ಪ್ರಾಕೃತಿಕ ಅಸಮತೋಲನ
“””””””””””””””

ಭುವಿಯ ಮೇಲಿಷ್ಟು ವ್ಯಗ್ರವೇಕೆ ವರುಣ
ಅನುರುಣಿಸುತ್ತಿದೆ ಅಷ್ಟ ದಿಕ್ಕುಗಳಲ್ಲೂ ಆಕ್ರಂದನ
ಮುಗಿಬಿದ್ದ ಮುಗಿಲ ಮಾರಿಯ ಮಾಯೆ
ಎತ್ತ ನೋಡಿದರತ್ತ ಆತಂಕದ ಛಾಯೆ
ಭೋರ್ಗರೆವ ಜಲಪ್ರಳಯದಿ ರೈತನ ಕನಸು ಕಮರಿ

ರುದ್ರ ಶಿವತಾಂಡವ ನರ್ತನದ ಮೊರೆತ
ಬೆಟ್ಟಗುಡ್ಡ ಪರ್ವತವೇ ಕುಸಿಯುತ್ತ
ಜನಜೀವನ ಅಸ್ತವ್ಯಸ್ತದ ದುಃಸ್ಥಿತಿ ಜಾನುವಾರುಗಳ ಮೂಕ ವೇದನೆ
ಕಲ್ಲು ಹೃದಯ ಕರಗುವ ಯಾತನೆ
ಕಣ್ಮುಂದೆ ತೆರೆದಿಟ್ಟ ವಾಸ್ತವ ಕಥನ
ಮರೆಯಾಗುತ್ತ ದೈವದತ್ತ ಸೃಷ್ಟಿ ಚೇತನ

ಮನೆಮಾರುಗಳೇ ಗುಡಿಗೋಪುರಗಳೇ ಧರೆಗುರುಳಿದೂಡೆ
ಬದುಕಿನ ನೆಲೆಯಲ್ಲಿ ಬೆಳಕೆಲ್ಲಿ?

ಆಧುನಿಕ ತಂತ್ರಜ್ಞಗಳಲ್ಲಿ ವಿಹರಿಸುತ
ಭೂಮೂಲ ನೆಲೆ,ಸೆಲೆಯ ಮನುಜ ಕಬಳಿಸುತ್ತ
ಪ್ರಕೃತಿ ಶಕ್ತಿ ಸಹಯೋಗ ದಿಕ್ಕರಿಸುತ್ತ
ಪ್ರಾಕೃತಿಕ ಅಸಮತೋಲನದ ಪತನ
ಭೂಗರ್ಭವನ್ನೇ ಸ್ಫೋಟಿಸುವ ವಿದ್ಯುನ್ಮಾನಗಳು
ಬಿದಿರ ಬಗೆದು ಅದಿರ ಅಗೆದು ನಿಸ್ತೇಜ ಬಯಲು

ವೈಜ್ಞಾನಿಕ ನವಪ್ರಯೋಗ ಪ್ರಕ್ರಿಯೆಗಳು
ಆಹ್ವಾನವಿತ್ತಂತೆ ಜೀವಜಂತು ಸಂಕುಲಗಳಿಗೆ
ಬದುಕೇ ಅರ್ಥೈಸಲಾಗದ ಒಗಟು
ದೇವನ ಲೀಲೆಗೆ ಮನುಜ ಸಾಟಿಯೇ?

ಸುಪ್ತ ಮನದ ಬೇಗೆ ತೊಡೆದು
ಬದುಕೆಂಬ ಆಶಾಗೋಪುರದ ಬೆಳಕಿನಲಿ
ಸರ್ವ ಜನರ ಹಿತ ಸ್ನೇಹ ಭಾವದಲಿ
ಸಾಗಲೇಬೇಕು ಪಯಣ ದೈವಶಕ್ತಿಯ ನಂಬಿಕೆಯಲಿ
ಶರಣಾಗಿ ಸೋಲಬೇಕು ಮನುಜ ಜೀವಧಾತೆಗೆ
ಶತಕಗಳಿಂದಿನ ಸರಳ ಸಾತ್ವಿಕ ಆರೋಗ್ಯ ಬದುಕಿಗೆ

– ಯಶೋಧ ರಾಮಕೃಷ್ಣ ಮೈಸೂರು