ಕೃಷಿ ಆಧಾರಿತ ಕೈಗಾರಿಕೆಗಳು

ವಿಶ್ವಾಸ್ .ಡಿ.ಗೌಡ
ಸಕಲೇಶಪುರ

ಭೂಮಿಯು ಸೃಷ್ಟಿಯಾದಾಗಿನಿಂದ ಈ ತನಕ ನೈಸರ್ಗಿಕ ಸೂತ್ರಗಳ ಅನ್ವಯತೆಗೆ ಒಳಪಟ್ಟು ಮುನ್ನಡೆದಿದೆ. ಈ ಸೃಷ್ಟಿಯ ಅಣುರೇಣು ತೃಣಕ್ಕೆ ಸಮಾನನಾದ ಈ ಮಾನವನ ಬದುಕು ಶಾಶ್ವತವೇ? ಎಂಬ ಪ್ರಶ್ನೆಗೆ ನಿಸರ್ಗದ ಸೃಷ್ಟಿ ಮತ್ತು ಲಯದ ಸೂತ್ರ ಉತ್ತರ ನೀಡ ಬಲ್ಲದು.
ವಿಶ್ವವು ಶೂನ್ಯದಿಂದ ಸೃಷ್ಟಿಯಾಗಿ 1375 ಕೋಟಿ ವರ್ಷಗಳಾದರೂ 465 ಕೋಟಿ ವರ್ಷದ ಈ ಭೂಮಿಗೆ ಅಂಬೆಗಾಲಿಡುವ ಮಗುವಿನ ವಯಸ್ಸು ಎಂದು ಸರಳವಾಗಿ ಹೇಳಬಹುದು. ಇನ್ನೂ ಸಾವಿರಾರು ಕೋಟಿ ವರ್ಷಗಳ ಆಯಸ್ಸು ಈ ಭೂಮಂಡಲಕ್ಕೆ ಇದೆ.

ಕೇವಲ 70 ಲಕ್ಷ ವರ್ಷಗಳ ಇತಿಹಾಸ ಇರುವ ಮಾನವ ಈ ಭೂಮಿಗೆ ಕೊಟ್ಟ ಕೊಡುಗೆ ಏನು? ಈ ಪ್ರಶ್ನೆ ಮೇಲಿಂದ ಮೇಲೆ ಕಾಡುತ್ತದೆ.
ನಿಸರ್ಗವು ಕ್ಷಣದಿಂದ ಕ್ಷಣಕ್ಕೆ ಹೊಸ ಹೊಸ ಸೃಷ್ಟಿಯ ಕ್ರಿಯೆಗಳಿಂದ ಹೊಸದನ್ನು ನೀಡುತ್ತಾ ಬಂದಿದೆ. ಸೃಷ್ಟಿಯ ಈ ಕ್ರಿಯೆ ಸಸ್ಯ/ಜೀವರಾಶಿಗಳ ಒಳಿತಿಗಾಗಿಯೇ ನಡೆಯುತ್ತಿರುತ್ತದೆ. ಈ ಸೂಕ್ಷ್ಮತೆಯನ್ನ ಅರಿತು ಲಕ್ಷಾಂತರ ಸಸ್ಯ ಪ್ರಬೇದಗಳು ಮತ್ತು ಕೋಟ್ಯಾಂತರ ಜೀವಿಗಳು ಸಮನ್ವಯ ಜೀವನ ನಡೆಸುವ ಮೂಲಕ ಪ್ರಕೃತಿಯ ಸಮತೋಲನಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಾ ಬಂದಿವೆ. ಆದರೆ ಮಾನವ ಮಾಡಿದ್ದೇನು?

1780 ರ ಕೈಗಾರಿಕಾ ಕ್ರಾಂತಿ ಕೃಷಿ ಕ್ಷೇತ್ರವನ್ನು ಅವಲಂಬನೆಗೊಂಡೇ ನಡೆಯಿತು. ಹತ್ತಿಯಿಂದ ನೂಲು ತಯಾರಿಕೆ, ನೂಲಿನಿಂದ ವಸ್ತ್ರ ತಯಾರಿಕೆಗೆ ಮೊದಲ ಹಂತದ ಕ್ರಾಂತಿ. ನಂತರ ವಸ್ತ್ರ ತಯಾರಿಕೆಗೆ ಯಂತ್ರಗಳ ತಯಾರಿಕೆ ಕಬ್ಬಿಣ ಮತ್ತು ಉಕ್ಕಿನ ತಯಾರಿಕೆ. ಇದಕ್ಕಾಗಿ ಬೇಕಾಗುವ ಖಚ್ಚಾ ವಸ್ತುಗಳಿಗಾಗಿ ಭೂಮಿಯನ್ನು ಕೊರೆಯುವ ಕ್ರಿಯೆ ಪ್ರಾರಂಭವಾಯಿತು. ಇವುಗಳ ಸಾಗಾಣಿಕೆಗಾಗಿ ರಸ್ತೆಗಳು ನಿರ್ಮಾಣಗೊಂಡವು. ಕೈಗಾರಿಕೆಯ ಕಾರಣದಿಂದ ಅಭಿವೃದ್ಧಿಯನ್ನು ವೈಭವೀಕರಿಸುತ್ತಾ ಪ್ರಕೃತಿಯನ್ನು ಕಡೆಗಣಿಸಿದ್ದು ಈಗಿನ ಅನಾಹುತಗಳಿಗೆ ಕಾರಣವಾಗಿದೆ.

ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆಗೊಂಡರೆ “ವಿದೇಶಿ ವಿನಿಮಯ ಹೆಚ್ಚಾಗುತ್ತದೆ. ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯಾಗುತ್ತದೆ. ಮಾರುಕಟ್ಟೆಯ ವಿಸ್ತರಣೆಗೆ ಅನುಕೂಲವಾಗುತ್ತದೆ” ಎಂಬ ಉದ್ದೇಶ ಇಟ್ಟುಕೊಂಡು ಕೃಷಿ ಆಧಾರಿತ ಕೈಗಾರಿಕೆಗೆ ಒತ್ತು ಕೊಡಲಾಯಿತು.

ಕೃಷಿ ಆಧಾರಿತ ಕೈಗಾರಿಕೆಗಳು ಪ್ರಾರಂಭಗೊಂಡ ಮೇಲೆ ಸಕ್ಕರೆ, ಕಾಗದ, ಎಣ್ಣೆ, ಜವಳಿ ಮತ್ತಿತರ ಉದ್ಯಮಗಳು ಬೃಹತ್ತಾಗಿ ಬೆಳೆದವು. ಜವಳಿ ಕ್ಷೇತ್ರ ಒಂದರಲ್ಲಿಯೇ ದೇಶದಲ್ಲಿ 2000 ಕ್ಕೂ ಹೆಚ್ಚಿನ ಹತ್ತಿ ಗಿರಣಿಗಳು, ನೂಲಿನ ಗಿರಣಿಗಳು ಸ್ಥಾಪನೆಯಾಗಿದ್ದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಯಿತು. ಇದೆಲ್ಲಾ ಸತ್ಯ. ಆದರೆ ಕೈಗಾರಿಕೆ ವಿಸ್ತರಣೆಯಿಂದ ಪ್ರಕೃತಿಯ ಸ್ಥಿತಿ ಏನಾಯಿತು? ರೈತನ ಗತಿಯೇನಾಗಿದೆ?
ಕೃಷಿ ಉಪ ಕಸುಬುದಾರರು, ಕೃಷಿ ಕಾರ್ಮಿಕರು ಕೈಗಾರಿಕೆಯ ಪ್ರವಾಹದಲ್ಲಿ ಕೊಚ್ಚಿ ನಗರದ ದಡ ಸೇರಿದ್ದಾರೆ. ಇದರಿಂದ ಕೃಷಿ ಕಾರ್ಯಕ್ಕೆ ಹಿನ್ನೆಡೆಯಾಗಿದ್ದನ್ನು ಯಾರು ಗಂಭೀರವಾಗಿ ಗಮನಿಸಲೇ ಇಲ್ಲ. ಇದರ ಫಲವಾಗಿ ಭಾರತದಲ್ಲಿ ಶೇಕಡ 87 ರಷ್ಟಿದ್ದ ಕೃಷಿಕರ ಸಂಖ್ಯೆ ಶೇಕಡ 47 ಕ್ಕೆ ಇಳಿದಿದೆ.

ಕೃಷಿಯಲ್ಲಿ ಕಾರ್ಮಿಕರ ಕೊರತೆ ಕಂಡುಬಂದ ತಕ್ಷಣ ಕೈಗಾರಿಕೋದ್ಯಮಿಗಳು ಕೃಷಿಯನ್ನು ಯಾಂತ್ರೀಕರಣಗೊಳಿಸಿ ನೈಸರ್ಗಿಕ ಕ್ರಿಯೆಗಳಿಗೆ ತಿಲಾಂಜಲಿ ಇಟ್ಟರು.

ಕೃಷಿಗೆ ನೀರು ಮತ್ತು ಕೈಗಾರಿಕೆಯನ್ನು ಜೋಡಿಸಿದ ಉದ್ಯಮಿಗಳು ಈ ಮೂರರಲ್ಲಿ ಯಾವುದೇ ಒಂದನ್ನೂ ಬೇರ್ಪಡಿಸಲು ಸಾಧ್ಯವೇ ಇಲ್ಲ. ಹಾಗೇನಾದರೂ ಬೇರ್ಪಡಿಸಿದರೆ ಪ್ರಗತಿ ಸಾಧ್ಯವಿಲ್ಲ ಎಂದು ಬಿಂಬಿಸತೊಡಗಿ ದೊಡ್ಡ ದೊಡ್ಡ ಅಣೆಕಟ್ಟುಗಳ ಮೂಲಕ ನೀರಿನ ವ್ಯವಸ್ಥೆ ಮಾಡಲು ಮುಂದಾಗಿದ್ದು ಈ ಭೂಮಿಯ ನೈಸರ್ಗಿಕ ಕ್ರಿಯೆಗೆ ಪೆಟ್ಟು ಕೊಟ್ಟಿದ್ದು ಮತ್ತೊಂದು ದುರಂತ.

1) ಕೃಷಿ ಕೈಗಾರಿಕೆಗಳ ಪ್ರಭಾವಕ್ಕೆ ಸಿಲುಕಿದ್ದು.

2) ದುಡಿಯುವ ಕೈಗಳ ಕೊರತೆಯಿಂದ ಯಂತ್ರಗಳ ಅವಲಂಬನೆ ಹೆಚ್ಚಾಗಿದ್ದು.

3) ಆಧುನಿಕ ಕೃಷಿ ಹೆಸರಲ್ಲಿ ಪಾಶ್ಚಿಮಾತ್ಯದ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡತೊಡಗಿದ್ದು.

4) ಕೃಷಿ ಉದ್ಯಮವಾಗಿ ಮಾರ್ಪಟ್ಟಿದ್ದು.

5) ಉದ್ಯಮಿಗಳ ಹುನ್ನಾರಕ್ಕೆ ಕೃಷಿಗೆ ನೀರಾವರಿ ವ್ಯವಸ್ಥೆ ಅನಿವಾರ್ಯವಾಗಿದ್ದು.

ಮೇಲಿನ ಈ 5 ಅಂಶಗಳು ನಿಸರ್ಗದತ್ತವಾಗಿದ್ದ ಕೃಷಿಯನ್ನು ನಾಶಗೊಳಿಸಿದವು. ಇದು ಕೃಷಿ ಕ್ಷೇತ್ರಕ್ಕಷ್ಟೇ ಅಲ್ಲ ನಿಸರ್ಗದ ಮೇಲು ಪರಿಣಾಮ ಬೀರಿದೆ. ಭೂಮಿಯ ನಿಸರ್ಗ ಸೂತ್ರಗಳು ಹಳಿ ತಪ್ಪಿವೆ. ಹಳಿ ತಪ್ಪಿದ ನಿಸರ್ಗವು “ಲಯ” ದಿಂದ ಸರಿಯಾಗ ಬೇಕಷ್ಟೆ.