ಅಭಿಲಾಷೆ ಕಾದಂಬರಿ ಸಂಚಿಕೆ -24

ಹಿಂದಿನ ಸಂಚಿಕೆಯಲ್ಲಿ

ವಿಕ್ರಮ್ ಕುಟುಂಬದವರು ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದಾರೆಂದು ಕೋದಂಡರಾಂ ರವರು ತಮ್ಮ ಮಗಳಿಗೆ ಹೇಳಿದಾಗ ನನಗೂ ಅವರ ಸಾಲಕ್ಕೂ ಸಂಬಂಧ ವಿಲ್ಲವೆಂದು ಆಶಾ ಹೇಳುತ್ತಾಳೆ

ಕಥೆಯನ್ನು ಮುಂದುವರೆಸುತ್ತಾ

ತನಗೂ ವಿಕ್ರಮ್ ತಂದೆ ಮಾಡಿರುವ ಸಾಲಕ್ಕೂ ಯಾವುದೇ ಸಂಬಂಧ ವಿಲ್ಲವೆಂಬ ಆಶಾಳ ಮಾತಿಗೆ
ಕೋದಂಡರಾಂ ನಗುತ್ತಾ ಅಲ್ಲಮ್ಮಾ ನೀನು ಆ ಮನೆಯ ಸೊಸೆಯಾದರೆ ಅವರು ಸಾಲದ ಹೊರೆಯಿಂದ ತತ್ತರಿಸುತ್ತಿದ್ದರೆ ನೀನು ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಆಗುತ್ತದಾ? ನಿನ್ನ ಗಂಡನ ಸಂಬಳದ ಜೊತೆಗೆ ನಿನ್ನ ಸಂಬಳವೂ ಸಾಲಕ್ಕೆ ಹೋಗುತ್ತದೆಂದು ಕೋದಂಡರಾಂ ನುಡಿಯಲು
ಹಾಗೇನೂ ಆಗುವುದಿಲ್ಲ ಬಿಡಪ್ಪಾ ಎಂದು ಆಶಾ ಹೇಳುತ್ತಾಳೆ
ನೀನು ಬಹಳ ಬುದ್ದಿವಂತೆ ಚೆನ್ನಾಗಿ ಓದಿದವಳು, ವ್ಯವಹಾರ ಜ್ಞಾನ ಇರುವುದರಿಂದ ಆ ವಿಕ್ರಮ್ ನನ್ನು ಪ್ರೀತಿಸಿದ್ದೀಯಾ ಪರವಾಗಿಲ್ಲ ಎಂದುಕೊಂಡರೆ , ಅವನು ಅಪ್ಪಟ ಸುಳ್ಳುಗಾರ ಕಣಮ್ಮಾ , ನಾನು ಕೇಳಿದ್ದಕ್ಕೆ ನಮ್ಮಪ್ಪ ಕೋಟ್ಯಾದೀಶ್ವರರೆಂದು ಹೇಳಿದ್ದ. ಈಗ ನೋಡಿದರೆ ಕೋಟ್ಯಾಂತರ ರೂಪಾಯಿ ಆಸ್ತಿ ಬದಲಿಗೆ ಸಾಲವೇ ಇದೆಯಲ್ವಮ್ಮಾ ? ನೀನು ಆ ಅಪ್ಪಟ ಸುಳ್ಳುಗಾರನನ್ನು ಪ್ರೀತಿಸಿದ್ದೀಯಾ ಅವನು ನಿನಗೆ ಚೆನ್ನಾಗಿಯೇ ಮರಳು ಮಾಡಿದ್ದಾನೆಂದು ಕೋದಂಡರಾಂ ಹೇಳಲು
ಅಪ್ಪಾ ಸಾಲವಿಲ್ಲದೆ ಯಾರೂ ವ್ಯವಹಾರ ಮಾಡುವುದಿಲ್ಲ, ಇದಕ್ಕೆ ವಿಕ್ರಮ್ ಕುಟುಂಬದವರು ಹೊರತಲ್ಲಪ್ಪಾ, ನೀನೇಕೆ ಯೋಚಿಸುತ್ತೀಯಾ? ಈ ವರ್ಷ ಲಾಸ್ ಆಗಿರಬಹುದು ಅದಕ್ಕೆ ಸ್ವಲ್ಪ ಸಾಲ ಮಾಡಿದ್ದಾರೆ. ಮುಂದಿನ ವರ್ಷ ಲಾಭ ಗಳಿಸಿದರೆ ಆ ಸಾಲ‌ ಯಾವ ಮಹಾ? ಒಂದೇ ಸಲ ತೀರಿಸಬಹುದಪ್ಪಾ ಎಂದು ಆಶಾ ಹೇಳಲು
ಮಗಳೇ ಯಾರೋ ಮಾಡಿರುವ ಸಾಲದ ಜವಾಬ್ದಾರಿ ನಿನಗೆ ಏಕಮ್ಮಾ?ಅವರು ಎಷ್ಚು ಸಾಲ ಮಾಡಿದ್ದಾರೋ ಏನೋ? ನೀನೇಕೆ ಕಷ್ಟ ಪಡುತ್ತೀಯಾ ಎಂದು ಕೋದಂಡರಾಮ್ ಪ್ರಶ್ನಿಸಲು
ಅಪ್ಪಾ ನಾನು ಅವರ ಮನೆ ಸೊಸೆಯಾದರೆ ಅದು ನಮ್ಮ ಮನೆಯೇ ಆಗುತ್ತಲ್ಲಪ್ಪಾ ನಮ್ಮವರಿಗೆ ಸಹಾಯ‌ಮಾಡಿದರೇನು ತಪ್ಪು ಹೇಳಪ್ಪಾ? ಎಂದು ಆಶಾ ತನ್ನಪ್ಪನನ್ನೇ ಪ್ರಶ್ನಿಸುತ್ತಾಳೆ.
ಹೌದೇಳಮ್ಮಾ ನಿನ್ನಂತಹ ಮನಸ್ಸಿದ್ದರೆ ಯಾವುದೂ ತಪ್ಪಲ್ಲ‌, ಅಲ್ಲಾ ಮಗಳೇ ನೀನಾಗಿಯೇ ಹೋಗಿ ಸಾಲವೆಂಬ ಮೊಸಳೆಯ ಬಾಯಿಗೆ ಸಿಕ್ಕಿಕೊಳ್ಳಬೇಡವೆಂದು ಹೇಳಿದರೆ ನಮ್ಮವರಿಗೆ ಸಹಾಯ ಮಾಡಿದರೆ ತಪ್ಪೇನೆಂದು ನನಗೇ ಪ್ರಶ್ನೆ ಮಾಡುತ್ತಿದ್ದೀಯಲ್ಲಾ? ಸಾವಿರವೋ ಲಕ್ಷವೋ ಸಾಲ ಮಾಡಿದ್ದರೆ ಪರವಾಗಿಲ್ಲಮ್ಮಾ, ಹೇಗೋ ತೀರಿಸಿಕೊಳ್ಳಬಹುದು ಕೋಟ್ಯಾಂತರ ರೂಪಾಯಿ ಸಾಲವಾಗಿದ್ದರೆ ಹೇಗೆ ತೀರಿಸುತ್ತೀಯಾ? ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳಬೇಡವೆಂದು ಹೇಳಿದರೆ ನನಗೇ ಬುದ್ದಿವಾದ ಹೇಳುತ್ತಿದ್ದೀಯಲ್ಲಾ ಇದು ಸರೀನಾ? ಎಂದು ಕೋದಂಡರಾಮ್ ಪ್ರಶ್ನಿಸಿದಾಗ
ಅಪ್ಪಾ ನಾನು ವಿಕ್ರಮ್ ನ ಪ್ರೀತಿಸುತ್ತಿದ್ದೇನೆ ಎಷ್ಟೇ ಕಷ್ಟವಾದರೂ ಅವರನ್ನೇ ಮದುವೆಯಾಗುವುದು. ಸಾಲಕ್ಕೆ ಹೆದರಿ ನನ್ನ ಪ್ಪೀತಿಯನ್ನು ಬಿಡಲು ಆಗುವುದಿಲ್ಲಪ್ಪಾ, ಎಲ್ಲರೂ ಆಸ್ತಿ ಹಣ ನೋಡಿ ಪ್ರೀತಿಸಿ ಮದುವೆಯಾದರೆ ನಾನು ಅವರಿಗೆ ಸಾಲವಿದೆಯೆಂದು ತಿಳಿದು ಮದುವೆಯಾಗುತ್ತಿದ್ದೇನೆ ನಾನೇ ಗ್ರೇಟ್ ಅಲ್ಲವೇನಪ್ಪಾ? ನನ್ನದು ಪವಿತ್ರವಾದ ಪ್ರೀತಿ ಕಣಪ್ಪಾ ದಯವಿಟ್ಟು ವಿಕ್ರಮ್ ಜೊತೆ ಮದುವೆ ಮಾಡಿಕೊಡಲು ಒಪ್ಪಿಗೆ ಕೊಡಪ್ಪಾ ಎಂದು ಆಶಾ ದೈನ್ಯದಿಂದ ಕೇಳಲು
ಅವರು ಸಾಲವನ್ನೆಲ್ಲಾ ತೀರಿಸಿ ಬರಲಿ ನಂತರ ಖಂಡಿತ ನನ್ನ ಮಗಳನ್ನು ನೀನು ಪ್ರೀತಿಸುತ್ತಿರುವ ಹುಡುಗನಿಗೆ ಧಾರೆ ಎರೆದು ಕೊಡುತ್ತೇನೆಂದು ಕೋದಂಡರಾಂ ಹೇಳಲು.
ಮೊದಲು ಮದುವೆ ಮಾಡಿಕೊಡು ನಂತರ ಹೇಗೋ ಸಾಲ‌ ತೀರಿಸಿಕೊಳ್ಳುತ್ತಾರೆಂಬ ಆಶಾ ಮಾತಿಗೆ
ನಿಮಗೆ ಪ್ರೀತಿ ಎಂಬ ಹುಚ್ಚು ಹಿಡಿದಿದೆ, ಪ್ರೀತಿಯೆಂಬ ದೀಪದ ಮುಂದೆ ದೀಪದ ಹುಳುಗಳು ಸುತ್ತುತ್ತಾ‌ ಅದಕ್ಕೆ ಬಲಿಯಾಗುವಂತೆ ನೀವು ಪ್ರೀತಿಯ ಬಲೆಯಲ್ಲಿ ಸಿಲುಕಿ ನಿಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತೀರಿ. ನಾನು ಅದಕ್ಕೆ ಅವಕಾಶ‌ ಕೊಡುವುದಿಲ್ಲಮ್ಮಾ ಏನಾದರೂ ಮಾಡಿಕೋ ಎಂದು ಕೋಪದಿಂದ ಕೋದಂಡರಾಂ ಹೇಳಿದಾಗ
ನಾನು ವಿಕ್ರಮ್ ನನ್ನೇ ಮದುವೆಯಾಗುವುದೆಂದು ಆಶಾ ಖಡಾಖಂಡಿತವಾಗಿ ಹೇಳಿದ ಮಾತಿಗೆ
ಕೋದಂಡರಾಮ್ ರವರು ನಾನಂತೂ ಈ ಮದುವೆಗೆ ಒಪ್ಪಿಗೆ ಕೊಡುವುದಿಲ್ಲವೆಂದು ಹೇಳಿ, ಕೋಪದಿಂದ ಕೈಯ್ಯಲ್ಲಿದ್ದ ಪೇಪರನ್ನು ಟೀಪಾಯಿ ಮೇಲೆ ಒಗೆದು ರೂಮಿಗೆ ಹೋಗುತ್ತಾರೆ
ಆಶಾ ಕೂಡಾ ಏನೂ ಮಾತನಾಡದೆ ತನ್ನ ರೂಮಿಗೆ ಹೋಗುತ್ತಾಳೆ

ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಹಸಿವಾಗುತ್ತಿದೆ ಊಟ‌ ಹಾಕಮ್ಮಾ ಎಂದು ಹೇಳುತ್ತಾ ಒಂದು ತಟ್ಟೆಯನ್ನು ಟೇಬಲ್ ಮೇಲೆ ಇಟ್ಟುಕೊಂಡು ಕುಳಿತಾಗ
ಅಪ್ಪನನ್ನೂ ಕರೆಯಮ್ಮಾ ಇಬ್ಬರಿಗೂ ಒಟ್ಟಿಗೆ ಊಟ ಬಡಿಸುತ್ತೇನೆಂದು ಅವಳಮ್ಮ ಹೇಳಲು
ಆಶಾ ಅರೆ ಮನಸ್ಸಿನಿಂದ ಕುಳಿತಲ್ಲಿಂದಲೇ ಅಪ್ಪಾ ಅಪ್ಪಾ ಊಟಕ್ಕೆ ಬಾಪ್ಪಾ ಎಂದು ಕರೆದರೂ
ಅವಳ ಅಪ್ಪ ಬರುವುದಿಲ್ಲ.


ಅಮ್ಮಾ ಅಪ್ಪನನ್ನು ಕರೆದರೂ ಊಟಕ್ಕೆ ಬರುತ್ತಿಲ್ಲ ನನಗೆ ತುಂಬಾ ಹಸಿವಾಗುತ್ತಿದೆ ಊಟ‌ ಹಾಕಮ್ಮಾ ಎನ್ನುತ್ತಾಳೆ
ಇದೇನೇ ಆಶಾ ದಿನವೂ ಅಪ್ಪನಿಗೆ ಹಸಿವಿರಲಿ ಬಿಡಲಿ ಅಪ್ಪನನ್ನು ಬಲವಂತ ಮಾಡಿ ಊಟಕ್ಕೆ ಕರೆದು ಜೊತೆಯಲ್ಲಿ ಊಟ‌ ಮಾಡುತ್ತಿದ್ದವಳು ಇಂದು ಅಪ್ಪ ಬರದೇ ಇದ್ದರೂ ಒಬ್ಬಳೇ ಊಟಕ್ಕೆ ಕುಳಿತಿದ್ದೀಯಲ್ಲಾ? ಅಪ್ಪ ಮಗಳ‌ ಮದ್ಯೆ ಏನಾದರೂ ಮಾತುಕತೆ ಆಯ್ತೇನೇ ಎಂದು ಆಶಾಳ ಅಮ್ಮ ಪ್ರಶ್ನಿಸಿದಾಗ
ಹ್ಞೂಂ ಎಂದಷ್ಟೇ ಹೇಳಿ ಸುಮ್ಮನಾಗುತ್ತಾಳೆ
ವಿಕ್ರಮ್ ಜೊತೆ ಮದುವೆ ಬೇಡ ಎಂದು ಅಪ್ಪ ಹೇಳಿದ್ರಾ ಎಂದು ಅವಳಮ್ಮನ ಮಾತಿಗೆ
ಹೌದಮ್ಮಾ ಅವರಿಗೇನೋ ಸಾಲವಿದೆಯಂತೆ ಅವರನ್ನು ಮದುವೆಯಾದರೆ ನಾನೂ ಸಾಲಗಾರ್ತಿಯಾಗುತ್ತೇನಂತೆ ಅದಕ್ಕೆ ಈ ಮದುವೆ ಬೇಡವೆಂದು ಹೇಳುತ್ತಿದ್ದಾರೆ ಎಂದು ಆಶಾ ನುಡಿಯಲು
ಹೌದಮ್ಮಾ ಆಶಾ,ಅಪ್ಪ ಹೇಳುತ್ತಿರುವುದು ಸರಿಯಾಗಿಯೇ ಇದೆ ಕಣಮ್ಮಾ . ಅಪ್ಪನ ಮಾತು ಕೇಳಿದರೆ ನಿನಗೇ ಒಳ್ಳೆಯದೆಂದು ಅವಳಮ್ಮನ ಮಾತಿಗೆ
ಅಮ್ಮಾ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿಯಂತೆ ನೀನು ಅಪ್ಪನ ಪರವಾಗಿ ಮಾತನಾಡಬೇಡ. ಅಕಸ್ಮಾತ್ ಮದುವೆಯಾದ ನಂತರ ಸಾಲ ಮಾಡಿದ್ರೇನು ಮಾಡುತ್ತಿದ್ದೆವು, ಆಗಲೂ ಸಾಲದ‌ ಸುಳಿಗೆ ಸಿಲುಕುತ್ತಿರಲಿಲ್ಲವೇನಮ್ಮಾ ಎಂದು ಆಶಾ‌ ಪ್ರಶ್ನಿಸಿದಾಗ
ಆಗ ನಮ್ಮದು ಕರ್ಮ ಎಂದು ಅನುಭವಿಸಬೇಕಿತ್ತು,ಈಗ ಆ ಹಣೇಬರಹ ಇಲ್ಲವಲ್ಲಾ ಯೋಚಿಸಿ ಡಿಸೈಡ್‌ ಮಾಡಮ್ಮಾ ಎಂದು ಅವಳಮ್ಮನ ಮಾತಿಗೆ
ಅಮ್ಮಾ ನಾನೂ ವಿಕ್ರಮ್ ಮನಸಾರೆ ಪ್ರೀತಿಸುತ್ತಿದ್ದೇವೆ. ಎಷ್ಟೇ ಕಷ್ಟ ಬರಲಿ ಸುಖವಿರಲಿ ಅವರ ಜೊತೆ ಇರುತ್ತೇನೆಂದು ಡಿಸೈಡ್ ಮಾಡಿದ್ದೇನೆ. ನಾನು ಅವರಿಗೆ ಮೋಸ‌ ಮಾಡಲಾರೆ ಕಣಮ್ಮಾ ಎನ್ನುತ್ತಾಳೆ ಆಶಾ
ಇಂತಹ ಪ್ರೀತಿಯ ಹುಚ್ಚಿಗೆ ಮದ್ದಿಲ್ಲಮ್ಮಾ ನಿನಗೇ ಬುದ್ದಿ ಬರಬೇಕು ಅಲ್ಲಿಯವರೆಗೂ ಕಷ್ಟವೇ ಆಗುತ್ತದೆ. ಆಶಾ ಪ್ರೀತಿ ಪ್ರೇಮವೆಂದು ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಮ್ಮಾ ಸುಖವಾಗಿರುವುದನ್ನು ಕಲಿ ಎಂದು ಅವರಮ್ಮ ಹೇಳಲು
ಅಮ್ಮಾ ಈಗ ಊಟ ಹಾಕುತ್ತೀಯೋ ಅಥವಾ ಹಾಗೇ ಹೋಗಿ ಮಲಗಿಕೊಳ್ಳಲೋ ಎಂದು ಆಶಾ ಗುಡುಗಿದಾಗ
ಮಗಳು ಕೋಪಿಸಿಕೊಂಡು ಊಟ ಮಾಡದೆ ಉಪವಾಸ‌ ಮಾಡಿದರೆ ನಾನು ಯಾವ ಪಾಪಕರ್ಮಕ್ಕೆ ಹೋಗಲಿ ಎನ್ನುತ್ತಾ ಆಶಾಳಿಗೆ ಊಟ ಬಡಿಸಿದ ನಂತರ
ಆಶಾ ಊಟ ಮಾಡುತ್ತಿರುವಾಗ
ಕೋದಂಡರಾಂ ರವರು ರೂಮಿನಿಂದ ಹೊರಬಂದು, ಇದೇನೆ ಇವತ್ತು ಹತ್ತು ಗಂಟೆಯಾಗುತ್ತಿದ್ದರೂ ಊಟಕ್ಕೆ ನನ್ನನ್ನು ಕರೆಯಲೇ ಇಲ್ಲವೆಂದಾಗ
ಅಪ್ಪಾ ನಾನು ಕರೆದರೂ ನೀನೇ ಬರಲಿಲ್ಲ, ನನಗೆ ತುಂಬಾ ಹಸಿವಾಗುತ್ತಿತ್ತು ಊಟ‌ ಮಾಡುತ್ತಿದ್ದೇನೆಂದು ಆಶ ಹೇಳಲು.
ಕೋದಂಡರಾಮ್ ರವರು ಏನೂ ಮಾತನಾಡದೆ ತಾವೇ ತಟ್ಟೆಯನ್ನು ಟೇಬಲ್ ಮೇಲಿಟ್ಟು ನನಗೂ ಊಟ ಬಡಿಸೆಂದು ತಮ್ಮ ಪತ್ನಿಗೆ ಹೇಳುತ್ತಾರೆ
ಆಶ ಮಾತ್ರ ತನ್ನ ಮೊಬೈಲಿನಲ್ಲಿ ಚಾಟ್ ಮಾಡುತ್ತಾ ಊಟ ಮಾಡುತ್ತಿರುತ್ತಾಳೆ.
ಅವರ ಪತ್ನಿಯು ಊಟ ಬಡಿಸುತ್ತಿರುವಾಗ
ನಿಮ್ಮ,,,,,, ಎನ್ನುವಷ್ಟರಲ್ಲಿ
ಕೋದಂಡರಾಮ್ ರವರು ಏನೂ ಮಾತನಾಡಬೇಡವೆಂದು ಕೈ ಸನ್ನೆ ಮಾಡಿದಾಗ
ಅವರ ಪತ್ನಿಯು ಮೌನವಾಗಿಯೇ ತನ್ನ ಗಂಡನಿಗೆ ಊಟ ಬಡಿಸಿ ಅಡಿಗೆ ಮನೆಗೆ ಹೋಗುತ್ತಾರೆ
ಪ್ರತಿದಿನವೂ ಅಪ್ಪ ಮಗಳು ಊಟ‌ ಮಾಡುತ್ತಿರುವಾಗ, ಆ ದಿನ ಶಾಲೆಯಲ್ಲಿ ನಡೆದ ಘಟನೆಯನ್ನು ಕೋದಂಡರಾಂ ಹೇಳುತ್ತಾ ನಗುತ್ತಿದ್ದು, ಹಾಗೆಯೇ ಆಶಾಳು ಸಹ ತನ್ನ ಕಂಪೆನಿಯಲ್ಲಿ ನಡೆದ ಘಟನೆಯನ್ನು ಹೇಳುತ್ತಾ ಸಂತೋಷದಿಂದ ಊಟ ಮಾಡುತ್ತಿದ್ದವರು ಆ ದಿನ ಮಾತ್ರ ಮೌನವಾಗಿಯೇ ಊಟ‌ ಮಾಡುತ್ತಿರುತ್ಕಾರೆ.
ಆಶ ಊಟ ಮುಗಿಸಿ ಕೈತೊಳೆದುಕೊಂಡು ರೂಮಿಗೆ ಹೋದಾಗ
ಕೋದಂಡರಾಂರವರು ಊಟ ಮಾಡುತ್ತಿದ್ದ ಕೈಯ್ಯನ್ನು ಮೇಲಕ್ಕೆ ತೋರಿಸುತ್ತಾ ಎಲ್ಲವೂ ಅಷ್ಚೇ ಕಣೇ ನಾವು ನಮ್ಮ ಮಕ್ಕಳಿಗೆ ಏನೂ ಆಗಬಾರದೆಂಬ ಕಾಳಜಿಯಿಂದ ಹಗಲೂ ಇರುಳೂ ಅವರಿಗಾಗಿ ಪ್ರಾಣವನ್ನೇ ಒತ್ತೆ ಇಟ್ಟು ದುಡಿಯುತ್ತೇವೆ. ಆದರೆ ಮಕ್ಕಳು ಒಂದು ಕ್ಷಣದಲ್ಲಿ ಅದನ್ನೆಲ್ಲಾ ಒದ್ದು ಹೋಗುತ್ತಾರೆಂದು ಕೋದಂಡರಾಂ ವಿಷಾದ ವ್ಯಕ್ತಪಡಿಸುತ್ತಾರೆ
ಹೋಗಲೀ ಮಗಳ ಆಸೆಯಂತೆ ಆ ಹುಡುಗನಿಗೇ ಮದುವೆ ಮಾಡಿಕೊಡಿ. ಸುಮ್ಮನೆ ನಿಷ್ಠೂರವೇಕೆಂದು ಅವರ ಪತ್ನಿಯ ಮಾತಿಗೆ,
ನೀನೂ ಇದೇ ಮಾತು ಹೇಳುತ್ತೀಯಾ? ಕಂಡೂ ಕಂಡೂ ಕೋಟ್ಯಾಂತರ ರೂಪಾಯಿ ಸಾಲಗಾರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿ ಹೇಗೆ ಸಮಾಧಾನ ವಾಗಿರುವುದು? ಇದು ಸಾಧ್ಯವಾ ? ನಾಳೆ ನಮ್ಮ ಆಸ್ತಿ ಮಾರಿ ಸಾಲ‌ ತೀರಿಸಬೇಕಾದ ಸಂದರಭ ಬಂದರೆ ಏನು ಮಾಡುವುದೆಂದು ಕೋದಂಡರಾಮ್ ಪ್ಪಶ್ನಿಸಲು
ಅಪ್ಪ ಅಮ್ಮ ಹೇಳಿದ ಮಾತು ಕೇಳದೇ ಇದ್ದರೆ ಅವಳ ಹಣೇಬರಹ ಏನಾದರೂ ಮಾಡಿಕೊಳ್ಳಲಿ ಬಿಟ್ಟುಬಿಡಿ ಎಂದು ಅವರ ಪತ್ನಿ ನುಡಿದಾಗ
ನಾಳೆ ಮಗಳು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಇದೇ ಕಣ್ಣಿನಿಂದ ನೋಡಬೇಕಲ್ಲವೇನೇ ಎಂದು ಕೋದಂಡರಾಮ್ ಪುನಃ ಪ್ರಶ್ನಿಸುತ್ತಾರೆ
ಹಾಗಂತಾ ಮಗಳ ಆಸೆಯ ವಿರುದ್ಧವಾಗಿ ಹೋಗುತ್ತೀರಾ ಎಂಬ ಅವರ ಪತ್ನಿಯ ಮಾತಿಗೆ
ಮಗಳ ಒಳತಿಗಾಗಿ ನಿಷ್ಠೂರ ಕಟ್ಟಿಕೊಂಡರೂ ಪರವಾಗಿಲ್ಲ, ಅವರು ಸಾಲದಿಂದ ಮುಕ್ತವಾಗುವವರೆಗೂ ನಾನಂತೂ ಮಗಳನ್ನು ಕೊಟ್ಟು ಅವರಿಗೆ ಮದುವೆ ಮಾಡಿಕೊಡುವುದಿಲ್ಲವೆಂದು ಹೇಳಿ ಕೈ‌‌ತೊಳೆಯಲು ಹೋಗುತ್ತಾರೆ.

ಮುಂದುವರೆಯುತ್ತದೆ

ಡಾ. ಎನ್. ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

  • ಈ ಸಂಚಿಕೆಯಲ್ಲಿ ತಿಳಿದುಬರುವ ಮುಖ್ಯವಾದ ಅಂಶವೇನೆಂದರೆ

ಮನುಷ್ಯ ತನ್ನ ಉದ್ದೇಶ‌ ಈಡೇರಿಸಿಕೊಳ್ಳಬೇಕಾದರೆ, ಯಾರ ಹಿತವಚನವೂ ಸಹ್ಯವಾಗುವುದಿಲ್ಲ. ಯಾರು ಏನು ಹೇಳಿದರೂ ತಲೆಯೊಳಗೆ ಹೋಗುವುದೇ ಇಲ್ಲ. ಒಟ್ಟಿನಲ್ಲಿ ತನ್ನ ಉದ್ದೇಶ ಮಾತ್ರ ಈಡೇರಬೇಕೆಂದು ಬಯಸುತ್ತಾನೆ. ಆಗ ಮನಸ್ಸು ಒಡೆದು ಅಸಮಾಧಾನದ ಹೊಗೆ ಹೊರಬರುತ್ತದೆ

ಹೆತ್ತವರು ಎಷ್ಟೇ ಕಷ್ಟಪಟ್ಟರೂ ತಮ್ಮ ಮಕ್ಕಳು ಕಷ್ಟ ಪಡುವುದನ್ನು ಸಹಿಸುವುದಿಲ್ಲ. ಕೆಲವೊಮ್ಮೆ ಅಸಹಾಯಕತೆಯಿಂದ ಸುಮ್ಮನಾಗಬೇಕಾಗಬಹುದು ಅಷ್ಟೇ.
ಮಕ್ಕಳೊಂದಿಗೆ ಸ್ನೇಹ ಪ್ರೀತಿ ಅವರು ದೊಡ್ಡವರಾಗಿ ಮದುವೆಗೆ ಬರುವನತನಕ ಮಾತ್ರ ಇರುತ್ತದೆ. ನಂತರದಲ್ಲಿಯೇ ಚಿಂತೆ ಶುರುವಾಗುತ್ತದೆ. ಮದುವೆಯನ್ನು ಎಲ್ಲರೂ ಒಪ್ಪಿ ಮಾಡಿದರೂ ಮನೆಗೆ ಬರುವ ಸೊಸೆಯಂದಿರು ಹೊಂದಿಕೊಂಡು ಹೋದರೆ ಅದಕ್ಕೆ ತಕ್ಕಂತೆ ಅತ್ತೆ ಮಾವನು ಸಹಕರಿಸಿಕೊಂಡು ಹೋದರೆ ಪರವಾಗಿಲ್ಲ. ಇದಕ್ಕೆ ವಿರುದ್ಧವಾದರೆ ಮನೆಯಲ್ಲಿ ‌ಅಶಾಂತಿ ಮೂಡಬಹುದು.
ಒಟ್ಟಿನಲ್ಲಿ ಸಂಸಾರದಲ್ಲಿ ಶಾಂತಿ ನೆಮ್ಮದಿ ನೆಲಸಬೇಕಾದರೆ ಎಲ್ಲರ ಪರಸ್ಪರ ಪ್ರೀತಿ ಸಹಕಾರ ಅನ್ಯೋನ್ಯತೆ ಬಹಳ ಮುಖ್ಯವಾಗಿದೆ.