ಸೃಜನಶೀಲ ಬರವಣಿಗೆ

  • ಸೃಜನಶೀಲ ಬರವಣಿಗೆ ಎಂದರೇನು?

ಮಾನವ ಮೂಲತಃ ಭಾವನಾ ಜೀವಿ, ಕಲ್ಪನಾ ಜೀವಿ, ಆಲೋಚನ ಜೀವಿ, ತನ್ನ ಭಾವನೆ, ಕಲ್ಪನೆ, ಆಲೋಚನೆಗಳನ್ನು ಮಾತು ಮತ್ತು ಬರಹದ ಮೂಲಕ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದ್ದಾನೆ. ಮಾನವನ ಮನಸ್ಸಿಗೆ ತನ್ನದೇ ಆದ ಸೃಜನ ಸಾಮರ್ಥ್ಯವಿದೆ. ಕ್ರಿಯಾತ್ಮಕ ಸ್ವಭಾವವಿದೆ. ತನ್ನ ವಿಚಾರಗಳನ್ನು ಅಭಿಪ್ರಾಯಗಳನ್ನು ಮಾತುಕತೆ, ಭಾಷಣ, ಚರ್ಚೆ, ಸಂಭಾಷಣೆ ಅಥವಾ ಸಂವಾದದ ಮೂಲಕ ವ್ಯಕ್ತಿಪಡಿಸುವ ಹಾಗೆಯೇ ಕಥೆ, ಕವನ, ನಾಟಕ, ಕಾದಂಬರಿ, ವಿಮರ್ಶೆ, ಪ್ರಬಂಧ, ಹರಟೆ ಹೀಗೆ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ತನ್ನ ಅನಿಸಿಕೆಗಳನ್ನು ವ್ಯವಸ್ಥಿತ ರೂಪದಲ್ಲಿ ಕಟ್ಟಿಕೊಡುವ ಬರವಣಿಗೆಯೇ ಸೃಜನಶೀಲ ಬರವಣಿಗೆ.

  • ಸೃಜನಶೀಲ ಬರವಣಿಗೆಯನ್ನು ರೂಢಿಸಿಕೊಳ್ಳುವುದು ಹೇಗೆ_ ?

ಈ ರೂಪದ ಬರವಣಿಗೆಯ ಕಲೆಯು ಅನಾಯಾಸವಾಗಿ ಬರುವಂತಹುದಲ್ಲ. ಓದು ಬರಹದಲ್ಲಿ ಆಸಕ್ತಿಯಿಟ್ಟು ವಿಸ್ತ್ರತ ವ್ಯಾಸಂಗ ಮಾಡುವುದರ ಮೂಲಕ ಸವಾಲೆನಿಸುವ ಈ ಕಲೆಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಆದರಲ್ಲೂ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸೃಜನಶೀಲ ಬರವಣಿಗೆಗೆ ಬೇಕಾದ ಸಂವೇದನೆಯನ್ನು ಗಟ್ಟಿಯಾಗಿ ಬೆಳೆಸಿಕೊಂಡಲ್ಲಿ, ಹವ್ಯಾಸವನ್ನಾಗಿ ಮಾಡಿಕೊಂಡಲ್ಲಿ, ಓದುವ ಮತ್ತು ಬರೆಯುವ ಸಾಮರ್ಥ್ಯದ ಜೊತೆಗೆ ಭಾಷಾ ಸಾಮರ್ಥ್ಯವು ಹೆಚ್ಚುತ್ತದೆ. ಸೃಜನಶೀಲ ಬರವಣಿಗೆಯ ಅಭ್ಯಾಸದಲ್ಲಿ ಇಂತಹುದನ್ನೇ ಬರೆಯಬೇಕೆಂಬ ಕಟ್ಟುಪಾಡೇನಿಲ್ಲ. ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಬರುವ ಶೀರ್ಷಿಕೆಗಳು, ನುಡಿ ಚಿತ್ರಗಳು, ತಾವು ಕಣ್ಣಾರೆ ಕಂಡ ಕಿವಿಯಾರೆ ಕೇಳಿದ ಘಟನೆಗಳು, ಸಂಗತಿಗಳು, ನಮ್ಮ ಸುತ್ತ – ಮುತ್ತ ನಡೆಯುತ್ತಿರುವ ವಿದ್ಯಮಾನಗಳು, ತಾವೇ ಕಲ್ಪಿಸಿಕೊಂಡ ಸನ್ನಿವೇಶಗಳು ಹೀಗೆ ಯಾವುದನ್ನು ಬೇಕಾದರೂ ವಸ್ತುವನ್ನಾಗಿಸಿಕೊಂಡು ಅದನ್ನು ಗದ್ಯ ಅಥವಾ
ಪದ್ಯರೂಪದಲ್ಲಿ ರಚಿಸಬಹುದು. ಆಯ್ಕೆ ಮಾಡಿಕೊಂಡ ವಸ್ತುವಿಗಿಂತ ಆ ವಸ್ತುವಿನಿಂದ ಏನು ಮಾಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ.

  • _ಈ ಬರವಣಿಗೆಯಿಂದಾಗುವ ಪ್ರಯೋಜನಗಳು :_

೧. ವೈಚಾರಿಕ ಮನೋಭಾವ, ವಿಶ್ಲೇಷಣಾ ಸಾಮರ್ಥ್ಯ ಹೆಚ್ಚುತ್ತದೆ.

೨. ತಮ್ಮ ಆಲೋಚನೆ, ಭಾವನೆ, ಕಲ್ಪನೆಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸುವ ಸಾಮರ್ಥ್ಯ ಬೆಳೆಯುತ್ತದೆ.

೩. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ನೆರವಾಗುತ್ತದೆ.

9. ಬಿಡುವಿನ ವೇಳೆಯ ಸದುಪಯೋಗವಾಗುತ್ತದೆ. ಮನಸ್ಸಿಗೆ ತೃಪ್ತಿ ಆನಂದ ಲಭ್ಯವಾಗುತ್ತದೆ.

೫. ಉತ್ತಮ ಬರಹಗಾರರಾಗಬಹುದು, ಹವ್ಯಾಸಿ ಪತ್ರಕರ್ತರಾಗಬಹುದು, ವೆಬ್‌ಸೈಟ್‌ಗಳಿಗೆ ಲೇಖನಗಳನ್ನು ಬರೆಯಬಹುದು, ರೇಡಿಯೋ, ದೂರದರ್ಶನ, ಚಲನಚಿತ್ರಗಳಿಗೆ ರೂಪಕ, ಕಥೆ, ಚಿತ್ರಕಥೆ, ಗೀತೆಗಳನ್ನು ಬರೆಯಬಹುದು. ಹೀಗೆ ಒಂದೇ, ಎರಡೇ? ಸೃಜನಶೀಲ ಬರವಣಿಗೆಯಿಂದ ಲಭಿಸುವ ಲಾಭಗಳು ಹಲವಾರು. ಆ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಬರವಣಿಗೆಯಲ್ಲಿ ಆಸಕ್ತಿಯಿರಬೇಕು, ಒಲವಿರಬೇಕು, ಸತತ ಪರಿಶ್ರಮವೂ ಇರಬೇಕು.

ಲೇಖಕರು: ವಿಶ್ವಾಸ್ ಡಿ. ಗೌಡ, ಸಕಲೇಶಪುರ