ವಿಜಯದಶಮಿ (ದಸರಾ)
- ದಸರಾ ಎಂದರೆ ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ. ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ – ದಶಹರ – ದಶರಾ – ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿ ಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವ ದಿನ. ಒಂಭತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಕೊನೆಯ ದಿನವೇ ದಶಮಿ, ವಿಜಯ ದಶಮಿ ಎಂದೂ ಈ ದಿನವನ್ನು ಕರೆಯಲಾಗುತ್ತದೆ. ದಶಮಿ ತಿಥಿ ಅಥವಾ ಅಶ್ವಯುಜ ತಿಂಗಳ ಹತ್ತನೇ ದಿನದಂದು ವಿಶಯದಶಮಿಯನ್ನು ಆಚರಿಸಲಾಗುತ್ತದೆ.
- ವಿಜಯ ದಶಮಿಯ ಪೌರಾಣಿಕ ಹಿನ್ನಲೆ
ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮಿಸುವ ಹಬ್ಬ ದಸರಾ ಎನ್ನುವುದು ಇತಿಹಾಸದಲ್ಲಿ ಕಂಡು ಬರುವ ಉಲ್ಲೇಖವಾದರೂ, ಪುರಾಣದ ಪ್ರಕಾರ ಶಕ್ತಿ ಸ್ವರೂಪಿಣಿಯಾದ ದುರ್ಗಾಮಾತೆಯು ರಾಕ್ಷಸರನ್ನು ಸಂಹಾರ ಮಾಡಲು ಅವತಾರವೆತ್ತಿ, ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡಿ, ಶಿಷ್ಟರಿಗೆ ಜಯ ನೀಡಿದ ದಿನ ವಿಜಯದಶಮಿ. - ಮಹಿಷಾಸುರನ ಸಂಹಾರ
ಅಸುರರ ದೊರೆಯಾದ ಮಹಿಷಾಸುರನು ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನ ಮೊರೆ ಹೋಗುತ್ತಾರೆ.
ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನು ಸೇರಿಸಿ ದುರ್ಗಾಮಾತೆಯನ್ನು ಸೃಷ್ಟಿಸುತ್ತಾರೆ. ಶಕ್ತಿಯ ಸಂಗಮದಿಂದ ಸೃಷ್ಟಿಯಾದ ದುರ್ಗಾದೇವಿಯನ್ನು ದೇವತೆಗಳು ಪೂಜಿಸಿ ಮಹಿಷನನ್ನು ಸಂಹರಿಸುವಂತೆ ಬೇಡಿಕೊಳ್ಳುತ್ತಾರೆ. ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಮಹಿಷಾಸುರನ ಸಂಹಾರಕ್ಕಾಗಿ ಧರೆಗಿಳಿಯುತ್ತಾಳೆ. ಒಂಭತ್ತು ದಿನಗಳ ಯುದ್ಧದ ನಂತರ ದಶಮಿಯ ದಿನ ದುರ್ಗೆಯು ಮಹಿಷಾಸುರನನ್ನು ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ ‘ವಿಜಯದಶಮಿ’ ಎಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. - ರಾವಣನ ಸಂಹಾರ
ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ಹೀಗೆ ವಿಜಯ ದಶಮಿಯಂದೇ ರಾವಣನ ಸೋಲಾಯಿತು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ - ಪಾಂಡವರ ಮೊದಲ ಜಯ
ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ ವಲಲನಾಗಿ ವೇಷ ಬದಲಾಯಿಸುತ್ತಾರೆ. ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಲ್ಲುತ್ತಾಳೆ. - ಪಾಂಡವರ ಅಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯುದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ.
- ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ ಉತ್ತರ ಕುಮಾರ ‘ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ’ ಎಂದು ಹೇಳುತ್ತಾನೆ. ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ
- ಕಲಿಯುಗದಲ್ಲಿ ವಿಜಯದಶಮಿ
ಅರಸರ ಆಡಳಿತ ಕಾಲದಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ದೊರೆಯುತ್ತದೆ ಎಂಬ ನಂಬಿಕೆ ಇತ್ತು. ಹೀಗಾಗಿ ದಶಮಿಯಂದು ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ಧತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲವು ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ. - ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಪದ್ಧತಿಯು ಮೈಸೂರು ಒಡೆಯರ ಕಾಲದಲ್ಲೂ ಮುಂದುವರಿದಿದೆ.
- ಆಯುಧ ಪೂಜೆ: ವಿಜಯದಶಮಿಯಂದು ರಾಜರು, ಸಾಮಂತರು ತಮ್ಮ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ನಡೆಸುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮ ಶಸ್ತ್ರಗಳ ಪೂಜೆ ಮಾಡುತ್ತಾರೆ. ಕೆಲವರು ಆಯುಧ ಪೂಜೆಯನ್ನು ನವಮಿಯಂದೂ ಆಚರಿಸಲಾಗುತ್ತದೆ.
- ಅಪರಾಜಿತಾ ಪೂಜೆ: ವಿಜಯದಶಮಿಯಂದು ಅಪರಾಜಿತಾ ಪೂಜೆ ಮಾಡಲಾಗುತ್ತದೆ. ಶಮೀ ಪೂಜೆಯನ್ನು ಮಾಡಲಾದ ಜಾಗದಲ್ಲಿಯೇ ನೆಲದ ಮೇಲೆ ಅಷ್ಟದಳಗಳನ್ನು ಬರೆದು ಅದರ ಮೇಲೆ ಅಪರಾಜಿತಾ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಲಾಗುತ್ತದೆ. ಅಷ್ಟದಳಗಳ ಮೇಲೆ ಆರೂಢಳಾದ ಅಪರಾಜಿತಾ, ಪ್ರಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನಳಾದಾಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳದ ಅಗ್ರಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತದೆ. ಅಪರಾಜಿತಾ ದೇವಿಯ ಉತ್ಪತ್ತಿಯಿಂದ ಪ್ರಕ್ಷೇಪಿತವಾಗುವ ಮಾರಕ ಲಹರಿಗಳು, ಅಷ್ಟಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶಲಹರಿಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ. ಮತ್ತು ಪ್ರಥ್ವಿಯ ಮೇಲಿನ ಜೀವಿಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯುಮಂಡಲವನ್ನು ಶುದ್ಧೀಕರಿಸುತ್ತದೆ. ಬನ್ನೀ ಎಲೆಗಳಲ್ಲಿ ತೇಜವನ್ನು ವೃದ್ಧಿಸುವ ಗುಣವಿರುವುದರಿಂದ ಬನ್ನೀ ಗಿಡದ ಬಳಿ ದುರ್ಗಾದೇವಿಯನ್ನು ಅಪರಾಜಿತಾ ರೂಪದಲ್ಲಿ ಆರಾಧಿಸುತ್ತಾರೆ
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು
– ವಿಶ್ವಾಸ್ ಡಿ.ಗೌಡ, ಸಕಲೇಶಪುರ