ಅಭಿಲಾಷೆ ಕಾದಂಬರಿ (ಸಂಚಿಕೆ -21)

ಹಿಂದಿನ ಸಂಚಿಕೆಯಲ್ಲಿ

ಮುಂದಿನ ಭಾನುವಾರ ನಿಮ್ಮ ತಂದೆ ತಾಯಿಯವರನ್ನು ಮನೆಗೆ ಕರೆದುಕೊಂಡು ಬರುವಂತೆ ಕೋದಂಡರಾಂ ರವರು ವಿಕ್ರಮ್ ಗೆ ಹೇಳಿರುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ಭಾನುವಾರ ದ ದಿನ ತಂದೆ ತಾಯಿಯನ್ನು ಕರೆದುಕೊಂಡು ಬಾ ಎಂದು ಕೋದಂಡರಾಮ್ ವಿಕ್ರಮ್ ಗೆಹೇಳಿದ್ದರಿಂದ ಆಶಾಳಿಗೆ ತುಂಬಾ ಸಂತೋಷ ವಾಗಿದ್ದು, ತನ್ನ ರೂಮಿಗೆ ಹೋಗಿ ಪುನಃ ವಿಕ್ರಮ್ ಗೆ ಫೋನ್ ಮಾಡಿ, ಈ‌ ಭಾನುವಾರ ಏನಾದರೂ ಮನೆಗೆ ಬರದೆ ತಪ್ಪಿಸಿಕೊಂಡರೆ, ನಮ್ಮಪ್ಪ ನನಗೆ ಬೇರೆಯವರೊಡನೆ ಮದುವೆ ಮಾಡುತ್ತಾರೆ. ಆಗ‌ನಾನು ಜವಾಬ್ದಾರಳಲ್ಲಾ ಎಂದು ಹೇಳಿದಾಗ
ಏಯ್ ನೀನು ಆ ರೀತಿ ಹೇಳಿಬಿಟ್ಟರೆ ಆಮೇಲೆ ನಿನಗಾಗಿ ಮಿಡಿಯುತ್ತಿರುವ ನನ್ನ ಹೃದಯ ನಿಂತು ಹೋದರೆ ನಾನು ಜವಾಬ್ದಾರನಲ್ಲಾ ಎಂದು ವಿಕ್ರಮ್ ಹೇಳಲು,
ಅಯ್ಯೋ ಆ ರೀತಿಯಾಗುವುದು ಬೇಡಪ್ಪಾ, ಅದನ್ನು ನೋಡಿ ಈ ಜೀವ ನಿಂತು ಹೋದರೆ ನಮ್ಮಪ್ಪ ಅಮ್ಮನ ದುಃಖವನ್ನು ತಡೆಯುವವರು ಯಾರೆಂದು ಆಶಾ ಕೇಳಲು
ಹಾಗೆಲ್ಲಾ ಆಗಲು ನಾನು ಬಿಡುವುದಿಲ್ಲ ಭಾನುವಾರ ಖಂಡಿತ ನಮ್ಮಪ್ಪ ಅಮ್ಮನನ್ನು ನಿಮ್ಮ ಮನೆಗೆ ಕರೆದುಕೊಂಡು ಬಂದು ಈ ಹುಡುಗಿಯೇ ನಿಮ್ಮ ಮುದ್ದು ಸೊಸೆಯಾಗುತ್ತಾಳೆಂದು ಹೇಳುತ್ತೇನೆಂದು ವಿಕ್ರಮ್ ಹೇಳಿದಾಗ
ಓಕೆ ಭಾನುವಾರಕ್ಕಾಗಿ ಕಾಯುತ್ತಿರುತ್ತೇನೆಂದು ಆಶ ಹೇಳಿ ಫೋನ್ ಆಫ್ ಮಾಡುತ್ತಾಳೆ.

ಅಂದು ಶನಿವಾರ ರಾತ್ರಿ ವಿಕ್ರಮ್ ಮನೆಯಲ್ಲಿ, ವಿಕ್ರಮ್ ತಂದೆ ತಮ್ಮ ವ್ಯವಹಾರ ‌ವಿಚಾರವಾಗಿ‌ ತನ್ನ ಮೊದಲ‌ ಮಗನ ಜೊತೆ‌ ಗಹನವಾಗಿ ಚರ್ಚಿಸುತ್ತಿರುವ ಸಮಯದಲ್ಲಿ
ವಿಕ್ರಮ್ ಕೂಡಾ ಅವರ ಎದುರಿಗೆ ಹೋಗಿ ಕುಳಿತ ತಕ್ಷಣ
ಅವರಪ್ಪ ಮಾತನಾಡಿ, ಏನಪ್ಪಾ ವಿಕ್ರಮ್ ನಮ್ಮ ಬಿಸ್ ನೆಸ್ ನಲ್ಲಿ ತಲೆ ಹಾಕುವುದಿಲ್ಲವೆಂದು ಹೇಳಿ, ಈಗ ನಮ್ಮ ಜೊತೆಗೆ ಮಾತನಾಡಲು ಬಂದಿದ್ದೀಯಲ್ಲಾ ಎಂದು ಪ್ರಶ್ನಿಸಿದಾಗ
ಅಪ್ಪಾ ನಾನು ನಿಮ್ಮ ವ್ಯವಹಾರದ ಬಗ್ಗೆ ಮಾತನಾಡಲು ಬಂದಿಲ್ಲ, ನನಗೆ ಯಾವಾಗ ಬರಬೇಕು ಎನಿಸುತ್ತದೆಯೋ ಆಗ ಬರುತ್ತೇನೆಂಬ ವಿಕ್ರಮ್ ಮಾತಿಗೆ
ಹಾಗಾದರೆ ಏಕೆ ಬಂದಿದ್ದೀಯಾ ಎಂದು ಅವನಪ್ಪ ಪ್ರಶ್ನಿಸಲು
ಅಪ್ಪ ನಿಮ್ಮ ಬಳಿ ಮುಖ್ಯವಾದ ವಿಚಾರ ಮಾತನಾಡಬೇಕಿತ್ತು ಎಂದು ವಿಕ್ರಮ್ ನ ಹೇಳಲು
ನಿನ್ನ ಬೇರೆ ವಿಚಾರ ಮಾತನಾಡಲು ರುರಸೊತ್ತಿಲ್ಲ ಏನು ಹೇಳಬೇಕೋ ಹೇಳಿ ಹೋಗು, ನಮ್ಮ ವ್ಯವಹಾರ ದ ಮಾತು ಇನ್ನೂ ಮುಗಿದಿಲ್ಲವೆಂದು ಅವನ ಅಪ್ಪ ಹೇಳಿದಾಗ
ಅಪ್ಪಾ ,,,, ಅದೂ,,, ಎನ್ನುತ್ತಾನೆ
ವಿಕ್ರಮ್ ನಮ್ಮ ಸಮಯವನ್ನು ಅರ್ಥ ಮಾಡಿಕೋ ಬೇಗ ವಿಚಾರ ಹೇಳಿ ಹೋಗು ಎನ್ನಲು
ತನ್ನ ತಂದೆಯು ಗಂಭೀರವಾಗಿರುವುದನ್ನು ಕಂಡು ತನ್ನ ಮದುವೆ ವಿಷಯ ಹೇಳಿದರೆ ಇನ್ನೆಲ್ಲಿ ಬೈಯ್ಯುತ್ತಾರೋ ಎಂಬ ಅಂಜಿಕೆಯಿಂದ ವಿಕ್ರಮ್ ವಿಷಯ ಹೇಳುವುದಕ್ಕೆ ಹಿಂಜರಿದು, ಬಂದೇ ಅಪ್ಪಾ ಎಂದು ಹೇಳಿ ತನ್ನ ತಾಯಿಯ ಬಂದು ಸುಮ್ಮನೆ ನಿಂತಾಗ
ಏನಪ್ಪಾ ಇವತ್ತು ಏನೂ ಮಾತನಾಡದೆ ಮೌನವಾಗಿದ್ದೀಯಲ್ಲಾ ಏನು ಸಮಾಚಾರವೆಂದು ಅವನಮ್ಮ ಕೇಳಲು
ನನ್ನ ಮಾತಿಗೆ ಬೆಲೆ ಇಲ್ಲದ ಮೇಲೆ ನಾನೇಕೆ ಮಾತನಾಡಲಿ ಹೇಳಮ್ಮಾ ಎಂದಾಗ
ನಿನ್ನ ಮಾತಿಗೆ ಯಾರು ಬೆಲೆಕೊಡುತ್ತಿಲ್ಲ ವಿಕ್ರಮ್ ಹೇಳು ಎಂದು ಅವನಮ್ಮ ಕೇಳಲು
ಇನ್ಯಾರಮ್ಮಾ ಅಪ್ಪನೇ ಬೊಲೆಕೊಡುತ್ತಿಲ್ಲವೆಂದಾಗ
ಅಯ್ಯೋ ಹೌದಾ ನಿನ್ಮಪ್ಪನೇ ನಿನ್ನ ಮಾತಿಗೆ ಬೆಲೆ ಕೊಡುತ್ತಿಲ್ಲವಾ? ಎಂದು ಕೇಳಿದಾಗ
ಹೌದಮ್ಮಾ ಅದಕ್ಕೆ ನಿನ್ನ ಬಳಿ ಬಂದೆ ಎಂದು ವಿಕ್ರಮ್ ಹೇಳಿದಾಗ
ಯಾವ ಮಾತಿಗೆ ಬೆಲೆ ಕೊಡುತ್ತಿಲ್ಲವೆಂದು ಅವರಮ್ಮನ ಪ್ರಶ್ನೆಗೆ
ನನ್ನ ಸ್ವಂತ ವಿಚಾರ‌ ಇತ್ತಮ್ಮಾ ಹೇಳಲು ಹೋದರೆ ಮುಖ ಗಂಟಿಕ್ಕಿಕೊಂಡು ಏನು ಹೇಳಬೇಕೋ ಹೇಳಿ ಹೋಗು ಎಂದರಮ್ಮಾ ಎನ್ನುತ್ತಾನೆ ವಿಕ್ರಮ್.
ವಿಚಾರ ಹೇಳಿ ಬರಬೇಕಿತ್ತು ಅವರಿಗೆ ವಿಚಾರ ಹೇಳದೆ ನನ್ನ ಮಾತು ಕೇಳುತ್ತಿಲ್ಲವೆಂದು ಇಲ್ಲಿ ಹೇಳಿತ್ತಿದ್ದೀಯಾ ಎಂದು ಅವನಮ್ಮನ ಮಾತಿಗೆ
ವಿಕ್ರಮ್ ಮಾತನಾಡಿ, ಅಪ್ಪನ ಮಾತಿನ ಧಾಟಿ ನೋಡಿದಾಗ ಹಾಗೆನ್ನಿಸತಮ್ಮಾ ಎನ್ನುತ್ತಾನೆ.
ನಿಮ್ಮಪ್ಪನೇ ನಿನ್ನ ಮಾತಿಗೆ ಬೆಲೆಕೊಡುತ್ತಿಲ್ಲವೆಂದ ಮೇಲೆ ನಾನೂ‌ ಕೊಡುವುದಕ್ಕೆ ಆಗುವುದಿಲ್ಲವೆಂದು ಅವನಮ್ಮ ನುಡಿದಾಗ
ಅಮ್ಮಾ ತಮಾಷೆ ‌ಮಾಡಬೇಡಮ್ಮಾ ಇದು‌ ತುಂಬಾ ಸೀರಿಯಸ್ ವಿಷಯವಿದೆ ಎಂದು ವಿಕ್ರಮ್ ಹೇಳಿದಾಗ
ಏನಪ್ಪಾ ಅಂತಹ ಸೀರಿಯಸ್ ವಿಚಾರ, ಸೀರಿಯಸ್ ವಿಚಾರವೆಂದು ಅಪ್ಪನಿಗೆ ಹೇಳುವುದಕ್ಕೆ ಆಗುವುದಿಲ್ಲವಾ? ಎಂಬ ಅವನಮ್ಮನ ಮರು ಪ್ರಶ್ನೆಗೆ
ಇಲ್ಲಮ್ಮಾ ಅಪ್ಪನ ಮುಖ ನೋಡಿದಾಗ ವಿಷಯ ಹೇಳಲು ಧೈರ್ಯ ಬರಲಿಲ್ಲವೆಂದು ವಿಕ್ರಮ್ ಹೇಳುತ್ತಾನೆ.
ಓ ಅದಕ್ಕೆ ನನ್ನ ಬಳಿ ಬಂದಿದ್ದೀಯಾ, ನೀನು ಅಪ್ಪನ ಬಳಿ ಹೇಳಲು ಭಯಪಡುವಂತ ವಿಷಯ ಏನಿದೆ? ಏನಾದರೂ ತಪ್ಪು ಮಾಡಿದ್ದರೆ ಭಯಪಡಬೇಕು, ಏನು ತಪ್ಪು ಮಾಡಿರುವೆ ಅದನ್ನು ಹೇಳೆಂದು ಅವನ ಅಮ್ಮ ಕೇಳಲು
ನಾನು ಮಾಡಿರುವುದು ಕೆಲವು ಅಪ್ಪ. ಅಮ್ಮಂದರಿಗೆ ತಪ್ಪಾಗಿ ‌ಕಾಣುತ್ತದೆ ನೀವು ಹೇಗೋ ನನಗೆ ಗೊತ್ತಿಲ್ಲವೆಂಬ ವಿಕ್ರಮ್ ಮಾತಿಗೆ.
ನಿನ್ನ ತಪ್ಪು ಏನೆಂದು ಹೇಳಿದರೆ ನಾವು ಡಿಸೈಡ್ ಮಾಡಬಹುದು ನೀನೇ ಎಲ್ಲಾ ಡಿಸೈಡ್ ಮಾಡಿದರೆ ನಮಗೆ ಹೇಗೆ ತಿಳಿಯುತ್ತದೆಂದು ವಿಕ್ರಮ್ ಅಮ್ಮ ಪ್ರಶ್ನಿಸಲು
ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ನಾಳೆ ಭಾನುವಾರ ಅವರ ಮನೆಗೆ ಅಪ್ಪ ಅಮ್ಮನನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆಂದು ವಿಕ್ರಮ್ ಹೇಳಲು
ನೀವುಗಳು ಅಪ್ಪ ಅಮ್ಮನಿಗೆ ಹೆಣ್ಣು ಹುಡುಕುವ ಕಷ್ಟವನ್ನೇ ತಪ್ಪಿಸುತ್ತೀರಿ ಅಲ್ಲವಾ ಎಂಬ ವಿಕ್ರಮ್ ಅಮ್ಮ ಹೇಳುತ್ತಾರೆ.
ಹಾಗೇನಿಲ್ಲಮ್ಮಾ ಈಗಲೂ ಬೇಡ ಎಂದರೆ, ನೀವು ಯಾರನ್ನು ಹೇಳಿದರೂ ಮದುವೆಯಾಗುತ್ತೇನೆ ಎಂದು ವಿಕ್ರಮ್ ಹೇಳಲು
ನೀನು ನಮಗೆ ಹೇಳದೆ ಒಂದು ಹುಡುಗಿಯನ್ನು ಪ್ರೀತಿಸಿ ಈಗ ನೀವು ಹೇಳಿದಂತೆ ಕೇಳುತ್ತೇನೆ ಎಂದು ಹೇಳುತ್ತಿದ್ದೀಯಲ್ಲಾ, ನಿನ್ನನ್ನೇ ನಂಬಿ ಪ್ರೀತಿಸುವ ಹುಡುಗೀಗೆ ಮೋಸ ಮಾಡಲು ಹೇಗೆ ಮನಸ್ಸು ಬರುತ್ತದೆ? ಆ ಹುಡುಗಿ ನಿನ್ನನ್ನು ಬಿಟ್ಟು ಬಿಡುತ್ತಾಳಾ? ಈ
ನಾಟಕವೆಲ್ಲಾ ಬೇಡಾ, ನಿಮ್ಮಪ್ಪನನ್ನು ಒಪ್ಪಿಸಿದರೆ ನಾನು ಒಪ್ಪಿ ಅವರ ಮನೆಗೆ ಬರುತ್ತೇನೆ ಎಂದಾಗ
ಥ್ಯಾಂಕ್ಸ್ ಅಮ್ಮ ಎನ್ನುತ್ತಾನೆ.
ಥ್ಯಾಂಕ್ಸ್ ಆಮೇಲೆ ಹೇಳುವಿಯಂತೆ, ಮೊದಲು ಅಪ್ಪನನ್ನು ಒಪ್ಪಿಸು ಎಂದಾಗ
ಅಮ್ಮಾ ಇದರಲ್ಲಿ ನೀನೇ ಸಹಾಯ ಮಾಡಬೇಕಮ್ಮಾ ,‌ಎಂದು ವಿಕ್ರಮ್ ಹೇಳಿದ ತಕ್ಷಣ
ಅಯ್ಯಯ್ಯೋ ನನ್ನ ಕೈಲಿ ಆಗುವುದಿಲ್ಲಪ್ಪಾ ಎಂದು ಅವನಮ್ಮ ನುಡಿದಾಗ
ಪ್ಲೀಸ್ ಅಮ್ಮಾ ನೀನು ಪೀಠಿಕೆ ಹಾಕು ನಂತರ ನಾನು ಮುಂದುವರೆಸುತ್ತೇನೆಂದು ವಿಕ್ರಮ್ ಹೇಳಲು
ನೋಡೋಣ ಮಕ್ಕಳನ್ನು ಬಿಟ್ಟುಕೊಡಲು ಆಗುವುದಿಲ್ಲ ಪ್ರಯತ್ನಿಸುತ್ತೇನೆಂದು ಅವನಮ್ಮನ ಮಾತಿಗೆ
ಥ್ಯಾಂಕ್ಸ್ ಅಮ್ಮಾ ಎಂದು ಹೇಳಿ ವಿಕ್ರಮ್ ಹೊರಗೆ ಬರುತ್ತಾನೆ

ಭಾನುವಾರದ ದಿನ ವಿಕ್ರಮ್ ಬೇಗನೆ ಎದ್ದು, ರಡಿಯಾಗಿ ಅಮ್ಮನ ಬಳಿ ಹೋಗಿ
ಅಮ್ಮಾ ನನ್ನ ವಿಷಯ ಅಪ್ಪನಿಗೆ ಹೇಳಿದೆಯಾ ? ಅಪ್ಪ ಏನಂದ್ರು? ಇವತ್ತು ನಿಮ್ಮ ಭಾವಿ ಬೀಗರ ಮನೆಗೆ ಹೋಗುವುದಕ್ಕೆ‌ ಒಪ್ಪಿದ್ರಾ ಎಂದು ವಿಕ್ರಮ್ ಕೇಳಲು
ಅವನ ಅಮ್ಮನು ನೀನೇ ಹೋಗಿ ನಿಮ್ಮಪ್ಪನಿಗೆ ಹೇಳಬೇಕಂತೆ ಎನ್ನುತ್ತಾರೆ
ಹಾಗಾದರೆ ನಿನ್ನ ಮಾತು ವರ್ಕ್ ಔಟ್ ಆಗಲಿಲ್ಲವಾ ಎಂದು ವಿಕ್ರಮ್ ಪ್ರಶ್ನಿಸಲು.
ನಾನು ಹೇಳುವುದನ್ನೆಲ್ಲಾ ಹೇಳಿದ್ದೇನೆ. ಮೊದಲು ಒಪ್ಪಲೇ ಇಲ್ಲ ಸುಮಾರು ಹೊತ್ತು ನಿಮ್ಮಪ್ಪನ ತಲೆಗೆ ಹೋಗುವಂತೆ ವಿಷಯವನ್ನು ಹೇಳಿದಾಗ
ನಿನ್ನನ್ನು ಕಳಿಸು ಎಂದರು, ನೀನು ಬೇಗ ಹೋಗಿ ಕೇಳಿದರೆ ಬರಲು ಒಪ್ಪಬಹುದು, ತಡವಾದರೆ ಅಪ್ಪ ಎಲ್ಲೋ‌ ಹೋಗುತ್ತಾರೆ, ಬೀಗರ ಮನೆಗೆ ಹೋಗಲು ಆಗುವುದಿಲ್ಲವೆಂದು ಹೇಳಿದ ತಕ್ಷಣ
ವಿಕ್ರಮ್ ಅಲ್ಲಿ ನಿಲ್ಲದೆ ಬಂದೇ ಅಮ್ಮಾ ಎಂದು ಹೇಳಿ ಅಪ್ಪನ ರೂಮಿಗೆ ಬಂದಾಗ
ಅವನಪ್ಪನು ವ್ಯವಹಾರದ ಬಗ್ಗೆ ಕೆಲವು ಪೇಪರ್ ಗಳನ್ನು ಓದುತ್ತಿರುವುದನ್ನು ವಿಕ್ರಮ್ ಕಂಡು ಬಾಗಿಲಲ್ಲೇ ನಿಲ್ಲುತ್ತಾನೆ
ಅವನ ತಂದೆ ಮಗ ಬಂದಿದ್ದನ್ನು ಕಂಡು ಕಣ್ಣಿಗೆ ಹಾಕಿಕೊಂಡಿದ್ದ ಕನ್ನಡಕ ತೆಗೆದು ಏನು ಬಂದಿದ್ದು ಎಂದು ಪ್ರಶ್ನಿಸಿದಾಗ
ವಿಕ್ರಮ್ ತಬ್ಬಿಬ್ಬುಗೊಳ್ಳುತ್ತಾನೆ. ಅಯ್ಯೋ ಅಪ್ಪನಿಗೆ ಅಮ್ಮ ಏನೂ ಹೇಳೇ ಇಲ್ಲ‌ ಎನ್ನಿಸುತ್ತದೆ, ಈಗ ಹೇಗಪ್ಪಾ ಹೇಳಲಿ ಎಂದುಕೊಂಡು
ಅಪ್ಪಾ ಅಮ್ಮ ಏನೂ ಹೇಳಿಲ್ಲವಾ ಎಂದು ವಿಕ್ರಮ್ ನ ಮಾತಿಗೆ
ಯಾವುದರ ವಿಷಯವಾಗಿ ಎಂದು ಗಂಭೀರತೆಯಿಂದ ಅವನ ತಂದೆ ವಿಕ್ರಮನನ್ನು ಪ್ರಶ್ನಿಸಿದಾಗ
ಅದೂ,,,, ಅದೂ,,,,ಎಂದು ತಡವರಿಸುತ್ತಾನೆ.
ಅದೇನು ವಿಷಯ ಹೇಳಬಾರದಾ ಎಂದು ಅವನ ಅಪ್ಪ ಕೇಳಲು
ತಾಳಪ್ಪಾ ಬಂದೆ ಎಂದು ಹೇಳಿ ಪುನಃ ಅಮ್ಮನ ಬಳಿ ಬರುತ್ತಾನೆ

ಮುಂದುವರೆಯುತ್ತದೆ

ಡಾ. ಎನ್. ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ ವಾದ ಅಂಶವೆನೆಂದರೆ

ಯಾವ ವಿಷಯವಾದರೂ ತಂದೆಯ ಮುಂದೆ ಹೇಳಲು ಭಯಪಡುವ ಮಕ್ಕಳು ಅಮ್ಮನ ಮುಂದೆ ಧೈರ್ಯವಾಗಿ ಹೇಳಿ ಆ ವಿಷಯವನ್ನು ಅಮ್ಮನಿಂದ ಅಪ್ಪನಿಗೆ ಮುಟ್ಟಿಸುವ ಕೆಲಸ‌ ಮಾಡುವುದು ಸಾಮಾನ್ಯವಾಗಿದೆ. ಯಾವುದೇ ವಿಚಾರದಲ್ಲೂ ಅಮ್ಮನು ಎಷ್ಟೇ ಬೈದರೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ‌ ಮಕ್ಕಳು ಏನಾದರೂ ಅಪ್ಪನು ಒಂದು ಸಲ ಬೈದರೆ ಸಾಕು ಬಹಳ‌ ಸೀರಿಯಸ್ಸಾಗಿ ತೆಗೆದುಕೊಂಡು ಅಪ್ಪನಿಗೆ ನಮ್ಮ ಮೇಲೆ ಪ್ರೀತಿಯೇ ಇಲ್ಲವೆಂದು ಬೇಸರಗೊಳ್ಳುತ್ತಾರೆ. ಆದರೆ ಅಪ್ಪ ಏಕೆ ಬೈದರೆಂದು ಮನನ ಮಾಡಿಕೊಳ್ಳುವುದಿಲ್ಲ. ಬೈದು ಹೇಳಿದವನು ಬದುಕಲು ಹೇಳಿದ, ಹುಡುಗಾಟಕ್ಕೆ ಹೇಳಿದವನು ಹಾಳಾಗಲು ಹೇಳಿದ ಎನ್ನುವಂತಾಗುತ್ತದೆ.