ಡಾ. ಬಂಡಳ್ಳಿ ರಮೇಶ್ ಅವರ ಕವನಗಳು

1.

ಬದುಕಿದರೆ ಬದುಕಬೇಕು
ಬದುಕಿದರೆ ಬದುಕಬೇಕು

ಬದುಕಿದರೆ ಬದುಕಬೇಕು ಆತ್ಮ
ಸಾಕ್ಷಿಗೆ ಮೋಸ ಮಾಡದಂತೆ
ಬದುಕಿದರೆ ಬದುಕಬೇಕು ನಿನ್ನ
ಅಂತರಾಳ ಮೆಚ್ಚುವಂತೆ..!

ಬದುಕಬೇಕು ನಿನ್ನ ಶತ್ರುಗಳು
ತಲೆ ಎತ್ತಿ ನೋಡುವಂತೆ
ಬದುಕಬೇಕು ನಿನ್ನ ವಿರೋಧಿಗಳು
ಬಾಯಲ್ಲಿ ಬೆರಳಿಟ್ಟುಕೊಳ್ಳುವಂತೆ..!

ಬದುಕಬೇಕು ಹೆತ್ತವರ ಆಸೆ
ಕನಸು ಕಲ್ಪನೆ ಈಡೇರುವಂತೆ
ಬದುಕಬೇಕು ಬಂಧು ಬಳಗ
ನೋಡಿ ಕೊಂಡಾಡುವಂತೆ..!

ಬದುಕಬೇಕು ಗಟ್ಟಿ ಮುಟ್ಟಾದ
ಅಚಲ ಮೇರು ಪರ್ವತದಂತೆ
ಬದುಕಬೇಕು ಪಂಚಭೂತಗಳ
ನಿಜವಾದ ಸಾಕ್ಷಿಯಂತೆ..!

ಬದುಕಬೇಕು ಇತಿಹಾಸದ
ಪುಟ ಸೇರುವಂತೆ
ಬದುಕಬೇಕು ಇಡೀ ಲೋಕ
ನೆನೆದುಕೊಳ್ಳುವಂತೆ..!

ಬದುಕಿದರೆ ಬದುಕಬೇಕು
ನಿನ್ನ ತನುಮನ ಬಂದಂತೆ
ಬದುಕಬೇಕು ನಿನ್ನ ಧರೆ ಮೆಚ್ಚಿ
ಅಹುದಹುದೆನ್ನುವಂತೆ..!

ಬದುಕಬೇಕು ನಿನ್ನ ವಿದ್ಯೆ
ಬುದ್ದಿಗೆ ಬಂದಂತೆ
ಬದುಕಬೇಕು ನಿನ್ನ ಸ್ವಂತಿಕೆ
ಜ್ಞಾನಕ್ಕೆ ತಕ್ಕಂತೆ..!

ಬದುಕಿ ಬಾಳಬೇಕು ನೀ
ಅವರಿವರಂತಲ್ಲ ನಿನ್ನಂತೆ
ಬೆಳೆದರೆ ಬೆಳೆಯಬೇಕು
ನಿನ್ನ ಸ್ವಪ್ರಯತ್ನದಂತೆ..!

2.

ಯಾರಿಗೆ ಯಾರಿಲ್ಲ
ಯಾರಿಗೆ ಯಾರಿಲ್ಲ
ಸ್ಥಿರವಲ್ಲದ ಜಗದಲ್ಲಿ
ನಾನು ನೀನು ನೀನು ನಾನು
ಯಾರು ಆಗಲ್ಲ
ಎಲ್ಲಾ ಆಗುವರು ಎನ್ನುವ ಭ್ರಮೆಯಲ್ಲಿ
ತೇಲುತ್ತ ಮುಳುಗುತ್ತ ಜೀವನ ಮಾಡುವೆವು..!

ಒಬ್ಬರ ಕಂಡರೆ ಒಬ್ಬರಿಗಾಗಲ್ಲ
ಒಬ್ಬನು ಬದುಕಿದರೆ ಯಾರು ಸಹಿಸಲ್ಲ
ಒಳಿತನು ಮಾಡಿದರೆ ಕೆಡುಕನು ಮಾಡುವರು
ನಡೆಯೋ ದಾರಿಗೆ ಮುಳ್ಳನು ಹಾಕುವರು
ಸಣ್ಣ ತಪ್ಪನ್ನೇ ಎತ್ತಿ ತೋರುವರು
ಮಾಡದ ತಪ್ಪು ಮಾಡಿದೆ ಎಂದು ನಿತ್ಯವು ದೂರುವರು..!

ಕಷ್ಟವು ಬಂದಾಗ ತಿರುಗಿ ನೋಡರು
ಸುಖವು ಕಂಡಾಗ ಓಡಿ ಬರುವರು
ಹಣವು ಇದ್ದರೆ ಮೊಳೆಯನು ಹಾಕುವರು
ಕಾಸಿಲ್ಲದಿದ್ದರೆ ಮೂಸಿ ನೋಡರು
ಬಾಯಿ ಮಾತಲ್ಲಿ ಬೆನ್ನು ತಟ್ಟುವರು
ಒಳಗೆ ವಿಷವ ಕಾರುತ್ತ ಮೇಲೆ ನಟಿಸುವರು..!

ಅನುದಿನ ಅನುಕ್ಷಣವು ನಾನತ್ವ ತೋರುವರು
ಮಾನ ಹೋದರು ಬಹುಮಾನ ಕೇಳುವರು
ಬೆಳೆಯೋ ಪೈರನ್ನೇ ಚಿವುಟಿ ಹಾಕುವರು
ಸತ್ಯದ ನೆಪವೊಡ್ಡಿ ಸುಳ್ಳನು ಹೇಳುವರು
ಕೆಲಸವಾಗಲು ನಾಟಕವಾಡುವರು
ಕೆಲಸ ಮುಗಿದರೆ ಸಾಕು ಕಾಲು ಕಸದಿ ಕಾಣುವರು..!

ರಚನೆ: ಡಾ. ಬಂಡಳ್ಳಿ ರಮೇಶ್
ಕವಿ, ಸಾಹಿತಿ, ಚಿಂತಕ