, ಇಂದ್ರಾಣಿಯರು ದೇವಿಗೆರೆಯ ಬಳಿ ನೆಲೆಸಿದರು ಎನ್ನಲಾಗುತ್ತದೆ.
ಸಪ್ತಮಾತೃಕೆಯರು ಸದಾ ನಗುವ ದೇವತೆಯಾಗಿರುವ ಕಾರಣದಿಂದ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ ಎನ್ನಲಾಗುತ್ತದೆ. ‘ಹಾಸನಾಂಬ‘ ಎಂದರೆ ನಸುನಗುತ್ತಾ ಹಸನ್ಮುಖಿಯಾಗಿರುವ ತಾಯಿ ಎಂದೂ ಇರಬಹುದು. ದೇಗುಲದ ಮೂರ್ತಿ ಹುತ್ತದ ಆಕಾರದಲ್ಲಿ ಇರುವುದೇ ವೈಶಿಷ್ಟ್ಯ. ಈಕೆಯ ದರ್ಶನ ವರ್ಷದಲ್ಲಿ ಒಂದು ಬಾರಿ, ದೇಗುಲದ ಬಾಗಿಲು ತೆಗೆದರೆ, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲು ಮುಚ್ಚುವುದು. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಉರಿಯುತ್ತದೆ ಎಂಬುದು ದೇವಿಯ ಮಹಿಮೆ, ಮಹಾರಹಸ್ಯ, ಬಿಡಿಸಲಾಗದ ಕಗ್ಗಂಟು!. ಇದಕ್ಕೆಲ್ಲಾ ನಂಬಿಕೆಯೇ ಆಧಾರ.
ಐತಿಹಾಸಿಕ ಕಥೆಯ ಪ್ರಕಾರ ಹಾಸನವು ಚೋಳರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರಾದಾಗಿತ್ತು. ಹೊಯ್ಸಳರಿಗೂ ಪೂರ್ವಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಬುಕ್ಕನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು.
ನಾಯಕನು ಒಮ್ಮೆ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕನು ನೊಂದುಕೊಂಡನು. ಆಗ ಅವನ ಕನಸಿನಲ್ಲಿ ಹಾಸನಾಂಬೆಯು ಪ್ರತ್ಯಕ್ಷಳಾಗಿ ‘ಮಗು, ಖಿನ್ನ ಮನಸ್ಸು ಬಿಡು, ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟು, ಇಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ‘ ಎಂದು ಹೇಳಿದಳಂತೆ. ಹೀಗಾಗಿ ಕೋಟೆಯನ್ನು ಕಟ್ಟಿದ ಕೃಷ್ಣಪ್ಪನಾಯಕನು, ಅದಕ್ಕೆ ‘ಹಾಸನಾಂಬೆ‘ ಎಂದು ಹೆಸರಿಟ್ಟನು. ಹಾಸನ ತಾಲ್ಲೂಕಿನ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ.ಶ. 1140 ರ ವೀರಗಲ್ಲಿನ ಶಿಲಾ ಶಾಸನದಲ್ಲಿ ಇದನ್ನು ವಿವರಿಸಲಾಗಿದೆ.
- ☆ ಹಾಸನಾಂಬೆಯ ಪೂಜಾ ವಿಧಿ
ಹಾಸನಾಂಬೆಯ ಬಾಗಿಲನ್ನು ತೆರೆಯುವ ದಿನ ಎಲ್ಲಾ ತಳವಾರ ಮನೆತನದವರು ಹಾಜರಿರುತ್ತಾರೆ. ಗರ್ಭಗುಡಿಯ ಮುಂದೆ ಬಾಳೆಯ ಕಂದನ್ನು ಅರಸು ಮನೆತನದವರಿಂದ ನೆಟ್ಟು ದೇವಿಯನ್ನು ಭಜಿಸುತ್ತಾ, ಅರಸು ಮನೆತನದವರು ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯುವುದು ಇಲ್ಲಿನ ಸಂಪ್ರದಾಯ.
ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಎನ್ನುವ ನಿಯಮವಿದೆ. ಇದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚು ಎನ್ನುವುದು ಜನರ ನಂಬಿಕೆ. ಈ ಕಾರಣಕ್ಕಾಗಿ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಮರುದಿನ ಭಕ್ತರಿಗೆ ಪ್ರವೇಶವನ್ನು ನೀಡಲಾಗುತ್ತದೆ.
ಮೊದಲನೇ ದಿನ ಹಾಸನಾಂಬೆಗೆ ಯಾವುದೇ ರೀತಿಯ ಅಲಂಕಾರವನ್ನು ಮಾಡಲಾಗುವುದಿಲ್ಲ. ಎರಡನೇ ದಿನ ದೇವಿಯ ಆಭರಣ, ವಸ್ತ್ರಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ತಾಯಿಯನ್ನು ಅಲಂಕರಿಸಿ ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸಲಾಗುತ್ತದೆ. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಲ್ಲಿ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುತ್ತಾರೆ.
ಬಲಿಪಾಡ್ಯಮಿಯಂದು ತುಪ್ಪದ ದೀಪವನ್ನು ಬೆಳಗಿಸಿ ಹಾಸನಾಂಬೆಯ ಗರ್ಭಗುಡಿಯೊಳಗೆ ಇಡಲಾಗುತ್ತದೆ. ಜೊತೆಗೆ ಬೇಯಿಸಿದ ಅನ್ನವನ್ನು ನೈವೇದ್ಯವಾಗಿ ಹೂಗಳೊಂದಿಗೆ ಇಡಲಾಗುತ್ತದೆ. ಪವಾಡವೆಂದರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಉರಿಯುತ್ತಲೇ ಇದ್ದು, ಹೂಗಳು ತಾಜವಾಗಿರುತ್ತದೆ. ಹಾಗೂ ಪ್ರಸಾದವು ಕೂಡಾ ಹಾಳಾಗದೆ ಇರುತ್ತದೆ.
- ☆ ಕಳ್ಳಪ್ಪನ ಗುಡಿ
ಒಮ್ಮೆ ದೇವಿಯ ವಿಗ್ರಹದ ಆಭರಣಗಳನ್ನು ಕದಿಯಲು ನಾಲ್ಕು ಜನ ಕಳ್ಳರು ದೇವಾಲಯಕ್ಕೆ ಪ್ರವೇಶಿಸಿದರು. ಇದರಿಂದ ಕುಪಿತಳಾದ ದೇವಿಯು ಅವರಿಗೆ ಶಾಪವನ್ನು ನೀಡಿ ಕಲ್ಲಾಗುವಂತೆ ಪರಿವರ್ತಿಸುತ್ತಾಳೆ. ಅಂದಿನಿಂದ ಇದು ಕಳ್ಳಪ್ಪನ ಗುಡಿಯೆಂದೇ ಪ್ರಸಿದ್ಧವಾಗಿದೆ.
- ☆ ಸಿದ್ಧೇಶ್ವರ ದೇವಾಲಯ
ಹಾಸನಾಂಬೆಯ ದೇವಾಲಯವನ್ನು ಪ್ರವೇಶಿಸಿದ ತಕ್ಷಣವೇ ಕಾಣುವ ದೇವಾಲಯವೇ ಸಿದ್ಧೇಶ್ವರ ದೇಗುಲ. ಲಿಂಗ ರೂಪದ ಈ ಉದ್ಭವ ಮೂರ್ತಿಯು ಈಶ್ವರನು ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ರೀತಿಯಲ್ಲಿದೆ. ಪ್ರತಿ ಅಮಾವಾಸ್ಯೆಯಂದು ರಾವಣೋತ್ಸವ, ಬಲಿಪಾಡ್ಯಮಿಯಂದು ಚಂದ್ರಮಂಡಲ ರಥೋತ್ಸವವು ಇಲ್ಲಿ ನಡೆಯುತ್ತದೆ.
- ☆ ದಂತಕಥೆ
ಒಂದು ದಂತಕಥೆಯ ಪ್ರಕಾರ ಒಬ್ಬ ಸೊಸೆಗೆ ಆಕೆಯ ಅತ್ತೆಯು ಬಹಳ ಕಷ್ಟ ಕೊಡುತ್ತಿದ್ದಳು. ಆ ಸೊಸೆಯು ಪ್ರತೀ ನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದಳು. ದೇವತೆಯರು ಅವಳನ್ನು ಮಾತನಾಡಿಸುತ್ತಿದ್ದರು ಮತ್ತು ಈ ವಿಷಯ ಯಾರ ಬಳಿಯೂ ಹೇಳಬಾರದೆಂದು ಹೇಳಿದ್ದರು. ಒಂದು ದಿನ ಸೊಸೆ ದೇಗುಲಕ್ಕೆ ಹೊರಟಾಗ, ಅತ್ತೆ ಅವಳನ್ನು ಹಿಂಬಾಲಿಸಿ ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತಿದ್ದ ಸೊಸೆಯನ್ನು ಕಂಡು ಸಿಟ್ಟಾಗಿ ತಲೆ ಮೇಲೆ ಕುಟ್ಟಿದಳು, ನೋವಿನಿಂದ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ದೇವಿಯು ಆಕೆಯ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆ ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸುತ್ತದೆ. ಆ ಕಲ್ಲು ಪ್ರತೀ ವರ್ಷ ಬತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ. ಅದು ಸಂಪೂರ್ಣ ಚಲಿಸಿ ದೇವಿ ಪಾದ ತಲುಪಿದ ದಿನ ಕಲಿಯುಗದ ಅಂತ್ಯವೆಂದು ನಂಬಿಕೆ ಇದೆ.
ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಹಚ್ಚಿಡುತ್ತಾರೆ. ಮರು ವರ್ಷ ದೇಗುಲದ ಬಾಗಿಲು ತೆರೆಯುವವರೆಗೆ ಆ ಹೂವು ಬಾಡದೆ, ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ ಎಂಬ ನಂಬಿಕೆ ಇದೆ. ತಾಯಿ ಹಾಸನಾಂಬೆಯ ದರ್ಶನಗೈದು ಆಕೆಯ ಕೃಪೆಗೆ ಪಾತ್ರರಾಗೋಣ. ಶುಭವಾಗಲಿ.
– ವಿಶ್ವಾಸ್ ಡಿ .ಗೌಡ, ಸಕಲೇಶಪುರ