ತಪ್ಪುಗಳಿಗೆ ಪಶ್ಚಾತಾಪವೇ ಪರಿವರ್ತನೆಯ ಮಾರ್ಗ
“””‘”””””'”””””
ಯಾರೇ ವ್ಯಕ್ತಿಯಾಗಲಿ ಅವನ ವಿವೇಕ ಸಜ್ಜನಿಕೆ ಸೇವಾಭಾವದಂತ ವ್ಯಕ್ತಿತ್ವದಿಂದಲೇ ಸಾಮಾಜಿಕವಾಗಿ ರಾಜಕೀಯವಾಗಿ, ಕೌಟುಂಬಿಕವಾಗಿ ಜನಮನದಲ್ಲಿ ಗೌರವಕ್ಕೂ ಅರ್ಹನಾಗುತ್ತಾನೆ.“ತಪ್ಪು ಮಾಡದ ಮನುಷ್ಯನಿಲ್ಲ ತಿದ್ದಿ ಬುದ್ದಿ ಹೇಳದ ಗುರುವಿಲ್ಲ” ನಡೆಯುವಾಗ ಎಡಹುವುದು ಸಹಜ. ಮತ್ತೆ ಸಾವರಿಸಿಕೊಂಡು ಸರಿಯಾದ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತೇವೆ. ತಪ್ಪಿನ ಅರಿವಿನಿಂದಲೇ ವಿವೇಕದಿಂದ ಪರಿಪೂರ್ಣರಾಗಿ ಬೆಳೆಯಲು ಸಾಧ್ಯ.
ಆತ್ಮಸಾಕ್ಷಿಗಂಜಿ ನಮ್ಮದೋಷದ ತಪ್ಪುಗಳನ್ನು ತಿದ್ದಿ ನಡೆಯುವುದೇ ಸನ್ಮಾರ್ಗ. ತಪ್ಪುಗಳಲ್ಲಿ ಎರಡು ವಿಧ. ಗೊತ್ತಿಲ್ಲದೆ ತಪ್ಪು ಮಾಡುವುದು. ಇನ್ನೊಂದು ಅಪರಾಧವೆಂದು ಗೊತ್ತಿದ್ದು ತಪ್ಪು ಮಾಡುವುದು. ಗೊತ್ತಿದ್ದು ಮಾಡುವ ಅಪರಾಧ ತಪ್ಪುಗಳನ್ನು ದೇವರು ಕ್ಷಮಿಸುವುದಿಲ್ಲ. ಸುಳ್ಳನ್ನು ಹೇಳುವುದು ಕೂಡ ತಪ್ಪೇ. ಸುಳ್ಳನ್ನೇ ಹೇಳುತ್ತಾ ತಪ್ಪುಗಳನ್ನೇ ಮಾಡುತ್ತಾ ತನ್ನನ್ನು ತಾನೇ ಸರಿ ಎಂದು ಸಮರ್ಥಿಸಿಕೊಳ್ಳುವುದು ಮೂರ್ಖರ ಲಕ್ಷಣ. ಜೀವನದ ಅನುಭವಗಳಲ್ಲಿ ನಾವು ಕಲಿಯುವ ಪಾಠಗಳೇ ನಮ್ಮ ಅರಿವಿಗೆ ಮೂಲ. ತಪ್ಪುಎಂದು ಗೊತ್ತಾದಾಗಲೇ ಪ್ರಾಮಾಣಿಕವಾಗಿ ನಡೆ,ನುಡಿಯನ್ನು ತಿದ್ದಿ ಪ್ರಾಮಾಣಿಕವಾಗಿ ಮುನ್ನಡೆಯಲು ಸಾಧ್ಯ.ಮನಸ್ಸೆಂಬುದು ಬಹಳ ವೇಗವಾಗಿ ಎತ್ತೆತ್ತಲೋ ಓಡುತ್ತಿರುತ್ತದೆ. ಹಲವರಿಗೆ ತಮ್ಮ ತಪ್ಪು ಒಪ್ಪುಗಳ ವಿವೇಚನೆ ಮಾಡುವಷ್ಟು ವ್ಯವಧಾನವಿರುವುದಿಲ್ಲ. ಜ್ಞಾನಿಗಳಾದವರು ತಮ್ಮ ತಪ್ಪುಗಳನ್ನು ಅರಿತು ಮುನ್ನಡೆಯುತ್ತಾರೆ. ಬೇರೆಯವರ ತಪ್ಪನ್ನು ತಿದ್ದಿ ಬುದ್ದಿ ಹೇಳುವ ಅರ್ಹತೆ ಉಳ್ಳವರಾಗಿರುತ್ತಾರೆ. ಮಾನವನ ಆತ್ಮೋದ್ಧಾರ ಆಗಬೇಕೆಂದರೆ ಸಾಮಾಜಿಕ ಕಲಹಗಳು ವೈರತ್ವವನ್ನು ತೊರೆದು ಜೀವನವು ಆಧ್ಯಾತ್ಮ ವಿಕಾಸಪಥದ ತಳಹದಿಯಲ್ಲಿ ಸಾಗಬೇಕು.
“ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದು ಬಸವಣ್ಣನವರು ಹೇಳಿದ್ದಾರೆ”ಮೊದಲು ನಾವು ನಮ್ಮ ಅಂತರಂಗವನ್ನು ಶುದ್ಧೀಕರಿಸಿಕೊಳ್ಳಬೇಕು.
ನಮ್ಮ ಭಾರತದ ಸ್ವಾತಂತ್ರದ ಹರಿಕಾರರಾದ ಮಹಾತ್ಮ ಗಾಂಧಜೀಯವರು ಕೂಡ ಅವರ ಚಿಕ್ಕಪ್ಪ ಬಿಡಿ ಸಿಗರೇಟು ಸೇರುತ್ತಿರುವುದನ್ನು ನೋಡಿ ಕುತೂಹಲದಿಂದ ಅವರನ್ನು ಅನುಕರಣೆ ಮಾಡಲು ಹೊರಟರಂತೆ. ಅವರದೇ ಸಂಬಂಧಿಕ ಸ್ನೇಹಿತನೂಡನೆ ಸೇರಿ ಬಿದ್ದಿರುವ ಬೀಡಿ ತುಂಡುಗಳನ್ನು ಸೇದಲು ಆರಂಭಿಸಿದರಂತೆ. ಶಾಲೆಯಲ್ಲಿ ಪೆನ್ಸಿಲ್ ಕದ್ದು ಸಿಕ್ಕಿಬಿದ್ದರಂತೆ. ಮನೆಯ ಆಳಿನ ಜೇಬಿನಿಂದ ನಾಣ್ಯಗಳನ್ನು ಕದಿಯುತ್ತಿದ್ದರಂತೆ. ಕೆಟ್ಟ ಸ್ನೇಹಿತರ ಸಹವಾಸದಿಂದ ಕದ್ದು ಮುಚ್ಚಿ ಮಾಂಸಹಾರವನ್ನು ಸೇವಿಸಿದ್ದರಂತೆ. ಗಾಂಧಿಜೀಯವರ ತಂದೆ ಸಂಸ್ಕಾರವಂತರಾಗಿದ್ದರು.ಯಾವ ಕೆಟ್ಟ ಹವ್ಯಾಸಕ್ಕೂ ಅಂಟಿದವರಲ್ಲ. ಗಾಂಧಿಜೀ 14 ,15 ವರ್ಷದವರಿದ್ದಾಗ ಈ ರೀತಿಯ ತಪ್ಪುಗಳನ್ನು ಮಾಡುತ್ತಿದ್ದರಂತೆ, ಎಂಬುದು ಅವರ ಆತ್ಮಕಥೆಯಲ್ಲಿ ಕಂಡುಬರುತ್ತದೆ. ಹೀಗೆ ಅವರು ತಪ್ಪುಗಳನ್ನೇ ಮಾಡುತ್ತಾ ತಾನು ಮಾಡುತ್ತಿರುವುದು ತಪ್ಪು ಎಂದು ಅರಿವಾದಾಗ ಪಶ್ಚಾತಾಪದಿಂದ ನೊಂದರಂತೆ. ತಾವು ಮಾಡಿದ ಹಲವು ತಪ್ಪುಗಳನ್ನು ಒಂದು ಕಾಗದದಲ್ಲಿ ಬರೆದು ತಂದೆಯ ಬಳಿ ಕೊಟ್ಟು ದೀನರಾಗಿ ಅವರ ಮುಂದೆ ಕುಳಿತರಂತೆ. ಅದನ್ನು ಬಿಡಿಸಿ ಓದಿದ ಅವರ ತಂದೆಯ ಒಂದೆರಡು ಹನಿ ಕಣ್ಣೀರು ಕಾಗದದ ಮೇಲೆ ಬಿದ್ದುದ್ದನ್ನು ಗಾಂಧಿಜೀ ನೋಡಿದರಂತೆ. ಆ ಒಂದು ಚಿತ್ರಣ ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿ ಗಾಂಧಿಜೀಯವರ ವ್ಯಕ್ತಿತ್ವವರಳಿ ಪರಿವರ್ತನೆಯ ಮಾರ್ಗದಲ್ಲಿ ಅವರ ಜೀವನದ ದಿಕ್ಕನ್ನೇ ಸತ್ಯ ಸನ್ಮಾರ್ಗದಡೆಗೆ ಪ್ರೇರೇಪಿಸಿತು, ಎಂಬ ಉಲ್ಲೇಖವಿದೆ. ಶಾಂತಿ. ಅಹಿಂಸೆಗಳ ನ್ಯಾಯಬದ್ಧ ತತ್ವವನ್ನು ಅರುಹಿ ಸತ್ಯದ ದಾರಿಯಲ್ಲಿ ನಡೆದು ವಿದೇಶಿಯರ ಮನಸ್ಸನ್ನು ಮೌನವಾಗೆ ಗೆದ್ದರು ಗಾಂಧಿಜೀ. “ದೇಶ ಸೇವೆಯೇ ಈಶ ಸೇವೆ” ಎಂಬುದು ಗಾಂಧೀಜಿಯವರ
ತತ್ವವಾಗಿತ್ತು.
ಅಂಗೂಲಿಮಾಲನೆಂಬ ದರೋಡೆಕೋರ ಒಮ್ಮೆ ಬುದ್ಧ ದಾರಿಯಲ್ಲಿ ನಡೆದು ಹೋಗುವಾಗ ಅಡ್ಡಗಟ್ಟಿ ದೋಚಲು ಬಂದಾಗ ದುಷ್ಟತನವನ್ನು ತೊರೆದು ಪ್ರಾಮಾಣಿಕವಾಗಿ ಜೀವಿಸುವಂತೆ ಬುದ್ಧನು ಉಪದೇಶ ನೀಡಿದ. ಬುದ್ಧನ ಶಾಂತಿಯತೆ, ನೀತಿ ಮಾತುಗಳಿಂದ ಅವನ ಮನ ಪರಿವರ್ತನೆಯಾಗಿ ಅಂಗೂಲಿಮಾಲ ಬುದ್ಧನ ಅನುಯಾಯಿಯಾದನು ಎಂಬ ಉಲ್ಲೇಖವಿದೆ. ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದ ಬೇಡನಿಗೆ ಒಮ್ಮೆ ನಾರದರು ಎದುರಾದರು.ನಾನೂಬ್ಬ ಸನ್ಯಾಸಿ.ಕೊಡಲು ನನ್ನ ಬಳಿ ಏನು ಇಲ್ಲ.ನಿನ್ನ ಈ ಕ್ರೂರತನವನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸು ಎಂದರು. ಅಂದಿನಿಂದ ಬೇಡನ ಮನಸ್ಸು ಪರಿವರ್ತಿತವಾಗಿ ರಾಮಾಯಣದಂತ ದಿವ್ಯ ಮಹಾ ಕಾವ್ಯವನ್ನೇ ರಚಿಸಿ ವಾಲ್ಮೀಕಿ ಎಂದೇ ಪ್ರಖ್ಯಾತನಾದನು. ಒಬ್ಬ ಶ್ರೇಷ್ಠ ಗುರುವಿನ ಮಾರ್ಗದರ್ಶನದಿಂದ ಮೂರ್ಖನು ಕೂಡ ಪರಿಪೂರ್ಣ ಜ್ಞಾನಿಯಾಗಬಲ್ಲ, ಎಂಬುದಕ್ಕೆ ಮೇಲಿನ ಸಾರಾಂಶ ನಿದರ್ಶನವಾಗಿದೆ. ಕ್ಷಮಿಸುವುದು ದೊಡ್ಡವರ ವ್ಯಕ್ತಿತ್ವಕ್ಕೆ ಘನತೆಯನ್ನು ನೀಡುತ್ತದೆ.
ಯಾವಾಗಲೂ ಸುಳ್ಳು ತಪ್ಪುಗಳು,ಅಪರಾಧವನ್ನೆ ಮಾಡುತ್ತಾ ಇದ್ದಾಗ ಪಾಪಪ್ರಜ್ಞೆ ಸದಾ ನೆರಳಿನಂತೆ ಕಾಡುತ್ತಿರುತ್ತದೆ. ಆದರೆ ಮತ್ತೆ ತಪ್ಪುಗಳು ಜೀವನದಲ್ಲಿ ಪುನರಾವರ್ತನೆ ಆಗದಂತೆ ಸಂಯಮದಿಂದ ಸನ್ಮಾರ್ಗಿಗಳಾಗಿ ನಡೆಯುವುದೇ ಜೀವನ ಧರ್ಮ. ಮೌಲ್ಯಯುತ ವಿಚಾರಗಳ ಚಿಂತನೆಯಲ್ಲಿ ಬದುಕು ಆದರ್ಶವಾಗುತ್ತದೆ. ಯಾರಿಗೆ ಆದರೂ ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ಹಾಗೆ ಅವರ ತಪ್ಪು ಅವರಿಗೆ ತಿಳಿಯುವುದಿಲ್ಲ. ಹಿರಿಯರು ಗುರುಗಳು ತಪ್ಪೆಂದು ಹೇಳಿದಾಗ ಅವರ ಮಾತಿಗೆ ಬೆಲೆಕೊಟ್ಟು ಸರಿಯಾದ ಮಾರ್ಗದಲ್ಲಿ ನಡೆಯಬೇಕು. ನಾವು ಕತ್ತಲೆಯಿಂದ ಬೆಳಕಿನೆಡೆಗೆ ಬಂದಾಗಲೇ ಕತ್ತಲೆಗೊ ಬೆಳಕಿಗೂ ಎಷ್ಟು ವ್ಯತ್ಯಾಸವೆಂದು ತಿಳಿಯುವುದು. ಪಶ್ಚಾತಾಪವೇ ತಪ್ಪುಗಳಿಗೆ ಪ್ರಾಯಶ್ಚಿತ ಹಾಗೂ ಪರಿವರ್ತನೆಯ ದಾರಿಯಲ್ಲಿ ಯಶಸ್ಸಿನ ಮೆಟ್ಟಿಲನ್ನೆ ಏರಬಹುದು. ನಮ್ಮ ವ್ಯಕ್ತಿತ್ವದ ಅಂತಂಶಕ್ತಿಯ ಮೂಲದಿಂದಲೇ ಬದಲಾಗುವ ದೃಢ ವಿಶ್ವಾಸ, ಸೃಜನಶೀಲತೆ,ಶಿಸ್ತು,ನಿಷ್ಠೆ ಸನ್ನಡತೆ ನಮ್ಮ ಆತ್ಮಾವಲೋಕನದಿಂದ ಪಡೆಯಬೇಕು. ತನ್ನೊಳಗಿನ ಅರಿವೇ ನಮ್ಮ ಗುರು ಎಂಬ ನುಡಿ ಇದೆ.
“ಸತ್ಯಮೇವ ಜಯತೆ” ಸತ್ಯಕೆಂದು ಸೋಲಿಲ್ಲ ಎಂದು ಜ್ಞಾನಿಗಳೇ ಹೇಳಿದ್ದಾರೆ. ಸತ್ಯ ಅಹಿಂಸೆ ನ್ಯಾಯಮಾರ್ಗದಲ್ಲಿ ನಡೆದು ವಿದೇಶಿಯರ ದಾಸ್ಯ ಸಂಕೋಲೆಯಿಂದ ನಮ್ಮನ್ನು ಮುಕ್ತಗೊಳಿಸಿ ಭಾರತದ ಕೀರ್ತಿಪತಾಕೆಯನ್ನು ಮೊಳಗಿಸಿದ ಶಾಂತಿದೂತ ಗಾಂಧೀ ಮಹಾತ್ಮರು. ಪ್ರತಿ ವರ್ಷ ಅವರ ಜನ್ಮದಿನವನ್ನು ಭಾರತದ ರಾಷ್ಟ್ರೀಯ ರಜವೆಂದು ದೇಶಾದ್ಯಂತ ಆಚರಿಸಲಾಗುತ್ತದೆ. ಹಾಗೂ ಅಂತರಾಷ್ಟ್ರೀಯ ಅಹಿಂಸಾ ದಿನವೆಂದು ಪರಿಗಣಿಸಲಾಗಿದೆ. ಸರ್ವ ಜನಾಂಗದ ಸುರಕ್ಷತೆಗೆ ಪಣತೊಟ್ಟು ದೇಶದ ಶ್ರೇಯಸ್ಸಿಗೆ ತಮ್ಮನ್ನು ಒಪ್ಪಿಸಿಕೊಂಡ ಗಾಂಧೀಜಿಯು ಭಾರತದ ರಾಷ್ಟ್ರಪಿತನೆಂದೇ ಕರೆಯಲ್ಪಡುತ್ತಾರೆ. ಭಾರತದೇಶ ಬಾಂಧವರ ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿದ್ದಾರೆ.
ಲೇಖಕರು: ಯಶೋಧ ರಾಮಕೃಷ್ಣ, ಮೈಸೂರು