ಬಾಲ ಬಾಪು: ಉಪವಾಸದ ಬಾಲಪಾಠ

ರಾತ್ರಿಯಿಡೀ ಮಳೆ ಮಳೆ ಸುರಿದಿತ್ತು. ಮಳೆನೀರಿನಲ್ಲಿ ಆಟವಾಡುವುದೆಂದರೆ ಮೋನು ಪಾಪುವಿಗೆ ಬಹಳ ಇಷ್ಟ. ಆದರೆ, ಅವನು ನೀರಿನಲ್ಲಿ ಆಟವಾಡುತ್ತಿರುವುದು ರಂಭತೆಯ ಕಣ್ಣಿಗೇನಾದರೂ ಬಿತ್ತು ಅಂದರೆ ಮುಗಿಯಿತು.

ರಟ್ಟೆ ಹಿಡಿದು ದರದರನೆ ಎಳೆದು ಕೊಂಡು ಹೋಗಿ, ಒದ್ದೆಯಾಗಿದ್ದ ಕೈಕಾಲುಗಳನ್ನು ಒರಸಿ ಮಂಚದ ಮೇಲೆ ಮಲಗಿಸಿ ಬಾಗಿಲು ಮುಚ್ಚಿ, ಹೊರಗಿನಿಂದ ಚಿಲಕ ಹಾಕಿಬಿಡುತ್ತಿದ್ದಳು. ಇವತ್ತೂ ಹಾಗೇ ಆಯಿತು.
ಆದರೆ, ಮೋನು ಪಾಪು ಅಳಲಿಲ್ಲ; ಚೀರಾಡಲಿಲ್ಲ. ಆದರೆ, ಸಂಜೆಯ ಹೊತ್ತು ರಂಭತ್ತೆ ಲೋಟದಲ್ಲಿ ಹಾಲು ತುಂಬಿಸಿಕೊಂಡು ಕುಡಿಯೋ ಕಂದಾ, ಎನ್ನುತ್ತಾ ಹತ್ತಿರ ಬಂದಾಗ ಮಾತ್ರ ಅವರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಿ ತನ್ನ ಕೋಪವನ್ನು ತೋರಿಸಿಬಿಟ್ಟಿದ್ದ. ಮೋನು ಪಾಪು ಯಾವಾಗಲೂ ಹಾಗೆಯೇ. ತನ್ನ ಇಷ್ಟದಂತೆ ನಡೆಯದಾಗ ಅವನು ಎಂದೂ ಅಳುತ್ತಿರಲಿಲ್ಲ. ಗಲಾಟೆ ಮಾಡುತ್ತಿರಲಿಲ್ಲ. ಆ ದಿನವಿಡೀ ಉಪವಾಸ ಇದ್ದು ತನ್ನ ಪ್ರತಿಭಟನೆಯನ್ನು ತೋರಿಸುತ್ತಿದ್ದ.

  • ಎಷ್ಟೇ ಕಷ್ಟ ಬಂದರೂ ಸುಳ್ಳು ಹೇಳಲಾರೆ

ಮೋನುವಿನ ತಾಯಿ ಪುತಲೀಬಾಯಿಯವರು ಪ್ರತಿ ಮಳೆಗಾಲದ ಚಾತುರ್ಮಾಸ’ದಲ್ಲಿ ಉಪವಾಸ ವ್ರತವನ್ನು ನಿಷ್ಠೆಯಿಂದ ಆಚರಿಸುತ್ತಿದ್ದರು. ಜ್ವರ ಬಂದ ದಿನಗಳಲ್ಲೂ ಸೂರ್ಯೋದಯವನ್ನು ಕಾಣದೆ ಆಹಾರ ಮುಟ್ಟುತ್ತಿರಲಿಲ್ಲ.

ಒಂದು ದಿನ ಆಕಾಶದಲ್ಲಿ ದಟ್ಟ ಮೋಡಗಳು ತೇಲುತ್ತಿದ್ದವು. ಸೂರ್ಯೋದಯದ ಸಮಯವಾಗಿದ್ದರೂ ಸೂರ್ಯ ಕಾಣಿಸುತ್ತಿರಲಿಲ್ಲ. ತಾಯಿಯನ್ನು ಬೇಗ ಊಟ ಮಾಡಿಸುವ ಒಂದೇ ಆಸೆಯಿಂದ ಮೋನು ಪಾಪು ಉಪಾಯ ಮಾಡಿದ.

ತಾಯಿಗೆ ಕೇಳಿಸುವಂತೆ ಗಟ್ಟಿಯಾಗಿ, ಓ ಸೂರ್ಯ ಕಾಣಿಸಿದ ! ಸೂರ್ಯ ಉದಯಿಸಿದ !’ ಎಂದು ಸುಳ್ಳೇ ಸುಳ್ಳು ಕಿರುಚುತ್ತಾ ಒಳಕೋಣೆಗೆ ಧಾವಿಸಿ ಬಂದ, ಆದರೆ ಮಗ ಸುಳ್ಳು ಹೇಳುತ್ತಿದಾನೆಂಬುದು ತಾಯಿ ತಿಳಿದುಬಿಟ್ಟಿತ್ತು,ಮಳೆಗಾಲದ ದಿನಗಳಲ್ಲಿ, ಕಪ್ಪು ಮೋಡಗಳು ಕವಿದಿರುವಾಗ ಸೂರ್ಯ ಕಾಣಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಮಗನಿಗೆ ಬುದ್ಧಿ ಕಲಿಸಲು ಅವರೂ ಒಂದು ಉಪಾಯ ಮಾಡಿದರು.

ತಮ್ಮ ಬಲಗೈಯನ್ನು ಮುಂದಕ್ಕೆ ಚಾಚಿ ಹೇಳಿದರು, ‘ಮೋನು, ನನ್ನ ಬಲಗೈಯನ್ನು ಚಾಚಿಕೊಂಡು ಕಣ್ಣು ನಾನು ಮುಚ್ಚಿಕೊಳ್ಳುವೆ. ಸೂರ್ಯ ಉದಯಿಸಿದ್ದನ್ನು ನೀನು ನೋಡಿದ್ದು ನಿಜವಾಗಿದ್ದರೆ ನನ್ನ ಕೈಯ್ಯನ್ನು ನಿನ್ನ ಬಲಗೈಯಲ್ಲಿ ಮುಟ್ಟಬೇಕು. ಸುಳ್ಳು ಹೇಳಿದ್ದರೆ ಎಡಗೈಯ್ಯಲ್ಲಿ ಮುಟ್ಟಬೇಕು. ನೀನು ಹೇಳಿದ್ದು ನಿಜವೋ ಸುಳ್ಳೋ ಎಂಬುದು ಕಣ್ಣು ಮುಚ್ಚಿಕೊಂಡಿರುವ ನನಗೆ ಕಾಣಿಸುವುದಿಲ್ಲ’ ಎಂದು ಹೇಳಿ ಕಣ್ಣು ಮುಚ್ಚಿಕೊಂಡರು.

ಮೋನು ಪಾಪುವಿಗೆ ತನ್ನ ತಪ್ಪಿನ ಅರಿವಾಗಿತ್ತು. ತಾಯಿಯ ಕೈ ಮುಟ್ಟಲು ಭಯವಾಯಿತು. ಬಹಳ ಹೊತ್ತಾದರೂ ಮೋನು ಪಾಪು ತಮ್ಮ ಕೈಯ್ಯನ್ನು
ಮುಟ್ಟದಿದ್ದಾಗ ತಾಯಿಗೆ ಸಂತೋಷವಾಯಿತು. ತಪ್ಪನ್ನು ಒಪ್ಪಿಕೊಂಡ ಮಗನ ಬಗ್ಗೆ ಹೆಮ್ಮೆ ಅನ್ನಿಸಿತು.

ಮುಚ್ಚಿದ್ದ ತಮ್ಮ ಕಣ್ಣುಗಳನ್ನು ತೆರೆದು, ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಮಗು’ ಎಂದು ಹೇಳಿ ಪಾಪುವನ್ನು ಎದೆಗೆ ಅಪ್ಪಿಕೊಂಡರು. ಮೋನುಪಾಪ ಅಂದೆ ಶಪಥ ಮಾಡಿಬಿಟ್ಟಿದ್ದನು.
ಎಷ್ಟೇ ಕಷ್ಟ ಎದುರಾದರೂ ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ.

  • ಪರೀಕ್ಷೆಯಲ್ಲಿ ನಕಲು ಮಾಡಲಾರೆ

ಮೋಹನನು ರಾಜಕೋಟೆಯಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲೊಮ್ಮೆ ಗೈಲ್ಸ್ ಶಿಕ್ಷಣಾಧಿಕಾರಿಯು ಶಾಲೆಯ ತಪಾಸಣೆಗೆಂದು ಬಂದಿದ್ದರು. ಎಂಬ ಬ್ರಿಟಿಷ್ ವಿದ್ಯಾರ್ಥಿಗಳ ಅಕ್ಷರ ಜ್ಞಾನವನ್ನು ಪರಿಶೀಲಿಸುವ ಸಲುವಾಗಿ ಐದು ಇಂಗ್ಲಿಷ್ ಪದಗಳನ್ನು ಹೇಳಿ, ತಪ್ಪಿಲ್ಲದೆ ಬರೆಯುವಂತೆ ಸೂಚಿಸಿದ್ದರು.

ಮೋಹನನಿಗೆ ಕೆಟಲ್ (KETTLE) ಎಂಬ ಇಂಗ್ಲಿಷ್ ಪದವನ್ನು ಸರಿಯಾಗಿ ಬರೆಯಲು ಬರುತ್ತಿದ್ದರೂ, ಬರೆಯುವಾಗ ಒಂದು ಅಕ್ಷರವನ್ನು ತಪ್ಪಾಗಿ ಬರೆದುಬಿಟ್ಟಿದ್ದನು. ಅವನು ತಪ್ಪಾಗಿ ಬರೆದಿರುವುದು ತರಗತಿಯ ಶಿಕ್ಷಕರ ಕಣ್ಣಿಗೆ ಬಿದ್ದಿತ್ತು. ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಸಿರುವೆ ಎಂಬುದಾಗಿ ಆ ಬ್ರಿಟಿಷ್ ಶಿಕ್ಷಣಾಧಿಕಾರಿಯವರಿಗೆ ಗೊತ್ತು ಮಾಡಿ ಮೆಚ್ಚುಗೆ ಗಳಿಸಬಯಸಿದ್ದರು ಆ ಶಿಕ್ಷಕರು, ಅವರು ಮೋಹನನ ಬಳಿಗೆ ಬಂದು ನಿಂತರು. ತಮ್ಮ ಕಾಲಿನ ಬೆರಳುಗಳ ತುದಿಯಿಂದ ಮೋಹನನ ಕಾಲನ್ನು ತಡವಿ, ಪಕ್ಕದ ಹುಡುಗನ ಬರಹವನ್ನು ನೋಡಿ ತಪ್ಪಾಗಿ ಬರೆದ ಪದವನ್ನು ತಿದ್ದಿಕೊಳ್ಳುವಂತೆ ಕಣ್ಣುಗಳಲ್ಲಿ- ಸೂಚಿಸಿದ್ದರು.

ಆದರೆ, ಬೇರೆಯವರ ಉತ್ತರಪತ್ರಿಕೆಯಿಂದ ನಕಲು ಮಾಡಲು ಮೋಹನನು ಒಪ್ಪಲಿಲ್ಲ. ತಮ್ಮ ಸಲಹೆಯನ್ನು ತಿರಸ್ಕರಿಸಿದ ಮೋಹನನ ಬಗ್ಗೆ ಶಿಕ್ಷಕರಿಗೆ ಬಹಳ ಸಿಟ್ಟು ಬಂದಿತ್ತು.ಪರೀಕ್ಷೆ ಮುಗಿದ ಬಳಿಕ ಮೋಹನನನ್ನು ಕರೆಸಿಕೊಂಡು ಗದರಿಸಿದ್ದರು. ಆದರೆ, ಮೋಹನನಿಗೆ ಮಾತ್ರ ಶಿಕ್ಷಕರ ಮೇಲಿನ ಗೌರವ ಕಡಮೆಯಾಗಲಿಲ್ಲ. ಯಾಕೆಂದರೆ, ‘ಹಿರಿಯರ ಒಳ್ಳೆಯತನವನ್ನು ಮಾತ್ರ ಕಲಿಯಬೇಕೇ ಹೊರತು, ಅವರ ಗುಣಾವಗುಣಗಳನ್ನು ಅಲ್ಲ’ ಎಂದು ತಾಯಿ ಹೇಳುತ್ತಿದ್ದ ಮಾತನ್ನು ಮೋಹನನು ಚಾಚು ತಪ್ಪದೆ ಪಾಲಿಸುತ್ತಿದ್ದನು.

ವಿಶ್ವಾಸ್ ಡಿ. ಗೌಡ, ಸಕಲೇಶಪುರ