ಸೇಂದಿ

ಭಾಗ – 01

ಇವತ್ತು ನಿಮಗೆ ಒಂದು ಮುಖ್ಯವಾದ ಸಂಗತಿಯನ್ನು ಹೇಳಬೇಕು. ಅದನ್ನು ನೀವು ಇದೊಂದು ಕತೆ ಅಂದುಕೊಳ್ಳಬಹುದು. ಕತೆಯ ಹಿಂದಿನ ಪ್ರಸಂಗವನ್ನು ನೀವು ಎಲ್ಲೂ ನೋಡಿರಲಿಕ್ಕಿಲ್ಲ. ನಾನು ನಾಲ್ಕು ದಿನದ ಹಿಂದೆ ವರ್ಗವಾಗಿ ಬಂದ ಸಿರುಗುಪ್ಪವನ್ನು ನೀವು ನೋಡಿರಬೇಕು ಅಥವಾ ಅದರ ಹೆಸರನ್ನೂ ಕೇಳಿರಲಿಕ್ಕಿಲ್ಲ. ಇಡೀಯ ಕರ್ನಾಟಕದಲ್ಲಿ ಗಂಗಾವತಿ ಬಿಟ್ಟರೆ ಭತ್ತದ ನಾಡು ಎಂಬ ಶಿರೋನಾಮ ಪಡೆದ ತಾಲೂಕು ಅಂದರೆ ಅದು ಸಿರುಗುಪ್ಪ ಒಂದೆ. ಇಲ್ಲಿಗೆ ನೌಕರಿ ಮಾಡಲು ಬರುವ ತಶಿಲ್ದಾರರು, ಡಿಸಿಯವರು, ಎಸ್ಪಿಯವರು ಮತ್ತು ಮುಂತಾದವರು ಇಲ್ಲಿಂದ ದೂರದ ಊರುಗಳಿಗೆ ವರ್ಗಾವಣೆ‌ಯಾದರೂ ಇಲ್ಲಿ ತಿಂದ ಅನ್ನವನ್ನು ತುಂಬಾ ಇಷ್ಟಪಡುತ್ತಾರೆ. ಎರಡ್ಮೂರು ತಿಂಗಳಿಗೊಮ್ಮೆ ವಿಆರ್ಎಲ್ಗೆ ಅಕ್ಕಿಯನ್ನು ಹಾಕಿಸಿಕೊಳ್ಳುತ್ತಾರೆ. ತುಂಗಾನದಿಯ ನೀರಿಗೆ ಈ ಎರೆಮಣ್ಣಿನಲ್ಲಿ ಬೆಳೆಯುವ ಭತ್ತವು ಬಹಳ ರುಚಿಯಾಗಿರುತ್ತಂತೆ.
ದಾಖಲೆಗಳ ಪ್ರಕಾರ ಬಳ್ಳಾರಿ ಜಿಲ್ಲೆಯ ಸಿರುಗುಪ್ಪವು 1910 ಅಕ್ಟೋಬರ್ 01 ರಂದು ಬ್ರಿಟಿಷರ ಕಾಲದಲ್ಲೆ ತಾಲೂಕು ಆಗಿದೆ. ಬೀಜದಿಂದ ಹುಟ್ಟಿಕೊಂಡ ಸಸಿಯಂತೆ, ಗರ್ಭದಿಂದ ಹುಟ್ಟಿಕೊಂಡ ಮಗುವಿನಂತೆ ಇದರ ಬೆಳವಣಿಗೆ ಇಲ್ಲ. ಮಣ್ಣಿನಲ್ಲಿ ಹೂತಿರುವ ಕಲ್ಲು ಕೂಡ ಬೆಳೆಯುತ್ತಂತೆ! ಅದರ ಜಾತಿಗೆ ಸೇರಿದೆ ಇದು. ಹಾಗೆ ನೋಡಿದರೆ ಹತ್ತುವರ್ಷದ ಕೆಳಗೆ ತೆಕ್ಕಲಕೋಟೆಯು ಇದಕ್ಕಿಂತ ದೊಡ್ಡದಿತ್ತಂತೆ. ಮನೆಗಳು ಮತ್ತು ಜನಸಂಖ್ಯೆ ಎರಡರಲ್ಲೂ! ಯಾವಾಗ ಆಂಧ್ರದ ಜನರು ಇಲ್ಲಿಗೆ ಬಂದು ರಿಯಲ್ ಎಸ್ಟೇಟ್ ಧಂದೆ ಶುರು ಮಾಡಿದರೋ ಅಲ್ಲಲ್ಲಿ ಬಡಾವಣೆಗಳು ಹುಟ್ಟಿಕೊಂಡವು. ಅದಕ್ಕೂ ಮೊದಲು ಹಳೆ ಸಿರುಗುಪ್ಪ ಎಂದರೆ, ಕೋಟೆ ಆಂಜನೇಯ ಗುಡಿಯ ಸುತ್ತಮುತ್ತ ಇರುವ ವಡ್ಡರ ಓಣಿ, ಎಳವರ ಓಣಿ, ಮಾದರ ಓಣಿ, ಮುಸ್ಲಿಮರ ಓಣಿ ಹಾಗೂ ಸರ್ಕಾರಿ ಕಚೇರಿಗಳಷ್ಟೇ. ಈಗಿನ ಬಸ್ ನಿಲ್ದಾಣವು ಹಿಂದೊಮ್ಮೆ ಊರ ಹೊರಗೆ ಇತ್ತಂತೆ. 150  ಎ ಎಂಬ ರಾಷ್ಟ್ರೀಯ ಹೆದ್ದಾರಿಯು ಮೇಲ್ದರ್ಜೆಗೆ ಏರಿದ ಮೇಲೆ ಈಗಿನ ಆದೋನಿ ರಸ್ತೆ, ಬಳ್ಳಾರಿ ರಸ್ತೆ, ಸಿನ್ನೂರು ರಸ್ತೆಗಳ ಪಕ್ಕದಲ್ಲಿ ಅಂಗಡಿಗಳು,  ಮನೆಗಳು ಚಾಚಿಕೊಂಡಿವೆಯಂತೆ.

ಇದಾವುದೂ ಮುಖ್ಯವಾದ ವಿಷಯವಲ್ಲ. ನಾನು ಹೇಳಬೇಕು ಅಂದುಕೊಂಡ ಸುದ್ದಿಯೂ ಅದಲ್ಲ. ಇಲ್ಲಿಗೆ ವರ್ಗವಾಗಿ ಬಂದ ದಿನವೇ ನನ್ನ ಜತೆಗೆ ವಯಸ್ಸಾದ ತಂದೆಯೂ ಬಂದಿದ್ದಾರೆ. ತಾಯಿಯನ್ನು ಮೂರು ವರ್ಷದ ಹಿಂದೆ ಮೂರು ಆಕಳಿನ ಆಯಸ್ಸಿಗಿಂತ ಮೊದಲೇ ಕಳೆದುಕೊಂಡೆ. ಸಾವು ಎನ್ನುವುದು ರೋಗದಿಂದಲೋ ಅಪಘಾತದಿಂದಲೋ ಬರಬಾರದು. ನಮ್ಮನ್ನು ಹೆತ್ತವರು ನರಗಳನ್ನು ಕಿತ್ತೆಸೆಯುವಂತೆ ನಿತ್ಯವೂ ನರಳುವುದನ್ನೂ ಚರ್ಮಕ್ಕೆ ಬೆಂಕಿ ಬಿದ್ದಂತೆ ಪ್ರತಿಕ್ಷಣ ಗೋಳಾಡುವುದನ್ನೂ ಅದೇಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತದೆ? ಅವರು ದೈಹಿಕ ರೋಗಿಗಳಾದರೆ, ನಾವು ಮಾನಸಿಕ ರೋಗಿಗಳಾಗುತ್ತೇವೆ. ಸಾವು ಎಂದರೆ ಹೇಗಿರಬೇಕೆಂದರೆ, ಸಹಿಸಲು ಅಸಾಧ್ಯವಾಗದಂತಹ ಯಮನೋವು ದೇಹದಲ್ಲಿ ಕಾಣಿಸಿಕೊಳ್ಳದೆ, ಯಮನ ಪಾಶದಿಂದ ಪ್ರಾಣವನ್ನು ಬಲವಾಗಿ ಎಳೆಯುವಂತೆ ಆಗದೆ ಉಗುರು ಬಿಸಿಗೆ ಬೆಣ್ಣೆ ಕರಗುವಂತೆ ಅತಿ‌ಸುಲಭವಾಗಿ ಜೀವ ಹೋಗಬೇಕು. ಹಾರ್ಟ್ ಅಟ್ಯಾಕ್ ಅಂತಾರಲ್ಲ; ನಿಂತಲ್ಲಿ ಕುಸಿಯುವುದು, ಕುಂತಲ್ಲಿ ಪ್ರಾಣಪಕ್ಷಿ ಹಾರಿ ಹೋಗುವುದು? ಆ ಸಾವೆ ಒಂದು ಲೆಕ್ಕಕ್ಕೆ ಸಹನೀಯ ಅನಿಸುತ್ತದೆ. ಈ ಸಾವಿನಿಂದ ಮನುಷ್ಯತ್ವ ಮರೆತು ಬದುಕುತ್ತಿರುವವರಿಗೆ ಕೆಲವು ಲಾಭಗಳಿರಬಹುದು. ಆಪರೇಷನ್ ಖರ್ಚು ಉಳಿಯುತ್ತದೆ. ನಿಗಾ ನೋಡುವುದು ತಪ್ಪುತ್ತದೆ. ದಿನಾಲೂ ಗುಳಿಗೆ ನುಂಗಿಸುವ ರಗಳೆಯಿಂದ ಹಿಡಿದು ಮೆಡಿಕಲ್ಲಿಗೆ ಹೋಗಿ ಔಷಧಿ ತರುವ ತಂಟೆಗಳೂ ಇರುವುದಿಲ್ಲ. ನಿಸ್ಪ್ರಯೋಜಕ ಎಂದು ಭಾವಿಸಬಹುದಾದ ಒಬ್ಬ ರೋಗಿಯು ಹುಟ್ಟಿಕೊಂಡರೆ‌ ಅಂಥವರು ಮಗ, ಮಗಳು, ಸೊಸೆಯರು, ಮೊಮ್ಮಕ್ಕಳು, ಬೀಗರು ಕಡೆಗೆ ಜನರಿಗೂ ಕಿರಿಕಿರಿ ಆಗುತ್ತಾರೆ. ಅನಾಥಾಶ್ರಮಕ್ಕೆ ಹಾಕಿ ಬರುವಂಥಹ ಯೋಚನೆ ಹುಟ್ಟಲು ಕಾರಣರಾಗುತ್ತಾರೆ. ಇವೆಲ್ಲಾ ತಾಪತ್ರಯಗಳು ತಪ್ಪಲು ನಾನು ಇಷ್ಟಪಡುವ ಸಾವೆಂದರೆ ಅದು ಹಾರ್ಟ್ ಅಟ್ಯಾಕ್!! ಅದು ಮೂರೇ ಮೂರು ಸೆಕೆಂಡ್ ನಡೆಯುವ ಅತಿಸೂಕ್ಷ್ಮಕ್ರಿಯೆ, ಶಾಶ್ವತ ಉಸಿರು ನಿಲ್ಲಿಸುವ ಅಂತ್ಯಕ್ರಿಯೆ.
ಇಲ್ಲಿಂದಲೆ ಕತೆಯ ಉದ್ದೇಶಗಳು ಒಂದೊಂದಾಗಿ ರೆಕ್ಕೆ ಬಿಚ್ಚಿಕೊಳ್ಳುತ್ತವೆ. ಪ್ರಾಣದ ಮೇಲೆ ಎಲ್ಲಾರಿಗೂ ಅತಿಯಾಸೆ ಇರುವಂತೆ ನನ್ನ ಅಪ್ಪನಿಗೂ ನೂರುವರ್ಷ ಬದುಕುವ ಮಹದಾಸೆ. ಸಾವನ್ನು ಗೆದ್ದವರಿಲ್ಲ. ಸಾಯದೇ ಬದುಕುಳಿಯಲೂ ಸಾಧ್ಯವಿಲ್ಲ ಎಂಬುದು ಆತನಿಗೂ ಚೆನ್ನಾಗಿ ಗೊತ್ತಿದೆ. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡರೆ ಮುಪ್ಪಿನವರೆಗೂ ಬದುಕಬಹುದೆಂದು ಯಾರೋ ಆತನ ತಲೆಗೆ ತುಂಬಿದ್ದಾರೆ. ಎಲ್ಲಾ ಆಸೆಗಳ ಮೂಲ ಒಂದೇ: ಎಲ್ಲಾರಿಗಿಂತಲೂ ಒಂದೊರ್ಷ ಹೆಚ್ಚು ಬದುಕುವುದು. ಯಾವಾಗ ಮನಸಿನೊಳಗೆ ಆಸೆಗಳು ಹುಟ್ಟಿಕೊಳ್ಳುತ್ತವೆಯೋ ಆಸೆಗಳ ಸಂಖ್ಯೆ ಹೆಚ್ಚಿದಷ್ಟು ಮನುಷ್ಯನು ಉಳಿಯುವ ವಯಸ್ಸುಗಳ ಸಂಖ್ಯೆ ಕಡಿಮೆಯಾಗುತ್ತದೆಂದು ಬರೆಯುತ್ತಾ ತಿಳಿದ ತಿಳುವಳಿಕೆ.

ಹೊಲದಲ್ಲಿ ತಿರುಗಾಡಿ ಊರಲ್ಲಿ ಕಂಡವರ ಜೊತೆ ಮಾತಾಡಿ ಟೈಂಪಾಸ್ ಮಾಡುತ್ತಿದ್ದ ತಂದೆಗೆ ಇಲ್ಲಿ ಗೂಟಕ್ಕೆ ಕಟ್ಟಿದಂತೆ ಆಗಿದೆ. ಸಿಟಿಗಳಲ್ಲಿ ಇದ್ದಾಗ ಬೆಳಗ್ಗೆ ಒಮ್ಮೆ ಸಂಜೆಗೊಮ್ಮೆ ವಾಕಿಂಗ್ ಗೆ ಕರೆದೊಯ್ಯಬೇಕು. ಇಲ್ಲದಿದ್ದರೆ ನನ್ನ ಹೆಂಡತಿ ಇದ್ದಿದ್ದರೆ ಮೈತೊಳೆದು ತಲೆಬಾಚಿ ಉಣಿಸುತಿದ್ದಳೆಂದು ಸಿಟ್ಟು ಮಾಡಿಕೊಳ್ಳುತ್ತಾನೆ. ಸಿರುಗುಪ್ಪದಲ್ಲೋ ಒಂದೇ ಒಂದು ಪಾರ್ಕ್ ಸಹ ಇಲ್ಲ. ಉದ್ಯಾನವನದಲ್ಲಿ ಕೈ ಬೀಸುತ್ತಾ, ತಂಗಾಳಿಯನ್ನು ಆಸ್ವಾದಿಸುತ್ತಾ, ಮರಗಳ ಎಲೆಗಳು ಕಿಲಕಿಲ ನಗುವುದನ್ನು ನೋಡುತ್ತಾ, ನೆಲದ ಮೇಲೆ ಹಾಸಿದ ಹಚ್ಚ ಹಸುರಿನ ಹುಲ್ಲಿನ ಮೇಲೆ ನಿಂತುಕೊಂಡೋ ಕುಳಿತುಕೊಂಡೋ ಅರ್ಧತಾಸು ಕಳೆದರೆ ಆದಿನದ ಎಲ್ಲಾ ಟೆನ್ಷನ್ಗಳು ನೀರಲ್ಲಿ ಕರಗುವ ಸಕ್ಕರೆಯಂತೆ ಮಾಯವಾಗುತ್ತವೆ ಎಂಬ ನನ್ನ ಪಿತನ ಅಂಬೋಣ ಸರಿ ಇರಬಹುದು.

“ಇಲ್ಲಿ ತಾಲೂಕು ಕ್ರೀಡಾಂಗಣದಗನೆ  ಎಲ್ರೂ ತಿರುಗಾಡ್ತಾರ. ನೀನೂ ಅಲ್ಲಿಗೆ ಹೋಗಿಬಾ” ಅಂದರೆ,
“ನೀನು ಎಂತಾ ಊರಿಗೆ ನೌಕರಿ ಹಾಕ್ಸಿಕೊಂಡಿ? ಈ ಊರಾಗ ಇರೋದು ಗಾಳ್ಯಾ ಏನಾ‌ ಧೂಳಾ? ರೋಡಿಗೆ ನಡ್ಕಂತ ತಿರ್ಗಾಡಾಕ ಆತಾದನು? ಮೂರೆಜ್ಜೆ ಇಡಟಿಗೆ ಹಾಳಾದ ಧೂಳು ಕಣ್ತುಂಬ ಬುಳ್ತಾದ. ಸಿರುಗುಪ್ಪ ಸಿಟಿ ತುಂಬಾ ಮಂಜಿನಂಗ ಬರಿಧೂಳೇ ಕೌದಾದ. ಮಣ್ಣಿನ ಧೂಳಾದ್ರ ತಿಕ್ಕಿಕೊಂಡ್ರ ಹೋತಾದಪ. ಇದಾ? ಉಜ್ಜಿಕೊಂಡಷ್ಟೂ ಬ್ಯಾನೆ ಆತಾದ. ಕಣ್ಣೊಳಗನೆ ಗಟ್ಟಿಗೆ ಅಂಟಿಕೊಳ್ತಾದ” ಎಂದು ಮೈಲುಗಟ್ಟಲೆ ನಿಲ್ಲದ ರೈಲಿನಂತೆ ಬಂದ ದಿನಾನೇ ಪ್ರಾರಂಭಿಸಿದರು.

“ಅದು ಮಣ್ಣಿನ ಧೂಳಲ್ಲಪಾ, ಅಕ್ಕಿಧೂಳು. ಒನ್ಸಲ ಕಣ್ಣಾಗ ಹೊಕ್ಕಂದ್ರ ತಿಕ್ಕೊಂಡ್ರೂ ಹೊರಗ ಬರಂಗಿಲ್ಲ. ಸಬುಕಾರಚ್ಚಿ ಮುಖ ತೊಳ್ಕಂದ್ರೂ ಹೋಗಂಗಿಲ್ಲ. ರಾತ್ರಿ ಮಲಿಗಿ ಬೆಳೆಗ್ಗೆ ಎದ್ದಾಗ ಸಿಮಿಂಟಂಗ ಕಣ್ಣಿಗೆ ಮೆತ್ತಿಕೊಂಡಿರ್ತಾದ” ನನ್ನ ಮಾತು ತುಂಡಾಗುವ ಮೊದಲೆ ಏರು ದನಿಯಲ್ಲಿ ಅಲುಬಿದರು. “ಹಂಗಾದ್ರ ಇದು ನಿನ್ಗ ಶಿಕ್ಷೆ ಅನು?” ಅಪ್ಪ ಕೇಳಿದಂತೆ ನಂದೇನೂ ಶಿಕ್ಷೆಗಾಗಿ ವರ್ಗಾವಣೆ ಆಗಿರಲಿಲ್ಲ. ಆದರೆ ಈ ಹಿಂದೆ ಶಿಕ್ಷೆಯ ದೃಷ್ಟಿಯಿಂದಲೇ ಸಿರುಗುಪ್ಪಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿತ್ತಂತೆ. ಇದಕ್ಕೆ ಪೂರಕವಾಗಿಯೇ ಈಗಲೂ ಇಲ್ಲಿನ ವಾತಾವರಣ ಇರುವುದು. ಸಿರುಗುಪ್ಪುದ ಯಾವುದೇ ಹಳ್ಳಿಯಲ್ಲಿ ಹೋಗಿ ನೋಡಿದರೂ ಉಪ್ಪು ನೀರೆ ಗತಿ! ಮಳೆಗಾಲ ಚಳಿಗಾಲ ಬೇಸಿಗೆಕಾಲ ಮೂರು ಕಾಲಕ್ಕೂ ಸೊಳ್ಳೆಗಳ ಬೃಹುತ್ ಸೈನ್ಯದೊಂದಿಗೆ ಹೋರಾಟ ನಡೆಸಬೇಕು. ಅಕ್ಕಿಧೂಳಿನ ಗಾಳಿಯನ್ನು ದಿನಾ ಕುಡಿಯಬೇಕು. ಬೇಸಿಗೆ ಕಾಲದ ಬಿಸಿಗೆ ಕೆಂಪಗೆ ಇದ್ದವರು ಕರ್ರಗೆ ಆಗಬೇಕು. ಧೂಳು ಮೆತ್ತಿದ ಮನೆಗಳು, ರೋಡುಗಳು, ಗಿಡಮರಗಳು ಮಳೆಗೆ ಮಾತ್ರ ಮೈ ತೊಳೆದುಕೊಳ್ಳುವುದು ನನಗೆ ಕಾಣಿಸಿದೆ. ಅಪ್ಪನಿಗೆ ನನ್ಮುಂದೆ ಇನ್ನೂ ದೂರು ಹೇಳುವುದಿತ್ತು. ಇದೆಲ್ಲಾ ಇಲ್ಲಿ ಮಾಮೂಲು, ಇಲ್ಲಿಯ ಜನರು ಇದಕ್ಕಿಂತಲೂ ಕೆಟ್ಟ ಅವಸ್ಥೆಯಲ್ಲಿ ಬದುಕಲು ತಯಾರಿದ್ದಾರೆ.

ಮಾಲಿನ್ಯದಿಂದ ಕೂಡಿದ ವಾತಾವರಣವನ್ನು ಸರಿ ಮಾಡುವವರ ಮುಂದೆ ನಿಂತು ಕೇಳುವ ಧೈರ್ಯವಾಗಲೀ ಹೊರಾಟ ಮಾಡುವ ಗುಣವಾಗಲೀ ಸ್ಥಳೀಯರಿಗೆ ಇಲ್ಲ. ಎಲ್ಲಾರೂ ತಮ್ಮ ಕೆಲಸದಲ್ಲಿ ಬಿಜಿಯಾಗಿರುವಾಗ ಬೇವೂರಿನವರಾದ ನಾನು ನೀನು ಏನು ಮಾಡಲು ಸಾಧ್ಯ? ಎಂದು ನಿಜವನ್ನೇ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅದಕ್ಕೊಂದು ಕ್ಯಾತೆ ತೆಗೆಯುತ್ತಾನೆ. ಸತ್ತು ಮಣ್ಣು ಸೇರಿದ ಅಮ್ಮನನ್ನು ಮಾತಿಗೆ ಎಳೆದು  ತಂದು, ಅವಳಾದರೆ ನಾನು ಮಲಗುವ ತನಕ ಬೇಸರ ಮಾಡಿಕೊಳ್ಳದೆ ನನ್ನ ಮಾತನ್ನು ಆಸ್ಥೆಯಿಂದ ಕೇಳುತ್ತಿದ್ದಳು ಅನ್ನುತ್ತಾನೆ. ನಾನು ನೋಡಿದಂತೆ, ತಮ್ಮನ್ನು ಹೀಗೇ ನೋಡಿಕೊಳ್ಳಬೇಕು, ತಮ್ಮ ಮುಂದೆ ಹೀಗೇ ವರ್ತಿಸಬೇಕು ಎಂದು ಬಯಸುವ ಗೌಡರ, ಪಟೇಲರ ಮನೆಯ ಗಂಡಸರ ನಡುವಳಿಕೆಗಳು ನಮ್ಮ ಮನೆಯಲ್ಲೂ ಪ್ರತಿಧ್ವನಿಸುತ್ತಿದ್ದವು. ಅಮ್ಮನ ಮಾತು ಹೆಚ್ಚಾದರೆ ಅಪ್ಪ ಗದರುತಿದ್ದ. ಸತಿಯೆಂದರೆ ಹೇಮರೆಡ್ಡಿ ಮಲ್ಲಮ್ಮನಂತೆ ಇರಬೇಕೆಂದು ಅಮ್ಮನಿಗೆ ಭೋದಿಸುತ್ತಿದ್ದ. ಹೇಮರೆಡ್ಡಿ ಮಲ್ಲಮ್ಮ, ಸತಿಸಾವಿತ್ರಿ ದೇವಿಯ ನಾಟಕಗಳಿಗೂ ಕರೆದೊಯ್ದು ತೋರಿಸಿದ್ದ. ನಾಟಕ ನೋಡಿದ ಮೇಲೆ ಆ ಮಹಾ ಸತಿಯರ ಜೀವನ ತುಂಬಾ ಇಷ್ಟವಾಗಿ ಅವರ ಗುಣಗಳನ್ನು ತಾನು ಅಳವಡಿಸಿಕೊಂಡಿದ್ದಕ್ಕಾಗಿ ಬ್ರಾಹ್ಮಣರು ಕೂಡ ತನಗೆ ಮರ್ಯಾದೆ ಕೊಡುತ್ತಿದ್ದಾರೆ ಅಂತ ಅಮ್ಮ ಹೇಳುವುದೂ ಇತ್ತು ನಾನೂ ಕಣ್ಣಾರೆ ನೋಡಿದ್ದೂ ಇದೆ. ಗಂಡಂದಿರನ್ನು ಬಗ್ಗಿಸಿದ ಮಾಡರ್ನ್ ಸ್ತ್ರೀಯರ ಕಡೆಯಿಂದ ಅಮ್ಮನಿಗೆ- ನೀನು ಪೆದ್ದಿ, ನೀನು ಬದಲಾಗಿಲ್ಲಾ, ಸ್ವಲ್ಪನ ಬದಲಾಗು ಎಂಬ ಮಂಗಳಾರತಿಗಳು ಮುದುಕಿಯಾದರೂ ತಪ್ಪಿರಲಿಲ್ಲ.
ನಮ್ಮ ಕುಟುಂಬಕ್ಕೆ ಆಧಾರಸ್ತಂಭ ಎಂದರೆ ಅಪ್ಪ. ತಾತ ಹೋದ ಮೇಲೆ ಮನೆಗೆ ಹಿರಿತಲೆ ಕೂಡ ಅವನೇ. ಹಿರಿಯರಿಲ್ಲದ ಮನೆ ತರಗೆಲೆ ಇದ್ದಂತೆ. ಗಾಳಿ ಬಂದರೆ ತರಗೆಲೆ ಹಾರಿ ಹೋಗುವಂತೆ ಹಿರಿಯರಿಲ್ಲದ ಮನೆಯಲ್ಲಿ ಸಂಸಾರಗಳು ಬೇಗನೆ ಹಾಳಾಗುವುದನ್ನು ನಾನು ನೋಡಿದ್ದೇನೆ.
ಈಗ ಅಪ್ಪನದು ಒಂದೇ ಹಠ!

ನಾಸ್ಟಾ ಮಾಡಲು ಇಲ್ಲಿ ಸರಿಯಾದ ಒಂದು ಹೋಟೇಲು ಇಲ್ಲವಂತೆ. ಸಾಂಬಾರು ಕೊಡದೆ ಕಡಲೆಹಿಟ್ಟಿನ ಚಟ್ನಿಯಲ್ಲಿ  ಇಡ್ಲಿಯನ್ನು ಕೊಡುತ್ತಾರಂತೆ. ಚಟ್ನಿ ಅಂದರೆ ಅದರಲ್ಲಿ ಹಸಿ ಕೊಬ್ಬರಿಯನ್ನು ತುರಿದು ಹಾಕಬೇಕು. ಇಡ್ಲಿ ಎಂದರೆ ಬೆರಳಿಟ್ಟರೆ ಮೆತ್ತಗೆ ಒಳಗೆ ಇಳಿಯಬೇಕು. ಇವರ ಇಡ್ಲಿಗಳೋ ಒತ್ತಿದರೆ ರಬ್ಬಲ್ ಚಂಡಿನಂತೆ ಪುಟಿಯುತ್ತವೆ. ಹಲ್ಲು ಉಳುಕು ಇದ್ದವರು, ಬೊಚ್ಚಬಾಯಿ ಇದ್ದವರು ಜಿಗಿಯಲು ಕಷ್ಟವಾಗುತ್ತಂತೆ. ಆರೋಗ್ಯದ ಕಾಳಜಿಯಿಲ್ಲದ ಹಣದ ವ್ಯಾಪಾರಿಗಳಾದ ತಳ್ಳುವ ಬಂಡಿಯವರು ರೋಡಿನ ಬದಿಗೆ ಬಂಡಿ ಜೋಡಿಸಿಕೊಂಡು ಕಡಾಯಿ ತುಂಬ ಆಯಿಲ್ ನಂತಹ ಕಪ್ಪನೆ ಒಳ್ಳೆಣ್ಣೆ ಸುರಿದು, ಹೊಗೆ ಆಡುವಂತೆ ಎಣ್ಣೆಯನ್ನು ಕಾಸುತ್ತಾ, ಅದರಲ್ಲಿ ಬಜ್ಜಿ ಬೋಂಡಾಗಳನ್ನು ಕರೆದು, ಅದಕ್ಕೆ ಮುಚ್ಚುವ ವ್ಯವಸ್ಥೆ ಮಾಡದಿರುವುದರಿಂದ ನೊಣಗಳು ಮುತ್ತಿಕೊಂಡು, ಧೂಳು ಮೆತ್ತಿಕೊಂಡೇ ಇರುತ್ತಂತೆ. ಅಂಥವನ್ನು ತಿಂದವರು ಬೇಗ ಸ್ವರ್ಗ ಸೇರುತ್ತಾರಂತೆ. ಅಂತಹ ಬಜಿಗಳು, ಬೋಂಡಾಗಳನ್ನೇ ಇಲ್ಲಿನ ಜನ ಸಂಜೆ ಹೊತ್ತಿನಲ್ಲಿ ಹಬ್ಬದ ಹುಗ್ಗಿಯಂತೆ ಸವಿಯುತ್ತಾರಂತೆ. ಮೊದಲ ದಿನ ನಾವು ಬಾಡಿಗೆ ಮನೆಯಲ್ಲಿ ಸಾಮಾನುಗಳನ್ನು ಜೋಡಿಸುತ್ತಿದ್ದರೆ ತಾನು ಯಾರಿಗೂ ಹೇಳದೆ ಸಿರುಗುಪ್ಪ ನಗರವನ್ನು ಸುತ್ತಿಕೊಂಡು ಬಂದು ತನಗೆ ಸರಿಬರದ ಸಂಗತಿಗಳನ್ನು ಪಟ್ಟಿ ಮಾಡಿ ನನಗೆ ಒಪ್ಪಿಸಿದ. ಯಾರೇ ಪುಸುಲಾಯಿಸಿದರೂ ನೀನು ಮಾತ್ರ ಹೊರಗಡೆ ತಿನ್ನಬೇಡ ಎಂಬುದು ಅಪ್ಪನ ಬೇಡಿಕೆಯಾಗಿತ್ತು. ಅಮ್ಮನಂತೆ ಯಾವಾಗಲೂ ಅಡಿಗೆಮನೆಯಲ್ಲಿ ಏನಾದರೊಂದು ಮಾಡುತ್ತಾ ಕೂತಿರುವ ಸೊಸೆಯನ್ನು ಕರೆದು ನನ್ನ ಮುಂದೆಯೇ- ಒಗ್ಗಾಣಿ-ಮಿರ್ಚಿ ಅಂದ್ರ ನನ್ಮಗ್ಗ ಬಲು ಇಷ್ಟ. ಆಗಾಗ ಮಾಡಿಕೊಡು. ಇಲ್ಲಂದ್ರ ಹೊರಗಡೆ ತಿಂದು ಆರೋಗ್ಯ ಹಾಳ್ಮಾಡಿಕೊಳ್ತಾನ ಎಂದು ಹೇಳಿ ಪುಣ್ಯಕಟ್ಟಿಕೊಂಡರು. ಈ ಮಾತನ್ನು ಅಪ್ಪ ತಾನಾಗೇ ಹೇಳಿದರೂ ನಾನೇ ಆತನ ಬಾಯಿಂದ ಹೇಳಿಸಿದೆ ಅಂತ ಅವತ್ತು ರಾತ್ರಿ ಇವಳು ಬೆನ್ನುಕೊಟ್ಟು ಮಲಗಿದಳು.

ಅಪ್ಪ ಹೇಳುವುದಕ್ಕಿಂತಲೂ ಒಂದು ಗುಲಗಂಜಿಗಿಂತ ಹೆಚ್ಚಿನ ಅಸ್ತವ್ಯಸ್ತತೆ ನನ್ನ ಗಮನಕ್ಕೂ ಬಂದಿದೆ. ಹಾಗಂತ ನೌಕರಿ ಬಿಡಲು ಬರುತ್ತದೆಯೆ? ಹೆದರಿ ಹೋಗಲು ಆಗುತ್ತದೆಯೇ? ಏನೇಯಾದರೂ ಅಪ್ಪನಿಗೆ ಎದುರು ಮಾತಾಡುವಂತಿಲ್ಲ. ಮಾತಾಡಿದರೆ ಅದಕ್ಕೊಂದು ರಂಪ.

ಅದಕ್ಕೋಸ್ಕರವೆ ಮಗನೊಡನೆ ಮಾತು ಬಿಟ್ಟರೂ ಬಿಡುವ ಆಸಾಮಿ ಆತ. ಈ ತಂದೆಯರಿಗೆ ತಮ್ಮ ಮಕ್ಕಳು ಸಣ್ಣವರಿದ್ದಾಗ ಥಳಿಸುವಷ್ಟು ಕಡುಕೋಪ ಮಕ್ಕಳು ದೊಡ್ಡವರಾದ ಮೇಲೆ ಅವರೊಂದಿಗೆ ಮಾತು ಬಿಡುವಷ್ಟು ಬಲುಸೆಡುವು ಯಾಕಿರುತ್ತದೋ?

“ಎಲ್ಲಿ ಹೆಂಗಿರ್ತಾದೋ ನಾವೂ ಹಂಗೆ ಇರ್ಬೇಕಪಾ” ಅಂತ ವಿನಂತಿಸಿದ ರೀತಿಯಲ್ಲಿ ಹೇಳಿದೆ. ಮನೆಯಲ್ಲಿ ಒಂದುತಾಸು ನಿಲ್ಲುವ ಮಗ ಅವನಲ್ಲ. ಹಳ್ಳಿಯಲ್ಲಿ ಹೆಂಗಸರೊಂದಿಗೆ ನಕಲಿ ಮಾಡುತ್ತಾ ಸ್ವಚ್ಚಂದವಾಗಿ ಬದುಕಿದ ಆತ ಸಿರುಗುಪ್ಪದಲ್ಲಿ ಇರಲು ಇಚ್ಛೆ ಪಡಲಿಲ್ಲ.

“ನನ್ನಿಂದ ಆಗಂಗಿಲ್ಲಪಾ, ನಾಳಿಗೆ ಬಸ್ಸಿಗೆ ಕುಂದ್ರಿಸಿ ಬಾ. ಬೇಕಾದ್ರ ಬಂದ್ಕಾಂತ ಹೋಕ್ಯಾಂತ ಇರ್ತೀನಿ” ಅಂತ ಡಾಕ್ಟರ್ ಮತ್ತೆ ತಿದ್ದಿ ಬರೆಯದ ಗುಳಿಗಿ ಹಾಳೆಯಂತೆ ಷರಾ ಎಳೆದುಬಿಟ್ಟ. ನಾಳೆ ಹೋಗುವಾಗ ಹೇಳುವ ಆ ಮಾತನ್ನು ಈಗಲೇ ಉಸುರಿದ. ಅವಸರದಲ್ಲಿ ಹೊರಡುವಾಗ ಹೇಳಲು ಮರೆತು ಹೋಗುತ್ತದೆಂದು ಅನಿಸಿರಬೇಕು.

“ಈಧೂಳಿಗೆ ಬೈಕ್ ಎಕ್ಸಿಡೆಂಟ್ ಜಗ್ಗಿ ಆಗ್ಯಾವಂತ. ಸೆಸ್ಮಾ ಹಾಕ್ಕೆಂದೆ ಗಾಡಿ ಓಡುಸ್ಬೇಕಪಾ; ಸುಳೆಮಗುಂದು ಧೂಳು ಸೆರಿಗಿಲ್ಲಾ!” ಅಂತ ನೆನೆಸಿಕೊಂಡು ಹೇಳಿದರು. ಮಗನಿಗೆ ಎಷ್ಟೇ ಮುಂಜಾಗ್ರತೆ ಹೇಳಿದರೂ ಆತನಿಗೆ ಸಮಾಧಾನ ಇದ್ದಂತಿರಲಿಲ್ಲ. ಆತನೊಳಗೆ ಯಾವುದೋ ಅವ್ಯಕ್ತ ಭಯ ಕಾಡತೊಡಗಿತ್ತು.

ಬೆಳಗ್ಗೆ ಹತ್ತುಗಂಟೆಗೆ ಅಪ್ಪನನ್ನು ರಾಯಚೂರು ಬಸ್ಸಿಗೆ ಕೂಡಿಸಿ ಆಫೀಸಿಗೆ ಬಂದೆ. ನಿನ್ನೆದಿನ ಅಪ್ಪ ಯಾಕೆ ಅಷ್ಟೊಂದು ಸಿಡಿಮಿಡಿಗೊಂಡ ಎಂಬುದು ನನಗೆ ಅವತ್ತು ಅರ್ಥವಾಯಿತು. ಸೆಸ್ಮಾ ಮರೆತು ಹೋಗಿದ್ದೆ. ಸಿರುಗುಪ್ಪ ಧೂಳು ಸಿರುಗುಪ್ಪದಲ್ಲಿ ಕಾಲಿಟ್ಟ ಯಾರನ್ನೂ ಖಂಡಿತ ಬಿಡುವುದಿಲ್ಲ. ನೀವು ಕಣ್ಣಿಗೆ ಕನ್ನಡಕ ಹಾಕಿಕೊಂಡರೆ ನಿಮ್ಮ ಮೈಗಳಿಗೆ, ಗಾಡಿಯಲ್ಲಿ ತಿರುಗಾಡಿದರೆ ಗಾಡಿಯ ಮೈಗಳಿಗೆ ದೆವ್ವದಂತೆ ಬಡಿದುಕೊಳ್ಳುತ್ತೇನೆಂದು ಪ್ರತಿಜ್ಞೆ ಮಾಡಿಕೊಂಡಿದೆ. ಮರುದಿನ ಬೆಳಿಗ್ಗೆ ಕಣ್ಣು ತೆರೆಯಲೂ ತ್ರಾಸಾಯಿತು. ಬಿಸಿನೀರು ಉಗ್ಗಿಕೊಂಡು ತೊಳೆದುಕೊಂಡೆ. ಪಿಚ್ಚು ಕೂಡುವ ಜಾಗದಲ್ಲಿ ಗ್ರಾಂನಷ್ಟು ಅಕ್ಕಿಧೂಳು ಕುಂತಿತ್ತು. ತಿಕ್ಕಿಕೊಂಡು ತಿಕ್ಕಿಕೊಂಡು ಎಡಗಣ್ಣು ಕೆಂಪಗೇರಿತ್ತು. ಅದನ್ನು ನೋಡಿ ನನ್ನ ಹೆಂಡತಿ ಬೆಚ್ಚಿ ಬಿದ್ದಳು. ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳುವ ತನಕ ಬಿಡಲಿಲ್ಲ. ಮಾಯುವ ಮೆಡಿಷನ್ ಕೊಟ್ಟ ವೈದ್ಯರು ಹೇಳಿದ್ದು ಒಂದೇ; ಧೂಳು ಬಿದ್ದಾಗ ಕಣ್ಣುಗಳನ್ನು ತಿಕ್ಕಿಕೊಳ್ಳಬೇಡಿ, ನೇರವಾಗಿ ಹಾಸ್ಪತ್ರೆಗೆ ಬನ್ನಿ. ಏನಾಗುವುದಿಲ್ಲೆಂದು ತಿಕ್ಕಿಕೊಂಡರೆ ನಿಮ್ಮ ಕಣ್ಣುಗಳನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು. ಮಾಸ್ಕ್ ಹಾಕಿಕೊಳ್ಳಿ ಇಲ್ಲದಿದ್ದರೆ ಕೆಮ್ಮು, ಗೂರಲು, ಕ್ಷಯ ರೋಗದಂತಹ‌ ಶ್ವಾಶಕೋಶದ‌ ಖಾಯಿಲೆಗಳು ಬರುತ್ತವೆಂದು ಉಪದೇಶಿಸಿದರು. ಸಿರುಗುಪ್ಪದಲ್ಲಿ ದಪ್ಪಗಿರುವ ರೆಡ್ಡಿ ಜನಗಳನ್ನು ಬಿಟ್ಟು ಕೂಲಿ ಮಾಡಿ ಬದುಕುವ ಜನರು ಯಾಕೆ ಸೊಣಕಲು ಇದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿತು. ಒಂದು ಪ್ರಯಾಣಕ್ಕೆ ಹೀಗಾದರೆ, ದಿನನಿತ್ಯ ಕನ್ನಡಕ ಇಲ್ಲದೆ ಸಂಚರಿಸುವ ಸಾಮಾನ್ಯ ಜನರ ಗತಿಯೇನು? ಇದಕ್ಕೆ ಕಾರಣ ಏನು? ಎಂಬುದನ್ನು ತಿಳಿಯಲು ಅದರ‌ ಹಿಂದೆ ಹೊರಟೆ.

ಬಳ್ಳಾರಿ ರೋಡಿಗೆ ಸಾಯಿಬಾಬಾ ಗುಡಿಯವೆರೆಗೆ, ಸಿಂಧಾನೂರು ರಸ್ತೆಗೆ ಇಬ್ರಾಂಪುರ ಗ್ರಾಮದವರೆಗೆ, ಆಧೋನಿ ರಸ್ತೆಗೆ ಶ್ರೀನಗರ ಕ್ಯಾಂಪಿನವರೆಗೆ ಈ ದರಿದ್ರ ಅಕ್ಕಿಧೂಳೆಂಬ ಬೇತಾಳವು ಫಾಗ್ ನಂತೆ ಯಾವಾಗಲೂ ಆವರಿಸಿಕೊಂಡಿರುತ್ತದೆ. ಇದಕ್ಕೆ ಮೂಲ ಕಾರಣ: ನೂರಾರು ಅಕ್ಕಿ ಗಿರಣಿಗಳಿಂದ ಹೊರ ಬರುವ ಹೊಗೆ. ಅಂದರೆ ಅಕ್ಕಿಧೂಳು. ಅಕ್ಕಿ ಗಿರಣಿಯ ಪರವಾನಗೆ ಪ್ರಕಾರ ಮಿಲ್ಲಿನ ಚಿಮಣಿಯನ್ನು ಇಷ್ಟು ಎತ್ತರದವರೆಗೆ ಏರಿಸಬೇಕು, ಇಂತಿಷ್ಟು ಗಿಡಗಳನ್ನು ಮಿಲ್ಲಿನ ಸುತ್ತಲೂ ನೆಡಬೇಕು ಎಂಬಂತಹ ಕಠಿಣ ನಿಯಮಗಳಿವೆಯಂತೆ! ಪತ್ರಿಕೆ ಮಿತ್ರರೊಬ್ಬರು ಕೇಳಿದಾಗ ಹೇಳಿದರು. ಜನರಿಗೆ ಅನುಕೂಲ ಆಗಬೇಕಾದ ಗಿರಣಿ ನಿಯಮಗಳು ಪಾಲನೆಯಾಗದೆ ಅಕ್ಕಿಧೂಳಿನೊಂದಿಗೆ ಆಕಾಶದಲ್ಲಿ ಹಾರಾಡುತ್ತಿವೆ ಅನಿಸುತ್ತಿದೆ. ಅಪ್ಪ ಕೇಳಿಕೊಂಡು ಬಂದಿದ್ದು- ಅರಳಿಗನೂರು ಕ್ರಾಸ್ನಲ್ಲಿ ನಾಕೈದು ಬೈಕ್ ಎಕ್ಸಿಡೆಂಟಾಗಿ ಕೆಲವರು ಸತ್ತೇ ಹೋಗಿದ್ದಾರಂತೆ. ಮೊನ್ನೆ ಸ್ವಾತಂತ್ರ್ಯ ದಿನದಂದು ಬಳ್ಳಾರಿ ರೋಡಿಗೆ ಅಭಯಾಂಜಿನೇಯನ ಗುಡಿಯ ಕಾರಿಡಾರ್ ಮುಂದೆ ಮಗನನ್ನು ಶಾಲೆಗೆ ಬಿಡಲು ಬಂದ ಸವಾರನು ಲಾರಿ ಗಾಲಿಗೆ ಸಿಕ್ಕಿ ಸತ್ತಿದ್ದನ್ನು ಕೇಳಿ ಅಲ್ಲಿಗೆ ಹೋಗಿ ಬಂದೆ. ಅಪ್ಪನ ಹಿಂದೆ ಕುಳಿತ ಮಗ ಹೇಗೋ ಬಚಾವಾದ. ಸತ್ತವನು ಬೈಕನ್ನು ಓಡಿಸುತ್ತಾ ಕಣ್ಣಲ್ಲಿ ಬಿದ್ದ ಧೂಳನ್ನು ಒಂದು ಕೈಯಿಂದ ತಿಕ್ಕಿಕೊಳ್ಳುತ್ತಿದ್ದನಂತೆ! ಅಷ್ಟರಲ್ಲಿ ಲಾರಿ ಬಂತಂತೆ ಎಕ್ಸಿಡೆಂಟ್ ಆಯಿತಂತೆ! ಜನ ಹೇಳುವ ಮಾತು. ಸಿರುಗುಪ್ಪ ನಗರವು ನೌಕರಸ್ಥರಿಗೆ ಪ್ರಾಶಸ್ತ್ಯವಾದ ಊರಾಗಿಲ್ಲದಿದ್ದರೂ ಮತ್ತೊಂದು ಊರಿಗೆ ವರ್ಗಾವಣೆ ಆಗುವ ತನಕ ಕಣ್ಣು ತಿನ್ನುವ, ಪ್ರಾಣ ತಿನ್ನುವ, ಆರೋಗ್ಯ ತಿನ್ನುವ ಅಕ್ಕಿಧೂಳನ್ನು ದಿನಾಲೂ ಬೈಯ್ದುಕೊಳ್ಳುತ್ತಾ ಸಮಯವನ್ನು ಕಳೆಯುವುದು ನನ್ನ ಪಾಲಿಗೆ ಇದ್ದೇ ಇದೆ.

ಸೇಂದಿ ತೆಗೆಯುವ ಚಿತ್ರ

ಭಾಗ – 02

ನಿನ್ನೆಯೇ ಯೋಜನೆ ಹಾಕಿಕೊಂಡಿದ್ದೆವು; ಮ್ಯಾಗಿನಾಳದಿಂದ ಕರ್ನಾಟಕದೊಳಗೆ ನುಸುಳುವ ಸೇಂದಿಕಾರರನ್ನು ಹಿಡಿದು ತರಬೇಕೆಂದು. ನಾನು ಬೆಳಗ್ಗೆ ಎದ್ದಾಗ ಐದುವರೆ ಆಗಿತ್ತು. ಇದು ಜುಲೈ ಆಗಿರುವುದರಿಂದ ಹೆಚ್ಚುಕಮ್ಮಿ ಐದರ ಸುಮಾರಿಗೆ ಮುಸುಕು ಹರಿದು ಬೆಳಕು ಅಡರುತ್ತದೆ. ನಾಗಪ್ಪನಿಗೆ ಕರೆ ಮಾಡಿದಾಗ ಆತ- ನಾನು ಆಗಲೇ ಎದ್ದು ತಯಾರು ಆಗಿದ್ದೇನೆಂದೂ ನನ್ನ ಬೈಕೆ ಒಯ್ಯೋಣವೆಂದೂ ನಾನು ಬರುವಷ್ಟರಲ್ಲಿ ನೀನು ರೆಡಿ ಇರಬೇಕೆಂದು ಒಂದೆ ಉಸುರಲಿ ಹೇಳಿದ.
ನಾನು ಮದುವೆಯಾದದ್ದು ನೌಕರಿಗಿಂತ ಮುಂಚೆ. ನೌಕರಿ ಬಂದ ಮೇಲೆ ನನ್ನ ಹೆಂಡತಿಗೆ ಮದ ಜಾಸ್ತಿಯಾಗಿದೆ. ಮೊದಲಿನ ಚುರುಕು ಈಗಿಲ್ಲ. ಕೈಯ್ಯಲ್ಲಿ ಹಣವಿಲ್ಲದಿದ್ದರೆ ಕೈಕಾಲು ಓಡಾಡುತ್ತವೆ. ಹಣದಿಂದ ಕೈಭಾರ ತಲೆಭಾರವಾದರೆ ಕೈಕಾಲು ಕೂಡುತ್ತವೆ. ನಾನು ನೌಕರಿಗೆ ಸೇರಿದ ದಿನ ನನ್ನನ್ನು ಇಲಾಖೆಗೆ ಅರ್ಪಣೆ ಮಾಡಿಕೊಳ್ಳುತ್ತಿದ್ದೇನೆಂದು ಪ್ರತಿಜ್ಞೆ ಮಾಡಿದ್ದೇನೆ. ಗಂಡನ ನೌಕರಿಗೆ ಹೆಂಡತಿಯಾದವಳು ಅರ್ಧರಾತ್ರಿಯಲ್ಲೂ ಸಹಕರಿಸುತ್ತೇನೆಂದು ಪ್ರತಿಜ್ಞೆ ಮಾಡದಿದ್ದಕ್ಕೋ ಏನೋ!  ಹೊತ್ತಲ್ಲದ ಹೊತ್ತಿನಲ್ಲಿ ಮೆತ್ತಗೆ ಎಬ್ಬಿಸಿದರೂ ಏನ್ ರಿ ನಿಮ್ದು? ಎಂದು ಗೊಣಗುತ್ತಾಳೆ. ತನ್ನ ಕೆಲಸವಿದ್ದರೆ ನನ್ನ ಕಿವಿಯ ತಮಟೆ ಹರಿಯುವಂತೆ ಜಲ್ದಿ ಏಳ್ರಿ? ಎನ್ನುತ್ತಾಳೆ. ಅದಕ್ಕೂ ಮೌನವಿದ್ದರೆ ಹೊದ್ದುಕೊಂಡ ಹಾಸಿಗೆಯನ್ನು ಕಿತ್ತಿ ಎಸೆಯುತ್ತಾಳೆ. ಚಹಾ ಮಾಡುವ, ನಾಸ್ಟಾ ಮಾಡುವ ಅವಶ್ಯಕ ಕೆಲಸಗಳು ಹೆಂಡತಿಯಿಂದಲೇ ಆಗಬೇಕು. ಅವಳು ಒಂದು ಮಾತಿಗೆ ಎರಡು ಮಾತಿಗೆ ಏಳದಿದ್ದರೆ ಅವಳು ಹೊದ್ದ ದುಪ್ಪಟವನ್ನು ಎಳೆಯುವ  ಧೈರ್ಯ ನನಗಿನ್ನೂ ಬಂದಿಲ್ಲ.
“ರೈಡಿಗೆ ಹೋಗ್ಬೇಕು ಚಾ ಮಾಡಿಕೊಡ್ತೆನು?” ಎಂದು ಅವಸರದಿಂದ ಹೇಳಿದೆ. ಚಹಾ ಕುಡಿಯದೆ ದಿನವನ್ನು ಪ್ರಾರಂಭಿಸಲು ಆಗದಂತಹ ಚಟವನ್ನು ಮೈಗೂಡಿಸಿಕೊಂಡಿದ್ದೇನೆ. ನಿನ್ನೆ ರಾತ್ರಿಯೇ- ಬೆಳಗ್ಗೆ ಬೇಗನೆ ಹೋಗಬೇಕು ಎಂದು ಹೇಳದಿರುವುದು ನನ್ನ ತಪ್ಪೇ. ಆದರೂ ಅವಳು ನನಗೋಸ್ಕರ ಏಳಬಹುದಿತ್ತು. ನಾನು ಬಿಪಿ ಏರಿಸಿಕೊಂಡಿದ್ದರೂ ಅಂಗಾತ ಮಲಗಿದ ಅವಳು ಕಣ್ಣು ಬಿಡದೆ ಮೆಲ್ಲಗೆ ತೊದಲಿದಳು- “ಇವತ್ತು ನನ್ನಿಂದ ಆಗಂಗಿಲ್ರಿ ಏನನ ತಿಳ್ಕರಿ” ಅವಳ ಮಾತು‌ ತೊದಲು ಬಂತು. ಆಕಡೆ ನನ್ನ ಗಮನ ಹರಿಯಿತು. ಯಾವಾಗಲೂ ಮಲಗಿ ಎದ್ದ ತಕ್ಷಣ ಮೊದಲ ಕೆಲವು ಪದಗಳು ದಪ್ಪ ಬರುತ್ತವೆ. ಇದು ನಮ್ಮಿಬ್ಬರ ಸಮಸ್ಯೆಯಷ್ಟೇ ಅಲ್ಲ; ಪ್ರತಿಯೊಬ್ಬರಿಗೂ ಹಾಗೆ ಆಗುತ್ತದೆ. ಅದಕ್ಕೆ ಕಾರಣ: ನಾಲಿಗೆ ದಪ್ಪ ಆಗಿರುವುದು. ಬಾಯಿಯನ್ನು ತಾಸುಗಟ್ಟಲೆ ಮುಚ್ಚಿದರೆ ನಾಲಿಗೆ ದಪ್ಪ‌ ಆಗುತ್ತಂತೆ. ತೆರೆದಾಗ ಗಾಳಿಗೆ ಸರಿಯಾಗುತ್ತಂತೆ. ಅಂದರೆ ಸಹಜ ಸ್ಥಿತಿಗೆ ಬರುತ್ತದೆಂದು ನಮ್ಮ‌ ನಾಗಪ್ಪನೇ ಹೇಳಿದ್ದ.

“ಹೊರಗ ಕುಡಿರಿ, ರೋಡಾಗ ಟೀಸ್ಟಾಲುಗಳು ತೆರ್ದಿರ್ತಾವ. ನೀವು ಜಲ್ದಿ ಹೋಗ್ಬೇಕು ಅಂತೀರಿ. ಚಾ ಮಾಡಾಕ ನಾಸ್ಟಾ ಮಾಡಾಕ ಟೈಮೆಲ್ಲಿ ಆದ?” ಎಂದು ಸಮಜಾಯಿಸಿ ಕೊಟ್ಟಳು. ದುಡಿಯುವವನು ನಾನೇ ತಂದು ಹಾಕುವವನು ನಾನೇ ಎಂಬುದು ಅರಿವಿಗೆ ಬಂದ ಮೇಲೆ ನನ್ನ ಕಡೆಗೆ ಮಗ್ಗಲು ಬದಲಿಸಿ ಕಣ್ಣು ಬಿಟ್ಟಳು. ಹೆಂಡತಿಗೆ ಮರು ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವಂತಹ ಸ್ವಭಾವ ನನ್ನೊಳಗೆ ಯಾವಾಗಿನಿಂದ ಬೆಳೆದು ಬಿಟ್ಟಿದೆಯೋ? ಎಂಬ ಯೋಚನೆ ಬಂದದ್ದು ತುಂಗಭದ್ರ ನದಿ ದಂಡೆಯ ಮೇಲೆ ಸುಮ್ಮನೆ ಕುಂತು ಮುಖ ಕಾಣುವಂತೆ ಶಾಂತವಾಗಿ ನಿಂತ ಮಡುಗಿನ ನೀರಿನಲ್ಲಿ ಕಲ್ಲು ಎಸೆಯುವಾಗ!

ನಾಗಪ್ಪ ಬಂದಾಗ ನಮಸ್ಕಾರ ಅಂದವನು ಭಾಬಿ ಎದ್ದಾರನು? ಅಂತನೂ ಕೇಳಿದ. ಅಕಿ ಮಾಡಿದ ಚಹಾ ಕುಡಿಯುವ ಹಂಬಲ ಅವನಿಗೆ. ತನ್ನ ಹೆಂಡತಿಗಿಂತ ನನ್ನಾಕಿ ಮಾಡುವ ಚಹಾವು ಮಸ್ತ್ ಇರುತ್ತದೆಂಬುದು ಅವನ ಹೊಗಳಿಕೆ. ಆದರೆ ನಾನು ಕಂಡಂತೆ ನಮ್ಮ ಮನೆ ಚಹಾಗಿಂತ ನಾಗಪ್ಪನ ಮನೆಯ ಚಹಾವು ಇನ್ನೂ ಮಸ್ತಾಗಿ ಇರುತ್ತದೆಂಬುದು ನನ್ನ ಅನ್ನಿಸಿಕೆ. ಎರಡರಲ್ಲಿ ಯಾವುದು ಸರಿ? ನನಗೆ ಅನಿಸುವಂತೆ, ನಾಗಪ್ಪ ಮತ್ತು ನನ್ನ ಅನಿಸಿಕೆಗಳೆರಡೂ ಸರಿ ಇರಬಹುದು. ಒಂದೇ ಕೈಯ ಅಡಿಗೆ ಎಂದೂ ವಿಶೇಷ ಅನಿಸುವುದಿಲ್ಲ. ಅಪರೂಪಕ್ಕೆ ಸವಿಯುವ ಬೇರೆಯವರ ಕೈಯ್ಯಡಿಗೆಯು ಅದ್ಭುತ ಎನಿಸುವುದು. ಅದು ನಾಲಿಗೆಯ ವಿಶಿಷ್ಟ ಗುಣಕ್ಕಿಂತಲೂ ಲಗಾಮು ಇಲ್ಲದ ಮನಸಿನ ಗೊಂದಲ ಆಗಿರಬಹುದು.

“ಅಕಿ ಎದ್ದಿಲ್ಲ. ನಿನಗ ಚಾಮಾಡಿ ಕೊಡಂಗಿಲ್ಲ ಬುಡು” ಅಂತ ನನ್ನಾಕೆಗೆ ಕೇಳುವಂತೆ ಹೇಳಿದೆ. ಅದನ್ನು ಆತ ತಮಾಷೆ ಅಂದುಕೊಂಡ. “ಮಕ್ಕಲಿ ಬುಡೋ! ನಿನಗ ದಿನಾ ಮಾಡ್ಯಾಕಿ ದಣ್ಕಂಡಿರ್ತಾಳ ನಮತ್ತಿಗೆ! ಒಂದಿನ ಚಾ ಕುಡ್ಲಿಲ್ಲಂದ್ರ ಸಾಯಿತ್ತೆನು? ಎಷ್ಟು ಕುಡಿತಿದ್ದಿ ಕುಡಿ ಬಾ ಹೊಗರ ಕುಡ್ಸತೀನಿ!” ಭಾಬಿಯ ಪರ ಮಾತಾಡಿದ. ಅಕಿ ತನ್ನ ಮಾತನ್ನು ಕೇಳಿಸಿಕೊಳ್ಳಲೆಂದೇ ಹೇಳಿದಂತಿತ್ತು. ಯಾಕೆಂದರೆ ಅವನ ನದರೆಲ್ಲಾ ಆಕಡೆಗೇ ಇತ್ತು. ನನಗೂ ಸಹ ಪರ ಸ್ತ್ರೀಯರನ್ನು ವಹಿಸಿಕೊಂಡು ಮಾತಾಡುವುದು ರೂಢಿಯಾಗಿದೆ. ನಾಗಪ್ಪನ ಮನೆಗೆ ಹೋದಾಗ ಬೇಕಂತಲೇ ಅವನ ಪರವಾಗಿ ಮಾತಾಡುವುದಿಲ್ಲ. ಅವನ ಹೆಂಡತಿಯನ್ನು ತಂಗಿಯನ್ನಾಗೋ ಅಕ್ಕಳನ್ನಾಗೋ ಸ್ವೀಕರಿಸಿಲ್ಲ. ಅವನು ನನ್ನ ಹೆಂಡತಿಯನ್ನು ಅತ್ತಿಗೆ ಅಂತ ಕರೆದರೆ, ನಾನು ಅವನ ಹೆಂಡತಿಗೆ ವೈನಿ ಎಂದು ಕರೆಯುತ್ತೇನೆ. ಹಾಗೆ ಕರೆದದ್ದು ಅವನೇ ಮೊದಲು. ಅದಕ್ಕೋಸ್ಕರ ನಾನೂ ಸಹ ಅವನಿಗಿಂತ ಕಡಿಮೆಯಿಲ್ಲ ಅಂದುಕೊಂಡಿದ್ದೇನೆ. ಸೇರಿಗೆ ಸವಾಸೇರಾಗಿ ಇಳಿದಿದ್ದೇನೆ. ಅದು ಅವನಿಗೂ ಗೊತ್ತಿದೆ. ನನಗನ್ನಿಸುತ್ತದೆ; ಹೆಂಗಸರ ಮೆಚ್ಚುಗೆ ಗಳಿಸಲು ಹಾಗೆ ಮಾಡುತ್ತೇವೆಂದು. ಹೆಂಗಸರ ಪರವಾಗಿ ಮಾತಾಡದಿದ್ದರೆ ಅವರು ನಮ್ಮನ್ನು ಸಹಿಸುವುದಿಲ್ಲ ಎನ್ನುವುದು ನಾನು ಅನುಭವಿಸಿದ ಅನುಭವ.
ಅಭಯಾಂಜಿನೇಯನ ಗುಡಿ ಮುಂದೆ ಇರುವ ಪ್ರದೀಪನ ಡಬ್ಬಾ ಅಂಗಡಿಯಲ್ಲಿ ಇಬ್ಬರ ಟೀಪಾನ ಆಯಿತು. ನಾಗಪ್ಪನೇ ಬೈಕು ಹೊಡಿತಿದ್ದ. ಮಲಗಿದ ನಾಗರ‌ಹಾವನ್ನು ತುಳಿದರೆ ಧುತ್ತೆಂದು ಎಡೆ ಬಿಚ್ಚುವಂತೆ ಲಾರಿ-ಬಸ್ಸುಗಳ ಓಡಾಟಕ್ಕೆ ರೋಡನ್ನು ಗಾದಿ ಮಾಡಿಕೊಂಡು ಮಲಗಿದ ಅಕ್ಕಿಧೂಳು ಆಳೆತ್ತರಕ್ಕೆ ಏಳುತ್ತದೆ. ನಾವು ನಿಧಾನಕ್ಕೆ ಹೊರಟಿದ್ದೆವು. ಕಣ್ಣುಗಳನ್ನು ಕಾಪಾಡಲು ನಾಗಪ್ಪ ಚೆಸ್ಮಾ ಹಾಕಿಕೊಂಡಿದ್ದ. ಲೋಡಿದ್ದ ಲಾರಿಯೊಂದು ನಮ್ಮನ್ನು ಓವರ್ಟೇಕ್ ಮಾಡಿಕೊಂಡು ಹೋಯಿತು. ಅದರ ವೇಗಕ್ಕೆ ರೋಡುಧೂಳು ಸುಳಿಗಾಳಿಯಂತೆ ಎದ್ದು ಲಾರಿಯ‌ ಹಿಂದಿದ್ದವರ ಮೇಲೆಲ್ಲಾ ಎರಗಿತು. ನಾನು ಚೆಸ್ಮಾ ಹಾಕಿಕೊಂಡಿರಲಿಲ್ಲ. ಕಣ್ಣು ತಿಕ್ಕಲೇ ಬೇಕಾಯಿತು. “ಏ ನಿಮ್ಮೌನು, ಗಾಡಿ ನಿಂದ್ರಸಲೇ” ಎಂದು ನಾಗಪ್ಪು ಲಾರಿಯ ಮುಂದೆ ಹೋಗಿ ತರುಬಿದ. ಕೆಳಗೆ ಇಳಿದು ಬಂದ ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಬೈದ. ನಾನೂ ಎರಡು ಪೆಡಸಿನ ಮಾತಾಡಿದೆ. ಗಡುಸು ಭಾಷೆ ಅವನಿಗೆ ಅರ್ಥವಾಯಿತು. ನಮ್ಮ ಹೇರ್ಕಟಿಂಗು, ಉಡುಗೆ ನೋಡಿ ನಾವು ಪೋಲಿಸರೆಂದು ತಿಳಿದುಕೊಂಡ ಅವನು- ಸಾರಿ ಸಾರ್, ಸಾರಿ ಸಾರ್ ಎಂದು ಎರಡು ಸಲ ಹೇಳಿದ. ಬೇರೆಯವರಿಗಾದರೆ ಒಂದು ಸಲ ಹೇಳುವವನಂತೆ ಕಾಣುತ್ತಿದ್ದ. ಸಿಟಿಯೊಳಗೆ ಹೈಸ್ಪೀಡು ಮಾಡಿದ್ದಕ್ಕಾಗಿ ದಂಡ ಪಾವತಿಸುವ ತನ್ನ ಪ್ರಮಾದವನ್ನು ಕೇವಲ ಸಾರಿ ಪದದ ಮೂಲಕ ಮುಗಿಸಿದ. ಅದಕ್ಕೂ ಸಮಾಧಾನ ಆಗದ ನಾಗಪ್ಪ- ಏನ್ ಸಾರಿನೋ, ಸೊಲ್ಪ ನೋಡ್ಕೊಂಡು ಹೊಡಿಬೇಕಂತ ತಿಳೆಂಗಿಲ್ಲನು? ಯಾರನ ಅಡ್ಡ ಬಂದ್ರ ಏನ್ಗತಿ? ಮ್ಯಾಗ ಏರ್ಸೆಂದು ಹೋಗೋನು ನೀನು ಅಂತ ಅಸಾಮಾಧಾನ ತೋರಿಸಿದ. ಲಾರಿಯವರು ಯಾಕೆ ಅಷ್ಟೊಂದು ಆತುರ ತೋರಿಸುತ್ತಾರೋ? ಲಾರಿಯ ಸ್ಟೈರಿಂಗು ಹಿಡಿದ ಮೇಲೆ ಎಲ್ಲರಿಗೂ ಹಾಗೆ ಆಗುತ್ತದೋ ಏನೋ; ಅರ್ಧ ರಾತ್ರೇಲಿ ಶ್ರೀಮಂತನಾದ ಬಡವನ ಧಿಮಾಕಿನಂತೆ?!

ನಾಗಪ್ಪ ಬೈದಂತೆ ನನಗೂ ಲಾರಿಯವನಿಗೆ ಹೆಚ್ಚು ಬೈಯ್ಯುವ ಮನಸಿತ್ತು. ಆದರೆ ಆಗ ನಾನು ಒಂದು ವಿಷಯದ ಕುರಿತು ಯೋಚಿಸುತ್ತಿದ್ದೆ. ಇವನು ಬಂದಾಗ ನನ್ನ ಹೆಂಡತಿ ಮಲಗಿದ್ದೇ ಚೊಲ ಆಯಿತು ಅನ್ನಿಸಿತು. ಯಾಕೆಂದರೆ, ನಮ್ಮ ಮನೆಗೆ ಯಾರಾದರೂ ಪುರುಷರು ಬಂದಾಗ ನನ್ನ ಮುಂದೆ ಇಲಿ ನುಂಗಿದ ಹಾವಂತೆ ಸಾವಕಾಶವಾಗಿರುವ ನನ್ನವಳು ಅವರ ಮುಂದೆ ಹೊಟ್ಟೆ ಹಸಿದ ಹುಲಿಯಂತೆ ಲವಲವಿಕೆಯಿಂದ ಇರುವುದೇನು? ಅವಳ ಲಗುಬಗೆಗಳೇನು? ನೀವು ನೋಡಬೇಕು. ಅತಿಥಿಗಳೋ, ಯಾವಾಗಲೂ ಮುಚ್ಚಿಕೊಂಡಿರುವ ತಮ್ಮ ಬಾಯಿಯನ್ನು ನಮ್ಮ ಮನೆಯಲ್ಲಿಯೇ ತೆರದಂತೆ ಕಾಣಿಸುತ್ತದೆ ನನಗೆ. ಅವರ ಪಾಂಡಿತ್ಯದ ಕಪಾಟು ಬೇರೆಯವರ ಮನೆಯಲ್ಲಿ ಮತ್ತು ಬೇರೆ ಹೆಂಗಸರ ಮುಂದೆ ಮಾತ್ರ ತೆರೆದುಕೊಂಡಂತೆ ತೋರುತ್ತದೆ. ಇವಳೂ ಕೂಡ ಅಂಥವರ ಮುಂದೆಯೇ ತನ್ನ ವಿಶೇಷ ಕೌಶಲವನ್ನು ತೋರಿಸಲು ಹಾತೊರೆಯುತ್ತಾಳೆ. ಒಂದು ಹೆಣ್ಣು ಮತ್ತು  ಒಂದು ಗಂಡಿನ ಮಧ್ಯೆ (ಗಂಡ-ಹೆಂಡತಿ, ತಾಯಿ-ಮಗ ಬಿಟ್ಟು) ಯಾಕೆ ಹೀಗೆ ಆಕರ್ಷಣೀಯ ಕ್ಷಣಗಳು ನಡೆಯುತ್ತವೆ? ಎಂದು ಕ್ರೋಧಗೊಂಡೆ! ನಾನೂ ಸಹ ಬೇರೆಯವರ ಮನೆಗೆ ಹೋದಾಗ ಆ ಮನೆಯ ಹೆಂಗಸರ ಮುಂದೆಯೂ ಹಲ್ಲು ತೋರಿಸುತ್ತೇನೆ. ನನ್ನೊಳಗೆ ಒಳ್ಳೆಜ್ಞಾನ ಇದ್ದಂತೆ ಮಾತಾಡುತ್ತೇನೆ ಎಂಬುದು ನೆನಪಾದೊಡನೆ ಹೆಂಡತಿ ಮೇಲೆ ಹುಟ್ಟಿಕೊಂಡ ಆ ಕ್ರೋಧವು ತಣ್ಣಗಾಯಿತು. ನಾನು ಇಲ್ಲದ ಸಮಯದಲ್ಲಿ ನಾಗಪ್ಪನು ನಮ್ಮ ಆಫೀಸಿನಲ್ಲಿ ನಮ್ಮ ಮನೆಯ ಬಗ್ಗೆ ನನ್ನ ಹೆಂಡತಿಯ ಬಗ್ಗೆ ಮೆಚ್ಚಿಗೆ ಸೂಚಿಸಿ ಮಾತಾಡಿದನಂತೆ! ಇಂಥದೇ ಮಾತನ್ನು ನಾನೂ ಹೇಳಿದ್ದೆ. ಅವತ್ತು ನಾಗಪ್ಪ ಊರಿಗೆ ಹೋಗಿದ್ದ.‌ ಮಾತಿಗೆ ಬಂದಾಗ‌ ಶಿವರಾಜನ ಮುಂದೆ ಅವನ ಬಗ್ಗೆ, ಎಲ್ಲರನ್ನೂ ಅಪ್ಪಿಕೊಳ್ಳುವ ಸ್ವಭಾವದ ಅವನ ಹೆಂಡತಿಯ ಬಗ್ಗೆ ಹೃದಯದಿಂದ ಗುಣಗಾನ ಮಾಡಿದ್ದೆ. ಈ ರೀತಿ ಒಬ್ಬರನ್ನೊಬ್ಬರು ಹೊಗಳಿಕೊಳ್ಳುವ ಬಗೆಯನ್ನು ನನ್ನ ಮುಂದೆ ಬಹಿರಂಗ ಪಡಿಸಿದ್ದು ಅದೇ ಶಿವರಾಜನೇ. ನಿಜವಾಗಿಯೂ ನಾಗಪ್ಪ ಹೇಳಿದ್ದಕ್ಕೆ ನಾನು ಹಾಗೆ ಹೇಳಿರಲಿಲ್ಲ. ನಾನೂ ಹೇಳಬಹುದೆಂದು ಊಹಿಸಿ ಅವನೂ ಹಾಗೆ ಹೇಳಿರಲಿಕ್ಕಿಲ್ಲ. ಈ ಘಟನೆಗಳು ಒಂದಕ್ಕೊಂದು ಪೈಪೋಟಿಗಾಗಿ ನಡೆದವುಗಳಲ್ಲ ಎಂಬುದು ವಿಶೇಷ! ಈತರ ಯಾಕೆ ಮಾಡುತ್ತೇವೆಂದು ಈಗ ಅರ್ಥವಾಯಿತು. ನಮ್ಮ ಮನೆಯಲ್ಲಿ ಏನೇ ಕಷ್ಟ, ದುಃಖಗಳಿದ್ದರೂ ಬಂದವರ ಮುಂದೆ ಅವನ್ನು ತೋರಿಸದೆ, ಅತಿಥಿಗಳ ಮನಸು ತಣಿಯುವಂತೆ ಸತ್ಕರಿಸಿದರೆ ನಮ್ಮ ಬಗ್ಗೆ, ನಮ್ಮ ಮನೆತನದ ಬಗ್ಗೆ ನಾಕುಮಂದಿ ಮುಂದೆ ಒಳ್ಳೆಯ ರೀತಿಯಲ್ಲಿ ಹೇಳುತ್ತಾರೆಂಬ ಒಳಮರ್ಮ ಅದಾಗಿರಬಹುದು. ಆದರೆ ಅದರ ಆಚೆಗೂ ಇನ್ನೊಂದು ಅರ್ಥ ನನಗೆ ಹೊಳೆಯುತ್ತಿತ್ತು. ಹೆಣ್ಣು ಮತ್ತು ಗಂಡಿಗೆ ಗುರುತ್ವಾಕರ್ಷಣೆಗಿಂತಲೂ ಹೆಚ್ಚಿನ ಬಲವುಳ್ಳ ಅವ್ಯಕ್ತವಾದ ಆಕರ್ಷಣೆಯಿದೆ. ಹೆಣ್ಣು ಗಂಡು ಎದುರುಬದುರು ಆದಾಗ ಆಕರ್ಷಣೆಯ ಕ್ರಿಯಾಚಟುವಟಿಕೆಗಳು ತಂತಾನೆ ಸಹಜವಾಗಿ ನಡೆಯುತ್ತವೆ. ಯಾರಿಂದಲೂ ಅವನ್ನು ತಡೆಯಲು ಸಾಧ್ಯವಿಲ್ಲ. ಬೇಕಾದರೆ ಅಂಗಾಂಗಗಳು ಹೊರ ಚೆಲ್ಲುವ ಹಾವಭಾವಗಳನ್ನು ನಿಲ್ಲಿಸಬಹುದಷ್ಟೇ! ಮನಸಿನೊಳಗೆ ಭಾವಿಸುವುದನ್ನು ಕಂಡುಹಿಡಿಯಲು ಮತ್ತು ತಡೆಯಲು ಹುಲು ಮಾನವನಿಗೆ ಎಂದಿಗೂ ಆಗುವುದಿಲ್ಲ ಅನಿಸಿದಾಗ ಹೆಂಡತಿಯ ಬಗ್ಗೆ ನಾನೇ ತಪ್ಪಾಗಿ ಗ್ರಹಿಸಿದ ವಿಚಾರ ತಾನೇ ಸರಿಯಾಯಿತು. ಆಗ ಮನಸಿನೊಳಗೆ ನೆಮ್ಮದಿ ಭಾವ ಮೂಡಿತು. ಜಾಸ್ತಿ ಸಕ್ಕರೆ ಹಾಕಿ ಮಾಡಿದ ಚಹಾವನ್ನು ಕುಡಿದರೆ ತಲೆ ಚಿಟ್ ಹಿಡಿಯುತ್ತದೆ. ಅದರಂತಾಗಿ ತಲೆಯನ್ನು ಜಾಡಿಸಿದೆ. ಹಳ್ಳದಲ್ಲಿ ಬೆಳೆದ ಗಲಗ ಗಾಳಿಗೆ ಅತ್ತಂದಿತ್ತ ಅಳ್ಳಾಡುವಂತೆ ನನ್ನ ಕೂದಲುಗಳು ಒಳ್ಳಾಡಿದವು. ನಾಗಪ್ಪ ಮೂಕನಂತೆ ಬೈಕು ಓಡಿಸುತ್ತಿದ್ದ. ಅವನ ಮನಸಿನಲ್ಲಿ ಎಂತೆಂತಹ ತಂಗಾಳಿಗಳು, ಬಿರುಗಾಳಿಗಳು ಎದ್ದಿದ್ದವೋ ಬಲ್ಲವರಾರು?

ಸೇಂದಿ ತೆಗೆಯಲು ಪ್ರಯತ್ನ

ಭಾಗ – 03

ಇವತ್ತು ಯಾಕೋ ತುಂಬಾ ಚಂಚಲ ಅನಿಸುತ್ತಿದೆ. ಅದಕ್ಕೆ ನಿಖರ ಕಾರಣ ಹುಡುಕುತ್ತಾ ಹೋದರೆ, ಗಂಗಾನದಿಯ ದಂಡೆಯ ಮೇಲೆ ಹರಡಿಕೊಂಡ ಕೊಳೆಯಂತೆ ನನ್ನ ಅವಾಂತರಗಳು ಅನಾವರಣಗೊಳ್ಳುತ್ತಿವೆ. ಒಡಹುಟ್ಟಿದ ಅಕ್ಕನ ಮಗಳನ್ನು ಮದುವೆಯಾಗಿದ್ದರಿಂದಲೋ ಏನೋ!? ಅವಳು ನನ್ನೆಲ್ಲಾ ಸಿಡುಕು-ಪುಡುಕುಗಳನ್ನು ಸಹಿಸುತ್ತಿದ್ದಳು. ನನ್ನ ಮೇಲೆ ದೂರು ಹೇಳಿದರೂ ಯಾರಿಗೆ ಹೇಳಬೇಕು? ಮಾವ ಸತ್ತ ನನ್ನ ಅಕ್ಕನಿಗೇ ಹೇಳಬೇಕು. ಆ ಅಕ್ಕ ಕಂ ಅತ್ತೆಯೋ, ನಾನು ಚಿಕ್ಕವನಿರುವಾಗಿನಿಂದ ನನ್ನನ್ನು ಎತ್ತಿಕೊಂಡು, ಆಡಿಸಿ, ಕೈತುತ್ತು ತಿನಿಸಿ ಬೆಳಿಸಿದ್ದಾಳೆ. ನನಗೆ ನೌಕರಿ ಬಂದ ಮೇಲೆ ತನ್ನ ಮಗಳಿಗಿಂತಲೂ ನನ್ನನ್ನೇ ಹೆಚ್ಚು ಜೀವ ಮಾಡುತ್ತಾಳೆಂಬುದು ನನ್ನ ಭಾವನೆ. ಅಲ್ಲದೇ, ‘ಗಂಡಸು ಎಂದಮೇಲೆ ಸ್ವಲ್ಪ ದರ್ಪ ಸ್ವಲ್ಪ ಸಿಡುಕು, ಸ್ವಲ್ಪ ಸಿಟ್ಟುಗಳು ಇದ್ದೇ ಇರುತ್ತವೆ. ಕುಡುಕ ಗಂಡರು ಒದರುತ್ತಾರೆ. ಹೊಡೆಯುತ್ತಾರೆ. ಅಂಥಹ ಪುಣ್ಯಾತ್ಮನನ್ನು ಕಟ್ಟಿಕೊಂಡು ಮೂವತ್ತು ವರ್ಷ ಹೆಣಗಿದೆ. ಆ ರಾಕ್ಷಸನಿಗೆ ಹೋಲಿಸಿಕೊಂಡರೆ ನಿನ್ನ ತಪ್ಪು ಏನೇನು ಅಲ್ಲ!’ ಎಂದು ನನ್ನ ಮುಂದೆ ನಮಕ್ಕ ಹೇಳಿದಳು.

“ನಿಮಪ್ಪ ಹೆಂಗಿದ್ದ ನೋಡಿದ್ದಿಲ್ಲ? ನಮ್ನ ಹೆಂಗ ಸತಾಯಿಸಿ ನೀರು ಕುಡಿದ ನೆನಪಾದಿಲ್ಲಾ? ನೀನೂ ಒದಿಗಿ ತಿಂದಿದ್ದು ಮರ್ತೆನು? ನನ್ತಮ್ಮ ಶ್ರೀಕಾಂತ ನಿಮಪ್ನಂಗ ಏನರ ಆನನು? ಔರಿವ್ರ ಮಾತ್ಕೇಳಿ ಬಡಿವಾರ ಮಾಡ್ಬೇಡ. ಹೊರಗ ತಿರ್ಗಾಡೋ ಮನುಷಗ, ಮನಿಗಿ ದುಡುದಾಕೋ ಮನುಷಗ ಏನೇನ ಟೆನ್ಷನ್ ಇರ್ತಾವ. ಮಾಡಿಕೆಂದ ಹೆಂಡ್ರಿಗೆ ಬೈಯ್ಲಾರ್ದ ಯಾರಿಗೆ ಬೈಯ್ಬೇಕು? ಮಂದಿಗೆ ಬೈದ್ರ ಸುಮ್ನಿರ್ತಾರನು? ಇನ್ನ ನಿಮಪ್ನಂಗ ಹಾಕ್ಯಾಕಿ ಕುಟ್ಟಿದ್ರ ಏನ್ ಮಾಡ್ತಿದ್ದೆನು ಬುಡವಾ? ಮೊದ್ಲ ಬಗ್ಲಾಗಿನ ಮನೇರ ಕುಡ ಮಾತಾಡದು ಕಮ್ಮಿ ಮಾಡು. ಸುಳೇರು ತಮ್ ಸೌಸಾರ ನೆಟ್ಟಗ ಇಲ್ಲಂದ್ರೂ ಇನ್ನೊಬ್ರ ಸಂಸಾರನ ನೆಟ್ಟಗ ಮಾಡಾಕ ನೋಡ್ತಾರ. ಮಾಡ್ಕೆಂದು ತಿನೋದು ನೋಡ್ಲಾರ್ದ ಚಾಡಿ ಚುಚ್ಚಿ ಗಂಡ-ಹೇಣ್ತಿ ಮಧ್ಯೆ ಹುಳಿ ಹಿಂಡುತಾರ” ಅಂತ ತನ್ನ ಮಗಳಿಗೂ ತಿಳಿಸಿ ಹೇಳಿದ್ದಳು. ನಮಕ್ಕ ನನ್ನ ಬೆನ್ನಿಗೆ ನಿಂತ ಕಾರಣದಿಂದಲೋ ಏನೋ ನಾನು ಹೆಂಡತಿಯನ್ನಾಳುವ ಗಂಡನಾಗಿದ್ದೆ. ಅಕಸ್ಮಾತ್ ಹೊರಗಿನವಳನ್ನು ಕಟ್ಟಿಕೊಂಡಿದ್ದರೆ ಹೆಂಡತಿಯಿಂದ ಆಳಿಸಿಕೊಳ್ಳುವ ಗಂಡನಾಗಿರುತ್ತಿದ್ದೆ.
ನಾನೇನು ಕ್ರೂರಿ ಕುಟುಂಬ, ಕ್ರೂರಿ ಗೆಳೆತನ-ಒಡನಾಟದಲ್ಲಿ ಬೆಳೆದವನಲ್ಲ. ನಾನೇ ಹುಟ್ಟಿಸಿದ ಮಕ್ಕಳು ತೊಟ್ಟಿಲಲ್ಲಿರುವಾಗ ಮತ್ತು ಅಂಗಡಿಯ ಮುಂದೆ ನಿಂತು ಅದುಬೇಕು ಇದುಬೇಕೆಂದು ಹಠ ಮಾಡುವವರೆಗೂ ಅವರ ಕೆನ್ನೆಗೆ ಲೊಚಲೊಚ ಮುದ್ದು ಕೊಟ್ಟಿದ್ದೇನೆ. ಹೆಗಲ ಮೇಲೆ ಹೊತ್ತು ಆಡಿಸಿದ್ದೇನೆ ಆದರೆ ಮಕ್ಕಳ ಸಿಂಬಳ ತೆಗೆಯುವುದು, ಕುಂಡೆ ತೊಳಿಯುವುದು ಬಂದಾಗ ಹೆಂಡತಿಗೆ ಹೇಳುತ್ತಿದ್ದೆ ಅಷ್ಟೇ! ಅವಳು ಉತ್ಸಾಹದಿಂದ ಅದನ್ನೆಲ್ಲಾ ಮಾಡುತ್ತಿದ್ದಳು. ಅದೇ ಕೈಗಳಿಂದ ಹಿಟ್ಟು ನಾದಿ ರೊಟ್ಟಿ ಸುಡುತ್ತಿದ್ದಳು. ತರಕಾರಿ ಕೊಯ್ದು ಅಡಿಗೆ ಮಾಡುತ್ತಿದ್ದಳು. ಇದನ್ನೆಲ್ಲಾ ನೋಡಿಯೂ ನನ್ನಂತ ಮೂರ್ಖರು ಹೇಸಿಕೊಂಡು ಊಟ ಬಿಟ್ಟಿರಲಿಲ್ಲ. ಮಾಸ್ತಾರ ನೌಕರಿಗಿಂತ ಮುಂಚೆ ಹತ್ತು ಸಾವಿರ ಕಾಣದ ನಾನು ನೌಕರಿ ಬಂದ ನಂತರ ಬ್ಯಾಂಕಲ್ಲಿ ಐದು ಲಕ್ಷ ಲೋನು ತಂದಾಗ ರಾತ್ರಿ ಎಲ್ಲಾರೂ ಮಲಗಿದ ಮೇಲೆ ಮೆಲ್ಲನೆ ಒಬ್ಬನೇ ಎದ್ದು ಮೂರು ಮೂರು ಬಾರಿ ಎಣಿಸಿದ್ದೇನೆ. ಜೇಬಲ್ಲಿರುವ ಹಣವನ್ನು ಆಗಾಗ ತೆಗೆದು ಎಣಿಸುವುದು, ಕೊಡಬೇಕಾದ ದುಡ್ಡನ್ನು ಎರಡು-ಮೂರು ಬಾರಿ ಎಣಿಸುವುದು ಜಿಪುಣುತನದ ನಡಾವಳಿ ಇರಬಹುದು. ಮಾಸ್ತಾರಿಕೆ ಎಂದರೆ ಸಾವಿರಾರು ಮಕ್ಕಳನ್ನು ಉದ್ಧಾರ ಮಾಡುವುದೆಂಬ ಸಿದ್ಧಾಂತ ಮತ್ತು ಉಮೇದನ್ನು ನಾನು ಒಪ್ಪುತ್ತೇನೆ. ಈಗೀಗ ನೌಕರಿಗಳು ಸಿಗುವುದು ಅಪರೂಪ ಆಗಿರುವುದರಿಂದ ಸಿಕ್ಕ ನೌಕರಿಗೆ ಹೋಗದಿದ್ದರೆ ಕೊನೆಗೆ ಗುದ್ದಲಿ ಸಲಕೆಗಳೇ ನಮ್ಮ ಸಂಗಾತಿಗಳಾಗಿರುತ್ತವೆ ಎಂದು KAS ಮಾಡುವ ಯೋಚನೆಯಿದ್ದರೂ ಮಾಸ್ತಾರ ನೌಕರಿಗೆ ಬಂದಿದ್ದೇನೆ.
ಮೊದಮೊದಲು ನಮ್ಮ ಶಾಲೆಯ ಮಕ್ಕಳು ನನ್ನ ಬಳಿಗೆ ಬಂದು ತಗಲುವಷ್ಟು ಹತ್ತಿರ ನಿಂತು ಸಾಮಿಪ್ಯವನ್ನು ವ್ಯಕ್ತಪಡಿಸುತ್ತಿದ್ದರು. ನಾನು ಯಾವಾಗ ತುಂಬಾ ಸ್ಟ್ರಿಕ್ಟ್ ಎಂದು ತೋರಿಸಲು ಪ್ರಶ್ನೋತ್ತರ ಕೇಳುವ ನೆಪದಲ್ಲಿ ಬಾಸುಂಡೆ ಬರುವಂತೆ ಭಾರಿಸತೊಡಗಿದೆನೋ ಮಕ್ಕಳು ನನ್ನನ್ನು ನೋಡುವ ದೃಷ್ಟಿಕೋನವು ಬದಲಾಯಿತು. ಹತ್ತಿರ ಸುಳಿಯುವುದನ್ನೂ ನಿಲ್ಲಿಸಿದರು. ಸಿಡುಕುವ ನನ್ನ ಪ್ರವೃತ್ತಿ ಶಾಲೆಗೂ ಹಬ್ಬಿಕೊಂಡಿದ್ದು ಖಂಡಿತ ನಾಚಿಗೆಗೇಡು. ಮನೆಯ ಸಮಸ್ಯೆಗಳನ್ನು ಮನಸಿನ ತೊಳಲಾಟಗಳನ್ನು ಶಾಲೆಯ ಬಾಗಿಲಿನ ಹೊರಗೆ ಬಿಡಲು ನನಗೆ ಆಗುತ್ತಿರಲಿಲ್ಲ. ಯಾರಿಗೂ ಹಾಗೆ ಮಾಡಲು ಸಾಧ್ಯವಿಲ್ಲ ಎಂದೇ ನಾನು ಭಾವಿಸಿದ್ದೆ. ಕೆಲವು ಸಮಸ್ಯೆಗಳನ್ನು ಯಾರ ಮುಂದೆ ಹೇಳಲಾಗುವುದಿಲ್ಲೆಂದು ಸಾವಿನೊಂದಿಗೆ ದಫನ ಮಾಡಿದವರೂ ಮಾಡಲಿರುವವರೂ ಇದ್ದಾರೆ. ಒಳಗಿನ ತುಮುಲಗಳನ್ನು ಇನ್ನೊಬ್ಬರ ಮುಂದೆ ಹೇಳದಿದ್ದರೆ ಮನಸ್ಸು ಇನ್ನಷ್ಟು ಭಾರವಾಗುತ್ತಲೇ ಹೋಗುತ್ತದೆ. ಕಷ್ಟಗಳನ್ನು ಇನ್ನೊಬ್ಬರ ಮುಂದೆ ಹೇಳಲು ಆಗದಿದ್ದರೆ ಅಕ್ಷರ ಕಲಿತವರು ಕತೆಯೋ ಕಾದಂಬರಿಯೋ ಕವನವನ್ನೋ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಅಥವಾ ಬರೆಯಲು ತೊಡಗಿದರೆ ಮನಸು, ಮೈ, ತಲೆ ಹಗುರ ಆಗುತ್ತಂತೆ. ಸಾಹಿತ್ಯದಲ್ಲಿ ರೂಪಾಯಿಯಲ್ಲಿ ಮೂರು ಪಾವಲಿ ಭಾಗ ಸಾಹಿತ್ಯ ಬರೆದಾತನ ಅನುಭವವೇ ಇರುತ್ತಂತೆ. ಮಾನ ಮರ್ಯಾದೆಗೆ ಅಂಜಿ ಸಾಯುವ ನಾವು ಮಾನ-ಮರ್ಯಾದೆ ಹೋಗುವ ಮಾತುಗಳನ್ನು ಊರುತುಂಬ ಬಿತ್ತುವ ಮನುಷನಗಿಂತ ಹೇಳಿದ್ದನ್ನು ಕೊನೆಯ ತನಕ ಸುಮ್ಮನೆ ಕೇಳುವ ನಾವಾಗಿ ಅಚ್ಚಿಗೆ ಕೊಟ್ಟರೆ ಜನರೆದುರು ತೆರೆದುಕೊಳ್ಳುವ ಪುಸ್ತಕದ ಎದುರಿಗೆ ಹೇಳುವುದು ಒಳಿತಂತೆ! ಅದಕ್ಕೋಸರ ನಾನೂ ಬರೆಯುತ್ತಿದ್ದೇನೆ. ಅಚ್ಚಿಗೆ ಮಾತ್ರ ಕಳಿಸಲಾರೆ!

ಎಲ್ಲಾರಿಗೂ ದೌರ್ಬಲ್ಯ ಇರುವಂತೆ ನನಗೂ ಯಾರೂ ಕಾಣದ ತೂತುಗಳಿದ್ದವು.  ಇವತ್ತಿನ ತನಕ ಒಂದೇ ಒಂದು ಹುಡುಗಿಯು ನನ್ನನ್ನು ಮೋಸ ಮಾಡದೆ ಪ್ರೀತಿಸಲಿಲ್ಲ ಎಂದರೆ ನೀವು ನಂಬಬೇಕು. ಮದುವೆಯಾದ ಮೇಲೂ ಅಂತರ್ಯದಲ್ಲಿ ಪ್ರೀತಿಯ ಹಿಂದೆ ಬಿದ್ದಿದ್ದೇನೆ. ಪ್ರೀತಿ ಇಲ್ಲದೆ ಮನುಷ ಇರಲಾರ. ಪ್ರೀತಿಗೆ ಖಂಡಿತ ಮನುಷನ‌ ಜೊತೆ ಬೇಕು ಅನಿಸುತ್ತದೆ. ನಾನೇನೂ ಆಸಿಡ್ ಬಿದ್ದ ಮುಖದವರಂತೆ ಕುರಿಪಿಯೂ ಅಲ್ಲ, ಬುಡಿಮೆಕಾಯಿಯಂತೆ ಕುಳ್ಳನೂ ಅಲ್ಲ, ಅಂಚಿನ ಮಸಿಯಂತೆ  ಕರ್ರಗೂ ಇಲ್ಲ ಆದರೂ ಮೀಸೆ ಮೂಡಿದಾಗಿನಿಂದಲೂ ಈತನಕ ನಾನು ಪ್ರೀತಿಸುತ್ತಿರುವವರು ನನಗೆ ಸಿಕ್ಕಿಲ್ಲ. ನನ್ನನ್ನು ಯಾರ್ಯಾರೋ ಇಷ್ಟಪಡುವವರು ಇದ್ದಾರೆ; ಅವರಿಗೂ ನಾನು ಸೊಪ್ಪು ಹಾಕಿಲ್ಲ. ಮದುವೆಯಾದ ಮೇಲೆ ಹೆಂಡತಿ ಇರುವ ಕಾರಣದಿಂದ ಮದುವೆಯಾಗದ ಯುವತಿಯರು ನನ್ನನ್ನು ಪ್ರೀತಿಸಲು ಹಿಂದೇಟು ಹಾಕುವುದು ತುಂಬಾ ನೋವು ತಂದಿದೆ. ಹಾಗಾದರೆ ಮದುವೆಯಾದವರನ್ನು ಇಷ್ಟ ಪಡದ ಕನ್ಯೆಯರು ತಾವು ಮದುವೆಯಾದ ಮೇಲೆ ಮದುವೆಯಾಗದ ಯುವಕರನ್ನು ಬಯಸುವುದು ಯಾವ ನ್ಯಾಯವೋ ತಿಳಿಯದು.  ನನಗಿಂತ ಸೌಂದರ್ಯದಲ್ಲಿ ವಿರೂಪರೂ ದೌಹಿಕ ಕನಿಷ್ಠರೂ ಮದುವೆಯಾದವರೂ ಮೊಮ್ಮಕ್ಕಳನ್ನು ಕಂಡವರೂ ತಮ್ಮ ಸ್ಟೆಪ್ನಿಯೊಂದಿಗೆ ಕಿಲಕಿಲ ಇರುವುದನ್ನು ನೋಡಿದ್ದೇನೆ. ಕದ್ದುಮುಚ್ಚಿ ಭೇಟಿಯಾಗುವುದನ್ನು ಕಂಡಿದ್ದೇನೆ. ಅವರಂತೆ ನನಗೂ ಒಬ್ಬಳು ಸಂಗಾತಿ ಬೇಕೆಂಬ ಹಂಬಲ ಈಗಲೂ ದಟ್ಟವಾಗಿದೆ. ದಿನಾಲೂ ವಿರಹದ ಮಡಿಲಲ್ಲಿ ಬಿದ್ದು ಹೊರಳಾಡುತ್ತೇನೆ. ನನ್ನನ್ನು ಒಬ್ಬರಾದರೂ ಪ್ರೀತಿಸಲಿ ಎಂದು ಹಾತೊರೆಯುತ್ತೇನೆ. ಇದೇ ನನ್ನ ನಿಜವಾದ ಖಾಯಿಲೆ. ಊಟ ನೀರು ಗಾಳಿ ಬಟ್ಟೆ ಬಿಟ್ಟು ಮತ್ತೇನೂ ಇಲ್ಲದಿದ್ದರೂ ಹಾಯಾಗಿ ಬದುಕಬಹುದು. ಆದರೆ ನಾವು ಪ್ರೀತಿಸಿದವರು ನಮ್ಮೊಂದಿಗೆ ಇಲ್ಲದಿದ್ದರೆ ಬದುಕುವುದು ಅಸಹನೀಯ! ದೇಹದ ಗಾಯಗಳನ್ನು ತಡೆದುಕೊಳ್ಳಬಹುದು. ಅದು ಕೆಲವೇ ದಿನಗಳಲ್ಲಿ ಮಾಯಬಹುದು. ಆದರೆ ಪ್ರೀತಿಯ ಗಾಯ ಮತ್ತು ನೋವು ಎಂದಿಗೂ ಸುಖ-ನೆಮ್ಮದಿ ತರುವುದಿಲ್ಲ ಎಂಬುದು ನನಗಾದ ಅನುಭವ.

ತಾಯಿ-ಅಕ್ಕ-ತಂಗಿ-ಹೆಂಡತಿ-ಮಗಳು ಬಿಟ್ಟು ನಮ್ಮನ್ನು ಪ್ರೀತಿಸುವ ಒಬ್ಬ ಪರಸ್ತ್ರೀ ಇರಬೇಕು. ಅವಳ ಮದುವೆಯಾಗಿದ್ದರೂ ನಾವು ಕೊಡಿಸುವ ಬಳೆಗಳನ್ನು ಅವಳು ತೊಡಬೇಕು. ನಮಗೋಸ್ಕರ ಕಾಯುವುದು, ನಮ್ಮನ್ನು ಕಂಡಾಗ ನಗುವುದು, ಇಬ್ಬರ ಮಧುರ ಅಪ್ಪುಗೆ… ಇಂತಹ ಸಾಮಾನ್ಯ ಕಲ್ಪನೆಯಲ್ಲಿ ಬಿದ್ದವರಲ್ಲಿ ನಾನೂ ಒಬ್ಬ. ನಾನು ಪ್ರೀತಿಯಿಂದ ವಂಚನೆಗೆ ಒಳಗಾಗಿದ್ದರಿಂದ ಅದೇ ಪ್ರೀತಿಯ ವಿಷಯದಲ್ಲಿ ನಾನು ಹಲವರಿಗೆ ಒಳಗೊಳಗೆ ವಂಚಿಸಿದ್ದೇನೆ. ಹಲವರು ಎಂದರೆ ನನ್ನ ತಾಯಿ, ನನ್ನ ತಂದೆ, ನನ್ನ‌ ಹೆಂಡತಿ, ನನ್ನ ಮಕ್ಕಳು, ಶಾಲಾ ಮಕ್ಕಳು ಇತರರು.
ಇವತ್ತು ಭಾನುವಾರ. ಬೆಳಗ್ಗೆ ಎದ್ದು ಹಲ್ಲು ತಿಕ್ಕುವ ಮೊದಲೇ ಮಾರ್ಕೇಟಿಗೆ ಹೋಗಿ ಮಹ್ಮದನ ದುಖಾನಿನಲ್ಲಿ ಕೇಜಿ ಮಾಂಸ ತಂದೆ. ಸಾರುಗಳಲ್ಲಿ ಮೀನಿನ ಸಾರು, ವಾಸನೆಗಳಲ್ಲಿ ಮಾಂಸದ ವಾಸನೆ ನನಗೆ ಯಾವಾಗಲೂ ಇಷ್ಟ. ಹೆಂಡತಿ ಅಡುಗೆ ಮಾಡುವುದರಲ್ಲಿ ತಲ್ಲೀನಳಾಗಿದ್ದಳು. ಅಡಿಗೆಯಲ್ಲಿ ಹೆಂಡತಿಗೆ ಸಹಕರಿಸುವ ಉದಾರ ಕೆಲಸವನ್ನು ನಾನೆಂದೂ ಮಾಡಿಲ್ಲ. ನಾನು ಗಂಡಸಲ್ಲವೇ? ಹೆಣ್ಣಾದವಳೇ ಅದನ್ನೆಲ್ಲಾ ಮಾಡಬೇಕೆಂಬುದು ನಿನ್ನೆಯ ತನಕವೂ ಇತ್ತು. ಇವತ್ತು ಬರೆಯಲು ಕುಳಿತಿದ್ದೇನಲ್ಲಾ; ತಪ್ಪುಗಳು ತಾಂತಾನೆ ತಿದ್ದುಪಡಿ ಆಗುತ್ತಿವೆ.
ಹುಡುಗರು ಓದಲಿ ಓದಲಿ ಎಂದು ಮಕ್ಕಳನ್ನು ಮೂರೊತ್ತು ಓದಿಸುವ ಗುಂಗು ಹಿಡಿದ ಸತಿದೇವಿಯು ಮನೆಯಲ್ಲಿ ಮಾಸ್ತಾರ ಇದ್ದರೂ ಪಿಯುಸಿ ಓದಿ ಟಿವಿಷನ್ ಹೇಳುವುದನ್ನು ವೃತ್ತಿ ಮಾಡಿಕೊಂಡ ಸೀತಾ ಆಂಟಿಯಲ್ಲಿಗೆ ಬಹಳ ಹುಡುಗರು ಬರುತ್ತಾರೆಂದು ನಮ್ಮ ಮಕ್ಕಳನ್ನೂ ದಿನಾಲೂ ಅಲ್ಲಿಗೆ ದಬ್ಬುತ್ತಾಳೆ. ನನ್ನ ಮಕ್ಕಳೋ, ಊರಿಗೆ ಮಕ್ಕಿದವರು. ನಾನು ಹೇಳುವುದನ್ನು ಗಮನವಿಟ್ಟು ಎಂದಿಗೂ ಕೇಳುವುದಿಲ್ಲ; ಓದುವುದೂ ಇಲ್ಲ. “ನಮ್ಮ ಶಾಲೆಯ ನಮ್ಮ ಟೂಷನ್ನಿನ ಟೀಚರ್ ಹೀಗೇ ಹೇಳಿದ್ದಾರೆ ಅದೇ ಸರಿ ನೀನೇ ತಪ್ಪು” ಎಂದು ವಾದಿಸುತ್ತಾರೆ! ನಮ್ಮ ಮಕ್ಕಳಿಗೆ ಬುದ್ಧಿ ಕಲಿಸುವ ವಿಷಯದಲ್ಲಿ, ಸ್ವಾಧೀನ ಇಡುವ ವಿಷಯದಲ್ಲಿ, ಶಿಕ್ಷಣ ಕಲಿಸುವ ವಿಷಯದಲ್ಲಿ ನಮಗಿಂತಲೂ ಇತರರೆ ಮೇಲೆಂದು ಅರ್ಥವಾದ ಬಳಿಕ ನನ್ನ ಯೋಚನೆ ಮತ್ತು ಯೋಜನೆಗಳನ್ನು ಅವರ ಮೇಲೆ ಹೇರುವುದನ್ನು ಬಿಟ್ಟಿದ್ದೇನೆ. ಆದರೆ ನನ್ನ ಹೆಂಡತಿಯು ಕತ್ತೆಯ ಮೇಲೆ ಹೇರಬೇಕಾದ ಭಾರವನ್ನು ತನ್ನ ಮಕ್ಕಳ ಮೇಲೆ ಮುಂದುವರಿಸಿದ್ದಾಳೆ.

ಮಕ್ಕಳೆಂದರೆ ಎಲ್ಲಾರಿಗೂ ಒಂದೇ. ಅವರು ಕಣ್ಮುಂದೆ ಇದ್ದರೆ ಸಮಯ ಹೋಗಿದ್ದೂ ಗೊತ್ತಾಗುವುದಿಲ್ಲ. ಇವತ್ತು ರಜೆ, ಆದರೂ ಬೆಳಗ್ಗೆ ಏಳು ಗಂಟೆಗೇ ಅವರನ್ನು ಟಿವಿಷನ್ನಿಗೆ ಕಳಿಸಿದ್ದಾಳೆ. ಅವರು ಸ್ಕೂಲಲ್ಲಿ ಯಾವತ್ತಿಗೂ ಟಾಪ್ ಇರಬೇಕೆಂಬುದು ಇವಳ ಮಹದಾಸೆ. ಒಂಟಿ ಇರುವುದರಿಂದಲೋ ಏನೋ ನನಗೆ ಕೆಟ್ಟ ಬೇಜಾರಾಯಿತು. ಮನೆ ಮುಂದಿನ ಕಟ್ಟೆಯ ಮೇಲೆ ಚೇರು ಹಾಕಿಕೊಂಡು ದಾರಿಯಲ್ಲಿ ತಿರುಗಾಡುವವರಿಗೆ ಕಾಣುವಂತೆ ಪ್ರಜಾವಾಣಿಯನ್ನು ಓದಿ ಮುಗಿಸಿದ ಮೇಲೆ ಪ್ರೀತಿಯ ಖಾಯಿಲೆ ಕಾಡಲು ಶುರು ಮಾಡಿತು. ಮದುವೆಗೆ ಮುಂಚೆ ಒಬ್ಬರ ಮೇಲೆಯೇ ಸೀಮಿತವಾಗಿದ್ದ ಪ್ರೀತಿಯು ಈಗೀಗ ಸಂದರವಾಗಿ ಕಾಣುವವರ ಮೇಲೆಲ್ಲಾ ಹಬ್ಬುತ್ತಿದೆ ನಮ್ಮ ಶಾಲೆಗೆ ಹೊಸದಾಗಿ ಬಂದ ಅನಿತಾ ಟೀಚರ್ ಚೊಲೊ ಇದ್ದರು. ಇನ್ನೂ ಮದುವೆಯೂ ಆಗಿರಲಿಲ್ಲ. ಯಾಕೋ ನಾನೆಂದರೆ ಆಕೆ ಉರಿದು ಬೀಳುತ್ತಾಳೆ. ನನ್ನದೇ ವಯಸ್ಸಿನ ಮೂರು ಮಕ್ಕಳಿದ್ದ ಭೀರಪ್ಪ ಮಾಸ್ತಾರನೊಂದಿಗೆ ಆಯಸ್ಕಾಂತದಂತೆ ಅಂಟಿಕೊಂಡು ಕಿಸಿಯುತ್ತಾಳೆ. ಅದನ್ನು ನೋಡಿ ನನಗೆ ಮೆಣಸಿನಕಾಯಿ ಕಡಿದಂತೆ ಆಗುತ್ತದೆ. ಭೀರಪ್ಪನ ಮೈಯೆಲ್ಲಾ ಮಚ್ಚೆಗಳಿವೆಯಂತೆ! ಅದಕ್ಕೇ ಹೆಂಗಸರು ಅವನ ಬುಟ್ಟಿಯೊಳಗೆ ಬೇಗನೆ ಬೀಳುತ್ತಾರಂತೆ! ನನ್ನ ಮೈಲೇಲೆ ಅವನಷ್ಟು ಮಚ್ಚೆಗಳು ಇರದಿದ್ದಕ್ಕೋ ಏನೋ ಈಗತಿ ಬಂದಿರುವುದು? ಎಂಬ ಚಿಂತೆ ಶುರುವಾಗಿ ತಿಂಗಳುಗಳೇ ಕಳೆದಿವೆ. ಇವತ್ತಿನ ನನ್ನ ಚಂಚಲದ ಹಿನ್ನಲೆ ಅನಿತಾ ಟೀಚರೆ ಇರಬೇಕು. ಆ ಸಮಸ್ಯೆಯನ್ನು ಎತ್ತಿಕೊಂಡು ಅದಕ್ಕೆ ಪರಿಹಾರ ಹುಡುಕುವುದರಲ್ಲಿ ಮಗ್ನನಾಗಿದ್ದಾಗ ದೇವರೇ ಕಳಿಸಿದಂತೆ ಗಿಳಿಪಂಚಾಂಗ ಹೇಳಲು ಒಬ್ಬ ಬಂದ. ಅವನನ್ನು ಕಂಡು ಹಾಲು ಕುಡಿದಷ್ಟು ಖುಷಿ ಆಯಿತು ನನಗೆ. ಯಾರಾದರೂ ಕರೆದರೆ ಸಾಕೆಂದು ಜನರ ಮುಖ ನೋಡುತ್ತಾ- ನಿಮಗೆ ಒಳ್ಳೇದು ಆಗತೈತಿ ಒಳ್ಳೇದು ಆಗತೈತಿ. ನಿಮಗೊಂದು ಶಕುನ ಕಾಡೈತಿ ಶಕುನ ಕಾಡೈತಿ! ಎನ್ನುತ್ತಾ ಬರುತ್ತಿದ್ದ. ಅವನು ಹೇಳುವ ಶಕುನವೂ ನಾನು ಅನುಭವಿಸುತ್ತಿರುವ ವೇದನೆಯೂ ಎರಡೂ ಒಂದೇ ಇರಬೇಕೆಂದು ನನ್ನ ಭವಿಷ್ಯವನ್ನು ಅವನು ಮಾತು ಕಲಿಸಿದ ಗಿಳಿಯಿಂದ ಪರೀಕ್ಷಿಸಲು ಹೊರಟೆ. ಕೂಡಲು ನನ್ನಿಂದ ಚಾಪೆ ಹಾಕಿಸಿಕೊಂಡ‌ ಗಿಳಿಕಾರನು ಅದರ ಮೇಲೆ‌ ಚಕ್ಕಳಮುಕ್ಕಳ ಹಾಕಿ ಕೂತ. ಭವಿಷ್ಯ ಕೇಳುವಲ್ಲಿ ಹೆಚ್ಚಿನ ಆಸಕ್ಕಿಯಿದ್ದ ಹೆಂಡತಿಯು ಮೊನ್ನೆ ಊರಿಗೆ ಹೋದಾಗ ಕೇಳಿದ್ದರಿಂದ ನೀನೇ ಕೇಳು ಅಂದಳು. ಆದರೆ ಅವಳ ಧ್ಯಾನವು ಈಕಡೆಗೇ ಇತ್ತು. ರೊಟ್ಟಿ ಮಾಡದಿದ್ದರೆ ತಾನೂ ನಮ್ಮ ಮುಂದೆ ಬಂದು ಖಂಡಿತ ಕೂಡುತ್ತಿದ್ದಳು. ಗಿಳಿಗಾರ ತನ್ನ ಹೆಗಲಿಗೆ ಹಾಕಿದ ಚೀಲದಲ್ಲಿ ತಂದ ಸುಮಾರು ಹದಿನೈದು ಕಾರ್ಡುಗಳನ್ನು ಒಂದರ ಮೇಲೊಂದು ಒಟ್ಟಿದನು. ಆ ಕಾರ್ಡುಗಳೊಳಗೆ ದೇವರ ಪೋಟೋಗಳು ಇರುತ್ತವೆ. ಗಿಳಿಯು ಯಾವ ದೇವರ ಫೋಟೋವನ್ನು ತೆಗೆಯುತ್ತದೆಯೋ ಕೇಳುವವರಿಗೆ ಆ ದೇವರ ಕಾಟ ಇರುತ್ತದೆಂದು ಗಿಳಿಕಾರರು ಹೇಳುತ್ತಾರೆ! ಗಿಳಿಕಾರನ ಬಡಿಗೆ ಪೆಟ್ಟು ತಿಂದು, ಹಾರಿ ಹೋಗಲು ಆಗದಂತೆ ಪುಕ್ಕ ಕಿತ್ತಿಸಿಕೊಂಡು, ತನ್ನನ್ನು ಸ್ವತಂತ್ರಗೊಳಿಸಿಕೊಳ್ಳಲು ಸೋತ ಗಿಳಿಯು ನನ್ನನ್ನು ಕಾಪಾಡದೆಂದೂ ಅದು ಗಿಳಿಕಾರನ ಹೊಟ್ಟೆಪಾಡಿನ ದಂದೆಯೆಂದು ಗೊತ್ತಿದ್ದರೂ ಮನಸಿನ ತೊಳಲಾಟಕ್ಕಾಗಿ ಈ ಪ್ರಯತ್ನ ಮಾಡಿದೆ ಅಷ್ಟೇ! ಈ ಜಗತ್ತನ್ನು ಸೃಷ್ಟಿಸಿದ ದೇವರು ಖಂಡಿತ ಇದ್ದಾನೆಂದು ಹೇಳುವ ಸಿದ್ದಾಂತಗಳ ಆಚೆಗೆ ಯೋಚಿಸಿ ನಿರ್ಧರಿಸುವಷ್ಟು ಅಧ್ಯಯನ ಇನ್ನೂ ಆಗದಿರುವುದರಿಂದ ದೇವರನ್ನು ನಾನೂ ನಂಬುತ್ತೇನೆ. ದೇವರು ಯಾವ ಸಮಯದಲ್ಲಾದರೂ ಯಾವ ರೂಪದಲ್ಲಾದರೂ ನಮ್ಮಲ್ಲಿಗೆ ಬರಬಹುದು ಎಂಬುದನ್ನು ಭಾರತೀಯ ಪರಂಪರೆಯಲ್ಲಿ ಹುಟ್ಟಿ ಬೆಳೆದ ಯಾರೂ ಅಲ್ಲಗೆಳೆಯುವುದಿಲ್ಲ. ಅದೇ ಕಾರಣಕ್ಕೆ ಗಿಳಿಯ ಸಂಗಡ ಭವಿಷ್ಯವನ್ನು ಕೇಳಿಸಿಕೊಳ್ಳುತ್ತಿದ್ದೇನೆ.

“ಗಿಳಿರಾಯ..ಗಿಳಿರಾಯ… ಶ್ರೀಕಾಂತ ಸಾರ್ರ ಭವಿಷ್ಯ ನೋಡು…” ಎಂದು ತಮ್ಮ ವಂಶದ ಗಿಳಿ ಪದ್ಯವನ್ನು ಪಠಿಸಲು ಮುಂದಾದ ಮೇಲೆ ಗಿಳಿಯು ಲಗೋರಿಯ ಕಲ್ಲುಗಳಂತೆ ಇಟ್ಟ ಕಾರ್ಡುಗಳನ್ನು ಒಂದೊಂದೆ ಕಿತ್ತೆಸೆಯಲು ಪ್ರಾರಂಭಿಸಿತು. ಯಾವಾಗ ಗಿಳಿಕಾರನ ತೋರುಬೆರಳಿನ ಸನ್ನೆಯಾಯಿತೋ ಪಾಠ ಕಲಿತ ಗಿಳಿಯು ಒಂದು ಕಾರ್ಡನ್ನು ಯಜಮಾನನ ಕೈಗೆ ತಂದುಕೊಟ್ಟು ಪಂಜರ ಸೇರಿತು. ಗಿಳಿರಾಯನು ಕೊಟ್ಟ ಕಾರ್ಡಲ್ಲಿ ಗುರ್ಗಾದೇವಿಯ ಫೋಟೋ ಇತ್ತು. ಅದನ್ನು ಹೊರ ತೆಗೆದು ತೋರಿಸಿ “ನಿಮಗೆ ಹೆಣ್ಣು ದೇವರ ಕಂಟಕ ಐತೆ” ಅಂದ. ಹೆಣ್ಣು ದೇವರು ಅಂದರೆ? ಹೆಣ್ಣಿನ ವಿರಹ ಎಂದು ನನಗೆ ಅರ್ಥವಾಯಿತು. ರೋಗಿ ಬಯಸಿದ್ದೂ ಹಾಲು-ಅನ್ನ ವೈದ್ಯ ಹೇಳಿದ್ದೂ ಹಾಲು-ಅನ್ನ ಎನ್ನುವಂತೆ ನಾನು ಯೋಚಿಸಿದ್ದಕ್ಕೂ ಆಗಂತುಕ ಬಂದು ಹೇಳಿದ್ದಕ್ಕೂ ತಾಳಮೇಳ ಆಗಿತ್ತು. ಆಗ ನನ್ನ ಚಿಂತೆ ಇನ್ನಷ್ಟು ಹೆಚ್ಚಾಯಿತು.
ಪರಿಹಾರನ್ನು ಗಿಳಿಕಾರ ಹೇಳಿದ.

ನೌಕರಿ ಬಂದ ಮೇಲೆ ಊರ್ಮಂದಿಗೆ ಊಟ ಹಾಕಿಸಿದ್ದೀರೋ? ಅಂತ ಕೇಳಿದ. ಇದು ನಮಪ್ಪನ ಆಸೆ ಇತ್ತಂತೆ! ಅಪ್ಪ ಸತ್ತ ಮೇಲೆ ಹೆಣದ ಮೇಲೆ ಅಕ್ಕ ಅತ್ತಾಗ ತಿಳಿಯಿತು. ಆದರೆ ಇದು ಗಿಳಿಕಾರನಿಗೆ ಹೇಗೆ ಗೊತ್ತಾಯಿತು? ಎಂದು ಅಂದಾಜು ಸಿಗಲಿಲ್ಲ. ಕುತೂಹಲ ತಡೆಯದೆ ಕೇಳಿದರೆ, ಭವಿಷ್ಯ ಹೇಳೋದೇ ನಮ್ಮ ಕಾಯಕ ಸ್ವಾಮಿ ಅಂದ. ಇರಬಹುದು ಅನಿಸಿತು. ವಿಹ್ವಲ ಮನಸಿಗೆ ಏನು ಹೇಳಿದರೂ ಹುಂಗುಟ್ಟುತ್ತದೆ! ಹಾಗಾಗಿತ್ತು ನನ್ನ ಮನಸ್ಥಿತಿ. ಊರೂಟ ಹಾಕಿಸಿಸುವ ಅಪ್ಪನ ಅನ್ನಸಂತೃಪ್ತಿ ವ್ರತವೇ ನನ್ನನ್ನು ಕಾಡುವ ಸಮಸ್ಯೆಗಳಿಗೆ ಕಾರಣ ಅನಿಸಲು ಶುರುವಾಯಿತು. ಮದುವೆಯಲ್ಲಾಗಲೀ ಸಭೆಗಳಲ್ಲಾಗಲೀ ಸಮಾರಂಭಗಳಲ್ಲಾಗಲೀ ಊಟದ ವ್ಯವಸ್ತೆಯನ್ನು ಯಾಕೆ ಮಾಡುತ್ತಾರೆಂದರೆ, ಊಟ ಮಾಡಿ ಹೋದವರೆಲ್ಲ ನಿಮಗೆ ಒಳ್ಳೆಯದಾಗಲಿ ಎಂದರೆ ಅಶ್ವಿನಿ ದೇವತೆಗಳು ಅವರ ಹಾರೈಕೆಗೆ ಆಶಿರ್ವಾದ ಮಾಡಿ ಅನ್ನ ಹಾಕಿದವರಿಗೆ ಒಳಿತು ಮಾಡುತ್ತಾರಂತೆ! ಇದನ್ನು ಕುವೆಂಪುರವರ ಸಾಹಿತ್ಯದಲ್ಲಿ ಓದಿದ ನೆನಪು. ಎರಡು ಕಿಂಟಲ್ ಅಕ್ಕಿ ಅರ್ಧ ಕಿಂಟಲ್ ಬೇಳೆ ತಂದು ಊರೂಟ ಹಾಕಿಸಿದರೆ ನನ್ನ ಹೆಸರು ನಮ್ಮೂರ ಇತಿಹಾಸದಲ್ಲಿ ಶತಮಾನಗಳವರೆಗೂ ಉಳಿಯುತ್ತದೆ ಎನಿಸಿತು.
ಸರ್ಕಾರಿ ನೌಕರ ಎಂದರೆ ಒಂದು ಬೈಕು ಇರದಿದ್ದರೆ ಶೋಭೆಯಲ್ಲ ಎಂದು ನನಗೂ ಅಂದವರಿದ್ದರು. ನನ್ನ ಹೆಂಡತಿಗೆ ದಿನಾಲೂ ಕಿವಿ ಚುಚ್ಚುತ್ತಲೇ ಇರುತ್ತಾರೆ. ಅದಕ್ಕಾಗಿ ದಸರಾ ಹಬ್ಬದ ವಿಜಯದಶಮಿ ದಿನದಂದು ಆಫರ್ನೊಳಗೆ HERO HONDA ಬೈಕನ್ನು ಕೊಂಡೆವು. ಮನೆದೇವರಾದ ಹನುಮಪ್ಪನಿಗೆ ವಿಶೇಷಪೂಜೆ ಮಾಡಿಸಿ, ಪೂಜಾರಿ ಕೊಟ್ಟ ನದರು ತಡಿಯುವ ಕರಿ ದಾರವನ್ನು ಬಂಪರ್ಗೆ ಕಟ್ಟಿದೆವು. ಅಂದಿನಿಂದ ವಾರದ ತನಕ ಉಲ್ಲಾಸದ ದಿನಗಳು ಕಳೆದವು. ಹೆಂಡತಿ ಬಿಟ್ಟರೆ ನಾನು ಮೂರೊತ್ತು ಗಲೀಜು ಇಲ್ಲದ ಗಾಡಿಯನ್ನು ಅಭಿಮಾನದಿಂದ ಒರೆಸುತ್ತಿದ್ದೆವು.

ಶುಕ್ರವಾರ ಮಾತ್ರ ಊಹಿಸದ ಘಟನೆ ನಡೆಯಿತು. ಬಿದ್ದ ರಭಸಕ್ಕೆ ಪ್ರಾಣವೇ ಹೋಯಿತೇನೋ! ಕೈಕಾಲು ಮುರಿಯಿತೇನೋ! ಅಂದುಕೊಂಡಿದ್ದೆ. ಹೊಸಗಾಡಿ ತಂದ ಮೊದಲ ದಿನ ಮನೆ ದೇವರಿಗೆ ಪೂಜೆ ಮಾಡಿಸಿದ ಪರಿಣಾಮವೇ ಇನ್ನೂ ಜೀವಂತ ಉಳಿದಿದ್ದೇನೆ ಅನಿಸಿದೆ.

ಅವತ್ತು ಆಗಿದ್ದು ಇಷ್ಟೇ,
ನಾಲ್ಕುವರೆಗೆ ಶಾಲೆ ಬಿಟ್ಟ ಮೇಲೆ ಸಿನಿಮಾದ ಹಾಡುಗಳನ್ನು ಗುನುಗುನುತ್ತಾ ಊರಿಗೆ ಬರುತ್ತಿದ್ದೆ. ಅನಿತಾಳ ವಿಮುಖತೆ ನೆನಪು ಆಗುತ್ತಲೇ ಹಾಡುಗಳು ನಿಂತುಕೊಂಡವು. ಹೆಣ್ಣಿನ ಕಾಡಾಟಗಳು ನನ್ನನ್ನು ಕೊರೆಯತೊಡಗಿದವು. ಗಮನ ಎತ್ತೆತ್ತಲೋ ಹೋಯಿತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಒಂದೂ ಗಾಡಿ ಇಲ್ಲದ ರೋಡಿನ ಮೇಲೆ ಊರುನಾಯಿಯೊಂದು ದಿಢೀರನೆ ಆ ಬದಿಯಿಂದ ಈ ಬದಿಗೆ ಯಾಕೆ ಜಿಗಿಯಿತೋ ಗೊತ್ತಾಗಲಿಲ್ಲ? ಒಟ್ಟಿನಲ್ಲಿ ವಿಧಿಯಾಟದಿಂದ ಇಬ್ಬರ ಎಕ್ಸಿಡೆಂಟ್ ಆಯಿತು. ದೇವರ ಪುಣ್ಯ ಇಬ್ಬರಿಗೂ ಏನೂ ಆಗಿರಲಿಲ್ಲ. ಕುಂಯ್ ಕುಂಯ್ ಅಂತ ನಾಯಿ ಎದ್ದು ಹೋಯಿತು. ನನಗೆ ಗುದ್ದುತ್ತಿಯಾ? ಎಂದು ಹಿಂದಕ್ಕೆ ತಿರುಗಿ ತಿರುಗಿ ಬೊಗಳುತ್ತಾ ನೋಡುತ್ತಿತ್ತು. ಅಂಗೈ ಊರಿ, ಮೊಣಕಾಲು ನೆಲಕಚ್ಚಿ ಬಿದ್ದಿದ್ದರಿಂದ ಆ ಭಾಗದಲ್ಲಿ ರಕ್ತ ಬರುವಷ್ಟು ಆದರೆ ಎಲುಬು ಕಾಣದಷ್ಟು ಗಾಯಗಳಾದವು. ಕೆಲವು ಕಡೆ ಅಂಗಿ ಪ್ಯಾಂಟಿನ ಭಾಗಗಳೂ ಹರಿದಿದ್ದವು. ಹೆಲ್ಮೇಟು ಹಾಕಿಕೊಂಡಿದ್ದರಿಂದಲೇ ತಲೆಗೆ ಪೆಟ್ಟಾಗದೆ ದೊಡ್ಡ ಅನಾಹುತದಿಂದ ಪಾರಾಗಿದ್ದೆ. ಹೆಲ್ಮೇಟಿಗೆ ರೋಡು ಗೀರಿದ ಗೆರೆಗಳನ್ನು ನೋಡಿದರೆ ಖಂಡಿತ ಮಿದುಳು ಹೊರಗೆ ಬರುತ್ತಿತ್ತು ಎಂದು ಮನೆಗೆ ಬಂದಾಗ ನಾನು ಸತ್ತರೆ ನನ್ನ ನೌಕರಿ ಹಿಡಿಯುವ ಹೆಂಡತಿಯು ವಿಮರ್ಶೆ ಮಾಡಿದಳು. ಮನೆಯಲ್ಲಿ ಸಣ್ಣ ಅಶಾಂತಿಯ ಘಟನೆ ನಡೆದರೂ ಹೆಂಗಸರು ತಡೆಯುವುದಿಲ್ಲ. ಬೈಕ್ ಎಕ್ಸಿಡೆಂಟ್ ನಡೆದಿದೆ; ಸುಮ್ಮನಿರಲು ಆಗುತ್ತದೆಯೇ? ಅದಕ್ಕಾಗಿ ನನ್ನನ್ನು ಕರೆದುಕೊಂಡು ಹೋಗಿ ದೇವರು ಕೇಳಿಸಿದಳು. ಅವರು ಹೇಳಿದ್ದು- ಈ ಗಾಡಿ ನಿಮುಗ ಆಗಿ ಬಂದಿಲ್ಲ. ಮೊದ್ಲ ಇದ್ನ ಮಾರಿ ಬುಡ್ರಿ. ಇಲ್ಲಂದ್ರ ಯಾರ್ದನ ಜೀವ ತಗಂತಾದ ನೋಡ್ರಿ!! ಜೀವ ಹೋಗುವ ವಿಷಯದಲ್ಲಿ ಚೆಲ್ಲಾಟವಾಡುವ ಮೂರ್ಖಳಲ್ಲ ನನ್ನ ಹೆಂಡತಿ. ಅವತ್ತೇ ಬ್ರೋಕರನ್ನು ಕರೆಸಿ, ಇದನ್ನು ಒಳ್ಳೆ ರೇಟಿಗೆ ಮಾರೆಂದು ಐನೂರು ಖುಷಿ ಕೊಟ್ಟೆವು. ಎಕ್ಸಿಡೆಂಟ್ ಆದ ಗಾಡೀನ ಅರ್ಧ ರೇಟಿಗೆ ಕೇಳುತ್ತಾರೆಂದು ಅವನು ವಾರ ಸತಾಯಿಸಿದ. ಕಡೆಗೆ, ನನ್ನ ಹೆಂಡತಿ ಎಷ್ಟಕ್ಕಾದರೂ ಹೋಗಲಿ ಅಂದಮೇಲೆ ಎರಡು ದಿನದಲ್ಲಿ ಬಿಕರಿ ಮಾಡಿಸಿದ. ಎಕ್ಸಿಡೆಂಟ್ ವಿಷಯ ಮುಚ್ಚಿಟ್ಟು ಹತ್ತುಸಾವಿರ ಹೆಚ್ಚಿಗೆ ಮಾರಿಸಿದ್ದೇನೆಂದು ನಮ್ಮಲ್ಲೂ ಕಮಿಷನ್ ತೆಗೆದುಕೊಂಡ ಬ್ರೋಕರ್.

ಸೇಂದಿ ತೆಗೆದ ಮೇಲೆ

ಭಾಗ – 04

ಹಚ್ಚೊಳ್ಳಿ ತಲುಪಿದಾಗ ಏಳುಗಂಟೆ ಆಗಿತ್ತು. ಕಡಾಯಿಯಲ್ಲಿ ಕರಿಯುವ ಪುಗ್ಗಿಗಳು ಕೊಂಡು ತಿನ್ನಲು ಆಹ್ವಾನಿಸುತ್ತಿದ್ದವು. ನೌಕರಿಗೆ ಸೇರಿ ನಾಜೂಕಾದ ನಾಗಪ್ಪ ತನಗೆ ಇಡ್ಲಿ ಇರಲೆಂದ. ನಾನು ಪೂರಿ ಮತ್ತು ಬಜೆ ಕಟ್ಟಿಸಿಕೊಂಡೆ. ತಮ್ಮ ಹೆಂಗಸರು ಯಾವಾಗಲೂ ಪರದೆ ಒಳಗೆ ಇರಬೇಕೆಂದು ರಕ್ತಗತವಾಗಿ ಭಾವಿಸುವ ಮುಸ್ಲಿಮರು ತಮ್ಮ ಕುಲವೃತ್ತಿ ಅಲ್ಲದ ಹೋಟೇಲ್ ಮಾಡಿ, ಗಿರಾಕಿಗಳನ್ನು ಸೆಳೆಯಲು ತಮ್ಮ ಹೆಂಗಸರನ್ನು ಬಳಸುತ್ತಿರುವುದು ಕಂಡು ಸೋಜಿಗವಾಯಿತು. ಇಡ್ಲಿ, ಪೂರಿ, ಬಜೆ ಕೊಟ್ಟ ಮಹಿಳೆಯು ಬುರುಕೆಯಲ್ಲಿ ಇದ್ದುದು ಇನ್ನೂ ನೀನು ಹೊರಗೆ ಬರುವುದು ತುಂಬಾ ಬಾಕಿಯಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿತ್ತು. ಕೂನ ಇಲ್ಲದಿದ್ದರೂ ಖುಷಿಯಿಂದ ಮಾತಾಡಿಸಿದ ಆಂಟಿಗೆ ಬರ್ತೇವೆ ಎಂದು ಮಾತುಕೊಟ್ಟು ಚಿಕ್ಕ ಬಾಯ್ ಸಲ್ಲಿಸಿ, ಬೇಕರಿಯಲ್ಲಿ ಎರಡು ಲೀಟರಿನ ಬಾಟಲಿ ಕೊಂಡೆವು.

ಎಲ್ಲೂ ಗಾಡಿ ತರುಬದೆ ನೇರವಾಗಿ ಹೋಗಿದ್ದು ಹಳ್ಳಕ್ಕೆ. ಹಳ್ಳ ಎಂದರೆ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಗಡಿಯಾದ ಭಾಗ. ಅದು ಕರ್ನಾಟಕದ ಚೆಳ್ಳೇಕೂಡ್ಲೂರು ಹಾಗೂ ಆಂಧ್ರದ ಮ್ಯಾಗಿನಾಳ ಗ್ರಾಮಗಳ ಮಧ್ಯೆ ಇರುವುದು. ನಾವು ಹುಮ್ಮಸ್ಸಿನಿಂದ ನಮ್ಮ ಬಾರ್ಡರಿನ ಒಳಗೆ ನಿಂತು ಮ್ಯಾಗಿನಾಳದಿಂದ ಬರುವ ವಾಹನಗಳನ್ನು ತಪಾಸಣೆ ಮಾಡತೊಡಗಿದೆವು. ಒಂಭತ್ತು ಗಂಟೆಯಾದರೂ ಒಬ್ಬರು ಸಿಗಲಿಲ್ಲ. ಇಬ್ಬರಿಗೂ ಹೊಟ್ಟೆಯೊಳಗೆ ಕೊರ್ ಕೊರ್ ಶುರುವಾಯಿತು. ನಾಸ್ಟಾ ಮಾಡಲು ತುಂಗಭದ್ರ ನದಿ ಕಡೆಗೆ ಹೊರಟೆವು.

ತುಂಗಭದ್ರಾ ನದಿಯ ಎರಡೂ ದಂಡೆಗಳಲ್ಲಿ ಇನ್ನೂರು ಮೀರಟ್ ವರೆಗೆ ವಿಶಾಲವಾಗಿ ಮರಳು ಹಬ್ಬಿಕೊಂಡಿತ್ತು. ಮರಳಿನ ನಂತರ ಬರೀ ಜಾಲಿಗಿಡಳು ಬೆಳೆದುಕೊಂಡಿದ್ದು ಮಾತ್ರ ಆಕರ್ಷಣೀಯ ಆಗಿರಲಿಲ್ಲ. ಅರಣ್ಯ ಇಲಾಖೆಯವರು ನದಿಪಾತ್ರದ ಖಾಲಿ ಜಾಗದಲ್ಲಿ ಸ್ಥಳೀಯ ಸಸಿಗಳನ್ನು ನೆಟ್ಟರೆ ಪ್ರಕೃತಿಗೆ ಅನುಕೂಲವಾಗುತ್ತದೆ. ಗಿಡಗಳಿದ್ದರೆ ಜಾನುವಾರು ಕಾಯುವವರು, ದಾರಿಹೋಕರು, ಪ್ರವಾಸಿಗರು ನೆಳ್ಳಿಗೆ ಕೂತು ವಿಶ್ರಾಂತಿ ಪಡೆಯಬಹುದು. ಗಿಡವೆಂದರೆ ಪಕ್ಷಿಗಳ ಆವಾಸಸ್ಥಾನ. ಪಕ್ಷಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಫರಂಗಿ, ಮಾವು, ಉಣಸೆ ಮುಂತಾದ ಗಿಡಗಳನ್ನು ನೆಡುವುದು ಒಳಿತು. ಹೀಗೆ ಮಾಡಿದರೆ ಅವಕ್ಕೆ ಒಂದೇ ಜಾಗದಲ್ಲಿ ನೀರೂ ಮತ್ತು ಆಹಾರ ದೊರೆಯುವುದು ಅನಿಸಿತು.
ಸಮುದ್ರದ ಕಿನಾರೆಯಲ್ಲಿ ಬೆವರು ಕಿತ್ತಿ ಬರುವಂತಹ ಬಿಸಿಲಿನ ಝಳ ಇಲ್ಲಿಯೂ ಝಳಪಿಸುತ್ತಿತ್ತು. ನೀರು ಆವಿಯಾಗಲು, ಮೋಡವಾಗಲು, ಮಳೆಯ ರೂಪದಲ್ಲಿ ನೀರು ಮತ್ತೆ ಭೂಮಿಗೆ ಬರಲು ಗಿಡವಿಲ್ಲದ ನೀರಿನ ತಾಣಗಳಲ್ಲಿ ಹೆಚ್ಚಿನ ಬಿಸಿಲು ಇರುವಂತೆ ಕಾಣಿಸಿತು. ಸಮಾನಾಂತರ ಕೂತು ಆಳದ ನೀರಲ್ಲಿ ಆಡುವ ಮೀನುಗಳನ್ನು ನೋಡುವುದು ಕಷ್ಟವಾಗುತ್ತಿದೆ. ಇಲ್ಲಿ ಒಂದೇ ಒಂದು ಕೋಗಿಲೆ ಕೂಹೂ ಅನ್ನುತ್ತಿಲ್ಲ. ಗುಬ್ಬಿಗಳು ಚಿಂವ್ ಅನ್ನುತ್ತಿಲ್ಲ. ಮೋಡವಿಲ್ಲದ ಹಾಳಾದ ಆಕಾಶದ ಮೇಲೆ ಹದ್ದುಗಳ ಸುಳಿವೂ ಇಲ್ಲ. ಪಕ್ಷಿಯಿಲ್ಲದ ಪರಿಸರವು ಪರಿಸರವೇ ಅಲ್ಲ. ಪಕ್ಷಿಯನ್ನು ಕಾಣದೇ ಅದರ ಕೂಗನ್ನು ಕೇಳದೇ ಹೊತ್ತು ಕಳಿಯುತ್ತಿದ್ದೇವೆಂದರೆ ನಾವು ನಮ್ಮ ಯೋಚನೆಗಳಿಂದ ಹೊರಬಂದಿಲ್ಲ ಅಂತಲೇ ಅರ್ಥ. ಈವರ್ಷ ಜೂನ್ ಜುಲೈನಲ್ಲಿ ಒಳ್ಳೆಯ ಮಳೆ ಬಂದಿದ್ದರೆ ಹೊಸಪೇಟೆ ಡ್ಯಾಮು ತುಂಬುತ್ತಿತ್ತು. ತುಂಗಭದ್ರ ನದಿಯಲ್ಲಿ ಅಕ್ಟೋಬರ್ ತನಕ ಉಸುಕು ಕಾಣದಂತೆ ಹರಿಯುವ ಹೊಂಡುನೀರು ನೋಡಬಹುದಿತ್ತು. ಮೂರ್ನಾಕು ವರ್ಷಕ್ಕೊಮ್ಮೆ ಬರಗಾಲ ಬೀಳುವುದು ಕರ್ನಾಟಕ ಮಳೆಯ ಚಾಳಿಯಾಗಿದೆ ಎಂದು ಬೈದುಕೊಂಡೆ.
ನಾಗಪ್ಪ ಒಂದು ಜಾಗ ಆರಿಸಿ, ಇಲ್ಲೇ ಕೂಡಾಮು ಅಂದ. ಹೊಲಕ್ಕೆ ಕೆಲಸಕ್ಕೆ ಬಂದವರು ಅಲ್ಲಲ್ಲಿ ಕಕ್ಕಸ ಮಾಡಿದ್ದನ್ನು ದಾಟಿ ದೂರ ಬಂದಿದ್ದೆವು. ನದಿದಂಡೆಯಲ್ಲಿ ಕಕ್ಕಸ, ಮಾಡುವವರು ಮನೆಯಿಂದಲೇನು ನೀರು ತಂದಿರಲಿಕ್ಕಿಲ್ಲ ಎಂದುಕೊಂಡು ಸೊಲ್ಪ ಮೇಲಿನ ಜಾಗದಲ್ಲಿ ಕುಳಿತುಕೊಂಡೆವು. ಮೇಲಿನ ಊರಿನವರೂ ಹೀಗೆಯೇ ನದಿದಂಡಗೆ ಬಂದಿರುತ್ತಾರೆಂಬ ಕಬುರು ನಮಗಾಗಲಿಲ್ಲ. ಆದರೂ ನಾನು ಮೂಗು ಮುರಿಯುವಾಗ ನಾಗಪ್ಪ ಈ ವಿಚಾರ ಹೇಳಿದ- ಹರಿಯುವ ನೀರಿನಲ್ಲಿ ಯಾವ ಕಲ್ಮಶಗಳೂ ಇರುವುದಿಲ್ಲ. ಅನೇಕ ಬೇರುಗಳನ್ನು, ವಿವಿಧ ಮಣ್ಣಿನ ಪದರುಗಳನ್ನು, ಹಲವು ಗುಣದ ಕಲ್ಲುಗಳನ್ನು, ಪಾಚಿಯಂತಹ ನೀರುಜೀವಿಗಳನ್ನು, ಜೀವರಾಶಿಗಳ ಮಲ ಮೂತ್ರಗಳನ್ನು ಎಷ್ಟು ಮುಟ್ಟಿಸಿಕೊಂಡು ತಟ್ಟಿಸಿಕೊಂಡು ಬರುತ್ತದೋ ಅಷ್ಟೊಂದು ನೀರು ಸ್ವಚ್ಛವಾಗುತ್ತಂತೆ!! ಸಣ್ಣ ಹಳ್ಳದಂತೆ ಒಂದೇ ಬದಿಗೆ ಹರಿಯುತಿದ್ದ ಮೊಣಕಾಲೂ ಮುಳುಗದ ನೀರಿನಲ್ಲಿಳಿದು ನಾಗಪ್ಪ ಕೈಕಾಲು ಮುಖ ತೊಳೆದುಕೊಂಡ. ಅವನು ಹೇಳಿದ್ದು ನನಗೂ ಸರಿಯೆನಿಸಿ ನಾನೂ ನದಿಗೆ ಇಳಿದೆ. ಕುಡಿಯಲು ತಂದ ಹಣದ ನೀರನ್ನು ಪೋಲು ಮಾಡಿದ್ದರೆ ನಾಗಪ್ಪ ಖಂಡಿತ ಬೈಯ್ಯುತ್ತಿದ್ದ. ಬಡಿವಾರ ಬ್ಯಾಡಪ ಅನ್ನುತ್ತಿದ್ದ.
ನಾವು ರೈಡಿಗೆ ತಂದ ಹೊಸ ಯುನಿಕಾನ್ ಬೈಕು ನಾಗಪ್ಪನದು. ತನ್ನ ಹಳೆಯ ಸ್ಲ್ಪೆಂಡರ್ ಬೈಕನ್ನು ಮಾರಿ, ಬಂದ ಹಣದ ಜೊತೆಗೆ BAJAJ FINANCE ಮಾಡಿಸಿದ್ದಾನೆ. ಮೊನ್ನೆ ಡೆಲಿವರಿ ಬಂದ ದಿನ ನಮಗೂ ಸ್ವೀಟು ಕೊಟ್ಟರು. ಹೊಸಗಾಡಿ ಚೆನ್ನಾಗಿದೆಯೆಂದು ಎಲ್ಲಾರೂ ಹೊಗಳುತ್ತಿದ್ದಾರಂತೆ. ಹೊಸಬೈಕು ತಂದಮೇಲೆ ನಿಂತುಹೋದ ಹಳೆಯ ಕೆಲಸಗಳೆಲ್ಲಾ ಆಗುತ್ತಿವೆಯಂತೆ! ಹಾಗಂತ ನಾಗಪ್ಪನೇ ಹೇಳಿದ. ಹೊಸ ವಾಹನಗಳನ್ನು ಕೊಂಡವರಿಗೆ ಒಂದು ವಿಚಿತ್ರ ಧಿಮಾಕು ಸೇರಿಕೊಳ್ಳುತ್ತದೆ. ಕೆಲವು ತಿಂಗಳು ತನಕ ಯಾರಿಗೂ ತಮ್ಮ ಗಾಡಿಯನ್ನು ಮುಟ್ಟಲೂ ಬಿಡುವುದಿಲ್ಲ.

ಹೊಟ್ಟೆ ಝಾಡಿಸುತ್ತಿದೆಂದು ನಾಗಪ್ಪ ಬೇಲಿಯ ಒಳಗೆ ಹೋದ. ನಾನು ಮಡುವಿನ ನೀರಿನಲ್ಲಿ ನನ್ನ ಮುಖವನ್ನು ನೋಡುತ್ತಾ ಕೂತೆ. ಸಂಸಾರದ ಹತ್ತಾರು ಯೋಚನೆಗಳು ಬಂದು ಹೋದವು. ನಾಗಪ್ಪ ಬಂದ ಕೂಡಲೆ ತಡಮಾಡದೆ ಹಳ್ಳಕ್ಕೆ ಹೋಗಿ ಮತ್ತೆ ಹನ್ನೊಂದು ಗಂಟೆಯ ತನಕ ತಪಾಸಣೆ ನಡೆಸಿದೆವು. ಒಂದು ಮಿಕವೂ ನಮ್ಮ ಬಲೆಗೆ ಬೀಳಲಿಲ್ಲ. ಆಗ ಒಬ್ಬ ಪ್ರಯಾಣಿಕ ನಮಗೆ- ಸರ್ ನೀವು ಹಿಂಗ ಚೆಕ್ ಮಾಡಿಕೆಂತ ಕುಂತ್ರ ಯಾರ್ ಬರ್ತಾರ? ನೀವು ಬಂದಿದ್ದು ಆಗ್ಲೇ ಸೇಂದಿ ಮಾರೋರಿಗೆ ಗೊತ್ತಾಗ್ಯಾದ. ನೀವು ರಾತ್ರಿತನ ಚೆಕ್ ಮಾಡಿದ್ರೂ ಒಬ್ರೂ ಇಕಡೆ ಬರಂಗಿಲ್ಲ ಅಂದ. ಅದನ್ನು ಕೇಳಿ ನಾಗಪ್ಪನ ತಲೆ ಓಡಿತು. “ದೊಸ್ತ ಹಿಂಗಾದ್ರ ಕೆಲ್ಸ ಆಗಂಗಿಲ್ಲ. ನಾವು ಮೊದ್ಲ ಹಳ್ಳದಿಂದ ಜಾಗ ಖಾಲಿ ಮಾಡ್ಬೇಕು. ನಡಿ ಬೈಕು ಹತ್ತು” ಎಂದ. ಮತ್ತೆ ತುಂಗಾಭದ್ರ ನದಿ ಕಡೆ ಹೊರಟೆವು. “ಒಂದನ ಬೈಕು ಹೊಯ್ಲಿಲ್ಲಂದ್ರ ಸಾರ್ ಸುಮ್ನಿರಂಗಿಲ್ಲ” ಎಂದು ಸಾಬನ ಸಿಟ್ಟನ್ನು ನಾನು ನೆನಪಿಗೆ ತಂದೆ. ನಾಗಪ್ಪ ಲೆಕ್ಕ ಹಾಕಿ ಹೇಳಿದ. “ನಾವು ಹಳ್ಳದಲ್ಲಿ ಇರ್ಲಿಲ್ಲಂದ್ರ ನಾವು ಹೋಗೀವಂತ ಸೇಂದಿ ಮಾರೋರು ತಿಳ್ಕಂತಾರ. ಅದ್ಕ ಒಂದು ಕೆಲ್ಸಮಾಡಾಮು. ಯಾರ್ದನ ಬೈಕು ತರ್ಸಾಮು. ಆ ಬೈಕು ತಗಂದು ನೀನು ಸೇಂದಿ ಮಾರೋ ಪೈಂಟುಗಳ ಪಕ್ಕದಲ್ಲಿ ಕುಂದ್ರು. ಕರ್ನಾಟಕದ ಬೈಕುಗಳು ಸೈಡು ಬ್ಯಾಗಲ್ಲಿ ಸೇಂದೀನ ಇಟ್ಗಂಡ್ರ ನನ್ಗ ಕಾಲ್ ಮಾಡ್ಬೇಕು. ಅವ್ರು ಮುಂದ ಬಂದ್ರ ನೀನು ಹಿಂದಿಂದ ಬರ್ಬೇಕು. ಗಾಡಿ ಯವಾಗ ನಮ್ ಬಾರ್ಡರೊಳಗ ಬರ್ತಾದೋ ಇಬ್ರು ಕೂಡಿ ಅಟ್ಯಾಕ್ ಮಾಡ್ಬೇಕು ಎಂಬ ಯೋಜನೆ ಮಾಡಿಕೊಂಡೆವು. ವತ್ತುಮುರುಣಿ ಗ್ರಾಮದಲ್ಲಿರುವ ಕಾಮಧೇನು ವೈನ್ಸ್ ವೆಂಡರನ ಬೈಕು ತರಿಸಿದೆವು. ನಾನು ಲುಂಗಿ ಉಟ್ಟುಕೊಂಡು ಮ್ಯಾಗಿನಾಳ ಗ್ರಾಮಕ್ಕೆ ಹೋದಾಗ ಎರಡು ಸೇಂದಿ ಪೈಂಟುಗಳು ತೆರೆದು ಹತ್ತಾರು ಜನರ ಕುಡಿತ ನಡೆದಿತ್ತು.

ತೆಲುಗಿನಲ್ಲಿ ಕಳ್ಳು ಎಂದರೆ ಕನ್ನಡದಲ್ಲಿ ಹೆಂಡ ಅಂತ ಅರ್ಥ. ಇದನ್ನು ಈಚಲು ಗಿಡದಿಂದ ತೆಗೆಯುತ್ತಾರೆ. ಒಂದು ಈಚಲು ಗಿಡಕ್ಕೆ ಒಂದು ರಾತ್ರಿ ಪೂರ್ತಿ ಗಡಿಗಿ ಕಟ್ಟಿದರೆ ಎರಡು ಲೀಟರಿನಷ್ಟು ದ್ರವ ಶೇಖರಣೆ ಆಗಬಹುದು. ಇದನ್ನು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದೆಂಬ ಪ್ರತೀತಿ ಇದೆ. ಕುಡಿದವರು ಕೆಂಪಗೆ ಬಣ್ಣ ಬಿಡುತ್ತಾರಂತೆ! ಬಾಣಂತಿಯರಿಗೂ ಕುಡಿಸುವ ಜನಗಳಿದ್ದಾರೆ. ಹೆಂಡವನ್ನು ಬಳಸುವುದರಲ್ಲಿ ಕೆಲವು ಕ್ರಮಗಳಿವೆ. ಸೂರ್ಯ ಉದಯ ಆಗುವುದರೊಳಗೆ ಗಿಡದಿಂದ ಇಳಿಸಬೇಕು ಮತ್ತು ಕುಡಿಯಬೇಕು. ಇಲ್ಲದಿದ್ದರೆ ಬಿಸಿಲು ಏರಿದಂತೆ ಉಳಿಯಾಗುವ ಪ್ರಮಾಣ ಹೆಚ್ಚಾಗುತ್ತದೆ. ಸೂರ್ಯೋದಯ ಒಳಗಿನ ಹೆಂಡ ಕುಡಿದರೆ ನಿಶೆ ಏರುವುದಿಲ್ಲ. ಬಿಸಿಲ ನಂತರ ಕುಡಿದರೆ ತೇಲಾಡಿಸುತ್ತದೆ.

ಹೆಂಡ ಮತ್ತು ಸೇಂದಿ ಎರಡೂ ಬೇರೆ ಬೇರೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಹೆಂಡ ಮಾರಲು ಮಾತ್ರ ಅನುಮತಿಯಿದೆ ಹೊರತು ಸೇಂದಿ ಮಾರಲು ಅಲ್ಲ. ಆದರೆ ಈಚಲು ಗಿಡದ ಹೆಂಡವು ಬೇಡಿಕೆಯಷ್ಟು ಸಿಗದ ಕಾರಣ ಲೈಸೆನ್ಸ್ ಪಡೆದವರು CH4 ಎಂಬ ರಾಸಾಯನಿಕದಿಂದ ಸೇಂದಿ ತಯಾರಿಸಿ ಅದನ್ನೇ ಹೆಂಡವೆಂದು ಮಾರುತ್ತಿದ್ದಾರೆ. ಜನರಿಗೆ ಈ ಸೇಂದಿಯ ಬಗ್ಗೆ ಗೊತ್ತಿಲ್ಲದ್ದರಿಂದ ಸೇಂದಿಯನ್ನೇ ಹೆಂಡವೆಂದು ನಂಬಿದ್ದಾರೆ. ಕೆಲವರಿಗೆ ಗೊತ್ತಿದ್ದರೂ ಅದಕ್ಕೆ ಅಡಿಟ್ ಆಗಿದ್ದರಿಂದ ಹತ್ತುರುಪಾಯಿಗೆ ಜಗ್ಗಿನ ತುಂಬ ಸಿಗುತ್ತಿದ್ದರಿಂದಲೂ ಅದರ ಹಿಂದೆ ಬಿದ್ದಿದ್ದಾರೆ. ಆದರೆ ರಾಸಾಯನ ತಜ್ಞರು ಹೀಗೆ ಹೇಳುತ್ತಾರೆ- ಸೇಂದಿಯನ್ನು ನಿರಂತರವಾಗಿ ಕುಡಿದರೆ ಒಂದು ವರ್ಷದೊಳಗೆ ಕಿಡ್ನಿಗಳು ಹಾಳಾಗುತ್ತವಂತೆ! ಕಣ್ಣುಗಳು ಹೋಗುತ್ತವಂತೆ! ದೇಹ ಸಣ್ಣಗಾಗುತ್ತಂತೆ! ಅತಿ ಬೇಗನೆ ಸಾವು ಸಂಭವಿಸುತ್ತಂತೆ!

ನಮ್ಮ ಕರ್ನಾಟಕದಲ್ಲಿ ಹೆಂಡ ಅಥವಾ ಸೇಂದಿಯ ಉತ್ಪಾದನೆಯಾಗಲೀ ಮಾರಾಟವಾಗಲೀ ಸೇವನೆಯಾಗಲೀ ಮಾನ್ಯವಿಲ್ಲ. ಆದ್ದರಿಂದ ಆಂಧ್ರ ಮತ್ತು ತೆಲಂಗಾಣದಿಂದ ಸೇಂದಿಯನ್ನು ತರುವವರ ಮೇಲೆ ಅಬಕಾರಿಯವರು, ಪೋಲಿಸಿನವರು ನಿಗಾ ವಹಿಸಿ ಕೇಸುಗಳನ್ನು ದಾಖಲಿಸುತ್ತಾರೆ. ಸೇಂದಿಯು ಆರೋಗ್ಯಕ್ಕೆ ಹಾನಿಕಾರಕ ಮತ್ತು ಕರ್ನಾಟಕದಲ್ಲಿ ನಿಷಿದ್ಧ ಎಂಬುದನ್ನು ಕರ್ನಾಟಕದ ಜನರಿಗೆ ಜಾಗೃತಿ ಮೂಡಿಸುವ ವಿಫುಲ ಪ್ರಯತ್ನಗಳು ಅಬಕಾರಿ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿವೆ.

ಮ್ಯಾಗಿನಾಳ ಗ್ರಾಮದಲ್ಲಿ ತುಂಗಾಭದ್ರ ನದಿ ದಂಡೆಗೆ ಇರುವ ರಾಮದೇವರ ಗುಡಿಗೆ ಹೋಗಿ ನಮಸ್ಕರಿಸಿ, ಕೆಲಸ ಆಗಲಿ ಎಂದು ಬೇಡಿಕೊಂಡೆ. ದೇವಸ್ಥಾನದಿಂದಲೇ ಸೇಂದಿ ಗುಡಿಸಲಿಗಳು ಕಾಣಿಸುತ್ತಿದ್ದವು. ಯಾರಿಗೂ ಸಂದೇಹ ಬರದಂತೆ ಪೋನಲ್ಲಿ ಟೈಂಪಾಸ್ ಮಾಡುತ್ತಾ ನಿಂತೆ. ಸುಮಾರು ಒಂದು ತಾಸು ಕಳೆದಿರಬಹುದು. ಆಗ ಒಂದು ಗಂಟೆ ಆಗಿತ್ತು. ನಾವು ಹೋಗಿದ್ದನ್ನು ಖಚಿತ ಮಾಡಿಕೊಳ್ಳಲು ಸೇಂದಿ ಮಾರಾಟಗಾರನು ಎರಡುಸಲ ಹಳ್ಳಕ್ಕೆ ಹೋಗಿ ನೋಡಿಕೊಂಡು ಬಂದ. ಹಳ್ಳದಲ್ಲಿ ನಾವಿಲ್ಲದ್ದನ್ನು ನೋಡಿ ವಾಪಾಸು ಹೋಗಿರಬೇಕೆಂದು ಭಾವಿಸಿದ ಮೇಲೆಯೇ ಕರ್ನಾಟಕದ ಗಿರಾಕಿಗಳಿಗೆ ಪಾರ್ಸಲ್ ಕೊಡಲು ನಿರ್ಧರಿಸಿದ . ಐದು ಲೀಟರಿನ ಎರಡು ಪ್ಲಾಸ್ಟಿಕ್ ಕ್ಯಾನಿನಲ್ಲಿ ಸೇಂದಿ ತುಂಬಿಕೊಂಡ ಇಬ್ಬರು ಒಂದೇ ಬೈಕಿನ ಮೇಲೆ ಕೂತು ನಮ್ಮ ಗಡಿಯತ್ತ ಹೊರಟರು. ಕರ್ನಾಟಕದ ಗಾಡಿಯೊಂದು ಸೇಂದಿ ಗುಡಿಸಲು ಮುಂದೆ ನಿಂತ ಕೂಡಲೇ ನಾನು ನಾಗಪ್ಪನಿಗೆ ಕರೆ ಮಾಡಿ ತಿಳಿಸಿದ್ದೆ. ಅವರ ಬೈಕು ಹೊರಟೊಡನೆ ನಾನೂ ಅವರ ಹಿಂದೆ ಬುರ್ರನೆ ಬೆನ್ನತ್ತಿದೆ. ಅವರ ಬೈಕು ಹಳ್ಳ ದಾಟಿತು. ಎಲ್ಲರೂ ಸಂಪೂರ್ಣ ನಮ್ಮ ಜಾಗದೊಳಗೇ ಇದ್ದೆವು. ನಾಗಪ್ಪ ಅಡ್ಡ ಬಂದು ಆರೋಪಿಗಳ ಬೈಕನ್ನು ತಡೆಯಲು ಪ್ರಯತ್ನಿಸಿದ. ಹೆದರಿದ ಆರೋಪಿಗಳು ಬೈಕನ್ನು ಹಿಂದಕ್ಕೆ (ಆಂಧ್ರ ಕಡೆಗೆ) ತಿರುಗಿಸಿದರು. ಇದನ್ನು ನಾವು ಮೊದಲೇ ಊಹಿಸಿದ್ದೆವು. ನನ್ನ ಬೈಕನ್ನು ಹಳ್ಳದಲ್ಲಿ ಅಡ್ಡಗಟ್ಟಿ, ಅವರ ಬೈಕಿನ ಹ್ಯಾಂಡಲಿಗೆ ಕೈ ಹಾಕಿದೆ. ಆದರೂ ಗಾಡಿ ಆರೇಳು ಮೀಟರ್ ಎಳೆದುಕೊಂಡು ಹೋಯಿತು. ಅವರು ಇನ್ನಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದರೆ ಹತ್ತು ಫೀಟು ಆಳದ ನೀರಿಲ್ಲದ ಹಳ್ಳದೊಳಗೆ ಬೀಳುವವರಿದ್ದರು; ಅದು ನಮಗೆ ಲಾಭ ಆಯಿತು. ನನಗಂತೂ ಯಾರಿಗೆ ಏನಾಗುತ್ತೋ ಎನ್ನುವ ಭಯವಾಗಿತ್ತು. ಅದೇ ಗೊಂದಲದಲ್ಲಿ ನಾಗಪ್ಪನನ್ನು ಕೂಗಿ ಕೂಗಿ ಕರೆದೆ. ಆಯತಪ್ಪಿ ಬೈಕು ಕೆಳಗೆ ಬಿತ್ತು. ನಾನೂ ಅಂಗಾತ ಬಿದ್ದೆ. ಅವರೂ ಬಿದ್ದರು. ನಂತರ ಗಾಡಿ ಅಲ್ಲೇ ಬಿಟ್ಟು ಓಟ ಕಿತ್ತರು. ನಾನು ಒಬ್ಬನನ್ನು ಅಟ್ಟಿಸಿಕೊಂಡು ಹೋದೆ. ಅಷ್ಟರಲ್ಲಿ ನಮ್ಮಲ್ಲಿಗೆ ಬಂದ ನಾಗಪ್ಪನೂ ಇನ್ನೊಬ್ಬನನ್ನು ಬೆನ್ನಟ್ಟಿದ. ಖಾಕಿ ಕೆಲಸದವರಿಗೆ ರನ್ನಿಂಗು ಬಹಳ ಮುಖ್ಯವಾಗುತ್ತದೆ. ಆರೋಪಿಗಳು ದಿನಾಲೂ ರನ್ನಿಂಗು ಮಾಡದಿದ್ದರೂ ಪೋಲಿಸರಿಂದ ಬಚಾವು ಆಗಲು ಭಯವನ್ನು ಶಕ್ತಿ ಮಾಡಿಕೊಂಡು ಅವರ ಕಾಲುಗಳು ನಿರಾಯಾಸವಾಗಿ ಓಡುತ್ತವೆ. ಹೊಟ್ಟೆ ಮುಂದಕ್ಕೆ ಬಂದವರು ನೂರು ಮೀಟರ್ ಓಡಲೂ ಸಾಕಾಗುತ್ತದೆ. ನಾಗಪ್ಪ ಪಳಗಿದ ಮನುಷ. ನಾನೂ PSI ನೌಕರಿಗೆ ತಯಾರಿ ನಡೆಸುತ್ತಿದ್ದರಿಂದ ಎರಡ್ಮುರು ಕಿಲೋ ಮೀಟರ್ ವರೆಗೂ ಓಡಲು ಶಕ್ತರಿದ್ದೆವು. ಎಷ್ಟೇ ವೇಗವಾಗಿ ಓಡುವ ಜಿಂಕೆಯನ್ನು ಬೆನ್ನಟ್ಟಿದ ಚಿರತೆಯು ಬಿಡುವುದಿಲ್ಲ. ಅದರಂತೆ ಆರೋಪಿಗಳನ್ನು ಹಿಡಿಯುವುದರಲ್ಲಿ ನಾವು ಸಫಲರಾದೆವು. ಬಂಡಿಗೆ ಕಟ್ಟಿದ ಎತ್ತಗಳನ್ನು ಚಿನ್ನಾಟ ತೆಗೆಸಿದರೆ ನಿಂತಾಗ ಅವು ಬುಸುಗುಡುವಂತೆ ಬಾಯಿಯಿಂದ ಉಸುರಾಡುವಂತೆ ನಾವು ನಾಲ್ಕೂ ಜನರು ಸುಧಾರಿಸಲು ಹತ್ತು ನಿಮಿಷ ಹಿಡಿಯಿತು. ಮೊದಲೇ ಹೇಳಿದಂತೆ ನಾಗಪ್ಪ ಪಳಗಿದ ಮನುಷನಾಗಿದ್ದರಿಂದ ಆರೋಪಿಗಳಿಗೆ ಹೊಡಿಯಲಿಲ್ಲ; ಭಯ ಪಡಿಸಲಿಲ್ಲ. ಅಣ್ಣತಮ್ಮರಂತೆ ವಿಶ್ವಾಸಕ್ಕೆ ತೆಗೆದುಕೊಂಡ. ನಿಮಗೆ ಏನೂ ಮಾಡುವುದಿಲ್ಲ. ಆಫೀಸಿಗೆ ಹೋದ ಮೇಲೆ ಒಂದು ಸಹಿ ಮಾಡಿಸಿಕೊಂಡು ಬಿಡುತ್ತೇವೆ ಎಂದು ಸಂತೈಸಿದ. ನಾವು ಹೇಳಿದಂತೆ ಕೇಳದಿದ್ದರೆ ನೀವು ಓಡಿ ಹೋದರೂ ನಿಮ್ಮ ಮೇಲೆ ಕೇಸಾಕುತ್ತೇವೆ. ನಿಮ್ಮ ಬೈಕು ಒಯ್ಯುತ್ತೇವೆ ಎಂದು ಹೆದರಿಸಿದ. ಆಂಧ್ರದಿಂದ ಇನ್ನೊಮ್ಮೆ ಸೇಂದಿ ತರುವುದಿಲ್ಲೆಂದು ಬರೆದುಕೊಟ್ಟರೆ ಮಾತ್ರ ನಿಮ್ಮನ್ನೂ ನಿಮ್ಮ ಗಾಡಿಯನ್ನೂ ಬಿಡುತ್ತೇವೆಂದು ಸುಳ್ಳು ಹೇಳಿದ. ನಾವು ಅವರ ಒಳ್ಳೆಯದಕ್ಕಾಗಿ ಮಾತಾಡುತ್ತಿದ್ದರಿಂದ ಅವರು ಬೇಗನೆ ನಮ್ಮನ್ನು ನಂಬಿದರು. ನಾನು ಮತ್ತು ನವೀನ ಆರೋಪಿಗಳ ಬೈಕಿನಲ್ಲೂ ರಮೇಶ ಎಂಬ ಆರೋಪಿಯು ನಾಗಪ್ಪನ ಬೈಕಲ್ಲೂ ಕೂತು ಕಚೇರಿಗೆ ಬಂದೆವು. ಕೆಳಗೆ ಬಿದ್ದ ರಭಸಕ್ಕೆ ನನ್ನ ಎಡಗಾಲಿನ ಹೆಬ್ಬೆರಳಿಗೆ ಗಾಯವಾಗಿ ರಕ್ತ ಸೋರಿ ಕಂದುಗೆಟ್ಟಿತ್ತು. ನನ್ನ ಹೆಂಡತಿ ಹೇಳುವವರೆಗೂ ನನಗೆ ಅದರ ನೋವಾಗಲೀ ಅರಿವಾಗಲೀ ಇರಲಿಲ್ಲ. ನಮ್ಮ ಸಿಬ್ಬಂದಿಗಳೂ ಅದನ್ನು ಗಮನಿಸಿಲ್ಲ ಅನಿಸುತ್ತೆ. ದೇವರ ಪುಣ್ಯದಿಂದ ದೊಡ್ಡ ಅನಾಹುತವೇನೂ ಆಗಲಿಲ್ಲ.

ನಾವು ಸೇಂದಿ ಕೇಸನ್ನು ಹಿಡಿದು ತಂದಿದ್ದಕ್ಕಾಗಿ ನಮ್ಮನ್ನು ಸಾಹೇಬರು ಹೊಗಳಿದರು. MP, MLA ಗಳ ಪೋನು ಬರುವ ಮೊದಲೇ ಆರೋಪಿಗಳ ಹೆಸರು ಬರೆದುಕೊಂಡು FIR ಮಾಡುವ ಪ್ರಕ್ರಿಯೆ ನಡೆಯಿತು. ತಮ್ಮನ್ನು ಐದು ನಿಮಿಷದಲ್ಲಿ ಬಿಡುತ್ತಾರೆಂದು ಬೀಗುತ್ತಿದ್ದ ಇಬ್ಬರು ಆರೋಪಿಗಳಿಗೆ ಸಾಹೇಬರು ನೀರಿಳಿಯುವಂತೆ ಇಂಟ್ರಾಗೇಷನ್ ಮಾಡತೊಡಗಿದರು. ಬೈಕು ಓಡಿಸುತ್ತಿದ್ದ ನವೀನ ಎಂಬ ಆರೋಪಿಗೆ- ಈ ಬೈಕು ಯಾರ್ದು? ಎಂದು ಕೇಳಿದರು.

ನವೀನ- ನಮ್ದು ಸಾರ್.
ಸಾಹೇಬರು- ಯಾರ ಹೆಸರಲ್ಲಿದೆ?
ನವೀನ- ಗೊತ್ತಿಲ್ಲ ಸಾರ್.
ಸಾಹೇಬರು- ಸುಳ್ಳು ಹೇಳಿದ್ರೆ ಮತ್ತೊಂದು ಕೇಸಾಕಿ ರುಬ್ಬುತೀನಿ.
ನವೀನ- ನಿಜ್ವಾಗ್ಲೂ ಗೊತ್ತಿಲ್ಲ ಸಾರ್. ನಮಪ್ಪ ಗಂಗಾವತಿದಾಗ ತಂದಾನ. ಇನ್ನ ನಮ್ ಹೆಸ್ರಿಗೆ ಆಗಿಲ್ಲ ಸಾರ್ ಎಂದು ವಿನಂತಿಸಿದ. ಕಚೇರಿಗೆ ಬಂದ ನವೀನನ ತಂದೆಯೂ ಮಗನ ಹೇಳಿಕೆಯನ್ನೇ ಕೊಟ್ಟ. ಆದರೂ ಅನುಮಾನವಿದ್ದ ಸಾಹೇಬರು RTO ವೆಹಿಕಲ್ APP ಲ್ಲಿ ಬೈಕಿನ ನಂಬರ್ ಹಾಕಿ ನೋಡಿದಾಗ ಅದು ಶ್ರೀಕಾಂತ ಎಂಬುವವರ ಹೆಸರಲ್ಲಿದೆ ಎಂಬುದು ತಿಳಿಯಿತು. ನವೀನನ ತಂದೆ ಕೊಟ್ಟ ಮಾಹಿತಿಯ ಜಾಡು ಹಿಡಿದು ಬ್ರೋಕರುಗಳನ್ನು ಕರಿಸಿದಾಗ ಈ ಗಾಡಿಯು ಹತ್ತು ವರ್ಷದಲ್ಲಿ ಆರೇಳು ಕಡೆ ಮಾರಾಟವಾದ ಸುದ್ದಿ ತಿಳಿಯಿತು. ಆನಂತರ MLA ಯ PA ನ ಕರೆಗಳು ಬರತೊಡಗಿದವು. ಆರೋಪಿಗಳನ್ನೂ ಆ ಗಾಡಿಯನ್ನೂ ಬಿಡಬೇಕಂತೆ! ಅವರು ಶಾಸಕರಿಗೆ ತುಂಬಾ ಬೇಕಾದವರಂತೆ! ಕೇಸು ಮಾಡಿದರೆ ಮುಂದೆ ತೊಂದರೆ ಆಗುತ್ತಂತೆ!

FIR ಮಾಡಿ ಆಗಿತ್ತು. ಬೈಕನ್ನು ಬಿಡುವ ಮಾತೇ ಇರಲಿಲ್ಲ. ಶಾಸಕರ ದೃಷ್ಟಿಯಲ್ಲಿ ಒಳ್ಳೆಯವರಾಗುವ ಉದ್ದೇಶದಿಂದ ಸಾಹೇಬರು ಆರೋಪಿಗಳನ್ನು ಜೈಲಿಗೆ ಕಳಿಸದೆ ಬಿಡಲು ಒಪ್ಪಿದರು. ಘೋರ ಪ್ರಕರಣಕ್ಕೆ ಬಳಸುವ ಸ್ಟೇಷನ್ ಬೇಲ್ 41ಎ ತಯಾರಾಯಿತು. 14 ದಿನದ ಒಳಗಾಗಿ ಬೇಲ್ ಮಾಡಿಕೊಳ್ಳುವಂತೆ ಆರೋಪಿಗಳಿಗೆ ಸಾಹೇಬರು ವಾರ್ನಿಂಗ್ ಮಾಡಿದರು. ನಮ್ಮನ್ನು ಬಿಟ್ಟರೆ ಸಾಕಪ್ಪಾ ಎಂಬಂತಾಗಿದ್ದ ಆರೋಪಿಗಳು ಸಹಿ ಮಾಡಿಸಿಕೊಂಡು ಬಿಡುತ್ತೇವೆಂದು ಸುಳ್ಳು ಹೇಳಿ ಕರೆತಂದ ನಾಗಪ್ಪ ಮತ್ತು ನನಗೆ- ಎಂತಾ ಮೋಸ ಮಾಡಿದ್ರಲಾ ಸಾರ್? ಎಂದು ಶಪಿಸಿ ಹೋದಂತೆ ಕಂಡಿತು. ಆರೋಪಿಗಳಿಗೆ ಏನೂ ತೊಂದರೆ ಆಗದಂತೆ ಕಚೇರಿಗೆ ಕರೆತರುವುದು ಜೈಲಿಗೆ ಬಿಡುವುದು ಸಾಹಸದ ಕೆಲಸವೇ ಸರಿ! ಆ ಕಲೆಯನ್ನು ನಾಗಪ್ಪ ಕರಗತ ಮಾಡಿಕೊಂಡಿದ್ದ.
ಮರುದಿನ ವಾಹನ ಮಾಲೀಕರಿಗೆ ನೋಟಿಸು ತಯಾರಾಯಿತು.
“KA-01 AE 1661 ಸಂಖ್ಯೆಯ ವಾಹನವು ಸೇಂದಿ ಪ್ರಕರಣದಲ್ಲಿ ಜಪ್ತಾಗಿದ್ದು, ಸದರಿ ವಾಹನದ ‘B ಎಕ್ಸ್ಟ್ರಾಕ್ಟ್’ ನಿಮ್ಮ ಹೆಸರಿನಲ್ಲಿರುತ್ತದೆ. ಆದ್ದರಿಂದ ಈ ಪತ್ರ ತಲುಪಿದ 3 ದಿನದ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ನಮ್ಮ ಕಚೇರಿಗೆ ಬರಬೇಕು. ಇರದಿದ್ದರೆ ಈ ಪ್ರಕರಣಕ್ಕೆ ನಿಮ್ಮ ಕುಮ್ಮಕ್ಕು ಇದೆಯೆಂದು ಭಾವಿಸಿ ನಿಯಮಗಳನುಸಾರವಾಗಿ ನಿಮ್ಮನ್ನೂ ಈ ಕೇಸಲ್ಲಿ ಸೇರಿಸಲಾಗುತ್ತದೆ” ಎಂದು ಪತ್ರದಲ್ಲಿ ಬರೆಯಲಾಗಿತ್ತು.

 

ಭಾಗ – 05

ಹತ್ತನೆ ತರಗತಿಯ ಹತ್ತು ಹುಡುಗರು ತನ್ನಿಂದ ಏಟು ತಿಂದಿದ್ದಕ್ಕಾಗಿ ತುಂಬಾ ಬೇಸರವಾಯಿತು. ಏಟುತಿಂದ ಮಕ್ಕಳು ತಮ್ಮ ಕೈಗಳನ್ನು ಊಟ ಮಾಡುವಾಗಲೂ ಊದಿಕೊಳ್ಳುತ್ತಿದ್ದರು. ತಮ್ಮ ಮನೆಗೆ ಹೋಗಿ ಮಾಸ್ತಾರ ತನ್ನ ಮನಸಿಚ್ಛೆ ಬಡುದಾನ ಎಂದು ಹೇಳುವ ಧೈರ್ಯದವರು ಯಾರೂ ಇರಲಿಲ್ಲ ಎಂದಲ್ಲ; ಅವರು ಗುರುಗಳ ಮೇಲಿಟ್ಟ ನಂಬಿಕೆ, ಶಿಕ್ಷಣದ ಮೇಲಿಟ್ಟ ಗೌರವಗಳು ಅದಕ್ಕೆ ಕಾರಣವಾಗಿರಬಹುದು. ವಿದ್ಯಾರ್ಥಿಗಳ ಏಳಿಗೆ ಆಗುವ ಸಲುವಾಗಿಯೇ ಮೇಷ್ಟ್ರುಗಳು ಹಾಗೆ ಶ್ರಮ ಪಡುತ್ತಾರೆ ವಿನಃ ತಮ್ಮ ಸ್ವಾರ್ಥಕ್ಕಾಗಿ ಅಲ್ಲ ಎಂಬುದು ಜಗತ್ತಿಗೂ ಚೆನ್ನಾಗಿ ಗೊತ್ತಿರುವ ವಿಷಯ. ಆದ್ದರಿಂದಲೇ ಬೈಗುಳ, ಏಟು ತಿಂದರೂ ವಿದ್ಯಾರ್ಥಿಗಳು ಸುಮ್ಮನಿರುತ್ತಾರೆ. ಆದರೂ ಈಗೀಗ ಮಾನವ ಹಕ್ಕುಗಳು ಅಲ್ಲಲ್ಲಿ ಪುಟಿದೇಳುತ್ತಿವೆ.

ತಮ್ಮ ಫಿರ್ಡು ಮುಗಿದ ಮೇಲೆ ಆಫೀಸಿನೊಳಗೆ ಬಂದು ಕುಳಿತರು. ಉಳಿದ ಶಿಕ್ಷಕರು ಕ್ಲಾಸಿಗೆ ಹೋಗಿದ್ದರು. ಅವತ್ತು ಮುಖ್ಯಗುರುಗಳು ರಜೆ ಇದ್ದರಿಂದ ಆಫೀಸು ಖಾಲಿಯಿತ್ತು. “ಹತ್ತನೆ ತರಗತಿಗೆ ಬಂದರೂ ಇನ್ನೂ ಯಾಕೆ ದಡ್ಡರಿದ್ದಾರೆ?” ಎಂಬುದರ ಕುರಿತು ಶ್ರೀಕಾಂತ ಮಾಸ್ತಾರರು ಯೋಚಿಸತೊಡಗಿದರು. ದಿನಾಲೂ ಮಕ್ಕಳಿಗೆ ಹೊಡಿಯುವ ಪಶ್ಚತಾಪವು ಅದಕ್ಕೊಂದು ಪರಿಹಾರ ಕಂಡುಕೊಳ್ಳಿರಿ ಎಂದು ಬೆಂಬಲಿಸಿತು. ತಮ್ಮ ಮಕ್ಕಳು ಜಾಣರಾಗಬೇಕು. ಏಟು, ಬೈಗುಳ ತಿನ್ನದಂತಾಗಬೇಕು ಎಂದು ಅವರು ಬಯಸಿದಂತಿತ್ತು. ಈಗಿನ ಮಕ್ಕಳು ಕಂಠಪಾಠ ಮಾಡುವುದಕ್ಕೆ ಅಡಿಟ್ ಆಗಿದ್ದಾರೆ. ನಪಾಸು ಆಗುವ ಮಕ್ಕಳ ಸಮಸ್ಯೆ ಏನು ಎಂಬುದು ಮಾಸ್ತಾರರಿಗೆ ಅರ್ಥವಾಯಿತು.

1) ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಬರದಿರುವುದು.

2) ಪುಸ್ತಕದ(ಗ್ರಾಂಥಿಕ) ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವುದು.

3) ಮಾತೃಭಾಷೆಯಲ್ಲಿ ಅರ್ಥವಾದ ಪಾಠವನ್ನು ಪುನಃ ಪುಸ್ತಕದ ಭಾಷೆಯಲ್ಲಿ ಬರೆಯಲು ಬರದಿರುವುದು.

4) ಕಲಿತ ಪಾಠಗಳನ್ನು ಕತೆಯ ರೂಪದಲ್ಲಿ ನೆನಪಿಡದಿರುವುದು.

5) ಮಾತೃಭಾಷೆಯಾದ ಕನ್ನಡದಲ್ಲಿ ಲಕ್ಷಾಂತರ ಪದಗಳಿದ್ದು ವಿಧ್ಯಾರ್ಥಿಗಳು ಕಲಿತದ್ದು ಸಾವಿರ ಪದಗಳಷ್ಟೇ! ಬೆಳಗ್ಗೆ ಎದ್ದಾಗಿನಿಂದ ಮಲಗುವ ತನಕ ನಾವು ಮಾತಾಡುವುದು ಕೇವಲ ಐವತ್ತು ಅರವತ್ತು ಪದಗಳಷ್ಟೇ!! ಅದಕ್ಕಾಗಿ ಕನ್ನಡ ನಿಘಂಟನ್ನು ಪೂರ್ತಿಯಾಗಿ ಓದುವ ವ್ಯವಸ್ಥೆ ಮಾಡಿಕೊಂಡು ಕನ್ನಡ ಪದಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳದಿರುವುದು.

ಈ ಐದು ಸಮಸ್ಯೆಯಿಂದಲೇ ಇವತ್ತಿನ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ. ಆದ್ದರಿಂದ ಮಕ್ಕಳಿಗೆ ಪಾಠಕ್ಕಿಂತ ಮೊದಲು ಸರಿಯಾಗಿ ಓದುವುದು, ವಾಖ್ಯೆ ರಚನೆ ಮಾಡುವುದನ್ನು ಕಲಿಸಬೇಕು. ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಹಿಡಿತ ಬಂದರೆ ಇಂಗ್ಲೀಷ್, ಹಿಂದಿಗಳಂಥಹ ಭಾಷೆಗಳನ್ನು ತರ್ಜುಮೆ ಮಾಡಿಕೊಳ್ಳಲು ಕಷ್ಟವಾಗುವುದಿಲ್ಲೆಂಬ ಸತ್ಯ ಹೊಳೆದಾಗ ತುಂಬಾ ಖುಷಿಯಾದರು. ಎಲ್ಲಾ ಮೇಷ್ಟ್ರುಗಳನ್ನು ಕರೆದು- ಪಾಠಗೀಟ ಬಿಟ್ಟು ಮೊದಲು ಕನ್ನಡವನ್ನು ಚೆನ್ನಾಗಿ ಓದಲು ಬರೆಯಲು ಕಲಿಸೋಣ. ಯಾವ ಪಾಠಗಳೂ ಜೀವನ ಪರ್ಯಂತ ಅವರೊಂದಿಗೆ ಹೋಗುವುದಿಲ್ಲ. ಆದರೆ ಈಜಿನ ಹಾಗೆ ಚಾಲನೆ ಹಾಗೆ ಓದು-ಬರಹವೇ ಜೀವನದಲ್ಲಿ ತುಂಬಾ ಸಹಾಯಕ್ಕೆ ಬರುತ್ತವೆ. ಓದು-ವಾಖ್ಯೆ ರಚನೆ-ಭಾಷೆಯನ್ನು ಚೆನ್ನಾಗಿ ಕಲಿತ ಮೇಲೆ ಪಾಠಗಳನ್ನು ಮಾತೃಭಾಷೆಯಲ್ಲಿ ಕತೆಯ ರೂಪದಲ್ಲಿ ಮಾಡಿಕೊಳ್ಳುವುದನ್ನು ರೂಢಿಸೋಣ ಎಂಬ ಯೋಚನೆಗಳು ಬಂದವು. ಇನ್ನೂ ಐದು ನಿಮಿಷದಲ್ಲಿ ಊಟದಗಂಟೆ ಹೊಡೆಯುವುದರಲ್ಲಿತ್ತು. ಊಟ ಆದಮೇಲೆಯೆ ಇದನ್ನೆಲ್ಲಾ ಹೇಳಿದರಾಯಿತೆಂದು ಮತ್ತೆ ಕುರ್ಚಿಗೆ ಕೂತರು. ಆವಾಗಲೇ ಪೋಸ್ಟ್ ಮ್ಯಾನ್ ಬಂದಿದ್ದು. ನಮಸ್ಕಾರ ಅಂದಿದ್ದು. ಅವನಿಗೆ ಶ್ರೀಕಾಂತ ಮಾಸ್ತಾರರ ಪರಿಚಯವಿತ್ತು. ನಿಮಗೊಂದು ಲೆಟರ್ ಬಂದಿದೆ ಎಂದು ಅವರ ಕೈಗೆ ಕೊಟ್ಟ. ರಿಜಿಸ್ಟರ್ ಪೋಸ್ಟ್ ಆಗಿರುವುದರಿಂದ ಅಕ್ನಾಲೇಜ್ಮೆಂಟಿಗೆ ಮಾಸ್ತಾರರ ಸಹಿ ಮಾಡಿಸಿಕೊಂಡು, ಬರ್ತೀನಿ ಸಾರ್ ಎಂದು ಮತ್ತಾರಿಗೋ ಪತ್ರಗಳನ್ನು ಕೊಡುವ ಧಾವಂತದಲ್ಲಿ ಹೋದ.

ಫೋನುಗಳು ಬಂದ ನಂತರ ಪತ್ರಗಳ ಸಂಚಾರ ನಿಂತುಹೋಗಿದೆ ಎಂದು ಭಾವಿಸಿದ್ದ ಶ್ರೀಕಾಂತ ಮಾಸ್ತಾರರು ತಮಗೊಂದು ಪತ್ರ ಬಂದಿದೆಂಬ ಸುದ್ದಿ ಕೇಳಿ ನಿಜವಾಗಿಯೂ ಚಕಿತರಾದರು. ತಾವು ಎಷ್ಟು ಜನರನ್ನು ಪ್ರೀತಿಗಾಗಿ ಹಂಬಲಿಸಿದ್ದರೋ ಅವರೆಲ್ಲಾರೂ ಒಂದುಕ್ಷಣ ನೆನಪಿಗೆ ಬಂದರು. ಮನಸಿನ ಮಾತುಗಳನ್ನು ನೇರವಾಗಿ ಹೇಳದವರು ಪತ್ರದ ಮೊರೆ ಹೋಗಿರಬಹುದೇ? ಇತ್ತೀಚೆಗೆ ಸಾಮಿಪ್ಯವನ್ನು ತೋರಿಸುವ ಅನಿತಾ ಟೀಚರ್ರೆ ಯಾಕೆ ಹೀಗೆ ಮಾಡಿರಬಾರದು? ಎಂಬ ಕುತೂಹಲದಿಂದ ಪತ್ರದ ಹಿಂಬದಿಯನ್ನು ನೋಡಿದಾಗ ತಿಳಿಯಿತು; ಅದು ಅಬಕಾರಿ ಕಚೇರಿಯಿಂದ ಬಂದಿದೆ ಎಂದು. ಇದರಲ್ಲಿ ಏನಿರಬಹುದು? ಎಂಬ ಆತಂಕದಿಂದ ಪತ್ರದ ಮೂತಿ ಹರಿದರು. ಅಬಕಾರಿಯವರ ವಾಹನ ಮಾಲೀಕತ್ವದ ನೋಟೀಸು ಓದಿದಾಗ ಎದೆ ಚುಳುಕ್ ಅಂದಂತಹ ಅನುಭವಾಗಿ ದೃಷ್ಟಿಗೊಂಬೆಯಂತೆ ಚೇರಿಗೇ ಕೂತುಬಿಟ್ಟರು. ಗಂಟೆ ಭಾರಿಸಿ ಮೇಷ್ಟ್ರುಗಳೆಲ್ಲರೂ ಆಫೀಸಿನೊಳಗೆ ಬಂದರೂ ಅವರ ಚಲನವಲನ ಆಗಲಿಲ್ಲ. ಊಟಕ್ಕೆ ಕರೆದರೂ ನನಗೆ ಹಸುವಿಲ್ಲ ಅಂದರು. ಅವತ್ತು ಶಾಲೆ ಬಿಡುವ ತನಕವೂ ಯಾರೊಂದಿಗೆ ಮಾತಾಡಲಿಲ್ಲ. ಯಾವ ತರಗತಿಗೂ ಹೋಗಿ ಪಾಠ ಮಾಡಲಿಲ್ಲ.

ಭಾಗ – 06

ಮರುದಿನವೇ ಸಿರುಗುಪ್ಪ ಅಬಕಾರಿ ಕಚೇರಿಗೆ ಶ್ರೀಕಾಂತ ಮೇಷ್ಟ್ರು ಅಳುಕುತ್ತಾ ಬಂದರು. ಖಾಕಿ ಎಂದರೆ ತಪ್ಪು ಮಾಡದವನಿಗೂ ಭಯವಾಗುತ್ತದೆ. ಅಂಥದರಲ್ಲಿ ತಪ್ಪು ಮಾಡಿದವರ ಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಜೀವ ಹೋಗುವಾಗ ಬಿಟ್ಟರೆ ದೇಹದ ಎಲ್ಲಾ ಅಂಗಾಂಗಳು ಪೋಲಿಸು ಸ್ಟೇಷನ್ನಿನಲ್ಲೇ ನಡುಗುವುದು. ಸೇಂದಿ ಕೇಸಲ್ಲಿ ಸಿಕ್ಕ ಬೈಕಿನ ಓನರ್ ಶಾಲೆಯ ಮಾಸ್ತಾರ ಎಂಬುದು ತಿಳಿದ ತನಿಖಾಧಿಕಾರಿಯು ಪೇಚಾಡಿದರು. ಶ್ರೀಕಾಂತನನ್ನು ತಮ್ಮ ಎದುರಿನ ಕುರ್ಚಿಯಲ್ಲಿ ಕೂಡಿಸಿಕೊಂಡು ಗುರುವೃತ್ತಿಗೆ ಗೌರವ ಕೊಡುವವರಂತೆ ನಡೆಸಿಕೊಂಡರು. ನಾನು ಈ ನೌಕರಿ ತೆಗೆದುಕೊಂಡಿದ್ದು ನಿಮ್ಮಂಥಹ ಗುರುಗಳ ಕಲಿಕೆಯಿಂದಲೇ ಎಂಬುದು ಅವರಲ್ಲಿ ಎದ್ದುಕಾಣುತ್ತಿತ್ತು. ಪ್ರತಿಯೊಂದು ಕೇಸಲ್ಲಿ MLA, ಅವರ PA ಗಳ ಫೋನು ಬರುವುದು ಮಾಮೂಲಾಗಿತ್ತು. ಶ್ರೀಕಾಂತರ ವಿಷಯದಲ್ಲಿ ಯಾರ ಕರೆಗಳೂ ಬರಲಿಲ್ಲ. ಮಾಸ್ತಾರ ಮರ್ಯಾದೆಗೆ ಅಂಜಿದ್ದಾನೆ. ಈತ ಅಮಾಯಕನೂ ಅಪರಾಧದಲ್ಲಿ ಭಾಗಿಯಾಗದವನೂ ಆಗಿದ್ದರಿಂದ ಈತನಿಗೆ ನಾನೇ ಏನಾದರೂ ಸಹಾಯ ಮಾಡಬೇಕೆಂದು ತನಿಖಾಧಿಕಾರಿಯ ಮನಸ್ಸಿನಲ್ಲಿ ಬಂದಿತು.

ಇನ್ವೆಸ್ಟಿಗೇಷನ್ ಚಾಲು ಮಾಡಿದರು.
“ನೀವು ಬೈಕು ಯಾವಾಗ ಮಾರಿದ್ದು?”
“ಹತ್ತು ವರ್ಷದ ಹಿಂದೆ”
“ಯಾಕೆ ಮಾರಿದ್ದು?”
“ಎಕ್ಸಿಡೆಂಟ್ ಆಗಿತ್ತು ಅದಕ್ಕೆ ಮಾರಿದೆ”
“ಯಾರಿಗೆ ಮಾರಿದ್ದು?”
“ಲಿಂಗರಾಜು ಎಂಬಾತನಿಗೆ”
“ಲಿಂಗರಾಜ ತನ್ನ ಹೆಸರಿಗೆ ಬೈಕು ಯಾಕೆ ಮಾಡಿಸಿಕೊಂಡಿಲ್ಲ?”
“ಸರ್ ನಾನು 29-30 ಫಾರ್ಮ್ ಗೆ ಸಹಿ ಮಾಡಿ ಕೊಟ್ಟಿದ್ದೇನೆ”
“ವಾಹನ ಮಾರಿ 29-30 ಫಾರ್ಮ್ ಗೆ ಸಹಿ ಮಾಡಿ ಕೊಟ್ಟರೆ ನಿಮ್ಮ ಕೆಲಸ ಮುಗಿಯಿತೇ?” ಎಂಬ ಪ್ರಶ್ನೆಗೆ ಮಾಸ್ತಾರರು ಗಂಟಲಲ್ಲಿ ಏನೋ ಸಿಕ್ಕಿದಂತೆ ತಡವರಿಸಿದರು.

“ಮೇಷ್ಟ್ರೇ ಹಂಗೆಲ್ಲಾ ಆಗೋದಿಲ್ಲಾ, ಅವರ ಹೆಸರಿಗೆ ಆಗೋ ತನಕ ಕಾಳಜಿ ಮಾಡಬೇಕು. ಅಪರಾಧ ಕೃತ್ಯಕ್ಕೆ ಬಳಸಿದ ವಾಹನ ಮುಖ್ಯಮಂತ್ರಿ ಹೆಸರಲ್ಲಿದ್ದರೂ ಅವರ ಮೇಲೆ ಕೇಸಾಕುವ ಕಾನೂನುಗಳಿವೆ. ಇವತ್ತಿನ ಅಪರಾಧಿಗಳು ಬೇಕಂತಲೇ ತಮ್ಮ ಹೆಸರಿಲ್ಲದ ವಾಹನಗಳನ್ನು ಗಾಂಜಾ, ಕೊಲೆ, ದರೋಡೆಯಂತಹ ಕುಕೃತ್ಯಗಳಿಗೆ ಬಳಸುತ್ತಿದ್ದಾರೆ. ಅವರು ಪರಾರಿಯಾದಾಗ ನಿಮ್ಮಂತಹ ಅಮಾಯಕರನ್ನು ನಾವು ಅರೆಸ್ಟ್ ಮಾಡಬೇಕಾಗುತ್ತೆ” ಎಂದು ವಿವರವಾಗಿ ತಿಳಿಸಿದರು. ತಾನು ಈಗ ಆರೋಪಿ ಎಂಬ ಮುಖಭಾವ ಹೊತ್ತುಕೊಂಡ ಮಾಸ್ತಾರರ ಮುಖದಲ್ಲಿ ನೀರುಗುಳ್ಳೆಗಳು ಹುಟ್ಟತೊಡಗಿದ್ದವು.

“ಮೇಷ್ಟ್ರೇ ಸಮಾಧಾನ ಆಗಿ. ನಿರಪರಾಧಿಯಾದ ನಿಮ್ಮನ್ನು ಈ ಕೇಸಿಂದ ನಾನು ಉಳಿಸುತ್ತೇನೆ” ಎಂದು ಅಭಯ ಕೊಡುತ್ತಲೇ ಗೆಲುವಾದ ಶ್ರೀಕಾಂತ- ಹಾಗೆ ಮಾಡಿ ಪುಣ್ಯಕಟ್ಟಿಕೊಳ್ಳಿ ಸಾರ್. ಬೇಕಾದರೆ ನೀವು ಕೇಳಿದಷ್ಟು ಹಣ ಕೊಡುತ್ತೇನೆ” ಎಂದು ಕೈ ಮುಗಿದರು.

“ನಿಮ್ಮಿಂದ ಹಣ ಪಡೆದರೆ ಈ ವೃತ್ತಿಗೆ ಅವಮಾನ ಸಾರ್” ಎಂದು ಒಂದೇ ಮಾತಿನಲ್ಲಿ ಗುರು-ಶಿಷ್ಯರ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿದರು.

ಅಷ್ಟರಲ್ಲಿ ಕ್ಲರ್ಕ್ ಒಂದು ಲೆಟರ್ ಮಾಡಿಕೊಂಡು ಬಂದ. ಅದಕ್ಕೆ ಮಾಸ್ತಾರರ ಸಹಿ ಮಾಡಿಸಿಕೊಂಡರು. ಹೆಡ್ಡಿಂಗು ವಾಹನ ಮಾಲೀಕರ ಹೇಳಿಕೆ ಅಂತ ಬರೆದಿದ್ದನ್ನು ಮಾತ್ರ ಓದಿದ ಮಾಸ್ತಾರರಿಗೆ ಉಳಿದಿದ್ದನ್ನೂ ಓದುವ ಮನಸ್ಸಿದ್ದರೂ ಬೇಗನೆ ಸಹಿ ಮಾಡಿ ಕೊಟ್ಟು ಈ ರಗಳೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತಾಗಿತ್ತು. ತಮ್ಮ ಮೇಲೆ ವಿಶ್ವಾಸವಿಟ್ಟು ಪೂರ್ತಿ ಓದದೆ ಸಹಿ ಮಾಡಿದ್ದರಿಂದ ತಿನಿಖಾಧಿಕಾರಿಗೆ ಮಾಸ್ತಾರರ ಮೇಲೆ ಇನ್ನಷ್ಟು ಅಭಿಮಾನ ಉಕ್ಕಿತು. “ಮೇಷ್ಟ್ರುನ ಈ ಕೇಸಿಂದ ತೆಗೆರಿ” ಎಂದು ಕ್ಲರ್ಕಿಗೆ ಹೇಳಿದರು. ಅಷ್ಟರಲ್ಲಿ ಚಹಾ ಬಂದಿತ್ತು. ಮಾಸ್ತಾರರು ಒಲ್ಲೆ ಅಂದರು. ಸಾಹೇಬರ ಎದುರಿಗೆ ಚಹಾ ಕುಡಿಯಲು ಸಂಕೋಚಗೊಂಡರು. ಆದರೂ ಸಾಹೇಬರು ಒತ್ತಾಯ ಮಾಡಿ ಮಾಸ್ತಾರರಿಗೆ ಚಹಾ ಕುಡಿಸಿದರು. ಭಾರದ ಮನಸಿಂದ ಬಂದ ಶ್ರೀಕಾಂತ ಮಾಸ್ತಾರರು ಹಗುರ ,ಮನಸ್ಸಿಂದ ಅಬಕಾರಿ ಹೊಸ್ತಿಲು ದಾಟಿದೊಡನೆ ‘ಬೇಕಾದರೆ ನೂರುಮಂದಿ ಅಪರಾಧಿಗಳಿಗೆ ಖುಲಾಸೆಯಾಗಲಿ; ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಎಂಬ ನ್ಯಾಯೋಕ್ತಿಯನ್ನು ಪದೆಪದೆ ನೆನೆಯುತ್ತಾ ಸಾರ್ಥಕ ಭಾವನೆಯಲ್ಲಿ ಸಾಹೇಬರು ಮುಳುಗಿದರು.

ಶ್ರೀಕಾಂತ ಮತ್ತು ಸಾಹೇಬರ ಸಂಭಾಷಣೆ ಆಲಿಸಿಕೊಂಡ ನಾಗಪ್ಪನಿಗೆ ಇದು ಹೊಸ ಪ್ರಕರಣ ಆಗಿತ್ತು. ಆದ್ದರಿಂದ ಸಾಹೇಬರ ಬಳಿ ಹೋಗಿ ಕೇಳಿದ- ಸಾರ್ ಅದೆಂಗ ಗಾಡಿ ಓನರ್ನ್ ಬಿಡಾಕ ಬರ್ತಾದ? ಹಿಂದೆ ಇದ್ದ ಸಾರುಗಳು ಗಾಡಿ ಓನರ್ನೂ ಸೇರಿಸ್ತಿದ್ರು?

ಸಾಹೇಬರು-ಇಷ್ಟೊರ್ಸ ಸರ್ವೀಸು ಮಾಡಿದ್ದಿ ಇಷ್ಟು ಗೊತ್ತಿಲ್ಲನು ನಿನ್ಗ? ಇನ್ಷೆಸ್ಟಿಗೇಷನ್ ಆಫೀಸರ್ ಮನಸು ಮಾಡಿದ್ರ ಏನ್ ಬೇಕಾದ್ರೂ ಮಾಡಬೌದು. ಕೋರ್ಟಾಗ ಸಾಕ್ಷಿ ಹೇಳೋರು ನಾವು! ಈ ಸೇಂದಿ ಕೇಸಾಗ ಆರೋಪಿಗಳು ಇರೋದ್ರಿಂದ ತನಿಖಾಧಿಕಾರಿಯ ಪರಮಾಧಿಕಾರ ಬಳಿಸಿಕೊಂಡು, ಯಾವುದು ಸುಳ್ಳು? ಯಾವುದು ಸತ್ಯ? ಎಂದು ನಿರ್ಧರಿಸಿ, ನಂದೇನೂ ತಪ್ಪಿಲ್ಲ ಎಂಬ ವಾಹನ ಮಾಲೀಕರ ಹೇಳಿಕೆ ತಗಂದು ಬಿಡಬೌದು. ಅಕಸ್ಮಾತ್ ಪರಾರಿಯಾದ ಆರೋಪಿಗಳು ಯಾರಂತ ಗೊತ್ತಾಗದಿದ್ರೆ ವಾಹನ ಮಾಲೀಕ ಎಷ್ಟೇ ದೊಡ್ಡೋನಾಗಿದ್ರೂ ಫಿಕ್ಸು ಮಾಡೋದು ಗ್ಯಾರೆಂಟಿ. ಇಲ್ಲಂದ್ರ ನಮ್ ನೌಕ್ರಿ ಹೋತಾವ ಅಂತ ಬಿಡಿಸಿ ಬಿಡಿಸಿ ಹೇಳಿದರು. ನಾಗಪ್ಪ ಆಸ್ಥೆಯಿಂದ ಹಾಗೆ ಕೇಳಲು ಕಾರಣವಿತ್ತು. ಮೊನ್ನೆ ತನ್ನ ಹಳೆಬೈಕು ಮಾರಿ ಹೊಸಬೈಕು ತಂದಿದ್ದ. ತಾನೂ 29-30 ಪಾರ್ಮ್ ಗೆ ಸಹಿ ಮಾಡಿ ಕೊಟ್ಟಿದ್ದ! ಮುಂದಿನ ದಿನಗಳಲ್ಲಿ ಶ್ರೀಕಾಂತ ಮಾಸ್ತಾರರ ಪರಿಸ್ಥಿತಿ ತನಗೂ ಬಂದರೆ ಹೇಗೆ? ಎಂಬ ಚಿಂತೆಗೆ ಈಡಾಗಿದ್ದ.

ವಾಹನ ಮಾರುವವರೆಲ್ಲಾ ತಮಗೆ ಬರುವ ಹಣದ ಕಡೆಗೆ ಮಾತ್ರ ಗಮನ ಕೊಡುತ್ತಾರೆ. ಹೆಸರು ವರ್ಗಾವಣೆ ಕಡೆಗೆ ಲಕ್ಷ್ಯವೇ ಕೊಡುವುದಿಲ್ಲ. ನೂರಕ್ಕೆ ಎಂಭತ್ತು ಜನರು ಹೀಗೆಯೇ ಮಾಡುವುದು. ಪೋಲಿಸು ಕೇಸಲ್ಲಿ ಅಬಕಾರಿ ಕೇಸಲ್ಲಿ ಸಿಕ್ಕಿ ಹಾಕಿಕೊಳ್ಳುವ ಬೈಕುಗಳು, ಕಾರುಗಳು ಇಂಥವೇ! ನಾಗಪ್ಪ ಖಾಕಿ ಇಲಾಖೆಯಲ್ಲಿದ್ದರೂ ಈ ಕೇಸು ಆಗುವವರೆಗೂ ವಾಹನ ಮಾರಿದ ಮೇಲೆ ಕೊಂಡವರ ಹೆಸರಿಗೆ ಹೆಸರು ಬದಲಾವಣೆ ಮಾಡಿಸುವುದು ಮಾರಿದವರ ಜವಾಬ್ದಾರಿಯೂ ಆಗಿರುತ್ತದೆ ಇಲ್ಲದಿದ್ದರೆ ಶಿಕ್ಷೆಗೂ ಸಿದ್ಧರಿರಬೇಕಾಗುತ್ತದೆ ಎಂಬುದು ಗೊತ್ತಿರಲ್ಲಿಲ್ಲ. ಅವನು ಈ ಹೊಸ ಸಂಗತಿ ಕೇಳಿದ ತಕ್ಷಣ ದಿಗ್ಭ್ರಮೆಗೊಂಡ. ತಕ್ಷಣವೇ ಹೊರಗಡೆ ಬಂದು ತಾನು ಬೈಕು ಕೊಟ್ಟ ಬ್ರೋಕರ್ ಮತ್ತು ವ್ಯಕ್ತಿಗೆ ಕರೆ ಮಾಡಿ- ಇನ್ನು ಒಂದು ವಾರದೊಳಗೆ ಬೈಕನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದ.
*****

ಲೇಖಕರು : ಶ್ರೀ ಅಕ್ಬರ್ ಅಲಿ, ಕುರಕುಂದ
ಅಬಕಾರಿ ಇಲಾಖೆ, ಸಿರುಗುಪ್ಪ