ತಿರುಪತಿ ತಿಮ್ಮಪ್ಪನ ಮಹಿಮೆ ಮತ್ತು ಸ್ವಾದಿಷ್ಟವಾದ ‘ಲಡ್ಡು’ ಪ್ರಸಾದ..!

ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಪ್ರಸಾದ ಸವಿಯಲೇಬೇಕು ಎಂಬ ಹಂಬಲ ಪ್ರತಿಯೊಬ್ಬರ ಮನಸ್ಸಿನಲ್ಲಿ ಬೇರೂರುವಷ್ಟು ‘ಪ್ರಸಾದ’ ಪ್ರಸಿದ್ದಿಯಾಗಿದೆ.

ತಿರುಪತಿ ಪ್ರಸಾದ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ. ತಿಮ್ಮಪ್ಪನ ದರ್ಶನ ಮಾಡುವಷ್ಟೇ ಕಾಯಬೇಕು. ಅದಕ್ಕಾಗಿ ಮುಂಚಿತವಾಗಿ ಕೌಂಟರ್ನಲ್ಲಿ ಹಣ ಕೊಟ್ಟು ಟಿಕೆಟ್ ಪಡೆದಿರಬೇಕು. ಒಬ್ಬರಿಗೆ ಒಂದೇ ಟಿಕೆಟ್, ಸರದಿಯಲ್ಲಿ ನಿಂತು ಗಂಟೆ ಗಟ್ಟಲೆ ಕಾಯಬೇಕು. ಇಂಥ ಭಾರಿ ಜನಜಂಗುಳಿಯ ನಿತ್ಯ ಜಾತ್ರೆಯಂತಿರುವ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಲಾಡು ಪ್ರಸಾದ ತೆಗೆದುಕೊಂಡು ಬರುವುದು ಎಂದರೆ, ವೈಕುಂಠಕ್ಕೆ ಹೋಗಿ ವಿಷ್ಣುವಿನ ದರ್ಶನ ಮಾಡಿ ಬಂದಪ್ಟೇ ಸಂಭ್ರಮ ಸಡಗರ ಮುಖದಲ್ಲಿ ತುಂಬಿ ತುಳುಕಾಡುತ್ತದೆ.

ಇಂಥ ಶ್ರೀನಿವಾಸನ ಹೆಸರು ಕೇಳಿದರೆ ಮನಸ್ಸು ನಾಗಾಲೋಟದಲ್ಲಿ ತಿರುಪತಿಗೆ ಓಡುತ್ತದೆ. ತಿಮ್ಮಪ್ಪನ ಲಡ್ಡು ಪ್ರಸಾದ ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಹಗಲು- ರಾತ್ರಿ ಕೆಲಮ್ಮೊಮ್ಮೆ ಒಂದು ದಿನ ಎರಡು ದಿನವಾದರೂ ಆದಿತು. ಸರ್ವಾಲಂಕಾರ ಭೂಷಿತನಾದ ಸ್ವಾಮಿ ಶ್ರೀನಿವಾಸನ ದರ್ಶನ ಮಾಡಲು ಪುಣ್ಯ ಮಾಡಿರಬೇಕು. ಇನ್ನು ಲಡ್ಡು ಪ್ರಸಾದವು ಆಹಾ ಅದೆಂಥ ಸ್ವಾದಿಷ್ಟ ಬೇರೆ ಕಡೆ ಎಷ್ಟೇ ಹಣ ಕೊಟ್ಟರೂ ಇಂಥ ಪ್ರಸಾದ ಸಿಗುವುದಿಲ್ಲ. ಭೂ ವೈಕುಂಠ ತಿರುಪತಿಗೆ ಹೋಗುವುದೇ ದೊಡ್ಡ ಸಂಭ್ರಮ. ದಿನವೊಂದಕ್ಕೆ ಒಂದು- ಒಂದುವರೆ ಲಕ್ಷದಷ್ಟು ಲಾಡು ಪ್ರಸಾದ ವಿತರಣೆ ಯಾಗುತ್ತದೆ. ಈ ಲಾಡು -ಲಡ್ಡು, ತಯಾರಿಕೆಗೆ ಒಂದಷ್ಟು ಹಿನ್ನೆಲೆ ಇದೆ.

ಸುಮಾರು 300 ವರ್ಷಗಳ ಹಿಂದೆ ಶ್ರೀನಿವಾಸನಿಗೆ ಪ್ರಸಾದಕ್ಕೆ ಪಾಯಸ, ಪೊಂಗಲ್ಲು ಅಂಬಡೆ, ಅವಲಕ್ಕಿ, ಪಂಚಕಜ್ಜಾಯ, ಈ ರೀತಿ ಪ್ರಸಾದ ಮಾಡಿ ನೈವೇದ್ಯ ಮಾಡಿ ಭಕ್ತರಿಗೆ ಕೊಡುತ್ತಿದ್ದರು. ಒಂದು ಸಂದರ್ಭದಲ್ಲಿ ತಿರುಪತಿ ದೇವಸ್ಥಾನದ ತಿಮ್ಮಪ್ಪನ ಪೂಜೆ ಮಾಡಲು ಪುರೋಹಿತರು ಸಿಗುವುದು ಕಷ್ಟವಾಯಿತು. ಅದರಲ್ಲೂ ಮಾಧ್ವ ಬ್ರಾಹ್ಮಣರೇ ಬೇಕು ಎಂಬ ಕಂಡೀಶನ್. ಇದಕ್ಕಾಗಿ ದೇವಳದ ಆಡಳಿತ ಮಂಡಳಿ, ಒಂದು ರಿಯಾಯಿತಿ ಪ್ರಕಾರ, ದೇವಸ್ಥಾನಕ್ಕೆ ಬರುವ ಆದಾಯದಲ್ಲಿ ಸ್ವಲ್ಪ ಪಾಲು ಅರ್ಚಕರಿಗೆ ಕೊಡುವುದಾಗಿ ಅಧಿಕಾರಿ ವರ್ಗ ಠರಾವು ಹೊರಡಿಸಿತು. ಅಲ್ಲಿಂದ ಮುಂದೆ ಪ್ರಸಾದ ಮಾಡುವ ಜವಾಬ್ದಾರಿಯನ್ನು ತಿರುಪತಿ ದೇವಸ್ಥಾನದ ಅರ್ಚಕರು ಪಡೆದರು. ಆ ಸಮಯದಲ್ಲಿ ತಮಿಳುನಾಡಿನಿಂದ ‘ಕಲ್ಯಾಣಂ ಅಯ್ಯಂಗಾರ್’ ಎಂಬ ಅರ್ಚಕರು ಬಂದರು. ಅವರ ನೇತೃತ್ವದಲ್ಲಿ ಈಗ ಮಾಡುತ್ತಿರುವ ‘ ಲಡ್ಡು’ ಪ್ರಸಾದ ಮಾಡುವ ರೂಢಿ ಸಂಪ್ರದಾಯದಂತೆ ಬೆಳೆದು ಬಂದಿತು. ಇದಕ್ಕಾಗಿ ಪೋಟೋ ಎಂಬ ಅಡುಗೆಮನೆ ತಯಾರಿಸಲಾಯಿತು. ಪೋಟೋ ಎಂದರೆ ‘ಮಹಾಲಕ್ಷ್ಮಿಯ’ ಅಂಶವಾದ ದೇವತೆಯೇ ಆಗಿದ್ದಾಳೆ. ಮೊದಮೊದಲು ಪ್ರಸಾದಕ್ಕೆ ಮೆತ್ತಗಿರುವ ಬೂಂದಿ ಮಾಡುತ್ತಿದ್ದರು. ಇದು ಲಾಡು ಕಾಳಿನಷ್ಟು ಗಟ್ಟಿ ಇರುವುದಿಲ್ಲ. ಎರಡು ಮೂರು ದಿನದ ಮೇಲೆ ಬರುವುದಿಲ್ಲ. ತಿಮ್ಮಪ್ಪನ ದರ್ಶನಕ್ಕೆ ಬಂದ ಪ್ರಯಾಣಿಕರು
ದೂರದ ಊರುಗಳಿಗೆ ತೆಗೆದುಕೊಂಡು ಹೋಗಲು ಬರುತ್ತಿರಲಿಲ್ಲ. ಆದುದರಿಂದ ಯೋಚಿಸಿದ ಕಲ್ಯಾಣಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ, ಮಿರಾಸೆ ದಾರ್ ಎಂಬ ತಂಡದ ವ್ಯವಸ್ಥೆಯನ್ನು ಮಾಡಿದರು. ಈ ತಂಡಕ್ಕೆ ಗೇಮ್ಕರ್ ಮಿರಾಸೆದಾರ್ ಎಂದು ಹೆಸರಿಸಲಾಯಿತು. ಈ ತಂಡದವರು ಲಘುವಾದ ಹಾಗೂ ಸಮೃದ್ಧಭರಿತ ವಾದ ಗಟ್ಟಿ ಇರುವ ಲಾಡು ಉಂಡೆಯನ್ನು ಮಾಡಿದರು. ಇದು 15 ದಿನಗಳು ಇಟ್ಟರೂ ಕೆಡುವುದಿಲ್ಲ. ಈ ತಂಡದವರು ಬಹಳ ವರ್ಷಗಳ ಕಾಲ ಲಾಡು ಮಾಡಿದರು. ಆದರೆ ಈ ಲಾಡುಗಳಲ್ಲಿ ಸ್ವಲ್ಪ ಭಾಗವನ್ನು ಮಿರಾಸೆ ಬ್ರಾಹ್ಮಣ ಕುಟುಂಬಕ್ಕೆ ಕೊಡಬೇಕಾಗಿತ್ತು. ಆನಂತರ ಆಂಧ್ರಪ್ರದೇಶದ ಸರ್ಕಾರ ಈ ವ್ಯವಸ್ಥೆಯನ್ನು ರದ್ದುಗೊಳಿಸಿ, ಪ್ರತ್ಯೇಕ ವ್ಯವಸ್ಥೆ ಮಾಡಿತು. ತದನಂತರ ಬಂದ ಈ ವ್ಯವಸ್ಥೆಯಲ್ಲಿ ಮಾಡುವ ‘ಲಡ್ಡು’ ಅದೇ ಸ್ವಾದಿಷ್ಟದಿಂದ ಕೂಡಿದ್ದು, ಇದರ ಪ್ರಖ್ಯಾತಿ ಉತ್ತುಂಗಕ್ಕೇರಿ ಬಂದ ಯಾತ್ರಿಗಳು ಲಾಡು ಮನೆಗಳಿಗೆ ಮಾತ್ರ ತೆಗೆದುಕೊಂಡು ಹೋಗುವುದಲ್ಲದೆ
ನೆರೆಹೊರೆಯವರಿಗೆ ಪ್ರಸಾದ ಕೊಡಲು ಕೊಂಡೊಯ್ಯುತ್ತಿದ್ದರು ಅದು ಇಂದು ದೇಶ ವಿದೇಶಗಳ ತನಕವೂ ತಿರುಪತಿ ಲಡ್ಡು ಪ್ರಸಾದ ಹಂಚಿಕೆಯಾಗುತ್ತಿದೆ. ದೇವಸ್ಥಾನದ ಲಡ್ಡು ಪ್ರಸಾದದ ಆದಾಯ 2000, 100 ಕೋಟಿಗಿಂತಲೂ ಹೆಚ್ಚಿದೆ.

ತಿರುಪತಿ ಪ್ರಸಾದ ಲಡ್ಡು ತಯಾರಿಸಲು, ದಿನ ಒಂದಕ್ಕೆ ಸಾವಿರ ಕೆಜಿ ಗಟ್ಟಲಳೆ, ಕಡಲೆ ಹಿಟ್ಟು, ಸಕ್ಕರೆ, ಕಲ್ಲು ಸಕ್ಕರೆ, ತುಪ್ಪ ,ಏಲಕ್ಕಿ ,ಒಣ ದ್ರಾಕ್ಷಿ ಹಾಗೂ ಸ್ವಲ್ಪ ಬಾದಾಮಿ, ಗೋಡಂಬಿ, ಇವುಗಳನ್ನು ಹದವಾಗಿ ಬೆರೆಸಿ ಸ್ವಾದಿಷ್ಟವಾದ ಲಕ್ಷಾಂತರ ಲಡ್ಡುಗಳನ್ನು ನಿತ್ಯವೂ ತಯಾರಿಸುತ್ತಾರೆ. ಅದು ತಯಾರಾಗಿ ಕೌಂಟರ್ ಗಳಲ್ಲಿ ಇಡುವುದನ್ನು ನೋಡಿ, ಕಣ್ಣು ಮುಚ್ಚಿ ಬಿಡುವುದರೊಳಗೆ ಎಲ್ಲವೂ ಖಾಲಿಯಾಗಿರುತ್ತದೆ. ಬಂದ ಭಕ್ತರಿಗೆ ಪ್ರಸಾದವೆಂದು ಒಂದೊಂದು ಲಾಡುವನ್ನು ಕೊಡುತ್ತಾರೆ. ಲಾಡುವಿನಲ್ಲಿ ಮೂರ್ನಾಲ್ಕು ಗಾತ್ರಗಳನ್ನು ಮಾಡಲಾಗಿದೆ. ದೇವಸ್ಥಾನದ ವತಿಯಿಂದ ಭಕ್ತರಿಗೆ ಕೊಡುವ ಲಾಡು ಮದುವೆ ಮನೆ ಲಾಡು ಸೈಜ್, ಬ್ರಹ್ಮೋತ್ಸವಕ್ಕೆ ಎಂದು ಮಾಡುವ ಲಾಡು ಸ್ವಲ್ಪ ದೊಡ್ಡದು ಒಂದಕ್ಕೆ 50 ರೂಪಾಯಿ ಇರಬಹುದು ಈಗ. ಇನ್ನೂ ವಿಶೇಷ ದಿನಗಳಲ್ಲಿ ದೊಡ್ಡ ಗಾತ್ರದ ಅಂದರೆ ಕಡಲೆಹಿಟ್ಟಿಗೆ ಬರೋಬ್ಬರಿ ದ್ರಾಕ್ಷಿ, ಗೋಡಂಬಿ,ಬಾದಾಮಿ, ತುಪ್ಪ, ಹಾಕಿ ಮಾಡಿದಂತಹ ಲಾಡು ಸಾಮಾನ್ಯ ಲಾಡುಉಂಡೆಯ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಬೆಲೆಯು ಹಾಗೆಯೇ ಇರುತ್ತದೆ. ಬ್ರಹ್ಮೋತ್ಸವ, ವೈಕುಂಠ ಏಕಾದಶಿ, ನವರಾತ್ರಿ ಹಬ್ಬ ಹರಿ ದಿನಗಳ ವಿಶೇಷ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಲಾಡು ಖರ್ಚಾಗುತ್ತದೆ. ತಿರುಪತಿಯಲ್ಲಿ ಅತೀ ಹೆಚ್ಚು ತೂಕದ ಲಾಡು ತಯಾರಿಸಿ ತಿರುಪತಿ ಪ್ರಶಂಸೆಗೆ ಪಾತ್ರರಾಗಿದೆ.

ಈಗಿನ ‘ಲಡ್ಡು ‘ಜೊತೆಗೆ ಆರಂಭದಲ್ಲಿ ತಯಾರಿಸುತ್ತಿದ್ದ ಪ್ರಸಾದ ಪೊಂಗಲ್ಲು, ಅಂಬಡೆ, ಬೂಂದಿ ಕಾಳು, ಪಾಯಸ, ಎಲ್ಲವೂ ಇರುತ್ತದೆ. ಆದರೆ ಲಾಡು ಉಂಡೆ ಗಿರುವಷ್ಟು ಬೇಡಿಕೆ ಇವುಗಳಿಗೆ ಇಲ್ಲ. ತಿರುಪತಿಯಲ್ಲಿ ಬಹಳಷ್ಟು ವಿಶೇಷಗಳಿವೆ.ಅವುಗಳಲ್ಲಿ ಲಾಡು ಉಂಡೆಗೆ ಹಾಕುವ ತುಪ್ಪ ಪುಂಗನೂರು ತಳಿಯ’ ಶುದ್ಧ ಆಕಳ ತುಪ್ಪವಾಗಿದೆ. ಈ ಹಸುವಿನ ಮೂಲ ಮಹಾ ವಿಷ್ಣು, ಶ್ರೀನಿವಾಸನಾಗಿ ಭೂಲೋಕಕ್ಕೆ ಬಂದು ಹುತ್ತದಲ್ಲಿ 10,000 ವರ್ಷಗಳ ಕಾಲ ಇದ್ದನು. ಆಗ ಕಾಮಧೇನು ಸುರಭಿ ಗೋಮಾತೆ ಯಾಗಿ ಬಂದು ಹುತ್ತದಲ್ಲಿಯೇ ಭಗವಂತನಿಗೆ ಹಾಲು ಕೊಡುತ್ತಾಳೆ. ಆಗಬಂದ ಈ ಗಿಡ್ಡ ತಳಿ ಜಾತಿಯ ಹಸುವಿನ ವಂಶವೇ ಮುಂದುವರಿದ ತಳಿಯಾಗಿ ಇರುವುದೇ ಪುಂಗನೂರು ಹಸುಗಳು ಎಂದು ನಂಬಲಾಗಿದೆ. ಈ ಹಾಲು ಎಮ್ಮೆಯ ಹಾಲಿನಷ್ಟೇ ಗಟ್ಟಿ ಇರುತ್ತದೆ ಹಾಗೂ ಔಷಧಿ ಗುಣವನ್ನು ಹೊಂದಿದೆ. ತುಂಬಾ ಪೌಷ್ಟಿಕಾಂಶದ ಈ ಹಾಲಿನಿಂದ ಮಾಡಿದ ತುಪ್ಪವನ್ನು ಲಡ್ಡು ಪ್ರಸಾದಕ್ಕೆ ಹಾಕುತ್ತಾರೆ.

ವೆಂಕಟೇಶನಿಗೆ ಅಭಿಷೇಕ, ನೈವೇದ್ಯ, ಸಿಹಿ ಪದಾರ್ಥ ತಯಾರಿಸಲು, ಹಾಗೂ ಭೋಗಾ ವೆಂಕಟೇಶ ಸ್ವಾಮಿಗೆ ರಾತ್ರಿ ಕುಡಿಯಲು ಶಯನ ಗೃಹದಲ್ಲಿ ಇದೇ ಹಸುವಿನ ಹಾಲು ಇಡುತ್ತಾರೆ. ಬೆಳಗ್ಗೆ ವೆಂಕಟೇಶನನ್ನು ಎಬ್ಬಿಸಲು ಸುಪ್ರಭಾತ ಹಾಡಿ, ಅವನಿಗೆ ಮುಖ ತೋಳೆಸಿ, ಬಂಗಾರದ ಉತ್ತರಣೆ ಕಡ್ಡಿಯಿಂದ ಹಲ್ಲುಜ್ಜುತ್ತಾರೆ. ನಂತರ ಅವನ ಕೈಯಿ ಬಾಯಿ ಒರೆಸಿ, ಬೆಳಗಿನ ಉಪಹಾರಕ್ಕೆ ಪುಂಗನೂರು ಹಸುವಿನ ಹಾಲಿನಿಂದ ಮಾಡಿದ ತಿನಿಸುಗಳನ್ನೇ ಕೊಡುತ್ತಾರೆ. ಒಟ್ಟಾರೆ ಪೊಂಗನೂರು ಹಸುವಿನ ಹಾಲು ಎಲ್ಲವೂ ವೆಂಕಟೇಶನ ಪೂಜೆ ನೈವೇದ್ಯಗಳಿಗೆ ಸದ್ವಿನಿಯೋಗವಾಗುತ್ತದೆ. ಇನ್ನು ವೆಂಕಟೇಶನ ಹೂವಿನ ಅಲಂಕಾರದ ವಿಷಯ, ಶ್ರೀನಿವಾಸನ ಪೂಜೆಗೆ ಬೇಕಾದ ಹೂವುಗಳನ್ನು, ಬಹಳ ಹಿಂದೆಯೇ ‘ರಂಗದಾಸ’ ಎಂಬ ಶೂದ್ರನು ಸಂಪಿಗೆ, ಮಲ್ಲಿಗೆ, ಜಾಜಿ, ಪಾರಿಜಾತ, ತುಳಸಿ ಇಂಥ ಹೂ ಗಿಡಗಳನ್ನು ಬೆಳೆಸಿದ್ದನು. ಶ್ರೀದೇವಿ ಭೂದೇವಿ ತೋಡಿದ ಬಂಗಾರದ ಬಾವಿಯಿಂದ ನೀರನ್ನು ಹಾಕುತ್ತಿದ್ದನಂತೆ. ಈ ಹಳ್ಳಿಗೆ ‘ಆವು ಪಳ್ಳಿ’ ಎನ್ನುತ್ತಾರೆ. ಇಲ್ಲಿ ಬೆಳೆಯುವ ಹೂವುಗಳೆಲ್ಲ ತಿಮ್ಮಪ್ಪನಿಗೆ ಸಲ್ಲುತ್ತದೆ. ತಿಮ್ಮಪ್ಪನಿಗೆ ಅಲಂಕಾರ ಮಾಡಿದ ಹೂವುಗಳನ್ನು, ಭಕ್ತರಿಗೆ ಪ್ರಸಾದ ರೂಪವಾಗಿ ಯಾರಿಗೂ ಕೊಡುವುದಿಲ್ಲ. ಏಕೆಂದರೆ ಶ್ರೀನಿವಾಸನ ಪ್ರಸಾದಕ್ಕೆ ಮಹಾಲಕ್ಷ್ಮಿ ಮಾತ್ರ ಯೋಗ್ಯಳು ಎಂಬ ಪ್ರತೀತಿ. ಹೊರಗೆ ಹೂ ಮಾರುವರಿಂದ ಕೊಂಡುಕೊಂಡ ಹೂ ಗಳನ್ನು ಅಲ್ಲಿ ಮುಡಿಯುವುದಿಲ್ಲ. ಇದೇ ರೀತಿ, ಇನ್ನೊಂದು ಕೇಳಿದ ಸಂಗತಿತಿರುಪತಿ ಯಾತ್ರೆಗೆ ಹೋಗುವವರು, ಏನಾದರೂ ಪಕ್ಕನೇ ಖರ್ಚಿಗಾಗುತ್ತ ದೆಂದು ಲೆಕ್ಕಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋದವರಿಗೆ, ಉಳಿದ ಹಣ ತರಲು ಆಗುವುದಿಲ್ಲವಂತೆ ತಿರುಪತಿಗೆ ಹೋದ ಹಣ ತಿಮ್ಮಪ್ಪನ ಹುಂಡಿಗೆ ಸೇರುತ್ತದೆ ಎಂಬುದು ಎಲ್ಲರ ಅಂಬೋಣ. ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿದ ದುಡ್ಡನ್ನು ಶ್ರೀನಿವಾಸ ತೆಗೆದು ತನ್ನ ಪಕ್ಕದಲ್ಲಿ ಇಟ್ಟುಕೊಳ್ಳುತ್ತಾನಂತೆ ಏಕೆಂದರೆ, ಶ್ರೀನಿವಾಸನು ಆಕಾಶ ರಾಜನ ಪುತ್ರಿ ಪದ್ಮಾವತಿಯನ್ನು ಮದುವೆ ಮಾಡಿಕೊಳ್ಳುವಾಗ, ಅದ್ದೂರಿ ಯಾಗಿ ಖರ್ಚು ಮಾಡಲು ಅವನಲ್ಲಿ ಹಣವಿರಲಿಲ್ಲ ಆಗ ಕುಬೇರನ ಹತ್ತಿರ ಬಡ್ಡಿಗೆ ಸಾಲ ತೆಗೆದುಕೊಂಡು, ಹತ್ತು ದಿನಗಳ ಕಾಲ ವೈಭವೋಪೇತವಾಗಿ ಮದುವೆ ಮಾಡಿಕೊಂಡನಂತೆ. ಆ ಸಾಲದ ಹಣಕ್ಕೆ ಈಗ ಕೊಡುವುದೆಲ್ಲ ಬರೀ ಬಡ್ಡಿಗೆ ಸರಿಯಾಗುತ್ತಿದೆಯಂತೆ. ಆದ್ದರಿಂದ, ಭಕ್ತರು ಭಕ್ತಿಯಿಂದ ಹಾಕುವ ಕಾಣಿಕೆ ಹಾಗೂ ದುಡ್ಡು ಹೆಚ್ಚಾದವರು ಪಾಪಪ್ರಜ್ಞೆಗಾಗಿ ತಂದು ಹಾಕುವ ಕಾಣಿಕೆ, ಅಲ್ಲದೆ ಕೋಟಿ ಗಟ್ಟಲೆ ಲಾಭ ಮಾಡಿಕೊಂಡವರು ತಿಮ್ಮಪ್ಪನಲ್ಲಿ ಅಪರಾಧಕ್ಕೆ ಕ್ಷಮೆ ಕೇಳಿ, ಮೊಸಳೆ ಕಣ್ಣೀರು ಹಾಕಿ, ಬಂದ ಭಾರಿ ಲಾಭದಲ್ಲಿ ಅಲ್ಪಸ್ವಲ್ಪವನ್ನು ಹುಂಡಿಗೆ ಹಾಕಿ ತಿಮ್ಮಪ್ಪ ನಿಗೆ ನಾಮ ಹಾಕಲು ಬಂದವರಿಗೆ ತಿಮ್ಮಪ್ಪ ಹೇಳುತ್ತಾನಂತೆ. ನೀನು ನನಗೆ ನಾಮ ಹಾಕುವೆ ಎಂದು ಕೊಂಡರೆ, ನಾನೇ ಮೂರು ನಾಮ ಹಾಕಿಕೊಂಡು ಕುಳಿತಿರುವೆ. ಬಿಟ್ಟೀ ಬಂದ ಎಷ್ಟೇ ಹಣ ತಂದುಕೊಟ್ಟರೂ ಅದೆಲ್ಲ ಬಡ್ಡಿಗೆ ಹೋಗುತ್ತದೆ ಎನ್ನುತ್ತಾ ಕಾಣಿಕೆ ಹಾಕಿದ ಹಣವನ್ನೆಲ್ಲ ತೆಗೆದು ತೆಗೆದು ಕುಬೇರನಿಗೆ ಬಡ್ಡಿ ಕೊಡುತ್ತಿದ್ದಾನಂತೆ.

ಹೇಳಿದ ಕಥೆ ಕೇಳಿದ ಕಥೆಗಳು ಅದೇನೇ ಇರಲಿ, ವೈಕುಂಠದಿಂದ ಭಗವಂತ ಧರೆಗಿಳಿದು ಬಂದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತೇನೆಂದು ಅಭಯ ಹಸ್ತವನ್ನು ಚಾಚಿ, ಜಾತಿ, ವರ್ಣ, ವರ್ಗ ,ಶ್ರೀಮಂತ, ಬಡವ ಯಾವುದನ್ನು ನೋಡದೆ ಕೇವಲ ಭಕ್ತರ ಮೊರೆಯನ್ನು ಆಲಿಸಿ ಅವರ ಕಷ್ಟಕೊಟಲೆಗಳನ್ನು ಪರಿಹರಿಸಲೆಂದೇ ಬೆಟ್ಟದ ಮೇಲೆ, ಶ್ರೀದೇವಿ ಭೂದೇವಿ ಸಹಿತ ನೆಲೆಸಿರುವ ಪರಮಾತ್ಮನು ಭೂಮಿಗೆ ಬಂದು
ಕೆಲ ಕಾಲದ ನಂತರ, ಹೊರಟು ನಿಂತನು. ಆಗ ಬ್ರಹ್ಮನು , ಭೂಲೋಕಕ್ಕೆ ಬಂದ ವೆಂಕಟೇಶನನ್ನು ವೈಕುಂಠಕ್ಕೆ ಬರದಂತೆ ಇಲ್ಲೇ ಇರು ಎಂದು ತಡೆದರಂತೆ, ನಾನು ಇನ್ನು ಎಷ್ಟು ಕಾಲ ಇಲ್ಲಿರಬೇಕು ಎಂದು ಕೇಳಿದಾಗ ಶ್ರೀನಿವಾಸ ಕೇಳಿದಾಗ, ಬ್ರಹ್ಮನು ನೀನು ಇಲ್ಲೇ ಯುಗಾದಿಯದವರೆಗೂ ನೆಲೆಸಿ ಜನಗಳ ಕಷ್ಟ ನೋವುಗಳಿಗೆ ಪರಿಹರಿಸಿ, ನಾನು ಇಲ್ಲಿ ಎರಡು ದೀಪವನ್ನು ಹಚ್ಚಿಡುವೆ. , ಈ ದೀಪಗಳು ಆರುವ ತನಕ ನೀನು ಇಲ್ಲೇ ಇರಬೇಕು ಎಂದು ಹೇಳಿದನಂತೆ. ಆವಾಗಿನಿಂದಲೂ ಸ್ವಾಮಿ ತಿರುಪತಿಯಲ್ಲಿ ವಿರಾಜಮಾನನಾಗಿ, ಆಪದ್ಬಾಂಧವ, ಅನಾಥ ರಕ್ಷಕ, ವೆಂಕಟೇಶ್ವರ, ಶ್ರೀನಿವಾಸ, ತಿರುಪತಿ ತಿಮ್ಮಪ್ಪ ನೀನೇ ಕಾಪಾಡು ಭಗವಂತ ಎಂದು ನಂಬಿ ಬಂದ ಭಕ್ತರ ಕೈ ಹಿಡಿದು ದಾರಿ ತೋರಿ, ಯಾವುದೋ ರೂಪದಲ್ಲಿ ಸಲಹುತ್ತಾನೆ. ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತ ದೀನ ಬಂಧು, ದಯಾ ಸಿಂಧು, ಕರುಣಾ ಸಾಗರ, ನಿನ್ನನ್ನು ಎಷ್ಟು ಸ್ಮರಿಸುತ್ತಾರೋ ಅದರ ದುಪ್ಪಟ್ಟು ಕೊಟ್ಟು ಸಲಹುತ್ತಿರುವೆ. ಶ್ರೀನಿವಾಸ, ಬಂಗಾರ ಗಿರಿವಾಸ ಏಳು ಬೆಟ್ಟಗಳ ಒಡೆಯ, ಮೂಡಲಗಿರಿ ತಿಮ್ಮಪ್ಪ, ಶ್ರೀ ವೆಂಕಟೇಶ್ವರ ಸ್ವಾಮಿ ಗೋವಿಂದ, ಗೋವಿಂದ, ಗೋವಿಂದ.

ಸಂಪಾದಕರು: ವಿಶ್ವಾಸ. ಡಿ.ಗೌಡ, ಸಕಲೇಶಪುರ