ಆಚಾರ್ಯ ಶ್ರೀ 108 ಸುನಿಲಸಾಗರ ವಿರಚಿತ ಸುನೀಲ ಪ್ರಾಕೃತ ಸಾಹಿತ್ಯ
ಆಚಾರ್ಯ ಶ್ರೀ ಸುನೀಲಸಾಗರ ಮಹಾರಾಜರ ವ್ಯಕ್ತಿತ್ವ ಮತ್ತು ಕೃತಿತ್ವ ಮುಂಬರುವ ಸಮಾಜಕ್ಕೆ ದಾರಿದೀಪವಾಗಿದೆ. ಶ್ರೀಯುತರ ಸರಳತೆ, ವಿನಮ್ರತೆ ಹಾಗೂ ಸೇವಾಮನೋಭಾವ ಶ್ಲಾಘನೀಯವಾದುದು. ಇಂತಹ ಮಹಾನ್ ವ್ಯಕ್ತಿಯ ಕೃತಿಯನ್ನು ಸಂಪಾದಿಸಿರುವುದು, ಸಂಪಾದನೆಯನ್ನು ಕನ್ನಡ ಭಾಷೆಗೆ ಅನುವಾದಿಸಿರುವುದು ಮೆಚ್ಚತಕ್ಕದ್ದು. ಹಾಸನ ಜಿಲ್ಲೆಯ ಪ್ರೊ. ಜೀವಂಧರಕುಮಾರ ಕೆ. ಹೋತಪೇಟಿಯವರ ಸಾಹಿತ್ಯಿಕ ಸೇವೆ ಹೋಗಳತಕ್ಕದ್ದು.
ಆಧ್ಯಾತ್ಮದ ಕುರಿತು ರಚಿತವಾದ ಈ ಪುಸ್ತಕದಲ್ಲಿ ಕಾಯಾ, ವಾಚಾ, ಮನಸಾ ಶುದ್ಧಿಕರಣ ಹಾಗೂ ಮನುಷ್ಯನ ಮನಃಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪ್ರತಿಬಂಧಕವಾಗಿರುವ ಅರಿಷಡ್ವರ್ಗಗಳ ನಿರ್ಮೂಲನೆ ಮಾಡುವ ಮೂಲಕ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ ಪರಮಾತ್ಮನಲ್ಲಿ ಐಕ್ಯ ಹೊಂದಲು ಸರಳ ಮಾರ್ಗವನ್ನು ಸಮಾಜದ ಮುಂದಿಡಲಾಗಿದೆ. ಈ ಕೃತಿಯು ಪ್ರಕೃತಿಯನ್ನು ವಿಕೃತಿಗೊಳಿಸದೆ, ಸಂಸ್ಕೃತಿಯನ್ನು ಸಂಹಾರ ಮಾಡದೆ, ಸುಕೃತಿ ಬದಲಾಗಿ ದುಷ್ಕೃತಿ ಎಸಗದೆ ಎಲ್ಲರೊಂದಿಗೆ ಪ್ರೇಮದಿಂದಿದ್ದು ಸನ್ಮಾರ್ಗದಲ್ಲಿ ಸಾಗಲು ದಾರಿದೀಪದಂತಿದೆ.
ವಿಷಾದಕರ ಸಂಗತಿ ಏನೆಂದರೆ- ಪುಸ್ತಕದ ವಿಷಯ ವಸ್ತು ಸಮಾಜಕ್ಕೆ ಮಾರ್ಗದರ್ಶಿಯಾದರೂ ಕಠಿಣ ಶಬ್ದಗಳನ್ನು ಒಳಗೊಂಡಿರುವ ಕನ್ನಡ ನಿರೂಪಣಾ ಶೈಲಿಯು ಓದುಗರನ್ನು ಸೆಳೆಯುವಲ್ಲಿ ವಿಫಲವಾಗಬಹುದು. ಅಲ್ಲಲ್ಲಿ ಕಾಗುಣಿತ ದೋಷಗಳಿವೆ. ಮರುಮುದ್ರಣ ಕಾರ್ಯದಲ್ಲಿ ಈ ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆನ್ನುವ ಭರವಸೆ ನನಗಿದೆ. ಪ್ರೊ. ಜೀವಂಧರಕುಮಾರ ಕೆ. ಹೋತಪೇಟಿಯವರ ಸತತ ಪ್ರಯತ್ನ, ಪರಿಶ್ರಮ ಮತ್ತು ಅವರ ಬದುಕು, ಬರಹ ನಮ್ಮ ಕನ್ನಡ ಸಾರಸ್ವತ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.
- ವಿಮರ್ಶಕರು: ಕವಿತ್ತ ಕರ್ಮಮಣಿ, ಕರ್ನಾಟಕ