ನವರಾತ್ರಿಯ ಒಂಭತ್ತನೇ ದಿನವನ್ನು ಮಹಾನವಮಿ ಎಂದು ಕರೆಯುತ್ತಾರೆ…!

ಆ ದಿನ ತಾಯಿ ಸಿದ್ಧಿದಾತ್ರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಮಹಾ ನವಮಿಯನ್ನು ತಾಯಿ ಚಾಮುಂಡೇಶ್ವರಿಯನ್ನು ಮಹಿಷಾಸುರ ಮರ್ದಿನಿ ಎಂದು ಪೂಜಿಸಲಾಗುತ್ತದೆ. ಪುರಾಣದಲ್ಲಿನ ಕತೆಯ ಪ್ರಕಾರ ಪಾರ್ವತಿ ದೇವಿ ಸೌಮ್ಯ ಸ್ವಭಾವದ ಹೆಣ್ಣುಮಗಳು. ಆಕೆಗೆ ಕೋಪವೇ ಬರುವುದಿಲ್ಲ. ಮಹಿಷಾಸುರನನ್ನು ಮರ್ಧನ ಮಾಡಲು ತಾಯಿಯು ಚಾಮುಂಡೇಶ್ವರಿಯ ಅವತಾರ ಎತ್ತುತ್ತಾಳೆ.

  • ತಾಯಿ ಸಿದ್ಧಿದಾತ್ರಿಯ ಮಹತ್ವ

ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ ಮತ್ತು ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ ಮತ್ತು ದಾತ್ರಿ ಎಂದರೆ ಕೊಡುವುದು. ಸಿದ್ಧಿ ದಾತ್ರಿಯ ಪೂಜೆಯಿಂದ ಸಿಗುವ ಫಲ ಏನು ಎಂಬುದರ ಬಗ್ಗೆ ನಿಮಗೆ ಸುಳಿವು ಸಿಕ್ಕಿರಬಹುದು. ತಾಯಿಯನ್ನು ಪೂಜೆ ಮಾಡಿದರೆ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

ಪುರಾಣದ ಕತೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸಿದರೂ ಶಕ್ತಿ ದೇವತೆಯು ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

ತಾಯಿ ಸಿದ್ಧಿದಾತ್ರಿಯು ಕೆಂಪು ಸೀರಿಯುಟ್ಟು ಸಿಂಹದ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಭಾಗದ ಒಂದು ಕೈನಲ್ಲಿ ಕಮಲ, ಮತ್ತೊಂದು ಕೈನಲ್ಲಿ ಶಂಕವಿದೆ. ಬಲಗೈನಲ್ಲಿ ಗಧೆ ಮತ್ತು ಚಕ್ರವಿದೆ. ಆಕೆಯು ಕಮಲದ ಹೂವಿನ ಕಡೆಗೆ ನೋಡುತ್ತಿರುತ್ತಾಳೆ.
ತಾಯಿ ಸಿದ್ಧಿದಾತ್ರಿ ತನ್ನ ಭಕ್ತರ ಆರಾಧನೆಯಿಂದ ಖುಷಿಯಾಗಿ ಧರ್ಮ, ಅರ್ಥ, ಕರ್ಮ ಮತ್ತು ಮೋಕ್ಷ ಸಾಧನೆ ನೆರವಾಗುತ್ತಾಳೆ. ನವರಾತ್ರಿಯ ಒಂಭತ್ತನೇ ದಿನದಂದು ಭಕ್ತರು ತಮ್ಮ ಗಮನವನ್ನು ನಿರ್ವಾಣ ಚಕ್ರದತ್ತ ಇಡಬೇಕು. ಈ ಚಕ್ರವು ನಮ್ಮ ತಲೆ ಬುರುಡೆಯ ಮಧ್ಯದಲ್ಲಿ ಇರುತ್ತದೆ. ಹಾಗೆ ಮಾಡುವುದರಿಂದ, ತಾಯಿ ಸಿದ್ಧತಾತ್ರಿಯ ಕೃಪೆಯಿಂದ ಭಕ್ತರು ತಮ್ಮ ನಿರ್ವಾಣ ಚಕ್ರದಲ್ಲಿ ಇರುವ ಶಕ್ತಿಯನ್ನು ಪಡೆಯುತ್ತಾರೆ.

ವಿಶ್ವಾಸ್ ಡಿ. ಗೌಡ, ಸಕಲೇಶಪುರ