-
ಸೌಭಾಗ್ಯ ನಿಧಿ
ಶ್ರೀಗೌರಿ ಲಲಿತಾಂಬೆ ಮಹಾದೇವಿ ಪಾರ್ವತಿ
ದಕ್ಷಪುತ್ರಿ ಸುಮಂಗಲಿ ಪರಶಿವನ ಸತಿ
ಅರಿಶಿನ ಕುಂಕುಮ ಶೋಭಿತೆ ಸೌಭಾಗ್ಯ ನಿಧಿ
ಬರುವಳು ಮನೆ ಮನೆಗೂ ಹರಸಲು ತಾಯಿ !!
ತ್ರಿಭುವನ ಸುಂದರಿ ಭಾಗ್ಯಧಾತೆ ವರನೀಡು
ಸಕಲೈಶ್ವರ್ಯ ಕರುಣಿಸುತ ನೀ ದಯೆ ತೋರು
ನಿನ್ನ ಕೃಪೆಯಿರಲು ಇಳೆಯಲ್ಲಿ ಸಿರಿ ಸಂಪದವು
ನಿಷ್ಠೆಯಿಂದ ಸ್ಮರಿಸುವೆವು ನಿನ್ನ ಹಗಲಿರುಳು !!
ಭಕ್ತಿಯೆಂಬ ಮಡಿಯನುಟ್ಟು ಚಿತ್ತಶುದ್ಧಿ ಮಾಡಿ
ನೀಚಬುದ್ಧಿ ಮಲಿನ ಭಾವಗಳ ಹೊರದೂಡಿ
ಹೃದಯ ಮಂದಿರದಲ್ಲಿ ಮಣೆಹಾಕಿ ಸಿಂಗರಿಸಿ
ಶಿರಬಾಗಿ ನಮಿಸುವೆ ಬಂದು ನೆಲಸು ಸ್ವರ್ಣಗೌರಿ !!
ಜಾಜಿಮಲ್ಲಿಗೆ ಕೆಂಡಸಂಪಿಗೆ ಮರುಗ ಪತ್ರೆ
ದವನ ಕಣಗಲೆ ಸೇರಿ ಕಟ್ಟಿದ ಹೂ ಮಾಲೆ
ನಿನಗರ್ಪಿಸುವೆ ಸ್ವೀಕರಿಸು ಜಗದಂಬೆ
ಬೆಳಗಿಸು ಈ ಬಾಳು ನಿನ್ನಡಿಗಳಿಗೆರಗುವೆ !!
– ಎ. ಸರಸಮ್ಮ
ಚಿಕ್ಕಬಳ್ಳಾಪುರ
-
ವಿಘ್ನ ನಿವಾರಕ ವಿನಾಯಕನು
ಭಾದ್ರಪದ ಮಾಸದ ಗಣೇಶ ಚೌತಿಯು
ವಿನಾಯಕನಿಗೆ ವಾಹನ ಚಿಕ್ಕ ಇಲಿಯು
ಬಹಳ ಪ್ರಸಿದ್ಧಿ ಗಣೇಶನ ಬುದ್ಧಿವಂತಿಕೆಯು
ದೇವರಿಂದ ಜನ್ಮ ಪಡೆದ ನಮ್ಮ ಗಣಪತಿಯು
ಶಿವ ಪಾರ್ವತಿಯರ ಪ್ರೀತಿಯ ಸುತನು
ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು
ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು
ಸದಾ ಕಾಪಾಡುವ ದೇವಲೋಕದ ದೈವ ನೀನು
ಮತ್ತೆ ಬಂದಿದೆ ಸಡಗರದ ಗಣೇಶ ಉತ್ಸವವು
ತುಂಬಿದೆ ಹರ್ಷ ಭೂಮಿಯ ತುಂಬೆಲ್ಲವು
ನಿತ್ಯ ಕಡಬು ಹೋಳಿಗೆಯ ನೈವೇದ್ಯವು
ಸ್ಥಾಪಿಸಿ ಮಣ್ಣಿನ ಗಣಪತಿಯ ಪೂಜಿಸೋಣ ನಾವು ನೀವು
ಸಿಡಿಸದಿರಿ ಜೋರಾಗಿ ಎಲ್ಲೆಡೆ ಪಟಾಕಿಗಳನ್ನು
ಗೊತ್ತಿದ್ದರೂ ನಾಶಮಾಡಬೇಡಿ ಪ್ರಕೃತಿಯ ಸೊಬಗನ್ನು
ಗಣೇಶ ವಿಸರ್ಜನೆಯಲಿ ಮರೆಯದಿರಿ ಪ್ರತಿಜ್ಞೆಯನ್ನು
ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ದೇವಾ ನಿಮಗಿನ್ನು
ಸಕಲ ಕಾರ್ಯಗಳಿಗೂ ಮುಂದಿರುವ ಸಿದ್ಧಿವಿನಾಯಕನೇ
ನಂಬಿದ ಪಾಲಿನ ಭಕ್ತರ ಕೈ ಬಿಡದ ಮೂಷಿಕವಾಹನನೇ
ಭೂಮಿಯ ಮೇಲಿನ ಎಲ್ಲರ ಕಷ್ಟ ನಿವಾರಿಸುವ ವಕ್ರತುಂಡನೇ
ಭೂಲೋಕದ ಉದ್ಧಾರಕ್ಕಾಗಿ ಜನಿಸಿದ ಲಂಬೋದರನೇ
ಗಣಪತಿಯು ಬಂದು ನಮಗೆಲ್ಲ ಹರ್ಷವ ತಂದನು
ನಲಿಯುತ ಕುಣಿಯುತ ನಾನಾವೇಷದಿ ಬಂದನು
ಗರಿಕೆಯ ಹುಲ್ಲಿನಲಿ ಸಕಲರ ಪ್ರೀತಿಯ ಕಂಡನು
ಬೇಡಿದ ವರವನು ಭಕ್ತರಿಗೆ ದಯಪಾಲಿಸಿಹನು
ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು, ಬಾಗಲಕೋಟ