ಕಾಲರಾತ್ರಿ ದೇವಿ
ಶೀರ್ಷಿಕೆ — ಕಲ್ಯಾಣಕರಿ ಶುಭಂಕರಿ
ಶರನ್ನವರಾತ್ರಿಯ ಏಳನೇ ದಿನ ಸ್ವರೂಪವನ್ನು ಕಾಲರಾತ್ರಿ ಎಂದು ಕರೆಯಲಾಗುತ್ತದೆ. ದೇವಿಯ ಶರೀರದ ಬಣ್ಣವು ಗಾಢಾಂಧಕಾರದಂತೆ ಇರುತ್ತದೆ. ತನ್ನ ಜಡೆಯನ್ನು ಕಟ್ಟದೆ ಹಾಗೇ ಬಿಟ್ಟು, ಹರಡಿಕೊಂಡಿದ್ದಾಳೆ. ಇನ್ನು ಕುತ್ತಿಗೆಯಲ್ಲಿ ಫಳಫಳನೆ ಹೊಳೆಯುತ್ತಿರುವ ಮಾಲೆ ಇದೆ. ಆ ತಾಯಿಗೆ ಮೂರು ಕಣ್ಣುಗಳಿವೆ. ಈ ಕಣ್ಣುಗಳು ಯಾವ ರೀತಿ ಇವೆ ಅಂದರೆ, ಬ್ರಹ್ಮಾಂಡದ ರೀತಿಯಲ್ಲಿ ಗೋಲಾಕಾರದಲ್ಲಿ ಇದೆ. ಆ ಕಣ್ಣುಗಳ ಕಿರಣಗಳು ವಿದ್ಯುತ್ ನಂತೆ ವ್ಯಾಪಿಸಿಕೊಂಡಿದೆ. ತಾಯಿಯ ವಾಹನವು ಕತ್ತೆ ಆಗಿದೆ.
ಕಾಲರಾತ್ರಿಯ ಸ್ವರೂಪದಲ್ಲಿ ದುರ್ಗೆಯು ಭಯಂಕರವಾಗಿ ಕಾಣುತ್ತಾಳೆ. ಆದರೆ ಫಲವನ್ನು ನೀಡುವ ವಿಚಾರಕ್ಕೆ ಬಂದಲ್ಲಿ ಸದಾ ಶುಭ ಫಲಗಳನ್ನೇ ನೀಡುವವಳಾಗಿದ್ದಾಳೆ. ಆದ್ದರಿಂದ ಆಕೆಯನ್ನು ಶುಭಂಕರೀ ಎಂದು ಸಹ ಕರೆಯಲಾಗುವುದು. ಭಕ್ತರು ಅಥವಾ ಆರಾಧಕರು ತಾಯಿಯ ಸ್ವರೂಪಕ್ಕೆ ಹೆದರುವ ಅಗತ್ಯವೇ ಇಲ್ಲ. ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಆರಾಧನೆ ಮಾಡುವುದರಿಂದ
ಸಾಧಕನ ಮನಸ್ಸು ಸಹಸ್ರಾರ ಚಕ್ರದಲ್ಲಿ ನೆಲೆ ಗೊಳ್ಳುತ್ತದೆ.ಅವನಿಗೆ ಎಲ್ಲಾ ಸಿದ್ಧಿಗಳು ಬಾಗಿಲು ತೆರೆಯುತ್ತದೆ.ಜೀವನ್ಮುಕ್ತನಾಗುತ್ತಾನೆ. ಹಾಗಾದರೆ ದೇವಿಗೆ ನಮಿಸುತ್ತ ಕವನ ವಾಚಿಸೋಣವೆ.
ಕಾಲ ರಾತ್ರಿ ದೇವಿ
ಕಲ್ಯಾಣಕರಿ ಶುಭಂಕರಿ
ಕಾಲ ಕಾಲಕೆ ಅಧರ್ಮವಳಿಸಲು
ಕಾಲಾತೀತಳಾಗಿ ಅವತರಿಸುವ
ಧರ್ಮ ರಕ್ಷಿಸುವ ಕಾಳರಾತ್ರಿದೇವಿ
ಶರಣು ಶರಣಾರ್ಥಿ ದೇವಿ//
ಗಾರ್ಧಬವಾಹಿನಿ ಭಯಂಕರಿ
ರುಂಡಮಾಲಾಧಾರಿಣಿ ಮುಳ್ಳ
ಮುಕುಟ ಧಾರಿಣಿ ವಿಜಯ ಸೆರಗು
ಹಾರಿಸುವ ತಾಯೆ ವಂದನೆ//
ಕೇಶರಾಶಿ ಬಿಟ್ಟು ವಿಕಟ ನಗೆನಗುತ
ಅಟ್ಟಹಾಸದಿ ರಕ್ಕಸರ ಮೆಟ್ಟುತ
ರಣಾಂಗಣದಿ ಕೊಚ್ಚಿ ಹಾಕುವ
ಕಾಲರಾತ್ರಿದೇವಿಗೆ ನಮನ//
ಮನ ಮಸ್ತಿಷ್ಕದ ಕತ್ತಲೆ ಕಳೆಯುತ
ಅಜ್ಞಾನದಿಂದ ಜ್ಞಾನದೆಡೆಗೆ ನಡೆಸಿ
ಸಹಸ್ರಾರ ಚಕ್ರದಲಿ ನಿಲಿಸುವ
ವಿಶ್ವವಂದ್ಯೆಗೆ ನಮೋನಮಃ//
ಶುಕ್ಲ ಸಪ್ತಮಿ ಶುಭ ದಿನವಿಂದು
ರೌದ್ರರೂಪಿಣಿ ಮಹಾಕಾಳಿದೇವಿ
ಅಭಯಕರಿ ಆನಂದದಾಯಿನಿ
ನಿನಗೆ ಶಿರಬಾಗಿ ವಂದನೆ//
ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ.