ಮನೆಯಲಿ ಹಾಯಾಗಿದ್ದವನನ್ನು
ರಸ್ತೆಯಲಿ ತಂದು ಕೂಡಿಸಿದೆ
ದೇಶಾಭಿಮಾನದ ಹೋರಾಟಕೆ
ಸ್ವಾತಂತ್ರ್ಯಕ್ಕಾಗಿ ಎಂದು
ಸಹಯೋಗ ನೀಡಿದೆ
ಸುಮ್ಮನಾದೆ//

ಹೋರಾಟದ ಭಾಷಣ ಕೇಳಿದೆ
ನನ್ನ ಸ್ತುತಿಗೆ ಮಂದಹಾಸ ಬೀರಿದೆ
ಪರಿಶುದ್ಧ ಭಕ್ತಿಗೆ ಮರುಳಾದೆ
ಧೂಪ ದೀಪ ನೈವೇದ್ಯಕೆ
ಶಾಂತ ಮಂಗಳಾರತಿಗೆ
ಆಶೀರ್ವದಿಸಿದೆ//

ಟಿಳಕಾ ಅಂದು ಮಣ್ಣಿನಲಿ ಮಾಡಿ
ಮನೆ ಮನೆಯಲಿ ಸ್ಥಾಪಿಸಿ
ಮನ ಮಂದಿರದಲಿ ಪೂಜಿಸಿ
ಗೋಜು ಗದ್ದಲಗಳಿಲ್ಲದೆ
ಪವಿತ್ರ ಗಂಗೆಯ ಮಡಿಲಲಿ
ಮಲಗಿಸುತ್ತಿದ್ದಿರಿ//

ಇಂದು ನನ್ನನು ಚಾಕ್ಲೇಟಿನಿಂದ
ಪ್ಲಾಸ್ಟರ, ರುದ್ರಾಕ್ಷಿಯಿಂದ
ಮಾಡಿ ವಿಚಿತ್ರ ಅರಿವೆ ತೊಡಿಸಿ
ಉಸಿರುಗಟ್ಟಿಸುವ ಹೌದು
ಬಕೆಟ್ಟುಗಳ ನೀರಿನಲಿ
ಮುಳುಗಿಸುತ್ತಿದ್ದಾರೆ//

ಆದರೆ ಇಂದು ಡಿಜೆ ಡಾಲ್ಬಿಅಬ್ಬರಕೆ
ಡೊಳ್ಳು ನಗಾರಿಯ ಶಬ್ದಕೆ
ಸಿನೇಮಾ ಹಾಡಿನ ಕುಣಿತಕೆ
ಪಠಾಕಿಗಳ ಸಿಡಿಮದ್ದಿಗೆ
ಕಂಪನವಾಗುತಿದೆ ಮೈ
ಬೆವರಿಳಿಯುತಿದೆ//

ಯಾಕೊ ಟಿಳಕಾ ಹೀಗೆ ಮಾಡಿದೆ
ನೇತಾ ಅಭಿನೇತಾರಿಗೆ ಬೇರೆ
ಸಾಮಾನ್ಯರಿಗೆ ಬೇರೆ ದರ್ಶನ
ಬಂಗಾರ ಬೆಳ್ಳಿಯೊಡವೆ
ಕೋಟಿಗಟ್ಟಲೆ ಹಣ
ಸುರಿಸುತ್ತಿದ್ದಾರೆ//

ನೀನು ಮಾಡಿದ್ದು ಒಳ್ಳೆಯದಕ್ಕೆ
ಇಂದು ಎಲ್ಲೆಡೆ ರಾಜಕೀಯ
ಅರಾಜಕತೆಯ ತಾಂಡವ
ಡಾಂಭಿಕ ತೋರಿಕೆಯ ಭಕ್ತಿ
ಈ ಹಾವಳಿಯಿಂದ ನಾನು
ಪಾರಾಗಬೇಕಾಗಿದೆ//

 

  • 2. ವಾಸ್ತು ತಥಾಸ್ತು

ವಾಸ್ತು

ಲಕ್ಷಗಟ್ಟಲೆ ಹಣದ ಸುರಿಮಳೆ
ಜನರ ಮನಸಿನ ನೆಮ್ಮದಿಗಾಗಿ
ವಾಸ್ತುಶಾಂತಿ ಪೂಜೆಗಾಗಿ

ಬಣ್ಣದ ದೃಶ್ಯ ಓಡುವ ಕುದುರೆ
ಫೆಂಗ್ ಶುಯಿ ಪಿರಾಮಿಡ್ ಚಿತ್ರ
ಚೀನೀಯರ ಲಾಭಗಳಿಕೆ ವಿಚಿತ್ರ

ಮೂಢ ಮನುಜ ಅರಿತುಕೊ
ವಾಸ್ತುಪ್ರಕಾರ ನಾವಿರಬಾರದು
ನಮಗಾಗಿ ವಾಸ್ತುವಿರಬೇಕು

ಜ್ಞಾನಿಯಾದರು ಬಸವಣ್ಣನವರು
ಅನುಭವ ಮಂಟಪದೊಳಗೆ
ಅಕ್ಕಮಹಾದೇವಿ ಗುಹೆಯೊಳಗೆ

ಜ್ಞಾನಿ ಅಲ್ಲಮರು ಬಯಲಲ್ಲಿ
ಜ್ಞಾನೇಶ್ವರರು ಗುಡಿಸಲಿನಲ್ಲಿ
ಬುದ್ಧ ಜ್ಞಾನಿಯಾದ ಗಿಡದ ನೆರಳಲ್ಲಿ

ಮಂದಿರವೊಡೆದು ಕಿಂಡಿಯಿಂದ
ದರುಶನ ಕೊಟ್ಟ ಕೃಷ್ಣ ಕನಕನಿಗೆ
ಕೋಳೂರು ಕೊಡಗೂಸು ಈಶ್ವರನಲ್ಲಿ

ನೆರಳಾಗಿರುವುದು ಬಾಳಿಗೆ ಮನೆ
ಜೀವಗಳ ಬಂಧನದಒಕ್ಕಟ್ಟಿನ ಮನೆ
ಶಾಂತಿ ಪೂಜೆಗಳ ಮೋಹ ಬೇಡ

ಪರಿಶುದ್ಧಾಂತಃಕರಣ ಭಕ್ತಿ ನಿಷ್ಠೆ
ಮುಗ್ಧ ಪ್ರೇಮ ದಾಸೋಹ ಕಾಯಕ
ಇರಲು ವಾಸ್ತು ತಥಾಸ್ತು ಎನುವನು

  • 3. ಜಡೆಕವನ: ಬಂಗಾರದ ಪಂಜರ

ಹೆಣ್ಣಿನ ಜೀವನವೊಂದು ಬಂಗಾರದ ಪಂಜರದಂತೆ
ಪಂಜರವೇನೋ ಹೊಳೆ ಹೊಳೆಯುವ
ಬಂಗಾರದಂತೆ
ಬಂಗಾರದ ಊರು ಲಂಕೆಯಾಗಿದ್ದರೂ
ನಿರಾಭರಣ ಸೀತೆಯಂತೆ
ಸೀತೆಯು ಪತಿ ಶ್ರೀ ರಾಮನ ಭಕ್ತಿಯಲಿ
ಮೈಮರೆತಂತೆ
ಮೈಮರೆತು ಬಿಡುಗಡೆಗಾಗಿ ಪ್ರಾರ್ಥಿಸುವ
ಅನನ್ಯ ಭಕ್ತಳಂತೆ
ಭಕ್ತಳ ಮೊರೆ ಕೇಳಿ ಓಡಿ ಬಂದ ರಾಮ
ಯುದ್ಧಗೈಯ್ಯಲು
ಯುದ್ಧ ಮಾಡಿ ಗೆದ್ದ ಲಂಕಾಧಿಪತಿಯ
ಸೀತೆ ಬಿಡುಗಡೆಯಾಗಲು
ಬಿಡುಗಡೆಯಾದ ವೈದೇಹಿ ಅಗ್ನಿಪರೀಕ್ಷೆ
ಕೊಡುತ ನೊಂದಳು
ನೊಂದ ಜಾನ್ಹವಿ ಅಯೋಧ್ಯೆಯ ರಾಣಿ
ಆಗಿ ತಾಯ್ತನವ ಬಯಸಿರಲು
ಬಯಸಿದ ಆಶೆಗೆ ಅಗಸನಮಾತಿಗೆ ರಾಮ
ಕಾಡಿಗಟ್ಟಿದ ಜಾನಕಿಯನು
ಜಾನಕಿಯನು ಪೋಷಿಸಿದರು ವಾಲ್ಮೀಕಿ
ಲವಕುಶರಿಗೆ ಜನ್ಮವಿತ್ತಳು
ಜನ್ಮವಿತ್ತ ಜಾನಕಿ ಜೀವನ ಅವಲೋಕಿಸಿ
ಬಂಗಾರದ ಪಂಜರವೆಂದಳು

 

  • 4. ಭರವಸೆ

ವಿಶ್ವಾಸ ನಂಬಿಕೆಗಳೇ ಭರವಸೆ
ಈಡೇರುವವೆಂದು ಮನದಾಸೆ

ಭರವಸೆಯ ಬದುಕು ಬಂಗಾರ
ಆತ್ಮವಿಶ್ವಾಸವೇ ಅದಕೆ ಶೃಂಗಾರ

ಗಡಿಯಲಿ ಯೋಧರ ಆತ್ಮನಿರ್ಭರತೆ
ಮನೆಯಲಿ ನಮಗಿಂದು ನಿಶ್ಚಿಂತತೆ

ಬಂಧಾನುಬಂಧಗಳಲಿ ಸರಳತೆ
ಪ್ರೇಮ ಪ್ರೀತಿಗಳಲಿ ಸಹಜತೆ

ರೋಗಿಗಳಿಗೆ ವೈದ್ಯರ ಭರವಸೆ
ರಾಜಕಾರಣಿಗಳಿಗೆ ಜನರ ಭರವಸೆ

ವಿಶ್ವದಿ ಭಾರತ ಗುರುವಾಗುವ ಆಸೆ
ನಮ್ಮೆಲ್ಲರಲಿರಲಿ ಅತ್ಯಂತ ಭರವಸೆ

ಎಷ್ಟೇ ಕಷ್ಟಗಳು ಬರಲಿ ಎದುರಿಸುವ
ಛಲ ಬಲದ ಗೆಲುವು ನಮ್ಮಲ್ಲಿರಲಿ

 

  • 5. ಮೌನ ಮುನಿ ಮೋಬೈಲ್

ಮೌನ ಮುನಿರಾಜ ಮೋಬೈಲನ
ಮೋಹಪಾಶದ ಜಾಲದಲಿ ಸೆಳೆದು
ಮನೆ ಮಾರು ಮರೆಸಿಬಿಡುವೆ
ಮುದ್ದಾದ ಮಕ್ಕಳನು ಪ್ರೀತಿಸುವೆ

ಮನವನು ಮೌನವಾಗಿಸಿಬಿಡುವೆ
ಮನೋಹರ ದೃಶ್ಯಗಳ ಸೆರೆಹಿಡಿಯಲು
ಮೇಲಿಂದ ಬಿದ್ದು ಸಾಯುತಿಹರು
ಮಹಾಮಾನವನೆ ಇದು ಸರಿಯೆ

ಮಹಾಜ್ಞಾನಿ ನೀನು ಜ್ಞಾನ ನೀಡುವೆ
ಮನಸನು ಕದ್ದು ಆಟವಾಡಿಸುವೆ
ಮಹಾದೇವನಂತೆ ಎಲ್ಲೆಡೆ ನೀನಿರುವೆ
ಮುಂಜಿವೆ ಲಗ್ನ ಹಬ್ಬಗಳಲ್ಲಿ ಮುಖ್ಯನೀ

ಮೈಮೇಲೆ ಬೆರಳುಗಳ ಕುಣಿತಬೇಕು
ಮಾಹಿತಿ ತಂತ್ರಜ್ಞಾನ ತತ್ವಜ್ಞಾನ ಎಲ್ಲ
ಮನಸೋಕ್ತವಾಗಿ ತೋರಿಸುವೆ ನೀ
ಮೈಮರೆತು ಹುಚ್ಚರಾಗುತಿಹರಿಂದು

ಮೈತುಂಬ ಕಣಕಣದಲಿ ಕ್ಷಣ ಕ್ಷಣದ
ಮಹಾಸುದ್ದಿ ನಮ್ಮ ಸ್ಥಳ ಬಿತ್ತರಿಸುವೆ
ಮನುಜನ ಶೋಧಕ ಬುದ್ಧಿ ನಿಂತಿದೆ
ಮುನಿಯೆ ನಿನ್ನನ್ನೇ ಅವಲಂಬಿಸಿದ್ದಾರೆ

ಮೌನ ಮುನಿ ಸಾಕು ನಿನ್ನ ಸಹವಾಸ
ಮಾಯಾ ಜಾಲದಲಿ ಸೆಳೆಯಬೇಡ
ಅಂತರ್ ಜಾಲದ ವಂಚಕರಿಂದ ಹಣ
ಮಾನ ಮರ್ಯಾದೆ ಸೋರುತಿಹುದು

ಅನ್ನಪೂರ್ಣ ಸು ಸಕ್ರೋಜಿ. ಪುಣೆ