ಅಭಿಲಾಷೆ ಕಾದಂಬರಿ ಸಂಚಿಕೆ -49

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 49 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಶಾಪಿಂಗ್ ಗೆ ಬಂದಿದ್ದ ಆಶಾ‌ ಅಲ್ಲೇ ವಿಕ್ರಮ್ ಸಿಕ್ಕಿದ್ದರಿಂದ, ಇವನಿಂದ ತಪ್ಪಿಸಿಕೊಂಡರೆ ಸಾಕೆಂದು ಮನೆಗೆ ಬರಲು ಆಟೋ ಹತ್ತಿದಾಗ, ಹಿಂದಿನಿಂದ ಆಶಾ ಎಂದು ಕೂಗಿದ ಪರಿಚಿತ‌‌ ಧ್ವನಿ ಕೇಳಿ ಅಲ್ಲೇ‌ ಇರುತ್ತಾಳೆ

  • ಕಥೆಯನ್ನು ಮುಂದುವರೆಸುತ್ತಾ

ಆಶಾ ಎಂದು ಕೂಗಿದ ಪರಿಚಿತ ಧ್ವನಿ ಕೇಳಿದ ಆಶಾ ಅಯ್ಯೋ ಈಗ ಯಾರು ಬಂದರಪ್ಪಾ ಇವನಿಂದ ತಪ್ಪಿಸಿಕೊಂಡು ಬೇಗ ಹೋಗೋಣವೆಂದರೆ ಆಗುತ್ತಿಲ್ಲವೇ ಎಂದುಕೊಂಡು
ಆಟೋದಿಂದ ಇಳಿಯುತ್ತಿರುವಾಗ
ಅಲ್ಲೇ ನಿಂತಿದ್ದ ವಿಕ್ರಮ್ ಗೆ ಪುನಃ ಆಶಾ‌ ಇಳಿದಿದ್ದಾಳೆ, ಇನ್ನೂ ಸ್ವಲ್ಪ ಹೊತ್ತು ಮಾತನಾಡಿಸಬಹುದೆಂದುಕೊಂಡು
ಆಶಾಳ ಬಳಿ ಹೋಗಿ, ನೋಡಿದೆಯಾ ಆಶಾ, ನೀನು ನನ್ನನ್ನು ಬಿಟ್ಟು ಹೋಗುತ್ತೇನೆಂದರೂ, ಹೋಗಲು ಆಗುತ್ತಿಲ್ಲ, ನಿಜವಾಗಿಯೂ ಮನಸಾರೆ ನನ್ನ ಬಿಟ್ಟು ಹೋಗುತ್ತಿದ್ದೀಯಾ ನಿಜ ಹೇಳು ಎಂದಾಗ
ಹೌದು ಯಾರೋ ಕೂಗಿದರೆಂದು ಆಟೋದಿಂದ ಇಳಿದಿದ್ದೇನೆಂದು ಹೇಳಿ ತನ್ನನ್ನು ಯಾರು ಕರೆದರೆಂದು ನೋಡಿದಾಗ
ಆಶಾ‌ ಎಂದು ಕೂಗಿದ್ದು ಬೇರೆ ಯಾರೂ ಆಗಿರದೆ ಅವಳಮ್ಮನೇ ಆಗಿರುತ್ತಾರೆ. ನಂತರ ಹತ್ತಿರ ಬಂದಿದ್ದನ್ನು ಕಂಡು
ಏಕಮ್ಮಾ ನೀನು ಇಲ್ಲಿಗೆ ಬಂದೆ? ಸ್ವಲ್ಪ ಹೊತ್ತಿಗೆ‌ ನಾನೇ ಬರುತ್ತಿದ್ದೆ ಎಂದು ಆಶಾ ಹೇಳಿದಾಗ,
ನನಗೇಕೋ ಭಯವಾಯ್ತು ಕಣಮ್ಮಾ ಅದಕ್ಕೆ‌ ಬಂದು ಬಿಟ್ಟೆ ಎಂದು ಅವಳಮ್ಮ ಹೇಳಲು
ವಿಕ್ರಮ್ ಕೂಡಾ ಅಲ್ಲೇ ಇದ್ದುದ್ದರಿಂದ ಆಶಾಳಿಗೆ ಪುನಃ ಇವನ ಕೈಲಿ‌ಸಿಕ್ಕಿಕೊಂಡೆನಲ್ಲಾ‌ ಎನಿಸಿ ಕಸಿವಿಸಿಯಾಗುತ್ತದೆ.
ಏನಮ್ಮಾ ನೀನು ನಿನ್ನ ಮಗಳು ಮನೆಗೆ ಬರದೆ ಇನ್ನೆಲ್ಲಿ ಹೋಗುತ್ತಿದ್ದಳೆಂದು ನೀನು ಬಂದೆ? ಎಂದು ಕೋಪಿಸಿಕೊಳ್ಳುತ್ತಾ ಬೇಗ ಆಟೋ ಹತ್ತಮ್ಮಾ ಎನ್ನುತ್ತಾಳೆ
ಲೇ ಬಂದಿರುವುದು ಬಂದಿದ್ದೇನೆ ಇನ್ನೂ ಮನೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗೋಣ ಈ ಆಟೋವಲ್ಲದೆ ಬೇರೆ ಆಟೋ ಸಿಗುತ್ತದೆಂದು ಹೇಳುತ್ತಾ ಪುನಃ ಸ್ಟೋರ್ ಗೆ‌ ಹೋಗುತ್ತಿರುವಾಗ.
ಅಮ್ಮಾ ನಾನೆಲ್ಲಾ ತೆಗೆದುಕೊಂಡಿದ್ದೇನೆ ಬಾಮ್ಮಾ ಎಂದು ಆಶಾ ಕರೆದಾಗ
ಅವಳಮ್ಮ ತಾನು ಹೇಳಿದ ವಸ್ತುಗಳ‌ ಹೆಸರನ್ನು ವಿವರಿಸಿ, ಇದರಲ್ಲಿ ಎಲ್ಲಾ ತೆಗೆದುಕೊಂಡಿದ್ದೀಯ ಎಂದು ಪ್ರಶ್ನಿಸಲು.
ಅಮ್ಮಾ ಮನೆಯ ಹತ್ತಿರದಲ್ಲೇ ತೆಗೆದುಕೊಂಡರಾಯಿತು ಬಾಮ್ಮಾ ಎನ್ನುತ್ತಾಳೆ
ಆಶಾ ಅದೊಂದೇ ಅಲ್ಲಮ್ಮಾ ಇನ್ನೂ ಬೇರೆ ಪದಾರ್ಥಗಳು ಬೇಕೆಂದು ಹೇಳಿ ಸ್ಟೋರ್ ಗೆ ಹೋಗುತ್ತಿರುವಾಗ
ಪಕ್ಕದಲ್ಲಿ ನಿಂತಿದ್ದ ವಿಕ್ರಮ್ ಆಂಟಿ ಚೆನ್ನಾಗಿದ್ದೀರಾ ಎಂದ ತಕ್ಷಣ
ಆಶಾಳ‌ ತಾಯಿ ನೀನು ಎಂದು ಮುಂದೆ ಮಾತನಾಡಲು ಅನುಮಾನಿಸುತ್ತಿರುವಾಗ
ನಾನು ಆಶಾ‌ ಪ್ರೀತಿಸುತ್ತಿದ್ದೇವೆಂದು ಹೇಳಿದಾಗ ಮನೆಗೆ ಬಾ ಎಂದು
ಅಂಕಲ್ ಹೇಳಿದ್ದರಿಂದ ಆ ದಿನ ನಮ್ಮ ಮನೆಗೆ ಬಂದಿದ್ದನಲ್ಲಾ ಎಂದು ವಿಕ್ರಮ್ ಹೇಳಲು
ಆಶಾಳಿಗೆ ಛೇ ಪುನಃ ಇವನ ಬಳಿ ಮಾತಾಡುವಂತಾಯ್ತಲ್ಲಾ ಎಂದು ಗೊಣಗಿಕೊಂಡು ನಿಂತಿರುತ್ತಾಳೆ.
ಅವಳಮ್ಮ ಮಾತನಾಡಿ, ಆಶಾ ನನಗೆ ಸುಳ್ಳುಹೇಳಿ ಕಳ್ಳತನದಿಂದ ಇವನನ್ನು ಮೀಟ್ ಮಾಡಲು ಬಂದಿದ್ದೀಯಲ್ಲಾ,? ಮನೆಯಲ್ಲಿ ಒಂದು ಹೇಳುತ್ತೀಯಾ , ಹೊರಗಡೆ ಕದ್ದು ಮುಚ್ಚಿ ಮೀಟ್ ಮಾಡುತ್ತೀಯಲ್ಲಾ ನಾವು ಹೇಗೆ ಬದುಕಬೇಕೆಂದು ಏರುಧ್ವನಿಯಲ್ಲಿ ಕೇಳಲು
ಅಮ್ಮಾ ನಾನು ಇವನನ್ನು ಮೀಟ್ ಮಾಡಲು ಬಂದಿರಲಿಲ್ಲಮ್ಮಾ , ನಾನು ಸ್ಟೋರಿನೊಳಗೆ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿರುವಾಗ ಇವನೇ ಬಂದ ಎಂದು ಆಶಾ ಹೇಳಲು
ನೋಡು ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಬೇರೆಯವರಿಗೆ ಗೊತ್ತಾಗುವುದಿಲ್ಲವೇನೇ? ಯಾಕೆ ಈ ರೀತಿ ಕಳ್ಳಾಟ‌ ಆಡುತ್ತಿದ್ದೀಯಾ? ಎಂದು ಆಶಾಳ‌ ತಾಯಿ ಕೋಪದಿಂದ ಕೇಳಲು
ಅಮ್ಮಾ ನಿನಗೆ ನಾನು ಹೇಗೆ ಹೇಳಲಮ್ಮಾ? ಈ ಕಿಡ್ನಾಪರ್ ನ ಮೀಟ್ ಮಾಡಲು ನಾನೇಕೆ ಬರಲಿ? ಎಂದು ಆಶಾಳ ಮಾತಿಗೆ
ಈಗಿನ ಕಾಲದವರು ನೀವು, ನಿಮ್ಮನ್ನು ನಂಬುವುದಕ್ಕೇ ಆಗುವುದಿಲ್ಲವೆಂದು ಅವಳಮ್ಮ ಹೇಳಿದಾಗ
ಆಂಟೀ‌ ನೀವು ಹೇಳಿದ್ದು ಸರೀ ಆಂಟೀ ಆಶಾ ಪೋನ್ ಮಾಡಿ ಇಲ್ಲಿಯೇ ಮೀಟ್ ಮಾಡೋಣವೆಂದು ಹೇಳಿದ್ದಕ್ಕೆ ನಾನು ಬಂದಿದ್ದೇನೆ ಎಂದು ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಿ ಇನ್ನೂ ಪ್ರಜ್ವಲಿಸುವ ಹಾಗೆ ಮಾಡುವಂತೆ ಆಶಾಳ‌ ತಾಯಿಯ ಅನುಮಾನಕ್ಕೆ ಇನ್ನೂ ಪುಷ್ಟಿ ನೀಡುವಂತೆ ವಿಕ್ರಮ್ ಹೇಳಿದಾಗ
ನೀನು ಸುಳ್ಳು ಹೇಳಬೇಡಾ ವಿಕ್ರಮ್ ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂಬ ಕೋಪಕ್ಕೆ ನಮ್ಮಮ್ಮನಿಗೆ ನನ್ನ ಮೇಲೆ ಅನುಮಾನ ಬರುವಂತೆ ಹೇಳಬೇಡವೆಂದು ಕೋಪದಿಂದ ನುಡಿದಾಗ
ಅಯ್ಯೋ ಆಶಾ ಇದೇನು ಹೇಳುತ್ತಿದ್ದೀಯಾ? ಇದುವರೆಗೂ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲವೆಂದು ಹೇಳಿ ಈಗ ನಿಮ್ಮಮ್ಮನ ಮುಂದೆ ಪ್ಲೇಟ್ ಬದಲಿಸುತ್ತಿದ್ದೀಯಾ? ಎಂದು ವಿಕ್ರಮ್ ಹೇಳಿದಾಗ
ನೋಡು ವಿಕ್ರಮ್ ಸುಳ್ಳು ಹೇಳಿ ನಮ್ಮಮ್ಮನನ್ನು ದಾರಿ ತಪ್ಪಿಸಬೇಡವೆಂದು ಖಾರವಾಗಿ ಹೇಳಲು
ಆಶಾ ಆಶಾ ನಾನೆಲ್ಲಿ ದಾರಿ ತಪ್ಪಿಸುತ್ತಿದ್ದೇನೆ? ಒಬ್ಬ ಯೋಧನಿಗೆ ಕೊಟ್ಟು ವಿವಾಹ ಮಾಡಬೇಕೆಂದಿದ್ದಾರೆ, ಅವರು ಎಲ್ಲೋ ಹಿಮದ ರಾಶಿಯ ಮದ್ಯೆ ದೇಶ‌ ಕಾಯುತ್ತಿದ್ದಾರಂತೆ ಯಾವಾಗ ಬರುತ್ತಾರೋ ಏನೋ ? ನಿನ್ನನ್ನು ಬಿಟ್ಚು ನಾನು ಅವರನ್ನು ಮದುವೆಯಾಗುವುದಿಲ್ಲವೆಂದು ನೀನೇ ಅರ್ಧಗಂಟೆಯ ಮುಂಚೆ ಹೇಳಿದ್ದೆಯಲ್ಲಾ? ನಿಮ್ಮಮ್ಮ ಬಂದ ತಕ್ಷಣ ಮಾತು ಬದಲಿಸುತ್ತಿದ್ದೀಯಾ? ಎಂದು ವಿಕ್ರಮ್ ಹೇಳಲು
ವಿಕ್ರಮ್ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇದೆ ವಿಕ್ರಮ್ ನಿಮ್ಮಣ್ಣ ಯಾವತ್ತು ನನ್ನನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿದನೋ ಅಂದೇ ನಿನ್ನನ್ನು ನನ್ನ ಚಪ್ಪಲಿ ಬಿಡುವ ಕಡೆ ಬಿಟ್ಟಿದ್ದೇನೆ. ಈಗ ಪುನಃ ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿದೆನೆಂದು ಸುಳ್ಳು ಹೇಳುತ್ತಿದ್ದೀಯಾ ಎಂದು ಆಶಾ ಪ್ರಶ್ನಿಸಲು
ಆಶಾ ತನ್ನ ಮಾತಿನಲ್ಲಿ ನಿನ್ನನ್ನು‌ ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದೇನೆ ಎಂದ ತಕ್ಷಣ ಆ ಮಾತು ನೇರವಾಗಿ ವಿಕ್ರಮ್ ಹೃದಯಕ್ಕೆ ಚೂರಿ ನಾಟಿದಂತಾಗಿ, ಆಶಾಳ‌ ಮೇಲೆ ಕೋಪ ಇನ್ನೂ ಹೆಚ್ಚಾಗುತ್ತದೆ, ಆಶಾ ನೀನೇ ಫೋನ್ ಮಾಡಿ ನನ್ನನ್ನು ಇಲ್ಲಿಗೆ ಕರೆದು ಈಗ ನಿಮ್ಮಮ್ಮನ ಮುಂದೆ ಅವಮಾನ ವಾಗುತ್ತದೆಂದು ಏನೇನೋ ಹೇಳಿ ನಿಮ್ಮಮ್ಮನ ದಾರಿ ತಪ್ಪಿಸ‌ಬೇಡಾ ಎಂದು ವಿಕ್ರಮ್ ಹೇಳಲು
ಆಶಾ ನಿಜ ಹೇಳಮ್ಮಾ ಯಾಕಮ್ಮಾ ಈ ರೀತಿ ಅಪ್ಪ ಅಮ್ಮನ ಮುಂದೆ ನಾಟಕವಾಡುತ್ತಿದ್ದೀಯಾ? ರೆಡ್ ಹ್ಯಾಂಡಾಗಿ ಸಿಕ್ಕಿಕೊಂಡೆ ಎಂದು ನಿನ್ನ ಮಾತು ಬದಲಿಸುತ್ತಿದ್ದೀಯಾ ಎಂದು ಅವಳಮ್ಮ ಕೇಳಲು
ಹೌದು ಆಂಟೀ ನೀವು ಹೇಳಿದಂತೆಯೇ ಈಗ ಆಶ‌ ಮಾಡುತ್ತಿದ್ದಾಳೆ ಎಂದು ವಿಕ್ರಮ್ ಹೇಳುತ್ತಾನೆ
ಅವಳಮ್ಮನನ್ನು ಹೇಗೆ ಒಪ್ಪಿಸಬೇಕೆಂದು ತಿಳಿಯದೆ ಮನೆಗೆ ಬಾಮ್ಮಾ ಎಲ್ಲಾ ವಿಷಯವನ್ನು ಹೇಳುತ್ತೇನೆಂದಾಗ
ನಿನ್ನ ಮನಸ್ಸಿನಲ್ಲಿ ಇನ್ನೇನು ವಿಷಯ ಇಟ್ಟುಕೊಂಡಿದ್ದೀಯೋ ಯಾರಿಗೆ ಗೊತ್ತು? ಎನ್ನುತ್ತಾ ಪುನಃ ಸ್ಟೋರ್ ಒಳಗೆ ಹೋಗಿ ತಮಗೆ ಬೇಕಾದ ಪದಾರ್ಥಗಳನ್ನು ತೆಗೆದುಕೊಂಡು ಬಿಲ್ ಮಾಡಿಸಿ ಹೊರಗೆ ಬಂದಾಗಲೂ ವಿಕ್ರಮ್ ನಿಂತಿರುವುದನ್ನು ಆಶಾ ನೋಡಿ ಈ ಪೀಡೆ ಇನ್ನೂ ತೊಲಗಿಲ್ಲವಲ್ಲಾ? ಇನ್ನೇನು ಚಾಡಿ ಹೇಳಿ ನಮ್ಮಮ್ಮನಿಗೆ ನನ್ನ ಮೇಲೆ ಅನುಮಾನ ಬರುವಂತೆ ಮಾಡುತ್ತಾನೋ ಎಂದುಕೊಂಡು ಮೌನವಾಗಿ ಅಮ್ಮನ ಜೊತೆ ಹೊರಗೆ ಬಂದು ಪುನಃ ಆಟೋವನ್ನು ನಿಲ್ಲಿಸಲು ಯತ್ನಿಸುತ್ತಿದ್ದು,
ವಿಕ್ರಮ್ ಇವರ ಬಳಿ ಬಂದು ಆಂಟೀ ನನ್ನ ಕಾರಿನಲ್ಲೇ ನಿಮ್ಮನ್ನು ಡ್ರಾಪ್ ಮಾಡುತ್ತೇನೆ ಎಂದಾಗ
ಆಶಾ ಸಿಡಿಮಿಡಿಗೊಂಡು ಬೇಡ ನಾವು ಆಟೋದಲ್ಲಿಯೇ ಹೋಗುತ್ತೇವೆ ಎಂದು ಹೇಳಿ, ಆಟೋ ನಿಲ್ಲಿಸಿ ಬಾಮ್ಮಾ ಹೋಗೋಣ ಅವನ ಬಳಿ ಏನು ಮಾತು ಎಂದು ಹೇಳಿ ಆಟೋದಲ್ಲಿ ಕುಳಿತುಕೊಂಡಾಗ
ಆಶಾಳ ತಾಯಿಯೂ ಕುಳಿತ ತಕ್ಷಣ ಬಾಯ್ ಆಂಟೀ ಎಂದು ವಿಕ್ರಮ್ ಹೇಳಲು
ಆಶಾಳ ಅಮ್ಮಆಯ್ತಪ್ಪಾ ಎಂದಷ್ಟೇ ಹೇಳುತ್ತಾರೆ
ಆಟೋ ಮುಂದೆ ಸಾಗುತ್ತಿರುವಾಗ ಸ್ವಲ್ಪ ಹೊತ್ತು ಅಮ್ಮ ಮಗಳ ಮೌನ ಮುಂದುವರೆದಿರುತ್ತದೆ.
ಈ ಕಡೆ ವಿಕ್ರಮ್ ಗೆ ಆಶಾ ಆಡಿದ ಮಾತುಗಳೇ ಮನಸ್ಸಿನಲ್ಲಿ ಗುನುಗುಟ್ಟುತ್ತಿದ್ದು, ಅದರಲ್ಲೂ ನಿನ್ನನ್ನು ನನ್ನ ಚಪ್ಪಲಿ ಬಿಡುವ ಸ್ಥಳದಲ್ಲಿ ಬಿಟ್ಟಿದ್ದೇನೆಂಬ ಮಾತಂತೂ ವಿಕ್ರಮ್ ನನ್ನು ತುಂಬಾ ಕೆರಳಿಸಿರುತ್ತದೆ. ನಾನು ಮನಸಾರೆ ಪ್ರೀತಿಸಿದವಳಿಂದ ಇಂತಹ‌ ಮಾತು ಕೇಳುವಂತಾಯ್ತಲ್ಲಾ? ಇದಕ್ಕೆಲ್ಲಾ ನಮ್ಮಣ್ಣನೇ ಕಾರಣವೆಂದು ಅಣ್ಣನ ಮೇಲೂ ತಡೆಯಲಾರದ‌ ಕೋಪ ಬರುತ್ತದೆ. ನನ್ನ ಜೀವನ ಸಂಗಾತಿಯಾಗುವವಳನ್ನು ಕಿಡ್ನಾಪ್ ಮಾಡಿ ಈಗ ಜೈಲು ಸೇರಿದ್ದಾನೆ ಛೇ,,,, ಎಂದು ತೊಳಲಾಡುತ್ತಾ ಕಾರನ್ನು ಡ್ರೈವ್ ಮಾಡಿಕೊಂಡು ಮನೆಗೆ ‌ಬರುತ್ತಿರುತ್ತಾನೆ.

ಈ ಕಡೆ ಆಟೋ ಸಾಗುತ್ತಿರುವಾಗ ಆಶಾ ಮಾತನಾಡಿ ಅಮ್ಮಾ ನೀನೇಕೆ ಇಲ್ಲಿಗೆ ಬರಲು ಹೋದೆ?‌ ನಾನು ಆಟೋ ಹಿಡಿದು ಹೊರಟಿದ್ದೆ ಎಂದಾಗ
ಇನ್ನೆಲ್ಲಿ ನಿನ್ನ ಕಳ್ಳಾಟ‌ ನನಗೆ ಗೊತ್ತಾಗುತ್ತದೋ ಎಂದು ಹೇಳುತ್ತಿದ್ದೀಯಾ ಎಂದು ಅವಳಮ್ಮ ಛೇಡಿಸುತ್ತಾರೆ
ಅಯ್ಯೋ ಹಾಗೇನಿಲ್ಲಮ್ಮಾ ? ಆ ಕಳ್ಳರ ಕುಟುಂಬದ ಸೊಸೆಯಾಗಲು ನನಗೇನು ಹುಚ್ಚಾ? ಎಂದು ಆಶಾ ಪ್ರಶ್ನಿಸಿದಾಗ
ನೀನು ಕರೆಯದೆ ಅವನು ಹೇಗೆ ಅಲ್ಲಿಗೆ ಬರುತ್ತಾನೆಂಬ ಆಶಾಳ ಅಮ್ಮನ ಪ್ರಶ್ನೆಗೆ ಆಶಾ ನಡೆದಿದ್ದನ್ನು ಹೇಳುತ್ತಾಳೆ
ನೀನು ಏನೇ ಹೇಳು ನನಗೇಕೋ ತುಂಬಾ ಭಯವಾಗುತ್ತಿದೆ ಆಶಾ, ಇಂದು ನಾನು ಬಂದಿದ್ದಕ್ಕೆ ಸರಿಹೋಯ್ತು ಇಲ್ಲದಿದ್ದರೆ ಅವನು ಏನು ಮಾಡುತ್ತಿದ್ದನೋ ಎಂದು ಅವಳಮ್ಮ ಆತಂಕ ವ್ಯಕ್ತಪಡಿಸುತ್ತಾರೆ
ನನ್ನ ಮನಸ್ಸು ಗಟ್ಟಿ ಇರುವವರೆಗೂ ಏನೂ ಮಾಡುವುದಕ್ಕೆ ಆಗುವುದಿಲ್ಲ ಬಿಡಮ್ಮಾ ಎಂದು ಆಶಾ‌ ಸಮಾಧಾನ ಮಾಡುವ ವೇಳೆಗೆ ಆಟೋ ಮನೆಯ ಮುಂದೆ ನಿಂತ ತಕ್ಷಣ ಡ್ರೈವರ್ ಗೆ ಹಣ ಕೊಟ್ಟು ಇಬ್ಬರೂ ಇಳಿದು ಮನೆಯೊಳಗೆ ಹೋದ‌ಾಗ
ಇದೇನೆ ಹೋಗುವಾಗ ಒಬ್ಬಳೇ ಹೋದೆ ಬರುವಾಗ ಇಬ್ಬರೂ ಒಟ್ಟಿಗೆ ಬರುತ್ತಿದ್ದೀರೆಂದು ಕೋದಂಡರಾಂ ಪ್ರಶ್ನಿಸಲು
ನನ್ನ ಅನುಮಾನ ನಿಜವಾಯ್ತೂ ರೀ ಅದಕ್ಕೆ ಹೋಗಿದ್ದೆ ಎಂದಾಗ
ಏನು ನಿನ್ನ ಅನುಮಾನವೆಂದು ಕೋದಂಡರಾಂ ಕೇಳಿದಾಗ
ಅವರ ಪತ್ನಿ ನಡೆದ ಘಟನೆಯನ್ನು ಹೇಳುತ್ತಾರೆ
ಓ ಅದಕ್ಕೇ ನಾನು ಆದಷ್ಟೂ ಬೇಗಾ ಮಗಳ‌ ಮದುವೆ ಮಾಡೋಣವೆಂದರೂ ಅದೇಕೋ ಆಗುತ್ತಲೇ ಇಲ್ಲವೆಂದು ಹೇಳಿದಾಗ
ಬೇರೆ ಹುಡುಗನ್ನ ನೋಡಿ ಮದುವೆ ಮಾಡಿ ಎಂದು ನಾನು ಹೇಳೋದನ್ನ ನೀವು ಕೇಳುವುದೇ ಇಲ್ಲವೆಂದು ಅವರ ಪತ್ನಿ ನುಡಿದಾಗ
ಮಾತು ಕೊಟ್ಟಿದ್ದಾಗಿದೆ, ಇನ್ನೊಂದೆರಡು ದಿನ ನೋಡೋಣ ನಂತರ ನಮ್ಮ ದಾರಿ ನಮ್ಮದೆಂದು ಬೇರೆ ಹುಡುಗನ್ನ ಹುಡುಕಿ ಮದುವೆ ಮಾಡೋಣವೆಂದು ತಮ್ಮ ಪತ್ನಿಗೆ ಸಮಾಧಾನ ಮಾಡುತ್ತಾರೆ ಕೋದಂಡರಾಂ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ

ಕೆಲವು ಸಲ‌ ಹಲವು ವಿಷಯಗಳನ್ನು ನಾವು ಎಷ್ಟೇ ಬಿಡಬೇಕೆಂದರೂ ಅದೇಕೋ ಬಿಟ್ಟೂ ಬಿಡದಂತೆ ಕಾಡುತ್ತದೆ. ಹೆತ್ತವರು ಪ್ರತಿಯೊಂದು ವಿಷಯದಲ್ಲೂ ಮಕ್ಕಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಯಾರಾದರೂ ನಿಮ್ಮ ಮಕ್ಕಳು ಕೆಟ್ಟವರೆಂದು ಅವರು ಮಾಡಿದ ಕೆಲವು ಕೆಟ್ಟ ಕೆಲಸಗಳನ್ನು ಹೇಳಿದರೂ ಹೆತ್ತವರು ತಕ್ಷಣಕ್ಕೆ ಒಪ್ಪುವುದಿಲ್ಲ. ನಮ್ಮ ಮಕ್ಕಳ ಮೇಲೆ ಅಸೂಯೆಯಿಂದ ಹೇಳುತ್ತಿದ್ದಾರೆಂದು ತಿಳಿದುಕೊಂಡಿರುತ್ತಾರೆ. ಮಕ್ಕಳ ಕೆಲಸವನ್ನು ಕಣ್ಣಾರೆ ಕಂಡ ನಂತರ ನಂಬಲು ಹೋಗುತ್ತಾರೆ, ಆದರೆ ಅಷ್ಚರೊಳಗೆ ಕಾಲ ಮಿಂಚಿಹೋಗಿರುತ್ತದೆ.

ಇನ್ನೂ ಕೆಲವು ಸನ್ನಿವೇಶಗಳಲ್ಲಿ, ಇದರ ತದ್ವಿರುದ್ದ ನಡೆಯುವುದೂ ಉಂಟು . ಕೆಲವು ಮಕ್ಕಳು ಮನಸ್ಸಿನಲ್ಲಿ ಒಳ್ಳೆಯ ಭಾವನೆ ಹೊಂದಿದ್ಪು ಅಕಸ್ಮಾತ್ ಮನೆಯಲ್ಲಿ ಹಠ ಮಾಡಿ ಹೇಳಿದ ಮಾತು ಕೇಳದೇ ಇದ್ದಾಗ, ಬೇರೆಯವರು ಏನು ಹೇಳಿದರೂ ನಂಬುತ್ತಾರೆ. ಮನೆಯಲ್ಲೇ ಈ ರೀತಿ ಆಡುವವರು ಹೊರಗಡೆ ಆಡದೇ ಇರುತ್ತಾರೆಯೇ ಎಂದುಕೊಳ್ಳುತ್ತಾರೆ.