ನವರಾತ್ರಿಯ ಐದನೆಯ ದಿನ ..!
- ಸ್ಕಂದಾಮಾತೆಯ ಹಿನ್ನಲೆ, ಅವಳ ಶಕ್ತಿ ಸಾಮರ್ಥ್ಯ, ಕಾರ್ತಿಕೇಯನ ಜನನ ಮತ್ತು ತಾರಾಕಾಸುರನ ಸಂಹಾರ ಮತ್ತು ಸ್ಕಂದಾ ದೇವಿಯ ಆರಾಧನೆಯ ಮಹತ್ವ :-
ನವರಾತ್ರಿಯ ಮೊದಲನೆಯ ದಿನದಲ್ಲಿ ಶೈಲಪುತ್ರಿ ದೇವಿಯ ರೂಪವನ್ನು, ಎರಡನೆಯ ದಿನದಲ್ಲಿ ಶಿವನನ್ನು ಆರಾಧಿಸಿ ಪೂಜಿಸಿ ಮೆಚ್ಚಿಸುವ ಬ್ರಹ್ಮಚಾರಿಣಿಯ ರೂಪವನ್ನು, ಮೂರನೆಯ ದಿನದಲ್ಲಿ ಭಯಂಕರ ಸ್ವರೂಪದ ಶಿವನನ್ನು ಮದುವೆಯ ಮಂಟಪದಲ್ಲಿ ಅದೇ ಸ್ವರೂಪದ ಮೂಲಕ ಶಿವನನ್ನು ಒಲಿಸಿಕೊಳ್ಳುವ ಚಂದ್ರಘಂಟಾ ದೇವಿಯ ರೂಪವನ್ನು ಮತ್ತು ನಾಲ್ಕನೆಯ ದಿನದಲ್ಲಿ ರಕ್ಕಸ ಬಳಗವನ್ನು ನಾಶ ಮಾಡುವ ಕೂಷ್ಮಾಂಡ ದೇವಿಯ ರೂಪವನ್ನು ಮತ್ತು ಈ ಎಲ್ಲಾ ದೇವಿಗಳ ಆರಾಧನೆಯ ಮಹತ್ವದ ಬಗ್ಗೆ ಅರಿತುಕೊಂಡಿರುತ್ತೇವೆ. ಇದೀಗ ಐದನೆಯದ ದಿನದ ಪೂಜೆಯು ಮಹಾಲಕ್ಷ್ಮೀ ದೇವಿಯ ಆರಾಧನೆಯು ಹೌದು. ಇವಳನ್ನು ಮತ್ತೊಂದೆಡೆ ಸ್ಕಂದ ಮಾತೆಯೆಂದು ಕೂಡಾ ಕರೆಯಲಾಗುತ್ತದೆ.
- ಸ್ಕಂದಾ ದೇವಿಯ ವಿಶೇಷತೆ :-
ಸ್ಕಂದ ಮಾತೆಯ ಅವತಾರವು ನವರಾತ್ರಿಯ ಐದನೆಯ ಅವತಾರವಾಗಿದ್ದು, ಪಂಚಮಿ ತಿಥಿಯಂದು ಈ ದೇವಿಗೆ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಇವಳನ್ನು ಪೌರಾಣಿ ಕಥೆಗಳ ಪ್ರಕಾರ ಕಾರ್ತಿಕೇಯ ಎಂದು ಕರೆಯಲಾಗುತ್ತದೆ. ಈ ಅವತಾರದಲ್ಲಿ ದೇವಿಯು ಸಿಂಹದ ಮೇಲೆ ಕುಳಿತು ತನ್ನ ಆರು ಮುಖದ ಮಗನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವುದಾಗಿದೆ. ನವರಾತ್ರಿಯ ಹಬ್ಬಗಳಲ್ಲಿ ಈ ಅವತಾರವು ಹೆಚ್ಚಿನ ಪ್ರಭಾವ ಹೊಂದಿರುವುದು. ಸ್ಕಂದಾ ದೇವಿಗೆ ಒಟ್ಟು ನಾಲ್ಕು ಭುಜಗಳಿದ್ದು, ಒಂದು ಕೈಯಲ್ಲಿ ಕಾರ್ತಿಕೇಯನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿದ್ದು ಮತ್ತೊಂದು ಕೈಯು ಅಭಯದ ಮುದ್ರೆಯಲ್ಲಿರುವುದು. ಅಂದರೆ ಈ ದೇವಿಯು ತನ್ನ ಭಕ್ತರಿಗೆ ಸದಾ ರಕ್ಷಣೆಯ ಆಶೀರ್ವಾದ ಮಾಡುವಳು. ಇವಳ ಶರೀರದ ಬಣ್ಣವು ಸಂಪೂರ್ಣವಾಗಿ ಬಿಳಿ ಬಣ್ಣದಾಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿ ಕುಳಿತಿರುವಳು. ಈ ಕಾರಣಕ್ಕಾಗಿ ಇವಳನ್ನು “ಪದ್ಮಾಸನಾ ದೇವಿ“ಯೆಂದು ಅಥವಾ “ವಿದ್ಯಾವಾಹಿನಿ ದುರ್ಗಾ” ಎಂದು ಕೂಡಾ ಕರೆಯಲಾಗುತ್ತದೆ. “ಸಿಂಹವು ಇವಳ ವಾಹನ“ವಾಗಿರುವುದು. ಇವಳಿಗೆ ಕೆಂಪು ಬಣ್ಣದ ಹೂವು ಅದರಲ್ಲಿಯೂ “ಕೆಂಪು ಬಣ್ಣದ ಗುಲಾಬಿ ಹೂವು“ಗಳು ಪ್ರಿಯವಾಗಿದ್ದು, ಇವಳ ರೂಪವನ್ನು ಆರಾಧಿಸಿದರೆ ನಮ್ಮಲ್ಲಿನ ದೈವತ್ವವನ್ನು ಪೋಷಿಸುವಳೆಂಬ ನಂಬಿಕೆಯೂ ಇದೆ. ಸ್ಕಂದಾ ದೇವಿಯು ಸಿಂಹದ ಮೇಲೆ ಸವಾರಿ ಮಾಡುತ್ತಾ ದೌರ್ಜನ್ಯ ನೀಡುವ ರಕ್ಕಸ ಬಳಗದವರನ್ನು ನಿರ್ನಾಮ ಮಾಡಿ ಜಗತ್ತಿನಲ್ಲಿ ಧರ್ಮದ ಪೋಷಣೆ ಮಾಡುವಳು. ಪರ್ವತ ರಾಜನ ಮಗಳಾಗಿರುವುದರಿಂದ ಇವಳನ್ನು “ಪಾರ್ವತಿ” ಎಂದು ಕರೆಯುತ್ತಾರೆ. ಮಾತ್ರವಲ್ಲ, ಇವಳು ಶಿವನ ಪತ್ನಿಯೂ ಆಗಿರುವುದರಿಂದ ಇವಳಿಗೆ “ಮಹೇಶ್ವರೀ” ಮತ್ತು “ಗೌರಿ” ಎಂಬ ಹೆಸರೂ ಇದೆ.
- ಸ್ಕಂದಾ ದೇವಿಯ ಪೌರಾಣಿಕ ಕಥೆ :-
ಪೌರಾಣಿಕ ನಂಬಿಕೆಯ ಪ್ರಕಾರ, ಬ್ರಹ್ಮದೇವರನ್ನು ಮೆಚ್ಚಿಸಲು ತಾರಕಾಸುರನೆಂಬ ರಾಕ್ಷಸನು ಅಮೋಘವಾದ ಘೋರ ತಪಸ್ಸು ಮಾಡಿದನು. ಅವನ ಕಠೋರ ತಪಸ್ಸಿನಿಂದ ಸಂತೋಷಗೊಂಡ ಬ್ರಹ್ಮದೇವನು ತಾರಕಾಸುರನಿಗೆ ಆತನಿಚ್ಛೆಯಂತೆ ಅಮರತ್ವದ ವರವನ್ನು ನೀಡಿದನು. ಅದರ ಜೊತೆಗೆ ಬ್ರಹ್ಮನು ಜನ್ಮ ಪಡೆದವನು ಒಂದಲ್ಲ ಒಂದು ದಿನ ಸಾಯಲೇಬೇಕಾಗುತ್ತದೆ ಎಂದು ತಾರಾಕಾಸುರನಿಗೆ ವಿವರಿಸುವನು. ಇದರ ನಂತರ ತಾರಾಕಾಸುರನಿಚ್ಛೆಯಂತೆ ಶಿವನ ಮಗನ ಕೈಯಲ್ಲಿ ಸಾವಿನ ವರವನ್ನು ಕೇಳುವನು. ಏಕೆಂದರೆ ಶಿವನು ಎಂದಿಗೂ ಮದುವೆಯಾಗುವುದಿಲ್ಲ ಮತ್ತು ಅವನು ಮದುವೆಯಾದರೂ ಅವನಿಗೆ ಮಗನು ಜನಿಸುವುದಿಲ್ಲ ಎಂದು ಅರಿತಿದ್ದನು.
ವರವನ್ನು ಪಡೆದ ನಂತರ ತಾರಕಾಸುರನು ದೇವತೆಗಳನ್ನು ಹಿಂಸಿಸಲು ಪ್ರಾರಂಭಿಸುವನು. ಈ ಬೆಳವಣಿಗೆಯಿಂದ ಬೇಸತ್ತ ದೇವತೆಗಳೆಲ್ಲರೂ ಶಿವನ ಬಳಿಗೆ ಹೋಗಿ ತಾರಕಾಸುರನ ಉಪಟಳದಿಂದ ಧರ್ಮವು ನಾಶವಾಗುತ್ತಿದ್ದು, ಜನರು ದುಃಖಪೀಡಿತರಾಗಿರುವರು. ಈತ ಬ್ರಹ್ಮದೇವನ ವರದಿಂದ ಕೊಬ್ಬಿದ್ದು, ಈತನ ಸಂಹಾರವು ನಿನ್ನ ಶಕ್ತಿಯಿಂದಲೇ ನಡೆಯುವುದರಿಂದ ಈ ಕೂಡಲೇ ನೀನು ತಾರಕಾಸುರನನ್ನು ಸಂಹಾರ ಮಾಡುವಂತೆ ಶಿವನಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದರು. ಇದಕ್ಕಾಗಿ ಶಿವ ಮತ್ತು ಪಾರ್ವತಿ ದೇವಿಯನ್ನು ವಿವಾಹ ಮಾಡಿಸಲು ನಾನಾ ಪ್ರಯತ್ನಗಳನ್ನು ಕೈಗೊಂಡರು. ಇದರ ಫಲವಾಗಿ ಶಿವನು ಪಾರ್ವತಿ ದೇವಿಯನ್ನು ವಿವಾಹವಾಗುವನು. ಇದರ ಪರಿಣಾಮವೇ ಕಾರ್ತಿಕೇಯ ಅಥವಾ ಷಣ್ಮುಖನ ಜನನವಾಗುತ್ತದೆ. ನಂತರ ಕಾರ್ತಿಕೇಯನು ದೇವತೆಗಳ ಅಧಿಪತ್ಯವನ್ನು ವಹಿಸಿಕೊಂಡು ನಾನಾ ದೇವರುಗಳು ನೀಡಿರುವ ಸಂಹಾರಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಅದರ ನೆರವಿನಿಂದ ರಾಕ್ಷಸ ಕುಲದವನಾದ ತಾರಕಾಸುರನನ್ನು ಘೋರ ಕಾಳಗವೊಂದರಲ್ಲಿ ಕೊಂದು ಹಾಕುವನು. ಈ ಘಟನೆಯ ನಂತರ ತನ್ನ ತಾಯಿಯಾದ ಪಾರ್ವತಿ ದೇವಿಯನ್ನು ಕಾರ್ತಿಕೇಯನು ಜಗತ್ಕಲ್ಯಾಣಕಾರಕಳೆಂದು ಬಣ್ಣಿಸಿ “ಸ್ಕಂದಮಾತೆ” ಎಂದು ಕರೆದನು. ಹೀಗೆ ಸ್ಕಂದಾ ದೇವಿಯು ತನ್ನ ತೊಡೆಯಲ್ಲಿ ತನ್ನ ಮಗನಾದ ಷಣ್ಮುಖನನ್ನು ಕುಳ್ಳಿರಿಸಿಕೊಳ್ಳುವಳು. ಇವಳ ಈ ರೂಪವನ್ನು ಅತ್ಯಂತ ಪವಿತ್ರ ಮತ್ತು ಅದ್ಭುತ ರೂಪವೆಂದು ಬಣ್ಣಿಸಲಾಗುತ್ತದೆ. ಹಾಗೆಯೇ ಕಾರ್ತಿಕೇಯನನ್ನು “ಕುಮಾರ“ನೆಂದು, “ಸನತ್ಕುಮಾರ“ನೆಂದು, “ಸ್ಕಂದ ಕುಮಾರ“ನೆಂದು ಕರೆಯಲಾಗುತ್ತದೆ. - ಸ್ಕಂದಾ ದೇವಿಯ ವೈಶಿಷ್ಟ್ಯತೆ :-
“ಭಗಃ” ಎಂದರೆ “ತೇಜಸ್ಸು.” “ಭಗವತಿ” ಎಂದರೆ “ವಿಶಿಷ್ಟ ಯೋಗ್ಯತೆಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದ ತೇಜಸ್ಸು.”
ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ “ಸನತ್ಕುಮಾರ” ಅಥವಾ “ಸ್ಕಂದ” ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು.
ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ.
“ವ್ಯಾಹ್ಯತಿ” ಎಂದರೆ, “ಗೂಢ ಸ್ವರ” ಅಥವಾ “ಮಂತ್ರ.” ಸಪ್ತ ಲೋಕಗಳ ಹೆಸರುಗಳಂತೆ ಅನುಕ್ರಮವಾಗಿ “ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ” – ಇವು ಏಳು ವ್ಯಾಹ್ಯತಿಗಳಾಗಿವೆ.
ಈ ಏಳು ಲೋಕಗಳ ನಿಯಂತ್ರಣಕರ ಮಾತೆಯೇ ಸ್ಕಂದ ಮಾತೆ. ಈ ಏಳು ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯದ ಅವಶ್ಯಕತೆಯಿದೆಯೋ ಅವಳನ್ನು “ಸ್ಕಂದ ಮಾತೆ” ಎನ್ನುತ್ತೇವೆ.
- ಸ್ಕಂದಾ ದೇವಿಯ ಆರಾಧನೆಯ ಮಹತ್ವ :-
ಸ್ಕಂದಾ ದೇವಿಯ ಆರಾಧನೆಯಿಂದ ಸಂಪತ್ತು ಅಧಿಕಗೊಂಡು ಖ್ಯಾತಿಯನ್ನು ಸಂಪಾದಿಸಬಹುದು.
ಇವಳ ಆರಾಧನೆಯಿಂದ ನಮ್ಮ ಆತ್ಮದೊಳಗಿನ ಅಂತಃಕರಣವು ಶುದ್ಧಗೊಂಡು ನಮ್ಮ ಬುದ್ಧಿಶಕ್ತಿ ಸಾಮರ್ಥ್ಯ ಹೆಚ್ಚಳವಾಗುವುದು.
ಸ್ಕಂದಾ ದೇವಿಯ ಆರಾಧನೆಯಿಂದ ಭಕ್ತರು ಖ್ಯಾತಿ ಪಡೆಯುವುದರ ಜೊತೆಗೆ ಯಶಸ್ವಿನ ಪಯಣ ಮುಂದುವರೆಸುವರು.
ಸ್ಕಂದಾ ದೇವಿಯು “ಬುಧ ಗ್ರಹದ” ಅಧಿಪತಿಯಾಗಿದ್ದು ಇವಳ ಆರಾಧನೆಯಿಂದ ನಮ್ಮ ಬದುಕಿನ ಸಕಲ ಸಮಸ್ಯೆಗಳ ಮೇಲೆ ಸಹಾನುಭೂತಿಯನ್ನು ತೋರುತ್ತಾ ಆ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿ ನಮ್ಮ ಮನಸ್ಸಿಗೆ ಆನಂದ ದೊರಕುವುದು.
ಅತ್ಯಂತ ಪವಿತ್ರ ರೂಪವೆನಿಸಿದ ದುರ್ಗಾ ಮಾತೆಯ ಸ್ಕಂದಾ ದೇವಿಯ ಅವತಾರವು ಹಿತಕರವಾದ ಭಾವನೆಯನ್ನು ಹೊಂದಿರುವವಳಾಗಿದ್ದು ಇವಳ ಆರಾಧನೆಯು ನಮ್ಮಲ್ಲಿ ಭಕ್ತಿಯೆಂಬ ಭಗವಂತನ ಆಧ್ಯಾತ್ಮಿಕ ಜ್ಞಾನದ ಅನುಸಂಧಾನದ ಗುಡಿಯೊಳಗೆ ದುಮುಕುವ ಪರಿಕಲ್ಪನೆ ಹುಟ್ಟುಹಾಕುವಳು.
ಇವಳ ಆರಾಧನೆಯಿಂದ ನಮ್ಮಲ್ಲಿ ಅಲೌಕಿಕ ತೇಜಸ್ಸು ಮತ್ತು ಬೆಳಕಿನ ಪ್ರಭೆಯು ದೊರಕಲ್ಪಡುವುದರಿಂದ ಐಹಿಕ ಬಂಧನಗಳಿಂದ ಮುಕ್ತರಾಗುತ್ತೇವೆ.
ಸ್ಕಂದಾ ದೇವಿಯ ಆರಾಧನೆಯು ನಮ್ಮಲ್ಲಿನ ಹಲವು ಮಾನಸಿಕ ಖಾಯಿಲೆಗಳನ್ನು ಹೋಗಲಾಡಿಸಿ, ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ನಮ್ಮನ್ನು ಕ್ರಿಯಾಶೀಲಕ್ಕೊಳಪಡಿಸಿ ಬದುಕಿನೊಳಗಿನ ಮೋಕ್ಷದ ಒಳಸಾರದ ಮಹತ್ವವನ್ನು ಅರಿಯಲು ನೆರವಾಗುತ್ತದೆ.
ಪುರಾಣಗಳು ಹೇಳುವಂತೆ, ಇವಳು ಪರ್ವತಗಳಲ್ಲಿ ವಾಸಿಸುವುದರಿಂದ ಇವಳ ಆರಾಧನೆಯಿಂದ ಲೌಕಿಕ ಜೀವಿಗಳಾದ ನಮ್ಮಲ್ಲಿ ಅಲೌಕಿಕ ಪ್ರಜ್ಞೆಯನ್ನು ಬೆಳೆಸಿ ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸುವಳು.
ಸ್ಕಂದಾ ದೇವಿಯ ಆರಾಧನೆಯು ಸಂತಾನ ಹೀನರಿಗೆ ಸಂತಾನ ಸೌಭಾಗ್ಯವನ್ನು ಒದಗಿಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಳೆಂಬ ಪ್ರತೀತಿ ಇದೆ.
– ವಿಶ್ವಾಸ್ . ಡಿ .ಗೌಡ, ಸಕಲೇಶಪುರ
ಸ್ಕಂದ ಮಾತಾ
ಮಾತೃ ಸ್ವರೂಪಿಣಿ
ಜಗನ್ಮಾತೆಯ 5 ನೇಸ್ವರೂಪವನ್ನು ಸ್ಕಂದ ಮಾತಾ ಎಂದು ಕರೆಯುತ್ತಾರೆ.ಸ್ಕಂದನು ಕುಮಾರ್ ಕಾರ್ತಿಕೇಯನಾಗಿದ್ದಾನೆ.ಸ್ಕಂದಮಾತೆಯ ಉಪಾಸನೆಯಿಂದ ಬಾಲ ರೂಪಿಯಾದ ಆರು ಮುಖಗಳುಳ್ಳ ಸ್ಕಂದನ ಉಪಾಸನೆ ಮಾಡಿದಂತಾಗುತ್ತದೆ. ಅಧ್ಯಾತ್ಮದ ದೃಷ್ಟಿಯಿಂದ
ಷಡ್ ವಿಕಾರಗಳ ಮೇಲೆ ವಿಜಯ ಸಾಧಿಸಿದಂತೆ ಹಾಗೂ ಷಟ್ ದರ್ಶನ ಷಟ್ ಶಾಸ್ತೃಗಳ ಬಗ್ಗೆ
ತಿಳಿಸುವ, ಆರು ಮುಖಗಳ ಸ್ಕಂದನನ್ನು ತೋರಿಸಿದ್ದಾರೆ. ಸಾಧಕನ ಮನಸ್ಸು ವಿಶುದ್ಧ ಚಕ್ರದಲ್ಲಿ ಸ್ಥಿರವಾಗಿರುತ್ತದೆ. ಇದರಿಂದ ಸಾಧಕನ ಸಮಸ್ತ ಬಾಹ್ಯಕ್ರಿಯೆಗಳು ಲೋಪವಾಗಿ ಪ್ರೇಮ ಶಾಂತಿ ಅನುಭವಿಸುತ್ತಾನೆ. ಹಾಗಾದರೆ ದೇವಿಗೆ ನಮಿಸುತ್ತ ಕವಿತೆ ಓದೋಣವೆ.
ಮಾತೃ ಸ್ವರೂಪಿಣಿ
ಸ್ಕಂದಮಾತಾ ದೇವಿ
ಸತ್ಯಲೋಕದಿಂದ ಭೂಲೋಕಕೆ
ಸ್ಕಂದ ರೇಖೆಯೆಳೆದು ಪೋಷಿಸಿ
ಕಂದಮ್ಮಗಳ ರಕ್ಷಿಸುವ
ಸ್ಕಂದನ ಮಾತೆಗೆ ವಂದನೆ//
ವಿಶುದ್ಧಚಕ್ರ ಶ್ರೀಕಂಠದಲಿ ನಿಲುತ
ಮಂದಹಾಸದಿ ಸ್ವಾನಂದದಲಿ
ಸ್ಪಂದನಗೈಯ್ಯುತ ಬೆಳಕ ತೋರುವ
ಕುಮಾರನ ತಾಯಿಗೆ ನಮನ//
ಸಿಂಹಾರೂಢಳೆ ಕಮಲ ಪಿಡಿದು
ವಿರೋಧಾಭಾಸದ ಕರುಣೆ ಕ್ರೂರ
ದುಷ್ಟರ ನಾಶ ಶಿಷ್ಟರ ಪಾಲನೆಗೈವ
ಜಗನ್ಮಾತೆಯೇ ಶರಣು ನಿನಗೆ//
ಪಂಚಮಿದಿನದಿ ಚಂಡಮದ್ದಳೆ
ನಾದಗೈಯ್ಯುತ ಚಂಡಮುಂಡರ
ರುಂಡಾಡಿದ ಚಂಡಿ ಚಾಮುಂಡಾ
ದೇವಿಗೆ ನಮ್ರ ವಂದನೆ//
ಮನದ ಮದ ಮತ್ಸರ ಮೋಹ
ಸಂಹರಿಸುತ ರಕ್ತದ ಕಣಕಣದಲಿ
ಬೆಳಕಿನ ಕಿರಣಗಳ ಪಸರಿಸಿ
ಧನ್ಯಳಾಗುವಂತೆ ಮಾಡಮ್ಮ//
ಸೌ ಅನ್ನಪೂರ್ಣ ಸು ಸಕ್ರೋಜಿ