ದಸರಾ ಕರ್ನಾಟಕದ ನಾಡಿನ ಹಬ್ಬವು
ಎಲ್ಲೆಡೆ ವಿಜಯ ದಶಮಿಯ ಸಂಭ್ರಮವು
ಬಂದಿದೆ ನವರಾತ್ರಿಗಳ ವಿಶೇಷ ಕ್ಷಣವು
ಕೈಬೀಸಿ ಕರೆಯುತ್ತಿದೆ ಮೈಸೂರು ನಗರವು

ಚಾಮುಂಡಿ ದೇವಿಯ ಮೂರ್ತಿ ಮೆರವಣಿಗೆಯು
ಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯು
ಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯು
ನೋಡ ಬನ್ನಿರಿ ಸಾಂಸ್ಕೃತಿಕ ನಗರಿಯು

ಒಳ್ಳೆಯ ವಿಜಯವನ್ನು ಗುರುತಿಸುವ ದಿನವು
ನಡೆಯಲಿದೆ ಜಂಬೂ ಸವಾರಿಯ ಯಾತ್ರೆಯು
ಮಲ್ಲಗಂಬ ಕುಸ್ತಿಯ ರೋಮಾಂಚನದ ದಸರೆಯು
ಕಾಪಾಡಲಿ ಎಲ್ಲರನು ಶಕ್ತಿ ದೇವತೆಯು

ಮೈಸೂರು ದಸರಾ ಸಂಭ್ರಮ ಸುಂದರ
ಒಂಬತ್ತು ದಿನವೂ ವಿಶೇಷ ಸಡಗರ
ಮೈಸೂರ ಪಾಕ ತಿನ್ನಿರಿ ರುಚಿಕರ
ಕೂಗಿ ಹೇಳಿ ಚಾಮುಂಡಿಗೆ ಜೈಕಾರ

ವಿಜಯನಗರ ಅರಸರ ಕಾಲದಲ್ಲಿ ಆರಂಭವು
ರಾಜ ದರ್ಬಾರು ಒಳಗೊಂಡಿರುವ ಉತ್ಸವವು
ಐತಿಹಾಸಿಕ ದಿನಗಳ ನೆನಪಿನ ಹಬ್ಬವು
ಚಿನ್ನದ ಅಂಬಾರಿಯಿಂದ ಜಗತ್ಪ್ರಸಿದ್ಧಿಯು

ಮಹಿಷಾಸುರ ರಾಕ್ಷಸನ ಸಂಹಾರವ ಅರಿಯಿರಿ
ಅರಮನೆಯ ಸಂಪೂರ್ಣ ಮಾಹಿತಿ ತಿಳಿಯಿರಿ
ಆಯುಧ ಪೂಜೆಯ ಖುಷಿಯಲ್ಲಿ ಮಾಡಿರಿ
ಬನ್ನಿಕೊಟ್ಟು ಬಂಗಾರದ ಹಾಗೆ ಬಾಳಿರಿ

ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು, ಬಾಗಲಕೋಟ

  • ಮಕ್ಕಳಿಗಾಗಿ ಪದ್ಯ

ಒಂದು ಎರಡು
ಮನೆಗೆ ಹೊರಡು
ಎರಡು ಮೂರು
ಓದಲು ತಯಾರು
ಮೂರು ನಾಲ್ಕು
ಗಣಿತದ ಲೆಕ್ಕ ಹಾಕು
ನಾಲ್ಕು ಐದು
ಕನ್ನಡ ಓದು
ಐದು ಆರು
ಇಂಗ್ಲಿಷ್ ಬರೆ ಜೋರು
ಆರು ಏಳು
ಹಿಂದಿ ಕಂಠಪಾಠ ಹೇಳು
ಏಳು ಎಂಟು
ಇರಲಿ ಸಮಾಜದ ನಂಟು
ಎಂಟು ಒಂಭತ್ತು
ವಿಜ್ಞಾನ ನಿಮಗೆಷ್ಟು ಗೊತ್ತು
ಒಂಭತ್ತು ಹತ್ತು ಹೀಗಿತ್ತು
ನಿತ್ಯ ಶಾಲೆಯ ಬಸ್ಸು ನೀ ಹತ್ತು

ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು, ಬಾಗಲಕೋಟ

  • ವಿಘ್ನ ನಿವಾರಕ ವಿನಾಯಕನು

ಭಾದ್ರಪದ ಮಾಸದ ಗಣೇಶ ಚೌತಿಯು
ವಿನಾಯಕನಿಗೆ ವಾಹನ ಚಿಕ್ಕ ಇಲಿಯು
ಬಹಳ ಪ್ರಸಿದ್ಧಿ ಗಣೇಶನ ಬುದ್ಧಿವಂತಿಕೆಯು
ದೇವರಿಂದ ಜನ್ಮ ಪಡೆದ ನಮ್ಮ ಗಣಪತಿಯು

ಶಿವ ಪಾರ್ವತಿಯರ ಪ್ರೀತಿಯ ಸುತನು
ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು
ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು
ಸದಾ ಕಾಪಾಡುವ ದೇವಲೋಕದ ದೈವ ನೀನು

ಮತ್ತೆ ಬಂದಿದೆ ಸಡಗರದ ಗಣೇಶ ಉತ್ಸವವು
ತುಂಬಿದೆ ಹರ್ಷ ಭೂಮಿಯ ತುಂಬೆಲ್ಲವು
ನಿತ್ಯ ಕಡಬು ಹೋಳಿಗೆಯ ನೈವೇದ್ಯವು
ಸ್ಥಾಪಿಸಿ ಮಣ್ಣಿನ ಗಣಪತಿಯ ಪೂಜಿಸೋಣ ನಾವು ನೀವು

ಸಿಡಿಸದಿರಿ ಜೋರಾಗಿ ಎಲ್ಲೆಡೆ ಪಟಾಕಿಗಳನ್ನು
ಗೊತ್ತಿದ್ದರೂ ನಾಶಮಾಡಬೇಡಿ ಪ್ರಕೃತಿಯ ಸೊಬಗನ್ನು
ಗಣೇಶ ವಿಸರ್ಜನೆಯಲಿ ಮರೆಯದಿರಿ ಪ್ರತಿಜ್ಞೆಯನ್ನು
ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ದೇವಾ ನಿಮಗಿನ್ನು

ಸಕಲ ಕಾರ್ಯಗಳಿಗೂ ಮುಂದಿರುವ ಸಿದ್ಧಿವಿನಾಯಕನೇ
ನಂಬಿದ ಪಾಲಿನ ಭಕ್ತರ ಕೈ ಬಿಡದ ಮೂಷಿಕವಾಹನನೇ
ಭೂಮಿಯ ಮೇಲಿನ ಎಲ್ಲರ ಕಷ್ಟ ನಿವಾರಿಸುವ ವಕ್ರತುಂಡನೇ
ಭೂಲೋಕದ ಉದ್ಧಾರಕ್ಕಾಗಿ ಜನಿಸಿದ ಲಂಬೋದರನೇ

ಗಣಪತಿಯು ಬಂದು ನಮಗೆಲ್ಲ ಹರ್ಷವ ತಂದನು
ನಲಿಯುತ ಕುಣಿಯುತ ನಾನಾವೇಷದಿ ಬಂದನು
ಗರಿಕೆಯ ಹುಲ್ಲಿನಲಿ ಸಕಲರ ಪ್ರೀತಿಯ ಕಂಡನು
ಬೇಡಿದ ವರವನು ಭಕ್ತರಿಗೆ ದಯಪಾಲಿಸಿಹನು

ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು, ಬಾಗಲಕೋಟ