ದೇವಿ ಬ್ರಹ್ಹಚಾರಿಣಿ

ಮಹಾನವಮಿಯ ಎರಡನೇ ದಿನವು ಬ್ರಹ್ಮಚಾರಿಣಿದೇವಿಯ ರೂಪವಾಗಿದೆ. ದೇವಿಯು ತನ್ನ ಸರಳ ರೂಪದಲ್ಲಿರುತ್ತಾಳೆ. ಸರಳವಾದ ಬಿಳಿ ಸೀರೆಯನ್ನು ಧರಿಸಿರುವ ಅವಳು ಒಂದು ಕೈಯಲ್ಲಿ ಕಮಂಡಲು
ಮತ್ತು ಇನ್ನೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ದೇವಿಯು ಪಾರ್ವತಿ ದೇವಿಯ ಅವಿವಾಹಿತ ರೂಪವಾಗಿದೆ. ಅವಳು ಧ್ಯಾನಸ್ಥ ಅಂಶವನ್ನು ಹೊಂದಿದ್ದಾಳೆ ಮತ್ತು ಅವಳ ಮುಖವು ಆನಂದ ಮತ್ತು ಶಾಂತ ಶಕ್ತಿಯನ್ನು ವ್ಯಕ್ತಪಡಿಸುತ್ತದೆ – ಅವಳು ಅನುಭವಿಸಿದ ತಪಸ್ಸಿನ ತೀವ್ರತೆಯ ಗುರುತು.

ದೇವಿಯು ತನ್ನ ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯುವುದರಿಂದ, ಈ ದಿನವು ಧ್ಯಾನಕ್ಕೆ ಉತ್ತಮವಾಗಿದೆ . ಉಪವಾಸ, ಮಂತ್ರಗಳನ್ನು ಪಠಿಸುವ ಮತ್ತು ಭಕ್ತಿಯಿಂದ ಧ್ಯಾನ ಮಾಡುವವರಿಗೆ ದೇವಿಯು ಪ್ರೀತಿ, ಯಶಸ್ಸು, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಅನುಗ್ರಹಿಸುತ್ತಾಳೆ. ದೇವಿಗೆ ದೃಢವಾದ ಭಕ್ತಿಯಿಂದ ಪ್ರಾರ್ಥನೆ ಮಾಡುವುದರಿಂದ ಮನುಷ್ಯರಲ್ಲಿ ತ್ಯಾಗ, ತಪಸ್ಸು, ವೈರಾಗ್ಯ,ಸದಾಚಾರ ಸಂಯಮಗಳ ವೃದ್ಧಿಯಾಗುತ್ತದೆ.ಇಂದು ಸಾಧಕನ ಮನಸ್ಸು
*ಸ್ವಾಧಿಷ್ಠಾನ ಚಕ್ರದಲ್ಲಿ* ಸ್ಥಿತವಾಗುತ್ತದೆ.ಇದರಿಂದ ದೇವಿ ಪ್ರಸನ್ನನಳಾಗುತ್ತಾಳೆ. ಹಾಗಾದರೆ ಬ್ರಹ್ಮಚಾರಿಣಿಯ ಕವನ ವಾಚಿಸೋಣವೆ.

ಬ್ರಹ್ಮಚಾರಿಣಿ

ಬ್ರಹ್ಮಾನಂದದಲಿ ನಿರುತ
ಯೋಗಿನಿ ಬ್ರಹ್ಮಚಾರಿಣಿ
ಓಂಕಾರನಾದಗೈವ
ಓಂಕಾರಸ್ವರೂಪಿಣಿ//

ಜಪಮಾಲೆಯ ಕರದಲಿ
ಅಜಪಾಜಪವಗೈವ
ಸ್ವಾಧಿಷ್ಠಾನ ಚಕ್ರದಲಿ
ನಿಲುವ ಆತ್ಮಸ್ವರೂಪಿಣಿ//

ಪತಿ ಶಿವನಿಗಾಗಿ ತಪಸ್ಸು
ಮಾಡಿ ತಪ್ತಳಾಗಿ ಆಹಾರ
ತ್ಯಜಿಸಿ ಅಪರ್ಣಾಳಾದ
ನೀನು ಶಿವಸ್ವರೂಪಿಣಿ//

ಜೀವಜಲದ ಕಮಂಡಲು
ಪಿಡಿದು ನಿಂತಿಹ ತಾಯೆ
ಜೀವಿಗಳನುದ್ಧರಿಸುವ
ಕುಲೋದ್ಧಾರಿಣಿ//

ದ್ವಿತೀಯ ಮಲ್ಲಿಗೆ ಪುಷ್ಪ
ಅರ್ಪಿಸುವೆ ಅಮ್ಮಾ
ನಿನ್ನ ಕೃಪೆಯ ಕರುಣೆ
ತೋರಿಸು ನನ್ನಮ್ಮಾ//

ಸೌ. ಅನ್ನಪೂರ್ಣ ಸು ಸಕ್ರೋಜಿ, ಪುಣೆ