ಬಾಪು-ಪಾಪು: ಸತ್ಯ ಹರಿಶ್ಚಂದ್ರನಂತಾಗುವೆ

ಒಂದು ರವಿವಾರದ ಮಧ್ಯಾಹ್ನದ ಹೊತ್ತು ಮನೆ ಜಗಲಿಯಲ್ಲಿ ಕುಳಿತಿದ್ದ ಮೋಹನನು ಕಣ್ಣೀರು ಸುರಿಸುತ್ತಿರುವುದನ್ನು ಗಮನಿಸಿದ ಅವನ ಅಕ್ಕ ರಲಿತ, ತಾಯಿಯನ್ನು ಕರೆದುಕೊಂಡು ಬಂದಿದ್ದಳು. ಮಗನ ಬಳಿಗೆ ಹೋದ ತಾಯಿ, “ಏನಾಯಿತು ಮೋನೂ? ಎಂದು ಪ್ರೀತಿಯಿಂದ ಪ್ರಶ್ನಿಸಿದ್ದರು. ಆದರೆ, ತನ್ನ ಅಳುವಿನ ಕಾರಣವನ್ನು ಹೇಳಲು ಮೋನುವಿಗೆ ನಾಚಿಕೆಯಾಗಿತ್ತು.

  • ನಡೆದದ್ದು ಇಷ್ಟು:
    ಹಿಂದಿನ ದಿನದ ಸಂಜೆ, ಮೋಹನನು ಶಾಲೆಯ ಪಕ್ಕದ ಮೈದಾನದಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ‘ಸತ್ಯ ಹರಿಶ್ಚಂದ್ರ’ ನಾಟಕ ನೋಡಲು ಹೋಗಿದ್ದನು.
    ಎಂತಹಾ ಕಷ್ಟ ಎದುರಾದರೂ
    ಸತ್ಯವನ್ನಲ್ಲದೆ ಬೇರೇನನ್ನೂ ಹೇಳಲಾರನೆಂದು ಜಗತ್ಪಸಿದ್ಧನಾಗಿದ್ದವನು ಮಹಾರಾಜ ಸತ್ಯ ಹರಿಶ್ಚಂದ್ರ. ಅವನನ್ನು ಪರೀಕ್ಷೆ ಮಾಡುವ ಉದ್ದೇಶದಿಂದ ವಿಶ್ವಾಮಿತ್ರನೆಂಬ ಮುನಿಯು ಹರಿಶ್ಚಂದ್ರನಿಗೆ ಬಗೆ ಬಗೆಯಲ್ಲಿ ಕಾಡಿಸಿ, ಅವನಿಂದ ಒಂದು ಸುಳ್ಳನ್ನಾದರೂ ಹೇಳಿಸಲು ಯತ್ನಿಸುತ್ತಿದ್ದನು. ಆದರೆ, ಎಲ್ಲ ಕಷ್ಟಗಳನ್ನೂ ಧೈರ್ಯದಿಂದ ಎದುರಿಸುವ ಹರಿಶ್ಚಂದ್ರನನ್ನು ರಾಜಾ ನೋಡುತ್ತಿರುವುದು ಮೆಚ್ಚಿಕೊಳ್ಳುತ್ತಲೇ, ತಾನು ನಾಟಕವೆಂಬುದನ್ನೂ ಮರೆತ ಮೋಹನನು ದುಃಖದಿಂದ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದನು.
  • ಮರುದಿನವೂ ನಾಟಕದ ಗುಂಗಿನಲ್ಲೇ ಇದ್ದ ಮೋಹನನು ನಾಟಕದ ದೃಶ್ಯಗಳನ್ನು ನೆನಪಿಸಿಕೊಳ್ಳುತ್ತ, ತಾನು ಕೂಡಾ ರಾಜಾ ಹರಿಶ್ಚಂದ್ರನಂತೆ ಸತ್ಯಸಂಧನಾಗಬೇಕೆಂದು ಯೋಚಿಸುತ್ತಾ ಅಂಗಳದಲ್ಲಿ ಕುಳಿತಿದ್ದನು. ಅವನ ಅರಿವಿಲ್ಲದೆ ಸುರಿದ ಕಣ್ಣೀರನ್ನು ತಪ್ಪಾಗಿ ತಿಳಿದ ರಲಿತಕ್ಕ, ಮನೆಯವರೆಲ್ಲ ಹೊರಗೆ ಬಂದು ಅಳುವ ಮೋಹನನನ್ನು ನೋಡುವಂತೆ ಮಾಡಿಬಿಟ್ಟಿದ್ದಳು.
    ಮೋಹನನ ಅಳುವಿನ ಕಾರಣವನ್ನು ತಿಳಿದ ಹಿರಿಯವರೆಲ್ಲ ಅವನ ಬಗ್ಗೆ ಹೆಮ್ಮೆಪಟ್ಟರು.
    ತಾಯಿಯು ತನ್ನ ಮಗನ ತಲೆಯನ್ನು ಅಭಿಮಾನದಿಂದ ಸವರುತ್ತಾ, ‘ಸತ್ಯ ಹರಿಶ್ಚಂದ್ರನಂತೆ ಆಗುವ ನಿನ್ನ ಆಸೆ ನೆರವೇರಲಿ’ ಎಂದು ಆಶೀರ್ವಾದ ಮಾಡಿದ್ದರು.
  • 1. ಮದುವೆಯೂ ಆಯಿತು

ಆ ದಿನಗಳಲ್ಲಿ ದೇಶಾದ್ಯಂತ ‘ಬಾಲ್ಯವಿವಾಹ’ವೆಂಬ ಪದ್ಧತಿ ಆಚರಣೆಯಲ್ಲಿತ್ತು.
ಮಕ್ಕಳು ಆಟವಾಡುವ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಿಸುವುದು ಒಳ್ಳೆಯದು ಎಂಬುದಾಗಿ ನಂಬಿದ್ದ ಹಿರಿಯರು, ಅಂತಹ ಮದುವೆ ಸಮಾರಂಭಗಳನ್ನು ಬಹಳ ಅದ್ಧೂರಿಯಾಗಿಯೇ ನಡೆಸುತ್ತಿದ್ದರು. ಆಗ ದೇಶವನ್ನಾಳುತ್ತಿದ್ದ ಬ್ರಿಟಿಷರ ಕಾನೂನುಗಳಂತೆ ಬಾಲ್ಯವಿವಾಹ ಪದ್ಧತಿಯು ಅಪರಾಧವಾಗಿದ್ದಿರಲಿಲ್ಲ. ದೊಡ್ಡ ದೊಡ್ಡ ಸಿರಿವಂತರ ಕುಟುಂಬದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹದ ಸಂಭ್ರಮಗಳಲ್ಲಿ ಸರಕಾರದ ಹಿರಿಯ ಅಧಿಕಾರಿಗಳೂ ಭಾಗವಹಿಸಿ ಶುಭ ಹಾರೈಸುತ್ತಿದ್ದರು.
ಮೋಹನದಾಸನಿಗಿಂತ ಒಂಬತ್ತು ವರ್ಷ ಹಿರಿಯನಾಗಿದ್ದ ಅಣ್ಣ ಲಕ್ಷ್ಮೀದಾಸನಿಗೆ ಅದಾಗಲೇ ಮದುವೆಯಾಗಿತ್ತು.
ಮೋಹನನಿಗಿಂತ ಎರಡು ವರ್ಷ ಹಿರಿಯವನಾಗಿದ್ದ ಸಣ್ಣಣ್ಣ ಕರ್ಸನ್ ದಾಸನಿಗೂ, ಒ೦ದು ವರ್ಷ ಹಿರಿಯವನಾಗಿದ್ದ ನೆಂಟರ ಹುಡುಗನೊಬ್ಬನಿಗೂ ಜೊತೆಯಲ್ಲೇ ಮದುವೆ ನಿಶ್ಚಯವಾಗಿತ್ತು.
ಎರಡು ಮದುವೆಗಳ ಜೊತೆಯಲ್ಲೇ ಮೋಹನನಿಗೂ ಮದುವೆ ಮಾಡಿದರೆ, ವೆಚ್ಚದಲ್ಲಿ ಉಳಿತಾಯವಾಗುತ್ತದೆ ಎಂಬ ಯೋಚನೆ ಯಿಂದ, ಮತ್ತೊಬ್ಬಳು ಹುಡುಗಿಯನ್ನು ಹುಡುಕಿ, ಮೋಹನನಿಗೂ ಮದುವೆ ನಿಶ್ಚಯ ಮಾಡಿದ್ದರು.

  • 2. ಜನ್ಮ ಮತ್ತು ಕರ್ಮ

ಒಂದು ಮಧ್ಯಾಹ್ನ ಮೋಹನದಾಸನು ಆಟವಾಡಲೆಂದು ಶಾಲೆಯ ಬಯಲಿಗೆ ನಡೆದುಕೊಂಡು ಹೋಗುತ್ತಿದ್ದನು. ಅರ್ಧ ದಾರಿಯಲ್ಲಿದ್ದಾಗ ಮಳೆ ಸುರಿಯತೊಡಗಿದ್ದರಿಂದ ರಸ್ತೆಬದಿಯ ಅಂಗಡಿಯೊಂದರ ನಿಂತನು. ಮಳೆಯಿಂದ ತೋಯ್ಯುವುದರಿಂದ ತಪ್ಪಿಸಿಕೊಳ್ಳಬಯಸಿದ್ದ ನಾಲ್ಕು ಮಂದಿ ಹಿರಿಯರೂ ಅಲ್ಲಿ ನಿಂತಿದ್ದರು.
ಅದೇ ಹೊತ್ತಿಗೆ ಸರಿಯಾಗಿ, ಕಪ್ಪು ಬಣ್ಣದ ಯುವಕನೊಬ್ಬ ಅಲ್ಲಿಗೆ ಓಡೋಡಿ ಬಂದನು. ಆದರೆ ಅವನು ಅಂಗಡಿಯ ಮಾಡಿನ ನೆರಳಿಗೆ ಬಾರದೆ, ಸ್ವಲ್ಪವೇ ದೂರದಲ್ಲಿದ್ದ ಮರವೊಂದರ ಕೆಳಗೆ ಹೋಗಿ ನಿಂತುಕೊಂಡನು. ಅದನ್ನು ಕಂಡ ಮೋಹನದಾಸನಿಗೆ ಆಶ್ಚರ್ಯವಾಯಿತು. ತನ್ನ ಬಳಿಗೆ ಬಂದು ಮಾಡಿನ ಅಡಿಯಲ್ಲಿ ನಿಂತುಕೊಳ್ಳುವಂತೆ ಆ ಕಪ್ಪು ಯುವಕನನ್ನು ಗಟ್ಟಿ ಧ್ವನಿಯಲ್ಲಿ ಕರೆದನು. ಆದರೆ, ಆ ಯುವಕನು ಮೋಹನದಾಸನ ಮಾತನ್ನು ಕೇಳಿಯೂ ಕೇಳಿಸಿಕೊಳ್ಳದವನಂತೆ ಕಲ್ಲಿನಂತೆ ನಿಂತುಬಿಟ್ಟಿದ್ದನು.ಆಗ,
ಜೋರಾಗಿ ನಕ್ಕ ಅಂಗಡಿಯ ಮಾಲಕನು ಮೋಹನದಾಸನಿಗೆ ತಿಳಿಯಹೇಳುವಂತೆ, ‘ನೋಡು ಮಗೂ ಅದು ಅವರವರ ಕರ್ಮದ ಫಲ. ಅವನು ಪೂರ್ವಜನ್ಮದಲ್ಲಿ ಪಾಪ ಮಾಡಿದ್ದನು. ಕರ್ಮದ ಫಲವನ್ನು ತನ್ನ ಜತೆಗೆ ಹೊತ್ತುಕೊಂಡು ಬಂದು ಈ ಜನ್ಮದಲ್ಲಿ ನೀಚಕುಲದಲ್ಲಿ ಹುಟ್ಟಿದ್ದಾನೆ. ಆದ್ದರಿಂದ ಅವನಿಗೆ ನಮ್ಮಂತವರ ಜೊತೆಗೆ ನಿಲ್ಲುವ ಹಕ್ಕು ಇಲ್ಲ’ ಎಂದನು.

ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದರೆ ಈ ಜನ್ಮದಲ್ಲಿ ಮಳೆಗೆ ಒದ್ದೆಯಾಗಿ ನಿಲ್ಲಬೇಕೆನ್ನುವ ವಾದ, ಮೋಹನದಾಸನಿಗೆ ಬಹಳ ತಮಾಷೆಯಾಗಿ ಕಂಡಿತು. ಹಾಗಾದರೆ, ತಾನು ಹಿಂದಿನ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿದ್ದಿರಬೇಕು. ಆದ್ದರಿಂದ ತಾನು ಉತ್ತಮ ಕುಲದಲ್ಲಿ ಹುಟ್ಟಿರುವೆ. ಅದೇ ಕಾರಣದಿಂದ ತಾನೀಗ ಹೊರಗೆ ಹೋಗಿ ನಿಂತರೂ, ಸುರಿಯುತ್ತಿರುವ ಮಳೆ ನೀರಿಗೆ ತಾನು ಒದ್ದೆಯಾಗಬಾರದು.
ಹೀಗೆಂದು ಯೋಚಿಸಿದ ಮೋಹನದಾಸನು, ತಾನು ನಿಂತಿರುವಲ್ಲಿಂದ ಓಡಿ ಹೋಗಿ ಆ ಮರದ ಅಡಿಯಲ್ಲಿ ಯುವಕನ ಬಳಿ ನಿಂತುಬಿಟ್ಟನು. ಆದರೆ ಅವನು ನಿರೀಕ್ಷಿಸಿದಂತೆ ಮಳೆ ನಿಲ್ಲಲಿಲ್ಲ. ಪೂರ್ವಜನ್ಮದ ಪಾಪ ಪುಣ್ಯದ ಫಲಗಳು ಎಂಬ ನಂಬಿಕೆಗಳೆಲ್ಲ ಹಸಿ ಹಸಿ ಸುಳ್ಳು ಎಂಬುದು ಅವನಿಗೆ ಅರ್ಥವಾಗಿತ್ತು..

  • ವಿಶ್ವಾಸ್ ಡಿ. ಗೌಡ, ಸಕಲೇಶಪುರ