ಅಭಿಲಾಷೆ ಕಾದಂಬರಿ ಸಂಚಿಕೆ -50

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 50 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಡಿಪಾರ್ಟ್ಮೆಂಟ್ ಸ್ಟೋರಿನಲ್ಲಿ ವಿಕ್ರಮ್ ಸಿಕ್ಕಿದ್ದಕ್ಕೆ ಆಶಾಳ‌ ಅಮ್ಮನಿಗೆ ಬಹಳ‌ ಭಯವಾಗಿದ್ದು, ಬೇಗ ಬೇರೆ ಹುಡುಗನ ನೋಡಿ ಮದುವೆ ಮಾಡಿರೆಂದು ತನ್ನ ಗಂಡ ಕೋದಂಡರಾಂ ಗೆ ಹೇಳುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಕೋದಂಡರಾಂರವರು ನಾವು ಮಾತು ಕೊಟ್ಟಿದ್ದೇವೆ , ಇನ್ನೆರಡು ದಿನ ಕಾಯೋಣ, ಗಂಡಿನ ಕಡೆಯವರಿಂದ‌ ಏನೂ ಉತ್ತರ ಬರದಿದ್ದರೆ ಬೇರೆ ಹುಡುಗನ ಹುಡುಕಿ ಮದುವೆ ಮಾಡುತ್ತೇನೆಂದು ಅವರ ಪತ್ನಿಗೆ ಹೇಳಿರುತ್ತಾರೆ.

ವಿಕ್ರಮ್ ಆಶಾಳನ್ನು ಭೇಚಿ ಮಾಡಿ ಮನೆಗೆ ಬಂದರೂ ಸಹ ಆಶಾ ಆಡಿದ ಮಾತುಗಳೇ ಕಿವಿಯಲ್ಲಿ ಗುಂಯ್ ಗುಡುತ್ತಿದ್ದು, ನಾನು ಮನಸಾರೆ ಪ್ರೀತಿಸಿದ ಹುಡುಗಿ ನನ್ನನ್ನು ಚಪ್ಪಲಿ ಬಿಡುವ ಸ್ಥಳದಲ್ಲಿ ಬಿಟ್ಟಿದ್ದೇನೆಂದು ಹೇಳಿದ್ದಾಳೆ. ಇದನ್ನು ಹೇಗೆ ಸಹಿಸಿಕೊಳ್ಳಲಿ? ಅವಳ ಅಹಂಕಾರ ಅಡಗಿಸುವವರೆಗೂ ನಾನು ವಿಶ್ರಮಿಸುವುದಿಲ್ಲ. ಅವಳು ಎಲ್ಲಿ ಹೋದರೂ ಬಿಡಬಾರದೆಂದು ನಿಶ್ಚಯಿಸಿ, ಅವಳನ್ನು ಹೇಗೆ ಫಾಲೋ ಮಾಡುವುದೆಂದು ಯೋಚಿಸುತ್ತಾ? ಆಶ ಯಾವುದೇ ವೆಹಿಕಲ್ ಇಟ್ಟಿಲ್ಲ, ದಿನವೂ ಅವಳು ಕೆಲಸಕ್ಕೆ ಬಹುಷಃ ಬಸ್ಸಿನಲ್ಲಿ ಹೋಗುತ್ತಿರಬಹುದು, ಆಶ ಕೆಲಸಕ್ಕೆ ಹೋಗುವ ವೇಳೆಯಲ್ಲಿ ಅವಳ ಮನೆಯ ಹತ್ತಿರ ಇರುವ ಬಸ್ಟಾಂಡಿಗೆ ಹೋಗಿ ನನ್ನನ್ನು ಮದುವೆಯಾಗುತ್ತೇನೆ ಎನ್ನುವವರೆಗೂ ಕಾಡುತ್ತಿರಬೇಕೆಂದು ನಿಶ್ಚಯಿಸುತ್ತಾನೆ.

ಅಂದು ಭಾನುವಾರ ರಜೆ ಇದ್ದುದ್ದರಿಂದ ಆಶ‌ ಬೇಗ ಎದ್ದು, ಅಪ್ಪ ಅಮ್ಮನಿಗೆ‌ ನಾನಿವತ್ತು ಸ್ಕೂಟರ್ ಕಾರು ಎರಡನ್ನೂ ತೆಗೆದುಕೊಳ್ಳುತ್ತಿದ್ದೇನೆಂದು ಹೇಳಿದಾಗ
ಮಗಳೇ ಯಾವುದಾದರೂ ಒಂದು ವೆಹಿಕಲ್ ತೆಗೆದುಕೊಳ್ಳಮ್ಮಾ ಎರಡನ್ನೂ ಹೇಗೆ ಮೈಂಟೈನ್ ಮಾಡುತ್ತೀಯಾ ? ಕೆಲಸಕ್ಕೆ ಹೋಗಬೇಕಾದರೆ ಕಾರಿನಲ್ಲಿ ಹೋಗುತ್ತೇನೆ. ಶಾಪಿಂಗ್ ಅಥವಾ ಬೇರೆ ಕೆಲಸಗಳಿಗೆ ಹೋಗಲು ಟು ವೀಲರ್ ಉಪಯೋಗಿಸುತ್ತೇನಪ್ಪಾ, ಎರಡೂ ಇಎಂಐ ಕೂಡಾ ಒಂದೇ ಸಲ‌ ಮುಗಿಯುತ್ತದೆಂದು ಆಶಾ ಹೇಳಲು
ಆಯ್ತಮ್ಮಾ ನಿನ್ನ ಅನುಕೂಲ ನೋಡಿಕೋ ಎಂದು ಕೋದಂಡರಾಂ ಹೇಳುತ್ತಾರೆ
ಯಾವತ್ತು ವೆಹಿಕಲ್ ಬರುತ್ತದೆಂದು ಅವಳಮ್ಮ ಪ್ರಶ್ನಿಸಲು
ಇಂದೇ ರಾತ್ರಿ ಏಳುಗಂಟೆಗೆ ಡೆಲಿವರಿ ಕೊಡುತ್ತಾರೆ ಎಲ್ಲರೂ ಹೋಗೋಣವೆಂದು ಆಶ‌ ಹೇಳಲು
ಏಳು ಗಂಟೆಗೆ ಜ್ಞಾಪಿಸೆಂದು ಕೋದಂಡರಾಂ ರವರು ಹೊರಗೆ ಹೋಗುತ್ತಾರೆ
ರಾತ್ರಿ ಏಳು ಗಂಟೆಗೆ ಆಶ ಜೊತೆಗೆ ಅವಳ‌ ಅಪ್ಪನು ಹೋಗಿ ಕಾರು ಹಾಗೂ ಟು ವೀಲರನ್ನು ಮನೆಗೆ ತಂದು ಪೂಜೆ ಮಾಡಿದ‌ ನಂತರ
ನಾಳೆಯಿಂದ ನಾನು ಕಾರಿನಲ್ಲೇ ಕೆಲಸಕ್ಕೆ ಹೋಗುತ್ತೇನೆಂದಾಗ
ಜೋಪಾನ ಕಣಮ್ಮಾ ಎಂದು ಕೋದಂಡರಾಂ ಹೇಳುತ್ತಾರೆ
ಇದಕ್ಕಾದರೂ ಬೇಗನೆ ನಾನು ಕೇಳಿದ ತಕ್ಷಣ ಪರ್ಮಿಷನ್ ಕೊಟ್ಟೆಯಲ್ಲಾ ಎಂದು ಆಶಾ‌ ನುಡಿದಾಗ
ನೀನು ಬಸ್ಟಾಂಡ್ ಗೆ ನಡೆದುಕೊಂಡು ಹೋಗಿ ವಾಪಸ್ ಬರುವಾಗ ಯಾರಾದರೂ ನಿನ್ನನ್ನು ಪುನಃ ಕಿಡ್ನಾಪ್ ಮಾಡುತ್ತಾರೇನೋ ಎಂಬ ಭಯವಿತ್ತು, ಈಗ ಕಾರಿನಲ್ಲಿ ಹೋಗಿ ಬರುವುದರಿಂದ ಸಮಾಧಾನ ವಾಗಿದೆ ಎಂದು ಅವಳಮ್ಮ ನುಡಿಯುತ್ತಾರೆ.

ಮಾರನೇ ದಿನದಿಂದ ಆಶಾ ಕಾರಿನಲ್ಲಿ ಕಂಪೆನಿಗೆ ಹೋಗಿರುವುದು
ವಿಕ್ರಮ್ ಗೆ ತಿಳಿಯದೆ, ಬಸ್ಟಾಂಡಿಗೆ ಬಂದು ಕಾದೂ ಕಾದೂ ಸುಸ್ತಾಗಿ ಇಂದು ರಜೆ ಇರಬಹುದೆಂದುಕೊಂಡು ವಾಪಸ್ ಹೋಗುತ್ತಾನೆ.
ಇದೇರೀತಿ ಮೂರ್ನಾಲ್ಕು ದಿನವೂ ಬಸ್ಟಾಂಡಿಗೆ ಬಂದು ಕಾದರೂ ಆಶಾಳ ಸುಳಿವಿಲ್ಲದ್ದರಿಂದ, ಇವಳು ಎಲ್ಲಿ ಹೋದಳು ? ಮದುವೆಯಾಗಿ ಹೊರಟು ಹೋದಳೋ ಎಂದು ವಿಕ್ರಮ್ ಅನುಮಾನಗೊಳ್ಳುತ್ತಾನೆ.
ನಾಳೆ ಅವಳ ಕಂಪೆನಿಯ ಬಳಿ ಹೋಗಿ ವೈಟ್‌ ಮಾಡೋಣವೆಂದು ನಿರ್ಧರಿಸಿ ತಾನು ಕೂಡಾ ಕೆಲಸಕ್ಕೆ ಹೋಗುತ್ತಾನೆ.
ಮಾರನೇ ದಿನ ಕೆಲಸಕ್ಕೆ ರಜೆ ಹಾಕಿ ಆಶಾಳ‌ ಕಂಪೆನಿಯ ಮುಂದೆ‌ ಕಾಯುತ್ತಿರುವಾಗ
ಆಶ ಕಾರಿನಲ್ಲಿ ಬಂದು ಪಾರ್ಕಿಂಗ್ ಮಾಡಿ ಕಂಪೆನಿಯ ಒಳಗೆ ಹೋಗಿ ತನ್ನ ಸೀಟಿಗೆ ಬಂದು ಕುಳಿತುಕೊಂಡ ತಕ್ಷಣ
ಮೊಬೈಲ್ ರಿಂಗ್ ಆಗುತ್ತದೆ.
ಹೊಸ ನಂಬರ್ ಆಗಿದ್ಜರಿಂದ ಬಹುಷಃ ವಿಕ್ರಮ್ ಫೋನ್ ಮಾಡುತ್ತಿರಬೇಕೆಂದು ರಿಸೀವ್ ಮಾಡುವುದೇ ಇಲ್ಲ.
ಎರಡು ಮೂರು ಸಲ ಫೋನ್ ಮಾಡಿದರೂ ಆಶಾ ಫೋನ್ ರಿಸೀವ್ ಮಾಡದೇ ಇದ್ದುದ್ದರಿಂದ ವಿಕ್ರಮ್ ನಿರಾಶನಾಗಿ ಮನೆಗೆ ಬರುತ್ತಾನೆ.
ಆಶ ತನ್ನಿಂದ ಕೈ ತಪ್ಪಿ ಹೋಗಲು ತನ್ವಣ್ಣನೇ ಕಾರಣನಾದನೆಂದು, ಅಣ್ಣನ ಬಳಿ ಹೇಳೋಣವೆಂದರೆ ಅವನು ಜೈಲಿನಲ್ಲಿದ್ದಾನೆ. ಆಶಾ ಕೂಡಾ ಸಿಗುತ್ತಿಲ್ಲವೆಂದು ವಿಕ್ರಮ್ ಬಹಳ ಬೇಸರಗೊಳ್ಳುತ್ತಾನೆ.

ಎರಡು ದಿನಗಳ‌ ನಂತರ ಅಭಿಜಿತ್ ತಂದೆ ಕೋದಂಡರಾಂ ರವರಿಗೆ ಫೋನ್ ಮಾಡಿ ನನ್ನ ಮಗನಿಗೆ ನೀವು ಹೇಳಿದ ಸುದ್ದಿ ತಲುಪಿಸಿದ್ದೆ‌ . ಅವನೂ ಕೂಡಾ ಪುನಃ ಒಪ್ಪಿಗೆ ಕೊಟ್ಟಿದ್ದಾನೆ. ಎರಡು ದಿನಗಳಲ್ಲಿ ಹೆಡ್ ಕ್ವಾರ್ಟರ್ಸ್ ಗೆ ವಾಪಸ್ ಬರುತ್ತೇನೆಂದು ಹೇಳಿದ್ದಾನೆ. ನಿಮ್ಮ ಮಗಳೇನಾದರೂ ಮಾತನಾಡುವುದಿದ್ದರೆ ನನ್ನ ಮಗನ ನಂಬರ್ ಕೊಟ್ಟಿರುತ್ತೇನೆಂದು ಹೇಳಿದಾಗ
ಕೋದಂಡರಾಂ ರವರು ಸ್ವಲ್ಪ ಅನುಮಾನಿಸಿ,‌ ಆಯ್ತು ಸಾರ್ ನಿಮ್ಮ ಮಗನ ಫೋನ್ ನಂಬರ್ ಕೊಟ್ಟಿರಿ ನನ್ನ ಮಗಳಿಗೂ ಕೊಟ್ಟಿರುತ್ತೇನೆ. ಮಾತನಾಡುವುದಿದ್ದರೆ ಮಾತನಾಡಲಿ ಎಂದು ಹೇಳಿ, ಅಭಿಜಿತ್ ತಂದೆಯವರಿಂದ ಫೋನ್ ನಂಬರ್ ಪಡೆದು ತುಂಬಾ ಥ್ಯಾಂಕ್ಸ್ ಸಾರ್ ಎಂದಾಗ
ಅಯ್ಯೋ ಇದಕ್ಕೇಕೆ ಮಾಸ್ಟ್ರೇ ಥ್ಯಾಂಕ್ಸ್ ಹೇಳುತ್ತೀರಾ ನಿಮ್ಮ ಸಂಬಂಧ ಸಿಕ್ಕಿರುವುದು ನಮ್ಮ ಪುಣ್ಯವೆಂಬ ಅಭಿಜಿತ್ ತಂದೆ ಮಾತಿಗೆ
ಋಣಾನುಬಂಧ ತಪ್ಪಿಸಲು ಆಗುವುದಿಲ್ಲವೆಂದು ಕೋದಂಡರಾಂ ನುಡಿದು ಪುನಃ ಫೋನ್ ಮಾಡುತ್ತೇನೆಂದಾಗ
ಅಭಿಜಿತ್ ತಂದೆ ಫೋನ್ ಆಫ್ ಮಾಡುತ್ತಾರೆ.
ಕಡೆಗೂ ಹುಡುಗನಿಂದ ಉತ್ತರ ಸಿಕ್ಕಿತೆಂದು ಕೋದಂಡರಾಂ ರವರು ಖುಷಿಯಾಗಿರುತ್ತಾರೆ
ರಾತ್ರಿ ಎಂದಿನಂತೆ ಅಪ್ಪ ಮಗಳು ಊಟಕ್ಕೆ ಕುಳಿತಿರುವಾಗ ಕೋದಂಡರಾಂ ರವರು ಅಭಿಜಿತ್ ತಂದೆ ಹೇಳಿದ ವಿಷಯವನ್ನು ಆಶಾಗೆ ಹೇಳಿದಾಗ
ನೀವು ಡಿಸೈಡ್ ಮಾಡಿದ ಮೇಲೆ ನಾನು ಮಾತನಾಡುವುದೇನಿದೆ ಬಿಡಪ್ಪಾ, ಅವರು ಬ್ಯುಸಿ ಇರಬಹುದು, ನಾನು ಫೋನ್ ಮಾಡಿದರೆ ರಿಸೀವ್ ಮಾಡುತ್ತಾರೋ ಇಲ್ಲವೋ ಎಂದು ಆಶ ನುಡಿಯಲು
ಆ ಹುಡುಗನ ಫೋನ್ ನಂಬರ್ ಕೊಟ್ಟಿರುತ್ತೇನೆ, ಮಾತಾಡಬೇಕೆಂದು ಎನಿಸಿದರೆ ಮಾಡಮ್ಮಾ, ಇಲ್ಲದಿದ್ದರೆ ಮುಂದಿನ ತಿಂಗಳು ಊರಿಗೆ ಬರುತ್ತಾನಂತೆ ಆಗ ಮದುವೆಯನ್ನೇ ಮಾಡೋಣವೆಂದು ಕೋದಂಡರಾಂ ಹೇಳುತ್ತಾರೆ.
ಆಗಲಪ್ಪಾ ನಂಬರ್ ಕೊಟ್ಟಿರೆಂದು ಹೇಳಿ, ಊಟವಾದ‌ ನಂತರ ಆಶ ಅಭಿಜಿತ್ ನಂಬರನ್ನು ಪಡೆದು ತನ್ನ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳುತ್ತಾಳೆ.
ಎರಡು ದಿನಗಳ ನಂತರ ಆಶ‌ಾಳಿಗೆ ಅಭಿಜಿತ್ ಕರ್ತವ್ಯ ನಿರ್ವಹಿಸುತ್ತಿರುವ ಜಾಗದಲ್ಲಿನ ವಾತಾವರಣ, ಕೆಲಸದ ಬಗ್ಗೆ ವಿಚಾರಿಸಬೇಕೆಂದು ಕುತೂಹಲ ಗೊಂಡು ಅಭಿಜಿತ್ ಗೆ ಫೋನ್ ಮಾಡಿದಾಗ, ಅಭಿಜಿತ್ ಮೊಬೈಲ್ ಸ್ವಿಚ್ ಆಫ್ ಬರುತ್ತದೆ. ಹೆಡ್ ಕ್ವಾರ್ಟರ್ಸ್ ಗೆ ವಾಪಸ್‌ ಬಂದಿಲ್ಲವೆಂದುಕೊಂಡು ಸುಮ್ಮನಾಗುತ್ತಾಳೆ. ಇದೇರೀತಿ ಇನ್ನೆರಡು ದಿನಗಳು ಬಿಟ್ಟು ಫೋನ್ ಮಾಡಿದರೂ ಸಹ ಸ್ವಿಚ್ ಆಫ್ ಎಂದೇ ಬರುತ್ತದೆ. ಬಹುಷಃ ಇನ್ನೂ ಕ್ವಾರ್ಟರ್ಸ್ ಗೆ ಬಂದಿಲ್ಲವೆಂದು ಸುಮ್ಮನಾಗುತ್ತಾಳೆ.

ಪುನಃ ಎಕಡು ದಿನಗಳು ಕಳೆದ ನಂತರ, ಟಿವಿಯಲ್ಲಿ ಒಂದು ಬ್ರೇಕಿಂಗ್ ನ್ಯೂಸ್ ಬರುತ್ತಿದ್ದು, ಅದರಲ್ಲಿ, ಹಿಮದ ನಡುವೆ ಗಡಿ ಕಾಯುತ್ತಿದ್ದ ಇಬ್ಬರು ಯೋಧರು ಇಪ್ಪತ್ತು ಅಡಿ ಆಳದಲ್ಲಿ ಸಿಲುಕಿದ್ದಾರೆಂದು ಅವರ ಮೇಲೆ‌ ಹಿಮವು ಆವರಿಸಿರುವುದಾಗಿ ಆಘಾತಕಾರಿ ಸುದ್ದಿ ಬಿತ್ತರಗೊಳ್ಳುತ್ತಿರುತ್ತದೆ.
ಈ ಸುದ್ದಿ ನೋಡಿದ ಕೋದಂಡರಾಂ ರವರು ಅಯ್ಯೋ ಯಾರಪ್ಪಾ ಹಿಮದೊಳಗೆ ಸಿಕ್ಕಿಕೊಂಡಿದ್ದಾರೆಂದು ಆತಂಕಗೊಂಡು, ತಕ್ಷಣ ಅಭಿಜಿತ್ ತಂದೆಗೆ ಫೋನ್ ಮಾಡಿದಾಗ
ಸಾರ್ ನಾವೂ ಕೂಡಾ‌ ಈಗ ನ್ಯೂಸ್ ನೋಡುತ್ತಿದ್ದೇವೆ. ಹಿಮದ ರಾಶಿಯಲ್ಲಿ ಯಾರು ಸಿಲುಕಿಕೊಂಡಿದ್ದಾರೋ ಗೊತ್ತಿಲ್ಲವೆಂದಾಗ
ಯಾರಾದರಾಗಲೀ ದೇವರ ದಯೆಯಿಂದ ಏನೂ ಆಗದಂತೆ ಹಿಮದೊಳಗಿಂದ ಹೊರಗಡೆ‌ ಬರಲಿ, ಅವರ ಜೀವ‌ ಅಮೂಲ್ಯ ‌ಎಂದು ಕೋದಂಡರಾಮ್ ಹೇಳಲು
ಹೌದು‌‌ ಸಾರ್‌ ನೀವು ಹೇಳುವುದು ನಿಜ, ಆದರೆ ಅಲ್ಲಿ ಯಾರು ಕರ್ತವ್ಯ ನಿರ್ವಹಿಸುತ್ತಿದ್ದರೋ ಏನೋ ಒಂದೂ ಗೊತ್ತಾಗುತ್ತಿಲ್ಲ ನಮಗಂತೂ ತುಂಬಾ ಭಯವಾಗಿದೆ ಎಂದು ಅಭಿಜಿತ್ ತಂದೆ ಹೇಳಲು
ಧೈರ್ಯವಾಗಿರಿ ಸಾರ್ ಯಾರಿಗೂ ಏನೂ ಆಗುವುದಿಲ್ಲವೆಂದು ಕೋದಂಡರಾಂರವರು ಅಭಿಜಿತ್ ತಂದೆಗೆ ಧೈರ್ಯ ತುಂಬುತ್ತಾರೆ
ತುಂಬಾ ಥ್ಯಾಂಕ್ಸ್ ಸಾರ್ ಎಂದು ಅಭಿಜಿತ್ ತಂದೆ ಫೋನ್ ಆಫ್ ಮಾಡುತ್ತಾರೆ.

ಮುಂದುವರೆಯುತ್ತದೆ

ಒಂದು ಸಲ‌ ಯಾರಾದರೂ ತಿರಸ್ಕರಿಸಿದ ಮೇಲೆ ಅವರಿಂದ ದೂರ ಉಳಿದರೆ ಒಳ್ಳೆಯದು ಜೊತೆಗೆ ಮರ್ಯಾದೆ ಯೂ ಉಳಿಯುತ್ತದೆ.‌ ಪುನಃ ಪುನಃ ಅವರ ಬಳಿ ಹೋದರೆ, ಬೆಲೆಯೇ ಇರುವುದಿಲ್ಲ. ಈ ವಿಚಾರವನ್ನು ಬೇರೆಯವರ ಬಳಿ ಹೇಳಿದಾಗ, ಇನ್ನೂ ಮರ್ಯಾದೆ ಹೋಗುತ್ತದೆ.