ಶ್ರೀ ರಾಮ ಪಥ…

ರಾಮಾಯಣದಲ್ಲಿ ಶ್ರೀರಾಮನ ವನವಾಸ ಆಯೋಧ್ಯೆಯಿಂದ ಶುರುವಾಗುತ್ತದೆ. ಅಲ್ಲಿಂದ ಹೊರಟವನು ಬದುಕಿನಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಾ ಸಾಗುತ್ತಾನೆ. ದಂಡಕಾರಣ್ಯದಲ್ಲಿ ಹೆಂಡತಿಯನ್ನೂ ಕಳೆದುಕೊಂಡಾಗ ಆತನ ಮಾನಸಿಕ ಸ್ಥಿತಿ ಅಲ್ಲೋಲಕಲ್ಲೋವಾಗುತ್ತದೆ. ಆಗ, ವೈದೇಹಿ ಏನಾದಳು? ಅಂತ ಹುಡುಕುತ್ತಾ ಪಶ್ಚಿಮಘಟ್ಟದ ಮೂಲಕ ಕರ್ನಾಟಕಕ್ಕೆ ಪದಾರ್ಪಣೆ ಮಾಡುತ್ತಾನೆ.

ರಾಮಚಂದ್ರ ಆಗ, ಬೆಳಗಾವಿಯ ಕಾಡಲ್ಲಿ ಮೊದಲು ಎದುರಾಗಿದ್ದು ಶಬರಿ. ಆ ಹಣ್ಣಾದ ಮುದುಕಿಯ ಎಂಜಲು ಹಣ್ಣನ್ನು ತಿಂದ ಮೇಲೆ ಶ್ರೀ ರಾಮನ ವ್ಯಕ್ತಿತ್ವ ಎಂಥದ್ದು ಅಂತ ಇಡೀ ಜಗತ್ತಿಗೆ ತಿಳಿದು ಹೋಯಿತು. ಆನಂತರ ಮಾತಂಗ ಪರ್ವತಕ್ಕೆ ಬಂದಾಗ ಹನುಮಂತ, ಅವನ ಸೇನೆ, ಜಾಂಬುವಂತ, ಸುಗ್ರೀವ ಹೀಗೆ ಎಲ್ಲರೂ ಜೊತೆಯಾದರು. ಸೀತೆಯ ಕುರುಹು ದೊರೆಯುವುದು ಇಲ್ಲೇ. ಹೀಗೆ, ಶ್ರೀರಾಮ ಎಲ್ಲವನ್ನೂ ಪಡೆದುಕೊಂಡು ದನುಷ್ಕೋಟಿಗೆ ಹೋಗಿ ಸೇತುವೆ ಕಟ್ಟಿ, ರಾವಣ ವಧೆ ಮಾಡುವುದೆಲ್ಲವೂ ಮುಂದೆ ನಡೆಯಿತು. ಇದಕ್ಕೆಲ್ಲಾ ಚಿಮ್ಮು ಹಲಗೆ ಈಗಿನ ಕರುನಾಡು. ರಾಮನ ಬದುಕನ್ನೇ ಬದಲಿಸಿದ ಕರ್ನಾಟಕದಲ್ಲಿ, ಆತ ಇಟ್ಟ ಹೆಜ್ಜೆಗಳನ್ನು ಹುಡುಕೋಣ…

  1. ಶಬರಿ ಆಶ್ರಮ: ಬೆಳಗಾವಿಯ ರಾಮದುರ್ಗದಿಂದ 14 ಕಿ.ಮೀ ಉತ್ತರಕ್ಕೆ ಗುನ್ನಾಗ ಹೆಸರಿನ ಊರಿದೆ. ಅದರ ಹತ್ತಿರದ ಸುರೇಬಾನ್‌ ಹತ್ತಿರದಲ್ಲಿ ಬೇರೀ ಹಣ್ಣಿನ ವನವಿದೆ. ಇದನ್ನು ಶಬರಿ ವನ ಅಂತಲೂ ಕರೆಯುತ್ತಾರೆ. ಇಲ್ಲಿಯೇ ಶಬರಿ ರಾಮನಿಗೋಸ್ಕರ ಕಾದು, ಬಂದ ನಂತರ ಹಣ್ಣನ್ನು ಕೊಟ್ಟದ್ದು ಎನ್ನುವ ಪ್ರತೀತಿ ಇದೆ. ಇಲ್ಲಿ ಶಬರಿ ದೇವಾಲಯ, ಶಬರಿ ಕೊಳ್ಳ ಕೂಡ ಇದೆ.
  2. ಹಂಪಿ: ತುಂಗಭದ್ರೆಯ ದಕ್ಷಿಣ ದಡದಲ್ಲಿ ಹಂಪಿ ಇದೆ. ವೆಂಕಟಾಪುರ ಮತ್ತು ವಿಜಯವಿಠ್ಠಲ ಸಂಕೀರ್ಣದಾಚೆ ವಾಲಿಕಾಷ್ಠ ಅಥವಾ ವಾಲಿದಿಬ್ಬ ಎಂದು ಕರೆಯಲ್ಪಡುವ ಈ ದಿನ್ನೆಯು ವಾಲಿಯನ್ನು ಸುಟ್ಟ ಬೂದಿಯಿಂದಾದುದು ಎಂಬ ಪ್ರತೀತಿ ಇದೆ. ವಿರೂಪಾಕ್ಷ ದೇವಾಲಯದ ರಥಬೀದಿಯ ಪೂರ್ವತುದಿಯಲ್ಲಿ ಮತಂಗಪರ್ವತ, ಹಂಪಿ ಪಶ್ಚಿಮಕ್ಕಿರುವ ಮಲಯವಂತ ಪರ್ವತ, ಹಂಪಿಯ ಸುಗ್ರೀವ ಗುಹೆ ಮತ್ತು ಸೀತಾ ಕೊಳ, ಹಂಪಿಯ ಕೇಂದ್ರದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ, ಹೊಸಪೇಟ-ಕಮಲಾಪುರ ಮಾರ್ಗದಲ್ಲಿ ಮಧುವನವಿದೆ.
  3. ಆನೆ ಗೊಂದಿ: ಹಂಪಿಯ ಉತ್ತರ ದಡದ ಮೇಲಿನ ಆನೆಗೊಂದಿ ಬಹಳ ಮುಖ್ಯ ಸ್ಥಳ. ಪಂಪಾ ಸರೋವರದತ್ತ ತಿರುಗುವ ಮುಖ್ಯರಸ್ತೆಯ ಬಳಿಯಿರುವ ಅಂಜನಾದ್ರಿ ಬೆಟ್ಟವನ್ನು ಹನುಮನ ಜನ್ಮಸ್ಥಳವೆಂದು ನಂಬಲಾಗಿದೆ. ಆನೆಗೊಂದಿಯ ಪೂರ್ವಕ್ಕೆ ನದಿಯ ದಡದ ಮೇಲೆ ಕಟ್ಟಿದ ಕೋಟೆಗೆ ಚಂಚಲಕೋಟೆ ಎಂದು ಹೆಸರು. ಸೀತಾ ಶೋಧನೆಯ ನಿಮಿತ್ತ ಅಲೆದಾಡುತ್ತಿದ್ದ ರಾಮಲಕ್ಷಣರನ್ನು ಸುಗ್ರೀವ ಇಲ್ಲಿ ಮೊದಲು ಕಂಡಾಗ, ಕ್ಷಣಕಾಲ ಅವರನ್ನು ತನ್ನ ಸೋದರ ವಾಲಿಯ ಗೂಢಚಾರರೆಂದು ಭ್ರಮಿಸಿದನಂತೆ; ಹೀಗೆ ಅಚಾತುರ್ಯದಿಂದ ಸಂದೇಹಪಟ್ಟುದ್ದಕ್ಕಾಗಿ ನಂತರ ಪಶ್ಚಾತ್ತಾಪಪಟ್ಟನೆನ್ನಲಾಗಿದೆ. ವೆಂಕಟಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ತಾಳೆವನದಲ್ಲಿ ಭಿಕ್ಷುಕನ ವೇಷದಲ್ಲಿ ಮಹಾಕಾವ್ಯದ ನಾಯಕರನ್ನು ಹನುಮಂತ ಭೆಟ್ಟಿಯಾದನೆಂಬ ದಂತಕತೆ ಇದೆ. ವಾಲಿ ಮತ್ತು ಸುಗ್ರೀವರ ಕೊನೆಯ ಕಾದಾಟ ಮತ್ತು ರಾಮ ವಾಲಿಯನ್ನು ವಧಿಸಿದ್ದು ಇಲ್ಲಿಯೇ ಎಂದೂ ನಂಬಲಾಗುತ್ತದೆ.
  4. ಮತಂಗ ಪರ್ವತ: ದುಂದುಭಿ ಎಂಬ ರಾಕ್ಷಸನ ತಲೆಯನ್ನು ಮತಂಗಪರ್ವತದ ಮೇಲೆ ಎಸೆದಿದ್ದಕ್ಕೆ ಮತಂಗಮುನಿ ಕೋಪಗೊಂಡು, ಆ ಪರ್ವತವನ್ನು ವಾಲಿ ಪ್ರವೇಶಿಸಕೂಡದೆಂಬ ನಿರ್ಬಂಧ ಹಾಕಿದ್ದ. ಈ ಕಾರಣದಿಂದ ವಾಲಿಯ ಆಕ್ರಮಣದಿಂದ ಬಚಾವಾಗಲು ಸುಗ್ರೀವ ಮತ್ತು ಹನುಮಂತ ಇಲ್ಲಿ ಆಶ್ರಯ ಪಡೆದರು. ಸೀತೆ ಕೆಳಗೆ ಬೀಳಿಸಿದ ಆಭರಣಗಳನ್ನು ಶೇಖರಿಸಿದ ವಾನರರು ಅವನ್ನೆಲ್ಲ ಇಲ್ಲಿಯ ಸುಗ್ರೀವ ಗುಹೆಯೊಳಗೆ ಕಾಯ್ದಿಟ್ಟರು. ಅಲ್ಲದೆ, ಸೀತಾ ಕೊಳದ ಬಳಿಯ ಬಂಡೆಯೊಂದರ ಮೇಲೆ ಕಾಣುವ ಪ್ರಾಕೃತಿಕ ಬಿಳಿಗೆರೆಗಳು ರಾವಣ ಅಪಹರಿಸಿಕೊಂಡು ಒಯ್ಯುವಾಗ ಸೀತೆಯ ಸೀರೆಯ ಸೆರಗು ಮೂಡಿಸಿದ ಗುರುತುಗಳೆಂದು ನಂಬಲಾಗುತ್ತದೆ. ರಾಮ ಲಕ್ಷ್ಮಣರು ಬೆಟ್ಟದಲ್ಲಿ ಚಾತುರ್ಮಾಸ ಕಳೆದರು. ಆ ಸಮಯದಲ್ಲಿ, ಲಕ್ಷ್ಮಣ ಬಿಟ್ಟ ಬಾಣದಿಂದಲೇ ಬೆಟ್ಟದಲ್ಲಿರುವ ನೀರಿನ ಬುಗ್ಗೆ ಸೃಷ್ಟಿಯಾಯಿತಾ ಎನ್ನುವ ಪ್ರತೀತಿ ಇದೆ.
  5. ಕರ ಸಿದ್ದೇಶ್ವರ ಮಂದಿರ: ಚಿತ್ರದುರ್ಗ ಜಿಲ್ಲೆ ಹೊಸದುರ್ಗದಿಂದ 25 ಕಿ.ಮೀ ದೂರದಲ್ಲಿ ರಾಮಗಿರಿ ಹೆಸರಿನ ಪರ್ವತ ಇದೆ. ಶ್ರೀರಾಮನು ಲಂಕೆಗೆ ಹೋಗುವಾಗ ಇಲ್ಲಿ ಶಿವನನ್ನು ಪೂಜಿಸಿದ್ದ ಎನ್ನುವ ಪ್ರತೀತಿ ಇದೆ. ಹೀಗಾಗಿ ರಾಮಗಿರಿ ಅಂತಲೂ ದೇವಸ್ಥಾನದ ಹೆಸರು ರಾಮೇಶ್ವರ ಅಂತಲೂ ಆಗಿದೆ.
  6. ಹಾಲು ರಾಮೇಶ್ವರ: ಇದು ಕೂಡ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಿಂದ 11 ಕಿ.ಮೀ ದೂರದಲ್ಲಿ ಕಾಡಿನ ಮಧ್ಯೆ ದೇವಾಲಯವಿದೆ. ಇಲ್ಲಿ ಶ್ರೀರಾಮನಿಂದ ಶಿವಲಿಂಗಕ್ಕೆ ಪೂಜೆ ನಡೆದಿದ್ದರಿಂದ ಈ ಸ್ಥಳಕ್ಕೆ ಹಾಲು ರಾಮೇಶ್ವರ ಎಂಬ ಹೆಸರು ಬಂದಿದೆಯಂತೆ.
  7. ರಾಮನಾಥಪುರ: ಕಿಷ್ಕಿಂದೆಯ ನಂತರ ಶ್ರೀರಾಮನು ಕಾವೇರಿ ನದಿಯ ದಡದ ಮೂಲಕವೇ ಲಂಕೆಯತ್ತ ಸಾಗಿದ್ದು. ವಾನರ ಸೈನ್ಯದ ಜೊತೆ ಆಗಮಿಸಿದ ರಾಮನು ಅರಕಲಗೂಡಿನ ತಾಲೂಕಿನ ರಾಮನಾಥಪುರದಲ್ಲಿ ಶಿವಲಿಂಗ ಸ್ಥಾಪಿಸಿ ಪೂಜಿಸಿದನಂತೆ. ಈ ಸ್ಥಳಕ್ಕೆ ಎರಡು ಬಾರಿ ಬಂದಿದ್ದನೆಂದು ಹೇಳುತ್ತಾರೆ.
  8. ಲಕ್ಷ್ಮಣೇಶ್ವರ: ಈ ದೇವಾಲಯ ಇರುವುದು ( ರಾಮನಾಥಪುರ) ಕಾವೇರಿ ನದಿಯ ಇನ್ನೊಂದು ಭಾಗದಲ್ಲಿ. ಶ್ರೀರಾಮ ಲಕ್ಷ್ಮಣರು ಇಲ್ಲಿ ಓಡಾಡಿದರು ಹಾಗೂ ಇಲ್ಲಿಯೇ ಅವರು ಶಿವನ ಪೂಜೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಲಕ್ಷ್ಮಣ ಶಿವನ ಪೂಜೆಯ ಸಲುವಾಗಿ ಸ್ಥಾಪಿಸಿದ ದೇವಾಲಯ ಈಗಿರುವ ಲಕ್ಷ್ಮಣೇಶ್ವರ ದೇಗುಲ ಎನ್ನುವ ಪ್ರತೀತಿ ಇದೆ.
  9. ಧನುಷ್ಕೋಟಿ: ಮೇಲುಕೋಟೆಯಿಂದ ಇಲ್ಲಿಂದ 3. ಕಿ.ಮೀ ದೂರದ ಕಾಡಿನಲ್ಲಿರುವ ಬೆಟ್ಟವೊಂದರಲ್ಲಿ ಶ್ರೀರಾಮ ತನ್ನ ಬಾಣ ಬಿಡುವ ಮೂಲಕ ಹೊರ ತೆಗೆದ ನೀರಿನ ಚಿಲುಮೆ ಈಗಲೂ ಕಾಣಬಹುದು.
  10. ಚುಂಚನಕಟ್ಟೆ: ಶ್ರೀರಾಮ ಕಾವೇರಿ ಕೃಷ್ಣರಾಜನ ನಗರದಿಂದ ನದಿಯ ದಡದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಮನಿಗಳಿಗೆ ಕಾಟ ಕೊಡುತ್ತಿದ್ದ ಚುಂಚಿ ಎಂಬ ಹೆಸರಿನ ರಾಕ್ಷಸ ದಂಪತಿಗೆ ಸದುಪದೇಶ ನೀಡಿ ಋಷಿ ಮುನಿಗಳನ್ನು ರಾಮ ರಕ್ಷಿಸಿದನಂತೆ.
  11. ಅಂಬುತೀರ್ಥ: ಶರಾವತಿ ನದಿಯ ಉಗಮಸ್ಥಾನ ಅಂಬುತೀರ್ಥ. ಈ ಸ್ಥಳ ತೀರ್ಥಹಳ್ಳಿಯಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ವನವಾಸದ ಸಂದರ್ಭದಲ್ಲಿ ರಾಮ- ಸೀತೆಯರು ಇಲ್ಲಿಗೆ ಬಂದಿದ್ದರು ಎನ್ನುತ್ತದೆ ಸ್ಥಳ ಪುರಾಣ. ಆಗ ಸೀತಾಮಾತೆಯ ಬಾಯಾರಿಕೆಯನ್ನು ನೀಗಿಸಲು, ಶ್ರೀರಾಮನು ನೆಲಕ್ಕೆ ಬಾಣ ಬಿಟ್ಟು ನೀರು ಚಿಮ್ಮಿಸಿದನಂತೆ. ಅಂಬು (ಶರ) ಅಥವಾ ಬಾಣದಿಂದ ನೀರು ಚಿಮ್ಮಿದ ಈ ಸ್ಥಳಕ್ಕೆ ಅಂಬುತೀರ್ಥವೆಂದೂ, ನದಿಗೆ ಶರಾವತಿಯೆಂದೂ ಹೆಸರು ಬಂದಿತು. ಅಲ್ಲೊಂದು ಸಣ್ಣ ಶಿವ ಮಂದಿರವಿದೆ. ಅದನ್ನು ರಾಮ-ಸೀತೆಯರು ಶಿವನನ್ನು ಪೂಜಿಸಿದ್ದರು ಎಂಬ ನಂಬಿಕೆಯಿಂದೆ.
  12. ಮೃಗವಧೆ: ಈ ಸ್ಥಳವು ಬ್ರಾಹ್ಮಿ ನದಿಯ (ಹಳ್ಳ) ದಂಡೆಯಲ್ಲಿದೆ. ಇಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯವನ್ನು ಶ್ರೀರಾಮನು ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ. ಮಾರೀಚ ರಾಕ್ಷಸ ರಾವಣನಿಗೆ ಸಹಾಯ ಮಾಡಲೆಂದು ಬಂಗಾರ ವರ್ಣದ ಜಿಂಕೆಯಾಗಿ ಸೀತೆಯ ಕುಟೀರದ ಮುಂದೆ ಸುಳಿದಾಡುತ್ತಿರುತ್ತಾನೆ. ಮಾಯಾಜಿಂಕೆಯ ಮೋಹಕ್ಕೆ ಸಿಲುಕಿದ ಸೀತೆ, ಅದನ್ನು ಹಿಡಿಯುವ ಆಸೆ ತೋರುತ್ತಾಳೆ. ಪತ್ನಿಯ ಆಸೆ ಪೂರೈಸಲು ಮಾಯಾಮೃಗದ ಬೆನ್ನತ್ತಿದ ರಾಮನಿಗೆ ಅಸುರರ ಹುನ್ನಾರ ಅರ್ಥವಾಗಿ, ಮಾಯಾಜಿಂಕೆಗೆ ಬಾಣ ಬಿಟ್ಟು ಕೊಂದು ಹಾಕುತ್ತಾನೆ. ಹಾಗೆ ಮಾರೀಚ (ಮೃಗ) ಮೃತಪಟ್ಟ ಸ್ಥಳಕ್ಕೆ “ಮೃಗವದೇ” ಎಂಬ ಹೆಸರು ಬಂತು.
  13. ಕಾರಣಗಿರಿ: ಶಿವಮೊಗ್ಗ ಜಿಲ್ಲೆ ಹೊಸನಗರ-ಸಾಗರ ಮಾರ್ಗದ ಹೆದ್ದಾರಿಯಲ್ಲಿ ಕಾರಣಗಿರಿ (ಕಾರ್ಗಡಿ) ಸಿದ್ಧಿ ವಿನಾಯಕ ದೇವಸ್ಥಾನವಿದೆ. ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದನಂತೆ. ಸೀತೆಯೊಂದಿಗೆ ಹಿಂತಿರುಗಿ ಬರುವಾಗ ಮತ್ತೂಮ್ಮೆ ಬಂದು ಪೂಜಿಸಿ ಹೋಗುವಂತೆ ಅಗಸ್ತ್ಯರು ಶ್ರೀರಾಮನಿಗೆ ಸೂಚಿಸಿದರಂತೆ. ರಾವಣಾದಿಗಳನ್ನು ಮರ್ದಿಸಿ ಸೀತೆಯೊಂದಿಗೆ ಇದೇ ದಾರಿಯಲ್ಲಿ ಅಯೋಧ್ಯೆಗೆ ಹಿಂತಿರುಗುತ್ತಿದ್ದ ಶ್ರೀರಾಮ ಅಗಸ್ತ್ಯರ ಮಾತನ್ನು ಮರೆತು, ಮುಂದಕ್ಕೆ ಪ್ರಯಾಣಿಸುತ್ತಿದ್ದಂತೆ. ಆಗ, ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಬೆಟ್ಟ(ಗಿರಿ)ಅಡ್ಡ ನಿಂತಿತು. ಆಗ ಶ್ರೀರಾಮನು “ಕಿಂ ಕಾರಣಂ ಗಿರಿಃ?” (ಈ ಬೆಟ್ಟ ಅಡ್ಡವೇಕೆ) ಎಂದನಂತೆ. ಆಗ ಜೊತೆಗಿದ್ದ ಲಕ್ಷ್ಮಣ, ಅಗಸ್ತ್ಯರ ಮಾತನ್ನು ನೆನಪಿಸಿ ಸಿದ್ಧಿವಿನಾಯಕನನ್ನು ಪೂಜಿಸಲು ತಿಳಿಸಿದನಂತೆ.
  14. ನಾಮದ ಚಿಲುಮೆ: ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಾಮದ ಚಿಲುಮೆ ಇದೆ. ಶ್ರೀರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆ ನಿಂತನಂತೆ. ರಾಮನು ತನ್ನ ಹಣೆಗೆ “ನಾಮ” ಇಡಲು ನೀರಿಗಾಗಿ ಹುಡುಕಾಡಿದನಂತೆ. ಎಲ್ಲಿಯೂ ನೀರು ಸಿಗದಿದ್ದಾಗ ತನ್ನ ಬಿಲ್ಲನ್ನು ತೆಗೆದು ಈ ಸ್ಥಳದಲ್ಲಿ ಬಾಣ ಬಿಟ್ಟಾಗ, ಇಲ್ಲಿ ನೀರಿನ ಚಿಲುಮೆ ಹುಟ್ಟಿತಂತೆ. ಆದ್ದರಿಂದ ಇದನ್ನು ನಾಮದ ಚಿಲುಮೆ/ ರಾಮ ಚಿಲುಮೆ ಎಂದು ಕರೆಯುತ್ತಾರೆ ಎನ್ನುತ್ತದೆ ಸ್ಥಳ ಪುರಾಣ.
  15. ಚಳಾಕಾಪೂರ್‌: ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್‌ ಗ್ರಾಮದಲ್ಲಿ ಆಂಜನೇಯ ದೇವಸ್ಥಾನವಿದೆ. ವನವಾಸದ ವೇಳೆ ಶ್ರೀರಾಮ, ಲಕ್ಷ್ಮಣರು ಚಳಕಾಪೂರ್‌ ಅರಣ್ಯದಲ್ಲಿ ವಾಸವಾಗಿದ್ದರಂತೆ. ಚಳಕಾ ದೇವಿಯ ಮಾತಿನಂತೆ ಶ್ರೀರಾಮ ಅಸುರರನ್ನು ಸಂಹಾರ ಮಾಡಿದ್ದರಿಂದ, ಚಳಕಾಪೂರ್‌ ಎಂದು ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ. ಹನುಮಂತ ಸಂಜೀವಿನಿ ಪರ್ವತವನ್ನು ಅಂಗೈಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಒಂದು ಸಣ್ಣ ತುಂಡು ಈ ಸ್ಥಳದಲ್ಲಿ ಬಿದ್ದಿರುವ ಕಾರಣ ಇಲ್ಲಿ ಆಂಜನೇಯ ನೆಲೆಸಿದ್ದಾನೆ ಎನ್ನುತ್ತಾರೆ ಸ್ಥಳೀಯರು.

ಸಂಪಾದಕರು: ವಿಶ್ವಾಸ್ ಡಿ. ಗೌಡ, ಸಕಲೇಶಪುರ