ಚಂದ್ರಘಂಟಾ ದೇವಿ
ಮೂರನೇ ನವದುರ್ಗಾ ಅಂಶವಾಗಿದೆ , ಇದನ್ನು ನವರಾತ್ರಿಯ ಮೂರನೇ ದಿನದಂದು ಪೂಜಿಸಲಾಗುತ್ತದೆ ( ನವದುರ್ಗೆಯ ಒಂಬತ್ತು ದೈವಿಕ ರಾತ್ರಿಗಳು ). ಅವಳ ಹೆಸರು ಚಂದ್ರ – ಘಂಟಾ , ಅಂದರೆ “ಗಂಟೆಯ ಆಕಾರದ ಅರ್ಧ ಚಂದ್ರನನ್ನು ಹೊಂದಿರುವ” ಎಂದರ್ಥ. ಅವಳ ಮೂರನೇ ಕಣ್ಣು ಯಾವಾಗಲೂ ತೆರೆದಿರುತ್ತದೆ, ಇದು ದುಷ್ಟರ ವಿರುದ್ಧದ ಯುದ್ಧಕ್ಕೆ ಅವಳ ಶಾಶ್ವತ ಸಿದ್ಧತೆಯನ್ನು ಸೂಚಿಸುತ್ತದೆ. ಆಕೆಯನ್ನು ಚಂದ್ರಖಂಡ , ವೃಕಾಹ್ವಾಹಿನಿ ಅಥವಾ ಚಂದ್ರಿಕಾ ಎಂದೂ ಕರೆಯುತ್ತಾರೆ . ಅವಳು ತನ್ನ ಅನುಗ್ರಹ, ಶೌರ್ಯ ಮತ್ತು ಧೈರ್ಯದಿಂದ ಜನರಿಗೆ ಪ್ರತಿಫಲ ನೀಡುತ್ತಾಳೆ ಎಂದು ನಂಬಲಾಗಿದೆ. ಆಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಸಂಕಟಗಳು, ಶಾರೀರಿಕ ಸಂಕಟಗಳು, ಮಾನಸಿಕ ಕ್ಲೇಶಗಳು ಮತ್ತು ಪ್ರೇತ ಬಾಧೆಗಳು ನಿವಾರಣೆಯಾಗುತ್ತವೆ. ಸಾಧಕರ ಮನವು ಈ ದಿನ ಮಣಿಪೂರ ಚಕ್ರದಲ್ಲಿ ಸ್ಥಿರವಾಗಿಸುತ್ತಾರೆ.
ಹಾಗಾದರೆ ಈ ದಿನ ಚಂದ್ರ ಘಂಟಾ ದೇವಿಗೆ ನಮಸುತ್ತ ಕವನ ಓದೋಣವೆ
ಚಂದ್ರಘಂಟಾದೇವಿ
ಚಂದ್ರಮನಂತೆ ಹೊಳೆವ
ಚಿನ್ನ ಬಣ್ಣದ ಚಂದ್ರಘಂಟಾ
ದೇವಿಯ ಚರಿತೆ ಕೇಳಿರಿ
ಧನ್ಯರಾಗಿರಿ ಜೀವನದಿ//
ಅಗಣಿತಗುಣಮಣಿಧಾರಿಣಿ
ಮಣಿಪುರಚಕ್ರದಲಿ ನಿಂತವಳೆ
ತ್ರಿನೇತ್ರದಿಂದ ಕಿಡಿ ಸುರಿಸುತ
ಸಂಹರಿಸುವವಳೆ//
ಶಸ್ತ್ರಾಸ್ತ್ರ ಧಾರಿಣಿ ಸಿಂಹವಾಹಿನಿ
ಜಾಗಟೆ ಘಂಟೆ ನಿನದಿಸುತ
ನಡುಕ ಹುಟ್ಟಿಸುವ ಭಯಂಕರಿ
ಮಹಿಷಾಸುರ ಮರ್ದಿನಿ//
ಗರ್ವಅಹಂಕಾರ ನಾಶ ಮಾಡುವ
ದರ್ಪ ದಬ್ಬಾಳಿಕೆಯ ಮೆಟ್ಟಿ
ತಮಂಧಃಕಾರ ಕಳೆವ ತಾಯೆ
ಶುಭಂಕರಿ ಶರಣು ನಿನಗೆ//
ಹೃದಯದಿ ಘಂಟೆ ನಿನದಿಸಿ
ಧ್ಯಾನಸ್ಥಳನಾಗಿ ಮಾಡಮ್ಮ
ತೃತೀಯ ಸಂಪಿಗೆ ಪುಷ್ಪಾರ್ಪಣೆ
ನಿನಗೆ ಆಶೀರ್ವದಿಸಮ್ಮ//
–ಸೌ.ಅನ್ನಪೂರ್ಣ ಸು ಸಕ್ರೋಜಿ